ರಾಜಕಾರಣಿಗಳು ಪಾರಿಸಾರಿಕ ದಿವಾಳಿತನವೂ!!!: ಅಖಿಲೇಶ್ ಚಿಪ್ಪಳಿ

Akhilesh chippali column1
70ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ದೇಶ ಮುಳುಗಿದ್ದ ಹೊತ್ತಿನಲ್ಲೆ ಅತ್ತ ಕೆಂಪುಕೋಟೆಯಿಂದ ಪ್ರಧಾನಿಯವರು ಭಾಷಣ ಮಾಡುತ್ತಿದ್ದರು. ದೇಶಕ್ಕೆ ಅನ್ನ ಕೊಡುವ ರೈತರನ್ನು ಇನ್ನಿಲ್ಲದಂತೆ ಹೊಗಳುತ್ತಿದ್ದರು. ಅತ್ತ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ಟೀಕಿಸುತ್ತಾ, ದೇಶದ ತಲಾವಾರು ಆರ್ಥಿಕ ಸೂಚ್ಯಂಕವನ್ನು ಹೆಚ್ಚು ಮಾಡುವ ಉತ್ತರದಾಯಿತ್ವದ ಮಾತುಗಳು ಬರುತ್ತಿದ್ದವು. ಇದೇ ಹೊತ್ತಿನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸುವುದಾಗಿ ನಮ್ಮ ಮುಖ್ಯಮಂತ್ರಿಗಳ ಭರವಸೆಯ ಭಾಷಣವನ್ನೂ ಟಿ.ವಿ.ಚಾನಲ್‍ಗಳು ಬಿತ್ತರಿಸುತ್ತಿದ್ದವು. ಇನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಅತೀವ ಬಳಲಿಕೆಯಿಂದ ಓದಬೇಕಾದ ಭಾಷಣವನ್ನು ಪೂರ್ತಿಯಾಗಿ ಓದಲು ಆಗಲಿಲ್ಲ. ಪ್ರಧಾನಿ ರೈತರನ್ನು ಹೊಗಳುವ ಹೊತ್ತಿನಲ್ಲೇ ಅತ್ತ ಕಳ್ಳಬೆಕ್ಕಿನಂತೆ ಮಾನ್ಸೊಂಟೋ ಭಾರತದ ರೈತರ ಭವಿಷ್ಯವನ್ನು ನುಂಗಲು ಹೊಂಚು ಹಾಕುತ್ತಿರುವ ಸುದ್ಧಿಯೂ ಬರುತ್ತಿದೆ. ಈಗಾಗಲೇ ಬಿಟಿ ಹತ್ತಿಯ ಹೆಸರಿನಲ್ಲಿ ಹತ್ತಿ ಬೆಳೆವ ರೈತರನ್ನು ನುಂಗಿದ ಈ ದೈತ್ಯ ಬೀಜ ಕಂಪನಿ ನಿಧಾನವಾಗಿ ಎಲ್ಲಾ ಬೆಳೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದೆ. ನಾಸಾದ ಉಪಗ್ರಹಗಳು ಒಟ್ಟಾರೆ ಭೂಮಿಯ ಚಿತ್ರಣವನ್ನು ತೆಗೆದು ಭೂಆರೋಗ್ಯದ ತಪಾಸಣೆಯನ್ನು ಇದೇ ಹೊತ್ತಿನಲ್ಲಿ ಮಾಡುತ್ತಿದೆ. 

