ಯುವ ಕವಿ “ರಾಜು ಸನದಿ” ತಮ್ಮ ಚೊಚ್ಚಿಲ ಕವಿತಾ ಗುಚ್ಚ “ದುಗುಡದ ಕುಂಡ” ತುಂಬ ಪ್ರೀತಿಯಿಂದ ಕಳಿಸಿಕೊಟ್ಟು ದಿನಗಳೇ ಕಳೆದವು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದುಕೊಂಡು ಪ್ರಕಟವಾಗಿರುವ ಈ ಪುಸ್ತಕವನ್ನು ಕೆಲಸದ ಒತ್ತಡದಲ್ಲಿ ಓದಿ ಪ್ರತಿಕ್ರಿಯಿಸಲು ಆಗಿರಲಿಲ್ಲ. ಕೆಲಸದ ನಡುವೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ದುಗುಡದ ಕುಂಡ ಕೈಗೆತ್ತಿಕೊಂಡು ಈಗಷ್ಟೇ ಕೆಂಡದ ಕಾವು ಅನುಭವಿಸಿದ್ದೇನೆ. ಇಲ್ಲಿ ದಾಖಲಾದ ಪ್ರತಿ ಪದವೂ ಕಿಡಿಗಳಾಗಿ, ಪದಗಳು ಕೆಂಡದುಂಡೆಗಳಾಗಿ, ಮತ್ತು ಕವಿತೆಗಳು ಜ್ವಾಲಾಮುಖಿಯಾಗಿ ಹೊರಹೊಮ್ಮಿವೆ ಎಂದು ಹೇಳಬಹುದು. ಉತ್ತಮವಾದ ಕಾವ್ಯ ಮಹಲಿನಲ್ಲಿ ಹುಟ್ಟುವದಿಲ್ಲ, ಅದು ಗುಡಿಸಲಿನಲ್ಲಿ ಹುಟ್ಟುತ್ತದೆ ಎಂಬ ಹೇಳಿಕೆಯಂತೆ ಇಲ್ಲಿನ ಕವಿತೆಗಳು ದುರಿತ ಕಾಲದ ತಲ್ಲಣಗಳಿಗೆ ಮುಖಾಮುಖಿಯಾಗಿ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸುವೆ. ತಮ್ಮ ಸಮುದಾಯವನ್ನು ತಾನು ಕಾಪಾಡದ ಹೊರತು ಆ ದೇವರು ಕೂಡ ಕಾಪಾಡಲಾರ ಎಂಬ ಪವಿತ್ರ ಕುರಾನಿನ ನುಡಿಯಂತೆ ರಾಜು ಸನದಿಯವರು ತಮ್ಮ ಸಮಾಜದ ಸಂಪ್ರದಾಯದ ನ್ಯೂನತೆಗಳ ಮೇಲೆ, ಸಾಮಾಜಿಕ ಓರೆಕೋರೆಗಳ ಮೇಲೆ ಬೆಳಕು ಚೆಲ್ಲುವ ಧೈರ್ಯ ತೋರಿದ್ದಾರೆ ಎಂದರೆ ತಪ್ಪಾಗದು.
ಈ ಸಂಕಲನ ಮೊದಲೆರಡು ಕವಿತೆಗಳು “ಅಕ್ಕ ಕಾಣೆಯಾಗಿದ್ದಾಳೆ” ಬುರ್ಖಾ ಪದ್ದತಿಯನ್ನು ತೀವೃವಾಗಿ ಖಂಡಿಸುವ ಮೂಲಕ ಗಮನ ಸೆಳೆಯುತ್ತವೆ. ಹೀಗಾಗಿ ಇವುಗಳನ್ನು ಈ ಸಂಕಲನದ ಬಹುಮುಖ್ಯ ಕವಿತೆಗಳಾಗಿವೆ
“ಆಕೆಗೂ ಅನಿಸುತ್ತಿರಬೇಕು ನನ್ನಂತೆ
ಯಾವ ಸಂಕೋಲೆಗಳ ಪರವೆಯಿಲ್ಲದೆ
ಸಿನಿಮಾ ತಾರೆಯರ ಹಾಗೆ
ಒಂದು ಸುತ್ತು ಇಸ್ಕೂಲು – ಕಾಲೇಜು
ಸುತ್ತಿ ಬರಬೇಕೆಂದು,
ಆದರೆ ಅಪ್ಪ ಅವ್ವನ ಬಂಗಾರ ಸರಪಳಿ ಸಂಪ್ರದಾಯದ ಮಾತು
ಬಾಜು ಮನೆಯ ಗಂಡಸರ ಆಚಾರದ ಗಡಸು ಧ್ವನಿಗಳ ಗಸ್ತು..
