ರವಿಬೆಳಗೆರೆಯವರನ್ನು ನೆಗ್ಲೆಕ್ಟ್ ಮಾಡಲಿಕ್ಕಂತೂ ಸಾಧ್ಯವಿಲ್ಲ: ನಟರಾಜು ಮೈದನಹಳ್ಳಿ

‘ರವಿ ಬೆಳಗೆರೆ’ ಈ ಹೆಸರು ಗೊತ್ತಿರದ ಕನ್ನಡಿಗನೇ ಇಲ್ಲ ಎನ್ನಬಹುದು. ಬಿಸಿಲು ನಾಡಿನ ಬಳ್ಳಾರಿಯಲ್ಲಿ ದಿನಾಂಕ: 15-03-1958 ರಂದು ಪಾರ್ವತಮ್ಮ ಟೀಚರ್ ಮಗನಾಗಿ ಹುಟ್ಟಿ, ಕಡು ಕಷ್ಟಗಳನ್ನು ಅನುಭವಿಸಿ, ಮುನ್ನೂರು ಚಿಲ್ಲರೆ ರೂ.ಗಳೊಂದಿಗೆ ಬೆಂಗಳೂರು ಎಂಬ ಮಾಯಾನಗರಿಗೆ ಬಂದು, ಅನೇಕ ಬವಣೆಗಳನ್ನು ಅನುಭವಿಸಿ, ಪತ್ರಿಕೋದ್ಯಮದ ದೈತ್ಯನಾಗಿ, ಅಕ್ಷರ ಮಾಂತ್ರಿಕನಾಗಿ ಬೆಳೆದಿದ್ದು ಒಂದು ಯಶೋಗಾಥೆ.

ರವಿ ಬೆಳಗೆರೆ ಒಬ್ಬ ಬಹುಮುಖ ಪ್ರತಿಭೆ. ಇವರು ಪತ್ರಕರ್ತ, ಸಂಪಾದಕ, ಕತೆಗಾರ, ಕಾದಂಬರಿಕಾರ, ಸಿನಿಮಾ ನಟ, ಟಿವಿ ನಿರೂಪಕ ಇತ್ಯಾದಿ. ಪತ್ರಕರ್ತ ಆಗುವುದಕ್ಕೆ ಮುಂಚೆ ಮೆಡಿಕಲ್ ರೆಪ್ರೆಸೆಂಟೇಟಿವ್, ಹಾಲು ಮಾರುವ ಗೌಳಿ, ಪೇಪರ್ ಹಾಕುವ ಹುಡುಗ, ಸಿನಿಮಾ ಥಿಯೇಟರ್ ನಲ್ಲಿ ಗೇಟ್ ಕೀಪರ್, ಪ್ರಿಂಟಿಂಗ್ ಪ್ರೆಸ್ ಓನರ್, ಉಪನ್ಯಾಸಕ, ಬಂಡಾಯದ ನಾಯಕ, ನಕ್ಸಲ್ ವಾದದ ಬೆಂಬಲಿಗ ಹೀಗೆ ಹಲವಾರು ಕೆಲಸಗಳನ್ನು ನಿರ್ವಹಿಸಿದ್ದರು. ರವಿ ಬೆಳಗೆರೆಯವರು ಹಾಯ್ ಬೆಂಗಳೂರ್ ಪತ್ರಿಕೆಯನ್ನು ಪ್ರಾರಂಭಿಸುವ ಮುಂಚೆ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