ಗಣಿಗಾರಿಕೆಯಿಂದ ಬಳಲಿ ಬೆಂಡಾದ ಬ್ರಿಟನ್ ದೇಶದ ಮಧ್ಯಭಾಗದ ನಗರಗಳಾದ ಬರ್ಮಿಂಗ್‍ಹ್ಯಾಮ್, ಡರ್ಬಿ ಹಾಗೂ ಲೆಸೆಸ್ಟರ್‍ನಲ್ಲಿ ಹಸುರು ಅರಳಿ ಶುದ್ಧ ಗಾಳಿ ಹಾಗೂ ನೀರು ಸಿಗುತ್ತಿರುವ ಒಳ್ಳೆಯ ಸುದ್ದಿಯೂ ಬರುತ್ತಿದೆ. ಇದನ್ನು ಸ್ವಲ್ಪ ವಿವರವಾಗಿ ನೋಡೋಣ. 25 ವರ್ಷಗಳ ಹಿಂದೆ ಮೇಲೆ ಹೇಳಿದ ನಗರಗಳು ಅತೀವ ಗಣಿಗಾರಿಕೆಯಿಂದ ಬಳಲಿ, ನರಳಿ ಇಡೀ ಪರಿಸರ ಕೊಳಕುಗಳಿಂದ ತುಂಬಿ ಹೋಗಿತ್ತು. ಎಲ್ಲೆಲ್ಲೂ ವಾಸನೆ, ಎಲ್ಲಾ ತರಹದ ಮಾಲಿನ್ಯಗಳಿಂದ ತುಂಬಿ ಹೋಗಿತ್ತು. ಅತೀವ ಮಾಲಿನ್ಯದಿಂದ ಅಲ್ಲಿನ ಪರಿಸರದ ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯ ಕ್ಷೀಣಿಸಿ ಹೋಗಿತ್ತು. ಇಷ್ಟರಲ್ಲಿ ಅಲ್ಲಿನ ಗಣಿಯಲ್ಲಿನ ಸಂಪತ್ತು ಮುಗಿದಿತ್ತು. ಗಣಿ ಚಟುವಟಿಕೆಗಳಿಂದ ತುಂಬಿ ಗಿಜಿಗುಡುತ್ತಿದ್ದ ಆ ನೆಲದಿಂದ ಜನರೇನೋ ಬೇರೆ-ಬೇರೆ ಕಡೆ ವಲಸೆ ಹೋದರು. ಮಾನವ ದೌರ್ಜನ್ಯದ ಪ್ರತೀಕವಾಗಿ ಭಗ್ನಾವಶೇಷದ ರೂಪದಲ್ಲಿ ಅಲ್ಲಿನ ಪರಿಸರ ಹಾಗೂ ನದಿಗಳು ತೋರುತ್ತಿದ್ದವು. 

ಇವತ್ತು ಈ ಮೂರು ನಗರಗಳ ಗಣಿ ಭಗ್ನಾವಶೇಷ ಪ್ರದೇಶದಲ್ಲಿ ಅರಣ್ಯ ತಲೆಯತ್ತಿದೆ. ಸೈಕಲ್-ಕುದುರೆ ಸವಾರರು, ಪಕ್ಷಿ ವೀಕ್ಷಕರು, ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. 25 ವರ್ಷದಲ್ಲಿ ಸುಮಾರು ಮುವತ್ತು ಅಡಿ ಎತ್ತರ ಬೆಳೆದ ಮರಗಳು ಇಲ್ಲಿನ ಸಂಪೂರ್ಣ ಪರಿಸರವನ್ನು ಆಹ್ಲಾದಾಯಕವನ್ನಾಗಿ ರೂಪಿಸುವಲ್ಲಿ ಗೆದ್ದಿವೆ. ಪಕ್ಕದ ನದಿಯ ನೀರು ತಿಳಿಯಾಗಿ ಹರಿಯುತ್ತಿದೆ. 200 ಚದರ ಮೈಲಿ ಪ್ರದೇಶದಲ್ಲಿ ಈಗಾಗಲೇ 80 ಲಕ್ಷ ಮರಗಳು ಬೆಳೆಯುತ್ತಿವೆ. ಇಡೀ ವಾತಾವರಣವದ ಕಲ್ಮಷಗಳನ್ನು ಹೀರಿಕೊಳ್ಳುತ್ತಿರುವ ಈ ಅರಣ್ಯ ಪ್ರದೇಶಕ್ಕೆ ನಾನಾ ತರಹದ ಪಕ್ಷಿಗಳು, ಪ್ರಾಣಿಗಳು, ಉಭಯವಾಸಿಗಳು, ಸರಿಸೃಪಗಳು ಬಂದು ನೆಲೆಸುತ್ತಿವೆ. ಮರಗಳನ್ನು