ರಾಗ ಅನುರಾಗಕ್ಕೆ ಒಗ್ಗಿಕೊಂಡ ಕವಿತೆಗಳು “ಅಳಿದ ಮೇಲೆ”: ಅಶ್ಫಾಕ್ ಪೀರಜಾದೆ.

ವಿಷಯ ವೈವಿಧ್ಯತೆಗಳಿಂದ ಕೂಡಿದ ಒಟ್ಟು ನಾಲವತ್ತಾರು ಕವನಗಳು ಮತ್ತು ಐವತ್ತು ಹನಿಗವನಗಳಿಂದ ಸಂಕಲಿತಗೊಂಡ ಕವನ ಸಂಕಲನ “ಅಳಿದ ಮೇಲೆ”. ಇದು ಪ್ರೇಮಾನಂದ ಶಿಂಧೆ ಅವರ ಚೊಚ್ಚಿಲು ಕೃತಿ. ಕೃತಿಯ ಕುರಿತು ಪ್ರಸ್ತಾವನೆ ಮಂಡಿಸಿರುವ ಸಾಹಿತಿ ಮಾರ್ತಾಂಡಪ್ಪ ಕತ್ತಿ ” ಪ್ರತಿ ಮನುಷ್ಯ ಇತರೆಲ್ಲ ಆಯಾಮಗಳಿಗಿಂತಲೂ ಕವಿತೆಗೆ, ಹಾಡಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾನೆ. ಮಾತಿನಲ್ಲಿ ಹೇಳಲು ಅಸಾಧ್ಯವಾದುದನ್ನು ಕವಿತೆಯ ಮೂಲಕ ಹೊರ ಹಾಕಲು ಸಾಧ್ಯ. ಇದು ಕವಿತೆಗಿರುವ ಶಕ್ತಿ ಮತ್ತು ಆಕರ್ಷಿಸುವ ಗುಣ. ಅನಿವರ್ಚನೀಯವಾದ ಕವಿತೆ ಜೀವನದ ಅತ್ತ್ಯುತ್ತಮ ಸಂಗಾತಿ ಮತ್ತು ನೊಂದ ಹೃದಯಕ್ಕೆ ಸಮಾಧಾನ ನೀಡುವ ಔಷಧಿ ಎಂಬ ಆಶಯಕ್ಕೆ ತಕ್ಕಂತೆ ಪ್ರೇಮಾನಂದ ಶಿಂಧೆಯವರ ಕವಿತೆಗಳು ಕಾಣುತ್ತವೆ” ಎಂದು ಹೇಳುತ್ತಾರೆ. ಹೌದು ಕತ್ತಿಯವರು ಹೇಳುವಂತೆ ಪ್ರೇಮಾನಂದರ ಕವನಗಳು ಓದಿದಾಗ ಒಂದು ತರಹದ ಅನಿವರ್ಚನೀಯವಾದ ಆನಂದ ಉಂಟಾಗಿವುದು ಖಚಿತ. ಸ್ವತಃ ಗಾಯಕರೂ ಆಗಿರುವ ಪ್ರೇಮಾನಂದರು ತಮ್ಮ ಕಾವ್ಯವನ್ನು ರಾಗ, ತಾಳ ಮತ್ತು ಹಾಡಿನ ಲಯಕ್ಕೆ ಒಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕವಿತೆಗೆ ಇರಬೇಕಾದ ಗೇಯತೆ ಇವರ ಕವನಗಳಲ್ಲಿ ಕಾಣಸಿಗುತ್ತವೆ. ಜೊತೆಗೆ ಸಾಮಾಜಕ್ಕಾಗಿ ಕಾವ್ಯವೆನ್ನುವ ಧೋರಣೆ ಅವರ ಸಾಕಷ್ಟು ಕವನಗಳು ಸಾಬೀತು ಪಡಿಸುತ್ತವೆ. ಸಂಕಲನದ ಮೊದಲ ಕವನದ ಸಾಲುಗಳು ನೋಡಿ-

“ಕೆಸರು ಮಣ್ಣಲ್ಲಿ ಹಗಲಿರುಳು ದುಡಿದು
ಬೆಳೆಯುವನು ಒಳ್ಳೆ ಫಸಲು
ಬೆಳೆದ ಬೆಳೆಗೆ ಬೆಲೆ ಇಲ್ಲದಾಗ
ಹಿಡಿಯುವುದು ಅವರಿಗೆ ದಿಗಿಲು… (ಅನ್ನದಾತ.. ರೈತ)