…
ಅಕ್ಕನೂ ಹೀಗೆ ಬಂದಿದ್ದಳಲ್ಲ
ಕೇಶಾಂಬರಿಯಾಗಿ ಕಲ್ಯಾಣಕ್ಕೆ !
ಆದರೆ ನನ್ನಕ್ಕನಿಗೆಲ್ಲಿದೆ
ತನಗೆ ಬೇಕಾದ ಕಡೆ ಬರಲು ಸಮತಟ್ಟ ದಾರಿ?
ಮತ್ತೆಂದು ಹುಟ್ಟುತ್ತಾರೆ ಅಲ್ಲಾಹುವಿನ ಕರುಣೆಯಿಂದ ಬಸವ ಅಲ್ಲಮ ಪೈಗಂಬರರು
ನಮ್ಮಕ್ಕನ ಎದೆಯೊಳಗಿನ ದುಗುಡದ ಕುಂಡವನ್ನು
ಹೊರಗಿಳಿಸಲು?
ಅದಕ್ಕೆ ನಮ್ಮಕ್ಕ ಕಾಣೆಯಾಗಿದ್ದಾಳೆ,ಮಹಾದೇವಿಯ
ಕ್ಕನ ನೆನಪು ಮರಕಳಿಸದಂತೆ
(ಅಕ್ಕ ಕಾಣೆಯಾಗಿದ್ದಾಳೆ- ೧)
ಅಕ್ಕನ ನಗು, ನೋಟ, ನಡೆ, ನಲಿವನ್ನೆಲ್ಲ
ಕಪ್ಪು ಬಟ್ಟೆ ನುಂಗಿ ಹಾಕಿದೆ….
(ಅಕ್ಕ ಕಾಣೆಯಾಗಿದ್ದಾಳೆ- ೩)
ಕಪ್ಪು ಬಟ್ಟೆಯೊಳಗೆ ಬಂಧಿಯಾಗಿ ಜೀವಂತ ಶವದಂತಿರುವ ತನ್ನ ಅಕ್ಕನ ಸ್ಥಿತಿಗೆ ಮರುಗುತ್ತ ಬುರ್ಖಾದೊಳಗೆ ಕಣ್ಷೀರು ಮಿಡಿಯವ ಅದೆಷ್ಟೋ ಅಕ್ಕತಂಗಿಯರ ಮೂಕ ವೇದನೆಗೆ ರಾಜು ಅವರು ಧ್ವನಿಯಾಗಿದ್ದಾರೆ.
ನಾನೇಕೆ ಬರೆಯುತ್ತೇನೆ..?
ಪ್ರತಿಯೊಬ್ಬ ಲೇಖಕ ಜೀವಮಾನದಲ್ಲಿ ಒಮ್ಮೆಯಾದರು ಒಮ್ಮೆಯಾದರೂ ಕೇಳಿಕೊಳ್ಳುವ ಪ್ರಶ್ನೆ ಅಥವಾ ಸಮಾಜದಲ್ಲಿ ಲೇಖಕನಿಗೆ ಎದುರಾಗುವ FAQ ಪ್ರಶ್ನೆ. ಈ ಸಂಬಂಧ ಕವಿ ಸಾಹಿತಿ ಒಂದು ಸ್ಪಷ್ಟ ನಿಲುವು ಹೊಂದಬೇಕಾದ ಅವಶ್ಯಕತೆ ಇರುತ್ತದೆ. ರಾಜು ಸನದಿ ಈ ಪ್ರಶ್ನೆಗೆ ಬಹು ಸ್ಪಷ್ಟವಾದ ಉತ್ತರವನ್ನು ಕಂಡುಕೊಂಡಿರುವುದು ಅವರ “ನನ್ನ ಕವಿತೆ” ಇಂದ ವ್ಯಕ್ತವಾಗುತ್ತದೆ. ಮೂಲತಃ ಕವಿ ಪ್ರೇಮಿಯೇ ಆಗಿರುತ್ತಾನೆ. ಪ್ರೇಮ ಕವನದಿಂದಲೇ ಅವನ ಸಾಹಿತ್ಯ ಪಯಣ ಆರಂಭ ಆಗಿರುತ್ತದೆ. ಕವಿಯಾದವನಲ್ಲಿ ಈ ಪ್ರೇಮ ಯಾವತ್ತಿಗೂ ಜೀವಂತವಾಗಿರುತ್ತದೆ ಮತ್ತು ಇರಲೇಬೇಕಾಗುತ್ತದೆ. ಇಲ್ಲವೆಂದರೆ ಆತ ಕವಿತೆ ಬರೆಯಲು ಸಾಧ್ಯವೇ ಇಲ್ಲ. ಆದರೆ ಕವಿ ಮಾಗಿದಂತೆ ಕಾವ್ಯದ ಪಯಣ ಮುಂದುವರೆದಂತೆ ಈ ಪ್ರೇಮದ ಸ್ವರೂಪ ಬದಲಾಗುತ್ತ ಹೋಗುತ್ತದೆ. ಹಲವು ಜವಾಬ್ಧಾರಿಗಳು ಕವಿಯ ಹೇಗಲೇರಿ ಪ್ರೇಮ ವಿವಿಧ ರೂಪದಲ್ಲಿ ಟಿಸಿಲೊಡೆಯುತ್ತದೆ. ಕವಿ ಕೇವಲ ತನ್ನ ಪ್ರೇಯಸಿಯ ಸ್ವತ್ತಾಗಿ ಉಳಿಯದೆ ತನ್ನವರಿಗಾಗಿ, ತನ್ನ ಸಮಾಜಕ್ಕಾಗಿ, ತನಗೆ ನಂಬಿದವರಿಗಾಗಿ ತುಡಿಯುವುದು ದುಡಿಯುವು ಅನಿವಾರ್ಯವಾಗುತ್ತದೆ. ಹೀಗಾಗಿ ಕವಿ ಕೇವಲ ತನಗೆ ಒಲಿದ ಜೀವಕ್ಕೆ ಮಾತ್ರ ಸಿಮೀತವಾಗದೆ ಕವಿಯಾಗಿ ಕೇವಲ ಪ್ರೇಮ ಕಾಮ ವಿರಹ ಭಾವನೆಗಳನ್ನು ಮಾತ್ರ ಅಭಿವ್ಯಕ್ತಿಸದೆ ಸಮಾಜಿಕ ಆಗುಹೋಗುಗಳತ್ತ ದೃಷ್ಟಿ ಹಾಯಿಸಬೇಕಾಗುತ್ತದೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಸಾಹಿತ್ಯವನ್ನು ರಚಿಸಬೇಕಾಗುತ್ತದೆ. ಈ ನೆಲೆಯಲ್ಲಿ ನೋಡಲಾಗಿ –
“ನೊಂದ ಮನಸುಗಳಿಗೆ ಮುದ ನೀಡುವ
ಬಾಡುವ ಮುದಡುವ ಬಡ ಮನಗಳಿಗೆ
