ಯಾವುದೋ ಕೆಲಸದ ಮೇಲೆ ಸೊರಬ ತಾಲ್ಲೂಕಿನ ಒಂದು ಊರಿಗೆ ಹೋಗುವುದಿತ್ತು. ಆ ರಸ್ತೆಯಲ್ಲಿ ಹೋಗದೆ ಮೂರ್‍ನಾಲ್ಕು ತಿಂಗಳು ಕಳೆದಿತ್ತು. ವಾಪಾಸು ಬರುವಾಗ ರಸ್ತಯ ಬದಿಯಲ್ಲಿ ಏನೋ ಬದಲಾವಣೆಯಾದಂತೆ ಕಂಡು ಬಂತು. ಗಮನಿಸಿದಾಗ ಲೋಕೋಪಯೋಗಿ ಇಲಾಖೆಯ ಕರಾಮತ್ತು ಬೆಳಕಿಗೆ ಬಂತು. ರಸ್ತೆಗಳಿಗೆ ದೇಶದ ನರನಾಡಿಗಳು ಎಂದು ಕರೆಯುತ್ತಾರೆ. ಒಂದು ದೇಶದ ಅಭಿವೃದ್ದಿಯನ್ನು ಮನಗಾಣಬೇಕಾದರೆ ಆ ದೇಶದ ರಸ್ತೆಗಳ ಗುಣಮಟ್ಟವನ್ನು ನೋಡಬೇಕು ಎನ್ನುವ ಜನಜನಿತ ಅಭಿಪ್ರಾಯವಿದೆ. ರಸ್ತೆಗಳಲ್ಲೂ ಸುಮಾರು ವಿಧಗಳಿವೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ ಪಂಚಾಯ್ತಿ ರಸ್ತೆ, ಗ್ರಾಮಪಂಚಾಯ್ತಿ ರಸ್ತೆ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ವಿಧಗಳಿವೆ, ಚತುಷ್ಪಥ ರಸ್ತೆ, ಏಕಮುಖ ರಸ್ತೆ, ಗ್ರಾಂಡ್ ಟ್ರಂಕ್ ರಸ್ತೆ ಹೀಗೆ ಪಟ್ಟಿ ಸಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಾಗ ಎಷ್ಟು ಲಕ್ಷ ಮರಗಳನ್ನು ಕಡಿಯಲಾಯಿತು, ಅವುಗಳ ಪಾರಿಸಾರಿಕ ಸೇವೆಗಳನ್ನು ಕಳೆದುಕೊಂಡಿದ್ದರಿಂದ ಆದ ನಷ್ಟವೆಷ್ಟು?, ಅಥವಾ ಕಡಿದ ಮರಗಳಿಂದ ಬಂದ ಉತ್ಪನ್ನವೆಷ್ಟು ಇವನ್ನೆಲ್ಲಾ ಲೆಕ್ಕ ಹಾಕುವುದು ಬೇಡ ಬಿಡಿ. ನೂರಾರು ವರ್ಷಗಳಿಂದ ಲಕ್ಷಾಂತರ ವನ್ಯಪ್ರಾಣಿಗಳಿಗೆ ಆಶ್ರಯವಾಗಿದ್ದ ಮರಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಹನನ ಮಾಡಿದ ನಂತರ ಆಶ್ರಿತ ಜೀವಿಗಳೆಲ್ಲಾ ಎಲ್ಲಿ ಹೋದವು ಎಂಬುದು ನಮಗೀಗ ಬೇಡ. ಮಾವು, ಹುಣಿಸೆ ಇತ್ಯಾದಿ ಮರಗಳಿಂದ ಬರುವ ಪ್ರತ್ಯಕ್ಷವಾದ ಆದಾಯದ ಮತ್ತು ಇದನ್ನೇ ನಂಬಿಕೊಂಡವರ ಪಾಡು ಏನಾಯಿತು ಎಂಬುದೂ ಕೂಡ ಇಲ್ಲಿ ಬೇಡ. ರಸ್ತೆಗಳಿಗೆ ಸಂಬಂಧಿಸಿದಂತೆ ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಮಾಡುವ ಮೇಲುಸ್ತುವಾರಿ ಹೇಗೆ, ರಿಪೇರಿ ಇತ್ಯಾದಿಗಳು, ಎಚ್ಚರಿಕೆ ಫಲಕಗಳ ಅನಾವರಣ ಈ ತರಹದ ಕೆಲವು ವಿಷಯಗಳ ಮೇಲೆ ಬೆಳಕು ಚೆಲ್ಲುವುದಕ್ಕೂ ಪೂರ್ವದಲ್ಲಿ ಒಮ್ಮೆ ಪ್ರಪಂಚ ಪರ್ಯಟನೆ ಮಾಡಿ ಬರೋಣ.
