ರವಿ ಬೆಳಗೆರೆ – ಈ ಹೆಸರಿನಲ್ಲಿ ಒಂದು ಶಕ್ತಿ, ಒಂದು ಆತ್ಮೀಯತೆ, ಒಂದು ಹೆಸರಿಸಲಾಗದ ಭಾವನೆ, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸಂಬಂಧ. ಸುಮಾರು ೨೮-೩೦ ವರ್ಷಗಳ ಹಿಂದೆ ಕರ್ಮವೀರ ಪತ್ರಿಕೆಯನ್ನು ಓದುತ್ತಿದ್ದ ನನಗೆ ರವಿ ಅವರ ಪರಿಚಯ ಅವರ ಲೇಖನಗಳ ಮೂಲಕ ಆಯಿತು. ಹದಿವಯಸ್ಸಿನಲ್ಲಿ ಮನಸ್ಸಿನ ತೊಳಲಾಟ, ಭಾವನೆಗಳ ಏರು ಪೆರು, ಸಮಾಜದಲ್ಲಿ ವ್ಯಕ್ತಿತ್ವದ ಮೌಲ್ಯ, ಹೀಗೆ ಅನೇಕ ವಿಷಯಗಳಲ್ಲಿನ ಗೊಂದಲಗಳನ್ನು ನನಗೆ ಗೊತ್ತಿಲ್ಲದಂತೆ ತಿಳಿಹೇಳುತ್ತಿದ್ದ ಲೇಖನಗಳನ್ನು ರವಿ ಬರೆಯುತ್ತಿದ್ದರು. ತೃತೀಯ ಲಿಂಗಿಗಳ ಬಗ್ಗೆ ಅವರು ಬರೆದ ಲೇಖನ ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತ್ತು. ಅವರನ್ನು ಸಮಾಜದಲ್ಲಿ ಹೀನಾಯವಾಗಿ ನೋಡುವ ರೀತಿ ಆಳವಾಗಿ ಮುಟ್ಟಿತ್ತು. ಕರ್ಮವೀರದಿಂದ ಓದಲು ಶುರುವಾದ ಮೇಲೆ ಅವರ ಬರೆವಣಿಗೆ ಒಂಥರಾ ಗೀಳಾಗಿಬಿಟ್ಟಿತ್ತು. ಅವರ ಶೈಲಿಯನ್ನು ಮೆಚ್ಚಿ ‘ಹಾಯ್ ಬೆಂಗಳೂರು’ ‘ಓ ಮನಸೇ’ ‘ಖಾಸ್ ಬಾತ್’ ‘ಟೈಮ್ ಪಾಸ್’ ‘ಹೇಳಿ ಹೋಗು ಕಾರಣ’ ಹೀಗೆ ಅವರ ಲೇಖನಗಳನ್ನು ಓದುವಂತೆ ಮಾಡಿತ್ತು. ಅವರ ಒಂದೊಂದು ಲೇಖನವು ಒಂದೊಂದು ಪಾಠವಾಗಿತ್ತು.
ನನ್ನ ತಂದೆಗಿಂತ ೪ ವರ್ಷವಷ್ಟೇ ಚಿಕ್ಕವರಾಗಿದ್ದ ರವಿ ಅವರು ತಮ್ಮ ಯಾವುದೇ ಲೇಖನದಲ್ಲಿ ಪ್ರವಚನವಾಗಲಿ, ಬುದ್ದಿವಾದ ಹೇಳುವ ಒಂದು ಹಿರಿಯರಂತೆ ನನಗೆ ತೋರಲೇ ಇಲ್ಲ. ಒಬ್ಬ ಗೆಳೆಯ, ಒಬ್ಬ ತುಂಬ ಹತ್ತಿರವಾದ ಸ್ನೇಹಿತನಂತೆ ಅವರ ಎಲ್ಲ ಲೇಖನಗಳು ಆಪ್ತವಾಗಿರುತ್ತಿತ್ತು. ಅವರಲ್ಲಿ ಎಲ್ಲರನ್ನು ಮೋಡಿಮಾಡುವ ಶಕ್ತಿ ಇತ್ತು. ತಮ್ಮ ಬರವಣಿಗೆಯಿಂದ ಒಂದು ಸೆಳೆತ ಸೃಷ್ಟಿ ಮಾಡಿದ್ದರು. ಖಿನ್ನತೆ, ಒಂಟಿತನದಿಂದ ಇದ್ದವರಿಗೆ ಅವರ ಲೇಖನದಿಂದಲೇ ಸಾಂತ್ವನ ನೀಡುತ್ತ್ತಿದ್ದರು. ಒಂದು ಪ್ರೀತಿಯ ಭಾವನೆ, ಜೀವನದ ಮೇಲಿನ ಉತ್ಸಾಹ, ಮನೋಸ್ಥೈರ್ಯ ತಮಗೆ ಗೊತ್ತಿಲ್ಲದೇ ಅವರ ಲೇಖನವನ್ನು ಓಡುತ್ತಲೇ ಬಂದುಬಿಡುತ್ತಿತ್ತು. ನಿಜ ಹೇಳಬೇಕೆಂದರೆ ವ್ಯಕ್ತಿತ್ವ ವಿಕಸನ ನಿರ್ಮಾಣ ಮಾಡುತ್ತಿದ್ದರು ರವಿ. ಅವರ ಲೇಖನಗಳನ್ನು ಒಮ್ಮೆ ಓದಿದರೆ ಇನ್ನೊಮ್ಮೆ ಓದಲೇ ಬೇಕೆನಿಸುತ್ತಿತ್ತು. ಬರವಣಿಗೆ ಮನುಷ್ಯನಿಗೆ ಇಷ್ಟೊಂದು ಮಟ್ಟಿಗೆ ಪ್ರಭಾವ ಬೀರಲು ಸಾಧ್ಯ ಎಂದು ತಿಳಿದಿದ್ದೆ ರವಿ ಅವರ ಲೇಖನಗಳನ್ನು ಓದಿದಾಗ. ಅವರ ಭಾನುವಾರದ ಕಾಲಂ ಗಳು, ಅವರ ಅಭಿಪ್ರಾಯವನ್ನು ಹೇಳುವ ರೀತಿ, ಅವರನ್ನು ಇಷ್ಟಪಡದೆ ಇರಲು ಸಾಧ್ಯವೇ ಇಲ್ಲ. ಅವರ ಲೇಖನಗಳಲ್ಲಿ ಜಾತಿ, ವಯಸ್ಸು, ಭಾಷೆ, ಜನಾಂಗ ಯಾವುದೇ ಭೇದಭಾವ ಇರುತ್ತಿರಲಿಲ್ಲ. ಸುಮ್ಮನೆ ಕಣ್ಮುಚ್ಚಿ ಅನುಭವಿಸಲು ಆಗುವಂತಹ ಬರವಣಿಗೆ. ಒಂದು ವ್ಯಕ್ತಿಯಷ್ಟೇ ಅಲ್ಲಿ ಕಾಣಿಸುತ್ತಿದ್ದ. ಅವನ ಒಳ್ಳೆಯ ಅಥವಾ ಕೆಟ್ಟ ಗುಣಗಳು ಯಾವುದನ್ನೂ ಅವಮಾನ ಮಾಡದಂತೆ ಬಣ್ಣಿಸುತ್ತಿದ್ದರು.
ಒಂದು ಹೆಣ್ಣಿನ ಭಾವನೆಗಳು ರವಿಯಷ್ಟು ಇನ್ಯಾವ ಗಂಡಿಗೂ ಅರ್ಥವಾಗಿರಲು ಸಾಧ್ಯವಿಲ್ಲವೇನೋ. ಬಹುಷಃ ಇದೆ ವಿಷಯಕ್ಕೆ ರವಿಗೆ ಹೆಣ್ಣುಮಕ್ಕಳ ದೊಡ್ಡ ದಂಡೇ ಅಭಿಮಾನಿಗಳಾಗಿದ್ದರು. ಅವರ ಬರವಣಿಗೆ ಓದಿದ ಯಾವುದೇ ಹೆಣ್ಣು ತಕ್ಷಣ ರವಿಯೊಂದಿಗೆ ಒಂದು ಆಂತರಿಕ ಸಂಭಂದ ಬೆಳೆಸಿಕೊಂಡು ಬಿಡುತ್ತಿದ್ದಳು ಎಂದು ನನ್ನ ಅನಿಸಿಕೆ, ನನ್ನನ್ನು ಸೇರಿ. ಒಂದು ಆತ್ಮೀಯ ಗೆಳೆಯ, ಒಂದು ಅಣ್ಣ, ಅಪ್ಪ, ಚಿಕ್ಕಪ್ಪ, ಹೀಗೆ ಏನೇನೋ ಸಂಭಂದಗಳನ್ನು ಹೆಣ್ಣು ಮನಸ್ಸುಗಳು