ಅನ್ನದಾತನ ಗೋಳಿನ ಕತೆಯನ್ನು ತುಂಬ ಸರಳವಾಗಿ ಆಪ್ತವಾಗಿ ಹಿಡಿದಿಡುವ ಕವಿ ರೈತರ ಹಬ್ಬ ಸಂಕ್ರಾಂತಿ ಕುರಿತು ಇನ್ನೊಂದು ಕವನದಲ್ಲಿ ರೈತರ ಹರ್ಷ ಸಂಭ್ರಮವನ್ನು ತುಂಬ ಸುಂದರವಾಗಿ ಹೃದಯಂಗಮವಾಗಿ ಕಟ್ಟಿಕೊಡುತ್ತಾರೆ.

” ಇದ್ದರು ನಮ್ಮಲ್ಲಿ ಎಳ್ಳಿನಷ್ಟು ಪ್ರೀತಿ
ಧಾರಾಳವಾಗಿ ಹಂಚಿಬಿಡಿ ಬಿಟ್ಟು ಎಲ್ಲ ಭೀತಿ
ಹಂಚಿಕೊಂಡು ತಿಂದರೆ ಎಳ್ಳು ಬೆಲ್ಲ
ಹರುಷವಿದೆ ಬಾಳಲ್ಲಿ ನೋವು ಇಲ್ಲ” (ಸಂಕ್ರಾಂತಿ ಆಶಯ)

ಪಶು ವದ್ಯಕೀಯ ವೃತ್ತಿಯಲ್ಲಿರುವ ಕವಿ ಪಶುಪಾಲನೆಗೆ ಉಪಯುಕ್ತವಾಗುವ ವಿವಿಧ ದೇಶಿ ತಳಿಗಳ ಮಾಹಿತಿಯನ್ನು ಹಾಡಿನ ಮೂಲಕ ಒದಗಿಸುತ್ತ ಪಶು ಪಾಲನೆಯತ್ತ ನಿರುದ್ಯೋಗಿ ಯುವಕರ ಗಮನ ಸೆಳೆಯುವ ಮಹತ್ವದ ಕಾರ್ಯ ಮಾಡುತ್ತಾರೆ.

“ಬೆಳೆಸಿ ಉಳಿಸಿ ದೇಶಿ ತಳಿಗಳನ್ನು
ಗಳಸಿ ಸಮಾಜದಲ್ಲಿ ಹೆಸರನ್ನು
ಮಾಡಿಕೊಳ್ಳಲು ಬಹುದು ಯುವಕರು ಉದ್ಯೋಗವನ್ನೆ
ಅದೇ ಕೃಷಿ ಮತ್ತು ಪಶುಪಾಲನೆ” (ಪಶು ಪಾಲನೆ)
ಎಂದು ಹೇಳುತ್ತ ಯುವಕರು ಪಶು ಪಾಲನೆಯ ಮೂಲಕ ಸ್ವಾವಲಂಬಿಗಳಾಗಲು ಹುರಿದುಂಬಿಸುತ್ತಾರೆ.

ಸಮಾಜಮುಖಿಯಾಗಿ ಚಿಂತಿಸುವ ಶಿಂಧೆಯವರು ಸಮಾಜೋದ್ಧಾರಕ್ಕಾಗಿ ದುಡಿದ ಹಲವಾರು ಮಹನೀಯರ ವ್ಯಕ್ತಿ ಪರಿಚಯವನ್ನು ಹಾಡುಗಳಾಗಿಸಿದ್ದಾರೆ. ‘ದಲಿತ ಸೂರ್ಯ’ ದಲ್ಲಿ ಅಂಬೇಡ್ಕರ್ ರನ್ನು ‘ ವೀರ ಸನ್ಯಾಸಿ ವಿವೇಕಾನಂದ’ ದಲ್ಲಿ ಸ್ವಾಮಿ ವಿವೇಕಾನಂದರನ್ನು, ‘ಕರ್ನಾಟಕದ ಚೇತನ’ದಲ್ಲಿ ವಿಶ್ವ ವಿಖ್ಯಾತ ವೈದ್ಯ ವಿಜ್ಞಾನಿ ಡಾ. ಸ.ಜ. ನಾಗಲೋಟಿಮಠರನ್ನು, ‘ಗಾನ ಗಂಧರ್ವ’ ದಲ್ಲಿ ಡಾ. ರಾಜ್ ಕುಮಾರರನ್ನು ” ಕನ್ನಡದ ಹಾಡುಗಳಿಗೆ ಗಾನ ಗಾಂಧರ್ವ / ಅಭಿಮಾನಿ ದೇವರುಗಳಿಗೆ ಭಕ್ತನಿವ ಓರ್ವ… ಎಂದು ಅವರ ಹಿರಿಮೆಯನ್ನು ಹಾಡಿ ಹೊಗಳುತ್ತಾರೆ. ಇದರಂತೆ ಇಲ್ಲಿ ಅನೇಕ ವ್ಯಕ್ತಿ ಚಿತ್ರಗಳು ಕಾವ್ಯ ರೂಪವಾಗಿ ಅನಾವರಣಗೊಂಡಿವೆ.