1980, 90 ರ ದಶಕದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದಲ್ಲಿ ರಾಜನಂತೆ ಪ್ರಜ್ವಲಿಸುತ್ತಿದ್ದವರು ಲಂಕೇಶ್. ಲಂಕೇಶ್ ಬರವಣಿಗೆಗೆ ಆ ತಾಕತ್ತಿತ್ತು. ಅಲ್ಲದೆ ಲಂಕೇಶ್ ಪತ್ರಿಕೆಯಲ್ಲಿ ಪೂರ್ಣಚಂದ್ರತೇಜಸ್ವಿ, ಶೂದ್ರ ಶ್ರೀನಿವಾಸ್, ರವೀಂದ್ರ ರೇಷ್ಮೆ, ಡಿಬಿ ಚಂದ್ರೇಗೌಡ, ದೇವನೂರು ಮಹಾದೇವ, ನಾಗತಿಹಳ್ಳಿ ಚಂದ್ರಶೇಖರ್, ಚಂದ್ರಶೇಖರ ಆಲೂರರಂತಹ ಪ್ರತಿಭಾವಂತ ಲೇಖಕರ ಬರಹಗಳಿರುತ್ತಿದ್ದವು. ಆದರೆ 1995 ರಲ್ಲಿ ರವಿಬೆಳಗೆರೆಯವರ ಕನಸಿನ ಕೂಸಾದ ‘ಹಾಯ್ ಬೆಂಗಳೂರ್’ ಎಂಬ ವಿಚಿತ್ರ ಹೆಸರಿನ ಟ್ಯಾಬ್ಲಾಯ್ಡ್ ಪತ್ರಿಕೆ ಮಾರ್ಕೆಟ್ಗೆ ಲಗ್ಗೆಯಿಟ್ಟಿತು ನೋಡಿ, ಏಕಮೇವಾದ್ವಿತೀಯವಾಗಿ ರಾರಾಜಿಸುತ್ತಿದ್ದ ಲಂಕೇಶ್ ಪತ್ರಿಕೆ ಪತರಗುಟ್ಟಿತು. ಲಂಕೇಶ್ ಪತ್ರಿಕೆಯ ಓದುಗರು ನಿಧಾನವಾಗಿ ಹಾಯ್ ಬೆಂಗಳೂರ್ ಪತ್ರಿಕೆಗೆ ಶಿಫ್ಟ್ ಆಗುತ್ತಾ ಹೋದರು. ವಾರದಿಂದ ವಾರಕ್ಕೆ ಹಾಯ್ ಬೆಂಗಳೂರ್ ಎಂಬ ಕಪ್ಪು ಸುಂದರಿಯ ಸರ್ಕ್ಯುಲೇಶನ್ ಹೆಚ್ಚುತ್ತಾ ಹೋಯಿತು. ಆಟೋದವರಿಂದ ಹಿಡಿದು ಹೆಂಗಸರು, ಯುವಕರು, ಎಲ್ಲರೂ ಪತ್ರಿಕೆಯಲ್ಲಿ ರವಿ ಬೆಳಗೆರೆಯವರ ಬರವಣಿಗೆ ಶೈಲಿಗೆ ಮಾರು ಹೋದರು. ಕ್ರಮೇಣ ಹಾಯ್ ಬೆಂಗಳೂರ್ ಪತ್ರಿಕೆ ಲಂಕೇಶ್ ಪತ್ರಿಕೆಯನ್ನು ಹಿಂದಿಕ್ಕಿರಾಜ್ಯದಲ್ಲಿ ನಂಬರ್-1 ಪತ್ರಿಕೆಯಾಯಿತು. ಅದರ ಅಧಿಪತ್ಯವನ್ನು ಮುರಿಯಲು ಇದುವರೆಗೂ ಇನ್ಯಾವುದೇ ಪತ್ರಿಕೆಗೆ ಸಾಧ್ಯವಾಗಿಲ್ಲ. ಹಾಯ್ ಬೆಂಗಳೂರ್ ಪತ್ರಿಕೆಯನ್ನು 25 ವರ್ಷಗಳಿಂದ ಒಂದೂ ಸಂಚಿಕೆ ಬಿಡದೆ ಓದಿದ್ದೇನೆ ಎಂಬುದೇ ನನಗೆ ಹೆಮ್ಮೆ.