ಚಳಿಗಾಲ ಬಂತೆಂದರೆ ಸಾಕು ಹೆಚ್ಚಿನವರು ಬೆಳಗಾಗುತ್ತಿದ್ದಂತೆ ಆಕ್ಷೀ. . . ಆಕ್ಷೀ. . . ಎನ್ನಲು ಶುರುಮಾಡುತ್ತಾರೆ. ಅದೂ ಅವರು ಶುರು ಮಾಡುವುದಲ್ಲ, ಅವರ ತಡೆಯುವ ಪ್ರಯತ್ನವನ್ನೂ ಮೀರಿ ಆಗುವ ದೇಹದೊಳಗಿನ ಒಂದು ಪ್ರಕ್ರಿಯೆ. ಬೆಳಗಿನ ಇಬ್ಬನಿಯೋ ಅಥವಾ ಗಾಳಿಯಲ್ಲಿ ತೇಲಿ ಬರುವ ಹುಲ್ಲಿನ ಕುಸುಮದ ಚಿಕ್ಕ ಕಣವೋ ಕಾರಣವಾಗಿರುತ್ತದೆ. ಇದನ್ನು ನಿವಾರಿಸಲು ಹಳ್ಳಿಯಲ್ಲಿ ಅರಿಶಿಣ ಪುಡಿ ಹಾಕಿದ ಹಾಲೋ ಅಥವಾ ಇನ್ಯಾವುದೋ ನೂರೆಂಟು ಕಷಾಯಗಳ ಮೊರೆ ಹೋದರೆ, ಪೇಟೆ-ಪಟ್ಟಣಗಳಲ್ಲಿ ವಾಸಿಸುವವರು ಅಲರ್ಜಿಗೆ ಸಂಬಂಧಿಸಿದ ಗುಳಿಗೆಗಳ ಮೊರೆ ಹೋಗುತ್ತಾರೆ. ಇದರಿಂದ ತಾತ್ಕಾಲಿಕ ಪರಿಹಾರವಷ್ಟೆ ಸಿಗುತ್ತದೆ. ಇಂಗ್ಲೀಷ್‌ನಲ್ಲಿ ಇದಕ್ಕೆ ಕೋಲ್ಡ್ ಅಲರ್ಜಿ ಅಥವಾ ಡಸ್ಟ್ ಅಲರ್ಜಿ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಇಂಗ್ಲೀಷ್ ಸಂಸ್ಕ್ರತಿ ಹೇಗೆ ಜಗತ್ತಿನ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಾ ಸಾಗಿದೆಯೋ ಹಾಗೆಯೇ ಪಾಶ್ಚ್ಯಾತ್ಯ ಶೈಲಿಯ ಅಭಿವೃದ್ದಿಯ ಅನುಕರಣೆಯಿಂದ ಈ ಆಕ್ಷೀ. . . ಪ್ರಹಸನ ವಿಶ್ವವ್ಯಾಪಿಯಾಗಲಿದೆ. ಹೇಗೆಂದು ಕೊಂಚ ವಿವರವಾಗಿ ನೋಡೋಣ.
ಅಮೆರಿಕಾದ ಮೆಸಾಚುಟಾಸ್ ವಿಶ್ವವಿದ್ಯಾನಿಲಯದ ಒಂದು ಸಂಶೋಧನಾ ತಂಡ ಹವಾಮಾನ ವೈಪರೀತ್ಯದಿಂದ ಮಾನವನ ಮೇಲೆ ಆಗುವ ದುಷ್ಪರಿಣಾಮಗಳನ್ನು ಕಂಡು ಹಿಡಿಯಲು ಒಂದು ಪ್ರಯೋಗವನ್ನು ಮಾಡಿದರು. ಪ್ರಯೋಗಶಾಲೆಯಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚು ಮಾಡಿ, ಸ್ಥಳೀಯವಾಗಿ ಲಭ್ಯವಿರುವ ಫೆಹ್ಲಂ ಪ್ರಾಟೆನ್ಸ್ ಎಂಬ ಹೆಸರಿನ ಹುಲ್ಲನ್ನು ಅಂತಹ ವಾತಾವರಣದಲ್ಲಿ ಬೆಳೆಸಲಾಯಿತು. ಹುಲ್ಲು ಬೆಳದ ನಂತರದಲ್ಲಿ ಕೊಯ್ಲು ಮಾಡಿ, ಅದರಲ್ಲಿ ಉತ್ಪತ್ತಿಯಾದ ಕುಸುಮವನ್ನು ಮತ್ತು ಅದರಲ್ಲಿರುವ ಅಲರ್ಜಿಯುಕ್ತ ಅಂಶವನ್ನು ತುಲನೆ ಮಾಡಿ ನೋಡಿದಾಗ, ಸಹಜ ವಾತಾವರಣದಲ್ಲಿ ಇರುವ ಪ್ರಮಾಣಕ್ಕಿಂತ ೨೦೦ ಪಟ್ಟು ಹೆಚ್ಚು ಕುಸುಮ ಮತ್ತು ಅಲರ್ಜಿಯುಕ್ತ ಅಂಶಗಳು ಪತ್ತೆಯಾದವು ಎಂದು ಡಾ:ಆರ್ಲ್ಬಟೀನ್ ಎಂಬ ಮಹಿಳಾ ಸಂಶೋಧಕಿ ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್ ಜರ್ನಲ್‌ಗೆ ವರದಿ ಮಾಡಿದ್ದಾರೆ.
