ರೈಲ್ವೆ ಸ್ಟೇಷನ್ ನಿಂದ ಹೊರಗೆ ಬಂದರೆ ಗೌಜೋ ಗೌಜು. ಚಾಯ್ ವಾಲಾಗಳ ಸ್ಟಾಲುಗಳು, ಗಿಜಿಗಿಜಿ ರಸ್ತೆ, ಬದಿಯಲ್ಲಿ ತಳ್ಳುಗಾಡಿಗಳನ್ನು ಬೆಳಿಗ್ಗೆಯಿಂದ ಸಂಜೆವರೆಗೂ ತಳ್ಳಿಯೇ ಜೀವ ಮೆತ್ತಗಾದವರ ಬದುಕನ್ನು ಢಾಳಾಗಿ ಬಿಂಬಿಸುತ್ತದೆ… ಎರಡುವರೆ ಅಡಿ ಜಾಗ ಸಿಕ್ಕುಬಿಟ್ಟರೆ ಸಾಕು, ಬೀಡಿ ಸಿಗರೇಟು ಮಾರಿಯಾದರೂ ಹೆಂಗೋ ಬದುಕು ಸಾಗುತ್ತದೆನ್ನುವ ನಿರೀಕ್ಷೆಯ ಮುಖಗಳು… ದಾರಿಗುಂಟ ರೈಲಲ್ಲಿ ಬ್ಯಾಗನ್ನೇ ಕಳೆದುಕೊಂಡ ಜೋತುಬಿದ್ದ ಕಣ್ಣುಗಳು.. ಪರ್ಸು, ದುಡ್ಡು ಇರಲಿ ಜೊತೆಗಿದ್ದವರೇ ಕಾಣದ ಊರಲ್ಲಿ ಇಳಿಸಿ ಮರೆಯಾದವರನ್ನು , ಅವರ ಅಡ್ರೆಸ್ಸನ್ನೂ ಹೇಳಲು ತಡಬಡಾಯಿಸುವ ಅತ್ತ ಬೇಡಲೂ ಮನಸ್ಸಾಗದ ಇತ್ತ ಮನಸ್ಸು ಬಿಚ್ಚಿ ಆದ ತೊಂದರೆಗಳನ್ನು ಹೇಳಲೂ ಆಗದ ಎ.ಪಿ.ಎಲ್. ಕಾರ್ಡ್ ನಂಥ ಮನುಷ್ಯರು… ಆದದ್ದಾಗಲಿ ತಮ್ಮ ಸಂಕಟ, ದು:ಖ ನೋವು ಹತಾಷೆ ಒತ್ತರಿಸಿ ಬಂದು ” ಯಪ್ಪಾ , ಕರ್ಕಂಡ್ ಬಂದೋರು ದಿಕ್ ತಪ್ಸಿ ಕೈಬಿಟ್ಟಾರ, ನಮ್ಮೂರು ಇಂಥಾದ್ದು, ಇಪ್ಪತ್ತೇ ರುಪಾಯಿ ಕೊಡು, ಊರು ಸೇರ್ಕಂತೀನಿ, ಪುಣ್ಯ ಬರ್ತೈತಿ” ಅನ್ನೋ ವೃದ್ಧ ಹೆಂಗಸರು, ಮುದುಕರು. ದಿನ ಬೆಳಗೆದ್ದರೆ, ಇಂಥ ನೂರು ಮಂದಿ ಕಂಡು ಮರುಗುವ ಅವತ್ತಿನದವತ್ತಿಗೆ ದುಡಿದು ತಿನ್ನುವ ಬೀದಿ ವ್ಯಾಪಾರಿಗಳು… ಯಾರಿಲ್ಲ ಹೇಳಿ ಇಲ್ಲಿ?
