ಬಹುಶಃ ಮನುಷ್ಯನಿಗೆ ಇನ್ನೊಂದೆರಡು ಮೆದುಳುಗಳೇನಾದರು ಇದ್ದಿದ್ದರೆ ಇಡೀ ಪೃಥ್ವಿ ಎರಡಂತಸ್ತಿನ ಜಗತ್ತಾಗುತ್ತಿತ್ತು. ಯಾವ ಒಂದು 'ಅರಿವು' ಇರದೇ ಇರುವಾಗಿನ ಮನುಷ್ಯ ಪ್ರಾಣಿಯನ್ನು ಊಹಿಸಿಕೊಂಡಾಗ ಕಾಲ, ಸ್ಥಳ ಎರಡೂ ನಿಜಕ್ಕೂ ಶುಭ್ರವಾಗಿದ್ದವೆನೋ? ಎಂದೆನಿಸುತ್ತದೆ. ಆಗ ಮನುಷ್ಯ ಕೂಡ ಇತರೆ ಪ್ರಾಣಿಯಂತೆ ತಾನೂ ಒಂದು ಪ್ರಾಣಿ. ಎಲ್ಲರೊಳೊಂದಾಗಿ ಬದುಕಿದ ಆತ ಎಲ್ಲರಂತೆಯೇ ಬೆಳೆಯುತ್ತಿದ್ದ. ಎಲ್ಲದರ ಮಧ್ಯ ಎಲ್ಲವೂ ಆಗಿದ್ದ ಈ ಪ್ರಾಣಿಯ ಮೆದುಳು ಗಡ್ಡೆಯಲ್ಲಿ ಅದೆಂತಹ ನರಗಳು ಕವಲೊಡೆದು ಬೆಳೆದವೋ! ಆತನ ಇರುವಿಕೆಗೂ ಇತರೇ ಪ್ರಾಣಿಗಳ ಇರುವಿಕೆಯ ಮಧ್ಯ ಒಂದು ಸಣ್ಣ ಗೆರೆ ಹುಟ್ಟಿಕೊಂಡಿತು. ಅಲ್ಲಿಗೆ ಆತನ ಜೀವನ ಪದ್ಧತಿಯೇ ಬದಲಾಯಿತು. ಈ ಸಣ್ಣ ಗೆರೆಯೇ ದಪ್ಪಗಾಗುತ್ತ ಮನುಷ್ಯ ಮನುಷ್ಯನ ನಡುವೆಯೇ ಕಂದರವನ್ನು ಸೃಷ್ಟಿಸಿ ಇಡೀ ವ್ಯವಸ್ಥೆಯನ್ನೇ ಛಿದ್ರಗೊಳಿಸಿದ್ದು ಮಾತ್ರ ವಿಪರ್ಯಾಸ.
ಈ ಮನುಷ್ಯ ಹೀಗೆ ಬೆಳೆಯುತ್ತ ಬೆಳೆಯುತ್ತ ತನ್ನ ವೈಚಾರಿಕತೆಯಲ್ಲಿ, ಸಂಪ್ರದಾಯಗಳಲ್ಲಿ ತನ್ನದೇ ಆದಂತಹ ಮಾರ್ಪಾಟುಗಳನ್ನು ಮಾಡಿಕೊಂಡ. ಇದೇ ಮನುಷ್ಯ ಪ್ರಾಣಿಯ ಕೆಲವು ತಳಿಗಳಲ್ಲಿನ ಮೆದುಳು ಚುರುಕುಗೊಂಡು, ಎಲ್ಲವನ್ನೂ ಹಿಂದೆ ತಳ್ಳಿ ಮುಂದೆ ಬಂದು ಅಮಾನವೀಯತೆಯನ್ನು ವ್ಯವಸ್ಥಿತವಾಗಿಯೇ ಆಚರಣೆಗೆ ತರುವಲ್ಲಿ ಯಶಸ್ವಿಯಾಗಿದ್ದರೆ ಇನ್ನೂ ಕೆಲವೊಂದಿಷ್ಟು ಮನುಷ್ಯ ಪ್ರಾಣಿಗಳು ಚುರುಕುಗೊಳ್ಳದೇ ಎಲ್ಲವನ್ನೂ ಸ್ವೀಕರಿಸುತ್ತಾ, ಇದ್ದಲ್ಲಿಯೇ ಉಳಿದು ತೆವಳುತ್ತಾ, ಎಲ್ಲ ಹೊಲಸ್ಸನ್ನು ತಮ್ಮ ಮೇಲೆಯೇ ಎಳೆದುಕೊಂಡು ಅದೇ ಅಮಾಯಕ ನಗೆಯೊಂದಿಗೆ ಅಲ್ಲಿಯೇ ಉಳಿದುಬಿಟ್ಟವು.
