ರವಿ ಕಾಣದ್ದನ್ನ “ರವಿ” ಕಂಡ’: ನಂದಾದೀಪ, ಮಂಡ್ಯ

ಓದೊ ಹಸಿವು, ಬರೆಯೊ ದರ್ದು, ತಲೆಗೆ ಬಂದಿರೋದನ್ನ ಬರ್ದು ಗೀಚಿಬಿಡಬೇಕು ಅನ್ನೊ ಉನ್ಮಾದ ಬರೋದು ರವಿಬೆಳೆಗೆರೆಯವರ ಪುಸ್ತಕ ಓದಿದಾಗಲೆ..! ಅದೇನ್ ಬರಿತಾನ್ರಿ..! ಮೆದುಳಿಗೆ ಕೈ ಹಾಕಿ ಮನಸಿನೊಂದಿಗೆ ಮಾತನಾಡಿ ಹೃದಯಗೂಡಲ್ಲಿ ಬೆಚ್ಚಗೆ ಕಥೆಗಳ ಇಳಿಸಿಬಿಡ್ತಾನೆ..! ಹೀಗೆ ಅವರ ಪುಸ್ತಕ ಓದಿದವರು ಮಾತಾಡೋದು..! ಯಾವುದಕ್ಕೂ ಮಿತಿ ಇಲ್ಲ.. ಪ್ರೀತಿ, ಪ್ರೇಮ, ಕಾಮ, ಚರಿತ್ರೆ, ರಕ್ತ, ಕ್ರೈಂ, ಮಾಟಮಂತ್ರ, ಇತಿಹಾಸ, ಬದುಕಿನ ಚಿತ್ರಣ, ರಾಜಕೀಯ ಯಾವುದಕ್ಕೂ ಯಾವುದೇ ಮುಲಾಜಿಲ್ಲದೆ ಬರೆದು ಓದುವ ಗೀಳಿಗೆ ಸಲೀಸಾಗಿ ಹಚ್ಚಿಬಿಡುವ ಅಕ್ಷರ ಲೋಕದ ಮಾಂತ್ರಿಕ ಬರಹಗಾರ.. ಅವರ ಬರಹಗಳು ಓದುಗರನ್ನು ಒಂದು ರೀತಿ ಹಿಪ್ನೋಟಿಸ್ ಮಾಡಿಬಿಡುತ್ತವೆ..! ಅವರು ಬರೆದಿರುವ ವಿವಿಧ ಪ್ರಕಾರಗಳ ಪ್ರಬೇಧಗಳನ್ನ ಒಳಹೊಕ್ಕಾಗ ಮೊದಲಿಗೆ ನನ್ನನ್ನು ಕಾಡಿದ್ದು ಪ್ರೇಮ..! ಪ್ರೀತಿ ಎಂಬ ಮಾಯೆ ಬದುಕಿನ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಕಾಡಿರುತ್ತೆ. ಅದು ತರುವ ನೋವು, ಸಂತೋಷ, ಬದುಕಿನಲ್ಲಿ ಪಾಠ ಕಲಿಸಿರುತ್ತವೆ. ಅಂತಹ ಒಂದು ಪುಸ್ತಕವೆಂದರೆ ‘ಹೇಳಿ ಹೋಗು ಕಾರಣ’. ಇದು ಒಂದು ರೀತಿಯ ಪ್ರೇಮಗ್ರಂಥಾನೆ ಎಂದರೆ ತಪ್ಪಾಗಲಾರದು.. ಇದನ್ನ ಓದಿದರಷ್ಟೇ ಸಾಕು ಬೆಳೆಗೆರೆಯವರ ಬರವಣಿಗೆಗೆ ಅವರು ಬಿಲ್ಕುಲ್ ಫಿದಾ..! ಅವರ ಮತ್ತಷ್ಟು ಪುಸ್ತಕಗಳನ್ನು ಓದುವ ಹಕಿಕತ್ತಿಗೆ ಕಿಡಿ ಹತ್ತಿಸಿಬಿಡುತ್ತದೆ.. ಅಲ್ಲಿಗೆ ನಾನೂ ಕೂಡ ರವಿಬೆಳಗೆರೆ ಅಭಿಮಾನಿ ಅನ್ನೋ ಮಾತು ತನ್ನಿಂತಾನೆ ಹೊರಬಂದು ಎಲ್ಲ ಪುಸ್ತಕಗಳಿಗೂ ಅಭಿಮಾನಿ ಆಗಿಬಿಡ್ತಾರೆ..!

