ಸಾರ್, ಸಾರ್ ಎಂಬ ಕೂಗಿಗೆ ಅವನು ಸಾವಧಾನವಾಗಿ ಅಷ್ಟೆ ನಿರ್ಲಕ್ಷ್ಯವಾಗಿ ತಿರುಗಿ ನೋಡಿದ. ರೈಲಿನ ಕಿಟಕಿಯಿಂದ ವೇಗವಾಗಿ ಚಲಿಸುತ್ತಿರುವಂತೆ ಭಾಸವಾಗುವ ನದಿ ಸೇತುವೆಗಳು, ಹಸಿರು ಸೀರೆಯನ್ನು ಹೊದ್ದು ಮಲಗಿದಂತೆ ಕಾಣುವ ಹೊಲ ಗದ್ದೆಗಳು, ಕಪ್ಪು ಚುಕ್ಕೆಗಳಂತೆ ಕಾಣುವ ದನ ಕರುಗಳನ್ನು ನೋಡುತ್ತಾ ಯಾವುದೋ ಆಲೋಚನೆಯಲ್ಲಿ ಮುಳುಗಿದ್ದವನಿಗೆ ಆ ಕೂಗಿನಿಂದ ಅಸಾಧ್ಯ ಸಿಟ್ಟು ಬಂತು. ತಿರುಗಿ ನೋಡಿದಾಗ ಗಂಟಿನ ಕೆಳಗೆ ಎರಡೂ ಕಾಲುಗಳಿಲ್ಲದ ಹೆಳವನೊಬ್ಬ ತಟ್ಟೆ ಹಿಡಿದು ದೈನ್ಯವಾಗಿ ಅವನನ್ನೇ ನೋಡುತ್ತಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ಇದು ಅವನಿಗೆ ನಿತ್ಯದ ನೋಟ. ತಾನು ಈವರೆಗೆ ಒಂದು ರೂಪಾಯಿ ಕೊಟ್ಟಿಲ್ಲವಾದರೂ ಬೇಡುವುದು ತನ್ನ ಕರ್ತವ್ಯ ಎಂಬಂತೆ ದಿನಾ ಅವನೆದುರು ತಟ್ಟೆ ಹಿಡಿಯುವುದು ಅವನಿಗೆ ಸೋಜಿಗದ ವಿಷಯವೂ ಹೌದು. ಸ್ವಾಭಿಮಾನಿ ಭಿಕ್ಷುಕನಿರಬೇಕು, ಧರ್ಮಕ್ಕೆ ಭಿಕ್ಷೆ ಬೇಡದೆ ಕೈಯಲ್ಲಿರುವ ಬ್ರಷ್ ನಿಂದ ಬೋಗಿಯನ್ನು ಗುಡಿಸುತ್ತಾ ಪ್ರಯಾಣಿಕರು ಏನಾದರು ಒಂದು ರೂಪಾಯಿ, ಎರಡು ರೂಪಾಯಿ ತಟ್ಟೆಗೆ ಹಾಕಿದರೆ ಮುಂದಿನ ಬೋಗಿಗೆ ತೆವಳುತ್ತಾ ಸಾಗುತ್ತಿದ್ದ. ಥತ್! ಇವರ ಕಾಟ ಯಾಕೋ ಅತಿಯಾಯ್ತು ಎಂದು ಅವನು ಮತ್ತೆ ಕಿಟಕಿಯ ಕಡೆಗೆ ತಲೆ ತಿರುಗಿಸಿದ.
ಡೇವಿಡ್ ಕ್ರಿಸ್ಟೋಫರ್ ಸಲ್ದಾನ, ವಯಸ್ಸು ಸರಿ ಸುಮಾರು ಮೂವತ್ತೊಂಬತ್ತು ನಲವತ್ತಿರಬಹುದು. ಖಾಸಗಿ ಕಂಪನಿಯೊಂದರ ಪ್ರತಿಷ್ಠಿತ ಹುದ್ದೆಯಲ್ಲಿ ಇರುವುದರಿಂದ ಅದರ ಘನತೆಗೆ ತಕ್ಕ ಹಾಗೆ ನೀಟಾಗಿ ಬಟ್ಟೆ ಧರಿಸಿ ಅದರ ಮೇಲೊಂದು ಕೋಟು, ಟೈ ಕಟ್ಟಿಕೊಳ್ಳುವುದು ಅನಿವಾರ್ಯವೂ ಆಗಿತ್ತು. ತನ್ನ ಧರ್ಮದ ಬಗ್ಗೆ ಅತೀವ ಅಭಿಮಾನ ಭಕ್ತಿಯಿಂದ ಕೊರಳಲ್ಲಿ ಸ್ವಲ್ಪ ದೊಡ್ಡದೆ ಎನಿಸುವಂತೆ ಶಿಲುಬೆಗೇರಿಸಿದ ಏಸುವಿನ ಪದಕವನ್ನು ಧರಿಸಿದ್ದು ಸ್ಪಷ್ಟವಾಗಿ ಕಾಣಬಹುದಿತ್ತು.