ರವಿಬೆಳಗೆರೆಯವರ ತಾಕತ್ತಿರುವುದೇ ಅವರ ಬರವಣಿಗೆಯ ಶೈಲಿಯಲ್ಲಿ. ಅವರ ಆಕರ್ಷಕ ಬರವಣಿಗೆ ಓದುಗರ ಹೃದಯಕ್ಕೆ ತಾಕುವಂತಹುದ್ದು. ಓದಿದ ಪ್ರತಿಯೊಬ್ಬರಿಗೂ, ನಮ್ಮದೇ ಮನಸ್ಸಿನ ಭಾವಗಳಿಗೆ ಎಷ್ಟು ಚೆನ್ನಾಗಿ ಅಕ್ಷರರೂಪ ಕೊಟ್ಟಿದ್ದಾರೆ ಎನ್ನಿಸುವಂತೆ ಇರುತ್ತಿತ್ತು ಅವರ ಬರವಣಿಗೆ. ಓದುಗರನ್ನು ಮೊದಲ ಬಾರಿಗೆ ‘ಓದುಗ ದೊರೆಗಳು’ ಎಂದು ಕರೆದರು. ಸಂಪಾದಕ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಓದುಗರೊಂದಿಗೆ ಬೆರೆತು ಹೋದರು. ಖಾಸ್ ಬಾತ್ ಅಂಕಣದಲ್ಲಿ ತಮ್ಮದೇ ಬದುಕಿನ ಸಿಹಿ ಕಹಿ ಎಲ್ಲಾ ಘಟನೆಗಳನ್ನು ಮುಕ್ತವಾಗಿ ಬಿಚ್ಚಿಡುತ್ತಾ ಹೋದರು. ಓದುಗರಿಗೆ ಈ ಕಾಲಂ ಬಹಳ ಇಷ್ಟವಾಯಿತು. ಎಷ್ಟು ಚೆನ್ನಾಗಿ ಬರೀತಾನೆ ಗುರು ಅಂಥ ಅನ್ನತೊಡಗಿದರು. ಬಾಟಮ್ ಐಟಂ ಅಂಕಣದಲ್ಲಿ ಯಶಸ್ವಿ ಜೀವನದ ಸೂತ್ರಗಳ ಬಗ್ಗೆ ಬರೆಯುತ್ತಾ ಹೋಗಿ ಓದುಗರಿಗೆ ಜೀವನ ಸ್ಫೂರ್ತಿಯಾದರು. ತಾಯಿಯ ಬಗ್ಗೆ, ಸೈನಿಕರ ಬಗ್ಗೆ, ಹದಿಹರೆಯದವರ ಪ್ರೀತಿಯ ಬಗ್ಗೆ ರವಿಯವರು ಬರೆಯುತ್ತಿದ್ದ ಲೇಖನಗಳು ಯುವಕರ ಪಾಲಿಗೆ ಭಗವದ್ಗೀತೆಯಾದವು. ಪ್ರೀತಿಸಿ ಮನೆಯಿಂದ ಓಡಿಹೋದ ಪ್ರೇಮಿಗಳಿಗೆ ತಟ್ಟನೆ ನೆನಪಾಗುತ್ತಿದ್ದದ್ದು ರವಿಬೆಳಗೆರೆ. ಅವರ ಪ್ರೀತಿಯಲ್ಲಿ ಪ್ರಾಮಾಣಿಕತೆ ಇದೆ ಅನ್ನಿಸಿದರೆ, ರವಿಯವರು ಅಣ್ಣನ ಸ್ಥಾನದಲ್ಲಿ ನಿಂತು, ತಾವೇ ಮದುವೆ ಮಾಡಿಸಿ, ಚೆಂದದ ಸಂಸಾರ ನಡೆಸಲು ಹಾರೈಸುತ್ತಿದ್ದರು. ನೈತಿಕ ಬೆಂಬಲ ನೀಡುತ್ತಿದ್ದರು. ವಿದ್ಯಾಭೂಷಣ ಸ್ವಾಮಿಯವರ ಪ್ರೇಮ ವಿವಾಹಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದಾಗ ರವಿಯವರೇ ಮುಂದೆ ನಿಂತು ಮದುವೆ ಮಾಡಿಸಿದರು.