ಅವನೂ ಮನುಷ್ಯನೇ ! ಇವನೂ ಮನುಷ್ಯನೇ !
ಆದರೆ ವ್ಯತ್ಯಾಸ ಇಷ್ಟೆ, ಈ ಇಬ್ಬರಿಗೂ ತಾವು 'ಮನುಷ್ಯರು' ಎಂಬ ಅರಿವು ಅವರಾಳದಿಂದ ತೋರುಗೊಳ್ಳದೇ ಸುಪ್ತವಾಗಿದೆ.
ಈಗ ವಿಜೃಂಭಿಸುತ್ತಿರುವ ಕಾಲ ಮತ್ತು ಸ್ಥಳ, ಎಲ್ಲರಲ್ಲೂ ಯಾವ ಯಾವ ರೀತಿ ಬದಲಾವಣೆಗಳನ್ನು ತರುತ್ತಿವೆ ಎಂಬುದನ್ನು ಅವಕ್ಕೂ ಕಲ್ಪಿಸಿಕೊಳ್ಳಲು ಆಗುತ್ತಿಲ್ಲ, ಬದಲಾವಣೆಗೊಳಗಾಗುತ್ತಿರುವ ನಮಗೂ ಅದನ್ನು ಊಹಿಸಿಕೊಳ್ಳಲಾಗುತ್ತಿಲ್ಲ.
ದೇವನೂರು ಮಹಾದೇವರ ಮಾತನ್ನು ಇಲ್ಲಿ ನೆನಪಿಸಿಕೊಳ್ಳುವುದಾದರೆ
'ಬಸ್ಸು, ರೈಲು ಕಾರಣದಿಂದ ಎಲ್ಲರೂ ಅಕ್ಕ ಪಕ್ಕ ಕೂತಿರುತ್ತಾರೆ. ಹೋಟಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡುತ್ತಾರೆ. ನೌಕರಿಯ ಕಾರಣಕ್ಕಾಗಿ ಒಟ್ಟಾಗಿ ಓಡಾಡುತ್ತಾರೆ. ಅಲ್ಲಿ ಇಲ್ಲಿ ಒಂದಿಷ್ಟು ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು, ಆದರೆ ಎಲ್ಲರ ಅಂತರಂಗದಲ್ಲಿ ಇನ್ನೂ ಕತ್ತಲೆಯಿದೆ'
ಶಿಕ್ಷಣದ ಕೊಡಮಾಡುವಿಕೆಯ ದೃಷ್ಟಿಯಿಂದ ಮಾತ್ರ ಮನುಷ್ಯ ಒಟ್ಟೊಟ್ಟಾಗಿ ಬೆಳೆದು ಒಬ್ಬನನ್ನೊಬ್ಬ ಮುಗುಳ್ನಗೆಯಿಂದ ಕಂಡರೂ ಆಳದಲ್ಲೆಲ್ಲೋ ಜಾತಿಯೆಂಬ ಮಹಾಮಾರಿ ಹೊಗೆಯಾಡುತ್ತಲೇ ಅಸ್ಪ್ರಷ್ಯತೆಯ ಇರುವಿಕೆಯನ್ನು ಎಲ್ಲರಲ್ಲೂ ಸ್ಪಷ್ಟಪಡಿಸುತ್ತಿದೆ.
ಪತ್ರಕರ್ತರೋರ್ವನ ಮಾತು
'ನಾನು ಹುಟ್ಟಿದಾಗ ಬುದ್ಧಿವಂತನಾಗಿಯೇ ಇದ್ದೆ, ಈ ಶಿಕ್ಷಣ ನನ್ನನ್ನು ದಡ್ಡನನ್ನಾಗಿ ಮಾಡಿತು'
ಎಂತಹ ವಿಚಾರ ಹುಟ್ಟಿಸುವಂತಹ ಮಾತಲ್ಲವೇ ಇದು. ನಾವೆಲ್ಲ ಅಕ್ಷರಗಳನ್ನು ಗಳಿಸಿ ನಮ್ಮ ಪೂರ್ವಜರಿಂದ ಕತ್ತರಿಸಿಕೊಂಡು ಬೇರಿಲ್ಲದವರಾಗಿದ್ದೇವೆ. ಅಕ್ಷರಸ್ತರಾದ ನಾವು ಆ ಬೇರುಗಳಲ್ಲಿ ಹೊಸ ರಸವನ್ನು ಸ್ಪುಟಿಸಿ ವಿದ್ಯಾವಂತರಾಗಬೇಕಾಗಿರುವುದು ಸದ್ಯದ ಅನಿವಾರ್ಯವಾಗಿದೆ.
