ರಾಜ್ಯಮಟ್ಟದ ಪ್ರಪ್ರಥಮ ಹಾಸ್ಯಸಾಹಿತ್ಯ ಸಮ್ಮೇಳನ: ಗುಂಡೇನಟ್ಟಿ ಮಧುಕರ

ಹಾಸ್ಯಸಾಹಿತ್ಯ : ಸಮ್ಮೇಳನಕ್ಕೆ ಪ್ರಥಮ ಪಾದಾರ್ಪಣೆ
ನಗೆಮುಗುಳು ಹಾಸ್ಯ ಮಾಸಪತ್ರಿಕೆಯ 15 ನೇ ವಾರ್ಷಿಕೋತ್ಸವ ನಿಮಿತ್ತ
ರಾಜ್ಯಮಟ್ಟದ ಪ್ರಪ್ರಥಮ ಹಾಸ್ಯಸಾಹಿತ್ಯ ಸಮ್ಮೇಳನ
ಹಾಸ್ಯ ಸಾಹಿತ್ಯ ಕುರಿತು ಉಪನ್ಯಾಸ – ಹಾಸ್ಯ ದಿಗ್ಗಜರ ಮೆಲಕು –  ಹಾಸ್ಯ ಕವಿಗೋಷ್ಠಿ – ಹಾಸ್ಯಭಾಷಣಗಳು –ನಗೆನಾಟಕಗಳು
    
ತುಮಕೂರ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸೇರಿದ ಎಲ್ಲರ ಮುಖದಲ್ಲಿ ನಗು, ಸಂತೋಷಗಳು ಎದ್ದು ಕಾಣುತ್ತಿದ್ದವು. ಎಲ್ಲ ಹಾಸ್ಯಪ್ರಿಯರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಸ್ಯಾಸಕ್ತರು ಆಗಮಿಸಿದ್ದರು. ಒಬ್ಬರು ಒಂದು ಹಾಸ್ಯಚಟಾಕಿ ಹೇಳಿದರೆ ಮತ್ತೊಬ್ಬರು ಪ್ರತಿಯಾಗಿ ಮತ್ತೊಂದು ಹಾಸ್ಯಚಟಾಕಿ. ನಗೆ ಮುಗಿಲು ಮುಟ್ಟುತ್ತಲಿತ್ತು. ಪರಸ್ಪರ ನಗೆಯಿಂದಲೇ ಎಲ್ಲರೂ ತಮ್ಮನ್ನು ತಾವು ಪರಿಚಯಿಸಿಕೊಂಡರು. ಬೇರೆ ಬೇರೆ ಪ್ರದೇಶದ ಜನರು ಅಲ್ಲಿ ಸೇರಿದ್ದರು. ಪ್ರದೇಶದಿಂದ ಪ್ರದೇಶಕ್ಕೆ ಭಾಷೆಯು ಸ್ವಲ್ಪ ಬದಲಾವಣೆ ಕಂಡು ಬಂದರೂ ನಗೆಗಾವ ಭಾಷೆಯ ಬಂಧವಿಲ್ಲವಲ್ಲ.  ಎಲ್ಲರೂ ಮನಬಿಚ್ಚಿ ನಗುತ್ತಲಿದ್ದರು. ಇದೇನಿದು ಯಾಕಿ ಸಂಭ್ರಮವೆಂದು ಕೇಳುತ್ತಿದ್ದಿರಾ? ತುಮಕೂರಿಗೆ ಹಾಸದಂಡೇ ದಾಳಿ ಮಾಡಿತ್ತು. ಅಲ್ಲಿ ರಾಜ್ಯಮಟ್ಟದ  ಪ್ರಪ್ರಥಮ ಹಾಸ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಇದು ವೇದಿಕೆ ಬಿಟ್ಟು ಹೊರಗಡೆ ಕಂಡು ಬಂದು ದೃಶ್ಯವಾಗಿತ್ತು. 
    
ಇದೇ ತಿಂಗಳು ದಿ. 9 ಶನಿವಾರ ಹಾಗೂ 10 ರವಿವಾರದಂದು ತುಮಕೂರಿನ ವಿನಾಯಕನಗರದಲ್ಲಿರುವ  ಶ್ರೀ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಕನ್ನಡದ ನಗೆ ರಾಯಭಾರಿ ‘ನಗೆಮುಗುಳು’ ಹಾಸ್ಯಪತ್ರಿಕೆ 15 ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಹಿರಿಯ ಲೇಖಕ, ಖ್ಯಾತ ಲಲಿತಪ್ರಬಂಧಕಾರ ಪ್ರೊ. ಅ.ರಾ. ಮಿತ್ರ ಅವರ ಸರ್ವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಪ್ರಪ್ರಥಮ ಹಾಸ್ಯ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು. ಬೆಳಗಾವಿಯ ಹಾಸ್ಯಕೂಟ ತಂಡದವರನ್ನು ಈ ಸಮ್ಮೇಳನಕ್ಕೆ ಆಮಂತ್ರಿಸಿದ್ದರಿಂದ ಸಂಚಾಲಕನಾದ ನನಗೆ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸದವಕಾಶ  ಲಭಿಸಿತ್ತು. ಜೊತೆಗೆ ನಗೆಮಾತುಗಾರರಾದ ಪ್ರೊ. ಜಿ. ಕೆ. ಕುಲಕರ್ಣಿ, ಅಶೋಕ ಮಳಗಲಿ,  ಜಿ. ಎಸ್. ಸೋನಾರ ಹಾಗೂ ರಾಜೇಂದ್ರ ಭಂಡಾರಿಯವರೊಡಗೂಡಿ “ಹಾಸ್ಯಧಾರೆ” ಎಂಬ ಹಾಸ್ಯ ಕಾರ್ಯಕ್ರಮವನ್ನು  ನೀಡಲಾಯಿತು. ಉತ್ತರಕರ್ನಾಟಕ ಭಾಷೆಯ ವಿಶೇಷ ಈ ಕಾರ್ಯಕ್ರಮವನ್ನು ನೀಡಲಾಯಿತು. ತುಮಕೂರ ಜನ ಈ ಉತ್ತರಕರ್ನಾಟಕ ಭಾಷೆಯನ್ನು ಆಸ್ವಾದಿಸಿ ನಗುತ್ತ, ಚಪ್ಪಾಳೆ ತಟ್ಟುತ್ತ ತಮ್ಮ ಸಂತಸ ವ್ಯಕ್ತಪಡಿಸಿದರು.