ಇಂಥ ಬೀದಿಯಲ್ಲಿ ನನ್ನದೂ ಒಂದು ಮಹಡಿ ಮೇಲಿನ ಬಾಡಿಗೆ ರೂಮು. ಪಕ್ಕದಲ್ಲೇ ಆಂಜನೇಯ ಮತ್ತು ಅಂಬಾಭವಾನಿ ದೇವಸ್ಥಾನ… ನವರಾತ್ರಿ ದಿನಗಳಲ್ಲಿ ಬೆಳಗಾದರೆ ಸ್ತುತಿ ರಾತ್ರಿ ಸರಹೊತ್ತಿನವರೆಗೂ ಡಿ.ಜೆ ಸೌಂಡಿನ ಗಮ್ಮತ್ತು, ಅದರ ಸುತ್ತ ಆಚರಣೆ ಹೆಸರಿನ ಕುಣಿತದ ಜನ ಜಂಗುಳಿ ಹುಮ್ಮಸ್ಸು… ನಾಲ್ಕರಲ್ಲಿ ಮೂರು ದಿಕ್ಕಿಗೂ ಮಸೀದಿಗಳಲ್ಲಿ ಅಜಾನ್ ಕೂಗು ಮತ್ತು ನಮಾಜು ಮಾಡಿ ಮುಖ ಸವರಿಕೊಂಡು ರೋಡಿಗಿಳಿದು ಸಾಗುವವರ ಸಾಲು.
ಸೋಮಾರಿತನ ಬೇಸಿಗೆ ಕಳೆದು ಜಡಿದ ಮಳೆಯ ನೆಪ ದಾಟಿ ಸರಿಯಾಗಿ ಚಳಿಗಾಲದಲ್ಲಿ ದೇಹಕ್ಕೆ ವಾಕಿಂಗ್ ನೆನಪಿಸಿದವರು ಮೂರು ವರ್ಷದಿಂದ ಗದರುತ್ತಿರುವ ವೈದ್ಯರು…. ಹೀಗಾಗಿ ನಾನೂ ಅಲಾರ್ಮ್ ಏನೋ ಇಟ್ಟು ಬೆಳಿಗ್ಗೆ ಐದಕ್ಕೇ ಎದ್ದೇಳಲೆಂದೇ ಮಲಗಿರುತ್ತೇನೆ… ಅದು ಬಡಿದುಕೊಳ್ಳುವ ಮುಂಚೆಯೇ ಎಚ್ಚರವಾಗಿ ಬೀದಿಗಿಳಿಯುತ್ತೇನೆ….
ಅದೇ ರಸ್ತೆ, ಅದೇ ಅಜಾನ್ ಕೂಗು, ದೇವಿ ಸ್ತುತಿ, ಟೀ ಸೋಸುವ ಇರಾನಿ ಚಾಯ್ ಸ್ಟಾಲ್ ದಾಟುವ ಮಧ್ಯೆದಲ್ಲೇ ಸಿಗುತ್ತೆ, ಒಬ್ಬ ಅರವತ್ತರ ಆಸುಪಾಸಿನ ಮುದುಕನ ಬೀಡಾ ಅಂಗಡಿ… ಆತನ ಗಳಿಗೆಗೊಂದರಂತೆ ನಡೆದುಕೊಳ್ಳುವ ತಿಕ್ಕಲುತನದ ಬುದ್ಧಿಗೆ ಗಿರಾಕಿಗಳೂ ಕಮ್ಮಿಯೇ… ನಾನೂ ಅವನ ಗೂಡಂಗಡಿಯ ಪಾನಿನ ಗಿರಾಕಿಯೇ…. ನನ್ನದೂ ತಿಕ್ಕಲುತನವಾ?! ಗೊತ್ತಿಲ್ಲ…
ಆದರೆ, ಅದೊಮ್ಮೆ ನನ್ನ ರೂಮಿನ ಹುಡುಗ ಏನೋ ಖರೀದಿಸಲು ಹೋಗಿದ್ದಾನೆ. ಸಹಜವೆಂಬಂತೆ “ಏನೇನು ಸಿಗುತ್ತವೆ?” ಎಂದಿದ್ದಾನೆ.. ಈ ಹುಡುಗನನ್ನು ನೋಡಿ ಹೇಗನ್ನಿಸಿತೋ ಏನೋ “ಒಳ್ಳೇ ಕಂಪ್ನಿ ಕಾಂಡಮ್ ಭೀ ಮಿಲ್ತಾ ಹೈ…. ದೂ ಕ್ಯಾ?!” ಅಂದಿದ್ದಾನೆ ಮುದುಕ.. ” ಹಂಗೇ ಬಳೇ ಸದ್ದು ಕೇಳ್ಸಂಗೆ ಹೆಂಗಸ್ರನ್ನೂ ನಿಂದ್ರಿಸಿಬಿಡು, ಯ್ಯಾಪಾರ ಜೋರಾಕ್ಕೇತಿ” ಅನ್ನೋ ರೇಂಜಿನ ಸಿಟ್ಟಲ್ಲಿ ಬೈದು ಬಂದಿದ್ದಾನೆ…ಅವರ ವ್ಯಾಪಾರ, ದುಡಿಮೆ, ಬರುವ ಗಿರಾಕಿಗಳು ಅವರ ಮಾತು, ತಿಳುವಳಿಕೆಯನ್ನು ಆ ಸಮಯಕ್ಕೆ ಹೊಂದಿಸುವುದಾಗಿರುತ್ತದೆ… ಅದು ಅವರ ಬದುಕು.