ರವಿಯವರು ತಮ್ಮ ಹಾಯ್ ಪತ್ರಿಕೆಯಲ್ಲಿ ಅದುವರೆಗೂ ಓದುಗರಿಗೆ ಅಪರಿಚಿತವಾಗಿದ್ದ ಭೂಗತಲೋಕದ ಆಳ-ಅಗಲಗಳನ್ನು ಪರಿಚಯಿಸಿದರು. ಯಾರ ಕೈಗೂ ಸಿಗದ ಭೂಗತ ಪಾತಕಿಗಳ ಸಂಪರ್ಕವನ್ನು ರವಿಯವರು ಗಳಿಸಿದರು. ಕೊತ್ವಾಲ,ಜಯರಾಜ್, ಆಯಿಲ್ ಕುಮಾರ್, ಕೋಳಿ ಪಯಾಜ್, ತನ್ವೀರ್, ಎಂ.ಸಿ.ಪ್ರಕಾಶ, ಕೊರಂಗು ಮುಂತಾದವರ ಬಗ್ಗೆ ‘ಪಾಪಿಗಳ ಲೋಕದಲ್ಲಿ’ ಎಂಬ ಕಾಲಂನಲ್ಲಿ ರೋಚಕವಾಗಿ ಬರೆಯತೊಡಗಿದರು. ಜೇಡರಹಳ್ಳಿ ಕೃಷ್ಣಪ್ಪ, ಚಂದಪ್ಪ ಹರಿಜನ, ಮುತ್ತಪ್ಪ ರೈ ನಂತಹ ಅನೇಕ ಭೂಗತ ಪಾತಕಿಗಳನ್ನು ನೇರವಾಗಿ ಸಂದರ್ಶಿಸಿ ಓದುಗರಿಗೆ ಕುತೂಹಲ, ಬೆರಗು ಮೂಡಿಸಿದರು. ಭ್ರಷ್ಟ ಅಧಿಕಾರಿಗಳ ಬಗ್ಗೆ, ಭ್ರಷ್ಟ ರಾಜಕಾರಣಿಗಳ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಯಾವುದೇ ಮುಲಾಜಿಲ್ಲದೆ ಟೀಕಿಸಿ ಬರೆಯುತ್ತಿದ್ದರು. ಇದರಿಂದ ರವಿಯವರಿಗೆ ಅಭಿಮಾನಿಗಳು ಹೇಗೋ ಹಾಗೆಯೇ ಅನೇಕ ಶತ್ರುಗಳು ಹುಟ್ಟಿಕೊಳ್ಳುತ್ತಿದ್ದರು.