ಪ್ರೇಮಾನಂದ ಶಿಂಧೆಯವರು ತಮ್ಮ ಹೆಸರಿಗೆ ತಕ್ಕ ಹಾಗೆ ಇಲ್ಲಿನ ಬಹುತೇಕ ಕವನಗಳಲ್ಲಿ ಪ್ರೇಮ ಕವಿಯಾಗಿ ಪ್ರಕಟವಾಗಿದ್ದಾರೆ. ಮನುಜ ಪ್ರೇಮ, ಗೆಳತಿ ಪ್ರೇಮ, ಮಾತೃ ಪ್ರೇಮ, ಸಾಮಾಜಿಕ ಪ್ರೇಮ, ಪರಿಸರ ಪ್ರೇಮ, ದೇಶ ಪ್ರೇಮ, ನಾಡು ಪ್ರೇಮ, ಕಾಡು ಪ್ರೇಮ…. ಹೀಗೆ ಪ್ರೀತಿಯ ಹತ್ತಾರು ಮುಖಗಳು ಕವನಗಳಾಗಿ ಈ ಸಂಕಲನದಲ್ಲಿ ಎರಕಗೊಂಡಿವೆ.

“ಜಗತ್ತಿನ ಕೋಟಿ ಕೋಟಿ ಗ್ರಹಗಳಲ್ಲಿ
ನಮಗೀಗ ಗೊತ್ತಾಗಿರುವ ಪ್ರಪಂಚದಲ್ಲಿ
ಅದ್ಭುತ ಆಗರಗಳ ತಾಣವಾಗಿರುವುದು
ಇರುವುದೊಂದೇ ಭೂಮಿ…!!! (ಇರುವುದೊಂದೇ ಭೂಮಿ)
ಎಂದು ಭೂಮಂಡಲದ ಮಹತ್ವ ಸಾರಿ ಹೇಳುವ ಕವಿ ಈ ಸಂಕಲನದ ಶೀರ್ಷಿಕೆ ಗೀತೆಯಲ್ಲಿ –

” ಮನುಕುಲದ ಸ್ವಾರ್ಥಕ್ಕೆ ನಮ್ಮ ಕಾನನ
ಬಿಟ್ಟು ಹಾರಬೇಕಿದೆ ಆಕಾಶಕ್ಕೆ ಮೇಲೆ
ನಮ್ಮ ಈ ಜೀವನಕೆ ಇನ್ನು ಮುಕ್ತಿಯು ಎಲ್ಲಿ
ದೊಡ್ಡ ಕಾಡುಗಳೆಲ್ಲ ಅಳಿದ ಮೇಲೆ” (ಅಳಿದ ಮೇಲೆ)

ಅರಣ್ಯ ಸಂಪತ್ತು ನಾಶವಾದ ಮೇಲೆ ನಾವು ಬದುಕುವುದು ಹೇಗೆ ಎಂದು ನಮ್ಮ ಅಳಿವು ಉಳಿವಿನ ಪ್ರಶ್ನೆಯನ್ನು ಎತ್ತುತ್ತಾರೆ. ಪರಿಸರ ಪ್ರೇಮ, ಪ್ರಕೃತಿ ಪ್ರೇಮ ಇವರ ಕವನದಲ್ಲಿ ಹಾಸು ಹೊಕ್ಕಾಗಿರುವಂತೆ, ಪ್ರೀತಿ – ಪ್ರೇಮ, ವಿರಹ – ವೇದನೆಗಳು ಕೂಡ ಕಾಡುವ ಸಾಲುಗಳಾಗಿ ಇವರ ಕವನಗಳಲ್ಲಿ ಜಾಗ ಪಡೆದಿವೆ.