        
ಬಂದವರೆಲ್ಲರ ಯೋಗಕ್ಷೇಮವನ್ನು ನಗೆಮುಗುಳು ಪತ್ರಿಕೆ ಸಂಪಾದಕ ರಾಮಣ್ಣನವರು ಅತ್ಯಂತ ಪ್ರೀತಿ, ಮುಗುಳ್ನಗೆಯಿಂದಲೇ ವಿಚಾರಿಸುತ್ತಲಿದ್ದರು. ಎಲ್ಲರಿಗೂ ಬಿಸಿನೀರಿನ ವ್ಯವಸ್ಥೆ, ಅಲ್ಲದೇ ಯಾವುದೇ ರೀತಿ ಕೊರತೆಯೇನಾದರೂ ಇದೆಯಾ ಎಂದು ವಿಚಾರಿಸುತ್ತಿದ್ದರು. ಎಲ್ಲವೂ ಇರುವಾಗ ಕೊರತೆಯ ಮಾತೇ ಇರಲಿಲ್ಲ. ಮುಂಜಾನೆ ಎದ್ದೊಡನೆ  ಬಿಸಿ ಬಿಸಿ ಚಹ,  ಒಂಬತ್ತು ಗಂಟೆಗೆ ರುಚಿರುಚಿಯಾದ ತಿಂಡಿ ಮಧ್ಯಾಹ್ನ 2 ಗಂಟೆಗೆ ಊಟ ಸಾಯಂಕಾಲ 4 ಗಂಟೆಗೆ ಲಘುಉಪಹಾರ ಚಹ. ನಗಲು  ಹಾಸ್ಯಗೋಷ್ಠಿಗಳು, ಹಾಸ್ಯ ಸಾಹಿತ್ಯದ ಕುರಿತಾದಂತಹ ಉಪನ್ಯಾಸಗಳು, ಹಾಸ್ಯಭಾಷಣಗಳು, ನಾಟಕ ಮುಂತಾದವುಗಳಿಂದ ನಗೆಹಬ್ಬ. ಹಾಸ್ಯಪ್ರಿಯರು ಇದಕ್ಕಿಂತ ಹೆಚ್ಚಿಗೇನು ಬಯಸಲು ಸಾಧ್ಯ. ಸಮಾರೋಪ ಸಮಾರಂಭ ಮುಗಿಸಿಕೊಂಡು ಭವನದಿಂದ ಹೊರಹೋಗುವಾಗ ‘ಹಾಸ್ಯಸಾಹಿತ್ಯದೂಟ ಜೊತೆಗೆ ರುಚಿರುಚಿಯಾದ ತಿಂಡಿ ತಿನಸು, ಊಟಗಳ ಸುಖವುನ್ನುಂಡು ಇಲ್ಲಿಂದ ಮರಳಿ ನಮ್ಮ ಊರಿಗೆ ಹೋಗುವುದೇ ಬೇಡವಾಗಿದೆ ಎಂದು  ಮಾತನಾಡಿಕೊಳ್ಳುತ್ತಿದ್ದ ಜನರ ಮಾತುಗಳೇ ಸಮ್ಮೇಳನದ ಯಶಸ್ವಿಗೆ  ಸಾಕ್ಷಿಯಾಗಿದ್ದವು. 
    
ನಾವು ಹಲವಾರು ಕಾರ್ಯಕ್ರಮಗಳನ್ನು ಬೆಳಗಾವಿಯಲ್ಲಿ ಹಮ್ಮಿಕೊಂಡಿರುತ್ತೇವೆ. ಸಂಘಟನೆ ತುಂಬ ಕಷ್ಟದ ಕೆಲಸ ಅದರರಲ್ಲಿಯೂ ಕಾರ್ಯಕ್ರಮಗಳ ಸಮಯ ಹೊಂದಾಣಿಕೆ ಇನ್ನೂ ಕಷ್ಟದ ಕೆಲಸ. ಆದರೆ ನಗೆಮುಗುಳದವರದ್ದು ಅತ್ಯುತ್ತಮ ಸಂಘಟನೆ. ಕಾರ್ಯಕ್ರಮ ಉದ್ಘಾಟನೆ (ರಾಜಕಾರಣಿಗಳಿಂದ) ಸ್ವಲ್ಪ ವಿಳಂಬವಾಯಿತು. ಆದರೆ ಆ ಸಮಯವನ್ನೂ  ಮುಂದಿನ ಗೋಷ್ಠಿಗಳಲ್ಲಿ  ಸರಿಹೊಂದಿಸಿಕೊಂಡ ಸಂಘಟಕರ ಸಮಯ ಪ್ರಜ್ಞೆ ಮೆಚ್ಚಲೇಬೇಕು. 
    
ಕಾರ್ಯಕ್ರಮದ ಅರ್ಧ ಯಶಸ್ಸು ಆಯಾ ಗೋಷ್ಠಿಗಳನ್ನು ನಿರ್ಧರಿಸಿದ ಸಮಯದಲ್ಲಿ ಮುಗಿಸುವುದಲ್ಲಿರುತ್ತದೆ. ಸಮ್ಮೇಳನದ ಸಂಪೂರ್ಣ ನಿರೂಪಣೆ ಜವಾಬ್ದಾರಿ ಎನ್. ರಾಮನಾಥ ವಹಿಸಿಕೊಂಡಿದ್ದರು. ಎಲ್ಲ ಉಪನ್ಯಾಸಕರು, ಅತಿಥಿಗಳು ಕೊಟ್ಟ ಸಮಯದಲ್ಲಿಯೇ ತಮ್ಮ ಮಾತುಗಳನ್ನು ಮುಗಿಸುವದನ್ನು ನಿರೂಪಕ ರಾಮನಾಥ ಅವರು ಮುಗುಳ್ನಗುತ್ತ, ಯಾವುದೇ ಚೀಟಿಯನ್ನ ಕೊಡದೇ, ಕಣ್ಣು ಮಿಟುಕಿಸದೇ ಕೈ, ಬಾಯಿಂದ ಸೂಚನೆ ನೀಡದೇ ಆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ  ನಿಭಾಯಿಸಿದರು. ನಿರೂಪಣೆಯಲ್ಲಿಯೂ ಅವರು ಎಲ್ಲರ ಗಮನ ಸೆಳೆದರು. ಮೈಕು ಸಿಕ್ಕಿದೆಯೆಂದು ಹೆಚ್ಚು ಮಾತನಾಡದೇ ನಿರೂಪಕನೆಷ್ಟು ಮಾತನಾಡಬೇಕು ಅಷ್ಟನ್ನ ಮಾತನಾಡುತ್ತ, ಆ ಮಾತುಗಳಲ್ಲಿಯೇ ಜನರನ್ನು ನಗಿಸುತ್ತ ತುಂಬ ಚೆನ್ನಾಗಿ ಕಾರ್ಯಕ್ರಮ ನಿರೂಪಿಸಿದರು.
ಮೊದಲನೇ ದಿನ:
    
