ಅಮರ್ ದೀಪ್ ಅಂಕಣ

ರಸ್ತೆ ಅಪಘಾತವೂ ಪರಿಹಾರದ “ಮಾರ್ಗ” ವೂ: ಅಮರ್ ದೀಪ್ ಪಿ.ಎಸ್.

ಆಗತಾನೇ ರಾಜಣ್ಣ ಹಳೇ ಹಗರಿಬೊಮ್ಮನಹಳ್ಳಿ ದಾಟಿ ರಸ್ತೆಯ ಎಡಕ್ಕಿರುವ ಧಾಭಾದಲ್ಲಿ ಏಕಾಂತದ   ಮೇಜಿನ ಮೇಲೆ ಗ್ಲಾಸಿನಿಂದ ಬ್ಲೆಂಡರ್ ಸ್ಪ್ರೈಡ್  ಕೊನೆಯ ಸಿಪ್ಪು ಗುಟುಕರಿಸಿ ಕೆಳಗಿಟ್ಟು ಇನ್ನೇನು ಎದ್ದೇಳಬೇಕು, ಆಗ ರಾಜಣ್ಣನ ಫೋನು ರಿಂಗಣಿಸಿತು. ದೇವಾ  ಕರೆ ಮಾಡಿದ್ದ.  ಆಗ ಸಮಯ ರಾತ್ರಿ ಹನ್ನೊಂದುವರೆ ಆಗಿತ್ತು.  ದ್ವನಿಯಲ್ಲಿ ಗಾಬರಿ ಇತ್ತು. "ಅಣ್ಣಾ, ನನ್ನ ಡ್ರೈವಿಂಗ್ ಲೈಸೆನ್ಸ್ ಇದ್ದ ವಾಲೆಟ್ ಕಳೆದು ಹೋಗಿದೆ."  ಅಂದ. ನಿಶೆಯಲ್ಲಿ ರಾಜಣ್ಣ ಧಾಭಾದ ಹೊರಗೆ ಬರುತ್ತಾ "ಈಗೇನ್ ಹೊಸಾದು ಕೊಡುಸ್ಲೆನಲೇ"  ಎಂದು ಗದರಿ ಸುಮ್ಮನೇ ಗಾಡಿಯ ಪಕ್ಕೆ ತಿವಿದು ಮುಂದಕ್ಕೋಡಿಸಿದ. ಹತ್ತು ನಿಮಿಷವಾಗಿದ್ದಿಲ್ಲ ಮತ್ತೆ ರಾಜಣ್ಣನ ಫೋನು ಬಾಯಿ ಬಡಿದುಕೊಂಡಿತು.  ರಸ್ತೆಯ ಪಕ್ಕ ಗಾಡಿ ನಿಲ್ಲಿಸಿ  "ಅದೇನ್ ಹೇಳ್ ಸಾಯಲೇ ಜಲ್ದಿ …. " ರಾಜಣ್ಣ ಗದರಿಸಿದ. ದೇವಾ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿದ್ದ.   

