ಯುವಜನರ ಹಕ್ಕುಗಳ ರಕ್ಷಣೆಗೂ ಆಯೋಗ ಬೇಕಲ್ಲವೇ?: ರುಕ್ಮಿಣಿ ನಾಗಣ್ಣವರ

ಫಕ್ಕೀರಪ್ಪ. ಹುಟ್ಟಿ-ಬೆಳೆದದ್ದು ಬೆಳಗಾವಿ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ. ದೊಡ್ಡ ವ್ಯಕ್ತಿಯಾಗುವ ಅಥವಾ ಉನ್ನತ ಸಾಧನೆ ಮಾಡುವ ಅದಮ್ಯ ಕನಸುಗಳೇನೂ ಇರಲಿಲ್ಲ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸಿದ ಅವರಿಗೆ ವಿಶ್ವವಿದ್ಯಾಲಯದ ಮೆಟ್ಟಿಲೇರುವ ಗುರಿ ಇರಲಿಲ್ಲ. ಅಷ್ಟೇ ಅಲ್ಲ, ಪಿಯು ಕಾಲೇಜಿಗೆ ಹೋಗುವ ಸ್ಪಷ್ಟ ಕಲ್ಪನೆಯೂ ಇರಲಿಲ್ಲ. ಆಯಾ ದಿನದ ದುಡಿಮೆಯನ್ನೇ ನಂಬಿದ್ದ ತಂದೆ, ತಾಯಿಗೂ ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಶಕ್ತಿ ಇರಲಿಲ್ಲ. ಸಾಂವಿಧಾನಿಕ ಹಕ್ಕು ಇದ್ದರೂ ಆರ್ಥಿಕ ಮತ್ತು ಇನ್ನಿತರ ಸೌಲಭ್ಯದ ಕೊರತೆಯಿಂದ ಫಕ್ಕೀರಪ್ಪಗೆ ಶಾಲೆಯ ನಂತರದ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ.

ಸಂಜಯ್. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದು ಸ್ನಾತಕೋತ್ತರ ಶಿಕ್ಷಣ ಪಡೆದವರು. ಆದರೆ ಬದುಕಿನ ಒಂದು ಮಜಲಿನಲ್ಲಿ ದುಶ್ಚಟಗಳು ಜೊತೆಯಾದವು. ಧೂಮಪಾನ, ಮದ್ಯಪಾನದ ಧ್ಯಾನದಲ್ಲೇ ಹೆಚ್ಚು ಇರತೊಡಗಿದ ಅವರಿಗೆ ಜೀವನದ ಗುರಿಯೇನು ಎಂಬುದೇ ಮರೆತು ಹೋಯಿತು. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಮತ್ತು ಕಾಲೇಜಿನಲ್ಲಿ ಆಪ್ತ ಸ್ನೇಹಿತರು ತಿಳಿ ಹೇಳಿದರೂ ಮನಸ್ಸು ಮಾತ್ರ ಬದಲಾಗಲಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಎಲ್ಲರಿಂದ
ಅಪಮಾನಕ್ಕೆ ಒಳಗಾದಾಗ, ಆತ್ಮಹತ್ಯೆಯಲ್ಲದೇ ಬೇರೆ ದಿಕ್ಕೇ ಕಾಣಲಿಲ್ಲ.

ಲಲಿತಾ. ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯುಳ್ಳವರು. ಸಿನಿಮಾ ನಟಿಯಾಗುವ ಉಮೇದು.
ಕಲಾ ತರಬೇತಿ ಸಂಸ್ಥೆಯಲ್ಲಿ ಸೇರಿಕೊಂಡು ನೃತ್ಯ, ಗಾಯನ ಕಲಿಯುವ ಅಪೇಕ್ಷೆ. ಆದರೆ
ಮನೆಯಲ್ಲಿ ಸಿನಿಮಾ ನೋಡುವುದೇ ಅಪರಾಧ ಎಂಬ ಅಲಿಖಿತ ಕಾನೂನು. ಓದುವುದು ಬಿಟ್ಟು
ಟಿವಿ-ಸಿನಿಮಾ ನೋಡುತ್ತ ಕೂರುತ್ತೀಯಾ ಎಂಬ ಬೈಗುಳ. ಕಲಾ ಪದವಿ ಪೂರ್ಣಗೊಳಿಸಿದ ಕೂಡಲೇ ಅವರನ್ನು ಮದುವೆ ಮಾಡಲಾಯಿತು. ಮೂರೇ ವರ್ಷದಲ್ಲಿ ಎರಡು ಮಕ್ಕಳಾದವು. ಮಕ್ಕಳ ಪೋಷಣೆ-ಸಂಸಾರ ನಿರ್ವಹಣೆಯಲ್ಲಿ ಅವರ ಬದುಕು ಕಳೆಯಿತು.

ಬಹುತೇಕ ಯುವಜನರ ಪಾಡು ಹೇಗಿದೆಯೆಂದು ಎಂಬುದನ್ನು ಅರಿಯಲು ಫಕ್ಕೀರಪ್ಪ, ಸಂಜಯ್ ಮತ್ತು ಲಲಿತಾ ಅವರ ಬದುಕಿನ ಸಂಕ್ಷಿಪ್ತ ಪರಿಚಯವೇ ಸಾಕು. ಸಕಾಲಕ್ಕೆ ಅವರಿಗೆ ನೆರವು ಮತ್ತು ಮಾರ್ಗದರ್ಶನ ಸಿಕ್ಕಿದ್ದರೆ, ಅವರ ಬದುಕಿನ ಹಾದಿಯೇ ಬದಲಾಗುತಿತ್ತು. ಇಂತಿಂಥ ಸಂದರ್ಭದಲ್ಲಿ
ಹೀಗೆ ಮಾಡಿದರೆ ಅಥವಾ ಇತ್ತ ಸಾಗಿದರೆ, ಹೊಸದೊಂದು ತಿರುವು ಪಡೆಯಬಹುದು ಎಂಬ ಆಶಾಭಾವ ಬಿತ್ತುವ ಕಾರ್ಯವೂ ನಡೆದಿರುವುದಿಲ್ಲ. ಸ್ಪಷ್ಟ ಮಾರ್ಗಗಳು ಇರುವುದಿಲ್ಲ.

