ನಮ್ಮ ಭಾರತ ದೇಶದಾದ್ಯಂತ ಸಡಗರದಿಂದ ಆಚರಿಸಲ್ಪಡುವ ರಂಗು ರಂಗಿನ ಹಬ್ಬ ಹೋಳಿಹಬ್ಬ. ಮಾಘ -ಫಾಲ್ಗುಣ ಮಾಸಗಳ ಶಶಿರ ಋತು ಮುಗಿದು ಚೈತ್ರ ಮಾಸ ವಸಂತ ಋತು ಕಾಲಿಡುವಾಗ ಹೊಸಚಿಗುರು ಮೂಡಿ,ಹೂಗಳು ಅರಳಿನಿಂತು ನಲಿಯುವಾಗ ನಾವುಗಳು ಸಂತಸದಿಂದ ರಂಗಿನಾಟವನ್ನು ಆಡಲು ತೊಡಗುತ್ತೇವೆ. ಪಾಲ್ಗುಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ ದಿನದಂದು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಒಂದೊಂದು ರಾಜ್ಯದಲ್ಲೂ ಅದರದೆಯಾದ ನಾಮಾವಳಿಗಳಿಂದ ಆಚರಿಸುವರು. ನಮ್ಮಲ್ಲಿ "ಹೋಳಿಹಬ್ಬ, ಕಾಮನ ಹಬ್ಬ ಅಥವಾ ಕಾಮದಹನ ,ರಂಗಿನ ಹಬ್ಬ(ಬಣ್ಣಗಳ ಹಬ್ಬ ) "ಎನ್ನುತ್ತೇವೆ, ಲಂಬಾಣಿ ಜನಾಂಗದವರು ' ಧೂಂಡಾ' ಎನ್ನುತ್ತಾರೆ. ಹರ್ಯಾಣದಲ್ಲಿ 'ದುಲಂದಿ ಹಬ್ಬ', ಕಲ್ಕತ್ತಾದಲ್ಲಿ 'ದೋಲ್ ಪೌರ್ಣಮಿ ' ಎಂದು ಆಚರಿಸುತ್ತಾರೆ. ಇತರ ಹಬ್ಬಗಳಲ್ಲಿ ಮಾಡುವಂತೆ ವಿಶೇಷ ಪೂಜೆ ಪುರಸ್ಕಾರ, ಉಪವಾಸ ಅಂತ ಹೋಳಿ ಹಬ್ಬದಲ್ಲಿ ಮಾಡುವುದಿಲ್ಲ. ಹೋಳಿ ಎಂದರೆ ಸಂಸ್ಕೃತದಲ್ಲಿ 'ಸುಡು ' ಎಂದರ್ಥವಿದೆ. ಹೋಳಿ ಹಬ್ಬ ದುಷ್ಟರ ದಹನ ಮಾಡುವುದು.ಒಂದೊಂದು ಹಬ್ಬಗಳಿಗೂ ಅದರದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆ(ಇತಿಹಾಸ) ಇದೆ. ಹೋಳಿಹಬ್ಬಕ್ಕೆ ಸಂಬಂದಿಸಿದಂತೆ ಕೆಲವು ಕಥೆಗಳು ನಮಗೆ ತಿಳಿದುಬರುತ್ತವೆ.