ಅಷ್ಟಕ್ಕೂ ಆಗಿದ್ದೇನೆಂದರೆ, ಆ ದಿನ ರಾತ್ರಿ ಸುಮಾರು ಒಂಭತ್ತು ಗಂಟೆಗೆ ಹೊಸಪೇಟೆಯಿಂದ ಬಸ್ಸಲ್ಲಿ ಹೊರಟು ನಿಂತವನು, ಯಾಕೋ ಕೈಯಲ್ಲಿ ಬೈಕ್ ಇತ್ತಲ್ಲ? ಮತ್ತಿನ್ಯಾಕೆಂದು ಬೈಕಿನಲ್ಲೇ ಹಗರಿ ಬೊಮ್ಮನಹಳ್ಳಿಗೆ ಹೊರಟಿದ್ದಾನೆ. ಹೊಸಪೇಟೆ ದಾಟಿ ಕಣವಿ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಬಂದಾಗ ಟ್ರಾಫಿಕ್ ಜಾಮ್ ಆಗಿತ್ತು.  ಸುಮಾರು ವರ್ಷಗಳಿಂದಲೂ ಅಲ್ಲಿ ಟ್ರಾಫಿಕ್ ಜಾಮ್ ಇದ್ದದ್ದೇ.  ಈಗಿಲ್ಲ ಬಿಡಿ ಆ ತೊಂದರೆ, ರಾಷ್ಟ್ರೀಯ ಹೆದ್ದಾರಿ ೧೩ ಆದ್ದರಿಂದ ಅಲ್ಲೀಗ ಸುರಂಗ ಮಾರ್ಗದ ರಸ್ತೆ ಚೆನ್ನಾಗಿ ನಿರ್ಮಿಸಿದ್ದಾರೆ.  ಅಷ್ಟು ಟ್ರಾಫಿಕ್ ಇದ್ದ ರಸ್ತೆಯಿಂದ ಬೈಕಲ್ಲಿ ದೇವಾ ಹಾಗೂ ಹೀಗೂ ಅರ್ಧ ಗಂಟೆಯಲ್ಲಿ ಗುಂಡಾ ಅರಣ್ಯದ ದಾರಿಗೆ ಬಂದು, ಮುಂದೆ ಗಾಳೆಮ್ಮನ ಗುಡಿ ಹತ್ತಿರ ಸ್ವಲ್ಪ ಹೊತ್ತು ಗಾಡಿ ನಿಲ್ಲಿಸಿ ರಸ್ತೆ ಬದಿಯಲ್ಲಿನ ಹೋಟಲ್ ನಲ್ಲಿ ಸ್ಟ್ರಾಂಗ್ ಟೀ ಕುಡಿದು ಪುನಃ ಹೊರಟಿದ್ದಾನೆ. 

ದೇವಾ ಮೊದಲಿಂದಲೂ ರವಿಚಂದ್ರನ್ ಅಭಿಮಾನಿ, ಹಂಸಲೇಖರ ಹಾಡುಗಳು ಯಾವಾಗಲೂ ಬಡಿದು ಬಡಿದು "ಎದ್ದೇಳು ಕಂದಾ" ಎಂದು ಎಬ್ಬಿಸಿದಂತೆ ಥಟ್ಟನೆ ಅವನ ಬಾಯಲ್ಲಿ ನಲಿದಾಡುತ್ತಿದ್ದವು.  ಅವತ್ತು  ಬೇರೆ ಬೈಕಿನಲ್ಲಿ ಹೊರಟಿದ್ದಾನೆ. ಹೊಸಪೇಟೆಯಲ್ಲಿ ತನಗೆ ಎರಡು ತಿಂಗಳ ಹಿಂದೆ ಸಿಕ್ಕಿದ್ದ ನೌಕರಿಯ ಖುಷಿಗೆ ಅದೇ ತಾನೇ ಮಲ್ಲಿಗಿ ಹೋಟಲ್ ನಲ್ಲಿ ಇಬ್ಬರು ಗೆಳೆಯರಿಗೆ ಟ್ರೀಟ್ ಕೊಡಿಸಿ ಬರುತ್ತಿದ್ದ. ಯಾಕೋ ಸಖತ್ ಖುಷಿಯಲ್ಲಿದ್ದ. ಮಲ್ಲಿಗಿ ಹೋಟಲ್ ನಲ್ಲಿ ಕುಳಿತಾಗ  ನೋಡಿದ್ದ ವಿದೇಶಿ ಹುಡುಗಿ ನೆನಪಾದಳೋ ಏನೋ "ಏ ರಂಗು…… ಈ ಬೈಕು ಕಲಿಸಿಕೊಡು ನಂಗು….. "    ಹಾಡು ಗುನುಗುತ್ತಿದ್ದ.  ಮುಂದೆ ಡಣಾಪುರದಲ್ಲಿ ಬಿ ಎಂ ಎಂ ಕಂಪನಿ ಜಗಮಗಿಸುವ ಬೆಳಕಿನ ದಾರಿ ದಾಟಿ ಮರಿಯಮ್ಮನಹಳ್ಳಿಗೆ ಬಂದ.  ಅಲ್ಲಿಂದ ಇನ್ನೇನು ನಾಲ್ಕು ಕಿಲೋಮೀಟರ್ ದಾಟಿದ್ದನೋ ಇಲ್ಲವೋ ಹಾಡಿನ ಹುಕಿಯಲ್ಲಿ ಕನಿಷ್ಠ ಎಂಬತ್ತರ ವೇಗದಲ್ಲಿ ಬರುತ್ತಿದ್ದ ತನ್ನ ಬೈಕು ಎದುರಿಗೆ ಬಿದ್ದಿದ್ದ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದು ಬಿದ್ದ. ತನ್ನ ಬೈಕಿಗೆ ಹೆಚ್ಚೇನೂ ಡ್ಯಾಮೇಜ್ ಆಗಿದ್ದಿಲ್ಲ, ಮೊಣಕೈ ಮತ್ತು ಹಣೆಗೆ ತರಚು ಗಾಯವಷ್ಟೇ ಆಗಿತ್ತು. ಕತ್ತಲಲ್ಲಿ ತನ್ನ ಬೈಕು ಎತ್ತಿ ಪಕ್ಕಕ್ಕೆ ನಿಲ್ಲಿಸಿ ತನಗಾದ ಗಾಯದ ನೋವಿಗಿಂತ ಹೆಚ್ಚಾಗಿ ಆದ ಗಾಬರಿಯಿಂದ ತನ್ನ ಮೊಬೈಲ್ ಟಾರ್ಚ್ ನಿಂದ ಬಿದ್ದ ಇನ್ನೊಂದು ಬೈಕಿನ ಸುತ್ತ ಕಣ್ಣಾಡಿಸಿದ. ಅಷ್ಟೇ. ಅವನು ಡಿಕ್ಕಿ ಹೊಡೆಯುವ ಕೆಲವೇ ನಿಮಿಷಗಳ ಮುಂಚೆ ಯಾವುದೋ ಭಾರಿ ವಾಹನಕ್ಕೆ ಸಿಕ್ಕು ಅಪಘಾತವಾಗಿ ಬೈಕು ಜಕ್ಖಂ ಆಗಿದೆ. ರಸ್ತೆ ಪಕ್ಕ ಐದರಿಂದ ಆರು ಅಡಿ ಅಂತರದಲ್ಲಿ  ತಲೆಯಿಂದ ರಕ್ತ ಸೋರಿ ಸತ್ತ ಒಬ್ಬ ವ್ಯಕ್ತಿ ಹೆಣ. ಮುಖ ಗುರುತು ಸಿಗುತ್ತಿಲ್ಲ. 

