ಕನಕದಾಸರು ರಚಿಸಿದ ‘ರಾಮಧಾನ್ಯಚರಿತೆ’ ಯನ್ನು ನೀವು ಓದಿರಬೇಕು. ಅದರಲ್ಲಿ ಬರುವ ಅಕ್ಕಿ ಹಾಗೂ ರಾಗಿ ಧಾನ್ಯಗಳ ನಡುವಿನ ವಾದವಿವಾದ ಹಾಗೂ ಅದು ರಾಮನ ಆಸ್ಥಾನದಲ್ಲಿ ಬಗೆಹರಿದ ವಿಚಾರ,ಅಲ್ಲದೇ ಅಕ್ಕಿಗಿಂತಲೂ ರಾಗಿಯೇ ಶ್ರೇಷ್ಠ ಧಾನ್ಯ ಎಂದು ರಾಮನು ತೀರ್ಪಿತ್ತಿದ್ದನ್ನು ಓದಿ ಅಥವಾ ಕೇಳಿ ತಿಳಿದಿರಬೇಕಲ್ಲವೇ?. ಈಗ ಅದೆಲ್ಲಾ ಏಕೆ ಎಂದಿರಾ? ಕಾರಣ ಇದೆ. ನಾವೀಗ ಧಾನ್ಯಗಳಲ್ಲೇ ಶ್ರೇಷ್ಠವಾದ ರಾಗಿ ಹಾಗೂ ಅದರ ಉತ್ಪಾದಿತ ಆಹಾರ ಪದಾರ್ಥವಾದ ರಾಗಿಮುದ್ದೆಯ ಬಹುಪಯೋಗಿ ಗುಣಗಳ ಬಗ್ಗೆ ಚರ್ಚಿಸೋಣ. .
ತನ್ನಲ್ಲಿ ಅಡಗಿಸಿಕೊಂಡಿರುವ ಪೋಷಕಾಂಶಗಳ ಪಟ್ಟಿ ಸಿದ್ಧಪಡಿಸುತ್ತಾ ಹೋದರೆ ಅತಿ ಹೆಚ್ಚು ಪೋಷಕಾಂಶಗಳ ಆಗರವಾಗಿ ಕಾಣುವುದು ರಾಗಿಮುದ್ದೆ. ರಾಗಿಮುದ್ದೆಯು ಗ್ರಾಮೀಣ ಜನರ ಜೀವಾಳ. ಗ್ರಾಮೀಣ ಭಾಗದಲ್ಲೇ ಹೆಚ್ಚು ಬಳಕೆಯಲ್ಲಿರುವ ಈ ರಾಗಿಮುದ್ದೆಯನ್ನು ನೀವೂ ದಿನನಿತ್ಯ ಸೇವಿಸುತ್ತಿದ್ದೀರೆಂದಾದಲ್ಲಿ ನೀವು ಕ್ಯಾಲ್ಸಿಯಂ, ನಾರಿನಂಶ, ಪ್ರೋಟೀನ್,ಕಬ್ಬಿಣಾಂಶಯುಕ್ತ ಸರ್ವಪೋಷಕಾಂಶ ಭರಿತ ಆಹಾರ ಸೇವಿಸುತ್ತಿದ್ದೀರೆಂದು ತಿಳಿಯಬಹುದಾಗಿದೆ. ಇಷ್ಟೊಂದು ಉಪಯುಕ್ತವಾಗಿರುವ ರಾಗಿಮುದ್ದೆಯನ್ನು ಸೇವಿಸುವುದರಿಂದ ಏನೆಲ್ಲಾ ಅನುಕೂಲಗಳಿವೆಯೆಂದು ಒಂದೊಂದಾಗಿ ತಿಳಿಯೋಣ. ,
• ಕೊಲೆಸ್ಟ್ರಾಲ್ ನಿವಾರಕ
ರಾಗಿಯಲ್ಲಿರುವ ಅಮೈನೋ ಆಮ್ಲಗಳು ಯಕೃತ್ತಿನಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಿ ದೇಹದಿಂದ ಹೊರದಬ್ಬುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‍ನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅಲ್ಲದೇ ಅಧಿಕ ಕೊಬ್ಬಿನ ಸಂಗ್ರಹಣೆ ಹಾಗೂ ಉತ್ಪಾದನೆಗೆ ಬ್ರೇಕ್ ಹಾಕುತ್ತದೆ.