ಬೆಳೆಸುತ್ತಿರುವ ಹೊತ್ತಿನಲ್ಲೇ 500 ಚಿಲ್ಲರೆ ಹಾಳುಬಿದ್ದ ಗಣಿಗಾರಿಕೆಯ ಶಿಥಿಲ ಕಟ್ಟಡಗಳನ್ನು ಕೆಡವಿ ಅಲ್ಲೂ ಕೂಡ ಸಸಿಗಳನ್ನು ಊರಲಾಯಿತು. ಒಂದು ಕಾಲದಲ್ಲಿ ಅಪಾರ ಲಾಭ ತರುತ್ತಿದ್ದ ನೆಲದಲ್ಲಿ ಈಗ ಪ್ರತ್ಯಕ್ಷ ಲಾಭ ತಾರದ ಅರಣ್ಯ ಬೆಳೆದಿದೆ. ಇದು ಹಣವನ್ನು ತಂದುಕೊಡದಿದ್ದರೂ, ಅಲ್ಲಿನ ಭೂಮಿಯ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಲು ಸಫಲವಾಗಿದೆ. ಶುದ್ದ ಗಾಳಿ-ನೀರು ಲಭಿಸುತ್ತಿದೆ. ಗಣಿಗಾರಿಕೆಯ ಸುತ್ತ-ಮುತ್ತಲ ಪ್ರದೇಶದಲ್ಲಿ ಹೊರಗಿನಿಂದ ಬರುವ ಜನ ತಮ್ಮ ಮನೆಯನ್ನು ಕಟ್ಟಿಕೊಳ್ಳಲು ಇಚ್ಚಿಸುತ್ತಿದ್ದಾರೆ. ಇದರಿಂದ ಪರೋಕ್ಷವಾಗಿ ಅಲ್ಲಿನ ಸರ್ಕಾರಕ್ಕೆ ಲಾಭವಿದೆ. ನಿಧಾನವಾಗಿ ಇಕೋ ಟೂರಿಸಂ ಬೆಳೆಯುತ್ತಿದೆ.

ಕಳೆದ 25 ವರ್ಷದಲ್ಲಿ ಅಲ್ಲಿನ ಸರ್ಕಾರ ಈ ಮಟ್ಟದ ಅರಣ್ಯ ಬೆಳೆಸಲು ಖರ್ಚು ಮಾಡಿದ ಹಣ ಏನೇನೂ ಅಲ್ಲ. ಹೋಲಿಸುವುದಾದಲ್ಲಿ 5 ಕಿ.ಮಿ.ಯಷ್ಟು ದೂರ ಬುಲೆಟ್ ರೈಲಿಗಾಗಿ ಹಳಿ ಹಾಕಿದಷ್ಟು. ಹಲವು ಕಾರಣಗಳಿಂದಾಗಿ ಬ್ರಿಟನ್‍ನ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ಕಾರಣವಾಗಿರುವುದು ರೋಗ. ಅಲ್ಲಿನ ಸ್ಥಳೀಯ ಅರಣ್ಯಗಳಿಗೆ ಶಿಲೀಂಧ್ರ ಸಂಬಂಧಿ ರೋಗಗಳು ಭಾದಿಸುತ್ತಿವೆ. ರೋಗ ಬಂದು ಸಾಯುತ್ತಿರುವ ಅರಣ್ಯಗಳನ್ನು ಉಳಿಸುವ ಪ್ರಂiÀiತ್ನಗಳು ಅಷ್ಟಾಗಿ ಆಗುತ್ತಿಲ್ಲ ಎಂಬ ದೂರುಗಳು ಇವೆ. ಈಗಾಗಲೇ 80 ಲಕ್ಷ ಮರಗಳನ್ನು ಬೆಳೆಸಲಾಗಿದೆ ಮತ್ತು ಇನ್ನೂ 80 ಲಕ್ಷ ಮರಗಳನ್ನು ಬೆಳೆಸುವ ಗುರಿಯನ್ನು ಹೊಂದಲಾಗಿದೆ. ಅರಣ್ಯದಿಂದ ಇಷ್ಟೆಲ್ಲಾ ಉಪಯೋಗಗಳಿದ್ದರೂ ಅಲ್ಲಿನ ಸರ್ಕಾರ ಹಾಗೂ ರಾಜಕಾರಣಿಗಳು ಅರಣ್ಯ ಬೆಳೆಸುವ ಉತ್ಸಾಹ ತೋರುತ್ತಿಲ್ಲ ಇದಕ್ಕೆ ಕಾರಣ ಅವರ ಪಾರಿಸಾರಿಕ ಅನಕ್ಷರತೆ ಎಂದು ದೂರುತ್ತಾರೆ ಈ ನ್ಯಾಷನಲ್ ಫಾರೆಸ್ಟ್ ಯೋಜನೆಯ ನಿರ್ದೇಶಕ ಜಾನ್ ಎವರಿಟ್.

