ಒಮ್ಮೆ ಪುಸ್ತಕವೊಂದನ್ನು ಪ್ರಕಟಿಸುವ ಕನಸು ಕಂಡಿದ್ದೆ. ಗೆಳೆಯನೊಬ್ಬ ತಾನೆ ಆ ಪುಸ್ತಕವನ್ನು ತನ್ನ ಪ್ರಕಾಶನದ ಮೂಲಕ ಪ್ರಕಟಿಸುವೆನೆಂದು ಮಾತು ನೀಡಿದ್ದ. ಟೈಪಿಂಗ್ ನಿಂದ ಹಿಡಿದು ಕರಡು ಪ್ರತಿ ತಿದ್ದುವ ಕೆಲಸವನ್ನು ಸಹ ಶ್ರದ್ಧೆಯಿಂದ ಮಾಡಿ ಮುಗಿಸಿ, ಪುಸ್ತಕ ಪ್ರಕಟವಾಗುತ್ತದೆ ಎಂದು ಆಸೆಯಿಂದ ಬರೋಬ್ಬರಿ ಹತ್ತು ತಿಂಗಳು ಜಾತಕ ಪಕ್ಷಿಯಂತೆ ಕಾದಿದ್ದೆ. ಕವರ್ ಪೇಜ್ ಡಿಸೈನ್ ನಿಂದ ಹಿಡಿದು ಸಣ್ಣ ಪುಟ್ಟ ಕೆಲಸಗಳವರೆಗೆ ಎಲ್ಲವೂ ಮುಗಿದು ಆ ಪುಸ್ತಕ ಅಚ್ಚಿಗೆ ಹೋಗುವುದಷ್ಟೇ ಬಾಕಿ ಇತ್ತು. ವಿಪರ್ಯಾಸವೆಂದರೆ ಆ ಗೆಳೆಯ ಸ್ವಂತ ಪ್ರಕಾಶನ ಶುರು ಮಾಡುವ ಧೈರ್ಯ ತೋರದಿದ್ದುದ್ದಕೋ ಏನೋ ಆ ಪುಸ್ತಕ ಪ್ರಕಟಣೆಯ ಭಾಗ್ಯ ಕಂಡಿರಲಿಲ್ಲ. ಪುಸ್ತಕ ಪ್ರಕಟವಾಗುತ್ತದೆ ಎಂದು ಕಾದು ಕಾದು ಬೇಸರವಾಗಿ ಭಂಡ ಧೈರ್ಯ ಮಾಡಿ ಸ್ವಂತ ಪ್ರಕಾಶನದಿಂದಲೇ ಪುಸ್ತಕ ಪ್ರಕಟಿಸಿಬಿಡೋಣ ಎಂದು ನಿರ್ಧರಿಸಿದ್ದೆ. ಆ ನಿರ್ಧಾರವನ್ನು ಕೆಲವು ಗೆಳೆಯರೊಂದಿಗೆ ಹಂಚಿಕೊಂಡಿದ್ದೆ.
ಪ್ರಕಾಶನ ಕ್ಷೇತ್ರದ ಅಆಇಈ ತಿಳಿಯದ ನಾನು, ಲೇಖಕನಾಗಿ ಪ್ರಕಾಶಕನಾಗಿ ಎರಡು ಪುಸ್ತಕಗಳನ್ನು ಪ್ರಕಟಿಸಿರುವ ಗೆಳೆಯನೊಬ್ಬನ ಸಲಹೆ ಪಡೆಯಲು ಆತನ ರೂಮಿಗೆ ಹೋಗಿದ್ದೆ. ನನ್ನೊಳಗಿರುವ ಪ್ರಕಾಶನದ ಕನಸಿಗೊಂದು ಹೆಸರೂ ಸಹ ಸೂಚಿಸಿದ ಗೆಳೆಯ ತನ್ನ ರೂಮಿನಲ್ಲಿದ್ದ ತನ್ನದೇ ಪ್ರಕಾಶನದಿಂದ ಪ್ರಕಟವಾಗಿರುವ ಪುಸ್ತಕಗಳ ರಾಶಿ ತೋರಿಸಿದ್ದ. “ಪುಸ್ತಕ ಪ್ರಕಟಿಸುವುದು ಸುಲಭ ಮಾನ್ಯರೇ. ಆದರೆ ಮಾರಾಟ ಮಾಡುವುದು ಕಷ್ಟ. ಪುಸ್ತಕ ಬಿಡುಗಡೆಯಾದ ಮೇಲೆ ಬುಕ್ ಸ್ಟಾಲ್ ಗಳಿಗೆ ಪುಸ್ತಕ ಕೊಡಲು ಹೋದರೆ ಒಂದು ಸ್ಯಾಂಪಲ್ ಕಾಪಿ ಕೊಡಿ. ಅದು ಮಾರಾಟವಾದರೆ ನಾವೇ ಫೋನ್ ಮಾಡಿ ತರಿಸಿಕೊಳ್ತೀವಿ ಅಂತಾರೆ. ಹಂಗೂ ಏನಾದ್ರು ಒಳ್ಳೆ ಮೂಡಲ್ಲಿ ಇದ್ರೆ ಒಂದೈದು ಕಾಪಿ ತೆಗೆದುಕೊಳ್ತಾರೆ. ಒಂದು ಪುಸ್ತಕಕ್ಕೆ 40 ಪರ್ಸೆಂಟ್ ಡಿಸ್ಕೌಂಟ್ ಕೊಡಬೇಕು. ನಿಮ್ಮ ದುಡ್ಡು ಏನಿದ್ರು ಪುಸ್ತಕ ಮಾರಾಟವಾದ ಮೇಲೆಯೇ ಕೈಗೆ ಸೇರೋದು. ಆಕಸ್ಮಾತ್ ಬುಕ್ ಸೇಲ್ ಆಗಿದ್ರೆ ನಾವಿರೋ ಜಾಗದಿಂದ ಬಸ್ ಚಾರ್ಜ್ ಹಾಕಿಕೊಂಡು ಅವರು ಕೊಡೋ ಚೆಕ್ ಕಲೆಕ್ಟ್ ಮಾಡೋಕೆ ಹೋದರೆ ಆ ಚೆಕ್ ನೋಡಿ ಖುಷಿಯಾಗೋ ಬದಲು ನಗು ಬರುತ್ತೆ. ಆ ಚೆಕ್ ನೋಡಿ ಮತ್ತೆ ಪುಸ್ತಕ ಪ್ರಕಟಿಸುವ ಧೈರ್ಯ ಮಾಡೋ ಮನಸ್ಸು ಬರಲ್ಲ.” ಎಂದು ತಾನು ಪ್ರಕಾಶಕನಾಗಿ ಅನುಭವಿಸಿದ ಕಷ್ಟಗಳನ್ನು ನಗುತ್ತಲೇ ಹಂಚಿಕೊಂಡಿದ್ದ.