ಹಾಸ್ಯ ಸಾಹಿತ್ಯದಲ್ಲಿ ಪದ್ಯ, ಚುಟುಕುಗಳ ಕುರಿತು ವೈ. ವಿ. ಗುಂಡುರಾವ್ ಮಾತನಾಡಿದರು. ಪದ್ಯ, ಚುಟುಕುಗಳನ್ನು ಕೇವಲ ಹಾಸ್ಯಕ್ಕಾಗಿಯೇ ಬರೆಯದೇ ಅದರಲ್ಲಿ ಸಮಾಜಕ್ಕೊಂದು ಸಂದೇಶವಿದ್ದಾಗ ಮಾತ್ರ ಓದುಗನ ಮನಸ್ಸಿನಲ್ಲಿ ಬಹುಕಾಲ ಉಳಿಯಲು ಸಾಧ್ಯವೆಂದು ಹೇಳಿದ ಅವರು ಹಲವಾರು ಹಿರಿಯ ಕವಿಗಳ ಚುಟುಕುಗಳನ್ನು ಉದಾಹರಿಸಿದರು. 
    
“ದೃಶ್ಯ ಮಾಧ್ಯಮಗಳಲ್ಲಿ ಹಾಸ್ಯ” ಗೋಷ್ಠಿಯಲ್ಲಿ ನಾಗರಾಜ ಕೋಟೆ ಚಿತ್ರಸಾಹಿತಿಯನ್ನಿಸಿಕೊಳ್ಳುವವನು ದ್ವಂದ್ವಾರ್ಥ ಪದಗಳ ಅಲ್ಲದೇ  ಕೀಳು ಪ್ರಚಾರದ ಬೆನ್ನು ಬೀಳಬಾರದು. ಕಣಗಾಲ ಪ್ರಭಾಕರಶಾಸ್ತ್ರಿರಂಥವರ ಸಂಭಾಷಣೆಯ ಚಿತ್ರಗಳನ್ನು ಇಡೀ ಕುಟುಂಬವೇ ಕುಳಿತು ನೋಡುವಂತಿರುತ್ತಿದ್ದವು. ಇಂದು ಆ ವಾತಾವರಣ ಮಾಯವಾಗುತ್ತಿರುವುದು ವಿಷಾದನೀಯ ಎಂದರು.  “ರಂಗಭೂಮಿಯಲ್ಲಿ ಹಾಸ್ಯ” ಕುರಿತು ಮಾತನಾಡಿದ ಡಾ| ಲಕ್ಷ್ಮಣದಾಸ ಗುಬ್ಬಿ ಕಂಪನಿ, ಹಿರಣ್ಯಯ್ಯ  ಮುಂತಾದವರಾಡುತ್ತಿದ್ದ ನಾಟಕಗಳಲ್ಲಿ ಹಾಸ್ಯ ಕೂಡ ನಾಟಕದ ಮಹತ್ವದ ಭಾಗವಾಗಿರುತ್ತಿತ್ತು. ವೈವಿಧ್ಯಮಯವಾದ ಹಾಸ್ಯಗಳನ್ನವರು ನೀಡುತ್ತಿದ್ದರು. ಪೌರಾಣಿಕ, ಸಾಮಾಜಿಕ ಹೀಗೆ ಎಲ್ಲ ನಾಟಕಗಳಲ್ಲಿಯೂ ಹಾಸ್ಯಪಾತ್ರಗಳಿರದ ನಾಟಕಗಳೇ ಇರುತ್ತಿರಲಿಲ್ಲ. ಸತ್ಯ ಹರಿಶ್ಚಂದ್ರ ನಾಟಕದಲ್ಲಿಯ ನಕ್ಷತ್ರಕನನ್ನು ನಾವು ಮರೆಯಲು ಸಾಧ್ಯವೆ? ‘ಸಾಹುಕಾರ’ ‘ಎಚ್. ಎಂ. ನಾಯಕ’ ಮುಂತಾದ ನಾಟಕಗಳಲ್ಲಿಯ ನಾಟಕದ ಹಾಸ್ಯದೃಶ್ಯಗಳನ್ನು ಇಂದಿಗೂ ಜನ ಮೆಲುಕು ಹಾಕುತ್ತಿರುತ್ತಾರೆ. ನೆನಪಿನಲ್ಲಿ ಉಳಿಯುವಂಥ ಹಾಸ್ಯವನ್ನು ಅಂದಿನ ಜನ ನೀಡುತ್ತಿದ್ದರು ಎಂದು ಹೇಳಿದರು.
    