ಕಛೇರಿ ಕೆಲಸದ ಮೇಲೆ ವಾರದಲ್ಲಿ ಮೂರು ಬಾರಿ ಹುಬ್ಬಳ್ಳಿ- ಗೋವಾ ಮಾರ್ಗದ ರೈಲಿನಲ್ಲಿ ಪ್ರಯಾಣಿಸುವುದು ಕ್ಲೈಂಟ್, ಪೇಮೆಂಟ್, ಡಿ.ಡಿ ಇತ್ಯಾದಿ ರಗಳೆಗಳನ್ನು ಮುಗಿಸಿ ಹಿಂತಿರುಗುವುದು ಕಳೆದ ಐದು ವರ್ಷಗಳ ಅವನ ದಿನಚರಿ.ಹಾಗಾಗಿ ಕೆಲವು ಸಲ ರೈಲನ್ನೆ ತನ್ನ ಕಛೇರಿ ಎಂದು ಕೊಂಡರೆ ಕೆಲವು ಸಲ ರೈಲೆ ತನ್ನ ಮನೆಯೊ ಎಂದು ಅವನಿಗೆ ಭಾಸವಾಗುತ್ತದೆ. ಕಿಟಕಿಯಿಂದ ನೋಡುವಾಗ ರೈಲು ವರ್ಷ ವರ್ಷಗಳನ್ನು ಹಿಂದಕ್ಕೆ ಹಾಕಿ ವೇಗವಾಗಿ ಚಲಿಸಿದಂತಾಗಿ ನಿಟ್ಟುಸಿರು ಬಿಡುತ್ತಾನೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಹಿಂಡು ಹಿಂಡಾಗಿ ಬರುವ ಭಿಕ್ಷುಕರು ಮಂಗಳ ಮುಖಿಯರನ್ನು ಕಂಡರಂತೂ ಅವನಿಗೆ ಅಸಾಧ್ಯ ಸಿಟ್ಟು ಬರುವುದು. ತನ್ನಂತಹ ಸುಸಂಸ್ಕೃತರು ಪ್ರಯಾಣಿಸುವ ರೈಲಿನಲ್ಲಿ ಈ ರೀತಿ ಭಿಕ್ಷುಕರ ಕಾಟವನ್ನು ತಪ್ಪಿಸಲು ಕೋರಿ ರೈಲ್ವೆ ಇಲಾಖೆಗೆ ಖಡಕ್ಕಾಗಿ ಒಂದು ಪತ್ರ ಬರೆಯಬೇಕೆಂದು ಯೋಚಿಸತೊಡಗಿದ.
ಅವನು ತೀರಾ ಅಂತರ್ಮುಖಿಯೇನಲ್ಲ. ತನ್ನಂತಹ ಸುಶಿಕ್ಷಿತರು ಜೊತೆಯಾದರೆ ಇಂಗ್ಲೀಷಿನಲ್ಲಿ ಹರಳು ಹುರಿದಂತೆ ಹರಟುತ್ತಿದ್ದ.ತನ್ನಂತೆಯೆ ಠಾಕು ಠೀಕಾಗಿ ಪ್ರಯಾಣಿಸುತ್ತಿದ್ದ ಹುಡುಗಿಯೊಬ್ಬಳ ಮಾತಿನ ಮೋಡಿಗೆ ಮರುಳಾಗಿ ಅವಳು ಹೇಳಿದ ಕಂಪನಿಯಲ್ಲಿ ಹಣ ತೊಡಗಿಸಿ ಮೋಸ ಹೋಗಿದ್ದು, ಜಂಟಲ್ ಮ್ಯಾನ್ ಅಂದು ಕೊಂಡವನೊಬ್ಬ ಪಕ್ಕದಲ್ಲಿ ಕೂತು ಬಹಳ ಆತ್ಮೀಯವಾಗಿ ಹರಟಿ ಅವನ ನಿಲ್ದಾಣದಲ್ಲಿ ಇಳಿದು ಹೋದಾಗ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಚೈನು ಮಾಯವಾಗಿದ್ದು ನೆನಪಾದಾಗೆಲ್ಲ ಸಹ ಪ್ರಯಾಣಿಕರೊಂದಿಗೆ ಮಾತು ಕಡಿಮೆ ಮಾಡತೊಡಗಿದ.