ನಮ್ಮ ಭಾರತ ಎಲ್ಲದರಲ್ಲೂ ದಿಟ್ಟತನವನ್ನು ಮೆರೆಯುತ್ತಿದೆ. ಉತ್ಪಾದನೆಯಲ್ಲಿ ಅದು ದೊಡ್ಡದು, ವ್ಯಾಪಾರದಲ್ಲಿ ಅದು ದೊಡ್ಡದು, ಸಂಸ್ಕೃತಿ -ಸಂಸ್ಕಾರದಲ್ಲಿ ಇಡೀ ಜಗತ್ತಿಗೆ ಮಾದರಿಯಾದದ್ದು, ಶಿಕ್ಷಣದಲ್ಲಿ ದೊಡ್ಡದು, ಸೈನಿಕ ವ್ಯವಸ್ಥೆಯಲ್ಲಿ ದೊಡ್ಡದು, ಈ ಎಲ್ಲಕ್ಕಿಂತಲೂ ಇದೇ ಭಾರತದಲ್ಲಿ ವಾಸವಾಗಿಹ ಭಾರತೀಯರಲ್ಲಿ ನಿಜವಾಗಿ ಕಾಣಬೇಕಾಗಿರುವ ಮನುಷ್ಯತ್ವದ ದೊಡ್ಡತನದಲ್ಲಿ ಇದು ದೊಡ್ಡದಾಗದೇ ಉಳಿದಿರುವುದೇ ಭಾರತಕ್ಕೆ ಕಳಂಕ. ಭಾರತವನ್ನು ಬೆಳೆಸಲು ಎಲ್ಲರೂ ಒಗ್ಗಟ್ಟಾಗಲು ಸಿದ್ಧರಿದ್ದೇವೆ ಆದರೆ ನಾವೆಲ್ಲ ಒಗ್ಗಟ್ಟಾಗಿ ಬೆಳೆಯಲು ಸಿದ್ಧರಿದ್ದೇವೆಯೆ? ಇದು ನಿಜವಾದ ದೊಡ್ಡ ದುರಂತದ ಪ್ರಪಾತ.
ಇಲ್ಲಿ ನಾವು ಸೂಕ್ಷ್ಮಕ್ಕಿಂತಲೂ ಸಾಮಾನ್ಯವಾಗಿ ವಿಚಾರ ಮಾಡೋಣ –
ಏನೊಂದೂ ಗೊತ್ತಿರದೇ ಇರುವಾಗಿನ ಮನುಷ್ಯ ಎಲ್ಲರೊಳು ಬೆರೆತು ಬದುಕಿದ್ದ. ಈಗಿನವನಿಗೂ ಅದೇ ಕಣ್ಣು ಅದೇ ಚರ್ಮ ಇದ್ದು, ಈ ಮನುಷ್ಯ ಬೆರೆಯುವ ವಿಚಾರದಲ್ಲಿ ಮನಸ್ಸನ್ನು ಬರಿದು ಮಾಡಿಕೊಂಡಿದ್ದಾನೇಕೆ?
ಅಸ್ಪ್ರಷ್ಯನೆಂದು ಕರೆಯಿಸಿಕೊಳ್ಳುತಿಹ ಪ್ರತಿಯೊಬ್ಬನಲ್ಲಿನ ಒಳಗಿನ ಹೋರಾಟ ಕೇವಲ ನೋವ ಕಳೆಯುವುದಕ್ಕಾಗಿ ಅಲ್ಲ, ಬದಲಿಗೆ ಹೊಸತಾದ ಒಂದು ಅವಯವವನ್ನು ಬೆಳೆಸಿಕೊಳ್ಳುವುದಕ್ಕಾಗಿ, ತನ್ನದೇ ಒಂದು ಅಸ್ತಿತ್ವದ ಛಾಪನ್ನು ಸಧ್ಯದ ಜಗತ್ತಿನಲ್ಲಿ ಉಳಿಸಿಹೋಗುವುದಕ್ಕಾಗಿ ಇದೆ. ತಮ್ಮ ಇರುವಿಕೆಯೇ ಸಿದ್ಧ ಎಂಬಂತೆ ರಾಕ್ಷಸ ನಗುವೊಂದನ್ನು ಕಣ್ಣಿನಿಂದಲೇ ತೋರುತ್ತಿರುವ ಮೇಲ್ವರ್ಗ ತನ್ನೊಳಗಿನ ಸುಖಕ್ಕೆ ತುಳಿಯುವುದರ ಮುಖೇನ ಇನ್ನಷ್ಟು ಜೀವಂತಿಕೆಯನ್ನ ತಂದುಕೊಳ್ಳಬಹುದು ಎಂದು ವಿಚಾರಿಕೊಂಡಿದ್ದರೆ ಅದು ತಪ್ಪು.