ಆದರೆ, ತುಂಬಾ ದಿನಗಳಿಂದ ಕೇಳುತ್ತಲೇ ಬಂದಿದ್ದೇನೆ. ಅವರ ಬಗ್ಗೆ ಹೇಳುವವರಲ್ಲಿ ಒಂದು ರೀತಿಯ ಎಕ್ಸೈಟ್ ನೆಸ್ ಇರುತ್ತೆ. ಅಸಹ್ಯ ನೋಡಿದ್ದೇನೆ. ನಮ್ಮನ್ನು ಯಾವಾಗ ಏನು ಮಾಡುತ್ತಾನೋ, ನಮ್ಮ ಬಗ್ಗೆ ಏನು ದೂರು ಕೊಡುತ್ತಾನೋ? ಎನ್ನುವ ಆತಂಕ. ಆ ಅಧಿಕಾರಿಯ ಅದ್ಭುತ ಡ್ರಾಫ್ಟ್ ಗಳನ್ನು ತಲ್ಲೀನವಾಗಿ ಮೇಲಿಂದ ಕೆಳಗೆ ಓದುತ್ತಾ ಬರುವುದರೊಳಗಾಗಿ ಮೇಲಿನದೇ ಮರೆತು ಹೋಗಬಹುದು ಅಥವಾ ಮೇಲಿನ ಸಾಲುಗಳು ಯಾವುದಕ್ಕೂ ಸಂಭಂಧವೇ ಇಲ್ಲವೇನೋ ಎನ್ನುವಷ್ಟು ಕಣ್ ಫ್ಯೂಜು..
ಒಬ್ಬ ಅಧಿಕಾರಿ ಹುದ್ದೆಯಲ್ಲಿ ಇದ್ದವನು ತನ್ನದೇ ಅಧಿಕಾರ, ತಿಳುವಳಿಕೆ, ಜ್ಞಾನ ಮತ್ತು ಯೋಗ್ಯತೆಯಿಂದ ತನ್ನ ಕೈಕೆಳಗಿನ ನೌಕರರನ್ನು ನಿಭಾಯಿಸಬೇಕೇ ಹೊರತು ತನ್ನದೆಂಬ ಸ್ವಂತ ಬುದ್ಧಿ ಇಲ್ಲದೇ ಒಂದು ಸಾಲು ಬರೆಯಲು ಸಹ ಯೋಗ್ಯತೆ ಇಲ್ಲದವನು ತನಗೆಲ್ಲವೂ ಗೊತ್ತು, ಆ ಸರ್ಕಾರಿ ಸುತ್ತೋಲೆ, ಈ ಕೋರ್ಟ್ ಆದೇಶ ಇದೆ ಅಂತೆಲ್ಲ ಬಕ್ವಾಸ್ ಮಾತಾಡುತ್ತಾ ಅಲ್ಲ. ಕಡೆಗೆ ತನ್ನ ಸಮಸ್ಯೆಗಳನ್ನು ಒಬ್ಬ expert ನಲ್ಲಿ ಅರಹಿ ಆ expert ನೀಡಿದ ಪ್ರಖಾಂಡ ಮತ್ತು ಬ್ರಿಲಿಯಂಟ್ ಐಡಿಯಾ, ಡ್ರಾಫ್ಟ್ ಗಳನ್ನು ಜಗತ್ತಿಗೆ ತೋರಿಸಿ ತಾನು ಅದೆಷ್ಟು ಸ್ಟ್ರಾಂಗು ಅನ್ನೋದನ್ನು ನಿರೂಪಿಸಲು ಹೆಣಗಿ, ತಿಣುಕಿ, ಗೊಣಗಿ ಕಡೆಗೆ ಬೀಗುತ್ತಾನೆ… ಮನಸ್ಸು ಮಾಡಿದರೆ ಪ್ರಧಾನ ಮಂತ್ರಿಗೂ ಪ್ರತಿಯನ್ನು ರಾಜ್ಯದ ಮುಖ್ಯಮಂತ್ರಿಗೂ ಹಾಕಿ ದೂರು ಬರೆಯಬಲ್ಲಷ್ಟು ಚಾಣಾಕ್ಷ. ದುರದೃಷ್ಟವೆಂದರೆ ಆ ದೂರನ್ನು ಕುಟ್ಟಲೊಬ್ಬ, ಕರೆಕ್ಷನ್ ಮಾಡಲೊಬ್ಬ ಬೇಕಷ್ಟೇ..