• ರೋಗನಿರೋಧತೆ ಹೆಚ್ಚಿಸುತ್ತದೆ
ದಿನನಿತ್ಯ ರಾಗಿಮುದ್ದೆ ಸೇವನೆಯಿಂದ ನಮಗೆ ಪ್ರೋಟೀನ್, ವಿಟಮಿನ್ ಹಾಗೂ ಇನ್ನಿತರೆ ಖನಿಜಗಳು ದೊರೆತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ರೋಗಮುಕ್ತರನ್ನಾಗಿಸುತ್ತದೆ. ಪರಿಣಾಮ ಸಪೂರ ದೇಹದ ಒಡೆಯರು ನೀವಾಗುತ್ತೀರಿ.
• ಮೂಳೆಗಳ ದೃಢತೆಗೆ ಸಹಾಯಕ
ಮೂಳೆಗಳು ಗಟ್ಟಿಯಾಗಬೇಕೆಂದರೆ ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಅದರಲ್ಲೂ ಮಕ್ಕಳಿಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿ ಬೇಕು. ಮೂಳೆಗಳು ಗಟ್ಟಿಯಾಗಿರಲು ಅವುಗಳಿಗೆ ಕ್ಯಾಲ್ಸಿಯಂ ನಿರಂತರವಾಗಿ ಪೂರೈಕೆಯಾಗುತ್ತಿರಬೇಕು. ದಿನನಿತ್ಯ ರಾಗಿಮುದ್ದೆಯನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದಷ್ಟು ಕ್ಯಾಲ್ಸಿಯಂ ದೊರೆತು ಮೂಳೆಗಳು ಬಲಿಷ್ಠವಾಗಿ ಬೆಳವಣಿಗೆಹೊಂದುತ್ತವೆ ಮತ್ತು ಮೆದುಮೂಳೆರೋಗವನ್ನು ನಿಯಂತ್ರಿಸುತ್ತದೆ.
• ಮಲಬದ್ಧತೆ ನಿವಾರಿಸುತ್ತದೆ
ರಾಗಿಯಲ್ಲಿ ಕರಗದ ನಾರು ಇರುವುದರಿಂದ ಕಡಿಮೆ ನಾರಿನಂಶದಿಂದ ಕಾಡುವ ಮಲಬದ್ಧತೆಯನ್ನು ನಿವಾರಿಸಲು ಸಹಾಯಕವಾಗಿದೆ.
• ತೂಕ ನಿಯಂತ್ರಿಸಲು ಅಗತ್ಯ
ಸದಾಕಾಲ ತಮ್ಮ ಸ್ಥೂಲಕಾಯದ ಬಗ್ಗೆ ಚಿಂತಿಸುತ್ತಿರುವವರಿಗೆ ರಾಗಿಮುದ್ದೆ ರಾಮಬಾಣದಂತೆ ಕೆಲಸಮಾಡುತ್ತದೆ. ಹೆಚ್ಚಾಗಿ ಅಕ್ಕಿ ಸೇವಿಸುವವರಲ್ಲಿ ತೂಕ ಹೆಚ್ಚಾಗಿ ಕಂಡುಬರುತ್ತದೆ. ಬದಲಿಗೆ ರಾಗಿಮುದ್ದೆ ಸೇವಿಸುವವರಲ್ಲಿ ಪೋಷಕಾಂಶಗಳು ನಿಧಾನವಾಗಿ ಶರೀರಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುವುದರಿಂದ ಸ್ಥೂಲತೆ ನಿಯಂತ್ರಣಕ್ಕೆ ಬರುವುದು.
• ಖಿನ್ನತೆ ನಿವಾರಣೆಗೆ ಸಹಾಯಕ
ರಾಗಿಮುದ್ದೆಯ ನಿಯಮಿತ ಸೇವನೆಯಿಂದ ಮೆದುಳಿಗೆ ಪೂರೈಕೆಯಾಗುವ ರಕ್ತ ಮತ್ತು ಇತರೆ ಪೋಷಕಾಂಶಗಳ ಪ್ರಮಾಣ ಹೆಚ್ಚಾಗಿ ಖಿನ್ನತೆಯಂತಹ ಮಾನಸಿಕ ಉದ್ವಿಗ್ನತೆಗಳನ್ನು ಕಡಿಮೆಮಾಡುತ್ತದೆಯಲ್ಲದೇ, ನಿದ್ರಾಹೀನತೆ, ಮೈಗ್ರೇನ್ ತಲೆನೋವು,ಮಂಕು ಕವಿಯುವಿಕೆಯಂತಹ ಸಮಸ್ಯೆಗಳಿಗೂ ಪರಿಹಾರ ದೊರಕಿಸುತ್ತದೆ.