ಅಸ್ಪ್ರಷ್ಯನೆಂದುಕೊಂಡವನ ಅಂತರಾಳದಲ್ಲಿ ಎಂದಿಗೂ ಮೊಂಡವಾಗದ ಹರಿತ ಹತಾರವಿದೆ. ಅದು ಎಲ್ಲರನ್ನು, ಎಲ್ಲವನ್ನು ಇರಿದು ರಕ್ತ ಹರಿಸಲು ಎಂದಿಗೂ ಹೇಸುವುದಿಲ್ಲ. ಅದರ ಇರುವಿಕೆಯನ್ನು ಆತ ಕಂಡುಕೊಂಡಿಲ್ಲ. ಅದು ಅವನಿಗೆ ಗೋಚರಿಸುವ ಮೊದಲೆ ಜಗತ್ತು ಎಚ್ಚೆತ್ತುಕೊಳ್ಳಬೇಕಿದೆ.
ಇಂದಿನ ವ್ಯಕ್ತಿ ಪೂರಯಸಿಕೊಳ್ಳಲು ಇಚ್ಚಿಸುತ್ತಿರುವುದು ಇತಿಹಾಸದ ಅವಶ್ಯಕತೆಗಳನ್ನಲ್ಲ, ಭವಿಷತ್ತಿನ ಅವಶ್ಯಕತೆಗಳನ್ನು ಆದರೆ ಆತ ಅಭ್ಯಾಸ ಮಾಡಿಕೊಂಡಿದ್ದು ಮಾತ್ರ ಆ ನಿರ್ಜೀವ ಇತಿಹಾಸ. ಆ ನಿರ್ಜೀವ ಇತಿಹಾಸದಲ್ಲಿ ಬಿಳಿಯರು ಎಂದಿಗೂ ಕೊಳಚೆ ಹೊತ್ತಿಲ್ಲ. ಕರಿಯರ ಮೇಲೆಯೇ ತಮ್ಮ ಹೊಲಸು ಹೊರೆಸಿ ಅವರನ್ನೇ ಮೂಸದೆ ದೂರ ನಿಂತು ಮೂಗು ಮುಚ್ಚಿಕೊಂಡು ನಕ್ಕಿದ್ದಾರೆ. ಇಂದಿನದು ಮಾತ್ರ ತೀರಾ ಬೇರೆಯದೇ ಆದ ಜಗತ್ತು. ತುಳಿತಕ್ಕೊಳಗಾದ ಪ್ರತಿಯೊಬ್ಬನ ಸಾವು ಆತನ ಸಾವಿನ ನಂತರ ಅವನ ಬಳುವಳಿಯವರಿಗೆ ವಿಚಾರ ಮಾಡಲು ವಿಷಯವೊಂದನ್ನು ಕೊಟ್ಟಿದೆ. ಅವುಗಳನ್ನು ಅವರು ಸೂಕ್ಷ್ಮವಾಗಿಯೇ ವಿಚಾರ ಮಾಡುತ್ತಿದ್ದಾರೆ. ಇಂದಿನ ಭೌತಿಕ ಜಗತ್ತಿನಲ್ಲಿ ಬೆಳೆಯುತ್ತಿರುವ ಕೊಳಚೆ ಹೊತ್ತವನ ಮಗ ತನ್ನ ತಂದೆ ತುಳಿತಕ್ಕೊಳಗಾಗಿ ಸತ್ತಿದ್ದನ್ನು ಕಂಡಿದ್ದಾನೆ. ಈ ಕಾಣುವಿಕೆ ಆತನ ಕರ್ತವ್ಯದ ದಾರಿಗೆ ಮಾರ್ಗದರ್ಶಕವಾಗಿದೆ. ಕಾಲದ ವಿನ್ಯಾಸದಲ್ಲಿಯೂ ಬದಲಾವಣೆ ತಂದುಕೊಂಡಿಹ ಬಿಳಿಯ ಬಣ್ಣಿಗ ಇದನ್ನೆಲ್ಲ ಇಡಿಯಾಗಿ ಗ್ರಹಿಸಿ ತನ್ನ ವ್ಯವಸ್ತಿತ ಹುನ್ನಾರಕ್ಕೆ ತಿಲಾಂಜಲಿ ಅರ್ಪಿಸಿ, ಎಲ್ಲವನ್ನು ಒಪ್ಪಿಕೊಂಡು, ಅಪ್ಪಿಕೊಂಡು ನಡೆಯಬೇಕಿದೆ.
