ರಾಜರತ್ನಂ ಬೀದಿಯಲ್ಲಿ ಅಡ್ಡಾಡುತ್ತಾ…
ಟಿ.ಪಿ. ಕೈಲಾಸಂ ಗ್ರಾಮ್ಯಭಾಷೆಯನ್ನು ನಾಟಕಗಳಲ್ಲಿ ತಂದರೆ ಜಿ.ಪಿ. ರಾಜರತ್ನಂ ರವರು ಕಾವ್ಯಕ್ಕೆ ತಂದವರು. ಬಡತನದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಕಷ್ಟಪಟ್ಟು ಸಾಂಸಾರಿಕ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳನ್ನು ರಚಿಸಿದ ರಾಜರತ್ನಂ 1904ರಲ್ಲಿ ಮೈಸೂರಿನಲ್ಲಿ ಜನಿಸಿ 1938 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಇವರು 1979 ರಲ್ಲಿ ತೀರಿಕೊಂಡರು. ಶಾಂತಿ ಮೊದಲಾದ ಗ್ರಂಥಸ್ಥ ಭಾಷೆಯ ರೀತಿ ರಚನೆಗಳಿಂದ ಹೊರಬಂದು ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಾಜರತ್ನಂ ರಚಿಸಿದ 'ಯೆಂಡ್ಕುಡ್ಕ ರತ್ನ' ಮೂಡಿ ಬಂದಿದ್ದು 1932-1934ರ ನಡುವಿನ ಕಾಲಘಟ್ಟದಲ್ಲಿ. ಮುಂದೆ ನಾಗನಪದಗಳನ್ನು ಬರೆದರು.
ವಿಪರ್ಯಾಸವೆಂದರೆ ಕನ್ನಡ ಜನಮಾನಸದಲ್ಲಿ ಬೇರು ಬಿಟ್ಟಿರುವ ಯೆಂಡ್ಕುಡ್ಕ ರತ್ನ(ರತ್ನನ ಪದಗಳು)ಕ್ಕೆ ಯಾರೂ ಪ್ರಕಾಶಕರೇ ಸಿಕ್ಕಿರಲಿಲ್ಲವಂತೆ. ಪ್ರಕಟಣೆಗೆ ತಗಲುವ ಖರ್ಚು ಸುಮಾರು 35 ರೂಪಾಯಿ. 35 ಆಣೆ ಕೂಡಾ ಇರಲಿಲ್ಲವಂತೆ ರಾಜರತ್ನಂ ಹತ್ತಿರ. ಹಿಂದಿನ ವರ್ಷ ತನ್ನ ಒಂದು ಕವನಕ್ಕೆ ಬಂದಿದ್ದ ಶ್ರೀ ಅವರ ಚಿನ್ನದ ಪದಕವನ್ನು ಹೆಂಡತಿಗೆ ರಾಜರತ್ನಂ ಕೊಟ್ಟುಬಿಟ್ಟಿದ್ದರು. ಪುಸ್ತಕ ಪ್ರಕಟಿಸಬೇಕೆಂಬ ಇಚ್ಛೆಯಿಂದ ಸಂಕೋಚವಿಲ್ಲದೆ ಹೆಂಡತಿಯನ್ನು ಕೇಳಿದಾಗ – ಇಂತಹ ಪದಕಗಳನ್ನು ಮಾಡಿಸಿಕೊಡುವುದಕ್ಕೆ ನೀವೇ ಇರುವಾಗ, ನಿಮಗೆ ಕೊಡುವುದಕ್ಕೆ ನನಗೇನು ಕಷ್ಟ? ಅಂತಹ ನಿಸೂರಾಗಿ ಕೊಟ್ಟೇ ಬಿಟ್ಟರಂತೆ ಮಹಾರಾಯ್ತಿ! ಆಕೆ ಕೊಟ್ಟ ಶುಭಗಳಿಗೆ, ಆ ಕೊಟ್ಟ ಮಂಗಳದ ಮನಸು, ಒಟ್ಟಿನಲ್ಲಿ ಪುಸ್ತಕ ಪ್ರಕಟವಾಯಿತು.ಮುಂದೆ ಇನ್ನೂ ಬೆಳೆಯಿತು. ಆಕೆ ಕಣ್ಮರೆಯಾಗಿ, ರಾಜರತ್ನಂ ಕಣ್ಮರೆಯಾಗಿಹೋಗಿದ್ದರೂ ಪದಕದ ಸಹಾಯದಿಂದ ಪ್ರಕಟವಾದ 'ಯೆಂಡ್ಕುಡ್ಕ ರತ್ನ' ಬೆಳೆದು 'ರತ್ನನ ಪದಗಳು' ಆಗಿ ಆ ಪುಸ್ತಕ ಇನ್ನೂ ಜೀವಂತವಾಗಿದೆ.