ಪ್ರಾಯಶಃ ಹುಟ್ಟುಹಾಕಿಕೊಳ್ಳುತ್ತಿದ್ದವು. ಪ್ರತಿಯೊಂದು ಹೆಣ್ಣು ಸಹ ನನ್ನವನು ರವಿಯಷ್ಟೇ ಚೆನ್ನಾಗಿ ನನ್ನ ಮನಸ್ಸನು ಅರ್ಥಮಾಡಿಕೊಳ್ಳಲಿ ಎಂದು ಬಯಸುತ್ತಿದ್ದುದು ಖಂಡಿತಾ ನಿಜ. ಅವರು ತಮ್ಮ ತಾಯಿಯ ಬಗ್ಗೆ ಬರೆದಾಗಲೂ ಒಂದು ವಿಭಿನ್ನ ಭಾವನೆ. ಅವರು ತಮ್ಮ ತಾಯಿಯನ್ನು ಆರಾಧಿಸುತ್ತಿದ್ದರು. ಹೆಣ್ಣಿನ ಸ್ವಾತಂತ್ರಕ್ಕೆ ಒಂದಿಷ್ಟು ಅಡ್ಡಿ ಬರುವ ಮತ್ತೆ ಇರಲಿಲ್ಲ ಅವರ ಲೇಖನಗಳಲ್ಲಿ. ಸಾಮಾಜಿಕ ನಿಟ್ಟಿನಲ್ಲಿ ಹೆಣ್ಣಿನ ಬಗ್ಗೆ ತೋರಿಸುವ ಕಳಕಳಿ ಹಾಗು ರವಿಯವರ ಬರವಣಿಗೆಗಳಲ್ಲಿ ಬರುವ ಹೆಣ್ಣಿನ ಬಗೆಗಿನ ಪ್ರೀತಿಯಲಿ ಬಹಳಷ್ಟು ವ್ಯತ್ಯಾಸವಿದೆ. ಅವರ ಹೆಂಗರುಳು ಅವರ ವಾಕ್ಯಗಳಲ್ಲಿ ಎದ್ದು ಕಾಣುತ್ತದೆ. ಅವರ ಪತ್ನಿ ಲಲಿತಾರವರಬಗ್ಗೆ ಅವರು ಹೇಳಿರುವ ಪ್ರತಿಯೊಂದು ನುಡಿಗಳನ್ನು ತನ್ನ ಗಂಡನಿಂದ ಕೇಳಲು ಪ್ರತಿಯೊಂದು ಹೆಂಡತಿಯು ಹಾತೊರೆಯುತ್ತಿರುತ್ತಾಳೆ. ವೈಯಕ್ತಿಕವಾಗಿ ಬಹಳಷ್ಟು ಏರು ಪೇರನ್ನು ಕಂಡಿದ್ದರು ಅವರ ಲೇಖನಗಳಂತೂ ಇಂದಿಗೂ ಓದುಗರನ್ನು ದಿಕ್ಕುತಪ್ಪಿಸುತ್ತಿರಲಿಲ್ಲ.
ಕುಡಿಯುವವರನ್ನು ಹಾಗು ಸಿಗರೇಟು ಸೇದುವವರನ್ನು ಅವರ ದುರಭ್ಯಾಸಗಳಿಗೆಯೇ ದ್ವೇಷಿಸುತ್ತಿದ್ದ ಹದಿವಯಸ್ಸಿನಲ್ಲಿದ್ದ ನನಗೆ ರವಿಯವರ ಕುಡಿತವಾಗಲಿ ಅಥವಾ ಮತ್ಯಾವುದೇ ಚಟಗಳಾಗಲಿ ಕೆಟ್ಟದಾಗಿ ಕಾಣಿಸಲೇ ಇಲ್ಲ. ಬಹುಷಃ ಅವರ ಮೇಲಿನ ಪ್ರೀತಿ ಅವರ ಎಲ್ಲ ದುರಭ್ಯಾಸಗಳನ್ನು ಮುಚ್ಚಿ ಹಾಕಿತ್ತು. ರವಿಯೆಂದರೆ ಒಂದು ಅತೀವ ಪ್ರೀತಿ, ಅಗೋಚರ ಅನುಬಂಧ. ಅವರ ಧ್ವನಿಯನ್ನು ಮೊದಲ ಬಾರಿ ಕೇಳಿದಾಗಲಂತೂ ರೋಮಾಂಚನ ಗೊಂಡಿದ್ದು ನಿಜ. ಅವರನ್ನು ನೋಡುವ ಮೊದಲೇ ಅವರ ವ್ಯಕ್ತಿತ್ವಕ್ಕೆ ಸೋತಿದ್ದೆ. ಮುಂದೊಂದು