Hosanagar Jamballi Encroachment2

 

Bhutan's Happiness Index

ಈಗೊಂದು ತಿಂಗಳ ಹಿಂದೆ ಕಾರ್ಯನಿಮಿತ್ತ ಮೈಸೂರಿಗೆ ಹೋಗಿದ್ದೆ, ಕುಟುಂಬ ಸಮೇತ. ಬರುವಾಗ ಕೆಮ್ಮಣ್ಣುಗುಂಡಿಯಲ್ಲಿ ಒಂದು ದಿನ ಉಳಿಯುವ ಅಂತ ಪ್ಲಾನ್ ಮಾಡಿದೆವು. ಆಗ ಅಲ್ಲಿ ಮಳೆಯಾಗುತ್ತಿತ್ತು. ಅಂತೂ ರಾತ್ರಿ ಕಾರ್ಗತ್ತಲಿನಲ್ಲಿ ಅದು ಹೇಗೋ ಒಂದು ರೂಮು ಸಿಕ್ಕಿತು. ಊಟವೂ ದಕ್ಕಿತು. ಮಾರನೇ ದಿನ ಬೆಳಗ್ಗೆಯೇ ಕೆಮ್ಮಣ್ಣುಗುಂಡಿಯ ತುತ್ತತುದಿಯೇರಿದೆ. ವಿಪರೀತ ಗಾಳಿ, ಯಾರೋ ತಳ್ಳಿದಷ್ಟು ಜೋರಾಗಿ ಬೀಸುತ್ತಿತ್ತು. ಆಗ ನಾನು ಅಲ್ಲಿ ಗಮನಿಸಿದ ಒಂದು ಅಂಶವೆಂದರೆ, ಅಲ್ಲಿ ನೀಲಗಿರಿ ಮರಗಳು ಇದ್ದವು. ಸ್ವಚ್ಛವಾದ ಪರಿಸರಕ್ಕೆ ನೀಲಗಿರಿ ಅಥವಾ ಅಕೇಶಿಯಾ ಹೇಳಿ ಮಾಡಿಸಿದ ಸಸ್ಯಗಳಲ್ಲ. ಹೊರಗಡೆಯಿಂದ ತಂದ ಈ ಸಸ್ಯಗಳು ಇದೀಗ ಪಶ್ಚಿಮಘಟ್ಟಗಳಿಗೆ ಪೀಡೆಯಾಗಿವೆ. ಅದು ಹೇಗೆ ಈ ಪರಿಸರದಲ್ಲಿ ನೀಲಗಿರಿ ಬಂತು ಎಂದು ಅಲ್ಲಿನ ಕಾರ್ಯನಿರ್ವಹಣಾಧಿಕಾರಿಯನ್ನು ವಿಚಾರಿಸಿದೆ. ಕೆಮ್ಮಣ್ಣುಗುಂಡಿಯಲ್ಲಿ ಒಂದು ಕಾಲದಲ್ಲಿ ಗಣಿಗಾರಿಕೆ ನಡೆದಿತ್ತು. ಕಬ್ಬಿಣದ ಅದಿರಿಗಾಗಿ ಅಲ್ಲಿಯ ಗುಡ್ಡಗಳನ್ನು ಅಗೆದಿದ್ದರು. ನಾಶ ಮಾಡಿದ ಅರಣ್ಯಕ್ಕೆ ಬದಲಾಗಿ ಬದಲೀ ಅರಣ್ಯವನ್ನು ಬೆಳೆಸುವ ಜವಾಬ್ದಾರಿ ಇಲಾಖೆಗಳ ಮೇಲೆ ಇತ್ತು. ಸರಿ, ಎಂದಿಗೂ ಸಾಯದ, ವೇಗವಾಗಿ ಬೆಳೆಯುವ ನೀಲಗಿರಿ ಗಿಡಗಳನ್ನು ನೆಟ್ಟರು. 25-30 ವರ್ಷಗಳ ಹಿಂದೆ ನೆಟ್ಟ ನೀಲಗಿರಿ ಮರಗಳು ಇವತ್ತು 50 ಅಡಿ ಎತ್ತರಕ್ಕೆ ಬೆಳೆದಿವೆ. ಜೀವಿ ವೈವಿಧ್ಯ ದೃಷ್ಟಿಯಿಂದ ನೀಲಗಿರಿ ಮರಗಳಿಗೆ ಯಾವ ಮಹತ್ವವೂ ಇಲ್ಲ. ಇಲಾಖೆಗಳ ಕಡತದಲ್ಲಿ ಮಾತ್ರ ಹಸರೀಕರಣ ಮಾಡಲಾಗಿದೆ ಎಂಬ ಟಿಪ್ಪಣಿ ಸಿಗುತ್ತದೆ. 