ರವಿಯವರ ಶತ್ರುಗಳು ಅವರನ್ನು ಹಣಿಯಲು ಸೂಕ್ತ ಸಂದರ್ಭಗಳಿಗಾಗಿ ಕಾಯುತ್ತಾ ಅನೇಕ ಸಾರಿ ಪ್ರಯತ್ನಿಸಿದರು. ನಟಿ ರೂಪಿಣಿ ಬಗೆಗಿನ ವರದಿ ಹಗರಣವಾದಾಗ, ಸುನೀಲ್ ಹೆಗ್ಗರವಳ್ಳಿ ಸುಫಾರಿ ಕೇಸ್ ಆದಾಗ, ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆಗೆ ಪ್ರತಿಭಟನೆಯಾದಾಗ, ಭೀಮಾ ತೀರದ ಹಂತಕರು ವಿವಾದ ಉಂಟಾದಾಗ, ರವಿಯವರು ಎರಡನೇ ಮದುವೆಯಾಗಿದ್ದಾರೆ ಎಂದು ಗೊತ್ತಾದಾಗ ಅವರನ್ನು ಹಣಿಯಲು ಅವರ ಶತ್ರುಗಳೆಲ್ಲಾ ಪ್ರಯತ್ನಿಸಿದರು. ಇದ್ಯಾವುದಕ್ಕು ರವಿಯವರು ಜಗ್ಗಲಿಲ್ಲ. ಇವುಗಳ ಜೊತೆಯಲ್ಲಿ ಅನೇಕ ರಾಜಕಾರಣಿಗಳು ಅವರ ಮೇಲೆ ಹಾಕಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಗಳು- ಹೀಗೆ ಎಲ್ಲವನ್ನೂ ಎದುರಿಸಿ ಮೆಟ್ಟಿ ನಿಂತವರು ರವಿಬೆಳಗೆರೆ. ಯಾರಿಗೂ ಹೆದರದ ಡೋಂಟ್ ಕೇರ್ ಗುಣ ಅವರಿಗೆ ಹೀರೋ ಇಮೇಜ್ ತಂದುಕೊಟ್ಟಿತು. ತಮ್ಮ ಜೀವನ ಪೂರ್ತಿ ಎಲ್ಲಿಯೂ ರಾಜಿಯಾಗದೆ, ತಮ್ಮ ಸಿದ್ದಾಂತ ನಂಬಿಕೆಗಳನ್ನು ಬಿಟ್ಟು ಕೊಡದ ದಿಟ್ಟ ವ್ಯಕ್ತಿ ರವಿ ಬೆಳಗೆರೆ.

ರವಿಯವರ ಸಮಾಜಮುಖಿ ಕೆಲಸಗಳು ಅನೇಕ. ಹಾಯ್ ಬೆಂಗಳೂರ್ ಪತ್ರಿಕೆಯ ಆರಂಭದಲ್ಲಿ ಅವರೊಂದಿಗೆ ಕೈಜೋಡಿಸಿ ಬೆನ್ನೆಲುಬಾಗಿ ನಿಂತಿದ್ದ, ಪತ್ರಕರ್ತ ಮಿತ್ರ ದಿವಂಗತ ಸೀತಾನದಿ ಸುರೇಂದ್ರರ ಹೆಸರಿನಲ್ಲಿ ಪ್ರತಿವರ್ಷ ಅನೇಕ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡುತ್ತಿದ್ದರು. ಆಸಿಡ್ ದಾಳಿಗೆ ತುತ್ತಾಗಿ ಮುಖವೆಲ್ಲಾ ಸುಟ್ಟುಹೋದ ಹಸೀನಾಗೆ ಓದುಗರ ಸಹಕಾರದಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಬದುಕಿಗೆ ದಾರಿ ಮಾಡಿದರು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಕನ್ನಡ ಯೋಧರ ಮನೆಗಳಿಗೆ ಓದುಗರ ಸಹಕಾರದಿಂದ ಲಕ್ಷಾಂತರ ರೂ ಹಣವನ್ನು ನೀಡಿ, ಅವರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬಿದರು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಕರ್ನಾಟಕಕ್ಕೆ ಮಾದರಿಯಾದ ಡೊನೇಶನ್ ರಹಿತ, ಜಾತಿರಹಿತ ಪ್ರಾರ್ಥನಾ ಶಾಲೆ ಆರಂಭಿಸಿ, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ಒದಗಿಸುವ ಸೌಲಭ್ಯ ನೀಡಿದರು. ಪ್ರಾರ್ಥನಾ ಶಾಲೆಯ ಹೆಗ್ಗಳಿಕೆಯೆಂದರೆ ಶಾಲೆ ಪ್ರಾರಂಭವಾದಾಗಿನಿಂದಲೂ ಎಸೆಸೆಲ್ಸಿಯಲ್ಲಿ ಪ್ರತಿವರ್ಷ ಶೇಕಡ 100 ಫಲಿತಾಂಶ ಪಡೆಯುತ್ತಿರುವುದು. ಅಲ್ಲದೆ ಪ್ರಾರ್ಥನಾ ಶಾಲೆಗೆ ಕೇಂದ್ರ ಸರ್ಕಾರದಿಂದ ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ದೊರೆತಿದೆ.