ಅಂತಹ ಒಂದು ತಾಕತ್ತು, ಅಂತಹ ಒಂದು ಉತ್ಕಟ ಭಾವ, ನೊಂದ ಮನಸುಗಳ ನಿಟ್ಟುಸಿರು ಈ ಪುಸ್ತಕದಲ್ಲಿ ವ್ಯಕ್ತವಾಗುತ್ತದೆ.. ಅದಷ್ಟೇ ಅಲ್ಲದೆ ಆ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ಓದುಗರು ತಮ್ಮೊಳಗೆ ತಮ್ಮನ್ನು ಕಂಡುಕೊಂಡಿದ್ದಾರೆ..
ಅದೆಷ್ಟೋ ಪ್ರೇಮಿಗಳು ತಮ್ಮೊಳಗೆ ಹಿಮವಂತನ ಅವ್ಯಕ್ತ ಪ್ರೇಮವನ್ನು ಕಂಡಿದ್ದಾರೆ.. ಪ್ರಾರ್ಥನಾಳಂತ ಹುಡುಗಿಗೆ ಶಪಿಸಿದ್ದಾರೆ.. ಹಿಮವಂತನ ದುಃಖಕ್ಕೆ ಜೊತೆಯಾಗಿ ದುಃಖಿಸಿದ್ದಾರೆ.. ಉರ್ಮಿಳಾನ್ನು ಮೆಚ್ಚಿದವರು ಇದ್ದಾರೆ.. ಪ್ರೀತಿ ಯಾರಿಗೆ ತಾನೇ ಬೇಡ..!? ಪ್ರೀತಿ ಎಲ್ಲರಿಗೂ ಬೇಕು. ನಮ್ಮನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರಿಗಾಗಿ ಈ ಹೃದಯ ಸದಾ ಮಿಡಿಯುತ್ತಿರುತ್ತದೆ. ಆದರೆ ಒಂದೊಂದು ಸಲ ಪ್ರೀತಿಯೇ ನಮ್ಮ ಬದುಕನ್ನು ಕಿತ್ತುಕೊಳ್ಳುವುದರ ಜತೆಗೆ ನಮ್ಮ ಮೇಲೆ ಅಗಾಧವಾದ ಪ್ರೀತಿ, ಆಸೆ, ಕನಸು ಕಟ್ಟಿಕೊಂಡವರಿಗೆ ನೋವು, ದುಃಖ ತರುತ್ತದೆ.. ಹೆಚ್ಚಿನ ಓದುಗರು ಇದೇ ಕಾದಂಬರಿ ಮೂಲಕ ತಮ್ಮ ಓದಿನ ಪಯಣವನ್ನು ಆರಂಭಿಸಿದ್ದು ಎಂದರೆ ತಪ್ಪಾಗಲಾರದು.. ಅದರಲ್ಲಿ ನಾನೂ ಕೂಡ..! ಇಂತಹ ಒಂದು ಪ್ರೇಮಗ್ರಂಥದ ಮೂಲಕ ಅನುರಾಗದ ಅಲೆಯನ್ನು ಹೃದಯದಲ್ಲಿ ಎಬ್ಬಿಸುವ ಕಲೆಯನ್ನು ಕರಗತ ಮಾಡಿಕೊಂಡ ಅದ್ಭುತ ಮಾಟಗಾರ..!

ತಮ್ಮ ಆಫೀಡಫಿಟ್ ನಲ್ಲಿ ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮಸಂತೋಷ ಎಂದು ಹೇಳುವ ಅವರು ಓದಿದ್ದು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ.. ಅದನ್ನ ತನ್ನ ಓದಿಗಷ್ಟೇ ಸೀಮಿತ ಮಾಡದೆ ಇತಿಹಾಸದಲ್ಲಿ ಇತಿಹಾಸ ಆದವರ ಜೀವನ ಚರಿತ್ರೆಯನ್ನ ತೆರೆದಿಟ್ಟ ಬೆಳಗೆರೆಯವರು ಇತಿಹಾಸದಲ್ಲಿ ಸಾಧನೆ ಮಾಡಿದವರ ಸಾಲಿಗೆ ಸೇರುತ್ತಾರೆ.. ಅಂತಹ ಜೀವನ ಚರಿತ್ರೆ ಪುಸ್ತಕಗಳಲ್ಲಿ ಒಂದು ಎಂದರೆ ಮೊದಲ ಸಾಲಲ್ಲೇ ಅವಳ ಹೆಸರು ‘ಡಯಾನಾ’ ಎಂದೇ ಶುರುವಾಗುವ ಇಂಗ್ಲೆಂಡ್ ನ ಪ್ರಿನ್ಸೆಸ್ ಡಯಾನಾಳ ಜೀವನಗಾಥೆ..