ದಿನ ಅವರ ಬಗ್ಗೆ ಏನೇನೋ ವಿಷಯಗಳನ್ನು ಓದಿದ್ದರು, ಅವರ ಮೇಲಿನ ಪ್ರೀತಿಗೆ ಧಕ್ಕೆ ಬಂದಿರಲಿಲ್ಲ. ಅಂತಹ ಒಂದು ಗಟ್ಟಿಯಾದ ತಳಹದಿ ರೂಪಗೊಂಡಿತ್ತು. ಪ್ರೀತಿಯೆಂದರೆ ಒಂದು ರೂಪ ರೇಷೆಗಳಿಲ್ಲದ ಬೆಳೆದಿದ್ದ ಸಂಭಂದ. ಅವರ ಧ್ವನಿಸುರುಳಿಗಳನ್ನು ದಿನಗಳ ಗಟ್ಟಲೆ, ತಿಂಗಳುಗಳ ಗಟ್ಟಲೆ ಬೇಜಾರಿಲ್ಲದೆ ಕೇಳುತ್ತಿದ್ದೆವು. ಅದನ್ನು ಯಾರಾದರೂ ಹೊಸಬರು ಕೇಳಿ ಖುಷಿಪಟ್ಟರೆ ನನಗೆ ಏನೋ ಒಂದು ಹೇಳಲಸಾಧ್ಯವಾದ ಖುಷಿ. ನನ್ನ ರವಿಯನ್ನು ಎಲ್ಲರು ಇಷ್ಟಪಡುತ್ತಾರೆ ಅನ್ನುವ ಸಂಭ್ರಮ.
ಅವರ ಬಗೆಗಿನ ನಿಲುವುಗಳಿಗೆ ಯಾವುದೇ ಅಡ್ಡಿ ಪಡಿಸಲು ಸುದ್ದಿ ಮಾಧ್ಯಮಗಳಿಗೆ ಆಗಲಿಲ್ಲ. ಅವರು ಕೆಟ್ಟದ್ದನ್ನು ಮಾಡಿದ್ದರು ಸಹ ಅವರ ಅಭಿಮಾನಿ ಬಳಗ ಒಪ್ಪಲು ತಯಾರಿರಲಿಲ್ಲವೇನೋ. ಬಹುಷಃ ರವಿಯವರೇ ಬಂದು ನಾನು ತಪ್ಪು ಮಾಡಿದ್ದೇನೆ ಎಂದರು ನನ್ನಂಥಹ ಅಭಿಮಾನಿಗಳ ಮನಸ್ಸಿನಲ್ಲಿ ಅವರಿರುವ ಜಾಗ ಅವರಿಗಷ್ಟೇ ಮೀಸಲು. ಅವರ ನಗು, ಅವರ ಎತ್ತರದ ಧ್ವನಿ, ಅದರಲ್ಲಿನ ಏರುಪೇರು, ಭಾವನೆಗಳಿಗೆ ಅವರು ಬಳಸುವ ಪದಗಳು, ಇಂಗ್ಲಿಷ್ ಪದಗಳ ನಿಕಟ ಉಪಯೋಗ. ಕನ್ನಡದ ಲೇಖನದಲ್ಲಿ ಇಂಗ್ಲಿಷ್ ಅಷ್ಟೊಂದು ಸಲೀಸಾಗಿ ಬಳಸಿ, ಅದಕ್ಕಾಗಿ ಯಾರು ಚಕಾರವೆತ್ತದ ವ್ಯಕ್ತಿ ರವಿ ಅನ್ನಿಸುತ್ತದೆ. ಅವರೇ ಒಂದು ಭಾವನೆ, ಒಂದು ಘಜಲ್, ಅವರೇ ಒಂದು ಕಾದಂಬರಿ. ಪ್ರೀತಿಯ ಅತ್ಯುತ್ತಮ ಕವಿತೆ. ಪ್ರಾಯಶಃ ಹೆಣ್ಣುಮಕ್ಕಳಿಗಷ್ಟೇ ಇಂತಹ ಪದಗಳು ಸೀಮಿತವಾಗಿರುತ್ತವೆ. ಒಂದು ವಯಸ್ಸಾದ ವ್ಯಕ್ತಿಗೆ ಅದರಲ್ಲೂ ಅವರ ಬಗ್ಗೆ ಸಾಕಷ್ಟು ಮಿಶ್ರ ಸುದ್ದಿಗಳನ್ನು ಕೇಳಿದಮೇಲೆಯೂ ಇಂತಹ ಪದಗಳನ್ನು ಸಲೀಸಾಗಿ ಹೇಳುವುದು ಕಷ್ಟವಾಗಿರುತ್ತಿತ್ತು.