ಸಮಯ ನೋಡಿದ, ಹತ್ತು ಗಂಟೆ ಆಗುತ್ತಲಿತ್ತು. ರಸ್ತೆ ಬದಿ ಯಾಕೋ ಅವತ್ತು ಜಾಸ್ತಿ ವಾಹನಗಳು ಓಡಾಟ ಆ ಹೊತ್ತಿಗೆ ಇದ್ದಿಲ್ಲ.  ಆ ದಿನ ಬೆಳಿಗ್ಗೆ ಅಮಾವಾಸ್ಯೆ ಇದ್ದಿದ್ದರಿಂದ ದೇವಸ್ಥಾನಕ್ಕೆ ಹೋಗಿ ಬಂದದ್ದು ನೆನಪಾಯಿತು.  ಏನು ಮಾಡಬೇಕೆನ್ನುವುದೇ ತೋಚದ ದೇವಾ ತನ್ನ ಬೈಕನ್ನು ಸ್ಟಾರ್ಟ್ ಮಾಡಿಕೊಂಡು ಎದ್ದೆನೋ ಬಿದ್ದೆನೋ ಎಂದು ಓಡಿಸಿದ್ದಾನೆ. ಉಪನಾಯಕನಹಳ್ಳಿ, ಪಿಂಜಾರ್ ಹೆಗ್ಡಾಳ್  ದಾಟಿ ಹೊಸ ಆನಂದದೇವನಹಳ್ಳಿಗೆ ಬರುತ್ತಲೇ ಯಾಕೋ ಅವನಿಗೆ ಅನುಮಾನ ಬಂದಿದೆ.  "ಛೇ, ಎಂಥ ತಪ್ಪು ಕೆಲ್ಸ ಮಾಡ್ದೆ… ಸುಮ್ಮನೆ ಹತ್ತಿರದಲ್ಲೇ ಇದ್ದ ಮರಿಯಮ್ಮನಹಳ್ಳಿ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದರೂ ಆಗುತ್ತಿತ್ತು.  ೧೦೮ ಕ್ಕೆ ಕರೆ ಮಾಡಿದ್ದರೂ ಚೆನ್ನಾಗಿತ್ತು.  ಯಾವುದೋ ಗಾಡಿಯಿಂದ ಅಪಘಾತವಾಗಿ ಸತ್ತು ಬಿದ್ದವನ ಹೆಣ ಕಂಡು ತಾನ್ಯಾಕೆ ಈ ಪರಿ ಗಾಬರಿ ಬಿದ್ದೆ?  ನಾನು ಬಿದ್ದ ಬೈಕಿಗೆ ಅಲ್ಲವಾ ಡಿಕ್ಕಿ ಹೊಡೆದದ್ದು?  ಏನೋ ಮಿಸ್ ಆಗಿದೆ" ಅಂದುಕೊಂಡ. ಪ್ಯಾಂಟಿನ ಹಿಂಬದಿ ಜೇಬಿನಲ್ಲಿ ಕೈಯಾಡಿಸಿದ… ಉಹೂ … ಅಲ್ಲಿ ವಾಲೆಟ್ ಇಲ್ಲ… ಬರೀ ವಾಲೆಟ್ ಆಗಿದ್ದರೆ ಲೀವ್ ಇಟ್, ತೊಂದರೆ ಇದ್ದಿಲ್ಲ. ಆದರೆ ಅದರಲ್ಲಿ ಅವನ ಡ್ರೈವಿಂಗ್ ಲೈಸನ್ಸ್ ಇತ್ತು. ಬಿದ್ದ ಗಾಡಿಗೆ ಡಿಕ್ಕಿ ಹೊಡೆದು ಬಿದ್ದಾಗಲೇ ತಾನದನ್ನು ಕಳೆದುಕೊಂಡಿರುವ ಅವನ ಅನುಮಾನ ನಿಜವಾಗಿತ್ತು. 