ಪದಕವನ್ನು ಮಾರಬೇಕೆಂದು ಗೊತ್ತಿದ್ದ ಶೆಟ್ಟರೊಬ್ಬರ ಹತ್ತಿರ ರಾಜರತ್ನಂ ಹೋದಾಗ, ಅವರು ಏಕೆ, ಏನು, ಏತ್ತ ಎಂದೆಲ್ಲಾ ವಿಚಾರಿಸಿದರು. ಪದಕವನ್ನು ಅಂಗೈಯಲ್ಲಿ ತೂಕ ಹಾಕಿ – ರಾಜಾ, ಇದನ್ನ ಮಾರಬೇಡ, ಮಾರಿ ಕಳಕೋಬೇಡ. ಕಳಕೊಂಡು ಆಮೇಲೆ ಕೊರಗಬೇಡ. ನಿನ್ನ ಪುಸ್ತಕ ಪ್ರಕಟಿಸೋಕೆ ನಿನಗೆ 35 ರೂಪಾಯಿ ಬೇಕು ತಾನೆ? ಕೊಡುತ್ತೇನೆ, ತೆಗೆದುಕೊ, ಪದಕ ನನ್ನ ಹತ್ತಿರ ಇರಲಿ. ನಿನಗೆ ಯಾವಾಗ ಆಗುತ್ತೋ ಆವಾಗ ನನ್ನ 35 ನನಗೆ ಕೊಟ್ಟು ನಿನ್ನ ಪದಕ ತೆಗೆದುಕೊಂಡು ಹೋಗು ಎಂದರು.
ಪದಕ ಅವರ ಹತ್ತಿರ ಉಳಿಯಿತು, ರತ್ನನಿಗೆ 35 ಸಿಕ್ಕಿತು. ಸಾವಿರ ಪ್ರತಿ 'ಯೆಂಡ್ಕುಡ್ಕ ರತ್ನ' ಪ್ರಕಟವಾಯಿತು. ಸ್ವಂತಕ್ಕೆ ಕೆಲವು ಪ್ರತಿಗಳನ್ನು ಇಟ್ಟುಕೊಂಡು ಉಳಿದದ್ದನ್ನ ಮಾರಿದರು. ಮೈಸೂರಿನ ಪ್ರೋಗ್ರೆಸ್ ಬುಕ್ ಸ್ಟಾಲಿನವರು, ಬೆಂಗಳೂರು ರಾಮಮೋಹನ ಕಂಪೆನಿಯವರೂ ಆ ಪ್ರತಿಗಳನ್ನು ಒಂದಾಣೆಗೊಂದರಂತೆ ಕೊಂಡುಕೊಂಡರು. ಮಾರಿ ನಗದು ಹಣದಲ್ಲಿ ಶ್ರೇಷ್ಠಿ ಮಿತ್ರರಿಗೆ ಅವರ 35 ತಲುಪಿಸಿ ರತ್ನ ತನ್ನ ಪದಕವನ್ನು ಹಿಂದಕ್ಕೆ ಪಡೆದರು. ಯೆಂಡ್ಕುಡ್ಕ ರತ್ನದ ಪ್ರಕಟಣೆ ಕೊಟ್ಟ ಲಾಭಾಂಶದಿಂದ ವಿವೇಕಾನಂದರ ಭಾಷಣಗಳು ಮತ್ತು ಲೇಖನಗಳ ಏಳು ಸಂಪುಟಗಳನ್ನು ರತ್ನ ಕೊಂಡುಕೊಂಡರು. ರಾಜರತ್ನಂ ಅವರೇ ಹೇಳುವ ಪ್ರಕಾರ "ಪುಸ್ತಕದಲ್ಲಿ ಅಲ್ಲಲ್ಲಿ ಅರ್ಧ ಅಕ್ಷರ ಬರುತ್ತೆ. ಪದಾನ ಅಲ್ಲಿಗೇ ನಿಲ್ಲಿಸದೆ, ಮುಂದಿನ ಪೂರ್ಣಾಕ್ಷರಾನೂ ಕೂಡಿಸಿಕೊಂಡರೆ, ಪದ್ಯ, ಇಳಿಜಾರಿನಲ್ಲಿ ನೀರು ಹರಿದಹಾಗೆ ಹರೀತ್ತದೆ; ಇಲ್ಲದೆ ಹೋದರೆ, ಬಟ್ಟೆ, ಕಾಗದ, ಹರಿದಹಾಗೆ ಹರೀತ್ತದೆ" ಇದನ್ನು ಗಮನದಲ್ಲಿಟ್ಟುಕೊಂಡು ನಾವು ಓದಬೇಕಾಗುತ್ತದೆ.
ಬಡತನದ ಬೆಂಕಿಯಲ್ಲೇ ಅರಳಿದ ರತ್ನನ ಪದಗಳು ಎಂಬ ಹೂಗಳ ಪರಿಮಳ ಇಂದಿಗೂ ಇದೆ. ಅವುಗಳಲ್ಲಿನ ಒಂದು ಹೂವೇ 'ರತ್ನನ್ ಪರ್ಪಂಚ'. ಈ ಹಾಡು ಉಪೇಂದ್ರರವರು ನಿರ್ದೇಶಿಸಿ, ನಟಿಸಿದ 'ಎ' ಚಿತ್ರದಲ್ಲಿ ಗುರುಕಿರಣ್‌ರವರ ಸಂಗೀತದಲ್ಲಿ ಎಲ್.ಎನ್. ಶಾಸ್ತ್ರಿರವರ ಧ್ವನಿಯಲ್ಲಿ ಚಿತ್ರಗೀತೆಯಾಗಿರುವುದು ಹರ್ಷದಾಯಕ ಸಂಗತಿ.
ಉಪ್ಪಿಗಿಂತ ರುಚಿ ಬೇರೆ ಇಲ್ಲ
ಉಪೇಂದ್ರರ ಮೂಲಕ ಕನ್ನಡ ಚಲನಚಿತ್ರ ನೌಕೆಯ ದಿಕ್ಕು ಬದಲಾಯಿತು. ಕತೆ, ಚಿತ್ರಕತೆ, ಸಂಭಾಷಣೆಯ ವಿಚಾರದಲ್ಲಿ ಹೊಸ ಆಯಾಮ ಸೃಷ್ಟಿಸಿದ ಇವರು 'ಹತ್ತರೊಳಗೊಂದಾಗು' ಎಂಬ ಮಾತಿನ ವಿರುದ್ಧ ದಿಕ್ಕು ಹಿಡಿದರೆಂದು ಹೇಳಬಹುದು. ಅದೇ ಅವರ ಕ್ರಿಯಾಶೀಲತೆ, ಜನಮನ್ನಣೆ, ಆಸ್ತಿತ್ವ ಎಲ್ಲಕ್ಕೂ ಅಡಿಗಲ್ಲಾಯಿತು. ಹೆಚ್ಚುಕಮ್ಮಿ ಒಂದು ದಶಕದಷ್ಟು ಕಾಲ ’ಉಪೇಂದ್ರಮೇನಿಯಾ’ಕ್ಕೆ ಒಳಗಾಗದ ಯುವಕರೇ ಇರಲಿಲ್ಲ ಎನ್ನಬಹುದು. ಅವರು ಸೃಷ್ಟಿಸುತ್ತಿದ್ದಂತಹ ಪಾತ್ರಗಳು ಕೇವಲ ಪಾತ್ರಗಳಾಗಿರದೆ ವಾಸ್ತವಕ್ಕೆ ಹತ್ತಿರವಾಗಿದ್ದುಕೊಂಡು ಮಧ್ಯಮ, ಕೆಳವರ್ಗದ ಯುವಮನಸ್ಸಿನ ಆಕ್ರೋಶ, ಅಸಹಾಯಕತೆ, ಖಿನ್ನತೆ, ಹೋರಾಟದ ಛಲ, ದೌರ್ಜನ್ಯಕ್ಕೊಳಗಾದ ಹತಾಶೆ, ಸಮಾಜದಲ್ಲಿನ ಹಮ್ಮು-ಬಿಮ್ಮು, ಜಂಭ-ದರ್ಪಗಳನ್ನು ದಿಕ್ಕರಿಸಿ ನಿಲ್ಲುವ ಹಪಾಹಪಿ ಎದ್ದು ಕಾಣುತ್ತಿತ್ತು.
ಮೂಲತಃ ನಿರ್ದೇಶಕರಾಗಿದ್ದ ಉಪೇಂದ್ರ ತಾವು ಚೊಚ್ಚಲ ಬಾರಿಗೆ ತಮ್ಮದೇ ನಿರ್ದೇಶನದಲ್ಲಿ ನಾಯಕ ನಟರಾಗಿ ಭಡ್ತಿ ಪಡೆದುಕೊಂಡ ಚಿತ್ರ’ಎ’. ಎ ಚಿತ್ರದ ಪಾತ್ರ ಉಪೇಂದ್ರರ ನೇರ ಧೋರಣೆ, ದಿಟ್ಟ ಪ್ರತಿಭಟನೆ, ಹಕ್ಕು ಚಲಾವಣೆ ಎಂಬಿತ್ಯಾದಿ ವಿಷಯಗಳಲ್ಲಿ ಮಾತ್ರ ಕಳೆದು ಹೋಗದೆ ನಾಯಕ ತನ್ನ ಹಸಿ ಹಸಿ ಪ್ರೀತಿಯನ್ನು ಖುಷಿ ಖುಷಿಯಾಗಿ ಅನುಭವಿಸುವ ಭಾವೋತ್ಕಟತೆ ನೋಡುಗರಿಗೆ ತಣ್ಣನೆಯ ಸ್ಪರ್ಶ ನೀಡುತ್ತದೆ. ನಾಯಕಿ ತನ್ನ ನಟನ ಪ್ರತಿಭೆಯನ್ನು ಸಾಬೀತುಗೊಳಿಸಲು ತಾನು ಆಡಿದ ನಾಟಕವನ್ನು ಕಂಡು ಬೆರಗಾದ ನಾಯಕನೊಳಗಿನ ನಿರ್ದೇಶಕ ಆಕೆಗೊಂದು ಅವಕಾಶ ನೀಡಿ ದೊಡ್ಡ ನಟಿಯಾಗಲು ದಾರಿ ಮಾಡಿಕೊಡುತ್ತಾನೆ. ಅದೇ ಮುಂದಕ್ಕೆ ಪ್ರೀತಿಯಾಗಲು ಪ್ರೇರಕವಾಗುತ್ತದೆ. ತನ್ನ ಪ್ರೇಯಸಿಯೊಬ್ಬಳಿದ್ದರೆ ಸಾಕು ಬೇರೆ ಏನು ಬೇಕಾಗಿಲ್ಲ ಎಂಬ ಹಂಬಲ ನಾಯಕನ ಎದೆಯಲ್ಲಿ ಬೇರೂರಿ ಕಲ್ಪನಾ ಲಹರಿಗೆ ಜಾರಿ ತನ್ನಷ್ಟಕ್ಕೆ ತಾನೆ ಕನಸು ಕಾಣುತ್ತಾ ತನ್ನೊಳಗಿನ ಭಾವನೆಗಳನ್ನು ಹೊರ ಹಾಕಲು 'ರತ್ನನ್ ಪರ್ಪಂಚ'ದ ಮೊರೆ ಹೋಗುತ್ತಾನೆ. ತನಗೆ ಲಭ್ಯವಿರುವ ಸವಲತ್ತುಗಳಲ್ಲಿ ತೃಪ್ತಿಪಡಲು ಬಯಸುವ ನಾಯಕನ ಅಂತರ್ನಾದ 'ರತ್ನನ್ ಪರ್ಪಂಚ' ಹಾಡಿನ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ತನ್ನ ಪ್ರೀತಿಯ ಚಾಂದಿನಿಯೊಂದಿಗೆ ತಾನು ಕಟ್ಟಿಕೊಳ್ಳಬಯಸುವ ಸರಳ, ಸುಖಿಜೀವನದ ಕಲ್ಪನೆ ನಿರರ್ಗಳವಾಗಿ ಹರಿಯುತ್ತಾ ಹೋಗುತ್ತದೆ.
ಮೂಲತಃ ತಾವು ಗೀತ ರಚನಾಕಾರರಾಗಿದ್ದರೂ ಉಪೇಂದ್ರ ಅವರು ಜಿ.ಪಿ. ರಾಜರತ್ನಂರವರ ಗೀತೆಯನ್ನು ತಮ್ಮ ಚಿತ್ರಕ್ಕೆ ಅಳವಡಿಸಿಕೊಳ್ಳುವುದರ ಮೂಲಕ ಸಾಹಿತ್ಯದ ಬಗ್ಗೆ ತಮಗೆ ಇರುವ ಆಸಕ್ತಿ, ಸಾಹಿತಿಗಳ ಮೇಲಿನ ಅಪಾರ ಗೌರವವನ್ನು ಎತ್ತಿ ಹಿಡಿದಿದ್ದಾರೆ. ನಮ್ಮ ಗ್ರಾಮೀಣ ಭಾಷೆಯ ಕನ್ನಡ ಹಾಡುಗಳನ್ನು ಆಸ್ಪಾದಿಸುವುದರಲ್ಲಿನ ಮಜ ಉಪೇಂದ್ರರಿಗೆ ಗೊತ್ತಿದ್ದರಿಂದಲೇ ಈ ರೀತಿಯ ಪ್ರಯತ್ನಗಳು ನಡೆಯುತ್ತವೆ. ರತ್ನನ್ ಪರ್ಪಂಚ ಸಾಹಿತ್ಯದ ಭಾವವನ್ನು ಅರ್ಥ ಮಾಡಿಕೊಂಡು