ಆ ದಿನ ಎಂದಿನಂತೆ ತನ್ನ ನಿಲ್ದಾಣದಲ್ಲಿ ಇಳಿದು ತಲೆಯನ್ನು ಸ್ವಲ್ಪ ಬಾಚಿಕೊಳ್ಳೋಣವೆಂದು ಕಿಸೆಗೆ ಕೈ ಹಾಕಿದವನ ಎದೆ ಧಸಕ್ಕೆಂದಿತು. ತಂದೆಯ ಆಪರೇಷನ್ನಿಗೆಂದು ಹೊಂದಿಸಿಟ್ಟುಕೊಂಡ ಮೂವತ್ತು ಸಾವಿರ ರೂಪಾಯಿ ಪರ್ಸು ಸಮೇತ ಮಾಯವಾಗಿತ್ತು. ಅವನ ಹೃದಯ ಬಡಿತವೆ ನಿಂತಂತಾಗಿ ಕಲ್ಲು ಬೆಂಚಿನ ಮೇಲೆ ದೊಪ್ಪನೆ ಕುಸಿದ. ಮುಂದಿನ ವಾರ ನಡೆಯಬೇಕಿದ್ದ ತಂದೆಯ ಆಪರೇಷನ್ ನೆನೆದು ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯ ತೊಡಗಿತು.ನಂತರ ನಿಧಾನವಾಗಿ ಸಾವರಿಸಿಕೊಂಡು ದೇವರ ಮೇಲೆ ಎಲ್ಲಾ ಭಾರವನ್ನು ಹಾಕಿ ಕೊರಳಲ್ಲಿದ್ದ ಶಿಲುಬೆಯನ್ನು ಕಣ್ಣಿಗೆ ಒತ್ತಿಕೊಂಡವನಿಗೆ ತಟ್ಟನೆ ಏನೋ ನೆನಪಾಯಿತು. ಹೌದು, ಅದೇ ಹೆಳವ, ತಾನು ಇಳಿಯುವ ಸಮಯ ಸೀಟಿನ ಅಡಿಯಲ್ಲಿ ಗುಡಿಸುತ್ತಾ ತಡಕಾಡುತ್ತಿದ್ದ ಕಳ್ಳ ಸೂ..ಮಗ, ಅವನೆ ಕದ್ದಿರಬೇಕು ಎಂದು ಕೊಂಡವನ ರಕ್ತ ಕುದಿಯ ತೊಡಗಿತು. ಅಂತಹ ಪರದೇಶಿ ಕಳ್ಳ ಸೂ..ಮಕ್ಕಳನ್ನು ಒಳಗೆ ಬಿಡುವ ಇಲಾಖೆಯನ್ನು ಮನಸಾರೆ ಶಪಿಸಿ, ಕಳ್ಳ ಭಡವಾ ನಾಳೆ ಕೈಗೆ ಸಿಗಲಿ ಅವನ ಕೈ ಮುರಿದು ಭಿಕ್ಷೆ ಬೇಡದ ಹಾಗೆ ಮಾಡುತ್ತೇನೆ ಎಂದು ರೋಷದಿಂದ ಕಾಲನ್ನು ನೆಲಕ್ಕಪ್ಪಳಿಸಿದ.
ಮಾರನೆಯ ದಿನ ರೈಲಿನಲ್ಲಿ ಕುಳಿತವನ ಒಡಲು ಅದೇ ಸಿಟ್ಟಿನಿಂದ ಹೊತ್ತಿ ಉರಿಯುತ್ತಿತ್ತು. ಎಂದಿನಂತೆ ಬೋಗಿಯನ್ನು ಗುಡಿಸಿಕೊಂಡು ತೆವಳುತ್ತಾ ಬಂದ ಭಿಕ್ಷುಕನನ್ನು ಕಂಡು ಅವನ ಕೊರಳ ಪಟ್ಟಿಯನ್ನು ಹಿಡಿಯಬೇಕೆಂದು ಎದ್ದವನಿಗೆ ಭಿಕ್ಷುಕ ನಿಧಾನವಾಗಿ ಜೋಳಿಗೆಯಿಂದ ಪರ್ಸನ್ನು ತೆಗೆದು ತನ್ನತ್ತ ಚಾಚುವುದು ಕಾಣಿಸಿತು. "ನಿಮ್ಮ ಸೀಟಿನ ಅಡಿಯಲ್ಲಿ ಬಿದ್ದಿತ್ತು ಸಾರ್, ನಿಮ್ಮನ್ನು ದಿನಾ ನೋಡುತ್ತೇನಲ್ವಾ ಪರ್ಸಿನಲ್ಲಿದ್ದ ಫೋಟೋ ನೋಡಿದಾಗ ನಿಮ್ಮದೆಂದು ಗೊತ್ತಾಯಿತು. ಹಣವನ್ನು ಒಂದು ಸಲ ಎಣಿಸಿ ಕೊಳ್ಳಿ ಸಾರ್" ಎಂದಾಗ ಅವನಿಗೆ ತನ್ನ ಸೂಟು ಬೂಟುಗಳು ಮಾಯವಾಗಿ ಅವನೆದುರು ಬೆತ್ತಲೆ ನಿಂತ ಹಾಗೆ ಅನಿಸಿತು. ಕಣ್ಣಿನಲ್ಲಿ ಮತ್ತೆ ನೀರು ಸುರಿಯತೊಡಗಿ ದೇವರಿಗೆ ವಂದಿಸಬೇಕೆಂದು ಶಿಲುಬೆಯನ್ನು ಕೈಗೆತ್ತಿಕೊಂಡು ನೋಡುತ್ತಾನೆ–ಯೇಸು ಶಿಲುಬೆಯಲ್ಲಿ ಇರಲಿಲ್ಲ.