ಮೊದಲನೆಯಾದಾಗಿ ಕಾಮದಹನವಾದ ಕಥೆ: ಪೂರ್ವಕಾಲದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರ ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣ ಬಾರದಿರಲಿ,ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂದು ಬ್ರಹ್ಮನಲ್ಲಿ ವರವನ್ನು ಪಡೆದುಕೊಂಡಿದ್ದ, ಭೋಗಸಮಾದಿಯಲ್ಲಿ ತಪೋಚಿತ್ತನಾಗಿ ಕುಳಿತ ಶಿವ, ಪಾರ್ವತಿಯ ಜೊತೆ ಅನುರಕ್ತನಾಗಲು ಸಾದ್ಯವಿರಲಿಲ್ಲ. ದೇವತೆಗಳು ಉಪಾಯಮಾಡಿ ಶಿವಪಾರ್ವತಿಯರ ನಡುವೆ ಮೋಹವಾಗುವಂತೆ ಮಾಡಲು ಮನ್ಮಥ (ಕಾಮ)ನನ್ನು ಬೇಡಿದರು. ಕಾಮ ಮತ್ತು ಅವನ ಪತ್ನಿ ರತಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಶಿವನ ತಪೋಭೂಮಿಯಾದ ಹೇಮಕೂಟಕ್ಕೆ ಬಂಡ ಕಾಮನು ಶಿವನ ಎದುರು ನೃತ್ಯ ಮಾಡಿ, ಹೂ ಬಾಣಗಳನ್ನು ಬಿಟ್ಟು ಶಿವನ ತಪಸ್ಸಿಗೆ ಭಂಗವನ್ನುಂಟು ಮಾಡುತ್ತಾನೆ. ಇದರಿಂದ ಕುಪಿತನಾದ ಶಿವ ತನ್ನ ಮೂರನೇ ಕಣ್ಣಿನಿಂದ ಕಾಮನನ್ನು ಸುತ್ತು ಭಸ್ಮ ಮಾಡಿದನು. ರತಿಯು ದುಃಖದಿಂದ ಅಳುತ್ತಿದ್ದಳು. ಕೊನೆಗೆ ಪಾರ್ವತಿ ಕಠೋರ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡು ತಾನು ರತಿಗೆ ಮಾತು ಕೊಟ್ಟಿರುವೆ ಆಕೆಯ ಪತಿ ಕಾಮನನ್ನು ನಿಮ್ಮಿಂದ ಬದುಕಿಸಿಕೊಡುವೆನೆಂದು ಹೇಳುತ್ತಾಳೆ. ಶಾಂತನಾದ ಶಿವ ದಯೆ ತೋರಿ ಕಾಮನು ತನ್ನ ಸತಿ ರತಿಯೊಡನೆ ಮಾತ್ರ ಶರೀರಿ(ಅನಂಗ)ಯಾಗಿರುವಂತೆ ರತಿಯ ಬೇಡಿಕೆಯನ್ನು ಈಡೇರಿಸಿದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ದ ಪೌರ್ಣಮಿಯ ದಿನವಾದ್ದರಿಂದ ಇದನ್ನು ಕಾಮನ ಹುಣ್ಣಿಮೆಯೆಂದು ಆಚರಿಸುತ್ತಾರೆ.
ಇನ್ನೊಂದು ಕಥೆಯೆಂದರೆ ಹೋಲಿಕಾ ಸಂಹಾರ : ನಾರದ ಪುರಾಣದಲ್ಲಿ ಹಿರಣ್ಯ ಕಶ್ಯಪು ನೆಂಬ ಅಸುರರ ರಾಜ, ಹರಿಯ ವೈರಿಯಾಗಿದ್ದ. ತನ್ನ ಮಗ ಪ್ರಹ್ಲಾದ ಹರಿಭಕ್ತನಾಗಿದುದರಿಂದ ತನ್ನ ಕರುಳ ಕುಡಿಯನ್ನೇ ಕೊಲ್ಲಲು ನಾನಾ ಪರಿಯಲ್ಲಿ ಪ್ರಯತಿಸಿ ವಿಫಲನಾಗುತ್ತಾನೆ. ಕೊನೆಗೆ ಅಗ್ನಿಯಿಂದ ರಕ್ಷಣೆ ಕವಚವನ್ನು ವರವಾಗಿ ಪಡೆದಿದ್ದ ಸಹೋದರಿ ಮೊರೆ ಹೋಗುತ್ತಾನೆ. ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನೆತ್ತಿಕೊಂಡು ಅಗ್ನಿಕೊಂಡ ಪ್ರವೆಶಿಸುತ್ತಾಳೆ. ಅವಳ ದುರದೃಷ್ಟ ಆ ಕವಚ ಗಾಳಿಗೆ ಹಾರಿ ಪ್ರಹ್ಲಾದನಿಗೆ ಹೊದಿಕೆಯಾಗಿ ಹೋಲಿಕಾ ಬೆಂಕಿಯಲ್ಲಿ ಸುತ್ತು ಭಸ್ಮವಾಗುವಳು. ಪಡೆದ ವರವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸದೆ ಕೆತ್ತದಕ್ಕೆ ಉಪಯೋಗಿಸಿದರೆ ಹೀಗೆ ಆಗುವುದು. ಕೆಡುಕಿಗೆ ಯಾವತ್ತೂ ಸೋಲು, ನಾಶವೇ ಕಾದಿದೆ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ದ ಪೌರ್ಣಮಿಯ ದಿನವಾದ್ದರಿಂದ ಇದನ್ನು ಹೋಲಿಕಾ ಸಂಹಾರ ಎನ್ನುತ್ತಾರೆ.