ಸ್ವರಸಂಯೋಜನೆ ಮಾಡುವಲ್ಲಿ ಗುರುಕಿರಣ್ ಗೆದ್ದಿದ್ದಾರೆ. ತಮ್ಮ ಸಂಗೀತ ನಿರ್ದೇಶನದ ಮೊಟ್ಟ ಮೊದಲ ಚಿತ್ರ 'ಎ'ನಲ್ಲಿಯೇ ತಮ್ಮೊಳಗಿನ ಸಂಗೀತದ ಬಗೆಗಿನ ಅಭಿರುಚಿ, ವಿಭಿನ್ನತೆ, ಪ್ರಯೋಗಾತ್ಮಕ ಮನೋಧರ್ಮವನ್ನು ಮೆರೆದಿದ್ದಾರೆ. ಮಧ್ಯ ಮಧ್ಯದಲ್ಲಿ ಸಂಗೀತದ ಜೊತೆ ಜೊತೆಗೆ 'ಚಾಂದಿನಿ.. ಓ ಚಾಂದಿನಿ' ಎಂಬ ಕೋರಸ್ ನೊಂದಿಗೆ ಹಾಡು ಸಂಪೂರ್ಣವಾಗಿ ಹರಿಯುವಂತೆಯೂ, ಪ್ರೇಕ್ಷಕರ, ಕೇಳುಗರ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ತಮ್ಮದೇ ಆದ ವಿನೂತನ ಶೈಲಿಯಲ್ಲಿ ವಿಶೇಷವಾಗಿ ನಿಲ್ಲುತ್ತಾರೆ. ಅದಕ್ಕೆ ಪೂರಕವಾಗಿ ಎಲ್.ಎನ್. ಶಾಸ್ತ್ರಿಯವರ ಕಂಠ ಕೈ ಜೋಡಿಸಿದೆ. ಒಬ್ಬ ಕುಡುಕ ಕುಡಿದ ಅಮಲಿನಲ್ಲಿ ತನ್ನೊಳಗಿನ ಪ್ರೇಮೊನ್ಮದವನ್ನು ಹೊರ ಹಾಕುವಲ್ಲಿ ಶಾಸ್ತ್ರಿಯವರು ಗೆದ್ದಿದ್ದಾರೆ. ಶಾಸ್ತ್ರಿಯವರು ರತ್ನನ್ ಪರ್ಪಂಚ ಹಾಡಿದ ನಂತರವೂ ಹಾಡಿನ ನಶೆಯಲ್ಲೇ ಇದ್ದರೇನೊ ಅಲ್ಲವೇ? ಇಂತಹ ಅದ್ಭುತ ಗೀತೆಯನ್ನು ನಮಗಾಗಿ ನೀಡಿದ ರಾಜರತ್ನಂರವರಿಗೆ ಋಣಿಯಾಗಿರೋಣ.
ರತ್ನನ ದಾಂಪತ್ಯಗೀತ
ಈ ಭೂಮಿಯ ಮೇಲೆ ತನ್ನಂತೆಯೇ ಮೃಣ್ಮಯರಾದ ಸಣ್ಣ ಜನರ ನಡುವೆ ಬೆರೆತು ಬದುಕಬೇಕು ಎಂಬುವನು ರತ್ನ. ಈ ಬದುಕನ್ನು ಬದುಕುತ್ತಲೇ ಮಣ್ಣಿನಿಂದ ಆದಷ್ಟು ಮೇಲೆದ್ದು, ಸಣ್ಣತನವನ್ನು ಆದಷ್ಟು ಸಣ್ಣ ಮಾಡಿಕೊಂಡು, ನಿನ್ನೆಗಿಂತ ಇಂದು ಇಷ್ಟು ಮೇಲಾಗಿ ಬದುಕಿದರೆ, ಅಷ್ಟರಲ್ಲಿಯೇ ತೃಪ್ತಿ ಪಡುವವನು ರತ್ನ. ಹೀಗೆ, ಬದುಕಿನಲ್ಲಿ ನೆಮ್ಮದಿ ಕಾಣುವುದಕ್ಕೆ, ತೃಪ್ತಿ ಪಡೆಯುವುದಕ್ಕೆ ರತ್ನ ಯಾವ ನಂಬಿಕೆ ಇಟ್ಟುಕೊಂಡು ನಡೆದಿದ್ದಾನೆ ಎಂಬುದು ರತ್ನನ್ ಪರ್ಪಂಚದಲ್ಲಿ ರೂಪುಗೊಂಡಿದೆ.
