ರವಿಯು ಮಳೆಮೋಡವನು ಚುಂಬಿಸಿ ಆಗಸದಲಿ ರಂಗಿನ ರುಜು ಹಾಕಿದ: ಭಾರ್ಗವ್‌ ಹೆಚ್.‌ ಕೆ.


ಸಂಜೆ 4 ಗಂಟೆ. . ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳ ಸಂದಣಿ. 8ನೆಯ ತರಗತಿಯಲ್ಲಿ ಕಾಮನಬಿಲ್ಲಿನ ಬಗ್ಗೆ ಪೌರಾಣಿಕ ಕಥೆಯು ಅನುರಣಿಸುತ್ತಿತ್ತು. ಕಥಾಪ್ರಸ್ತುತಗಾರ ನಿಂಗಪ್ಪ ಮಾಸ್ಟರ್, ಲೇ. . ಆಟದ ಹೊತ್ತು ಆಯಿತು. . ಯಾವನಾದ್ರು ಹೋಗಿ ಗಂಟೆ ಹೊಡೀರಿ. ಇಷ್ಟು ಅಂದಿದ್ದೆ ತಡ. . . ಎಲ್ಲರೂ ಕೇ ಹೊ. . ಅಂತ ಮೈದಾನಕ್ಕೆ ತೆರಳಿದರು. ಮಾಳಿಂಗರಾಯನು ಮಾತ್ರ ಕದಲಲಿಲ್ಲ. ಸರ್. . ನಾವು ಏನು ಬೇಕಾದ್ರೂ ಕೇಳ್ತೀವಿ ಅಂತ ಕಾಮನಬಿಲ್ಲು ಬಗ್ಗೆ ಪೌರಾಣಿಕ ಕಥೆ ಹೇಳುತ್ತೀರಿ. ಶೃತಿ ಹಾಗೂ ಸ್ಮೃತಿಗಳಿಂದ ಮೋಡಿ ಮಾಡಿ ವಿದ್ವಾಂಸರಾಗಿಬಿಟ್ಟಿರಿ. ಕಾಮನಬಿಲ್ಲನ್ನು ಮಳೆಬಿಲ್ಲು ಅಂತ ಒಳ್ಳೆಯ ಪದವನ್ನು ಟಂಕಿಸಬಹುದಾಗಿತ್ತು ಸರ್. ನಗುತ್ತಲೇ ನಿಂಗಪ್ಪ ಮಾಸ್ಟರ್, ಮಾಳಿಂಗ. . . . . ನೀನು ಪ್ರಶ್ನೆಗಳನ್ನು ಕೇಳಿ ಕದಲದಂತೆ ಮಾಡಿರುವೆ. ಆ ನಿನ್ನ ವಿದ್ವತ್ತು ನನ್ನನ್ನು ಪ್ರಶ್ನೆ ಮಾಡಲು ಪ್ರೇರೆಪಿಸಿದೆ. ಎಲ್ಲವೂ ನಮ್ಮ ನಂಬಿಕೆಗೆ ಬಿಟ್ಟಿದ್ದು. ನಿನ್ನ ವಿಜ್ಞಾನಕ್ಕಿಂತ ಮುಂಚೆ ವೇದ ಉಪನಿಷತ್ತುಗಳು