ಆ ಗೆಳೆಯನ ಮಾತುಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದ ನಾನು “ಲೈಬ್ರರಿಯವ್ರು ಒಂದಷ್ಟು ಬುಕ್ಸ್ ತೆಗೆದುಕೊಳ್ತಾರಂತಲ್ಲ?” ಎಂಬ ಪ್ರಶ್ನೆಯನ್ನು ಅವನ ಮುಂದಿಟ್ಟಿದ್ದೆ. “ಲೈಬ್ರರಿಯವ್ರು ಒಂದಷ್ಟು ಬುಕ್ಸ್ ತೆಗೆದುಕೊಳ್ತಾರಾದರೂ ಅಲ್ಲೂ ಸಿಕ್ಕಾಪಟ್ಟೆ ರಾಜಕೀಯ. ಡಿಸೆಂಬರ್ ನಲ್ಲೋ ಜನವರಿಲೋ ಬುಕ್ಸ್ ಸಬ್ಮಿಟ್ ಮಾಡೋಕೆ ಅರ್ಜಿ ಸ್ವೀಕರಿಸ್ತಾರೆ. ಆ ತರಹ ಅವರಿಗೆ ಬರೋ ಐದಾರು ಸಾವಿರ ಬುಕ್ ಗಳಲ್ಲಿ ಒಂದೆರಡು ಸಾವಿರ ಬುಕ್ ಗಳನ್ನು ಆಯ್ಕೆ ಮಾಡಿ ಲೈಬ್ರರಿ ಕಾಪಿ ಅಂತ 300 ಕಾಪಿ ತೆಗೆದುಕೊಳ್ತಾರೆ. ಲೈಬ್ರರಿದೂ ಒಂತರಾ ಲಾಂಗ್ ಪ್ರೊಸೆಸ್. ಅಲ್ಲಿ ಬುಕ್ ಸೆಲೆಕ್ಟ್ ಆಗೋಕೆ ಅದೃಷ್ಟ ಇರಬೇಕು ಅನ್ನೋದಕ್ಕಿಂತ ಲಾಬಿ ಚೆನ್ನಾಗಿ ಮಾಡೋದನ್ನು ಕಲಿತಿರಬೇಕು. ನನ್ನ ಎರಡು ಬುಕ್ ಸಬ್ಮಿಟ್ ಮಾಡಿದ್ದೆ. ಒಂದು ಸೆಲೆಕ್ಟ್ ಆಗಿದೆ. 300 ಪುಸ್ತಕ ಕೊಟ್ಟು ಬಂದಿದ್ದೇನೆ. ಚೆಕ್ ಯಾವಾಗ ಬರುತ್ತೋ ದೇವರಿಗೆ ಗೊತ್ತು. ಆ ಚೆಕ್ ತಗೋಬೇಕಾದ್ರೆ ಯಾರ್ಯಾರಿಗೆ ಎಷ್ಟೆಷ್ಟು ಲಂಚ ಕೊಡಬೇಕೋ ನೋಡೋಣ. ಅಟ್ ಲೀಸ್ಟ್ ಆ ದುಡ್ಡು ಬಂದ್ರೆ ಹಾಕಿರೋ ಬಂಡವಾಳದಲ್ಲಿ ಒಂದಷ್ಟಾದರೂ ದುಡ್ಡು ವಾಪಸ್ಸು ಕೈಗೆ ಸಿಗುತ್ತೆ.” ಎಂದು ನಗುತ್ತಾ ತನ್ನ ರೂಮಿನಲ್ಲಿದ್ದ ತನ್ನ ಪುಸ್ತಕಗಳ ರಾಶಿ ತೋರಿಸಿದ ಗೆಳೆಯ “ನನ್ನದೇ ಪುಸ್ತಕಗಳ ರಾಶಿ ನೋಡ್ತಾ ಇದ್ರೆ, ಹೆಣವನ್ನು ಮನೆ ಮುಂದೆ ಇಟ್ಟುಕೊಂಡಿರೋ ಹಾಗೆ ಫೀಲ್ ಆಗುತ್ತೆ. ಯಾರಾದರು ಈ ಪುಸ್ತಕಗಳನ್ನು ಕೆಜಿ ಲೆಕ್ಕದಲ್ಲಾದ್ರು ತೆಗೆದುಕೊಂಡು ಹೋದ್ರೆ ಪುಸ್ತಕಗಳು ಖಾಲಿ ಆದ ಖುಷಿಯಾದರೂ ಆಗುತ್ತೆ.” ಎಂದ ಗೆಳೆಯ “ಪ್ರಕಾಶನ ಶುರು ಮಾಡಬೇಕು ಅಂತಿದ್ದೀರ. ಒಳ್ಳೆಯದಾಗಲಿ.” ಎಂದು ಹಾರೈಸಿದ್ದ.
ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಿಸುವ ಜಾಯಮಾನದವನಲ್ಲದ ನಾನು ಆ ಗೆಳೆಯನ ಮಾತು ಕೇಳಿಯಾದ ಮೇಲೂ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಕೈ ಹಾಕಿದ್ದೆ. ಕವರ್ ಡಿಸೈನ್, ಲೇಔಟ್ ಎಲ್ಲಾ ಮಾಡಿಸಿ ಕರಡು ಪ್ರತಿಯನ್ನು ಮತ್ತೊಮ್ಮೆ ತಿದ್ದಿ ತೀಡಿ ಅಲ್ಲಿ ಇಲ್ಲಿ ದುಡ್ಡು ಹೊಂದಿಸಿ ಪುಸ್ತಕವನ್ನು ಪ್ರಿಂಟ್ ಗೆ ಕಳಿಸಿದ್ದೆ. ಮತ್ತೊಬ್ಬ ಪ್ರಕಾಶಕರು ನನ್ನ ಇನ್ನೊಂದು ಪುಸ್ತಕವನ್ನು ಪ್ರಕಟಿಸುವುದಕ್ಕೆ ಮುಂದೆ ಬಂದ ಕಾರಣ ಆ ಪುಸ್ತಕವನ್ನು ಸಹ ರೆಡಿ ಮಾಡಿ ಪ್ರಿಂಟ್ ಗೆ ಕಳುಹಿಸಿ ಒಂದು ದಿನ ಬಿಡುಗಡೆ ಸಹ ಮಾಡಿದ್ದಾಯಿತು. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಸಹೃದಯಿ ಗೆಳೆಯರು ಒಂದಷ್ಟು ಪುಸ್ತಕಗಳನ್ನು ಖರೀದಿಸಿದ್ದರು. ಪುಸ್ತಕ ಬಿಡುಗಡೆಯಾದ ಮಾರನೆಯ ದಿನ ಆಟೋ ಒಂದನ್ನು ಬಾಡಿಗೆಗೆ ಹಿಡಿದು ಒಂದಷ್ಟು ಪುಸ್ತಕಗಳನ್ನು ಬೆಂಗಳೂರಿನ ಪ್ರಮುಖ ಪುಸ್ತಕ ಮಳಿಗೆಗಳಿಗೆ ಹಂಚಿ ಬಂದಿದ್ದೆ. ಬೆಂಗಳೂರು ಬಿಟ್ಟು ಬೇರೆ ಊರುಗಳಿಗೆ ಪುಸ್ತಕಗಳನ್ನು ತಲುಪಿಸೋದು ಹೇಗೆ ಎಂದು ಆ ದಿನ ನನಗೆ ತಿಳಿಯಲಿಲ್ಲ. ಇಂದಿಗೂ ತಿಳಿದಿಲ್ಲ. ಪುಸ್ತಕ ಮಳಿಗೆಗಳು ಬಿಲ್ ಇಲ್ಲದೆ ಪುಸ್ತಕಗಳನ್ನು ಸ್ವೀಕರಿಸುವುದಿಲ್ಲ. ಬಿಲ್ ಪುಸ್ತಕವನ್ನು ಪ್ರಿಂಟ್ ಹಾಕಿಸುವಷ್ಟು ಸಮಯ ನನ್ನಲಿಲ್ಲದ ಕಾರಣ ಲ್ಯಾಪ್ ಟಾಪ್ ನಲ್ಲಿಯೇ ಬಿಲ್ ಪುಸ್ತಕದ ಮಾದರಿಯ ಬಿಲ್ ತಯಾರಿಸಿ ಅದರ ಹತ್ತು ಕಾಪಿಗಳನ್ನು ಪ್ರಿಂಟ್ ಹಾಕಿಸಿ ಅವುಗಳನ್ನೇ ಪುಸ್ತಕ ಮಳಿಗೆಗಳಿಗೆ ಬಿಲ್ ರೀತಿ ನೀಡಿದ್ದೆ. ಸ್ವಪ್ನ ಮತ್ತು ಆಕೃತಿ ಪ್ರಕಾಶನದವರು ಪುಸ್ತಕ ನೀಡಿದ ಮೊದಲ ದಿನವೇ ಆನ್ ಲೈನ್ ನಲ್ಲಿ ಪುಸ್ತಕಗಳು ಲಭ್ಯವಾಗುವಂತೆ ಮಾಡಿದ್ದರು. ಅದೇ ದಿನ ಫೇಸ್ ಬುಕ್ ನಲ್ಲಿ ಆ ಆನ್ ಲೈನ್ ಲಿಂಕ್ ಗಳನ್ನು ಹಾಕುವ ಜೊತೆಗೆ ಪುಸ್ತಕ ದೊರೆಯುವ ಸ್ಥಳಗಳ ಹೆಸರುಗಳನ್ನು ಸಹ ತಿಳಿಸಿದ್ದೆ.