ಬೆನ್ನ ಹಿಂದೆ ಯಾರು ಅವರನ್ನು ಎಷ್ಟು ಕಾಮಿಡಿ ಪೀಸ್ ನಂತೆ ತೂರಾಡುತ್ತಾರೆಂಬುದು ಗೊತ್ತೇ ಆಗುವುದಿಲ್ಲ. ಬಹುಶ: ನನ್ನ ಬಗ್ಗೆಯೂ ಆಡಿಕೊಳ್ಳುವವರೂ ಕಡಿಮೆ ಏನಿಲ್ಲ. ಆದರೆ, ಕೆಲಸದ ವಿಚಾರಕ್ಕೆ ಮಾತ್ರ ಯಾರೂ ಬರಲಿಕ್ಕಿಲ್ಲ, ಇಲ್ಲವೇ ನಾನೇ ಅಂಥಾದ್ದಕ್ಕೆ ಅವಕಾಶ ಕೊಡಲಾರೆ.
ಆದರೆ, ಆ ಅಧಿಕಾರಿ ಹಿನ್ನೆಲೆ ನೋಡಿದರೆ, ಒಬ್ಬ ಗ್ರೂಪ್ ಡಿ ನೌಕರನಿಗಿರುವ ಕನಿಷ್ಠ ಬರಹ ಇಲ್ಲದವನಾಗಿರುತ್ತಾನೆ. ಮತ್ತು ಅವನು ಆರಂಭದಲ್ಲಿ ಅನುಕಂಪದ ನೇಮಕಾತಿ ಹೊಂದಲೂ ಕೂಡ ಕಂಡವರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಸಿ ಸಾಹಸ ಮೆರೆದಿದ್ದಾನೆಂಬುದು ಗುಲ್ಲು. ಆದರೆ, ಭೂತದ ಬಾಯಲ್ಲಿ ಭಗವಗ್ಧೀತೆ ಎಂಬಂತೆ ಅಡ್ನಾಡಿ ಅವತಾರದಲ್ಲಿರುವ ತಾನೊಬ್ಬ ಭರ್ಜರಿ knowledgeable person ನಂತೆ ತೋರಿಸಿಕೊಳ್ಳುವ ತುರಿಕೆ…. ಅಂಥವನು ಮಾಡಿದ ಅತ್ಯದ್ಭುತ ಡ್ರಾಫ್ಟ್ ಗಳ ಕುರಿತು ಯಮನ ಅಸಿಸ್ಟಂಟ್ ಚಿತ್ರಗುಪ್ತನಂಥ ಆ ಅಧಿಕಾರಿಯ ಅಪಾರ ಶಿಷ್ಯಂದಿರ ಬಾಯಿಗಳಲ್ಲಿ ಕೇಳುತ್ತಿದ್ದರೆ ಥೇಟ್ ತಿಂಗಳುಗಟ್ಟಲೇ ಬೇಸಿಗೆ ರಜೆ ಕಳೆದು ಹೋಗುವುದೇ ಗೊತ್ತಾಗದಂಥ ಕಲಬುರಗಿಯ ಶರಣಬಸವೇಶ್ವರರ ಪುರಾಣದ ನಾಂದಿ ಗೀತೆ ” ಕಲಬುರಗಿಯ ಶ್ರೀ ಶರಣಬಸವನ ಪಾವನ ಚರಿತೆ ಇದು, ಹಲವು ಜನ್ಮಗಳ ಪಾಪವ ಕಳೆದು ಸದ್ಘತಿ ದೊರಕುವುದು” ಕೇಳಿದಷ್ಟು ಆನಂದವಾಗಿದ್ದರೆ ಪರವಾಗಿಲ್ಲ. ಆದರೆ, ಕರ್ಣಕಠೋರ ವೆಂಬಂತೆ ಯಾವಾಗಾದರೂ ಮುಗಿಯುತ್ತದೆಂಬಷ್ಟು ಮತ್ತು ಕಿಬ್ಬೊಟ್ಟೆಯನ್ನು ಹಿಡಿದು ನಕ್ಕಷ್ಟೂ ಸ್ವಾರಸ್ಯಕರ….
ಇದು ineligible ಲಕ್ಷಣವುಳ್ಳ ಒಬ್ಬರ ಪ್ರಸಂಗವಾದರೆ, most eligible ಮತ್ತು so called top positioned ಅನ್ನಿಸಿಕೊಂಡವರ ಒಂದು ಕತೆಯನ್ನು ಇನ್ಯಾವಾಗಾದರೂ ಹೇಳಿಯೇನು….
ಯಾಕೋ ಬೆಳ್ ಬೆಳಿಗ್ಗೆ ವಾಕ್ ಮುಗಿಸಿಕೊಂಡು ದಾರಿಯಲ್ಲಿ ಟೀ ಕುಡಿಯುತ್ತಾ ಎಲ್ಲವೂ ನನಗೆ ಆ ಅಧಿಕಾರಿ ಮತ್ತು ಈ ಪಾನ್ ಶಾಪ್ ಮುದುಕ ಒಟ್ಟೊಟ್ಟಿಗೆ ನೆನಪಾಗಿ ನಗಿಸಿ ಹೊಟ್ಟೆ ಹುಣ್ಣಾಗಿಸುತ್ತಾ ರೆಂದರೆ, ಆ ಅಧಿಕಾರಿ ತನ್ನೆಲ್ಲಾ ಅದ್ಭುತ ಡ್ರಾಫ್ಟ್ ಗಳನ್ನೆಲ್ಲಾ ತೋರಿಸಿ opinion ಪಡೆಯುತ್ತಿದ್ದುದ್ದು ಇಂಥದೇ ಒಬ್ಬ ಪಾನ್ ಶಾಪ್ ನ ಮುದುಕನಂಥಹ legal advisor ಹತ್ತಿರವಂತೆ…. ನಾನು ಟೀ ದುಡ್ಡು ಕೊಟ್ಟು ಇನ್ನೇನು ಕಾಲು ಕಿತ್ತಬೇಕು ಹತ್ತಿರ ಪಾನ್ ಶಾಪ್ ನಿಂದ ಹಾಡು ಕೇಳುತ್ತಿತ್ತು; “ಕೈಕೇ ಪಾನ್ ಬನಾರಸ್ಸುವಾಲಾ…. ಖುಲ್ ಗಯಾ ಬಂದ್ ಅಕಲ್ ಕಾ ತಾಲಾ……”
ಉಪಸಂಹಾರ:ಎಲ್ಲಾ ಪಾನ್ ಶಾಪ್ ಮಾಡುವವರೂ ಅಂಥವರಿರುವುದಿಲ್ಲ ಹಾಗೂ ಯಾವ ಅಧಿಕಾರಿಯಲ್ಲೂ ಇಂಥ ಅಡ್ನಾಡಿತನ ಇರಬಾರದಷ್ಟೇ….
ಅಲ್ವಾ???
-ಅಮರದೀಪ್ ಪಿ.ಎಸ್.