ನೆದರ್‌ಲ್ಯಾಂಡ್ ಎಂಬ ದೇಶ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಸೋಲಾರ್ ರಸ್ತೆಯನ್ನು ನಿರ್ಮಿಸಿ ದಾಖಲೆ ಮಾಡಿದೆ. ಪಳೆಯುಳಿಕೆ ಇಂಧನಗಳ ಅತಿಬಳಕೆಯಿಂದಾಗಿ ಹಸಿರುಮನೆ ಪರಿಣಾಮವಾಗಿ ಜಾಗತಿಕ ತಾಪಮಾನ ಏರುತ್ತಿದೆಯೆಂಬುದು ಇವತ್ತು ಜನಜನಿತವಾಗಿದೆ. ನಮ್ಮ ನಗರಗಳಲ್ಲೂ ಪಾದಾಚಾರಿಗಳಿಗೆ ತಿರುಗಾಡಲು ಅನುಕೂಲವಾಗಲೆಂದು ಫುಟ್‌ಪಾತ್ ನಿರ್ಮಿಸುತ್ತಾರೆ. ಫುಟ್‌ಪಾತ್‌ಗಳು ಪಾದಾಚಾರಿಗಳ ಉಪಯೋಗಕ್ಕೊಂದು ಬಿಟ್ಟು ಬೇರೆಲ್ಲಾ ಕಾರಣಕ್ಕೂ ಅನುಕೂಲವಾಗುತ್ತದೆ. ಅಲ್ಲೇ ರಸ್ತೆಯಂಗಡಿಗಳು ತೆರೆಯುತ್ತವೆ, ಐದೇ ನಿಮಿಷದಲ್ಲಿ ಪಿಜ್ಜಾ ತಲುಪಿಸುವ ಸ್ಕೂಟಿಗಳು ಜನರ ಮಧ್ಯದಲ್ಲೇ ದಾರಿ ಮಾಡಿಕೊಂಡು ವೇಗವಾಗಿ ಚಲಿಸುತ್ತವೆ. ಬೇಡುವವರಿಗೆ, ಕುಡಿದು ಬೀಳುವವರಿಗೂ ಫುಟ್‌ಪಾತೇ ಗತಿ. ಟ್ರಾಫಿಕ್ ಪೊಲೀಸನಿಗೆ ಫುಟ್‌ಪಾತ್‌ನಲ್ಲಿ ಎದ್ದುನಿಂತ ಗಿಡದ ನೆರಳೇ ಬೇಕು. ಹೀಗೆ ನಮ್ಮಲ್ಲಿ ಫುಟ್‌ಪಾತ್ ಎನ್ನುವುದು ವಿವಿಧೊದ್ದೇಶ ಸಹಕಾರಿಗಳ ಸಂಘ. ತಮ್ಮ ದೇಶದ ಬಗ್ಗೆ ಅಭಿಮಾನ ಮತ್ತು ಇತರ ದೇಶಗಳ ಬಗ್ಗೆ ಗೌರವ ಹೊಂದಿರುವ ಹಲವು ದೇಶಗಳು ಜಗತ್ತಿನಲ್ಲಿವೆ. ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು, ಪರಿಸರಕ್ಕೆ ಹೆಚ್ಚು ಹಾನಿಯಾಗದಂತೆ ಎಚ್ಚರವಹಿಸುತ್ತವೆ. ಇಂತಹ ಸ್ವಾಭಿಮಾನಿಯಾಗಿರುವ ದೇಶಗಳ ಸಾಲಿನಲ್ಲಿ ನೆದರ್‌ಲ್ಯಾಂಡ್ ಕೂಡ ಒಂದು. ಇಲ್ಲಿಯ ನಾಗರೀಕರಿಗೆ ಸೈಕಲ್ ಬಳಸಲು ಉತ್ತೇಜನ ನೀಡಲಾಗುತ್ತದೆ. ಸೈಕಲ್ ಬಳಕೆದಾರರಿಗಾಗಿಯೇ ಪ್ರತ್ಯೇಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೈಕಲ್ ಚಲಿಸುವ ರಸ್ತೆಯನ್ನೇ ಶಕ್ತಿಸಂಚಯ ಮಾಡುವ ರಸ್ತೆಯನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆಗೆ ನೆದರ್‌ಲ್ಯಾಂಡ್ ಪಾತ್ರವಾಗಿದೆ. ಪ್ರಾಥಮಿಕವಾಗಿ ಮತ್ತು ಪ್ರಾಯೋಗಿಕವಾಗಿ ಬರೀ ೭೦ ಮೀಟರ್ ಉದ್ದದ ಸೋಲಾರ್ ರಸ್ತೆಯನ್ನು ನಿರ್ಮಿಸಿ ನಿನ್ನೆಯಷ್ಟೆ (೧೨/೧೧/೨೦೧೪) ಸಾರ್ವಜನಿಕರ ಓಡಾಟಕ್ಕೆ ತೆರೆಯಲಾಗಿದೆ. ಅರೆಪಾರದರ್ಶಕ ಗಾಜಿನ ಅಡಿಯಲ್ಲಿ ಸ್ಪಟಿಕದಂತಿರುವ ಸೌರಕೋಶಗಳನ್ನು ಅಳವಡಿಸಲಾಗಿದ್ದು, ಮೂರು ಮನೆಗಳಿಗೆ ಬೇಕಾಗುವಷ್ಟು ವಿದ್ಯುಚ್ಚಕ್ತಿಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಈ ರಸ್ತೆಯಲ್ಲಿ ಸುಮಾರು ೨ ಸಾವಿರ ಜನ ಪ್ರತಿನಿತ್ಯ ಪಯಣಿಸುತ್ತಾರೆ, ರಸ್ತೆಗಳ ಇಕ್ಕೆಲಗಳಲ್ಲಿ ಸಾಕಷ್ಟು ಮರಗಳೂ ಇವೆ. ದಿನಂಪೂರ್ತಿ ರಸ್ತೆಯ ಮೇಲೆ ಸೂರ್ಯಕಿರಣಗಳು ನೇರವಾಗಿ ತಾಗುವುದಿಲ್ಲ. ಇಷ್ಟೆಲ್ಲಾ ಅಡಚಣೆಗಳ ನಡುವೆಯೂ ರಸ್ತೆಗಳು ವಿದ್ಯುಚ್ಚಕ್ತಿಯನ್ನು ಉತ್ಪಾದಿಸುತ್ತವೆ.
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಪ್ರತಿಕ್ಷಣವೂ ಹೊಸ-ಹೊಸ ಆಯಾಮಗಳನ್ನು ಪಡೆಯುತ್ತಿವೆ. ರಸ್ತೆ ನಿರ್ಮಾಣಕ್ಕೆ ಮುಖ್ಯವಾಗಿ ಜಲ್ಲಿ ಮತ್ತು ಟಾರ್ ಬೇಕಾಗುತ್ತದೆ. ಜಲ್ಲಿಯನ್ನು ಭೂಮಿಯನ್ನು ಅಗೆದು ಹಾಗೂ ಪೆಟ್ರೋಲಿಯಂನ ಉಪಉತ್ಪನ್ನವಾದ ಟಾರನ್ನು ಭೂಮಿಯನ್ನು ಬಗೆದು ತೆಗೆಯಲಾಗುತ್ತದೆ. ಇದರ ಬದಲಾಗಿ, ಸೌರಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ ನೀಡುವ ರಸ್ತೆಗಳನ್ನು ನಿರ್ಮಿಸಿದರೆ ಇದರಿಂದ ಹಲವಾರು ಅನುಕೂಲಗಳಿವೆ ಎಂದು ಪ್ರತಿಪಾಧಿಸುತ್ತಾರೆ, ಸೋಲಾರ್ ರಸ್ತೆಯ ಕಲ್ಪನೆಯ ರೂವಾರಿ ಅಮೆರಿಕಾದ ಸ್ಕಾಟ್ ಬ್ರೂಸ್. ಭೂಮಿ ಎಂಬ ಗ್ರಹದ ಹೆಗ್ಗಳಿಕೆಯೇ ಅಂತಹದು, ಭೂಮಿ ಸೂರ್ಯನಿಂದ ಪೊರೆಯಲ್ಪಟ್ಟಿದೆ. ಸೂರ್ಯನಿಂದ ಬರುವ ಅಕ್ಷಯ ಶಕ್ತಿಯನ್ನು ಬಳಸಿಕೊಂಡು ನಾವಿಂದು ಅಭಿವೃದ್ದಿಯ ಪಥದಲ್ಲಿ ಏರಬಹುದಾದ ಸಾಧ್ಯತೆ ಅನಂತವಾದದು. ಆದರೆ, ಪೆಟ್ರೋಲ್, ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಕೊಳೆಯಲ್ಲಿ ಹಂದಿಯಂತೆ ಹೊರಳಾಡುತ್ತಿರುವ ಈ ಜಗತ್ತಿಗೆ ಸುಲಭವಾಗಿ, ವಿಫುಲವಾಗಿ ಲಭ್ಯವಿರುವ ಸೂರ್ಯಶಕ್ತಿಯ ಬಗ್ಗೆ ಅದೇನೋ ಅವಗಣನೆ. ಅದಕ್ಕೂ ಹೆಚ್ಚಿನದಾಗಿ, ಪಳೆಯುಳಿಕೆ ಇಂಧನದ ಮೂಲಕ ಇಡೀ ಪ್ರಪಂಚವನ್ನು ನಿಯಂತ್ರಿಸುತ್ತಿರುವ ತೈಲ ಮಾಫಿಯಾ ದೊರೆಗಳಿಗೆ ಇದು ಬೇಡವಾಗಿದೆ. ತೈಲ ಪ್ರತಿಪಾಧಕರ (ಓದುಗರ ಅನುಕೂಲಕ್ಕಾಗಿ ಇವರನ್ನು ತೆಪ್ರಗಳೆಂದು ಹೇಳೋಣ) ಪ್ರಕಾರ ಸೌರಶಕ್ತಿಯನ್ನು ಉತ್ಪಾದಿಸಲು ಕಚ್ಚಾ ಸಾಮಾಗ್ರಿಗಳು ಬಲು ದುಬಾರಿ. ಹಾಗಾಗಿ ಸೌರಚ್ಚಕ್ತಿಯೂ ದುಬಾರಿಯಾಗುತ್ತದೆಯಾದ್ದರಿಂದ ಆರ್ಥಿಕ ದೃಷ್ಟಿಯಿಂದ ಸೌರಚ್ಚಕ್ತಿಯನ್ನು ಉತ್ಪಾದಿಸುವುದು ಸಾಧುವಲ್ಲ. ಈ ಭಾವನೆಯನ್ನು ಜನಸಾಮಾನ್ಯರಲ್ಲೂ ಬಿತ್ತುವಲ್ಲಿ ಈ ತೆಪ್ರಗಳು ಯಶಸ್ವಿಯಾಗಿದ್ದಾರೆ. ಒಂದು ಕ್ಷಣ ಇವರ ದೃಷ್ಟಿಕೋನ ಸರಿಯಿದೆ ಎಂದು ಭಾವಿಸೋಣ. ಹಾಗಾದರೆ ತೆಪ್ರಗಳ ಉತ್ಪನ್ನಗಳು ಅಗ್ಗವೇ? ಪಳೆಯುಳಿಕೆ ಇಂಧನಗಳಿಗೆ ದಿನೇ-ದಿನೇ ಬೇಡಿಕೆ ಹೆಚ್ಚುತ್ತಿದ್ದು, ಇವುಗಳ ಬೆಲೆ ಕೂಡಾ ಆಕಾಶಕ್ಕೇರಿದೆ. ಸೌರಚ್ಛಕ್ತಿಯನ್ನು ಸಂಚಯಿಸಲು ಗಾಜಿನ ಹಾಳೆಗಳು ಬೇಕು. ಗಾಜಿನ ಹಾಳೆಗಳಿಗೆ ಅತಿಮುಖ್ಯವಾದ ಕಚ್ಚಾವಸ್ತು ಮರಳು. ಮರಳನ್ನು ಕರಗಿಸಿ ಇದಕ್ಕೆ ಲೈಮ್‌ಸ್ಟೋನ್, ಡೋಲೋಮೈಟ್ ಇತ್ಯಾದಿಗಳನ್ನು ಸೇರಿಸಿ ಗಾಜನ್ನು ತಯಾರು ಮಾಡಲಾಗುತ್ತದೆ. ಈ ಭೂಮಿಯ ಮೇಲೆ ಮರಳುಗಾಡುಗಳೂ ಸಾಕಷ್ಟಿವೆ. ಹಾಗೆಯೇ ಮರಳುಗಾಡಿನಲ್ಲಿ ಸೂರ್ಯನ ಶಾಖವೂ ಹೆಚ್ಚು. ಮರುಭೂಮಿಯಲ್ಲೇ ಸೌರಚ್ಛಕ್ತಿಯನ್ನು ಸಂಚಯಿಸಲು ಬೇಕಾದ ಗಾಜನ್ನು ತಯಾರು ಮಾಡಬಹುದು. ಹೀಗೆ ಗಾಜನ್ನು ತಯಾರಿಸಲು ಬೇಕಾದ ಕಚ್ಚಾವಸ್ತುವಿಗೆ ಭೂಮಿಯನ್ನು ಅಗೆದು-ಬಗೆದು ಮಾಡಬೇಕಿಲ್ಲ. ಹಾಗೆಯೇ ಜಲ್ಲಿ ಮತ್ತು ಟಾರ್ ಹಾಕಿ ಮಾಡಿದ ಅತ್ಯುತ್ತಮ ರಸ್ತೆಗಳ ಆಯಸ್ಸು ಸರಾಸರಿ ೧೨ ವರುಷಗಳು ಎಂದು ತಜ್ಞರ ಅಭಿಪ್ರಾಯ. ಆದರೆ ಸೋಲಾರಸ್ತೆಯ ಆಯುಸ್ಸು ಕನಿಷ್ಟ ೪೦ ವರ್ಷಗಳು. ಇದಕ್ಕೆ ಸಂಬಂಧಿಸಿದಂತೆ ಗಾರ್ಡಿಯನ್ ಪತ್ರಿಕೆಯ ವರದಿಯನ್ನೊಮ್ಮೆ ನೋಡೋಣ. ಹಾಲಿ ಅಮೆರಿಕಾದ ಎಲ್ಲಾ ರಸ್ತೆಗಳನ್ನು ಸೋಲಾರಸ್ತೆಗಳನ್ನಾಗಿ ಪರಿವರ್ತಿಸಿದಲ್ಲಿ, ಈಗ ಉತ್ಪಾದಿಸುವ ವಿದ್ಯುಚ್ಛಕ್ತಿಗಿಂತ ಮೂರು ಪಟ್ಟು ಹೆಚ್ಚು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬಹುದು ಹಾಗೂ ಹಸಿರಮನೆ ಅನಿಲ ಪ್ರಮಾಣವನ್ನು ೭೫% ಭಾಗ ತಗ್ಗಿಸಬಹುದು.
ಇದೀಗ ಮತ್ತೆ ಮೊದಲನೇ ಪ್ಯಾರಾಕ್ಕೆ ಬರೋಣ. ಜನರಿಂದ-ಜನರಿಗಾಗಿ-ಜನರಿಗೋಸ್ಕರ ನಮ್ಮಲ್ಲಿ ಸರ್ಕಾರಗಳು ರಚನೆಯಾಗುತ್ತವೆ. ಪ್ರಜೆಗಳಿಂದ ಸಂಗ್ರಹಿಸಿದ ಹಣವನ್ನು ಅಭಿವೃದ್ಧಿಗಾಗಿ ಖರ್ಚು ಮಾಡಲಾಗುತ್ತದೆ. ಲೋಕೋಪಯೋಗಿ ಇಲಾಖೆಯು ಹೊಸ ರಸ್ತೆಗಳನ್ನು ನಿರ್ಮಿಸುವುದು, ಹಳೇ ರಸ್ತೆಗಳ ರಿಪೇರಿ ಇತ್ಯಾದಿ ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರಯಾಣಿಕರಿಗೆ ಅನುಕೂಲವಾಗಲೆಂದು ರಸ್ತೆ ಇಕ್ಕೆಲಗಳಲ್ಲಿ ಕಿಲೋಮೀಟರ್ ಕಲ್ಲುಗಳನ್ನು ನೆಡುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಇಷ್ಟು ದೂರ ಎಂಬುದನ್ನೂ ನಮೂದಿಸುತ್ತಾರೆ. ಕಿಲೋಮೀಟರ್ ನಡುವಿನ ಅಂತರದ ಲೆಕ್ಕವನ್ನು ಹಾಕಿರುತ್ತಾರೆ. ಸೊನ್ನೆಯಿಂದ ಶುರುವಾಗುವ ಕಲ್ಲಿನ ೨೦೦ ಮೀಟರ್ ದೂರದಲ್ಲಿ ಒಂದು ಚಿಕ್ಕ ಚೌಕಾಕಾರದ ಕಲ್ಲನ್ನು ಹುಗಿದು ಅದರ ಮೇಲೆ ೨ ಎಂದು ನಾಲ್ಕೂ ಬದಿಯೂ ಬರೆಯುತ್ತಾರೆ (ಇಲ್ಲಿ ೨ ಎಂದರೆ ಇನ್ನೂರು ಮೀಟರ್, ಹೀಗೆ ೪-೬-೮ ನಂತರ ಕಿ.ಮಿ). ಕ್ವಾರಿಯನ್ನು ಅಗೆದು, ಕಲ್ಲನ್ನು ಕತ್ತರಿಸಿ, ಮೀಟರ್, ಕಿಲೋಮೀಟರ್ ಗುರುತು ಹಾಕುತ್ತಾರೆ. ಸಾಮಾನ್ಯವಾಗಿ ಚಪ್ಪಡಿಕಲ್ಲುಗಳು ಮಳೆ-ಬಿಸಿಲಿಗೆ ಹಾಳಾಗುವುದಿಲ್ಲ. ಈಗ ಇಲಾಖೆ ಯೋಜನೆಯೊಂದನ್ನು ತಯಾರು ಮಾಡಿದೆ. ಹಳೇ ಕಲ್ಲುಗಳನ್ನು ತೆಗೆದು, ಕಾಂಕ್ರೀಟ್‌ನಿಂದ ನಿರ್ಮಿಸಲಾದ ಹೊಸ ಕಾಂಕ್ರೀಟ್ ಕಂಬಗಳನ್ನು ನೆಡುವ ಯೋಜನೆ. ಒಂದನೇ ಕಿಲೋಮೀಟರ್ ಕಂಬಕ್ಕೆ ಸುಮಾರು ೧೦೦೦ ರೂಪಾಯಿಗಳು ಖರ್ಚಾದರೆ, ೫ನೇ ಕಿಮಿ ಕಲ್ಲಿಗೆ ರೂ.೧೫೦೦ ಖರ್ಚಾಗುತ್ತದೆ (ಗಾತ್ರದಲ್ಲಿ ಪ್ರತಿ ೫ ಕಿ.ಮಿ. ಗುರುತುಕಂಬಗಳು ೧ ಕಿ.ಮಿ.. ಕಂಬಗಳಿಗಿಂತ ದೊಡ್ಡದು). ಒಂದು ಕಿಮಿಯಿಂದ ಇನ್ನೊಂದು ಕಿಮಿಯ ನಡುವೆ ೨೦೦ ಮೀಟರ್‌ಗಳಿಗೊಂದು ಹಾಕಲಾಗುವ ಕಾಂಕ್ರೀಟ್ ಕಂಬಗಳಿಗೆ ರೂ.೩೫೦. ಹೀಗೆ ೫ ಕಿ.ಮಿ.ಗಳಿಗೊಂದು ದೊಡ್ಡ ಕಂಬ. ಈಗ ಲೆಕ್ಕ ಹಾಕಿ ಸೊನ್ನೆಯಿಂದ ಶುರಮಾಡಿ ೧ ಕಿ.ಮಿ. ಬರುವಷ್ಟರಲ್ಲಿ ರೂ.೨೭೫೦ ಖರ್ಚು. ಹೀಗೆ ನಮ್ಮ ರಾಜ್ಯದಲ್ಲಿ ಎಷ್ಟು ಕಿ.ಮಿ. ರಸ್ತೆಗಳಿವೆ ಮತ್ತು ಅದಕ್ಕೆ ಒಟ್ಟು ಎಷ್ಟು ಖರ್ಚಾಗುತ್ತದೆ ಎಂಬುದನ್ನು ನೀವೇ ಲೆಕ್ಕ ಹಾಕಬಹುದು. ಇದಕ್ಕೆ ಬಳಿಯುವ ಬಣ್ಣದ ಲೆಕ್ಕ ಬೇರೆ.