ಡಯಾನಾ ಎಂದರೆ ಸೌಂದರ್ಯ, ಕೀರ್ತಿ, ನೀಲಿಕಂಗಳ ಒಡತಿ, ಸುಂದರ ನಗುವಿನ ಚೆಲುವೆ, ಎಂದಷ್ಟೇ ಗೊತ್ತಿದ್ದ ನಮಗೆ ಅದಷ್ಟೇ ಅಲ್ಲ ಡಯಾನಾ ಎಂದರೆ ನೋವು, ಶೋಕ, ಒಂಟಿ, ಖಿನ್ನತೆ.. ಎಲ್ಲಾ ಇದ್ದು ಅವಳ ಬಾಳಿನಲಿದ್ದ ನೆಮ್ಮದಿಯ ಅಭಾವ, ಸಂತೋಷದ ಹುಡುಕಾಟ, ಬೊಗಸೆ ಪ್ರೀತಿಗಾಗಿ ಪರದಾಟ ಅವಳ ಈ ವ್ಯಥೆಯ ಕಥೆ ಎಷ್ಟು ಜನರಿಗೆ ಗೊತ್ತಿತ್ತೋ ತಿಳಿದಿಲ್ಲ ಆದರೆ ನನಗಂತೂ ತಿಳಿದಿರಲಿಲ್ಲ.. ಡಯಾನಾ ಎಂದರೆ ಯಾರೋ ಶಿಲ್ಪಿ ಕಡೆದ ಶಿಲ್ಪದಂತೆ ಅದ್ಭುತ ಶಿಲಾಬಾಲಿಕೆ ಅಂತಹ ಸೌಂದರ್ಯವತಿ ಎಂದಷ್ಟೇ ತಿಳಿದಿದ್ದ ನನಗೆ ಆಕೆಯ ಭಯಾನಕ ಘೋರ ಸಾವಿನ ಚಿತ್ರಣದ ಕಲ್ಪನೆ ಲವಶೇಷವೂ ನನ್ನಲ್ಲಿ ಇರಲಿಲ್ಲ..!

ಒಂದು ಹೆಣ್ಮನದ ಭಾವಗಳ ತಲ್ಲಣ, ತನ್ನ ಭಾವ ಸೌಂದರ್ಯಕ್ಕಿಂತ ತನ್ನ ಆಂತರಿಕ ಸೌಂದರ್ಯವನ್ನು ಪ್ರೀತಿಸುವ ಹೃದಯವನ್ನು ಹುಡುಕಾಡುವಾಗಿನ ಮನದ ಭಾವೋತ್ಕರ್ಷ, ಕಿರಿಯ ವಯಸ್ಸಿಗೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿ ಗಂಡನ ಪ್ರೀತಿಗೆ ಚಡಪಡಿಸುವ ಗೃಹಿಣಿ, ಅತಿಯಾದ ಶ್ರೀಮಂತಿಕೆ ಇದ್ದರೂ ಒಲವ ಆಸ್ತಿಯಲ್ಲಿ ಮಾತ್ರ ಬಡವಿ..! ಆ ಒಂಟಿತನದಲ್ಲಿ ಆವರಿಸುವ ಖಿನ್ನತೆಗಳ ಒಡತಿ.. ನಾರಿ ಮುನಿದರೆ ಮಾರಿ ಎನ್ನುವಂತೆ ಎಲ್ಲದರಿಂದ ಬೇಸತ್ತು ತನ್ನೆಲ್ಲವನ್ನು ತೊರೆದು ತನ್ನದೇ ದಾರಿ ಆಯ್ದುಕೊಂಡು ಹೊರಟವಳು ಆರಿಸಿಕೊಂಡಿದ್ದು ಸಮಾಜಸೇವೆ.. ಜೊತೆಗೆ ಪ್ರೇಮಿಗಳ ಹುಡುಕಾಟ ಕೊನೆಗೂ ಎಲ್ಲೆಲ್ಲೂ ಮೋಸ..! ಧಾರುಣವಾದ ಅಂತ್ಯ..! ಇದು ಪ್ರಿನ್ಸೆಸ್ ಡಯಾನಾಳ ಕತೆಯಾದರೂ.. ಕೇವಲ ಅವಳೊಬ್ಬಳ ಕತೆ ಎನಿಸದೆ ಪ್ರತಿ ಹೆಣ್ಣು ಮಗಳ ಮನದೊಳಗೆ ಹೊಕ್ಕಿ ಅವಳ ಭಾವಗಳನ್ನೇ ಬರೆಯಲಾಗಿದೆ ಎನಿಸುಕೊಳ್ಳುವಲ್ಲಿ ಪಾಸ್ ಆಗುತ್ತಾರೆ..! ಪ್ರಿನ್ಸೆಸ್ ಡಯಾನಾ ತಂದೆ ತಾಯಿ ಪ್ರೀತಿಯಿಲ್ಲದೆ ಬೆಳೆದು ಎಲ್ಲವನ್ನು ತನ್ನ ಚಿಕ್ಕ ವಯಸಿಗೆ ಸಾಮಾನ್ಯ ಗೃಹಿಣಿಯಂತೆ ಎಲ್ಲಾ ಕಷ್ಟ ಸುಖ ಅನುಭವಿಸುತ್ತಾಳೆ.. ಆದರೂ ಅವಳು ಪ್ರಿನ್ಸೆಸ್..! ಅದೆಷ್ಟೋ ಸಾಮಾನ್ಯ ಗೃಹಿಣಿಯರು ಕೂಡ ಡಯಾನಾಳಂತೆಯೇ ಜೀವನ ನಡೆಸಿರುತ್ತಾರೆ ಆದರೆ ಅವರ್ಯಾರಿಗೂ ಹೆಸರಿನ ಜೊತೆಗೆ ಪ್ರಿನ್ಸೆಸ್ ಎಂಬ ಬಿರುದು ಇರುವುದಿಲ್ಲ ಅಷ್ಟೇ..! ಬೆಳಕಿಗೆ ಬಾರದೆ ಇತಿಹಾಸ ಸೇರಿದ ಡಯಾನಾಳಂಥವರ ಕಥೆಗೆ ಕನ್ನಡಿ ಹಿಡಿಯುವಲ್ಲಿ ಕುಲ್ಲಂಕುಲ್ಲ ಪಾಸಾಗಿಬಿಡುತ್ತಾರೆ..!

ರೂಮಲ್ಲೆ ಕೂತು ಓದಿದ್ರು ನಾವೆಲ್ಲಿದಿವಿ ಅನ್ನೊದನ್ನೆ ಮರೆಸೋದು ಲೇಖಕನ ಜಾಣ್ಮೆ ಮತ್ತು ತಾಕತ್ತು! ‘ಮಾಟಗಾತಿ, ಸರ್ಪಸಂಬಂಧ’ ಓದುವಾಗ ಒಂದುಕ್ಷಣ ಆ ಭಯಾನಕ ಸ್ಮಶಾನದಲ್ಲೆ ಓದುಗ ಕೂತು ಓದ್ತಿದಾನೇನೋ ಅನಿಸುತ್ತೆ.. ಗಿಚ್ಯ ಬರವಣಿಗೆ ಅಂದ್ರೆ ಅದು ಬೆಳೆಗೆರೆದೆ..! ಹುಚ್ಚ ಹಿಡಿಸ್ತಾರೆ, ಹಿಡಿದಿರೊ ಹುಚ್ಚು ಬಿಡಿಸ್ತಾರೆ.. ಕೆಲವು ಪಾತ್ರಗಳು ನಮ್ಮ ಮುಂದೆ ಬಂದು ಸಾಗಿದಂತೆ ತೇಜಮ್ಮ, ಅಗ್ನಿನಾಥನನ್ನ ಈಗಲೂ ಹುಡುಕುತ್ತಾರೆ ಅಂದ್ರೆ ಅದು ಆ ಕಾದಂಬರಿಗಳಿಗೆ ಅದೆಂತ ಕೂತೂಹಲ ತುಂಬಿರಬೇಕು ಆ ಅಕ್ಷರ ರಾಕ್ಷಸ..! ಮಾಟಗಾರರ ಬದುಕನ್ನ ರಿಸರ್ಚ ಮಾಡೋದು ಅಂದ್ರೆ ಸುಮ್ನೆನಾ..! ಇನ್ನು ಪ್ರೇಮವನ್ನು ಬರೆಯುವ ಇವರು ಕಾಮವನ್ನು ಅಷ್ಟೆ ಸರಳವಾಗಿ ಉಣಬಡಿಸುತ್ತಾರೆ.. ಅದೊಂದು ರೀತಿ ರಸಪಾಕ ಚೂರಾದ್ರು ಸವಿಯಬೇಕು ಅನ್ನೊಹಾಗೆ ಯಾವದಕ್ಕೂ ಮಿತಿಯ ಗಡಿಯಿಲ್ಲ.. ಸಾರಸಗಟಾಗಿ ಬರೆದು ಬಿಸಾಕೋ ಇವರ ಶೈಲಿಗೆ ಯುವ ತರುಣ- ತರುಣಿಯರ ಮನಸು ‘ದಿ ಕಂಪನಿ ಆಫ್ ವಿಮೆನ್’ ನಲ್ಲಿ ಬಿಸಿಯೇರುವಂತೆ ಚಿಂದಿ(ಮಸ್ತ್) ಎಬ್ಬಿಸುತ್ತಾರೆ..!

ಎಲ್ಲವನ್ನು ಕಳೆದುಕೊಂಡು ಅತಿಯಾದ ನೋವು, ಸಂಕಟ ಅನುಭವಿಸುವವರಿಗೆ ಏನಾದರು ಉಡುಗೊರೆ ನೀಡಬೇಕೆಂದರೆ ಅದು ಅವರಿಗೆ ಧೈರ್ಯ ತುಂಬಿ ಸಾಂತ್ವನ ನೀಡುವ ನಿಮ್ಮ ಮಾತುಗಳೇ ಆ ಸಂದರ್ಭಕ್ಕೆ ದೊಡ್ಡ ಉಡುಗೊರೆಯಾಗಿರುತ್ತದೆ.. ಆದರೆ ಎಲ್ಲಾ ಸಮಯದಲ್ಲೂ ಅವರ ಜೊತೆಯಾಗಿ ಸಾಂತ್ವನ ಹೇಳಲಾಗಲಿಲ್ಲವೆಂದಾದರೆ ಸದಾ ಅಕ್ಷರ ರೂಪದಲ್ಲಿ ನಾಲ್ಕೈದು ಸಾಲುಗಳಲ್ಲಿ ಸಾಂತ್ವನಿಸುವ ‘ಉಡುಗೊರೆ’ ಯನ್ನು ಉಡುಗೊರೆಯಾಗಿ ನೀಡಿ.. ಭಾವನೆಗಳು ಏರಿಳಿತಗಳಾದಗ ಈ ಪುಸ್ತಕದ ಪುಟವನ್ನು ಒಮ್ಮೆ ತಿರುವಿ ಹಾಕಿದರೆ ಸಾಕು ಮನವನು ಸಾಂತ್ವನಿಸುವ ಗೆಳೆಯನೊಬ್ಬ ಸದಾ ಜೊತೆಗಿದ್ದಂತೆ ಇಂತಹ ಒಂದು ಉಡುಗೊರೆಯನ್ನು ನೀಡಿದಕ್ಕೆ ಅವರಿಗೊಂದು ಹ್ಯಾಟ್ಸಪ್..! ಇದಷ್ಟೇ ಅಲ್ಲದೆ ಹಿಮಾಲಯನ್ ಬ್ಲಂಡರ್, ಕಲ್ಪನಾ ವಿಲಾಸ, ಅಮ್ಮ ಸಿಕ್ಕಿದ್ಲು, ಮಾಂಡೋವಿ, ಆತ್ಮ, ನಕ್ಷತ್ರ ಜಾರಿದಾಗ, ಮೇಜರ್ ಸಂದೀಪ್ ಹತ್ಯೆ, ಪಾಪಿಗಳ ಲೋಕದಲ್ಲಿ, ಭೀಮ ತೀರದಲ್ಲಿ, ಬ್ಲ್ಯಾಕ್ ಫ್ರೈಡೆ, ನೀ ಹಿಂಗ ನೋಡಬ್ಯಾಡ ನನ್ನ, ಬಾಟಮ್ ಐಟಂ, ಖಾಸ್ ಬಾತ್ ನಂಥ ಹಲವಾರು ಪುಸ್ತಕಗಳನ್ನು ಬರೆದು ಓದುಗರ ಹಸಿವಿಗೆ ಮೃಷ್ಟನ್ನಾವನ್ನೇ ಉಣಬಡಿಸಿದ್ದಾರೆ..!