ಪುಸ್ತಕ ಹಂಚುವ ಕಾರ್ಯ ಮುಗಿಸಿದ ಒಂದೆರಡು ದಿನದ ನಂತರ ನನ್ನ ಕಾರ್ಯ ಸ್ಥಾನವಾದ ಜಲ್ಪಾಯ್ಗುರಿಗೆ ವಾಪಸ್ಸು ಬಂದಿದ್ದೆ. ವಾಪಸ್ಸು ಬಂದಾದ ಮೇಲೆ ತಿಳಿಯಿತು ಎಲ್ಲಾ ಪ್ರಮುಖ ವೃತ್ತ ಪತ್ರಿಕೆಗಳ ಆಫೀಸಿಗೆ ಸಾದರ ಸ್ವೀಕೃತಿ ಮತ್ತು ವಿಮರ್ಶೆಯ ಕೃಪೆಗಾಗಿ ಒಂದು ಪುಸ್ತಕದ ಪ್ರತಿಯನ್ನು ನೀಡಬೇಕು ಎಂದು. ಸಾದರ ಸ್ವೀಕೃತಿ ಎಂಬ ಪದ ನನಗೆ ಹೊಸದಾದದ್ದರಿಂದ ಆ ಪದ ತಿಳಿಸಿದ ಗೆಳೆಯನನ್ನು ವಿಚಾರಿಸಿದಾಗ ಪೇಪರ್ ಗಳಲ್ಲಿ ಬರುವ ಪುಸ್ತಕಗಳ ಹೆಸರುಗಳ ಲಿಸ್ಟ್ ನಲ್ಲಿ ನಾವು ನೀಡುವ ಪುಸ್ತಕದ ಹೆಸರು ಸೇರಿಸುವುದಕ್ಕೆ ಸಾದರ ಸ್ವೀಕೃತಿ ಎಂದು ಕರೆಯುತ್ತಾರೆಂದು ತಿಳಿಯಿತು. ಆ ರೀತಿ ಪುಸ್ತಕದ ಹೆಸರು ನ್ಯೂಸ್ ಪೇಪರ್ ಗಳ ಸಾದರ ಸ್ವೀಕೃತಿಯಲ್ಲಿ ಕಂಡರೆ, ಅದರ ಜೊತೆಗೆ ಯಾರಾದರು ಪುಸ್ತಕ ಕುರಿತು ವಿಮರ್ಶೆ ಬರೆದರೆ ಹೆಚ್ಚು ಓದುಗರನ್ನು ಪುಸ್ತಕ ತಲುಪಲು ಸಾಧ್ಯ ಎಂದು ಕೆಲವು ಗೆಳೆಯರ ಅಭಿಪ್ರಾಯವಾಗಿತ್ತು. ಇರೋದು ದೂರದೂರಾದ್ದರಿಂದ ಮುಂದಿನ ಸಾರಿ ಬೆಂಗಳೂರಿಗೆ ಹೋದಾಗ ಎಲ್ಲಾ ವೃತ್ತ ಪತ್ರಿಕೆಗಳ ಕಛೇರಿಗಳಿಗೆ ಪುಸ್ತಕ ತಲುಪಿಸೋಣ ಎಂದುಕೊಂಡಿದ್ದೆ. ಈ ಮಧ್ಯೆ ಕೆಲವು ಪುಸ್ತಕ ಮಳಿಗೆಗಳಿಗೆ ಫೋನ್ ಮಾಡಿ “ಮೇಡಂ, ಹೇಗಿದೆ ರೆಸ್ಪಾನ್ಸ್?” ಎಂದಾಗಲೆಲ್ಲಾ “ಸರ್ ಹತ್ತು ಬುಕ್ ಕೊಟ್ಟಿದ್ರಿ ಅಲ್ವಾ? ಇನ್ನು ಫೈವ್ ಕಾಪೀಸ್ ಹಾಗೆ ಇದೆ ಸರ್. ಅವು ಖರ್ಚಾದ ಕೂಡಲೇ ನಿಮಗೆ ಕರೆ ಮಾಡಿ ಪುಸ್ತಕ ತರಿಸಿಕೊಳ್ತೀವಿ.” ಎಂದು ಕಂಪ್ಯೂಟರ್ ಮುಂದೆ ಕುಳಿತು ಸ್ಟಾಕ್ ಪೊಸಿಷನ್ ಹೇಳುವ ಆ ಲೇಡಿಯಿಂದ ಯಾವತ್ತಾದರು ಕಾಲ್ ಬಂದರೂ ಬರಬಹುದು ಎಂಬ ನಿರೀಕ್ಷೆ ನನ್ನದು.