ಇದೇ ದಿನ ಸಾಯಂಕಾಲ ಬೆಂಗಳೂರಿನ ಹೆಜ್ಜೆಗೆಜ್ಜೆ ತಂಡದವರಿಂದ “ರಂಗಯ್ಯನ ರಾದ್ಧಾಂತ” ಹಾಸ್ಯ ನಾಟಕ ಹಾಗೂ ಕೆ. ಹಿರಣ್ಯಯ್ಯ ಮಿತ್ರ ಮಂಡಳಿಯವರಿಂದ “ಮಾಸ್ಟ್ರಾಯಣ” ಹಾಸ್ಯ ನಾಟಕ ಅಲ್ಲದೇ ಬೆಳಗಾವಿ “ಹಾಸ್ಯಕೂಟ”  ತಂಡದವರಿಂದ “ಹಾಸ್ಯಧಾರೆ” ಕಾರ್ಯಕ್ರಮವಿತ್ತು. ಕಾರಣಾಂತರದಿಂದ ಹಿರಣ್ಯಯ್ಯ ಮಿತ್ರಮಂಡಳಿ ಬರದೇ ಹೋದದ್ದರಿಂದ ಹಿರಣ್ಯಯ್ಯ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿತ್ತು. “ರಂಗಯ್ಯನ ರಾದ್ದಾಂತ” ಹಾಸ್ಯ ಸಂಭಾಷಣೆ, ಅಭಿನಯದಿಂದ ಜನರನ್ನು ನಗೆಸುವಲ್ಲಿ ಯಶಸ್ವಿಯಾಯಿತು. ಬೆಳಗಾವಿ ಹಾಸ್ಯಕೂಟ ತಂಡ ಸುಮಾರು ಒಂದು ಗಂಟೆಯವರೆಗೆ ವೈವಿಧ್ಯಮಯ ಹಾಸ್ಯದೂಟವನ್ನು ಮಾಡಿಸಿ ಜನರನ್ನು ನಗಿಸುವಲ್ಲಿ ಯಶಸ್ವಿಯಾಯಿತು. ಈ ಸಮ್ಮೇಳನದಲ್ಲಿ ನಡೆದ ಹಾಸ್ಯಧಾರೆ ಕಾರ್ಯಕ್ರಮದಲ್ಲಿ ಪ್ರೊ. ಜಿ. ಕೆ. ಕುಲಕರ್ಣಿ ನಿತ್ಯ ಜೀವನದಲ್ಲಿ ನಡೆಯುವ ಹಾಸ್ಯಗಳನ್ನೇ ಜನರೊಂದಿಗೆ ಹಂಚಿಕೊಂಡು ಜನರನ್ನು ನಗೆಗಡಲಲ್ಲಿ ತೇಲಿಸಿದರು. ಪ್ರೊ. ಜಿ. ಕೆ. ಕುಲಕರ್ಣಿಯವರ ಮಾತುಗಳಲ್ಲಿ ಜನರನ್ನು ನಗಿಸಲೇಬೇಕೇಂಬ ಜೋಶಾಗಲಿ, ತಿಣುಕಾಟವಾಗಲಿ ಇರಲಿಲ್ಲ. ಸಹಜವಾಗಿ ಅವರು ಮಾತನಾಡುತ್ತ ಹೋದಂತೆ ಜನರಲ್ಲಿ ನಗಯಲೆಯೆದ್ದವು. ಹಾಸ್ಯಕೂಟ ಸಂಚಾಲಕರಾದ ಗುಂಡೇನಟ್ಟಿ ಮಧುಕರ ಸಾಹಿತಿಗಳ ಜೀವನದಲ್ಲಿಯ ಹಾಸ್ಯಗಳನ್ನು ಹಂಚಿಕೊಳ್ಳುತ್ತ ಬೇಂದ್ರೆ, ಎಂ. ಎಸ್. ನರಸಿಂಹಮೂರ್ತಿ, ವಸುಧೇಂದ್ರ ಮುಂತಾದವರ ನಗೆಪ್ರಸಂಗಗಳನ್ನು ಹಂಚಿಕೊಂಡರು. ಅಶೋಕ ಮಳಗಲಿ ಗ್ರಾಮೀಣ ಪ್ರದೇಶದಲ್ಲಿಯ ನಗೆ ಪ್ರಸಂಗಗಳನ್ನು, ಜಿ. ಎಸ್. ಸೋನಾರ ದೇವಾನಂದ, ಶತ್ರುಘ್ನಸಿನ್ಹಾ, ಮುಸರಿಕೃಷ್ಣಮೂರ್ತಿ ಅಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಮ್. ಕೃಷ್ಣ, ಸಿದ್ಧರಾಮಯ್ಯ ಮುಂತಾದವರು ಒಂದು ವೇಳೆ ಈ ಹಾಸ್ಯಕಾರ್ಯಕ್ರಮಕ್ಕೆ ಬಂದಿದ್ದರೆ… ಎಂಬ ಕಲ್ಪನಾಲಹರಿಯನ್ನು ಹರಿಸಿ ಜನರನ್ನು ರಂಜಿಸಿದರು. ರಾಜೇಂದ್ರ ಭಂಡಾರಿ ಅಣುಕು ಹಾಡುಗಳನ್ನು ಹಾಡಿ ಜನರ ಗಮನ ಸೆಳೆದರು. ಮುಂಜಾನೆಯಿಂದ ಹಾಸ್ಯಕುರಿತು ಭಾಷಣ, ಉಪನ್ಯಾಸಗಳ ಭೋಜನ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ  ಜನರಿಗೆ ಹಾಸ್ಯರಂಜನೆ ಕೊನೆಯಲ್ಲಿ ತಾಂಬೂಲ ದೊರೆತಂತಾಗಿತ್ತು.

ಎರಡನೇ ದಿನ:
    
ಟಿ.ಪಿ. ಕೈಲಾಸಂ, ಬೀಚಿ ಹಾಸ್ಯದಿಗ್ಗಜರ ನೆನಪುಗಳನ್ನು ಮೆಲಕು ಹಾಕುವದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಂಚಿನ ಕಂಠದ ಬಿ. ಎಸ್. ಕೇಶವರಾವ್ ಅವರದ್ದು ಯಾವುದೇ ಅವರಸರವಿಲ್ಲದೇ ನಿಧಾನವಾದ ಸ್ಪಷ್ಟವಾದ ಮಾತು. ಸಮಯದ ಕೊರತೆಯಿದ್ದರೂ ಕೊಟ್ಟ ಸಮಯದಲ್ಲಿಯೇ ಬೀಚಿ ಹಾಗೂ ಟಿ.ಪಿ. ಕೈಲಾಸಂ ಚಿತ್ರ ಕಣ್ಮುಂದೆ ಕಟ್ಟಿದ ಅವರು ಗಂಭೀರ ಸಾಹಿತ್ಯ ಬರೆಯುವುದಕ್ಕಿಂತ ಹಾಸ್ಯಸಾಹಿತ್ಯ ರಚನೆ ತುಂಬ ಕಷ್ಟಕರವಾದದ್ದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
    
ಕನ್ನಡದ ಖ್ಯಾತ ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ ಶ್ರೀರಂಗ, ರಾ.ಕು ಅವರ ಲಲಿತಪ್ರಬಂಧಗಳ ಕುರಿತು ಮಾತನಾಡುತ್ತ ಹಾಸ್ಯವೆಂದರೆ ಅದು ಬಿದ್ದು ಬಿದ್ದು ನಗುವಂತಿರಲೇಬೇಕೆಂದಲ್ಲ. ಅದು ಜನಮನದಲ್ಲಿ ಮಾಸದಂತೆ ಅಚ್ಚಳಿಯದಂತೆ ಉಳಿಯುವಂತಹ ಹಾಸ್ಯವಿರಬೇಕು ಎಂದು ಹೇಳಿದರು. ರಾ.ಕು. ರವರ ಲಲಿತಪ್ರಬಂಧವೊಂದರಲ್ಲಿಯ  ಉದಾಹರಣೆಯೊಂದನ್ನು ನೀಡುತ್ತ ಗದ್ದಲದಲ್ಲಿ ಸಿಕ್ಕ ವ್ಯಕ್ತಿಯೊಬ್ಬನ ಜೇಬಿನಲ್ಲಿಯ ನಾಲ್ಕಾಣೆ ಗದ್ದಲದಿಂದ ಹೊರಬರುವಷ್ಟರಲ್ಲಿ ರೂಪಾಯಿಯಾಗಿತ್ತಂತೆ! ಎಂದು ಹೇಳಿದರು. ಅಂದರೆ ಎಷ್ಟೊಂದು ಗದ್ದಲವಿತ್ತು ಎಂಬುದನ್ನು ಹಾಸ್ಯದೊಂದಿಗೆ ಕಣ್ಣಿಗೆ ಕಟ್ಟುವಂತೆ ಬರೆದಿರುವ ಉದಾಹರಣೆಯನ್ನು ಹಂಚಿಕೊಂಡರು.
    