ಹೇಳಿಕೊಳ್ಳುವುದಕ್ಕೆ ಒಂದು ಊರು. ಮನುಷ್ಯ ಭೂಮಿಯ ಮೇಲೆ ಎಲ್ಲೋ ಒಂದು ಕಡೆ ಹುಟ್ಟುತ್ತಾನೆ. ಹಾಗಂತ ಅಲ್ಲೇ ಇರಬೇಕಂತಿಲ್ಲ. ಬದುಕು ತಂದೊಡ್ಡುವ ಸವಾಲುಗಳನ್ನು ಎದುರಿಸಲು ಕಾಲಿಗೆ ಚಕ್ರ ಧರಿಸಲೇಬೇಕಾಗುತ್ತದೆ. ಆದರೂ ವಿಳಾಸ ಹೇಳಿಕೊಳ್ಳಲು ಒಂದು ಊರು ಬೇಕು. ಇನ್ನು ತಲೆಯ ಮೇಲೆ ಒಂದು ಸೂರು; ಸೂರ್ಯನ ಬಿಸಿಲಿನಿಂದಲೂ, ಮಳೆಯ ಹೊಡೆತದಿಂದಲೂ ಪಾರಾಗಲು ಒಂದು ಸರಳ ಸೂರು. ಅದರಂತೆಯೇ ಮಲಗುವುದಕ್ಕೆ ಭೂಮಿ ತಾಯಿಯ ಮಂಚ; ದುಡಿದು ಬಂದವನು ನೆಲದ ಮೇಲೆ ಮೈಚೆಲ್ಲಿ ಮಲಗಿದರೆ ಸಿಗುವ ಆರಾಮೇ ಬೇರೆ.ಬೆಲೆಬಾಳುವ ಮಂಚಗಳ ಮೇಲೆ ಮಲಗಿಯೂ ನಿದ್ದೆ ಬಾರದೆ ಒದ್ದಾಡುವ ಅನೇಕ ಟೆನ್ಷನ್ನಿನ ಜನರಿದ್ದಾರೆ. ಅದೇ ರೀತಿ ದುರಾಸೆಯ ಭೂತಕ್ಕೆ ಮನಸಿನಲ್ಲಿ ಜಾಗ ನೀಡದೆ ಇದ್ದುದರಲ್ಲೇ ತೃಪ್ತಿಯಿಂದ ಬದುಕುವ ಸರಳ ಜೀವಿಗಳೂ ಇದ್ದಾರೆ. ರತ್ನ ಈ ಕೆಟಗರಿಗೆ ಸೇರಿದ ಆದರ್ಶ ಮನುಷ್ಯ. ಇವನಿಗೆ ಬೇಕಿರೋದು ಮಲಗೋಕೆ ಭೂಮ್ತಾಯಿ ಮಂಚವಷ್ಟೇ.
ಇದಿಷ್ಟೂ ಮನೆಯ ಮಟ್ಟಿಗಾಯಿತು. ಇನ್ನು ಮನೆಯ ಒಳಗೆ? ಕೈ ಹಿಡಿದವಳು ಪುಟ್ನಂಜಿ ನಗುನಗುತ್ತಾ ಉಪ್ಪು ಗಂಜಿ ಕೊಟ್ಟರೆ, ಪೂರ್ತಿಯಾಯಿತು ರತ್ನನ್ ಪರ್ಪಂಚ! ಗೃಹಿಣಿ ಗೃಹಮುಚ್ಯತೋ! ಗೃಹ ಜೀವನದ ಈ ಸಾಮರಸ್ಯವನ್ನು ರತ್ನ-ನಂಜಿ ಇವರ ಹಾಡುಗಳಲ್ಲಿ ಕಾಣಬಹುದು. ರತ್ನ ಹೇಳುತ್ತಾನೆ – ಅನ್ನ ವಸ್ತ್ರಗಳ ಬಡತನ ಏನೇ ಇದ್ದರೂ ಇರಲಿ ಮನಸಿನ ಬಡತನ ಮಾತ್ರ ಇರಬಾರದು. ಅನ್ಯೋನ್ಯವಾದ ಸಂಸಾರದಲ್ಲಿ ಹೆಣ್ಣು ಮರದಂತೆ ಗಂಡು ಬಳ್ಳಿಯಂತೆ, ಆದರೂ ಹೆಣ್ಣು ತಾನು ಮರದಂತೆ ಮೆರೆಯುವುದಿಲ್ಲ. ಅದರಿಂದಲೇ ಗಂಡಿಗೆ ಆ ಹೆಣ್ಣಿನ ಬಗ್ಗೆ ಅಷ್ಟು ಅಭಿಮಾನ! ಮನೆಗಾಗಿ ದುಡಿಯುವ ಜೀವ ಇವನು, ಮನೆಯನ್ನು ನಡೆಸುವ ಜೀವ ಅವಳು. ಇದರಲ್ಲಿ ದೊಡ್ಡದು ಯಾವುದು? ಚಿಕ್ಕದು ಯಾವುದು? ಈಶ್ವರೇಚ್ಚೆಯಂತೆ ಸುಖವಾಗಿ, ತೃಪ್ತಿಯಿಂದ ಬದುಕಿದರೆ – ಅದು ಬದುಕು! ಎಷ್ಟೇ ಸರಸದ ಸಂಸಾರವಾದರೂ, ಮನುಷ್ಯ ಮಾತ್ರರಾದ್ದರಿಂದ ವಿರಸದ ಕ್ಷಣಗಳು ಇಲ್ಲದೇ ಇಲ್ಲ. ಆದರೆ ಅದು ಕ್ಷಣ ಮಾತ್ರ. ದಾಂಪತ್ಯದ ದಾರಿಯನ್ನು ತಿಳಿದವನು, ತನ್ನಾಕೆಯಿಂದ ತಾನು, ತನ್ನ ಮನೆಯಾಕೆಯಿಂದ ಎಂಬುವುದನ್ನು ಒಪ್ಪುತ್ತಾನೆ. ಯಾವ ಗಂಡನ್ನೇ ಆಗಲಿ, ಹಾಲಿನಲ್ಲಿ ಅದ್ದುವವಳು ಅದೇ ಹೆಣ್ಣು, ನೀರಿನಲ್ಲೂ ಅದೇ ನಾರಿ!