ರವಿಯವರ ಇನ್ನೊಂದು ಸಾಧನೆ ಎಂದರೆ ‘ಓ ಮನಸೇ..’ ಎಂಬ ಪಾಕ್ಷಿಕ ಪತ್ರಿಕೆ ಹೊರತಂದಿದ್ದು. ಈ ಪತ್ರಿಕೆಯಲ್ಲಿನ ಲೇಖನಗಳು, ಬರಹಗಳು ಬಹಳ ವಿಶಿಷ್ಟವಾಗಿರುತ್ತಿದ್ದವು. ಅನೇಕ ವಿಚಿತ್ರ ವಿಸ್ಮಯ ಸಂಗತಿಗಳು, ಪ್ರೀತಿ ಪ್ರೇಮ ಜೀವನದ ಕುರಿತಾದ ಉತ್ತಮ ಬರಹಗಳು, ಹಾಸ್ಯ ಬರಹಗಳು, ಕವನಗಳು, ಕಥೆಗಳು, ಓದುಗರ ಸಮಸ್ಯೆಗಳಿಗೆ ರವಿಯವರಿಂದಲೇ ಸಿಗುತ್ತಿದ್ದ ಉತ್ತಮ ಸಲಹೆ ಪರಿಹಾರಗಳು ಎಲ್ಲವನ್ನೂ ಒಳಗೊಂಡ ಓ ಮನಸೇ ಪತ್ರಿಕೆ ಕನ್ನಡದ ರೀಡರ್ಸ್ ಡೈಜೆಸ್ಟ್ ಇದ್ದಂತಿತ್ತು. ಪತ್ರಿಕೆ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತಿತ್ತು. ಎಂದೂ ಪತ್ರಿಕೆಗಳನ್ನು ಓದದ ಮಹಿಳೆಯರೂ ಸಹ ಈ ಪತ್ರಿಕೆಯನ್ನು ಓದತೊಡಗಿದರು.

ರವಿಯವರ ಕಾದಂಬರಿ ಹಾಗು ಅವರ ಕೃತಿಗಳಿಗೆ ಬಹಳ ಬೇಡಿಕೆಯಿತ್ತು. ಈಗಲೂ ಇದೆ. ಕನ್ನಡದಲ್ಲಿ ಎಸ್.ಎಲ್. ಭೈರಪ್ಪನವರನ್ನು ಬಿಟ್ಟರೆ ಕೃತಿಗಳ ಬಿಡುಗಡೆಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಓದುಗ ಅಭಿಮಾನಿಗಳನ್ನು ಹೊಂದಿದ್ದ ಲೇಖಕರು ರವಿಬೆಳಗೆರೆಯವರು ಮಾತ್ರ. ಒಂದು ಪೀಳಿಗೆಯ ಜನರಿಗೆ ಓದುವ ರುಚಿಯನ್ನು ಹೊತ್ತಿಸಿದವರು ರವಿಬೆಳಗೆರೆ. ಅವರ ಹೇಳಿ ಹೋಗು ಕಾರಣ, ಮಾಂಡೋವಿ, ಹಿಮಾಲಯನ್ ಬ್ಲಂಡರ್, ಮಾಟಗಾತಿ, ಚಲಂ ಇತ್ಯಾದಿ ಕೃತಿಗಳು ಈಗಲೂ ಬಿಸಿ ದೋಸೆಯಂತೆ ಖರ್ಚಾಗುತ್ತವೆ. ರವಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮ ಕಾರಂತ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರೆ ಪ್ರಶಸ್ತಿಗಳು ಸಂದಿವೆ.