ಇದ್ದವು. ಅವುಗಳನ್ನು ನೀನು ಓದು. ಎಲ್ಲಕ್ಕಿಂತ ನಿಮ್ಮ ಮನೆತನದ ರಟ್ಟುಮತ ಶಾಸ್ತ್ರ. ಅದನ್ನೂ ಓದು. ಕಾಮನಬಿಲ್ಲಿನ ಬಗ್ಗೆ ನಿಮ್ಮಪ್ಪ ರಟ್ಟುಮತ ಶಾಸ್ತ್ರಜ್ಞ ಬೀರನನ್ನೇ ಕೇಳು?ಆಮೇಲೆ ಈ ಪೌರಾಣಿಕ ಕಥೆಗಳ ಬಗ್ಗೆ ಚರ್ಚಿಸೋಣ. ಆಯ್ತು. . ಸರ್. . ಎನ್ನುತ್ತಲೇ ಕೊಠಡಿಯ ಬಾಗಿಲನ್ನು ದಾಟಿದನು. ವೇಗದೂತ ಮೋಡಗಳಂತೆ ಮೇಘಾಳು ಎದುರಾದಳು. ಮಳೆಬಿಲ್ಲನ್ನು ಕೈಬೆರಳಿನಿಂದ ತೋರಿಸುತ್ತಾ. . . ಮಾಳು. . . ಇದೇನು ಬಣ್ಣದ ಬಿಲ್ಲು?ಬಿಸಿಲು ಮಳೆಯಲ್ಲಿ ಯಾಕ್ ಹುಟ್ಟಿದೆ?. ಮಾಳಿಂಗರಾಯನೂ ಅರೆಕಾಲ ಮಳೆಯಲ್ಲಿ ನೆನೆದನು. ನವಿರಾದ ತುಂತುರು ಮಳೆಹನಿಗಳು ಇಳೆಗೆ ಮುತ್ತಿಡುತ್ತಿದ್ದವು. ಅರೆಕಾಲ ಮಾಳಿಂಗರಾಯನು ಯಾಮಾರಿದ್ದನು. ಸುಧಾರಿಸಿಕೊಂಡು. . ಮೇಘು. . ನಿಮ್ಮ ಅಪ್ಪಾಜಿ ತರಗತಿಯಲ್ಲಿ ಕಾಮನಬಿಲ್ಲಿನ ಬಗ್ಗೆ ಪೌರಾಣಿಕ ಕಥೆಯನ್ನು ಹೇಳುತ್ತಾರೆ, ವಿಜ್ಞಾನದಲ್ಲಿ ಮಳೆಬಿಲ್ಲಿನ ಬಗ್ಗೆ ಹೇಳಬಹುದಿತ್ತು. ನೀನು ಅವರನ್ನೇ ಕೇಳು?. ಮೇಘಾಳು ಬೇಸರದಿಂದ, “ನೀನು ನಮ್ಮ ಅಪ್ಪಾಜಿ ಬೈಯೋದ್ರಲ್ಲಿ ಬಂದೆ, ಮುಂದಿನ ಪಾಠದಲ್ಲಿ ವಿಜ್ಞಾನ ಹೇಳುತ್ತಾರೆ. ಅವರು ದೈವಭಕ್ತರು. ಅದೆಲ್ಲ ಹೋಗಲಿ, ನೀನೇ ಹೇಳು, ಆಕಾಶದಲ್ಲಿ ಮಳೆಬಿಲ್ಲು ಏಕೆ ಮೂಡುತ್ತದೆ ?

ಮಾಳಿಂಗರಾಯನು ಉತ್ತರಿಸುತ್ತಾ, ಈ ಮಳೆಬಿಲ್ಲು ಆಗಸದಲ್ಲಿ ಮೂಡಲು ಎರಡು ಕಾರಣಗಳಿವೆ. ಇವತ್ತು ಸೂರ್ಯನ ಬಿಸಿಲು ಇದೆ ಹಾಗೂ ಎದುರಿಗೆ ತುಂತುರು ಮಳೆ ಇದೆ. ಕಾಮನಬಿಲ್ಲು ಹಾಗೂ ಮಳೆಹನಿಗಳು ವಿರುದ್ಧ ದಿಕ್ಕಿನಲ್ಲಿರಬೇಕು. ಈ ಸೂರ್ಯನ ಶ್ವೇತ ಕಿರಣವು ಮಳೆಯ ಹನಿಗಳ ಮೇಲ್ಮೈ ಮೇಲೆ ಬಿದ್ದಾಗ ಶ್ವೇತ ಕಿರಣವು ಗಾಳಿ ಮಾಧ್ಯಮದಿಂದ ನೀರಿನ ಹನಿಗಳ ಮಾಧ್ಯಮಕ್ಕೆ ಬರುವಾಗ ಬೆಳಕಿನ ವೇಗ ಕಡಿಮೆ ಆಗುತ್ತದೆ. ನೀರಿನ ಹನಿಗಳ ಹೆಚ್ಚು ಸಾಂದ್ರತೆಗೆ ಶ್ವೇತ ಕಿರಣಗಳು ಡೊಗ್ಗುತ್ತವೆ. ಏಳು ಬಣ್ಣಗಳಾಗಿ ಪ್ರಸರಣವಾಗುತ್ತವೆ. ಇದಕ್ಕೆ ವಕ್ರೀಭವನ ಅಥವಾ ರೀಫ್ರ್ಯಾಕ್ಷನ್ ಎನ್ನುವರು. ರೀಫ್ರ್ಯಾಕ್ಷನ್ ಆದಾಗ ಆ ಏಳು ಬಣ್ಣಗಳು VIBGYOR ಕಾಣುತ್ತವೆ. ಅಂದರೆ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಇಂಡಿಗೋ, ನೇರಳೆ ಬಣ್ಣದ ಕಿರಣಗಳಾಗಿ ಕಾಣುತ್ತವೆ. ಆ ಡೊಗ್ಗಿದ ಕೆಂಪು ಬಣ್ಣವು ದೊಡ್ಡ ರೌಡಿ!. ಅತೀ ಹೆಚ್ಚು ತರಂಗಾಂತರ ಹೊಂದಿರುತ್ತದೆ. ನೇರಳೆ ಬಣ್ಣವು ಪುಕ್ಕಲು. ಕಡಿಮೆ ತರಂಗಾಂತರ ಹೊಂದಿರುತ್ತದೆ. ಮಾಧ್ಯಮ ಬದಲಾದಾಗ ಬಹಳಷ್ಟು ಡೊಗ್ಗುತ್ತದೆ. ಈ ಏಳು ಬಣ್ಣಗಳ ತರಂಗಗಳು ನೀರಿನ ಹನಿಗಳ ಉದರಗಳಲ್ಲಿ ಪ್ರಸಾರಣವಾಗುತ್ತವೆ. ಈ ಏಳು ಬಣ್ಣಗಳ ಪ್ರಸರಣವು ನೀರಿನ ಒಳಮೇಲ್ಮೈಯನ್ನು 48 ಡಿಗ್ರಿಗಿಂತ ಹೆಚ್ಚು ಛೇದಿಸಿದರೆ ಮತ್ತೆ ಪ್ರತಿಫಲನವಾಗುತ್ತದೆ. ಇದಕ್ಕೆ ಇಂಟರ್ನಲ್ ರಿಫ್ಲೆಕ್ಷನ್ ಎನ್ನುವರು. ಆಗ ಮಳೆಹನಿಯನ್ನು ಬೇಧಿಸಿ ಗಾಳಿ ಮಾಧ್ಯಮಕ್ಕೆ ತರಂಗಗಳು ಚಲಿಸುವುದಿಲ್ಲ. ನಂತರದಲ್ಲಿ ನೀರಿನ ಹನಿಯ ಮಾಧ್ಯಮದಿಂದ ಗಾಳಿಮಾಧ್ಯಮಕ್ಕೆ ತರಂಗಗಳು ಡೊಗ್ಗುತ್ತವೆ. ಮತ್ತೆ ಅದೇ ಕ್ರಿಟಿಕಲ್ ಕೋನವೇ ಕಾರಣ. ಹಾಗಾಗಿ ಏಳು ಬಣ್ಣಗಳು ಆಗಸದಲ್ಲಿ ಕಾಮನಬಿಲ್ಲು ಕಾಣುತ್ತದೆ. ಶ್ವೇತ ಕಿರಣವು ನೀರಿನ ಹನಿಯ ಮೇಲೆ ವಕ್ರೀಭವಿಸಿ ಮತ್ತೆ ಗಾಳಿಮಾಧ್ಯಮಕ್ಕೆ 42 ಡಿಗ್ರಿ ಇದ್ದರೆ ಕೆಂಪು ಬಣ್ಣವು ಕಾಣುತ್ತದೆ. 40ಡಿಗ್ರಿ ಇದ್ದರೆ ವಯಲೆಟ್ ಬಣ್ಣವು ಕಾಣುತ್ತದೆ. ಭೂಮಿಯ ಮೇಲೆ ನಿಂತು ನೋಡಿದರೆ ಕಾಮನಬಿಲ್ಲು ಅರ್ಧ ವೃತ್ತದಲ್ಲಿ ಕಾಣುತ್ತದೆ ಆದರೆ ಆಕಾಶದ ಎತ್ತರಕ್ಕೆ ಹೋಗಿ ನೋಡಿದಂತೆ ಕಾಮನಬಿಲ್ಲು ವೃತ್ತಾಕಾರವಾಗಿ ಕಾಣುತ್ತದೆ.