ಮೈಮುರಿದು ಬೆವರು ಹರಿಸಿ ದುಡಿಯುವುದರಲ್ಲಿ ರತ್ನನಿಗೆ ವಿಶ್ವಾಸ. ಇನ್ನು, ತಂದದ್ರಲ್ ಒಸಿ ಮುರ್ಸಿ. ದುಡಿದು ತಂದದ್ದರಲ್ಲಿ ಎಲ್ಲವನ್ನು ತನಗಾಗಿ ಮುಗಿಸಿಕೊಳ್ಳುವುದು ಒಂದು ರೀತಿ ಅತಿ. "ಸಾಲ ಮಾಡಿ ಬದುಕು ಕೆಡಿಸಿಕೊಳ್ಳುವುದು ಅದೊಂದು ರೀತಿ ಅತಿ! ಅತಿಗಳನ್ನು ಒತ್ತರಿಸಿ, ಮಿತಿಯನ್ನು ಹಿಡಿದರೆ ಮಾತ್ರ ನೆಮ್ಮದಿ ಎಂಬುದು ಬುದ್ಧನ ಮಧ್ಯಮ ಮಾರ್ಗ! ಅಶೋಕನು ತನ್ನ ಶಾಸನದಲ್ಲಿ ಹೇಳಿದ ಅಲ್ಪವ್ಯಯುತಾ, ಅಲ್ಪಭಾಂಡತಾ – ಸ್ವಲ್ಪವಾಗಿ ಈ ಗೀತೆಯಲ್ಲಿ ಉಂಟು" ಎಂದು ಅಭಿಪ್ರಾಯ ಪಡುವವರೂ ಉಂಟು.
ಹಾಗೆಯೇ, ಹೊಟ್ಟೆ ಬಟ್ಟೆಗಳಿಗೆ ಬಡತನವಿದ್ದರೂ ತೊಂದರೆಯಿಲ್ಲ. ಆದರೆ ಮನಸಿನ ಬಡತನ ಮಾತ್ರ ದೊಡ್ಡ ಮಾರಿಯೆಂದು ರತ್ನ ಹೇಳುತ್ತಾನೆ. ಮನಸಿನ ಬಡತನಕ್ಕೆ ಅಂಟಿಕೊಂಡದ್ದು ನಡತೆಯ ಬಡತನ. ಒಂದು ಕೈಯಿಂದ ಇನ್ನೊಂದು ಕೈಯಿನ ಕೊಳೆ ಕಳೆದು ಹೋಗುವಂತೆ ಮನಸಿನ ಬಡತನ ಕಳೆದಷ್ಟು ನಡತೆಯ ಬಡತನ ಕಳೆಯುತ್ತದೆ. ನಡತೆಯನ್ನು ಕುರಿತ ಈ ನಂಬಿಕೆ, ರತ್ನ ಕಾಲೂರಿ ಸ್ಥಿರವಾಗಿ ನಿಂತು ಹೆಜ್ಜೆಯೆತ್ತಿ ಇಡುವುದಕ್ಕೆ ಸಹಕಾರಿಯಾಗಿರುವಂತೆಯೇ ಕಷ್ಟಕ್ಕೆ ನಗುಮುಖವಾಗಿ ನೆಗೆಯುವ ಪ್ರಕೃತಿಯ ಪರಿಪಾಲನೆ ಉಸಿರಿನ ಸ್ವಾಸ್ಥವನ್ನು ರತ್ನನಿಗೆ ಕಾಪಾಡಿಕೊಟ್ಟಿದೆ.
ಹೀಗೆ ಏನೇ ಪ್ರಯತ್ನ ನಡೆಸಿ, ತನ್ನ ಶುದ್ಧಿಯನ್ನು ತಾನು ಸಾಧಿಸಿಕೊಂಡರು, ದೈವದಕರಾವಲಂಬನವಿಲ್ಲದೆ ಇದೆಲ್ಲ ಆಗುತ್ತಿರಲಿಲ್ಲವೆಂದು ರತ್ನನ ಕಟ್ಟಕಡೆಯ ನಂಬಿಕೆ. ಮತ್ತೇ ಅದೇ ಮಧ್ಯಮ ವರ್ಗ. ದೇವರೆಂಬುದು ರತ್ನ ಕಾಣದ ತತ್ವ ಆದರೂ ರತ್ನನಿಗೆ ಅದರಲ್ಲಿ ಅಪಾರವಾದ ನಂಬಿಕೆ. ಅದು ಇಲ್ಲ ಎಂದವರೊಡನೆ ರತ್ನನಿಗೆ ಚರ್ಚೆ ಬೇಡ. ರತ್ನ ಹೇಳುತ್ತಾನೆ –
ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗಿ ಬಚ್ಛ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಕೊಂಡ್ ಯೋಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!