ಇಲ್ಲಿ ಇಂದು ಎಲ್ಲರ ಬದುಕು ಹಸನಾಗಬೇಕಿದೆ.
ಎಂದಿಗೆ ಒಬ್ಬರ ಮೇಲೆ ಒಬ್ಬರು ನಿಂತವರು ನೆಲದ ಮೇಲೆ ಪಾದವೂರಿ ಸಮಸಮವಾಗಿ ನಿಲ್ಲುವರೋ ಅಲ್ಲಿಯವರೆಗೂ ಕ್ರಾಂತಿಯ ಹೊಗೆಯಾಡುತ್ತಲೇ ಇರುತ್ತದೆ. ಅಲ್ಲಲ್ಲಿ ಅದರ ಕಿಡಿಗಳು ಸೂಕ್ಷ್ಮವಾಗಿ ಹಾರಾಡುತ್ತಿವೆ. ಆ ಎಲ್ಲ ಕಿಡಿಗಳು ಸೇರಿ ಎಂದು ದೊಡ್ಡ ಜ್ವಾಲೆಯಾಗಿ, ದೇದೀಪ್ಯಮಾನವಾಗಿ ಬೆಳಗಲು ಪ್ರಾರಂಭವಾಗುವುದೋ ಅಂದು ನಿಜಕ್ಕೂ ಮನುಕುಲದ ಮಾರಣಹೋಮ ನಡೆಯುತ್ತದೆ. ಇಂದಿನ ಬಿಳಿಯ ಬುದ್ಧಿವಂತ ಮೆದುಳುಗಳು ಅದನ್ನು ಮೊದಲೇ ಗ್ರಹಿಸಿ ಎಲ್ಲ ಚರ್ಮವನ್ನೂ ಅಪ್ಪಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಒಬ್ಬರ ಉಸಿರನ್ನು ಮತ್ತೊಬ್ಬರು ಕುಡಿಯಲು ಮುಖಕಿವುಚದೇ ಸಹಕರಿಸಬೇಕಿದೆ. ಒಬ್ಬರ ಕೈತುತ್ತನ್ನು ಇನ್ನೊಬ್ಬರು ನುಂಗಲು ಸಂಭ್ರಮದಿಂದ ತಯಾರಾಗಬೇಕಿದೆ.
ಈ ಜೀವನದಲ್ಲಿ ಏನಿದೆ?
"ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ" ಎಂಬ ಕವಿವಾಣಿಯ ಆಳದ ತಿರುಳನ್ನು ಎಲ್ಲರ ಎದೆಯಲ್ಲೂ ಅವರವರೇ ಬಿತ್ತಿಕೊಳ್ಳಬೇಕಿದೆ. ಅದು ಇಂದಲ್ಲ ನಾಳೆ ಮರವಾಗಿ ಬೆಳೆದು ಮನಸ್ಸಿಗೆ ತಂಪು ನೆರಳು ಕೊಡುತ್ತದೆ. ಆ ನೆರಳಿನಲ್ಲಿ ಪ್ರತಿಯೊಬ್ಬ ಮನುಷ್ಯನ ಬದುಕು ಸಮಾನತೆಯಿಂದ ಅರಳಿ ಸೌಗಂಧ ಬೀರಬೇಕಿದೆ.
ಬದುಕಿನ ಸಾರ್ಥಕ್ಯ ಅಡಗಿರುವುದು ಕೂಡ ಅಲ್ಲಿಯೇ ಅಲ್ಲವೇ?
ನಿಜವನರಿತವರಡಿಯಾಳು
(ವಿಶ್ವನಾಥ ಕಂಬಾಗಿ)
ವಿಚಾರಪೂರ್ಣ ಲೇಖನ ಭಾಷೆ ಮತ್ತು ಸಂಕ್ಷಿಪ್ತವಾಗಿ ಸೂಕ್ಷ್ಮವಾಗಿ ಹೇಳುವ ಶೈಲಿ ಇಷ್ಟವಾಯಿತು.-ಶಾಂತಾಕುಮಾರಿ
ತುಂಬಾ ಚೆನ್ನಾಗಿದೆ..
ಸೂಪರ್ ವಿಶ್ವಾ,,, 🙂
chennaagide