ದುರಾದೃಷ್ಟವೆಂದರೆ, ದೇವಾ ತಂದಿದ್ದ ಬೈಕು ಸ್ವಂತದ್ದಲ್ಲ ಮತ್ತದಕ್ಕೆ ಇನ್ಸೂರೆನ್ಸೇ ಇಲ್ಲದ ಬಗ್ಗೆ ಬೈಕು ಮಾಲೀಕ ದೇವಾನ ಗೆಳೆಯ ಚಂದು ಹೇಳಿದಾಗಲೇ ಬೆಚ್ಚಿ ಬಿದ್ದಿದ್ದ.  "ಈಗಿನ್ನು ಹೊಸದಾಗಿ ನೌಕರಿಗೆ ಸೇರಿದ್ದೇನೆ, ಏನಾದರು ಆಗಿ ಪೋಲಿಸು, ಕೇಸು, ಕೋರ್ಟು, ಜೈಲು, ಬೇಲು ಥೂ …. ಏನ್ ಕರ್ಮ ನಪ್ಪಾ ನಂದು" ದೇವಾ ಹಣೆ ಚಚ್ಚಿಕೊಂಡ.

ದೇವಾನಿಗೆ ನೆನಪಾಗಿದ್ದು;  ರಾಜಣ್ಣ. ಆತನೊಬ್ಬ ವಕೀಲ. ಆಗಲೇ ದೇವಾ ಕರೆ ಮಾಡಿದ್ದು. 