ನಗೆಬರಹಗಾರ ಎಂ. ಎಸ್. ನರಸಿಂಹಮೂರ್ತಿಯವರು ಗೋರೂರು, ರಾ.ಶಿ.  ನಾಡಿಗೇರ ಕೃಷ್ಣರಾಯ್ ಕುರಿತು ಮಾತನಾಡಿದರೆ, ಕೃಷ್ಣ ಸುಬ್ಬರಾವ್ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಬಿ.ಜಿ.ಎಲ್.ಸ್ವಾಮಿ, ದಾಶರಥಿ ದೀಕ್ಷಿತ, ವೈ.ಎನ್.ಕೆ. ಅವರನ್ನು ಪರಿಚಯಿಸಿದರು. “ಬಾನುಲಿಯಲ್ಲಿ ಹಾಸ್ಯ ಸಾಹಿತ್ಯ’ ಕುರಿತು ಎಸ್, ಸಾಯಿಲಕ್ಷ್ಮಿ ಉಪನ್ಯಾಸ ನೀಡಿದರು.
    
ಸಮ್ಮೇಳನದ ಮತ್ತೊಂದು ಆಕರ್ಷಣೆ ಎಂದರೆ ಹಾಸ್ಯ ಕವಿಗೋಷ್ಠಿ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಕವಿ ಬಿ. ಆರ್. ಲಕ್ಷ್ಮಣರಾವ್ ವಹಿಸಿದ್ದರು. ಹಾಸ್ಯಕವಿತೆಯಾಗಲಿ, ಹಾಸ್ಯಭಾಷಣವಾಗಲಿ ಕೇವಲ ನಗಿಸುವುದಷ್ಟೇ ಅವುಗಳ ಉದ್ದೇಶವಾಗಿರಬಾರದು ಅವು ಅರ್ಥಪೂರ್ಣವೂ ಇರಬೇಕು. ಹಾಸ್ಯವೆನ್ನುವುದು ಸಕ್ಕರೆ ಲೇಪಿತ ಕಹಿ ಗುಳಿಗೆಯಿದ್ದಂತೆ. ಔಷಧ ಪರಿಣಾಮ ಬೀರುವುದು ಗುಳಿಗೆಯೊಳಗಿನ ಕಹಿಯೇ ಹೊರತು ಸಿಹಿಯಲ್ಲವೆಂದು ಅರ್ಥಪೂರ್ಣವಾಗಿ ಹಾಸ್ಯವೆಂದರೇನೆಂಬುದನ್ನು ಬಿಡಿಸಿಟ್ಟರು. ಬೆಳಗಾವಿಯ ಹಿರಿಯ ಕವಿಗಳಾದ ಪುಂಡಲೀಕ ಪಾಟೀಲ ಮೊದಲ ಕವಿತೆಯನ್ನೋದವದರ ಮೂಲಕ ಹಾಸ್ಯ ಕವಿಗೋಷ್ಠಿಗೆ ಚಾಲನೆ ನೀಡಿದರು. ಅಲ್ಲದೇ ನಗೆಮುಗುಳು ಪತ್ರಿಕೆಗೆ ನಿರಂತರವಾಗಿ ಲೇಖನಗಳನ್ನು ಕೊಡುತ್ತ ಬಂದಿರುವ ಪುಂಡಲೀಕ ಪಾಟೀಲ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತು. ಮ. ಬಸವರಾಜ(ಇಲಿಗಳ ಸಣ್ಣ ತೂತು), ಎನ್ ಶರಣಪ್ಪ ಮೆಟ್ರಿ  ಬೆಟಗೇರಿ ಕೃಷ್ಣಶರ್ಮರ ಜನಪ್ರಿಯ ಜಾನಪದ ಶೈಲಿಯ ಹಾಡನ್ನು ಅಣುಕು ಮಾಡಿ  “ನಾರಿ ನಿನ್ನ ನೋಡಲಾಕ ಕಾರನೇರಿ ಬರತಾರಂತ’ ಹಾಡಿದರು. ಪುರಂದರದಾಸರ ಪದ “ಗಿಳಿಯು ಪಂಜರದೊಳಿಲ್ಲ…” ಕೂಡ ಅಣುಕಿಗೆ ವಸ್ತುವಾಯಿತು. ಪ್ರೊ. ಟಿ. ಎಸ್  ನಾಗರಾಜ ಈ ಪದವನ್ನೇ ‘ಜೇಬಿನೊಳಗೆ ಹಣವಿಲ್ಲ ಬರಿದೇ ಜೇಬವಾಯಿತಲ್ಲ” ಹಾಡಿ ಜನರ ಮುಖದಲ್ಲಿ ನಗೆಯರಳಿಸಿದರು. ದುಬೈಯಲ್ಲಿ ವಾಸಿಸುವ ಕವಿಯಿತ್ರಿ ಆರತಿ ಘಟಿಗಾರ ಅವರ “ಬೆಂಗಳೂರು ಅಂದು – ಇಂದು”  ಎಂಬ ಹಾಸ್ಯ ಹನಿಗವನ-
        ಅಂದು
        ಕೈ ಮುಗಿದು ಒಳಗೆ ಬಾ
        ಇದು ಸಸ್ಯಕಾಶಿ
        ಇಂದು
        ಮೂಗ್ಹಿಡಿದು ಒಳಗೆ ಬಾ
        ಇದು ಕಸದ ರಾಶಿ 