ಮರ – ಮರ ಮರಗುವ
ಬೆಳದಿಂಗಳ ಹಾಲಿನಂತೆ
ಸುರಿವ ಮಳೆ ಪ್ರೀತಿಯಂತೆ
ಇಂಪಾಗಿ, ತಂಪಾಗಿ,ಕಂಪಾಗಿ,
ಕರಗುವ ಜೀವಕ್ಕೆ ಕಪ್ಪೆ ಚಿಪ್ಪಾಗಿರುವ
ಕವಿತೆ ನನ್ನದು..” ( ನನ್ನ ಕವಿತೆ )
ಹೀಗೆ ನೊಂದವರ ಬೆಂದವರ ಪರ ನಿಲ್ಲುವ ರಾಜು ಅವರ ಕವಿತೆ ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ಪ್ರಜ್ಞೆಯಿಂದ ಹೊರತಾಗಿಲ್ಲ ಎನ್ನುವ ಮಾತಿಗೆ ಇಲ್ಲಿನ ಹಲವಾರು ಕವಿತೆಗಳು ಸಾಕ್ಷಿಯಾಗುತ್ತವೆ. ಈ ಹಿನ್ನಲೆಯಲ್ಲಿ ಈ ಒಂದು ಕವಿತೆಯನ್ನು ನೋಡಬಹುದಾಗಿದೆ –
“ಗಾಂಧಿಯೊಂದಿಗೆ…” ಎನ್ನುವ ಕವಿತೆಯಲ್ಲಿ “ಗಾಂಧಿ ಮುತ್ತ್ಯಾನ ಯಾಕೆ ಕೊಂದೆ?” ಎನ್ನುವ ಮುಖ್ಯವಾದ ಪ್ರಶ್ನೆಯನ್ನು ಎತ್ತುದ್ದರ ಮೂಲಕ ಗೊಡ್ಸೆ ಗಾಂಧೀಜಿಯವರನ್ನು ಏಕೆ ಕೊಂದಿರಬೇಕು ಎನ್ನುವ ಪ್ರಶ್ನೆಯ ಮೂಲಕ ಪ್ರಸ್ತುತ ಸಾಮಾಜಿಕ ಅರಾಜಕತೆಯನ್ನು ತೆರೆದಿಡುತ್ತಾರೆ ಮತ್ತು ಇದಕ್ಕೆ ತಮ್ಮೊಳಗೇ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.
“ಗಲ್ಲಿ ಗಲ್ಲಿಗೂ
ರಕ್ತದ ಕೋಡಿ ಹರಸಿದಿರಲ್ಲ
ಅವನ ಶಾಂತಿ ನಾಡಿನೊಳಗ
ರಾಮ ಅಲ್ಲಾನ ಹೆಸರಿನ ಮ್ಯಾಗ
ಮತ್ತ ಮಾಡಾಕತ್ತೀರಿ
ಗ್ವಾಡಿ ಗೂಟಕ ಫೋಟೋ ಜಡದ
ಅಹಿಂಸಾ ಹೆಸರಿನ ಮ್ಯಾಗ
ಒಳಗೊಳಗ ಮಸಲತ್ತ ಮಾಡಿ ಹಿಂಸಾ
ಮಾಡೋದಕಂತ, ಭರ್ತಿ ಒಂದ
ವರ್ಷಕ್ಕೊಂದರಂತ…. ( ಗಾಂಧಿಯೊಂದಿಗೆ)
ನಮ್ಮ ಸಮಾಜದ ಇನ್ನೊಂದು ಜ್ವಲಂತ ಸಮಸ್ಯೆ ಭ್ರೂಣ ಹತ್ಯೆ. ಹೆಣ್ಣು ಮಗು ಬೇಡ ಅನ್ನುವ ಕಾರಣಕ್ಕೆ ಗರ್ಭಪಾತ ಮಾಡಿಸುವ ತಂದೆ ತಾಯಿಗಳಿಗೆ ಕಣ್ಣು ತೆರೆಸುವ ನಿಟ್ಡಿನಲ್ಲಿ ರಚಿತವಾದ ಈ ಕವಿತೆ ” ಕರುಳು ಕುಡಿ” ಓದುಗರ ಮನ ಮಿಡಿಯುವಂಥದ್ದು.