ಬ್ರಿಟನ್ ದೇಶದ ಅರಣ್ಯ ಕಟ್ಟುವ ರೀತಿಗೂ ನಮ್ಮ ದೇಶದಲ್ಲಿ ಕಾಡು ನಿರ್ಮಿಸುವ ನೀತಿಗೂ ಬಹಳ ವ್ಯತ್ಯಾಸವಿದೆ. ಅಲ್ಲಿ ಕಡೇ ಪಕ್ಷ ಅಲ್ಲಿ ವೆಚ್ಚ ಮಾಡಿದ ಹಣಕ್ಕಿಂತಲೂ ಹೆಚ್ಚಿನ ಮಟ್ಟದ ಪಾರಿಸಾರಿಕ ಸೇವೆ ಬೆಳೆಸಿದ ಕಾಡಿನಿಂದ ಸಿಗುತ್ತದೆ. ಕಳೆದೆಷ್ಟು ವರ್ಷಗಳಿಂದ ನಾವು ಕಾಡು ಬೆಳೆಸುತ್ತಿದ್ದೇವೆ. ನಮ್ಮಲ್ಲಿ ಕೋಟಿ ಸಸಿಗಳನ್ನು ನೆಟ್ಟದ್ದು ದಿನಪತ್ರಿಕೆಗಳಲ್ಲಿ ರಾರಾಜಿಸುತ್ತದೆ ಬಿಟ್ಟರೆ, ನೆಟ್ಟವುಗಳಲ್ಲಿ ಎಷ್ಟು ಉಳಿದವು ಎಂಬುದು ಲೆಕ್ಕಕ್ಕೆ ಸಿಗುವುದಿಲ್ಲ. ಸಾಮಾಜಿಕ ಲೆಕ್ಕಪತ್ರ ತಪಾಸಣೆಯ ರೂಡಿಯೂ ನಮ್ಮಲ್ಲಿಲ್ಲ. ಅಭಿವೃದ್ಧಿ, ಜಿಡಿಪಿ ಹೆಚ್ಚಳ, ಅಸಮಾನತೆ ಇತ್ಯಾದಿಗಳಿಂದಾಗಿ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಗೇಲಿಗೊಳಗಾಗುತ್ತಿರುವ ಹೊತ್ತಿನಲ್ಲೆ, ನಮ್ಮ ಪಕ್ಕದ, ಹಿಮಾಲಯದ ಬುಡದಲ್ಲಿರುವ ಅತಿ ಚಿಕ್ಕ ದೇಶ ಭೂತಾನ್ ಜಾಗತಿಕ ಮಟ್ಟದಲ್ಲಿ ವಿಜೃಂಬಿಸುತ್ತಿದೆ. ಹೇಗೆ ನೋಡೋಣ.