ಇನ್ನು ಕೆಲವು ಪುಸ್ತಕ ಮಳಿಗೆಗಳಿಗೆ ಕರೆ ಮಾಡಿದರೆ “ಏನ್ ಸರ್ ಹೇಗಿದೆ ನನ್ನ ಬುಕ್ ಗೆ ರೆಸ್ಪಾನ್ಸ್?” ಎಂದಾಗಲೆಲ್ಲಾ “ಬೇಜಾರು ಮಾಡಿಕೊಳ್ಳಬೇಡಿ ಸರ್. ಏನು ರೆಸ್ಪಾನ್ಸ್ ಇಲ್ಲ. ಏನಾದ್ರು ಪೋಸ್ಟರ್ ಅದೂ ಇದೂ ಮಾಡಿಸಿಕೊಡಿ ಸರ್. ನಮ್ಮ ಸ್ಟಾಲ್ ಹೊರಗೆ ಹಾಕ್ತೀವಿ. ಆ ಪೋಸ್ಟರ್ ನೋಡಿ ಜನ ಪುಸ್ತಕ ಕೊಂಡುಕೊಳ್ಳಬಹುದು.” ಎಂದು ಸಲಹೆ ಕೊಟ್ಟ ಪುಸ್ತಕ ಮಳಿಗೆಯವರೂ ಇದ್ದಾರೆ. ಆ ತರಹದ ಸಲಹೆ ಕೇಳಿದ ಮೇಲೆ ಒಂದೆರಡು ಮಳಿಗೆಗಳಿಗೆ ಈ ಪುಸ್ತಕಗಳು ಇಲ್ಲಿ ದೊರೆಯುತ್ತವೆ ಎಂದು ಪೋಸ್ಟರ್ ಮಾಡಿಸಿಕೊಟ್ಟಿದ್ದೂ ಇದೆ. ಪೋಸ್ಟರ್ ಮಾಡಿಸಿ ಹಾಕಿದರೂ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆ ಎಂದರೆ ಬಹುಶಃ ತಪ್ಪಾಗಲ್ಲ. ಯಾಕೆ ಕನ್ನಡ ಪುಸ್ತಕಗಳನ್ನು ಯಾರು ಕೊಂಡು ಓದೋದಿಲ್ಲ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಪುಸ್ತಕ ಮಳಿಗೆಯೊಂದರ ಮಾಲೀಕರೊಬ್ಬರು “ಸರ್ ವಾರಕ್ಕೆ ಕನ್ನಡದಲ್ಲಿ ನೂರರಿಂದ ನೂರಿಪ್ಪತ್ತು ಬುಕ್ ರಿಲೀಸ್ ಆಗುತ್ತೆ. ಓದುಗರು ಯಾವ ಪುಸ್ತಕ ಓದ್ತಾರೆ ಯಾವದನ್ನು ಬಿಡ್ತಾರೆ ಹೇಳಿ. ನಾವು ಪುಸ್ತಕ ಮಳಿಗೆಯವರು ಹೊಸ ಪುಸ್ತಕಗಳನ್ನು ಇಡಲು ಜಾಗವಿಲ್ಲದೆ ಪರದಾಡಬೇಕಾದ ಸ್ಥಿತಿ ಸಹ ಇದೆ. ಎಲ್ಲಾ ಕುವೆಂಪು, ತೇಜಸ್ವಿ, ರವಿ ಬೆಳಗೆರೆ ಬುಕ್ ಕೇಳ್ತಾರೆ ಸರ್. ಹೊಸ ರೈಟರ್ಸ್ ಬುಕ್ ಕೇಳೋದು ತುಂಬಾ ಕಮ್ಮಿ” ಎಂದಿದ್ದರು.
ಪ್ರಕಾಶನ ಕ್ಷೇತ್ರದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ ಕೆಲವು ಬುದ್ದಿವಂತ ಪ್ರಕಾಶಕರು ಒಂದೆರಡು ಕಾಪಿಗಳನ್ನು ಲೈಬ್ರರಿಗೆಂದು ಪ್ರಿಂಟ್ ಮಾಡಿಸಿ ಲೈಬ್ರರಿಗೆ ಸೆಲೆಕ್ಟ್ ಆದರೆ ಅಲ್ಲಿಗೆ ಬೇಕಾದಷ್ಟು ಕಾಪಿಗಳನ್ನು ಪ್ರಿಂಟ್ ಮಾಡಿಸಿ ಅವುಗಳನ್ನು ಲೈಬ್ರಿರಿಗೆ ನೀಡಿ ನಾಮಕಾವಸ್ಥೆಗೆ ಬಿಡುಗಡೆಯ ಸಮಾರಂಭ ಮಾಡಿ ಸುಮ್ಮನಾಗಿಬಿಡುತ್ತಾರೆ. ಅದಕ್ಕೆ ಸಾಕ್ಷಿ ಎಂದರೆ ಲೈಬ್ರರಿಗೆ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕದಂದು ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿಯ ಬಳಿ ನಿಲ್ಲುವ ಅರ್ಜಿ ಹಿಡಿದ ಪ್ರಕಾಶಕರ ಸಾಲು. ಲೈಬ್ರರಿಯಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದವರೂ ಸಹ ಬಹುಶಃ ಹೊಸ ಲೇಖಕರಿಗೆ ಒಂದಷ್ಟು ಧನ ಸಹಾಯ ನೀಡುತ್ತಾರೆ ಎಂದು ಕೇಳಿದ್ದೇನೆ. ಹೊಸ ಲೇಖಕರು ಪುಸ್ತಕಗಳ ಪ್ರಕಟಿಸೋಕೆ ಹೋದರೆ ಏನೆಲ್ಲಾ ಅನುಭವಿಸಬೇಕಾಗುತ್ತದೆ ಎಂಬ ಸತ್ಯ ತಿಳಿಯದೆ ಇರೋ ಎಷ್ಟೋ ಗೆಳೆಯರು ” ನನ್ನ ಪುಸ್ತಕವೊಂದನ್ನು ಪ್ರಕಟಿಸಬೇಕು ಎಂದುಕೊಂಡಿದ್ದೇನೆ. ನೀವು ಈಗಾಗಲೇ ಬುಕ್ ರಿಲೀಸ್ ಮಾಡಿದ್ದೀರ. ಏನಾದರು ಐಡಿಯಾಗಳನ್ನು ಕೊಡಿ.” ಎಂದು ಕೇಳಿದಾಗ ಈ ಎಲ್ಲವನ್ನು ಹೇಳಬೇಕು ಅನಿಸುತ್ತೆ.
ಕೊನೆಯ ಪಂಚ್: ಪ್ರಕಾಶನ ಕ್ಷೇತ್ರವನ್ನು ಹೀಗೆ ಒಮ್ಮೆ ಕಣ್ಣಾಡಿಸಿ ನೋಡಿದರೆ ಕೆಲವು ಲೇಖಕರಿಗಷ್ಟೇ ಮೀಸಲಾಗಿರುವಂತಹ ಪ್ರಕಾಶನ ಸಂಸ್ಥೆಗಳು, ಪುಸ್ತಕ ಮಳಿಗೆಗಳು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಹಿಂದೇಟು ಹಾಕುವುದಕ್ಕೆ ಒಮ್ಮೊಮ್ಮೆ ಅರ್ಥವಿದೆ ಅನಿಸುತ್ತೆ.