“… ಹೇಳು ಅಮ್ಮಿ, ನಾನು ನಿನ್ನಂತವಳಲ್ಲವೇ?
ನನಗೇಕೆ ನಿನ್ನ ಚಹರಾ ತೋರಿಸದೆ
ವಾಪಸು ಕಳಿಸಿದೆ ?
ಹದ್ದು ಕುಕ್ಕಿಕೊಂಡು ಹೋದ ಕೋಳಿ ಮರಿಯಂತೆ
ಕಲಕಿ ಬಿಟ್ಟೆ?
…
ಹಸಿ ಹುಣ್ಣಾಗಿರುವ ನೆನಪುಗಳ
ನೋವುಗಳನ್ನೆಲ್ಲ ಗರ್ಭಪಾತ
ಮಾಡಿಸಬೇಕೆಂದಿರುವೆ
ಬಂಜೆಯಾದರೂ ಚಿಂತೆಯಿಲ್ಲ
ಹೊರತು ಮೋಸಗೈಯುವ
ಪ್ರವಾದಿ ಹೆಸರಿನ ಸೈತಾನನಾಗಿರುವ
ತಾಯ್ಗಂಡ ಮಕ್ಕಳು ಹುಟ್ಟದಿರಲೆಂದು
(ಚಂದಿರನ ಗೆಳತಿ)
” ಹಸಿವಿದೆ, ಅನಕ್ಷರತೆಯಿದೆ,ಬಡತನ ಸೂರಿದೆ
ಭ್ರಷ್ಟಾಚಾರ ಕಬ್ಬಿಣದ ಬಲೆಯಿದೆ
ಆದರೂ ನಾವು ಪ್ರಭುತ್ವವಾದಿಗಳು
ಇದು ಪ್ರಭುತ್ವ, ಪ್ರಜಾಪ್ರಭುತ್ವ (ಪ್ರಜಾಪ್ರಭುತ್ವ)
“ತಾತಾ!
ನಿನ್ನ ನಾಡಿನಲ್ಲಿ
ಮೇವು ತಿನ್ನುತ್ತಾರೆ
ಮಣ್ಣು ಮಾರುತ್ತಾರೆ
ಊಳುವ ನೆಲವನ್ನೆ ಬರ್ಕಾಸ್ತು ಮಾಡುತ್ತಾರೆ
….
ತಾತಾ!
ನಿನ್ನ ನಾಡಿನಲ್ಲಿ
ಮಾನವೀಯತೆಗಾಗಿ ತಡಕಾಡಬೇಕು
ಮತಾಂಧತೆಯೇ ಎಲ್ಲೆಂದರಲ್ಲಿ
ರಾಮರಾಜ್ಯದ ಹೆಸರಿನಲ್ಲಿ
ಕೆಡವಿ ಕಟ್ಟುತ್ತಿದ್ದಾರೆ
ಬೇಕಂತಲೇ……. ( ತಾತಾ ನಿನ್ನ ನಾಡು)
ನೂರ ದೇವರ ಪೂಜಿಸಿದರೂ
ಮಸೀದಿ ಮಂದಿರ ಕಟ್ಟಿಸಿದರೂ
ರಕ್ತಪಾತ ಜಾತಿಯ ದಳ್ಳುರಿಗೆ
ಕಾಣುತ್ತಿಲ್ಲವಿಂದು ಒಂದು ಜೀವ ನದಿ
ಒಡಲಿನ ರಕ್ಷಣೆಗೆ….. (ನಿಸರ್ಗ)
ಬದಲಾಗಬೇಕಿದೆ
ನವ ಮನ್ವಂತರ ದಾರಿಗೆ ಅಡ್ಡವಾಗಿರುವ
ಬಿರುಕುಗಳ ಧರ್ಮದ ಮಲಿನ ಜಾತಿಗೋಡೆಗಳು
(ಬದಲಾಗಲಿ)
“ಲೋಕದ ಅದಾಲತ್ತಿನಲ್ಲಿ
ತಿಳಿಯದ ಶರಿಯತ್ ಗಳು
ಬವಣೆ ತೀರಿಸಿಕೊಳ್ಳಲಾಗದೆ
ಖುದ್ದು ಶರಣಾಗುತ್ತಿದ್ದೇವೆ
ನಮ್ಮ ಇರುವಿಕೆಯನ್ನು
ಪ್ರತಿ ದಿನ, ಪ್ರತಿ ಕ್ಷಣ
ರುಜುವಾತು ಪಡಿಸಬೇಕಿದೆ
ಏಕೆಂದರೆ ನಾವಿನ್ನೂ ಹೊರಗಿನವರು”
(ರುಜುವಾತು)