ಬೆನ್ನುಡಿ ದಾಖಲಿಸಿರುವ ಪ್ರಕಾಶ ಉಡಕೇರಿ ಅವರ ಮಾತುಗಳು ಕೂಡ ಅಷ್ಟೇ ಮಹತ್ವವಾದವುಗಳು. ಅವರು ಏನು ಹೇಳುತ್ತಾರೆ ನೋಡಿ – ” ಪಶು ಸಂಗೋಪನಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತ ಕನ್ನಡ ಸಾಹಿತ್ಯವನ್ನು ಓದಿಕೊಂಡು ತಮ್ಮ ಗಾಯನಕ್ಕೆ ಬೇಕಾದ ಸಾಹಿತ್ಯವನ್ನು ತಾವೇ ರಚಿಸಿಕೊಂಡು ಹಾಡಿ ಸೈ ಎನಿಸಿಕೊಂಡವರು… ಇದರ ಫಲವೇ ಈ “ಅಳಿದ ಮೇಲೆ” ಕವನ ಸಂಕಲನ. ಸಾಮಾಜಿಕ ಕಾಳಜಿ, ಕನ್ನಡ ಭಾಷೆ, ಸಾಮಾಜಿಕ ಚಿಂತನೆಗಳು, ಒಲವು, ಹೃದಯದ ತುಡಿತ ಮಿಡಿತಗಳು… ಹೀಗೆ ಎಲ್ಲ ರೀತಿಯ ವಿಷಯವನ್ನೊಳಗೊಂಡ ನಲವತ್ತಾರು ಕವನಗಳು ಮತ್ತು ಪ್ರಾಸಬದ್ಧವಾದ ಐವತ್ತು ಹನಿಗವನಗಳು ರಚಿಸಿದ್ದಾರೆ”. ಕಾರಣ ಪ್ರೇಮಾನಂದ ಶಿಂಧೆಯವರ “ಅಳಿದ ಮೇಲೆ” ಸಂಕಲನವನ್ನು ಕೊಂಡು ಓದಿ ಪ್ರೋತ್ಸಾಹಿಸಲು ವಿನಂತಿಸಿಕೊಂಡಿದ್ದಾರೆ.

ಕೊನೆಯದಾಗಿ ಈ ಸಂಕಲನದ ಇನ್ನೊಂದು ಮಹತ್ವದ ಕವನದ ಸಾಲುಗಳು ಉಲ್ಲೇಖಿಸುವ ಮೂಲಕ ಈ ಕೃತಿಯ, ಈ ಕವಿಯ ಶಕ್ತಿಯನ್ನು ಅಳೆಯಲು ಪುಸ್ತಕ ಕೊಂಡು ಓದುವ ಸಹೃದಯ ಓದುಗ ಮಿತ್ರರ ವಿವೇಚನೆಗೆ ಬಿಡುತ್ತೇನೆ. ಸಂವಿಧಾನ ಬದಲಿಸುವ ಹುನ್ನಾರ ನಡೆಸುತ್ತಿರುವವರ ಕುರಿತ ಬಲು ಬೇಸರದಿಂದ ಬರೆಯುವ ಪ್ರೇಮಾನಂದರು –

” ಒಂದು ವೇಳೆ ಸಂವಿಧಾನ ಇಟ್ಟರೆ
ಪಕ್ಕಕ್ಕೆ ಎತ್ತಿ
ನಮಗೆಲ್ಲ ಅಧೋಗತಿ
ಕಟ್ಟಿಟ್ಟ ಬುತ್ತಿ” (ಸಂವಿಧಾನೊತ್ತರ ಭಾರತ).

“ಅಳಿದ ಮೇಲೆ” ಕೊಂಡು ಓದಬೇಕೆನ್ನುವರು ಲೇಖಕರ ಮೊಬೈಲ್ ಸಂಖ್ಯೆ- 9743001619 ಅಥವಾ ಪ್ರಕಾಶಕರ ಮೊಬೈಲ್ ಸಂಖ್ಯೆ- 9964199599 & 9844127466 ಗಳಿಗೆ ಸಂಪರ್ಕ ಮಾಡಬಹುದು.

ಅಶ್ಫಾಕ್ ಪೀರಜಾದೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x