ತನ್ನ ಜೀವಮಾನದ ಗುರಿ ಎಂದುಕೊಂಡು ಪುಸ್ತಕ ಪ್ರಕಟಿಸಲು ಹೊರಡುವ ಯುವಕ ಏನೇನೆಲ್ಲಾ ಎದುರಿಸಬೇಕಾಗುತ್ತದೆ! ಬೇಸರದ ವಿಷಯ 🙁
ಹೊಸ ಬರಹಗಾರರೆಲ್ಲ ಹೆದರಿ ಗಡಗಡ ನಡುಗುವ ಸಂಪಾದಕೀಯ.
ಕಟುಸತ್ಯದ….ಅನುಭವಾತ್ಮಕ ಬರಹ…ಪ್ರಕಾಶನ ಕ್ಷೇತ್ರಕ್ಕೆ ಬರುವವರಿಗೆ ಎಚ್ಚರಿಕೆಯ ಘಂಟೆಯಾಗಿದೆ….ಶುಭದಿನ ಸರ್…
ಸಾಮಾಜಿಕ ಬದಲಾವಣೆಯ ಪ್ರತಿಬಿಂಬ ನಿಮ್ಮ ಲೇಖನ, ಅಂತರ್ಜಾಲ ಹಾಗು ಕಂಪ್ಯೂಟರ್ ಗಳು ಪುಸ್ತಕ ಪ್ರಪಂಚದ ಮೇಲೆ ಮಾಡಿರುವ ಪರಿಣಾಮವಷ್ಟೆ. ಹೇಗೆ ಸಿನಿಮ ಎಂಬುದು ನಾಟಕ ಯಕ್ಷಗಾನ ಮುಂತಾದ ಕಲೆಗಳನ್ನು ನುಂಗಿತೊ ಹಾಗೆ ಸಿನಿಮಾವನ್ನು ಟೀವಿ ಕೇಬಲ್ ಗಳು ನುಂಗಿದವೊ ಹಾಗೆ ಅಕ್ಷರ ಪ್ರಪಂಚವನ್ನು ಅಧುನಿಕ ಪ್ರಪಂಚ ನುಂಗಿರುವ ಚಿತ್ರಣ. ಅಲ್ಲದೆ ಬದಲಾಗಿರುವ ಜನರ ಮನೋಭಾವ. ಬೆಂಗಳೂರಿನಲ್ಲಿ ಪುಸ್ತಕಮೇಳೆ ನಡೆದಾಗ ಎಂಟು ಹತ್ತು ಲಕ್ಷ ಪುಸ್ತಕಗಳನ್ನು ಉಚಿತವಾಗಿ ಕೊಟ್ಟರು, ಆಗೆಲ್ಲ ನಾನು ಕೇಳಿಕೊಳ್ಳುತ್ತಿದ್ದ ಪ್ರಶ್ನೆ, ಎಷ್ಟು ಜನರು ಪುಸ್ತಕವನ್ನು ಮನೆಗೆ ಓಯ್ದ ನಂತರ ಓದಿದರು ? ಉತ್ತರವಿಲ್ಲ. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಮತ್ತೊಂದು ತಲೆಮಾರು ದಾಟಿದರೆ ಪುಸ್ತಕ ಪ್ರಕಾಶನ ನಿಲ್ಲಿಸಬೇಕಾಗುತ್ತೊ ಏನೊ ತಿಳಿದಿಲ್ಲ. ಹಾಗಾಗಿಯೆ ಸಾಹಿತ್ಯಾಸಕರು ಅಂತರ್ಜಾಲ ಸಾಹಿತ್ಯಕ್ಕೆ ಮೀಸಲಾಗುತ್ತಿದ್ದೇವೆ.
ಆದರೆ ನಿಮ್ಮ ಸಾಹಸ ಮೆಚ್ಚುಗೆ ಮೂಡಿಸುತ್ತದೆ. ಕತ್ತಲಲ್ಲಿ ಎಲ್ಲೊ ಒಂದು ಸಣ್ಣ ದೀಪ ಕಾಣುತ್ತಿದೆ.
Appata satya,1du pustaka prakatane madiro nanna anubhavavu ide andre tappalla.. hosa barahagaarara paristiti tumba shochaneeya….
ಯುವ ಪ್ರಕಾಶಕನೊಬ್ಬನ ಅಂತರಾಳದ ಮಾತುಗಳು ನನ್ನ ಮನಸನ್ನು ಕಡದಿಬಿಟ್ಟವು ನಟಣ್ಣ. ಅಲ್ಲದೇ ಪಂಚಿಂಗ್ ಸಾಲುಗಳು ನೂರಕ್ಕೆ ನೂರರಷ್ಟು ಸತ್ಯ ಅಂತ ನನಗೂ ಅನಿಸುತ್ತದೆ.. 🙁
ಯುವ ಪ್ರಕಾಶಕ
ನಟರಾಜು ಎಸ್. ಎಂ. ರ….
ಅಂತರಾಳದ ಮಾತುಗಳು ನನ್ನ ಮನಸನ್ನು ಕಡದಿಬಿಟ್ಟವು…….
ಆದರೂ ಅನುಭವಗಳಿಂದ ಗಳಿಸಿದ ಜ್ಞಾನ ಮುಂದೆ ಗೆಲುವಿಗೆ ದಾರಿ ದೀಪಕವಾಗಿ ಬೆಳಕು ನೀಡುತ್ತೆ…..
ಸತ್ಯ ಯಾಕಿಷ್ಟು ಕಹಿ 🙁
ತುಂಬಾ ಮನಮುಟ್ಟುವಂತೆ ಬರೆದಿದ್ದೀರಿ! ನಿಮ್ಮ ಸಂಪಾದಕೀಯ ಪ್ರತೀವಾರ ತಪ್ಪದೇ ಬರಲಿ!
ಕಟುವಾಸ್ತವ. ಬದಲಾಗುತ್ತಿರುವ ಜೀವನಶೈಲಿ ಜನರನ್ನು ಪುಸ್ತಕಗಳಿಂದ
ವಿಮುಖರನ್ನಾಗಿಸುತ್ತಿದೆ. ಒತ್ತಡ ಮನೋರಂಜನೆಯನ್ನು ಕೇಳುತ್ತಿದೆ.
ದೃಶ್ಯಮಾಧ್ಯಮಗಳು ಮನೋರಂಜನೆಗೆ instant ಆಯ್ಕೆಗಳಾಗುತ್ತಿವೆ. ಪುಸ್ತಕಗಳನ್ನು ಓದುವ ಒಂದು ಮನೋಸ್ಥಿತಿ, ಅದಕ್ಕೆ ಬೇಕಾದ ತಾಳ್ಮೆ
ಕಡಿಮೆಯಾಗುತ್ತಿದೆ.
ಅಪ್ಪಿತಪ್ಪಿ ಪುಸ್ತಕಗಳನ್ನು ಕೊಂಡರೂ, ಅವು ಈಗಾಗಲೇ hit ಆಗಿರುವ ಕೃತಿಗಳೇ
ಆಗಿರುತ್ತವೆ.
ಹೊಸ ಲೇಖಕರ ಪುಸ್ತಕಗಳನ್ನು ಕೊಂಡು ಓದಿ ಪ್ರೋತ್ಸಹಿಸುವವರ ಸಂಖ್ಯೆ
ಕಡಿಮೆಯಾಗುತ್ತಿದೆ.
ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿಗಳಿದ್ದಾಗ ಯುವಬರಹಗಾರರು ಮತ್ತು ಪ್ರಕಾಶಕರು ಧೃತಿಗೆಡುವುದು ಸಹಜ.
ಆದರೂ ಆಶಾಭಾವನೆಯನ್ನು ಕಳೆದುಕೊಳ್ಳಬಾರದು ಎಂಬುದು ನನ್ನ ಅನಿಸಿಕೆ .
ಯಾರು ಎಷ್ಟಾದರೂ ಹೇಳಬಹುದು, ಆದ್ರೆ ನಮ್ಮ ಹೊಟ್ಟನೋವು ನಮಗೆ ಮಾತ್ರ ಗೊತ್ತು
ಎನ್ನಬಹುದೇನೋ ನೀವು!
ಮಾನ್ಯ ಶ್ರೀ ನಟರಾಜ ರವರೆ
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಮೊದಲು ಅದಕ್ಕೆ ಧನ್ಯವಾದಗಳು
ಜೀವನದಲ್ಲಿ ಮನುಷ್ಯನಾದಮೇಲೆ ಕಷ್ಟ ನಷ್ಟ ಆಗುವುದು ಸಹಜ ಬದುಕು ಕಷ್ಟವಿದೆಯೆಂದು ಕೈಕಟ್ಟಿ ಕುಳಿತರೆ ಸಾಲದು ಕುವೆಂಪು ರವರು ಒಮ್ಮೆ ಪ್ರಸಿದ್ಧರಾಗಲಿಲ್ಲ , ರವಿ ಬೆಳೆಗೆರೆಯವರು ಒಮ್ಮಿಲೆ ಕನ್ನಡಿಗರ ಮನಸ್ಸಲ್ಲಿ ಉಳಿಯಲಿಲ್ಲ ಅದು ಒಂದು ಸಾಧನೆ ಹಾಗೂ ಛಲವಿದೆ ಅದರೊಂದಿಗೆ ಸದಾ ಹೋರಾಡುವ ಮನಸ್ಸಿನ ಶಕ್ತಿಯಿದೆ ಅಂದಾಗ ಮಾತ್ರ ಸಾದ್ಯ ಪ್ರಕಾಶಕನ ಕ್ಷೇತ್ರದಲ್ಲಿ ಕಲ್ಲು ಮುಳ್ಳುಗಳಿವೆ ಒಪ್ಪುತ್ತೇನೆ ಹಾಗಂತಾ ನಾವು ನಮ್ಮ ಕನಸ್ಸನ್ನು ಬಿಡುವುದು ತಪ್ಪು ನಮ್ಮ ವಿಚಾರಗಳು ಬಲಿಕೊಡುವುದು ತಪ್ಪು ಏನೆ ಆಗಲಿ ಈ ಸಮಾಜಕ್ಕೆ ಒಳಿತಾಗುವ ಒಂದು ವಿಷಯವನ್ನು ತಿಳಿಸಲು ಅವಶ್ಯಕವಾಗಿ ಯುವಕರಾದವರು ಮುಂದೆ ಬರಲೇ ಬೇಕು
ನಾನು ಐದನೆ ತರಗತಿಯಿಲ್ಲಿಯೆ ಪುಸ್ತಕ ಪ್ರಕಟಿಸಬೇಕು ಎಂದು ಛಲತೊಟ್ಟಾಗ ನನಗೆ ಎಷ್ಟೊ ಜನ ಹಿರಿಯರು ಬೈದರು ಕೆಲವರು ಅಪಹಾಸ್ಯ ಮಾಡಿ ನಕ್ಕರು ಅದರಲ್ಲಿ ಇನ್ನು ಕೆಲವರು ಬೆನ್ನು ತಟ್ಟಿದರು ಕೊನೆಗೆ ನಾನೆ ನನ್ನ ಗುರುಗಳ ಪ್ರಾಥಮಿಕ ಶಾಲೆಯ ಶಿಕ್ಷಕರ ಅವರ ಪಾಠದ ಆಧಾರ ಅವರ ಪ್ರೀತಿಯನ್ನು ಇಟ್ಟುಕೊಂಡು ಇವರು ನನ್ನ ಗುರುಗಳು ಎನ್ನುವ ಶಿರ್ಷಿಕೆಯಡಿ ದಾರದಿಂದ ಹೊಲಿದು ಪುಸ್ತಕ ಮಾಡಿ ಶಿಕ್ಷಕರ ದಿನದಂದು ಎಲ್ಲಾ ಶಿಕ್ಷಕರಿಗೂ ನೀಡಿದ ಭಂಟ ನಾನು ನಮಗೆ ಹೀಗೆ ಮಾಡಬೇಕು ಎನ್ನುವ ಕಟ್ಟುಪಾಡುಗಳ ಮದ್ಯೆ ಬದುಕಿ ಇಷ್ಟವಿಲ್ಲ ಏನಿದ್ದರು ಅಂದುಕೊಂಡಿದ್ದನ್ನು ಮಾಡಬೇಕು ಸಾಧಿಸಬೇಕು.
ಇನ್ನು ಪ್ರಕಾಶಕರ ಬಗ್ಗೆ ಹಾಗೂ ಲೇಖಕರ ಬಗ್ಗೆ ತಾವು ಪ್ರಸ್ಥಾಪಿಸಿದ್ದು ತುಂಬಾ ಕಟುಸತ್ಯವಾದ ಮಾತು ಇವತ್ತು ಲೇಖಕರು ಅವರೆ ಪ್ರಕಾಶಕರು ಅವರೆ ಅಷ್ಟೆ ಯಾಕೆ ಮಾರಾಟಗಾರರರು ಅವರೆ ಹೀಗೆ ಆದಮೇಲೆ ನಾವು ಯಾರಿಗೂ ದೂರುವಂತಿಲ್ಲ ಆದರೆ ಒಂದು ವಿಷಯ ಸಂತೋಷಕೊಡುವದೇನೆಂದರೆ ಇಂತಹ ಪರಿಸ್ಥಿತಿಯಲ್ಲೂ ಲೇಖಕರನ್ನು ಗುರುತಿಸುವ ಪ್ರಕಾಶಕರಿದ್ದದಾರೆ ಅವರನ್ನು ನೋಡಿ ಲೇಖಕರು ಬರೆಯಲೇಬೇಕು , ಕೆಲವು ಕ್ಷೇತ್ರಗಳಲ್ಲಿ ಕೆಲವರು ಏನೆ ಬರೆದರು ಪ್ರಕಟವಾಗುತ್ತದೆ . ನಾನೊಂದು ಪುಸ್ತಕ ಓದಿದ್ದೆ ಅದರ ತುಂಬಾ ಎಳೆ ಎಳೆಯಾಗಿ ಒಬ್ಬ ವ್ಯಕ್ತಿಯನ್ನು ಅವಹೇಳನ ಮತ್ತು ಆತನು ಒಂದು ಜನಾ/ಮಗದ ವಿರುದ್ದ ವ್ಯಕ್ತಿಯೆಂದೆ ಪ್ರತಿಬಿಂಬಿತವಾಗಿದೆ . ಅಂತಹ ಪುಸ್ತಕ ನಮ್ಮ ರಾಜ್ಯದಲ್ಲಿ ಸತತ 17 ಬಾರಿ ಮರು ಮುದ್ರಣ ಕಂಡಿದೆ ಅದಕ್ಕೆ ಮಾನ್ಯ ಕುವೆಂಪು ರವರ ಬೆನ್ನುಡಿಯಿದೆ ಮುನ್ನುಡಿ ಸ್ವತ: ಲೇಖಕರದ್ದೆ ಇದೆ . ಅದನ್ನು ಓದಿದ ಮೇಲೆ ನನಗೆ ಅನಿಸಿದ್ದು ಅಲ್ಲಾ ? ನಮ್ಮ ರಾಜ್ಯದಲ್ಲಿ ಇಂತಹ ಪುಸ್ತಕಗಳಿಗೆ ಮಾನ್ಯತೆ ಇರುವಾಗ ನಾನು ಹಲವು ಸಮಾಜಕ್ಕಿ ಪೂರಕವಾದ ಲೇಖನ ಬರೆಯುವಾಗ ಏಕೆ ? ಭಯ ಜಯ ಸಿಕ್ಕೆ ಸಿಗುತ್ತೆ ಅಂತಾ ಮತ್ತೆ ಬರೆಯಬೇಕು ಅನಿಸುತ್ತದೆ . ಈ ಪುಸ್ತಕ ಲೋಕ , ಪತ್ರಿಕೆ ಲೋಕ , ಟಿವಿ ಲೋಕ , ಒಂತರಾ ಇಂಟರನಲ್ ಕಾಸ್ಟ್ ಸಿಸ್ಟಂ ಇದ್ದ ಹಾಗೆ , ಹೊಸಬರಿಗೆ ದೂರ ದೂರ ಹಳೆಬರು ತಪ್ಪು ಬರೆದರು ಅದು ಸರಿಯಾಗಿಯೆ ಕಾಣುತ್ತದೆ.
ಕೊನೆಯ ಮಾತು : ಏನ್ ಆಗಲಿ ಮುಂದೆ ಸಾಗು ನೀ………. ಯಾರೆ ಓದಲಿ ಬಿಡಲಿ ಬರವಣಿಗೆ ನನಗೆ ಆತ್ಮ ತೃಪ್ತಿ ಕೊಡುವ ಹಾಗಿದ್ದರೆ ಅಕ್ಷರ ರೂಪ ಕೊಡುವುದೆ……….( 100 ಜನರಲ್ಲಿ ಒಬ್ಬರು ನಿಮ್ಮ ಲೇಖನ ನನ್ನ ಬದುಕಿನ ಹಾಗೆ ಇದೆ ಸ್ವಲ್ಪ ಹತ್ತಿರ ಅನಿಸಿತು ನಾನು ಸ್ವಲ್ಪ ಎಚ್ಚತ್ತುಕೊಂಡೆ ಅಂತಾರಲ್ಲ ಅಷ್ಟೆ ಸಾಕು )
( ಕನ್ನಡ ತಪ್ಪಾಗಿದ್ದರೆ ಕ್ಷಮೆಯಿರಲಿ )
ಇಷ್ಟೊಂದು ನಿರಾಶರಾಗುವ ಅಗತ್ಯವಿದೆ ಎಂದು ನನಗನಿಸಿತ್ತಿಲ್ಲ.ಹೌದು, ಮೊದಮೊದಲಿಗೆ ಒಂದಿಷ್ಟು ಕಷ್ಟವಾದೀತು.ಆದರೆ ಒಳ್ಳೆಯ ಬರಹಗಳಿಗೆ ಈಗಲೂ ಖಂಡಿತಾ ಬೇಡಿಕೆಯಿದೆ. ವಸುಧೇಂದ್ರ ಕೇವಲ ಹೊಸಬರ ಪುಸ್ತಕಗಳನ್ನಷ್ಟೇ ಪ್ರಕಟಿಸುವ ಪಣತೊಟ್ಟು ಯಶಸ್ವಿಯಾಗಿಲ್ಲವೇ? ಲೈಬ್ರರಿಗಳ ಲಾಬಿಗೆ ಕಾಯದೇ ಯಶಸ್ವಿಯಾಗಿ ಓದುಗರನ್ನ ತಲುಪಿಲ್ಲವೇ?
ಸಾಮಾನ್ಯವಾಗಿ ಪುಸ್ತಕ ಪ್ರಕಟಿಸುವ ಮುನ್ನ ಲೇಖಕ/ಪ್ರಕಾಶಕ ಕೇಳಿಕೊಳ್ಳಲೇಬೇಕಾದ ಪ್ರಶ್ನೆಯೊಂದಿದೆ. "ಜನ ಯಾಕಾಗಿ ಈ ಪುಸ್ತಕವನ್ನ ದುಡ್ಡು ಕೊಟ್ಟು ಕೊಳ್ಳಬೇಕು? ಅಂಥದ್ದೇನಿದೆ ಈ ಬರಹದಲ್ಲಿ" ಅಂತ. ನನ್ನದೂ ಒಂದು ಪುಸ್ತಕ ಇರಲಿ ಎಂದಷ್ಟೇ ಅಂದುಕೊಂಡು ಪ್ರಕಟಿಸಿದರೆ ಓದುಗ ದೊರೆ ಯಾಕೆ ಕೊಂಡೋದುವನು, ಅಲ್ಲವೇ?
ಪತ್ರಿಕೋದ್ಯಮದಂತೆ ಪುಸ್ತಕಲೋಕವೂ ಇಂದು ಹೊರಳುದಾರಿಯಲ್ಲಿದೆ. ಹಾರ್ಡ್ ಕಾಪಿಗಿಂತ ಸಾಫ್ಟ್ ಕಾಪಿಗಳಿಗೆ ಮಾರುಕಟ್ಟೆ ಹೆಚ್ಚುತ್ತಿದೆ. ಆಡಿಯೋ ಬುಕ್ಕುಗಳು ಪುಸ್ತಕ 'ಕೇಳುವ' ಸಂಪ್ರದಾಯಕ್ಕೆ ನಾಂದಿ ಹಾಡಿವೆ. ಪವನಜರ ಮೇರಾ ಲೈಬ್ರರಿಯಂತಹ ಜಾಲತಾಣಗಳಿಗೆ ಭವಿಷ್ಯ ಉಜ್ವಲವಾದಂತಿದೆ. ನಿಮ್ಮ ಈ ಪಂಜು ಕೂಡಾ ಈ ಬದಲಾವಣೆಯ ಭಾಗವೇ ಆಗಿದೆ ಎಂದು ಭಾವಿಸಿರುವೆ.