ಎಲ್ಲಾ ಕೇಳಿಸಿಕೊಂಡ ರಾಜಣ್ಣ  ಮರಿಯಮ್ಮನಹಳ್ಳಿ ಪೋಲಿಸು ಠಾಣೆಗೆ ಫೋನಾಯಿಸುವಷ್ಟರಲ್ಲಿ ಪಕ್ಕಾ ಮಾಹಿತಿ ಸಿಕ್ಕಿದೆ. ಅಂದುಕೊಂಡಂತೆ ಡ್ರೈವಿಂಗ್ ಲೈಸೆನ್ಸ್ ಪೋಲೀಸರ ಕೈಗೆ ಸಿಕ್ಕಿದೆ. ಪಂಚನಾಮ, ಮಹಜರ್ ಮಾಡಿದ ನಂತರ ಶವವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.  ರಾತ್ರಿ ಹನ್ನೆರಡೂವರೆ ಗಂಟೆಗೆ ಪೋಲಿಸು ಸ್ಟೇಷನ್ ನಲ್ಲಿ ಬಂದಾಗ ರಾಜಣ್ಣನಿಗೆ ಎದುರಾಗಿದ್ದು ಪೋಲಿಸ್ ಬಾತ್ಮಿದಾರ ಚಕ್ರಸಾಲಿ. ಆ ದಿನ ರಸ್ತೆ ಅಪಘಾತದಲ್ಲಿ ಮೃತನಾದ ವ್ಯಕ್ತಿ ಆತನ ಹತ್ತಿರದ ಮುಖ ಪರಿಚಯದವನಾಗಿದ್ದ. ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರಿಂದ ರಾಜಣ್ಣ, ಚಕ್ರಸಾಲಿ ಪೊಲೀಸ ರೊಂದಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೊರಟಿದ್ದಾರೆ. 

"ಕೇಸು ಬಗೆಹರಿಯುತ್ತದಾ? ಹಂಗಲ್ಲದಿದ್ದರೆ ಹಿಂಗೆ, ನೋಡಾಣ."  ರಾಜಣ್ಣ ತನ್ನಲ್ಲೇ ಗೊಣಗಿದ. 

ಹಿಟ್ ಅಂಡ್ ರನ್ ಕೇಸು ರಿಜಿಸ್ಟರ್ ಮಾಡಿದ್ದಾರೆ.  ಆದರೆ ಎದುರುವಾಹನದ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದರು. "ಸತ್ತವನು ಪಾಪ ಅಮಾಯಕ, ಬಡವ, ಚಿಕ್ಕ ಮಕ್ಕಳಿರುವ ಮಿಲ್ ಒಂದರಲ್ಲಿ ಗುಮಾಸ್ತ" ಚಕ್ರಸಾಲಿ ಒತ್ತಿ ಒತ್ತಿ ಪೊಲೀಸರೆದುರು ಹೇಳುತ್ತಿದ್ದ. 

ಅಷ್ಟರಲ್ಲೇ ಹೊಸಪೇಟೆ  ಪೋಲಿಸ್ ಠಾಣೆಯಿಂದ  ಮರಿಯಮ್ಮನಹಳ್ಳಿ ಪೋಲಿಸ್ ಸ್ಟೇಷನ್ ನ ಅಧಿಕಾರಿಗೆ ಮೇಸೇಜ್ ಬಂತು. ಕಣವಿ ವೀರಭದ್ರೇಶ್ವರ ದೇವಸ್ಥಾನದ ನಂತರ ಇಳಿಜಾರಿನಲ್ಲಿ ಒಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನು ಸತ್ತು ಹೋಗಿದ್ದ. ಲಾರಿಯ ಡ್ರೈವರ್ ನನ್ನು ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸರ ಮಾಹಿತಿ ಮತ್ತು ಸಹಕಾರದಿಂದ ವಶಕ್ಕೆ ತೆಗೆದುಕೊಂಡಿದ್ದರು. ಮತ್ತು ಸತ್ತ ಬೈಕ್ ಸವಾರನ ಶವವನ್ನೂ ಹೊಸಪೇಟೆ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತಂದಿದ್ದರು. ಕರ್ತವ್ಯದ ಮೇಲಿದ್ದ ಹೊಸಪೇಟೆಯ ಪೋಲಿಸ್ ಅಧಿಕಾರಿ ಡ್ರೈವರ್ ನನ್ನು ಸಣ್ಣಗೆ "ಅವರ ಭಾಷೆಯಲ್ಲಿ" ಗದರಿದಾಗ ಅವನು ಅದಕ್ಕೂ ಮುಂಚೆ ಮರಿಯಮ್ಮನ ಹಳ್ಳಿಯ ಹತ್ತಿರ ಮೊದಲೇ ಒಬ್ಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಅವನು ಸ್ಥಳದಲ್ಲೇ ಸತ್ತ ಪರಿಣಾಮವಾಗಿ ಆತುರಾತುರವಾಗಿ ಬಂದು ಮತ್ತೊಂದು ಅಪಘಾತ ಮಾಡಿಕೊಂಡಿದ್ದನ್ನು ಬಾಯಿ ಬಿಟ್ಟಿದ್ದಾನೆ. ನಂತರ ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಬೈಕ್ ಸವಾರ ಶವವನ್ನೂ  ಅಪಘಾತ ಜಾಗವನ್ನು ಗುರುತಿಸಿದ್ದಾನೆ. 