ಹೀಗೆ ಜಾಗತೀಕರಣ ಭ್ರಷ್ಟಾಚಾರ, ಜಾತಿ, ಮತಾಂಧತೆ, ಸ್ತ್ರೀ ಶೋಷಣೆ, ಭ್ರೂಣ ಹತ್ಯೆಗಳಂಥ ಸಾಮಾಜಿಕ ಪಿಡುಗಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ಇಲ್ಲಿವೆ ಅಂದರೆ ಕವಿ ರಾಜು ಸನದಿಯವರು ತುಂಬ ಮುತವರ್ಜಿಯಿಂದ ಮತ್ತು ತುಂಬ ಬದ್ಧತೆಯಿಂದ ಕವಿಯಾಗುವ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ ಎಂದು ಹೇಳಬಹುದು. ರಾಜು ಅವರ ಕಾವ್ಯದ ಹರಿವು ಕೇವಲ ಸಾಮಾಜಿಕ ಸಮಸ್ಯೆಗಳಿಗೆ ಮಾತ್ರ ಸಿಮೀತವಾಗದೆ ತಂದೆ, ತಾಯಿ, ಅಕ್ಕ,ಸಂಗಾತಿ, ಪ್ರೇಯಸಿ, ಪ್ರೇಮ, ಪ್ರಣಯ, ವಿರಹ, ವೇದನೆಯಂಥ ವ್ಯಕ್ತಿಗತ ಖಾಸಗಿ ಭಾವನೆಗಳನ್ನು ಕೊಡ ಕಟ್ಟಿಕೊಡುವಲ್ಲಿ ಹಿಂದೆ ಬಿದಿಲ್ಲ. ಮೊದಲೇ ಹೇಳಿದ ಹಾಗೆ ಕವಿ ಮೂಲತಃ ಪ್ರೇಮಿಯಾಗಿರುವುದರಿಂದ ಪ್ರೇಮಕಾವ್ಯಗಳು ಅದರಲ್ಲೆ ಕವಿ ಭಗ್ನ ಪ್ರೇಮಿಯಾದರಂತೂ ಮುಗಿಯಿತು, ಕವಿ ಆಂತರ್ಯದಲ್ಲಿ ದುರಂತವನ್ನೆ ಪ್ರೀತಿಸುವದರಿಂದ ಆತ ಎಲ್ಲಿಂದಾದರೂ ಒಂದು ನೋವಿನ ಎಳೆ ತನ್ನ ಕಾವ್ಯದಲ್ಲಿ ಎಳೆದು ತರುವ ಮೂಲಕ ಸಹೃದಯ ಓದುಗನ ಹೃದಯವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾನೆ. ಶಕ್ಸಪೀಯರ್ ನಂಥ ಎಷ್ಟೋ ದಿಗ್ಗಜ ಕವಿಗಳಿಗೆ ಭಗ್ನ ಪ್ರೇಮ, ವಿರಹ ವೇದನೆಯೇ ವಸ್ತುವಾಗಿರುವಂತೆ ರಾಜು ಅವರಿಗೂ ವಿರಹ ಇಲ್ಲಿನ ಬಹುತೇಕ ಕವನಗಳ ಸ್ಥಾಯಿ ಭಾವವಾಗಿದೆ. ಕವಿ ಗಾಳಿ ನೀರುಯಿಲ್ಲದೆನೂ ಬದುಕಬಲ್ಲ ಆದರೆ ನೆನಪುಗಳಿಲ್ಲದೇ ಬದುಕುಲು ಸಾಧ್ಯವೇ ಇಲ್ಲ. ಹಾಗೇ ರಾಜು ಕಾವ್ಯದುಸಿರಾಟಕ್ಕೆ ನೆನಪುಗಳು ಹಳವಂಡಗಳೇ ಕಾರಣವಾಗಿವೆ. ಉದಾಹರಣೆಗೆ ಈ ಕೆಳಗಿನ ಸಾಲುಗಳು ನೋಡಬಹುದಾಗಿದೆ.