ಮತ್ತೊಂದು ಕಥೆಯೆಂದರೆ ರಾಧ ಕೃಷ್ಣರ ಕಥೆ : ಕೃಷ್ಣಾ ಮತ್ತು ರಾಧೇ ಹಾಲಿನಲ್ಲಿ ಸ್ನಾನ ಮಾಡುತ್ತಾರೆ. ಬಿಳಿ ಬಣ್ಣದ ರಾಧೆಯನ್ನು ನೀಲಿಬಣ್ಣದಲ್ಲಿ ಮುಳುಗಿಸಬೇಕೆಂದು ಕೃಷ್ಣ ಅವಳ ಮೇಲೆ ಬಣ್ಣ ಎರೆಚಿದ ಹಾಗೂ ತನ್ನ ಗೊಪಿಕೆಯರಿಗೂ ಪಿಚಕಾರಿ ಹಾರಿಸುತ್ತ ಬಣ್ಣದೋಕುಳಿ ಎರಚಿದ. ಬೇಡ ಕೃಷ್ಣ ರಂಗಿನಾಟ ಎಂಬಂತೆ ತುಂಟನಾಗಿದ್ದ ನಮ್ಮ ಚೋರ ಕೃಷ್ಣ. ( ಜೈನರು ಹೋಳಿ ಹಬ್ಬದಂದು ರಾಧ ಕೃಷ್ಣನನ್ನು ಪೂಜಿಸಿ ಭಾಂಗ್ ಅನ್ನು ಕುಡಿಯುತ್ತಾ ಸಂಭ್ರಮದಿಂದ ಹೋಳಿ ಆಚರಿಸುತ್ತಾರೆ ).
ಮತ್ತೊಂದು ಕಥೆಯೆಂದರೆ ರತಿ ಮನ್ಮಥನ ಕಾಮ ಶಾಪ : ಕಾಲ ವೇಳೆ ಲೆಕ್ಕಿಸದ ಪ್ರೇಮಮಹಿಗಳಾದ ರತಿ ಮನ್ಮಥ ತಮ್ಮ ಪ್ರೇಮಾಲಾಪದಲ್ಲಿ ಮುಳುಗಿರುತ್ತಾರೆ. ಅಲ್ಲಿಗೆ ಬಂದ ಒಬ್ಬ ಋಷಿ ಇವರ ಅಕಾಲ ಸಂಯೋಗ ಕಂಡು ಕೆರಳಿ ಶಾಪ ನೀಡಿದ. ಭೂಲೋಕದಲ್ಲಿ ಕಾಮ (ಮನ್ಮಥ) ನು ಬ್ರಾಹ್ಮಣ ಕುಲದಲ್ಲಿ ಜನಿಸಿದ, ರತಿಯು ಹರಿಜನ ಕುಲದಲ್ಲಿ ಜನಿಸಿದಳು. ಒಮ್ಮೆ ರಸ್ತೆಯಲ್ಲಿ ರತಿಯನ್ನು ಕಂಡು ಮೋಹಗೊಂಡ ಕಾಮನು ತನ್ನ ವಂಶದ ಸಂಸ್ಕೃತಿಯನ್ನು, ತನ್ನವರನ್ನು ತೊರೆದು ರತಿಯ ಮನೆ ಸೇರಿದ. ಅಲ್ಲಿ ಬಡತನದಿಂದ ಕಂಗಲಾಗಿ ಹಸಿವಿನ ಬಾದೆ ತಾಳಲಾರದೆ ಪ್ರಾಣ ಬಿಟ್ಟ. ಅವನ ಅಂತ್ಯ ಸಂಸ್ಕಾರ ಮಾಡಲು ಕಟ್ಟಿಗೆ ಇಲ್ಲದಿದ್ದಾಗ ಆತನ ಗೆಳೆಯರು ಕಟ್ಟಿಗೆ ಬೆರಣಿ ಸಂಗ್ರಹಿಸಿ ಆತನ ಅಂತ್ಯ ಸಂಸ್ಕಾರ (ಕಾಮ ದಹನ )ಮುಗಿಸಿದರು ಎಂಬ ಹಿನ್ನೆಲೆಯು ಸಹ ಇದೆ. ಈ ರೀತಿಯ ಪೌರಾಣಿಕ ಹಿನ್ನೆಲೆಯನ್ನು ನಾವು ಕಾಣಬಹುದು.