ಬಾತ್ಮೀದಾರ ಚಕ್ರಸಾಲಿಗೆ ರಾಜಣ್ಣ ವಕೀಲನು ಗೊತ್ತು, ದೇವಾನ ಪರಿಚಯವೂ ಇತ್ತು. ರಾಜಣ್ಣ ದೇವಾನ ಬಗ್ಗೆ ಬಾಯಿ ಬಿಡುವಂತಿದ್ದಿಲ್ಲ.  ಅವನೂ ತಪ್ಪಿತಸ್ಥನಲ್ಲ. ಆದರೆ ಅಪಘಾತ ಸ್ಥಳದಲ್ಲಿ ಸಿಕ್ಕ ದೇವಾನ ಡ್ರೈವಿಂಗ್ ಲೈಸೆನ್ಸ್  ಇನ್ಯಾವುದೋ ಇಕ್ಕಟ್ಟಿಗೆ, ಅನುಮಾನಕ್ಕೆ ದಾರಿಯಾದರೆ? ಅದೇ ಆತಂಕವಾಗಿತ್ತು.  ಪುಣ್ಯಕ್ಕೆ ಅಪಘಾತವೆಸಗಿದ ಮೂಲ ವ್ಯಕ್ತಿ ಸುಳಿವು ಸಿಕ್ಕಿದ್ದರ ಪರಿಣಾಮವಾಗಿ ರಾಜಣ್ಣ ಕೂಲಾಗಿದ್ದ.  ದೇವಾನನ್ನು ಬೆಳಿಗ್ಗೆ  ಮರಿಯಮ್ಮನಹಳ್ಳಿ ಪೋಲಿಸ್ ಸ್ಟೇಷನ್ ಗೆ ಕರೆಸಿ ನಿರುಮ್ಮಳವಾಗಿ  ಬಂದು ನಡೆದ ಸಂಗತಿ ತಿಳಿಸಿ ಒಂದು ಲಿಖಿತ ಹೇಳಿಕೆಗೆ ಸಹಿ ಮಾಡಿಸಿ ಅವನ ಡ್ರೈವಿಂಗ್ ಲೈಸೆನ್ಸ್ ಪಡೆದು ಹೊರ ಬಂದು "ಲೇ ದೇವಾ, ನೌಕ್ರಿ ಮಾಡೋ ವಯಸ್ಸಿನ್ಯಾಗೆ ಅದಿನ್ನೆಂಥ ಹುಡುಗ ಬುದ್ಧೀಲೇ ನಿಂದು, ನಿನ್ ಜನ್ಮಕ್ಕಿಷ್ಟು ಬೆಂಕಿ ಹಚ್ಚಾ" ಅಂದವನ ಮಾತಿನಲ್ಲಿ ಕಾಳಜಿ ಬೆರೆತ ಎಚ್ಚರಿಕೆ ಇತ್ತು. 