ಜನರು ಮೆಚ್ಚಿ ಚಪ್ಪಾಳೆ ತಟ್ಟುವುದರ ಮೂಲಕ ಸಂತಸ ವ್ಯಕ್ತ ಪಡಿಸಿದರು. ಅಲ್ಲದೇ ಸುಧಾ ಸರನೋಬತ ಅವರ
        ಇಂದು ಓದುವವರಿಗಿಂತ
        ಬರೆಯುವವರೇ ಜಾಸ್ತಿ
        ಇದನ್ನು ನೋಡಿ
        ಮೇಲಿನಿಂದಲೇ ನಗುತ್ತಿದ್ದಾರೆ
        ನಮ್ಮ ಮಾಸ್ತಿ!
ಜನರ ಗಮನ ಸೆಳೆದವು. ಜಿ. ಕೆ. ಕುಲಕರ್ಣಿ(ಆಪ್ತಸ್ನೇಹಿತ), ಸತ್ಯವತಿ ಹರಿಕೃಷ್ಣನ್(ಔತಣ ಕೂಟ), ಸುಮಾ ಬೆಳಗೆರೆ(ಕವಯಿತ್ರಿ ಗಂಡ), ವೇದಾ ಮಂಜುನಾಥ(ನನ್ನವನು ಅಂದು-ಇಂದು), ನಿರ್ಮಲಾ ಮೃತ್ಯುಂಜಯ(ಕವಿತೆಯಲ್ಲ ಮಾತು), ಪದ್ಮ ಕೃಷ್ಣಮೂರ್ತಿ (ಹೆಂಡತಿಯೊಬ್ಬಳು…), ಬಿ. ಆರ್. ನಾಗರತ್ನಾ(ನಾನೇನು ಮಾಡಲಿ ಹೇಳಿ?), ಪ್ರೀತಿ ಭಾರತಿ, ಕೆ. ಎಸ್. ವೆಂಕಟೇಶ, ಉಮೇಶ, ಜಗನ್ನಾಥ ಮುಂತಾದ ಹಾಸ್ಯಕವಿಗಳು ತಮ್ಮ ರಚನೆಗಳನ್ನೋದಿ ನಗೆಗಡಲಲ್ಲಿ ತೇಲಿಸಿದರು. 
    
ಹಾಸ್ಯ ಕುರಿತು ಮಾತನಾಡಿದ ಖ್ಯಾತ ವಾಗ್ಮಿ ಕೃಷ್ಣೇಗೌಡ ಕೇವಲ ಸಂತೋಷವಾದಾಗ ಮಾತ್ರ ನಗೆಬರುತ್ತದಂತಲ್ಲ, ಮನುಷ್ಯನಿಗೆ ಅವಮಾನವಾದಾಗ, ಸಂದಿಗ್ಧ ಪರಿಸ್ತಿತಿಯಲ್ಲಿದ್ದಾಗಲೂ ಅವನ ಮುಖದಲ್ಲಿ ನಗೆ ಮೂಡುತ್ತದೆ.  ಇವು ನಗೆಯ ಬೇರೆ ಬೇರೆ ರೂಪಗಳು. ಮನುಷ್ಯ ಅವಮಾನವನ್ನು ಮುಚ್ಚಿಕೊಳ್ಳಲು ನಗುತ್ತಾನೆ ಸಂತೋಷವನ್ನು ವ್ಯಕ್ತಪಡಿಸಲು ನಗುತ್ತಾನೆ. ಎಂದು ಹೇಳಿದ ಅವರು ಕನ್ನಡ ಭಾಷೆಯಷ್ಟು ಶ್ರೀಮಂತವಾದ ಭಾಷೆ ಮತ್ತೊಂದಿಲ್ಲ. ಕನ್ನಡದಲ್ಲಿರುವಷ್ಟು ಕಥೆಗಳು, ಹಾಡುಗಳು, ಒಡಪುಗಳು, ಗಾದೆಮಾತುಗಳು ಅಷ್ಟೇ ಏಕೆ ಕನ್ನಡದಲ್ಲಿರುವಷ್ಟು ಬೈಗುಳಗಳೂ ಕೂಡ ಬೇರೆ ಭಾಷೆಗಳಲಿಲ್ಲ. ಆದರೆ ವಿಪರ್ಯಾಸವೆಂದರೆ ಇಂದು ಕನ್ನಡಿಗನೆನಿಸಿಕೊಳ್ಳುವವ ಇಂಗ್ಲೀಷನಲ್ಲಿ ವಿಚಾರ ಮಾಡಿ ಕನ್ನಡದಲ್ಲಿ ಮಾತನಾಡುತ್ತಿರುವ ವಾತಾವರಣ ನಿರ್ಮಾಣವಾಗುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಕನ್ನಡ ಭಾಷೆ, ಹಾಸ್ಯ, ನಗೆ ಕುರಿತು ಅತ್ಯಲ್ಪ ಸಮಯದಲ್ಲಿಯೇ ಎಳೆ ಎಳೆಯಾಗಿ ಎಲ್ಲರಿಗೂ ಮನಮುಟ್ಟುವಂತೆ ಹೇಳಿದರು.
    
ಮಾತಿನ ಮಾಂತ್ರಿಕ ಹಿರೆಮಗಳೂರು ಕಣ್ಣನ್ ನಗೆಗೆ ಯಾವುದೇ ಜಾತಿಯಲ್ಲ, ಕುಲವಿಲ್ಲ, ಧರ್ಮವಿಲ್ಲ ಎಲ್ಲರನ್ನೂ ಸಂತೋಷದಲ್ಲಿಡುವ ಶಕ್ತಿ ನಗೆಗಿದೆ. ಜಾತ್ಯಾತೀತ ಗುಣಧರ್ಮವನ್ನು ನಗೆ ಹೊಂದಿದೆ.  ನಗೆಯ ಮೊರೆ ಹೊಕ್ಕವನಿಗೆ ನೋವಿಲ್ಲ; ನಗು ಜೀವನದಲ್ಲಿಯ ಕಷ್ಟ, ಕಾರ್ಪಣ್ಯಗಳನ್ನು ಎದುರಿಸುವ ಧೈರ್ಯವನ್ನು ತಂದು ಕೊಡುತ್ತದೆ. ಎಂದು ಹೇಳಿದ ಅವರು ಜೀವನದಲ್ಲಿ ಎಲ್ಲರೂ ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತೆ ಕೇಳಿಕೊಂಡರು.
    
ಇದೇ ಸಂದರ್ಭದಲ್ಲಿ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ  ಕಲಾವಿದ ಬದರಿ ಪುರೋಹಿತ ಹಾಗೂ ತಮ್ಮಣ್ಣ ಬೀಗರ ಇವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀರಿ ಗೌರವಿಸಲಾಯಿತು. 