ರವಿ ಬೆಳಗೆರೆಯವರು ಎಷ್ಟು ಒಳ್ಳೆಯ ಬರಹಗಾರರೋ ಅಷ್ಟೇ ಅದ್ಭುತವಾದ ಭಾಷಣಕಾರರು. ಮಾತುಗಾರರು. ಅವರ ಭಾಷಣ ಗಳೆಂದರೆ ಕೇಳುಗರಿಗೆ ರಸದೌತಣ. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರವಿಯವರ ಕ್ರೈಂ ಡೈರಿ ಕಾರ್ಯಕ್ರಮ ಬಹಳ ಪ್ರಸಿದ್ಧವಾಗಿತ್ತು. ಈ ಕಾರ್ಯಕ್ರಮ ಎಷ್ಟು ಪ್ರಸಿದ್ಧಿಯಾಯಿತು ಎಂದರೆ ರವಿಯವರ ನಿರೂಪಣೆಯ ಶೈಲಿಯನ್ನು ಎಲ್ಲರೂ ಅನುಕರಿಸತೊಡಗಿದರು. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಮಧುರ ಹಾಡುಗಳ ಕಾರ್ಯಕ್ರಮ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮದ ನಿರೂಪಣೆ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು. ಹಾಡುಗಳ ಹಿನ್ನೆಲೆಯ ಬಗ್ಗೆ, ಹಾಡಿನ ಗಾಯಕರು, ಸಂಗೀತ ನಿರ್ದೇಶಕರು, ನಟರ ಬಗ್ಗೆ ಅವರದೇ ಶೈಲಿಯಲ್ಲಿ ಹೇಳುತ್ತಿದ್ದ ಅಪರೂಪದ ಮಾಹಿತಿಗಳು, ಘಟನೆಗಳು ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ರವಿಯವರಿಗೆ ಹಳೆಯ ಹಾಡುಗಳು, ಘಜಲ್ ಗಳು, ಶಾಯರಿಗಳು ಇಷ್ಟ. ನೌಶಾದ್, ಗಾಲಿಬ್, ಸಾಹಿರ್ ಲೂದಿಯಾನ್ವಿ, ರಫಿ, ಮುಖೇಶ್, ಜಗಜಿತ್ ಸಿಂಗ್ ರವರ ಹಾಡುಗಳು ಅವರಿಗೆ ಬಹಳ ಇಷ್ಟ. ರವಿಯವರ ಮನಸೇ, ಕನಸೇ ಆಡಿಯೋ ಸೀಡಿಗಳನ್ನು ಕೇಳುತ್ತಿದ್ದರೆ ‘ಜೀವನದ ಬಗ್ಗೆ ಎಷ್ಟು ಚೆಂದ ಹೇಳಿದ್ದಾರೆ ಅಲ್ವಾ’ ಅಂಥ ಎಂಥವರೂ ಮಂತ್ರಮುಗ್ಧರಾಗುತ್ತಾರೆ. ಮತ್ತೆ ಮತ್ತೆ ಅವರ ಮಾತುಗಳನ್ನು ಕೇಳಬೇಕೆನಿಸುತ್ತದೆ.