ಸತ್ತವನ ಕುಟುಂಬಕ್ಕೂ ಸಾಂತ್ವಾನ, ಪರಿಹಾರ ಸಿಕ್ಕಬೇಕು.  ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡವನ ದಡ್ಡತನಕ್ಕೂ ಉಗೀಬೇಕು. ಯಾವುದೇ ತೊಂದರೆ ಆಗದಂತೆ  ಪೊಲೀಸರಿಗೆ ಅವರು ಕರ್ತವ್ಯ ನಿರ್ವಹಿಸಲು ಸಹಕರಿಸಬೇಕು, ಮತ್ತು ಬಾತ್ಮೀದಾರ ಚಕ್ರಸಾಲಿಗೂ ಸಮಾಧಾನವಾಗಬೇಕು. ರಾಜಣ್ಣ ಠಾಣೆಯಲ್ಲಿ ಸಂಭಂಧಪಟ್ಟ  ಕಾಗದ ಪತ್ರಗಳ ಪ್ರತಿಗಳನ್ನು ಪಡೆದು ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದ್ದಿದ್ದಾನೆ. ತಾನು ತಂದಿದ್ದ ಇಪ್ಪತ್ತು ಸಾವಿರ ರುಪಾಯಿಗಳನ್ನು ಸತ್ತ ವ್ಯಕ್ತಿಯ ಪತ್ನಿಯ ಕೈಗೆ ಬಾತ್ಮೀದಾರ ಚಕ್ರಸಾಲಿಯಿಂದ ತಲುಪಿಸಿ, "ಒಂದು ವೇಳೆ ವಾಹನ ಅಪಘಾತ ಪರಿಹಾರ ತಾವು ಕೋರುವುದಾದರೆ ಅದರ ಕೇಸನ್ನು ನಾನು ನಡೆಸುತ್ತೇನೆ, ವಿಚಾರ ಮಾಡಿ ಹೇಳಿ" ಎಂದು  ಆಸ್ಪತ್ರೆಯ ಹೊರಗೆ ಬಂದ. 

ಅಷ್ಟೊತ್ತಿಗೆ ಬೆಳಗಿನ ನಾಲ್ಕರ ಜಾವ.  ಊರ ಮಧ್ಯೆ ಇರುವ ಜೋಡಿ ತೇರಿನ ಪಕ್ಕದಲ್ಲಿ ಹಾದು ಬೈಕಿನಲ್ಲಿ ಹಗರಿಬೊಮ್ಮನಹಳ್ಳಿ ದಾರಿಗೆ ಹೋಗುತ್ತಲೇ ರಸ್ತೆ ಬದಿಯ ಬ್ರಾಹ್ಮಣರ ಮನೆಯಿಂದ "ಸುಬ್ಬಲಕ್ಷ್ಮಿ" ಯವರ ಸುಪ್ರಭಾತ…                                                  

******

ಅದಾಗಿ ಒಂದೆರಡು ವಾರವಾಗಿತ್ತೋ ಏನೋ.  ಅದೇ ಹೊಸಪೇಟೆಯ ಮಲ್ಲಿಗಿ ಹೋಟಲ್ ಗಾರ್ಡನ್ ನ ಕತ್ತಲ ಮಬ್ಬಿನಲ್ಲಿ ತನ್ನ ರೆಗ್ಯುಲರ್ ಡ್ರಿಂಕ್ ಬ್ಲೆಂಡರ್ ಸ್ಪ್ರೈಡ್ ಎರಡು ಪೆಗ್ ಆರ್ಡರ್ ಮಾಡಿದ. ಹಿಂದಿನ ಟೇಬಲ್ ನಿಂದ ಯಾವುದೋ ಪರಿಚಿತ ಧ್ವನಿ ಕೇಳಿತು. ಇನ್ನೇನು ರಾಜಣ್ಣ ತಿರುಗಿ ಮಾತಾಡಿಸಬೇಕು. 

"ನೋಡ್ಲಾ, ಆ ವಕೀಲ ಏನ್ ಪುಗಸಟ್ಟೆ ಮಾಡಲ್ಲಲೇ ಕೇಸ್ನಾ … ಆಮೇಲ್ ಜಡಿಯದಿಲ್ಲೇನ್ ರೊಕ್ಕ?"

"ಮೊನ್ನೆ ಏನೋ, ಕೇಸ್ ಕೊಡ್ತೀರಂತ ಇಪ್ಪತ್ ಸಾವ್ರ ಕೈಗಿಟ್ಟು ಹೋಗ್ಯಾನ, ನೀವ್ ವಕಾಲತ್ ಗೆ ಸೈನು ಹಾಕೀದ್ರಲ್ಲ ಆಯಪ್ಪ ಮಾಡಾದು?" 