ಅವರೆಂದು ತಮ್ಮನ್ನು ಹೊಗಳಿಕೊಂಡಿರಲಿಲ್ಲ. ಅವರನ್ನು ಅವರಂತೆಯೇ ಪ್ರೀತಿಸುತ್ತಿದ್ದರು ಅವರ ಅಭಿಮಾನಿಗಳು. ತೀರಾ ಸಾಮಾನ್ಯವರ್ಗಕ್ಕೆ ಸೇರಿದವರು ಅವರನ್ನು ತಮ್ಮ ಆತ್ಮಸ್ಥೈರ್ಯ, ದೃಢ ಸಂಕಲ್ಪ ಹಾಗು ಸಕಾರಾತ್ಮಕ ಚಿಂತನೆಗೆ ಬಹಳವಾಗಿ ಆಕರ್ಷಿತರಾಗಿದ್ದರು. ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವ್ಯಕ್ತಿಗೂ ಸಹ ಜೀವನೋತ್ಸಹ ಕೊಡುತ್ತಿದ್ದ ಬರವಣಿಗೆ, ನುಡಿಗಳು ರವಿಯವು. ಅವರ ಕ್ರೈಂ ಬಗೆಗಿನ ಬರವಣಿಗೆಗಳಿಗೆ ಬೇರೆಯದ್ದೇ ಒಂದು ಅಭಿಮಾನಿಗಳಿದ್ದರು. ಆದರೆ ನನಗೆ ಯಾಕೋ ಅವರ ಆ ಕಡೆಗಿನ ಬರವಣಿಗೆಗಳಿಗಿಂತ ಭಾವನೆಗಳಿಗೆ ಸ್ಪಂದಿಸುತ್ತಿದ್ದ ಬರವಣಿಗೆಗಳು ಹತ್ತಿರವಾಗಿದ್ದವು. ಒಟ್ಟಿನಲ್ಲಿ ಹೆಣ್ಣು ಹೃದಯದ ರವಿಗೆ ಅಭಿಮಾನಿ ಬಳಗ ಬಹಳಷ್ಟಿತ್ತು. ಇತ್ತು ಅನ್ನುವುದಕ್ಕಿಂತ ಇದೆ ಅನ್ನುವುದು ಸರಿಯಾಗಿರುತ್ತದೆ. ಅವರನ್ನು ನೇರವಾಗಿ ಒಂದು ದಿನವೂ ನೋಡಲು ಸಾಧ್ಯವಾಗಲೇ ಇಲ್ಲ. ಹಾಗೆಂದು ಬೇಸರವಿಲ್ಲ. ಅವರ ಒಂದು ವ್ಯಕ್ತಿತ್ವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಲ್ಲದೆ ಅವರ ಪುಸ್ತಕಗಳು, ಬರವಣಿಗೆಗಳು, ಧ್ವನಿಸುರುಳಿ, ಲೇಖನ, ಎಷ್ಟೆಲ್ಲಾ ನಮ್ಮೆಲ್ಲರೊಡನೆ ಸದಾ ಇರುವಾಗ ರವಿ ನಮ್ಮ ಜೊತೆಗೆ ಇಲ್ಲ ಎಂದು ಹೇಳುವುದು ಹೇಗೆ. ಅವರು ಒಂದು ಅಮೋಘ ಗೆಳೆಯ, ಸದಾ ಸಂತೈಸುವ ತಂದೆ, ಎದೆಗವುಚಿ ಸಮಾಧಾನ ಹೇಳುವ ತಾಯಿ, ಕಣ್ಣೊರೆಸುವ ಅಣ್ಣ. ಕೆಲವೊಮ್ಮೆ ಭಾವನೆಗಳಿಗೆ ನಿಲುಕದ ತುಂಬ ಹತ್ತಿರದ ವ್ಯಕ್ತಿ. ನಮ್ಮೊಳಗಿನ ಪ್ರೀತಿ. ತುಂಬು ಹೃದಯದ ಪ್ರೀತಿ ನಿಮಗೆ ರವಿ. ನಿಮ್ಮೆಲ್ಲ ಪದಗಳಲ್ಲಿ ನಮಗೆ ತುಂಬಿದ ಚೈತನ್ಯ ನಮ್ಮನು ಇಲ್ಲಿಯವರೆಗೂ ತಂದಿದೆ. ನಿಮಗೆ ಹೃದಯ ಪೂರ್ವಕ ನಮನಗಳು.
–ಗಿರಿಜಾ ಜ್ಞಾನಸುಂದರ್