ತದೇಕಚಿತ್ತದಿಂದ ಆಲಿಸುತ್ತಿದ್ದ ಮೇಘಾಳಿಗೆ. . . ಮೇಘು. . ಮಳೆಬಿಲ್ಲಿನ ಬಗ್ಗೆ ಇಷ್ಟೊಂದು ಮಾಹಿತಿ ಸಾಕಾ?. ತಲೆಅಲ್ಲಾಡಿಸುತ್ತಾ ತುಂತುರು ಮಳೆಗೆ ಮುಖವನ್ನೇ ಚಾಚಿದಳು. ನಾ. . ಬರ್ತೀನಿ ಅಂತ ಮಾಳಿಂಗರಾಯನು ಮನೆಯ ಕಡೆಗೆ ಧಾವಿಸಿದನು.

ಭಾಳ ಖುಷಿಯಾಗಿದ್ದ ಮಗ ಮಾಳಿಂಗರಾಯನನ್ನು. . . ಏನಪ್ಪ ಮೇಘರಾಜ. . . ಶಾಲೆ ಕಡೆ ಮಳೆ ಭಾರೀ ಜೋರು ಆಗಿದೆ ಅನಿಸುತ್ತೆ?. . . ಮಾಳಿ ನಗುತ್ತಲೇ. . ಹೌದಪ್ಪ. ಸೂರ್ಯನ ಝಳಕ್ಕೆ ಮೇಘ ಕರಗಿ ಹೋಯಿತು. ಖುಷಿ ಆಯ್ತು. ಆಗಸದಾಗ್ ಏಳು ಬಣ್ಣದ ಗೀಟು ಗೀಚಿದೆ.

ಅಲಾ ಕಿಸಿನ್ಯಾ. ಜ್ಞಾನ ಸಂಪಾದನೆ ಮಾಡಿನಿ ಅಂತ ವಿಜ್ಞಾನಿಯಂತೆ ಬೀಗಬೇಡ. ಆಗಸದಲ್ಲಿ ಕಾಮನಬಿಲ್ಲು ನೀನು ಗೀಚುವ ಮಗನೇ!ಬಿಟ್ಟರೆ ಭೂಮಿಯ ಮೇಲು ಗೀಚುತ್ತಿ!. ಹುಸಿನಗೆಯಿಂದ ಮಾಳಿಂಗರಾಯನು, ಅಪ್ಪ ನೀನು ಕಾಮನಬಿಲ್ಲು ಹೆಂಗ್ ಗೀಚುವುದು ಅಂತ ರಟ್ಟುಮತ ಓದಿ ತಿಳಿದುಕೊಂಡಿರುವೆ. ಅದೊಂದು ಚೂರು ಕಾಮನಬಿಲ್ಲಿನ ಬಗ್ಗೆ ಹೇಳಪ್ಪ. . ಲೇ. . ಪುಕ್ಕಟೆ ಹಂಗೆಲ್ಲ ಹೇಳಲ್ಲ. . . 2ರೂಪಾಯಿ ಆಗುತ್ತೆ?. ಆಯ್ತಪ್ಪ ಕೊಡ್ತೀನಿ ಅಂತ ಮಾಡಿನಲ್ಲಿದ್ದ ರಟ್ಟುಮತವನ್ನು ಅಪ್ಪನ ಕೈಗೆ ನೀಡಿದನು.