"ನೀವ್ ಯಾಕ್  ರಾಜಣ್ಣ ವಕೀಲಂಗೆ ಕೊಡ್ತೀರ್  ಕೇಸು? ನಾನಿಲ್ಲೇನ್ ಇನ್ನೊಬ್ಬ ಛಲೋ ವಕೀಲನ್ನ ಹುಡುಕ್ಕೊಡ್ತೀನ್"

"ನಾನ್ ಫೋನ್ ಮಾಡಿದ್ರೆ ಹೆಂಗ್ ಬೇಕಂಗ್ ಮಾತಾಡ್ತಾನ ಕುಡುದ್ ನಿಶ್ಯಾದಾಗ.  ನಂಗೆ ಹೇಳಿದ್ದ ರಾಜಣ್ಣ,  ನಿಮ್ ಕೇಸ್ ಬಗ್ಗೆ ಫಾಲೋ ಮಾಡೋಕೆ. ಎತ್ತಾಕ್  ಬಿಟ್ರಾಯ್ತು  ಇಪ್ಪತ್ ಸಾವ್ರ ಏನಂತಿ?"

ದೇವಾ ಚಿತ್ತಾಗಿ ತನ್ನ ಎದುರಿಗೆ ಕುಳಿತ ಚಕ್ರಸಾಲಿಗೆ ಹೇಳುತ್ತಿದ್ದ. 

ಮುಂದೆ ಕೇವಲ ಎರಡೇ ತಿಂಗಳಲ್ಲಿ ಚಕ್ರಸಾಲಿ ತನ್ನದೇ ಬೈಕನ್ನು ಅದೇ ಮರಿಯಮ್ಮನಹಳ್ಳಿ ಪೋಲಿಸು ಸ್ಟೇಷನ್ನಿಂದ ಬಿಡಿಸಿಕೊಳ್ಳಲು ಇದೇ ರಾಜಣ್ಣನ ವಕಾಲತ್ತು ಹಾಕಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆನ್ನುವ ಸಣ್ಣ ಕಲ್ಪನೆಯೂ ಇರದೇ ದೇವಾನ ಮಾತಿಗೆ ತಲೆದೂಗುತ್ತಿದ್ದ. 

ರಾಜಣ್ಣ ಆ ಜಾಗ ಬದಲಿಸಿ ಏಕಾಂತ ಸ್ಥಳದಲ್ಲಿ ಕುಳಿತು ಇನ್ನೆರಡು ಪೆಗ್ ಆರ್ಡರ್ ಮಾಡಿದ.

( ಈ ಕಥೆಯಲ್ಲಿ ಬಂದ ಮದ್ಯಪಾನದ ಬಳಕೆ ಕಥೆ ಪಾತ್ರಧಾರಿಗಳ ವ್ಯಸನವಷ್ಟೇ, ಆದರೆ ಮದ್ಯಪಾನ ಪ್ರಚೋದಿಸುವ, ಮದ್ಯಪಾನ ಬಳಕೆಯನ್ನು ಸಮರ್ಥಿಸುವಂಥದ್ದು ಈ ಬರಹದ ಉದ್ದೇಶವಲ್ಲ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ರಸ್ತೆ ಅಪಘಾತವೂ ಪರಿಹಾರದ “ಮಾರ್ಗ” ವೂ: ಅಮರ್ ದೀಪ್ ಪಿ.ಎಸ್.

  1. ವಾಸ್ತವಿಕತೆಗೆ ಹತ್ತಿರವಾಗಿ ಬಂದಿದೆ ಲೇಖನ ಅಮರ್

  2. Deva adrushtavashaath anavashyaka case ninda paaraada. Kaalachakra, konege Chakrasaaliyannoo sutthikollutthalva, I feel that should be a lesson to backbiters! This is what happens in real life over and over again. 

  3. Devana paristhithi yarigu barabaradu.  Kelavondu baari navu yeste husharagidru bereyavara thappinna phalavagi thondare anubhavisuva prasangagalu baruthave.  Nimma barahada modala arda artha aithu… adre eradane bagadalli baruva prasangagalu hasyada uddeshadinda barediddaru adara anivaryathe iralilla embudu nanna anisike.

Leave a Reply

Your email address will not be published. Required fields are marked *