ಖ್ಯಾತ ಧ್ವನಿಮಾಯೆ ಕಲಾವಿದೆ ಮೈಸೂರಿನ ಇಂದೂಶ್ರೀಯವರ ಕಾರ್ಯಕ್ರಮ ಹಾಸ್ಯಪ್ರಿಯರ ಮನಸ್ಸನ್ನು ತಣಿಸುವಲ್ಲಿ ಯಶಸ್ವಿಯಾಯಿತು. ಒಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಹಾಸ್ಯ ಕುರಿತು ಉಪನ್ಯಾಸಗಳಿದ್ದವು, ಹಿರಿಯ ಹಾಸ್ಯ ಲೇಖಕರ ಸ್ಮರಣೆ, ಹಾಸ್ಯಭಾಷಣ, ಹಾಸ್ಯ ವಾರ್ತಾ ವಾಚನ, ರಸಪ್ರಶ್ನೆ, ಮಿಮಿಕ್ರಿ ಮತ್ತು ಷಾಡೋಪ್ಲೇ. ಅಣಕು ಹಾಡುಗಳು, ಹಾಸ್ಯ ಗೀತೆಗಳ ಗಾಯನ, ಅಣಕು ರಾಮನಾಥ ಅವರ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಕೇಳಿದ ಪ್ರಶ್ನೇಗಳಿಗೆ ನವಿರಾದ ಹಾಸ್ಯದೊಂದಿಗಿನ ರಾಮಣ್ಣನವರ ಉತ್ತರಗಳು ಎಲ್ಲರನ್ನು ನಗಿಸುವಲ್ಲಿ ಯಶಸ್ವಿಯಾದವು.  ಹಾಸ್ಯದ ಕುರಿತ ಪರಿಪೂರ್ಣ ಸಮ್ಮೇಳನ ಇದಾಗಿತ್ತು. 
    
ಸಮ್ಮೇಳನದಲ್ಲಿ ಯಾವುದೂ ಕೊರತೆ ಇದ್ದಿರಲೇ ಇಲ್ಲವೆಂದಲ್ಲ. ಕೆಲವೊಂದು ನ್ಯೂನ್ಯತೆಗಳಿರುವುದು ಸಾಮಾನ್ಯ. ಮಳೆಯೂ ಹಾಸ್ಯಕ್ಕೆ ತಲೆಬಾಗಿ ಸಮ್ಮೇಳನಕ್ಕೆ ಅನುವು ಮಾಡಿಕೊಟ್ಟಿತ್ತಾದರೂ ರಾಜ್ಯಮಟ್ಟದ ಸಮ್ಮೇಳನಕ್ಕೆ ಸೇರಬೇಕಾದಷ್ಟು ಜನರು ಸೇರಿರಲಿಲ್ಲ.  ಸಮ್ಮೇಳನಕ್ಕೆ ಸಿಗಬೇಕಾದ ಪ್ರಚಾರ ಸಿಕ್ಕಿರಲಿಲ್ಲವೋ ಅಥವಾ ನಕ್ಕರೆ ಅದರಿಂದ ನಮಗೇನು ಸಿಗುವುದೆಂಬ ನಿರುತ್ಸಾಹವೋ ಏನೋ. ಮುಖ್ಯವಾಗಿ ತುಮಕೂರಿನ ಜನರೇ ಅಷ್ಟಾಗಿ ಕಂಡು ಬರಲಿಲ್ಲ. ದೂರದೂರಿನಿಂದ ಬಂದ ಜನರೇ ಹೆಚ್ಚಾಗಿರುವುದೊಂದು ವಿಶೇಷವಾಗಿತ್ತು. ಪಂಡರಪುರಕ್ಕೆ ಹೋಗದವನೇ ಪಾಪಿ ಎಂಬುದೊಂದು ಮಾತಿದೆ.  ಸಮ್ಮೇಳನಕ್ಕೆ ಬರದವರು ಸುವ್ಯವಸ್ಥಿತ, ಸುಂದರ ಸಮ್ಮೇಳನವೊಂದರಿಂದ ವಂಚಿತರಾದಂತೆಯೇ ಸರಿ. ಎರಡನೆಯ ಕೊರತೆಯೆಂದರೆ ಧ್ವನಿವರ್ಧಕ ಕೇಳುಗನ ಸಹನೆಯನ್ನು ಆಗಾಗ ಪರೀಕ್ಷಿಸುತ್ತಲಿತ್ತು. ಭಾಷಣಕಾರರ ಧ್ವನಿ ಪ್ರತಿಧ್ವನಿಸುತ್ತಿದ್ದರಿಂದ ಕೇಳುಗರನ್ನು ಸರಿಯಾಗಿ ತಲುಪುತ್ತಿರಲಿಲ್ಲ. ಕೆಲ ಅನಾಕೂಲತೆಗಳ ಮಧ್ಯೆಯೂ ಎರಡು ದಿನಗಳ ಕಾಲ ನಮ್ಮ ಊರು, ಮನೆ, ಮನೆಯವರನ್ನು ಮರೆಯುವಂತೆ ಮಾಡಿದ  ಸಂಘಟಕರಾದ ನಗಮುಗುಳು ಹಾಸ್ಯ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಹೆಚ್. ಎಸ್. ರಾಮಣ್ಣ, ಸಂಪಾದಕಿ, ರಶ್ಮಿ ಹೆಬ್ಬೂರ, ಎಚ್. ಎಸ್. ಸಾವಿತ್ರಿ, ದೀಪಕ ಹೆಬ್ಬೂರ ಪೂರ್ಣ ಹೆಬ್ಬೂರು ಕುಟುಂಬವೇ ಸಮ್ಮೇಳನಕ್ಕೆ ಸುಮಾರು ಎರಡು ತಿಂಗಳುಗಳ ಕಾಲ ದುಡಿದಿದ್ದಾರೆ ಅಲ್ಲದೇ ಅವರ ಜೊತೆಗೆ ಮಿಮಿಕ್ರಿ ಈಶ್ವರಯ್ಯ ಎಂ. ಕೆ. ನಾಗರಾಜರಾವ್ ಹೀಗೆ ಹಲವಾರು ಜನರು ತಮ್ಮ ಕೈಗಳನ್ನು ಜೋಡಿಸಿ ಕಾರ್ಯಕ್ರಮ ಜಯಭೇರಿಗೆ ಕಾರಣರಾಗಿದ್ದಾರೆ ಅವರನ್ನೆಲ್ಲ ಈ ಸಂದರ್ಭದಲ್ಲಿ  ಅಭಿನಂದಿಸುತ್ತೇನೆ. 