ಸಾಮಾನ್ಯವಾಗಿ ಪುಸ್ತಕ ಪ್ರಕಟಿಸುವ ಮುನ್ನ ಲೇಖಕ/ಪ್ರಕಾಶಕ ಕೇಳಿಕೊಳ್ಳಲೇಬೇಕಾದ ಪ್ರಶ್ನೆಯೊಂದಿದೆ. “ಜನ ಯಾಕಾಗಿ ಈ ಪುಸ್ತಕವನ್ನ ದುಡ್ಡು ಕೊಟ್ಟು ಕೊಳ್ಳಬೇಕು? ಅಂಥದ್ದೇನಿದೆ ಈ ಬರಹದಲ್ಲಿ” ಅಂತ. ನನ್ನದೂ ಒಂದು ಪುಸ್ತಕ ಇರಲಿ ಎಂದಷ್ಟೇ ಅಂದುಕೊಂಡು ಪ್ರಕಟಿಸಿದರೆ ಓದುಗ ದೊರೆ ಯಾಕೆ ಕೊಂಡೋದುವನು, ಅಲ್ಲವೇ? ಈ ಮಾತಂತೂ ಅಕ್ಷರಶಃ ಸತ್ಯ. ಜೊತೆಗೆ ನಟರಾಜು ಅವರು ಪ್ರಕಾಶನದ ಪ್ರಯಾಶ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದೂ ನಮಗೂ ಉಪಯೋಗವಾಗಿದೆ…
ನನ್ನದೂ ಒಂದು ಪುಸ್ತಕ ಇರಲಿ ಎಂದಷ್ಟೇ ಅಂದುಕೊಂಡು ಪ್ರಕಟಿಸಿದರೆ ಓದುಗ ದೊರೆ ಯಾಕೆ ಕೊಂಡೋದುವನು, ಅಲ್ಲವೇ? ಈ ಮಾತಂತೂ ಅಕ್ಷರಶಃ ಸತ್ಯ. ಜೊತೆಗೆ ನಟರಾಜು ಅವರು ಪ್ರಕಾಶನದ ಪ್ರಯಾಶ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದೂ ನಮಗೂ ಉಪಯೋಗವಾಗಿದೆ
Chennai haagu kerala dalli naanu nodida haage, elladaru hogabekadare train allo atava bussinallo ondillondu pustakavannu oduttale iruttare. adarallu avara mathru bhaasheya pustakagale hecchu. namma karnatakadalli, hecchagi benaglurinalli, nannannu serisi tumba aangla pustakagalanne odutteve. Adeno gottilla kannada pustakagala kadege namma hechina yuvakara manassu seleyuttale illa.
nataraju
idu nannannu kaduttiruva prashne.
adare idondu sankeerna samasye.
yaaranne bottu madodarinda idakke uttara sigalla..
daari enaadaru hudukabeku.
ee karanakke nimma pustaka bandaga naanu pade pade keliddu estu kharchaytu anta..
fbnalli istu prachara kotru pustaka kharchaguttilla andare enartha gotta.
jagateekarana jagattannu halliyagusuttade antaralla. adu yava reeti anta kelikolla bekagide
utsaha kalakollabedi. ee bagge nanna khana kooda nanna hosa pustakadallide.
heegagi adannu nimage kalisabeku anisidaru kalisalaguttilla. kshameyorali, vishwasavirali.
ನಟರಾಜಣ್ಣ!
ಹಾಗೆ ಸತ್ಯ ಯಾವಾಗಲೂ ಕಹಿಯೇ! ಕನ್ನಡದಲ್ಲಿ ಪುಸ್ತಕ ಕೊಂಡುಕೊಂಡು ಓದುವ ಜನರು ಕಡಿಮೆ. ಓದುವವರು ಇದ್ದಾರೆ, ನಮ್ಮಂಥ ಯುವಕರಿಗೆ ಕಾಣುವುದು ಕೇವಲ ಬೆಂಗಳೂರು ಮಾತ್ರ. ನಾವು ಪುಸ್ತಕಗಳು ಪ್ರತಿ ತಾಲೂಕಿಗೆ ಸೇರುವಂತೆ ಮಾಡಬೇಕು. ಹಾಗಿದ್ದರೆ ಮಾತ್ರ ಪುಸ್ತಕಗಳು ಮಾರಾಟವಾಗುತ್ತವೆ. ಮಾನವನಲ್ಲಿ ಹೊಸತನ್ನ "experiment" ಮಾಡುವವರು ಬಹಳ ಕಡಿಮೆ!
Nijakku besarad sanganti…………………!
ಸತ್ಯ ಕಹಿಯಾದರೂ ಸ್ವಲ್ಪ ಶ್ರಮದಿಂದ ಮುಂದೆ ಜಯ ಇರೋದಂತು ಸತ್ಯ…ತುಂಬಾ ಚನ್ನಾಗಿ ಪ್ರಕಾಶಕನ ಅಂತರಂಗವನ್ನ ಬಿಚ್ಚಿಟ್ಟಿ ದ್ದೀರಿ .
estu dina pustaka maligege ogi estondu pustaka nija kaali agutta antha ondu dodda ashcharyadalli orabaruttidde….
naanu kandante sumaaraagi doddada pustaka maligeyallu osa barahagaarara pustaka hudukidaru sigadae maligeya maaliokarannu kehlidare "howda madam?? yaaru baredirodu adanna?? ennomme tarisikudutteve"… antha ondu samadaanada maatu adtaare……
enno yesto jana kannada pustaka edidu odutta kuttidare ondu reetiya vikata nageyanna nammatta biruttare….. enno kelavaru avara paalige kannada pustaka oduttiruva naave kavigalante kaanuvudu koda untu, adanna matobbara hattira abhipraya hanchikolluvudu untu….
kanditha…. yecchu yecchu pustaka odi mattobbarige parichayisuva kelasa maaduve…..
i wish u succuss for ur venture
ಪುಸ್ತಕ ಕೊಂಡು ಓದುವವರ ಸಂಖ್ಯೆಯೇ ಕಡಿಮೆಯಾಗಿದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸುವ ಬೇಕಾಗಿರುವು ನಮ್ಮ ಕನ್ನಡ ಶಿಕ್ಷಕರ ಮತ್ತು ಉಪನ್ಯಾಸಕರ ಜವಾಬ್ದಾರಿಯಾಗಿದೆ.
ಸಾಮಾನ್ಯವಾಗಿ ಪುಸ್ತಕ ಪ್ರಕಟಿಸುವ ಮುನ್ನ ಲೇಖಕ/ಪ್ರಕಾಶಕ ಕೇಳಿಕೊಳ್ಳಲೇಬೇಕಾದ ಪ್ರಶ್ನೆಯೊಂದಿದೆ. “ಜನ ಯಾಕಾಗಿ ಈ ಪುಸ್ತಕವನ್ನ ದುಡ್ಡು ಕೊಟ್ಟು ಕೊಳ್ಳಬೇಕು? ಅಂಥದ್ದೇನಿದೆ ಈ ಬರಹದಲ್ಲಿ” ಅಂತ. ನನ್ನದೂ ಒಂದು ಪುಸ್ತಕ ಇರಲಿ ಎಂದಷ್ಟೇ ಅಂದುಕೊಂಡು ಪ್ರಕಟಿಸಿದರೆ ಓದುಗ ದೊರೆ ಯಾಕೆ ಕೊಂಡೋದುವನು, ಅಲ್ಲವೇ? ಈ ಮಾತಂತೂ ಅಕ್ಷರಶಃ ಸತ್ಯ. ಜೊತೆಗೆ ನಟರಾಜು ಅವರು ಪ್ರಕಾಶನದ ಪ್ರಯಾಶ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದೂ ನಮಗೂ ಉಪಯೋಗವಾಗಿದೆ…