ಎಲ್ಲಾ ರಾಷ್ಟ್ರಗಳು ಅಭಿವೃದ್ಧಿಯ ಮಂತ್ರ ಪಠಿಸುತ್ತಾ ಜಿಡಿಪಿಯ ಲೆಕ್ಕಾಚಾರದಲ್ಲಿ ಮುಳುಗಿದ್ದರೆ, ಏಷ್ಯಾದ ಎರಡು ಭಯಂಕರ ಅಭಿವೃದ್ಧಿ ಹಸಿವಿನಿಂದ ಕೂಡಿದ ದೇಶಗಳ (ಭಾರತ ಮತ್ತು ಚೀನಾ) ಕಾಲಬುಡದಲ್ಲಿರುವ ಭೂತಾನ್ ಬೇರೆಯದೇ ಹಾದಿಯನ್ನು ತುಳಿದಿದೆ. ಆ ದೇಶದ ಜನ ಎಷ್ಟು ಶ್ರೀಮಂತಿಕೆ ಹೊಂದಿದ್ದಾರೆ ಎನ್ನುವುದನ್ನು ಅಳೆಯುವುದನ್ನು ಬಿಟ್ಟು ಎಷ್ಟು ಸುಖಿಗಳಾಗಿದ್ದಾರೆ ಎಂಬುದನ್ನು ಅಳೆಯುವ ತಂತ್ರವನ್ನು ರೂಢಿಸಿಕೊಂಡಿದ್ದಾರೆ. ಅದೇ ರಾಷ್ಟ್ರೀಯ ಸಂತಸ ಸೂಚ್ಯಂಕ. ಬರೀ 8 ಲಕ್ಷ ಜನಸಂಖ್ಯೆ ಹೊಂದಿರುವ ಹಾಗೂ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನಲ್ಲಿರುವ ಭೂತಾನ್ ಇವತ್ತು ಪ್ರಪಂಚಕ್ಕೆ ಮಾದರಿಯಾಗಿ ನಿಂತಿದೆ. ಹವಾಮಾನ ಬದಲಾವಣೆ ಶೃಂಗಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಇಂಗಾಲಾಮ್ಲ ತ್ಯಾಜ್ಯವನ್ನು ಕಡಿಮೆ ಮಾಡುವು ಗುರಿಯನ್ನು 2025, 2030, 2050 ಇಸವಿಗಳು ಎಂದು ನಿಗದಿಪಡಿಸಿಕೊಂಡು ಅದನ್ನು ತಲುಪುವ ಗುರಿ ಹೊಂದುವ ಮಾತನಾಡುತ್ತಿದ್ದರೆ, ಇತ್ತ ಭೂತಾನ್ ತಟಸ್ಥ ಇಂಗಾಲಾಮ್ಲ (ಕಾರ್ಬನ್ ನ್ಯೂಟ್ರಲ್) ಪರಿಣಾಮದಿಂದ ಋಣಾತ್ಮಕ ಇಂಗಾಲಾಮ್ಲ ಪರಿಣಾಮ (ನೆಗೆಟಿವ್ ಕಾರ್ಬನ್) ಎಡೆಗೆ ಸಾಗಿದ ಮೊಟ್ಟ ಮೊದಲ ದೇಶ ಎಂಬ ಭಾಜನಕ್ಕೆ ಪಾತ್ರವಾಗಿದೆ.

ಇದನ್ನು ಅದೇ ದೇಶದ ಉದಾಹರಣೆಯೊಂದಿಗೆ ನೋಡೋಣ. ಅಲ್ಲಿನ ವಾರ್ಷಿಕ ಇಂಗಾಲಾಮ್ಲ ತ್ಯಾಜ್ಯದ ಪ್ರಮಾಣ 1.5 ಮಿಲಿಯನ್ ಟನ್ ಅದೇ ಇಂಗಾಲಾಮ್ಲ ಹೀರಿಕೊಳ್ಳುವ ಪ್ರಮಾಣ 8 ಮಿಲಿಯನ್ ಟನ್‍ಗಳಾಗಿದೆ. 2030ರ ವೇಳೆಗೆ ಅಲ್ಲಿ ಶೂನ್ಯ ಇಂಗಾಲಾಮ್ಲ ತ್ಯಾಜ್ಯದ ಗುರಿಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಿಶಾನ್ ಎಂಬ ಕಾರು ತಯಾರಿಕಾ ಕಂಪನಿಯ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, 2030ರ ವೇಳೆಗೆ ಭೂತಾನ್ ರಸ್ತೆಯ ಮೇಲೆ ಯಾವುದೇ ತರಹದ ಪಳೆಯುಳಕೆ ಇಂಧನಗಳ ವಾಹನಗಳು ಚಲಿಸುವುದಿಲ್ಲ. ಅಲ್ಲಿನ ರಾಜ ತನ್ನ ಹುಟ್ಟು ಹಬ್ಬದ ದಿನ 1 ಲಕ್ಷ ಸಸಿಗಳನ್ನು ನೆಟ್ಟು ಮಾದರಿಯಾಗುತ್ತಾನೆ. ಅಲ್ಲಿನ ಸಂವಿಧಾನದಲ್ಲೇ ತನ್ನ ಭೌಗೋಳಿಕ ವ್ಯಾಪ್ತಿಯ ಶೇ.60ರಷ್ಟು ಅರಣ್ಯವಿರಲೇ ಬೇಕು ಎಂಬ ಕಟ್ಟುನಿಟ್ಟಿನ ನಿಯಮ ಮಾಡಲಾಗಿದೆ. ಹಾಲಿ ಅಲ್ಲೀಗ ಶೇ.72 ಭೌಗೋಳಿಕ ಪ್ರದೇಶದಲ್ಲಿ ಅರಣ್ಯವಿದೆ. ಜಾಗತಿಕ ನಿಯಮದಂತೆ ಆಯಾ ದೇಶಗಳ ಭೌಗೋಳಿಕ ವಿಸ್ತಾರದ ಶೇ.33% ಅರಣ್ಯ ಪ್ರದೇಶವಿರಬೇಕು. ಭಾರತದಲ್ಲಿ ಇದು ಶೇ.10ಕ್ಕೆ ಬಂದು ನಿಂತಿದೆ. ಭೂತಾನ್‍ನಲ್ಲಿ ಹೆಣ್ಣು ಮಕ್ಕಳು ಹುಟ್ಟಿದಾಗ ಸಸಿಗಳನ್ನು ನೆಡುವ ಪರಿಪಾಠವಿದೆ. ಇಡೀ ಜಗತ್ತು ಬಿಟ್ಟ ಕಣ್ಣಿನಿಂದ ಭೂತಾನ್ ಕಡೆಗೆ ನೋಡುವಂತೆ ಮಾಡಿದ ಶಕ್ತಿ ಯಾವುದು? ಅದೇ ಅವರ ವೃಕ್ಷಗಳೆಡೆಗಿನ ಪ್ರೀತಿ. ನಾಟದ ರಫ್ತು ವ್ಯವಹಾರವನ್ನು ಅಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಜಿಡಿಪಿ ಏರಿಕೆಯಾದರೆ ನೆಮ್ಮದಿಯಿರುವುದಿಲ್ಲವೆಂದು ಅಲ್ಲಿನ ಆಡಳಿತ ಹಾಗೂ ಜನ ಕಂಡುಕೊಂಡಿದ್ದಾರೆ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿದ್ದು, ನೆಮ್ಮದಿ. ಈ ಕಾರಣಕ್ಕೋಸ್ಕರವಾಗಿಯೇ ಅಲ್ಲಿ ಜಿಡಿಪಿಯ ಬದಲಾಗಿ ಎನ್‍ಎಚ್‍ಐ (ನ್ಯಾಷನಲ್ ಹ್ಯಾಪಿನೆಸ್ ಇಂಡೆಕ್ಸ್) ಗೆ ಒತ್ತು ನೀಡಲಾಗಿದೆ. ಅಲ್ಲಿನ ಜನರ ದಿನನಿತ್ಯದ ಅಗತ್ಯಗಳಿಗೆ ಚಿಕ್ಕ-ಚಿಕ್ಕ ಆಣೆಕಟ್ಟುಗಳಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿ ಬಿಟ್ಟರೆ ಪವನ ಶಕ್ತಿ ಹಾಗೂ ಸೌರಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಸೀಮಿತ ಆದಾಯವಿರುವ ಅತಿ ಚಿಕ್ಕ ದೇಶ ಜಗತ್ತಿಗೆ ಮಾದರಿಯಾಗುವುದಾದರೆ, ನಮಗೇಕೆ ಇದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಹಾಗೂ ಉತ್ತರ ಲೇಖನದ ತಲೆಬರಹದಲ್ಲೇ ಇದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x