ಬರೀ ಪುಸ್ತಕಗಳಿಗಷ್ಟೇ ಸೀಮಿತವಾಗದ ಬೆಳಗೆರೆಯವರು ‘ಹಾಯ್ ಬೆಂಗಳೂರು’ ಮೂಲಕ ಒಬ್ಬ ಪತ್ರಕರ್ತನಾಗಿಯೂ ಯಶಸ್ವಿಯಾಗುತ್ತಾರೆ.. ಯಾವುದೇ ಅಂಜಿಕೆಗೆ ತಮ್ಮನ್ನ ಒಡ್ಡಿಕೊಳ್ಳದೆ, ಯಾವ ಮುಲಾಜಿನ ಹಂಗಿಲ್ಲದೆ ಅಂಡರವರ್ಲ್ಡ್, ಕ್ರೈಂ ಲೋಕದ ಭೀಕರತೆಯ ಸಮಾಚಾರಗಳನ್ನ ವರದಿಮಾಡುತ್ತಿದ್ದ ಗುಂಡಿಗೆಯನ್ನ ಮೆಚ್ಚಲೇಬೇಕು..! ಕೇವಲ ಅದಕ್ಕಷ್ಟೇ ಸೀಮಿತವಾಗದೆ ಇನ್ ಫ್ಯಾಚೂಯೇಷನ್, ಕ್ರಶ್, ಪ್ರೇಮ ಪ್ರೀತಿಯ ಲೇಖನಗಳನ್ನೇ ಪ್ರಧಾನವಾಗಿಟ್ಟುಕೊಂಡು ಬಂದ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯು ಯುವ ಜನರ ಅಚ್ಚುಮೆಚ್ಚಾಗಿ ಹೊರಬಂದು ಓದುಗರ ಹುಚ್ಚಿಗೆ ಇನ್ನಷ್ಟು ಕಿಡಿ ಹೆಚ್ಚಿಸಿತು..! ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿ ನಟನೆಗೂ ಸೈ ಎನಿಸಿಕೊಂಡ ಬೆಳಗೆರೆಯವರು ತಮ್ಮ ವಿಶಿಷ್ಟ ದನಿಯಿಂದ ಎಲ್ಲರ ಕಿವಿಗಳಲ್ಲೂ ಈಗಲೂ ರಿಂಗಣಿಸುತ್ತಾರೆ..! ಕಿರುತೆರೆ ಮಾಧ್ಯಮದಲ್ಲಿ ‘ಕ್ರೈಂ ಡೈರಿ’ ಹೊಸ ಅಲೆಯನ್ನೇ ಎಬ್ಬಿಸಿ ಅಂಡರವರ್ಲ್ಡ್ ನ ರಕ್ತ ಸಿಕ್ತ ಬದುಕನ್ನು ಅನಾವರಣಗೊಳಿಸಿದ ರವಿ! ಯುವ ಮನಸುಗಳಿಗೆ ‘ಓ ಮನಸೇ ರಿಲ್ಯಾಕ್ಸ್ ಪ್ಲೀಸ್!’ ಎಂದು ಸಾಂತ್ವನವನ್ನು ಹೇಳುತ್ತ ಇಳಿಸಂಜೆಯಲಿ ಮರೆಯಾಗಿ ಹೋಗುವ ರವಿಯಂತೆ ದೈಹಿಕವಾಗಿ ಮರೆಯಾಗಿಬಿಟ್ಟ..! ಆದರೂ ಅಕ್ಷರ ಲೋಕದ ರಾಕ್ಷಸ ಎಂದಿಗೂ ಓದುಗ ಮನಗಳಲ್ಲಿ ಸದಾ ಜೀವಂತ..!

-ನಂದಾದೀಪ, ಮಂಡ್ಯ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x