ಮಾಳಿಂಗ. . . . ಆ ರಟ್ಟುಮತವು ನನ್ನ ಬಾಯಲ್ಲಿ ನಲಿಯುತ್ತಿದೆ. ಈ ಕಾಮನಬಿಲ್ಲಿನ ಬಗ್ಗೆ ಹೇಳಬೇಕೆಂ ದರೆ ಕಾಮನಬಿಲ್ಲು ಒಂದು ಪ್ರತಿಸೂರ್ಯ. ಮಳೆ ಸುರಿಯುವ ಕಾಲಕ್ಕೆ ಬಿಸಿಲು ಬಿದ್ದು ಮಳೆಬಿಲ್ಲು ಮೂಡಿದರೆ ಅದಕ್ಕೆ ಆಡುಭಾಷೆಯಲ್ಲಿ ನರಿ ಮದುವೆ ಎನ್ನುವರು. ಮಳೆಗಾಲದಲ್ಲಿ ಸೂರ್ಯನಿಗೆ ಬಲ ಭಾಗದಲ್ಲಿ ಕಾಮನಬಿಲ್ಲು ಮೂಡಿದರೆ ಎರಡು ದಿವಸದೊಳಗೆ ಎಲ್ಲ ಕಡೆಗೆ ಮಳೆ ಸಮೃದ್ಧಿಯಾಗುತ್ತದೆ. ಸೂರ್ಯನ ಎಡ ಭಾಗದಲ್ಲಿ ಕಾಮನಬಿಲ್ಲು ಮೂಡಿದರೆ ಮುಂದಿನ ಹದಿನೈದು ದಿನ ಮಳೆಯಾಗುವುದಿಲ್ಲ. ಸಂಧ್ಯಾಕಾಲದ ಪೂರ್ವದಿಕ್ಕಿನಲ್ಲಿ ಮಂಜು ಬಿದ್ದು ಅದರ ಮೇಲೆ ಕಾಮನಬಿಲ್ಲು ಮೂಡಿದರೆ ಬರಗಾಲ ಉಂಟಾಗುವುದು. ಇದೇ ಪ್ರಕಾರ ಕಾಮನಬಿಲ್ಲು ವಾಯುವ್ಯ, ನೈಋತ್ಯ ದಿಕ್ಕುಗಳಲ್ಲಿ ಮೂಡಿದರೆ ಬರಗಾಲದ ಮುನ್ಸೂಚನೆ. ಪಶ್ಚಿಮ ದಿಕ್ಕಿನಲ್ಲಿ ಕಾಮನಬಿಲ್ಲು ಮೂಡಿದರೆ ಸಕಾಲದಲ್ಲಿ ಮಳೆ ಆಗುವುದು. ಕಾಮನಬಿಲ್ಲು ಒಂದನೆಯ ಯಾಮಾರ್ಧದಲ್ಲಿ(ಒಂದು ಗಂಟೆ) ಮೂಡಿದರೆ ಆ ದಿನವೇ ಮಳೆ ಆಗುವುದು. ಯಾಮದ ಎರಡನೆಯ ಭಾಗದಲ್ಲಿ (1ರಿಂದ 3 ಗಂಟೆ) ಕಾಮನಬಿಲ್ಲು ಮೂಡಿದರೆ ಮೂರು ದಿನದ ಒಳಗೆ ಮಳೆ ಆಗುವುದು. ಮಾಳಿಂಗ. . . ಕಾಮನಬಿಲ್ಲು ನೋಡಿ ಮಳೆ ಆಗುತ್ತೋ ಇಲ್ಲ ಅಂತ ಹೇಳ್ತೀವಿ. . ನಿನ್ನ ವಿಜ್ಞಾನಕ್ಕೆ ಆ ಶಕ್ತಿ ಇದೆಯಾ?. ಮಾಳಿಂಗರಾಯನು ಪ್ರಜ್ಞಾಪೂರ್ವಕವಾಗಿ ನಸುನಗುತ್ತ, ಅಪ್ಪ ನಮ್ಮ ಶಾಲೆಯ ದೇಶಪಾಂಡೆ ಮಾಸ್ಟರ್ ಪೌರಾಣಿಕ ಕಥೆ ಹೇಳುತ್ತಾರೆ, ನೀನು ರಟ್ಟಮತ ಹೇಳುತ್ತಿ. ಇಬ್ಬರಿಗಿಂತ ನಾನು ಜಾಣನಲ್ಲ, ಜ್ಞಾನಿಯಲ್ಲ ಆದ್ರೆ ನಾನು ಪ್ರಜ್ಞಾಪೂರ್ಣ. ಕಾಮನಬಿಲ್ಲಿನ ಬಗ್ಗೆ ಮೇಘಾಳಿಗೆ ಹೇಳಿದ್ದೇನೆ. ಅವಳಿಗೆ ಅರ್ಥವಾದ್ರೆ ಸಾಕು ಅಪ್ಪ.

ಸೋಜಿಗದಿಂದ ಬೀರನು, ಯಾರಲೇ ಈ ಮೇಘಾ?. ಸಮಯ ಬಂದಾಗ ಹೇಳುವೆ ಅಪ್ಪ ಎನ್ನುತ್ತಲೇ ನಾಚಿ ನೀರಾದನು.

ಲಾಸ್ಟ್ ಪಂಚ್ : ಬಿಳಿ ಬೆಳಕಿನಲ್ಲಿ ಇಷ್ಟು ಬಣ್ಣ ಇದ್ದವೆನ್ನುವುದನ್ನು ಐಸಾಕ್ ನ್ಯೂಟನ್ ಅವರು ತೋರಿಸಿದ್ದು ಬರೀ ಒಂದು ತುಂಡು ಅಶ್ರಗದಿಂದ!

ಭಾರ್ಗವ್‌ ಹೆಚ್.‌ ಕೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x