ಹೀಗೆ ಕವಿ ತನ್ನೊಳಗಿನ ಭಾವನೆಗಳನ್ನು ಬಿಚ್ಚಿಟ್ಟಿರುವುದರ ಕುರಿತು ವಿಮರ್ಶಕರು ಹೇಳಿರುತ್ತಾರೆ. ಚಿತ್ರದ ಕಥಾನಾಯಕನ ಭಾವನೆಗಳಿಗೆ ಸ್ಪಂದಿಸುವ ಈ ಹಾಡು ಜನರನ್ನು ಕಾಡಿದೆ, ಕಾಡುತ್ತಲೇ ಇದೆ.
ರತ್ನನ್ ಪರ್ಪಂಚ
ಯೇಳ್ಕೊಳ್ಳಾಕ್ ಒಂದ್ ಊರುತಲೇಮೇಗ್ ಒಂದ್ ಸೂರುಮಲಗಾಕೆ ಬೂಮ್ತಾಯಿ ಮಂಚ ;ಕೈ ಯಿಡದೋಳ್ ಪುಟ್ನಂಜಿನೆಗನೆಗತ ಉಪ್ಗಂಜಿಕೊಟ್ರಾಯ್ತು ರತ್ನನ್ ಪರ್ಪಂಚ!ಅಗಲೆಲ್ಲ ಬೆವರ್ ಅರ್ಸಿತಂದದ್ರಲ್ಲ್ ಒಸಿ ಮುರ್ಸಿಸಂಜೇಲಿ ವುಳಿ ಯೆಂಡ ಕೊಂಚ ;ಯೀರ‍್ತ ಮೈ ಝುಂ ಅಂದ್ರೆವಾಸ್ನೆ ಘಂ ಘಂ ಅಂದ್ರೆತುಂಭೋಯ್ತು ರತ್ನನ್ ಪರ್ಪಂಚ !ಏನೋ ಕುಸಿಯಾದಾಗಮತ್ತ್ ಎಚ್ಚಿ ಓದಾಗಅಂಗೇನೆ ಪರಪಂಚದ್ ಅಂಚ ;ದಾಟ್ಕಂಡಿ ಆರಾಡ್ತಕನ್ನಡದಲ್ ಪದವಾಡ್ತಇಗ್ಗೋದು ರತ್ನನ್ ಪರ್ಪಂಚ !ದುಕ್ಕಿಲ್ಲ ದಾಲಿಲ್ಲನಮಗ್ ಅದರಾಗ್ ಪಾಲಿಲ್ಲನಾವ್ ಕಂಡಿಲ್ಲ್ ಆ ತಂಚ ವಂಚ ;ನಮ್ಮಸ್ಟಕ್ ನಾವಾಗಿಇದ್ದಿದ್ರಲ್ಲ್ ನಾವಾಗಿಬಾಳೋದು ರತ್ನನ್ ಪರ್ಪಂಚ !ಬಡತನ ಗಿಡತನಏನಿದ್ರೇನ್ ? ನಡತೇನಚೆಂದಾಗ್ ಇಟ್ಕೊಳ್ಳಾದೆ ಅಚ್ಛ !ಅಂದ್ಕೊಂಡಿ ಸುಕವಾಗಿಕಸ್ಟಕ್ ನೆಗಮೊಕವಾಗಿನೆಗೆಯೋದೆ ರತ್ನನ್ ಪರ್ಪಂಚ !ದೇವ್ರ್ ಏನ್ರ ಕೊಡಲಣ್ಣಕೊಡದಿದ್ರೆ ಬುಡಲಣ್ಣನಾವೆಲ್ಲ ಔನೀಗೆ ಬಚ್ಛ !ಔನ್ ಆಕಿದ್ ತಾಳ್ದಂಗೆಕಣ್ ಮುಚ್ಕೊಂಡ್ ಯೇಳ್ದಂಗೆಕುಣಿಯಾದೆ ರತ್ನನ್ ಪರ್ಪಂಚ!
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ
(ರಾಜರತ್ನಂ ಅವರ ರೇಖಾಚಿತ್ರ:ಉಪೇಂದ್ರಪ್ರಭು)
Ratnana Dampatya geetha vishleshane tumba hidisithu…
Bahala chendada lekhana sir. Hrudaya Shiva Hrudayadinda baredaddannu odugana Hrudayakke talupade iralu saadhyavilla nanage Panju needuva aksharada Belaku bahala acchumechhu.. . Dhanyavadagalu.
Estavaythu nimma vimarshe
ಚಿತ್ರ ಸಾಹಿತಿಯ ಬರಹ-ಕಲಾವಿದರ ಚಿತ್ರ! ಜುಗಲ್ಬಂದಿ ಚೆನ್ನಾಗಿದೆ! 🙂 ಎರೆಡೂ ಇಷ್ಟವಾಯ್ತು
nice article
ಧನ್ಯವಾದಗಳು ಎಲ್ಲರಿಗೂ