ಕಾಮಣ್ಣ ಮಕ್ಕಳು ಕಳ್ಳ ನನ್ನ ಮಕ್ಕಳು
ಏನನ್ನು ಕದ್ದರೋ.. ಸೌದೆ ಬೆರಣಿ ಕದ್ದರು
ಏತಕ್ಕೆ ಕದ್ದರು ಕಾಮಣ್ಣನ ಸುಡೋಕೆ ಕದ್ದರು,,,,,,
ಹೀಗೆಲ್ಲಾ ಹೇಳಿಕೊಂಡು ನಮ್ಮ ಜನತೆ ಬಣ್ಣ ಎರಚುತ್ತಾ ಬೀದಿ ಬೀದಿ ಗಳಲ್ಲಿ ಅರಚುತಾ ಸಿಕ್ಕವರಿಗೆಲ್ಲ ಬಣ್ಣ ಎರಚುವರು. ಕೆಲವರಿಂದ ಬೈಗುಳ ಕೇಳುವರು. ಕೇವಲ ಉತ್ತರ ಭಾರತೀಯರೂ ಆಚರಿಸುತ್ತಿದ್ದ ಹೋಳಿ ಹಬ್ಬ ವನ್ನು ದೂರದರ್ಶನದಲ್ಲಿ ನೋಡುತ್ತಿದ್ದ ನಮ್ಮ ದಕ್ಷಿಣಾ ಭಾರತೀಯರೂ ಸಹ ಇಂದು ಈ ಮೋಜಿನ ರಂಗಿನ ಹಬ್ಬವನ್ನು ಆಚರಿಸುತ್ತಾರೆ. ಗ್ರಾಮೀಣ ಪ್ರದೇಶಗಳ ಬೀದಿ ಬೀದಿಯಲ್ಲೆಲ್ಲಾ ಬಣ್ಣದೋಕುಳಿ, ಜನರು ಸಹ ಬಣ್ಣ ಮಯ. ವರ್ಣಭೇದ, ಭೇದ -ಭಾವಗಳಿಲ್ಲದೆ ಒಬ್ಬರಿಗೊಬ್ಬರು ಬಣ್ಣ ಎರಚಿ ಎಲ್ಲರೂ ಒಂದೇ ಎಂಬಂತೆ ಮೋಜು ತರುವ ಹರ್ಷದ ಹಬ್ಬ…..
ಜನತೆಗೊಂದು ಮಾಹಿತಿ : ರಾಸಾಯನಿಕಯುಕ್ತ ಬಣ್ಣದಿಂದ ಓಕಳಿ ಯಾಡಬೇಡಿ. ಶರೀರಕ್ಕೆ, ಆರೋಗ್ಯಕ್ಕೆ ಹಾನಿಕಾರ. ಮತ್ತೊಬ್ಬರಿಗೆ ತೊಂದರೆಯುಂಟು ಮಾಡದೆ ಹೋಳಿಹಬ್ಬ ವನ್ನು ಆಚರಿಸಿ. ಸಿಕ್ಕವರಿಗೆ ಆ ದಿನ ಮೊಟ್ಟೆ ಹೊಡೆದು ಬಣ್ಣ ಎರಚಿ ತೊಂದರೆ ಕೊಡಬೇಡಿ.
*****
ವಿಚಾರಗಳು ಸರಿಯಾಗಿ ಇಲ್ಲ..
ಇನ್ನು ಬಹಳ ಹೋಳಿ ಬಗ್ಗೆ ತಿಳಿಯುವುದ್ದಿದೇ,,