ದಿ| ಎನ್ಕೆ ಹಾಗೂ ದಿ| ಕಲ್ಲೋಳರನ್ನು ಮರೆತ ಹಾಸ್ಯಸಾಹಿತ್ಯ ಸಮ್ಮೇಳನ

ಉತ್ತರಕರ್ನಾಟಕದ ಹಿರಿಯ ಹಾಸ್ಯಬರಹಗಾರರಾಗಿದ್ದ ಧಾರವಾಡದ  ದಿ| ಎನ್ಕೆ ಹಾಗೂ ಬೆಳಗಾವಿಯ ದಿ| ಅನಂತ ಕಲ್ಲೋಳ ಹಾಸ್ಯಧ್ವಯರಿಗೆ ಆಮಂತ್ರಣ ಪತ್ರಿಕೆಯ ಯಾವ ಮೂಲೆಯಲ್ಲಿಯೂ ಸ್ಥಳ ದೊರಕದೇ ಇದ್ದುದು ಅವರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿತು. 

ನಾನಿಕಾಕಾ ಎಂದೇ ಪ್ರಸಿದ್ಧರಾಗಿದ್ದ ಎನ್ಕೆಯವರು ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳು, ನೂರಾರು ಹಾಸ್ಯಲೇಖನಗಳನ್ನು ಬರೆದಿದ್ದಾರೆ. ಅಲ್ಲದೇ ಆಕಾಶವಾಣಿಯ ಗಾಳಿಗೆ ತೂರಿ ಹೋದ ಎನ್ಕೆಯವರ ಸಾಹಿತ್ಯವೇ ಸಾವಿರಾರು ಪುಟಗಳಷ್ಟಿದೆ. ಹಾಸ್ಯ ಸಾಹಿತ್ಯ ಲೋಕದ ಎಲ್ಲರನ್ನೂ ನೆನಪಿಸಿಕೊಂಡ “ನಗೆಮುಗುಳು” ಪತ್ರಿಕೆ ಅದು ಹೇಗೆ ಮರೆತಿತೇನೋ ತಿಳಿಯಲ್ಲಿಲ್ಲ. 

ಅನಂತ ಕಲ್ಲೋಳ ಅವರ ಹಾಸ್ಯಲೇಖನಗಳಿಲ್ಲದ ಪತ್ರಿಕೆ ಸಿಗುವುದೇ ವಿರಳವಾಗಿದ್ದ ದಿನಗಳಿದ್ದವು. ಅಷ್ಟೊಂದು ಅವರ ಬರವಣಿಗೆಯ ವೇಗವಿತ್ತು. ನಗೆಮುಗುಳು ಪತ್ರಿಕೆಗೆ ಅನಂತ ಕಲ್ಲೋಳ ಅವರು ಸಾಕಷ್ಟು ಲೇಖನಗಳನ್ನು ಕೊಟ್ಟಿದ್ದಾರೆ. ಅಲ್ಲದೇ ನಗುಮುಗುಳು ಪತ್ರಿಕೆ ಅಭಿಮಾನಿಗಳಲ್ಲೊಬ್ಬರು ಕಲ್ಲೋಳರು. ಮುಂದಿನ ಸಮ್ಮೇಳನದಲ್ಲಿಯಾದರೂ ಈ ಹಾಸ್ಯದ್ವಯರನ್ನು ಮರೆಯದಿರಲಿ

ವೇದಿಕೆಗೆ ಖ್ಯಾತನಾಮರೊಬ್ಬರ ಹೆಸರನ್ನಿಡಬಹುದಾಗಿತ್ತು
    ಎಲ್ಲ ರೀತಿಯಿಂದಲೂ  ಇದೊಂದು ಯಶಸ್ವಿ ಸಮ್ಮೇಳನ. ಹಿರಿಯ ಹಾಸ್ಯಸಾಹಿತಿಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಅದರಲ್ಲಿಯ ಒಂದು ಹೆಸರನ್ನು ವೇದಿಕೆ ಇಡುವುದರ ಮೂಲಕ ಆ ಲೇಖಕರಿಗೊಂದು ಗೌರವ ಕೊಡಬೇಕಾಗಿತ್ತು. ರಾಜ್ಯ ಮಟ್ಟದ ಸಮ್ಮೇಳನ ದೊಡ್ಡ ಜವಾಬ್ಧಾರಿಯ ಕೆಲಸ ಇವೆಲ್ಲ ಸಹಜವಾದರೂ ಮುಂದಿನ ಸಮ್ಮಳನಕ್ಕೆ ಸಲಹೆ ಅಷ್ಟೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Sreenath M V
Sreenath M V
7 years ago

ತುಂಬ ಅಚ್ಚುಕಟ್ಟಾದ ವರದಿ. ಸಮ್ಮೇಳನದಲ್ಲಿ ಭಾಗವಹಿಸದೆ ಇದ್ದ ನನ್ನಂತೆ ವಂಚಿತರಾದವರಿಗೂ, ಸಂಪೂರ್ಣ ವಿವರಣೆ ಆ ಕೊರತೆ ನೀಗಿಸಿ, ಎರಡು ದಿನಗಳ ಹಾಸ್ಯ ಕಾರ್ಯಕ್ರಮದಲ್ಲಿ ಓದುಗರೂ ಭಾಗವಹಿಸಿದ ಅನುಭವ ನೀಡಿತು. ಗುಂಡೇನಟ್ಟಿ ಮಧುಕರ ಅವರಿಗೆ ಅಭಿನಂದನೆಗಳು.

gundenatti madhukar
gundenatti madhukar
7 years ago
Reply to  Sreenath M V

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಆರತಿ ಘಟಿಕಾರ್
ಆರತಿ ಘಟಿಕಾರ್
7 years ago

ಚೆಂದದ ನಿರೂಪಣೆ ಸರ್..ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸವಾಯಿತು ಮೇರು ,ಹಾಸ್ಯ ದಿಗ್ಗಜರ ನಗೆ ಚಟಾಕಿ ಮಾತುಗಳು ಎಲ್ಲರಿಗೂ ಹಾಸ್ಯ್ ರಸದೌತಣ ಉಣಬಡಿಸಿತು. ಒಟ್ಟಿನಲ್ಲಿ ಸಾಂಸ್ಕೃತಿಕ. ನಗೆ ಕೂಟ ಯಶಸ್ಸಿನಿಂದ ನೆರವೇರಿತು

gundenatti madhukar
gundenatti madhukar
7 years ago

ತಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಳು………. ಸಮ್ಮೇಳನದಲ್ಲಿ ತಾವು ವಾಚಿಸಿದ ಹನಿಗವನ  ಎಲ್ಲರ ಮುಖದಲ್ಲಿ ನಗೆಯನ್ನರಳಿಸಿತು

4
0
Would love your thoughts, please comment.x
()
x