ರವಿಬೆಳಗೆರೆಯವರನ್ನು ಹಾಗು ಅವರ ಬರಹಗಳನ್ನು ನಾನು 25 ವರ್ಷಗಳಿಂದಲೂ ಆರಾಧಿಸುತ್ತಾ ಬಂದಿದ್ದೇನೆ. ಅವರ ಜೊತೆಗೆ ನನಗೆ ಸ್ನೇಹ ಸಿಕ್ಕಿದ್ದು ಕೆಲವು ವರ್ಷಗಳಿಂದೀಚೆಗೆ ಅಷ್ಟೇ. ಅವರು ನನ್ನನ್ನು ಸದಾ ತಮ್ಮನಂತೆ ಕಾಣುತ್ತಿದ್ದರು. ನನಗೆ ರವಿ ಬೆಳಗೆರೆಯವರು ಯಾವಾಗಲೂ ಪ್ರೀತಿಯ ಅಣ್ಣನೇ. ಅವರ ಪತ್ರಿಕಾ ಕಚೇರಿಗೆ ಹೋದರೆ ಬಹಳ ಪ್ರೀತಿ ವಿಶ್ವಾಸ ತೋರಿಸುತ್ತಿದ್ದರು. “ನೀನು ನನ್ನ ತಮ್ಮ, ಏನಾದರೂ ಹಣದ ಸಹಾಯ ಅಥವಾ ಯಾವುದೇ ಸಹಾಯ ಬೇಕಾದರೆ ನನ್ನನ್ನು ಕೇಳು” ಎನ್ನುತ್ತಿದ್ದರು. ನಾನು ರವಿ ಅಣ್ಣನಿಗೆ, ” ಅಣ್ಣಾ ನನಗೆ ಯಾವ ಸಹಾಯವೂ ಬೇಡ, ನಿಮ್ಮ ಪ್ರೀತಿ ಸಿಕ್ಕಿದೆಯಲ್ಲಾ ಅಷ್ಟು ಸಾಕು ಎನ್ನುತ್ತಿದ್ದೆ”. ನಾನು ಅವರಿಗೆ ಸದಾ ಋಣಿ. ನಮ್ಮ ನಡುವೆ ವಾಟ್ಸಾಪ್, ಮೆಸೆಂಜರ್ ಗಳಲ್ಲಿ ಆಗಾಗ್ಗೆ ಸಂದೇಶಗಳು ವಿನಿಮಯವಾಗುತ್ತಿದ್ದವು. ಅವರಿಗೆ ಇಷ್ಟವಾದ ಹಾಡುಗಳನ್ನು, ವಿಡಿಯೋಗಳನ್ನು, ಜೋಕುಗಳನ್ನು ನನಗೆ ಕಳಿಸುತ್ತಿದ್ದರು. ಅವರ ಪ್ರೀತಿ ಸಾಂಗತ್ಯ ಸಿಕ್ಕಿದ್ದು ನನ್ನ ಭಾಗ್ಯ. ನನಗೆ ಅವರು ಒಬ್ಬರೇ ಅಣ್ಣ ಆದರೆ ರವಿ ಬೆಳಗೆರೆಯವರಿಗೆ ನನ್ನಂತಹ ಸಾವಿರಾರು ಮಂದಿ ತಮ್ಮಂದಿರು. ಅನೇಕ ಅಭಿಮಾನಿ ಓದುಗರಿಂದ ಪ್ರೀತಿಯಿಂದ ಅಣ್ಣ,ಅಪ್ಪ, ಅಂಕಲ್, ಮಾಮಾ, ಬಾಸ್ ಎಂದು ಕರೆಸಿಕೊಳ್ಳುತ್ತಿದ್ದ ಏಕೈಕ ಸಂಪಾದಕ ರವಿ ಬೆಳೆಗೆರೆ ಮಾತ್ರ. ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ಉಂಟುಮಾಡಿರುವ ಶೂನ್ಯತೆ ಸದಾ ಕಾಡುತ್ತಲೇ ಇರುತ್ತದೆ.

ರವಿಬೆಳಗೆರೆಯವರೇ ಹೇಳಿರುವ ಒಂದು ಮಾತಿನಿಂದ ನನ್ನ ಬರಹವನ್ನು ಮುಗಿಸುತ್ತೇನೆ. “ರವಿಬೆಳಗೆರೆಯನ್ನು ಪ್ರೀತಿಸಬಹುದು ಅಥವಾ ದ್ವೇಷಿಸಬಹುದು. ಆದರೆ ನೆಗ್ಲೆಕ್ಟ್ ಮಾಡಲಿಕ್ಕಂತೂ ಸಾಧ್ಯವಿಲ್ಲ.”

-ನಟರಾಜು ಮೈದನಹಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x