• ಗ್ಲೂಕೋಸ್ ಕಡಿಮೆಮಾಡುತ್ತದೆ
ಅಗತ್ಯಕ್ಕಿಂತ ಹೆಚ್ಚು ಗ್ಲೂಕೋಸ್ ರಕ್ತದಲ್ಲಿ ಸಂಗ್ರಹವಾಗುವ್ಯದರಿಂದ ಅನೇಕ ಅನಗತ್ಯ ರೋಗಗಳಿಗೆ ದೇಹವು ಬಲಿಯಾಗಬೇಕಾಗುತ್ತದೆ. ಆದರೆ ರಾಗಿಮುದ್ದೆಯ ನಿಯಮಿತ ಸೇವನೆಯಿಚಿದ ರಕ್ತಕ್ಕೆ ಅಗತ್ಯ ಪ್ರಮಾಣದ ಗ್ಲೂಕೋಸ್ ಮಾತ್ರ ಸಂಗ್ರಹವಾಗುತ್ತದೆ.
• ಹೈಪೋಥೈರಾಯ್ಡಿಸಂ ತಡೆಗಟ್ಟುತ್ತದೆ
ರಾಗಿಮುದ್ದೆಯಲ್ಲಿರುವ ಪೋಷಕಾಂಶಗಳು ಅಗತ್ಯದಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಸ್ರವಿಸುವಂತೆ ಉತ್ತೇಜಿಸುವ ಮೂಲಕ ಹಾರ್ಮೋನ್ ಸ್ರವಿಸುವಿಕೆಯ ಕೊರತೆಯಿಂದ ಉಂಟಾಗಬಹುದಾದ ಹೈಪೋಥೈರಾಯ್ಡಿಸಂ ನ್ನು ನಿಯಂತ್ರಿಸುತ್ತವೆ ಅಲ್ಲದೇ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
• ಬಾಣಂತಿಯರಿಗೆ ದಿವ್ಯೌಷಧ
ಹೆರಿಗೆಯ ಸಮಯದಲ್ಲಿ ಸಾಕಷ್ಟು ರಕ್ತಸ್ರಾವವಾಗುವುದರಿಂದ ನಿತ್ರಾಣವಾಗಿರುವ ಬಾಣಂತಿಯರಿಗೆ ಶಕ್ತಿಯನ್ನು ಮರಳಿ ಪಡೆಯುವಂತೆ ಮಾಡಲು ರಾಗಿಮುದ್ದೆ ದಿವ್ಯೌಷಧಿಯಾಗಿ ಕೆಲಸಮಾಡುತ್ತದೆ. ರಾಗಿಮುದ್ದೆ ಸೇವನೆಯು ರಕ್ತದ ಉತ್ಪಾದನೆಯನ್ನು ಹೆಚ್ಚಿಸಿ ದೇಹವು ಪುನಃ ಚೈತನ್ಯಹೊಂದುವಂತೆ ಮಾಡುತ್ತದೆ.
• ರಕ್ತಹೀನತೆ ಹೋಗಲಾಡಿಸುತ್ತದೆ
ಆಹಾರದಲ್ಲಿ ಕಬ್ಬಿಣದಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ದಿನನಿತ್ಯ ರಾಗಿಮುದ್ದೆ ಸೇವಿಸುವ ಮೂಲಕ ನಿವಾರಿಸಿಕೊಳ್ಳಬಹುದಾಗಿದೆ. ಸೊಪ್ಪು ಮತ್ತು ಹಸಿತರಕಾರಿಗಳಲ್ಲಿರುವಷ್ಟೇ ಪ್ರಮಾಣದ ಕಬ್ಬಿಣದಂಶ ರಾಗಿಮುದ್ದೆಯಿಂದಲೂ ದೊರೆಯುತ್ತದೆ.
• ಮಧುಮೇಹವನ್ನು ಕಡಿಮೆಗೊಳಿಸುತ್ತದೆ
ಮಧುಮೇಹದಿಂದ ಬಳಲುತ್ತಿರುವವರಿಗೆ ಅವರ ಮಧುಮೇಹದಲ್ಲಿನ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ಕಡಿಮೆಮಾಡಲು ರಾಗಿಮುದ್ದೆಯಿಂದ ಮಾತ್ರ ಸಾಧ್ಯ.
ವಿವಿಧ ರೋಗಗಳ ಪಾಲಿಗೆ ಸಿಂಹಸ್ವಪ್ನವಾಗಿ ದೇಹವನ್ನು ಬಾಧಿಸುವ ಅಪೌಷ್ಟಿಕತೆ, ಅಸ್ತಮಾ,ಅಕಾಲ ವೃದ್ದಾಪ್ಯ,ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೆ ರಾಗಿಮುದ್ದೆ ಸೇವನೆಯು ಸಂಜೀವಿನಿಯಾಗಿದೆ. ಅದಕ್ಕೇ ಅಲ್ಲವೇ ಹಿರಿಯರು ಹೇಳಿದ್ದು ‘ರಾಗಿ ತಿಂದವ ನಿರೋಗಿ’ಎಂದು.