ಕಲ್ಲಿನ ಚಪ್ಪಡಿಯಿಂದ ಹಾಕಿದ ಕಲ್ಲುಗಳು ಶಾಶ್ವತವಾಗಿ ಉಳಿಯುವಂತವಾಗಿದ್ದವು. ಆದರೆ, ಯೋಜನೆ ರೂಪಿಸುವವರಿಗೆ ಶಾಶ್ವತವಾದ ಕಾರ್ಯಗಳು ಬೇಕಿಲ್ಲ. ಕಾಂಕ್ರೀಟ್ ಕಂಬಗಳಿಗೆ ನಿಗದಿತ ಆಯುಸ್ಸು ಇರುತ್ತದೆ. ಸರಿಯಾಗಿ ಕ್ಯೂರಿಂಗ್ ಆಗಿಲ್ಲದಿದ್ದರೆ ಒಂದರೆಡು ವರ್ಷಗಳಲ್ಲಿ ಹಾಳಾಗುತ್ತದೆ. ಆಗ ಮತ್ತೆ ನಿರ್ವಹಣೆ ಎಂಬ ಸಬೂಬು ಹೇಳಿ ಇನ್ನೊಂದಿಷ್ಟು ಹಣ ಮಂಜೂರಿ ಮಾಡಿಸಿಕೊಂಡು. . . ಹೀಗೆ ಮುಂದೆ ಹೇಳಬೇಕಾಗಿಲ್ಲ. ಲೋಕೋಪಯೋಗಿ ಇಲಾಖೆಯವರ ಮತ್ತೊಂದು ತಕರಾರು ಇರುವುದು ಸಾಲುಮರಗಳ ಮೇಲೆ. ಮಳೆಗಾಲದಲ್ಲಿ ಮರದ ಹನಿ ಬಿದ್ದು ರಸ್ತೆ ಹಾಳಾಗುತ್ತದೆ, ಆದ್ದರಿಂದ ರಸ್ತೆಬದಿಯಲ್ಲಿ ಮರಗಳು ಇರಕೂಡದು. ಕಳಪೆ ಕಾಮಗಾರಿಯನ್ನು ಮುಚ್ಚಿಕೊಳ್ಳಲು ಪಾಪದ ಮರಗಳ ಮೇಲೆ ಆರೋಪ ಮಾಡುತ್ತಾರೆ. ಕೊಪ್ಪ ಮತ್ತು ಶೃಂಗೇರಿ ಪಟ್ಟಣಗಳಲ್ಲಿ ಕೆಲವು ರಸ್ತೆಗಳನ್ನು ಕಾಂಕ್ರೀಟ್‌ನಲ್ಲಿ ನಿರ್ಮಿಸಿ ಈಗ ಸುಮಾರು ೪೫ ವರ್ಷಗಳಾಯಿತು. ರಸ್ತೆಗಳು ಅವತ್ತು ಹೇಗಿವೆಯೋ ಇವತ್ತು ಹಾಗೆಯೇ ಇವೆ. ರಸ್ತೆಯ ಬದಿಯ ಮರಗಳಿಂದ ರಸ್ತೆಗೆ ಯಾವುದೇ ಹಾನಿಯಾಗಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ಹಾಗೆಯೇ ಕೇರಳದಲ್ಲಿ ನಮ್ಮಲ್ಲಿಗಿಂತ ಮಳೆ ಹೆಚ್ಚು. ಆದರೆ ಅಲ್ಲಿಯ ರಸ್ತೆಗಳು ನಮ್ಮಲ್ಲಿಯ ರಸ್ತೆಗಳಿಗಿಂತ ಉತ್ತಮವಾಗಿವೆ. ಕೊನೆ ಪಂಚ್: ಲೋಕೋಪಯೋಗಿ ಇಲಾಖೆಯವರು ಚಪ್ಪಡಿ ಕಲ್ಲುಗಳನ್ನು ಕಿತ್ತು ಏನು ಮಾಡಿದರು ಎಂಬುದು ಚಿದಂಬರ ರಹಸ್ಯ. ಅದನ್ನೆಲ್ಲಾ ಒಡೆದು ಮತ್ತೆಲ್ಲೋ ರಸ್ತೆ ಮಾಡಿದರೋ? ಅಥವಾ ಯಾರಾದರೂ ಅದರಿಂದ ಮನೆ ಕಟ್ಟಿಕೊಂಡರೋ? ಪುರಾತನ ಪಳೆಯುಳಿಕೆ ಎಂದು ಸಂಗ್ರಹ ಮಾಡಿದ್ದಾರೋ? ಹೀಗೆ ಊಹಿಸಿಕೊಳ್ಳುವುದು ನಿಮಗೆ ಬಿಟ್ಟದ್ದು.
******