” ನಿನ್ನ ನೆನಪುಗಳ
ಮಯತ್ ತೊಳೆದು
ಕಫನ್ ಹೊದಿಸಿ
ಡೋಲಿ ಹೊತ್ತಕೊಂಡು ಸಾಗಲು
ಅಣಿಯಾಗುತ್ತಿರು
ಒಡಲ ಕಿಚ್ಚಿನ ಕುರಿತು
(ಏಕೆ ಬರೆಯಲು ಕವಿತೆ ಹೇಳು)”
“ನನ್ನ ಕನಸು ಖಜಾನೆಗೆ ಇತ್ತೀಚೆಗೆ
ನಿನ್ನ ನೆನಪುಗಳ ಬರಗಾಲ ಬಂದಿದೆ”
( ಒಂದಿಷ್ಟು ನೆನಪುಗಳು)
“ಭಯವೆಂದರೆ ನಿನ್ನ
ಕರಾಳು ನೆನಪುಗಳದ್ದು ಮಾತ್ರ”
(ಭಯ)
“ಹಾರಿ ಹೋದ ಹಕ್ಕಿ
ನನ್ನೂರಿನ ಇತಿಹಾಸವನ್ನೆ ನೆನಪಿಸಿತು
ಪಂಡಿತರು ಪಾಂಡಿತ್ಯವನ್ನೆ ಹೇಳಿತು
ಜನರ ಎದೆಗಾರಿಕೆಯನ್ನು ಪರಿಚಯಿಸಿತು
ಇಹ ಪರಗಳ ವಿಚಾರವನ್ನೆ ಮಂಡಿಸಿತು
ಹಾರಿ ಹೋದ ಹಕ್ಕಿ ಹೊಲದಲಿ ಕುಳಿತಿತು”
(ನೆನಪು)
“ನನ್ನ ನಿನ್ನ
ನಡುವಿನ ಸಂಬಂಧ
ಹಾದರದಿಂದ ಜನ್ಮ ಪಡೆದಿಲ್ಲ
ನನ್ನ ಗರತಿ ಪ್ರೇಮಕ್ಕೆ ಗರ್ಭಧರಿಸಿ
ನವಮಾಸದವರೆಗೆ ಜತನ ಮಾಡಿರುವೆ”
(ಚರಮ ಗೀತೆ)
“ಒಮ್ಮೇ ಕಿತ್ತೊಗೆದು ಬಿಡು
ಎದೆಯುಸಿರಿನಿಂದ
ನಿನ್ನ ನೆನಪ ಗೋರಿಯ
ಮೇಲೆ ಮತ್ತೊಂದು
ಪ್ರೇಮ ಸ್ಮಾರಕ ಕಟ್ಟಿಕೊಳ್ಳುವ
ಹವನಿಕೆಯಲ್ಲಿದ್ದೇನೆ”
(ನೆನಪು ಗೋರಿಯಾಚೆ)
ಹೀಗೆ ಸಂಕಲನದ ಎಲ್ಲ ಕವಿತೆಗಳು ಒಂದಿಲ್ಲ ಒಂದು ದೃಷ್ಟಿಯಿಂದ ಮನಸ್ಸು ಗೆಲ್ಲುತ್ತವೆ ಮತ್ತು ಆಲೋಚನೆಗೆ ಹಚ್ಚುತ್ತವೆ. ಉರ್ದು ಕನ್ನಡ ಮಿಶ್ರಿತ ಗಡಿನಾಡ ಗ್ರಾಮೀಣ ಸೊಗಡಿನ ಭಾಷೆ ಕಾವ್ಯಕ್ಕೆ ಜೀವಂತಿಕೆ ಮತ್ತು ಸ್ವಂತಿಕೆಯನ್ನು ಪ್ರಧಾನ ಮಾಡಿದೆ. ಮುನ್ನುಡಿಯಲ್ಲಿ ಖ್ಯಾತ ಸಾಹಿತಿ ಸತೀಶ ಕುಲಕರ್ಣಿಯವರು ” ರಾಜು ಸನದಿಯವರ ಕವಿತೆಗಳಿಗೆ ‘ವರ್ತಮಾನದ ಅರಿವು ಮತ್ತು ನೋಡುವ ಒಳಗಣ್ಣುಗಳ ಕರುಳಿನ ಕಾವ್ಯ” ಎಂದು ಬಣ್ಣಿಸಿದ್ದಾರೆ. ಬೆನ್ನುಡಿ ಬರೆದ ಆಶಾ ಜಗದೀಶ ಅವರು ” ಧಾರ್ಮಿಕ ಕಟ್ಟು ಪಾಡುಗಳು, ಮನುಷ್ಯನ ಇಬ್ಬಗೆಯ ನೀತಿ, ಆತ್ಮವಂಚನೆ, ದೌರ್ಜನ್ಯ, ಪ್ರೀತಿ ಪ್ರೇಮ ಎಲ್ಲವೂ ರಾಜು ಅವರನ್ನು ಕಾಡಿವೆ” ಎಂದು ಗುರ್ತಿಸಿದ್ದಾರೆ.
ಕೊನೆಯದಾಗಿ ನನಗೆ ಬಹುವಾಗಿ ಮೆಚ್ಚುಗೆಯಾದ ತಾಯಿ ಕುರಿತಾಗಿ ಬರೆದ ಅವರ ಒಂದು ಪುಟ್ಟ ಪದ್ಯ ತಮ್ಮ ಮುಂದೆ ಇಟ್ಟು ಈ ಪುಸ್ತಕ ಪರಿಚಯವನ್ನು ಮುಗಿಸುತ್ತೇನೆ.
“ಅದೊಂದು
ಬಿಡಿಸಲಾಗದ ಚಿತ್ರ
ಮಾಸಿದ ಬಣ್ಣ
ತುಂಬದ ಹಸಿವು
ನಿಲ್ಲದ ಮಳೆ
ಹಸಿರಿನ ಬೆಳೆ
ಓದಿದರು ಮುಗಿಯದ ಪುಸ್ತಕ
ಗೀಚಿದರೂ ಸಾಕಾಗದ ಸಾಲು
ಎಷ್ಟು ಓಡಿದರೂ ಅಂತ್ಯವಿರದ ದಾರಿ
ಸಮುದ್ರದ ಅಲೆ
ತಂಗಾಳಿಯ ಸೆಲೆ
ಬತ್ತದ ನದಿ
ಹರಿಯುವ ಝರಿ
ಎಣಿಸಲಾಗದ ನಕ್ಷತ್ರ ರಾಶಿ..
(ತಾಯಿಯ ಪ್ರೀತಿ).
ಕೃತಿಗಾಗಿ ಸಂಪರ್ಕಿಸಿ-
ಸನದಿ ಪ್ರಕಾಶನ
ರಾಯಬಾಗ, ಬೆಳಗಾವಿ ಜಿಲ್ಲೆ
ಮೊಬೈಲ್ ಸಂ; 8861871386
-ಅಶ್ಫಾಕ್ ಪೀರಜಾದೆ.