ಸಂದಿಗ್ಧ ಸ್ಥಿತಿಯಲ್ಲಿ ಸವಾಲುಗಳನ್ನು ಎದುರಿಸುತ್ತ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವ ಯುವಜನರು ಹಲವು ಸ್ವರೂಪಗಳಲ್ಲಿ ಗೂಂದಲ, ಆತಂಕ ಮತ್ತು ಭೀತಿ ಒಳಗಾಗುತ್ತಾರೆ. ಎಷ್ಟೋ ವಿಷಯಗಳನ್ನು ಸಂಕೋಚದಿಂದ ಆಪ್ತರೊಂದಿಗೆ ಹಂಚಿಕೊಳ್ಳಲಾಗದೇ, ಭಯದಿಂದ ಹಿರಿಯರೊಂದಿಗೆ ಹೇಳಿಕೊಳ್ಳಲಾಗದೇ ಮತ್ತು ಮನಸ್ಸಿನ ಭಾವನೆ ಅದುಮಿಡಲಾಗದೇ ಸಂಕಟ ಅನುಭವಿಸುತ್ತಾರೆ.

ದೇಹದಲ್ಲಿ ಆಗುವ ಪ್ರಾಕೃತಿಕ ಬದಲಾವಣೆ, ಲೈಂಗಿಕ ಕಾಮನೆಗಳು, ಏಕಾಗ್ರತೆ ಕೊರತೆ, ಶೈಕ್ಷಣಿಕ ಸಮಸ್ಯೆಗಳು, ವ್ಯಕ್ತಿತ್ವ ವಿಕಸನದ ಸಂಕಷ್ಟಗಳು, ಉದ್ಯೋಗಾವಕಾಶದ ಕೊರತೆ, ಮೇಲುಕೀಳು ಎಂಬ ಭಾವನೆ ಮುಂತಾದವುಗಳನ್ನು ದಾಟಿಕೊಂಡು ಒಂದೆಡೆ ಬದುಕಿನಲ್ಲಿ ಯಶಸ್ಸು ಕಾಣಬೇಕು. ಮತ್ತೊಂದೆಡೆ, ಪ್ರತಿು ಹಂತದಲ್ಲೂ ತೀವ್ರ ಪೈಪೋಟಿ ಎದುರಿಸುತ್ತ ಸುಭದ್ರ ಬದುಕು ಕಟ್ಟಿಕೊಳ್ಳಬೇಕು. ಬದುಕಿನಲ್ಲಿ ಸ್ವಲ್ಪ ಏರುಪೇರುಗಳಾದರೂ ಅದನ್ನು ಎದುರಿಸುವ ನೈತಿಕ ಸ್ಥೈರ್ಯ, ಆತ್ಮವಿಶ್ವಾಸ ಇರಬೇಕು. ಇಲ್ಲದಿದ್ದರೆ, ಬದುಕಿನಲ್ಲಿ ಇನ್ನೇನೂ ಉಳಿದಿಲ್ಲ. ಎಲ್ಲವೂ ಮುಗಿಯಿತು ಎಂಬ ಭಾವನೆ ಕಾಡಲು ಆರಂಭಿಸುತ್ತದೆ. ಇಂತಹ ಒಂದು ಘಟ್ಟದಿಂದ ಬಹುತೇಕ ಮಂದಿ ಹಾದು ಹೋಗುತ್ತಾರೆ.

ಸದ್ಯದ ಸಾಮಾಜಿಕ ಪರಿಸ್ಥಿತಿ ಕೊಂಚ ಸೂಕ್ಷ್ಮವಾಗಿ ಅವಲೋಕಿಸಿದರೆ, ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರ ಸಮಸ್ಯೆ-ಸಂಕಷ್ಟಗಳಿಗೆ ಸ್ಪಂದಿಸುವ ಪ್ರಕ್ರಿಯೆ ನಡೆದಿದೆ.ಮಹಿಳೆಯರನ್ನು ಸಂಕಷ್ಟದಿಂದ ಪಾರು ಮಾಡಲೆಂದೇ ಮಹಿಳಾ ಆಯೋಗ ಅಲ್ಲದೇ ಸಹಾಯವಾಣಿ ಇದೆ. ಮಕ್ಕಳು ಮತ್ತು ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಸಹಾಯವಾಣಿ ಇದೆ. ಅವರ ಸಲುವಾಗಿ ಆಯೋಗ ಮತ್ತು ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಆದರೆ, ಯುವಜನರ ವಿಷಯಕ್ಕೆ ಬಂದಾಗ, ಅವರ ಸಮಸ್ಯೆ-ಸವಾಲುಗಳಿಗೆ ಸ್ಪಂದಿಸುವಂತಹ ಆಯೋಗವಿಲ್ಲ. ಸಹಾಯವಾಣಿ ಸೌಲಭ್ಯವೂ ಇಲ್ಲ. ಹಕ್ಕುಗಳು ಸಹ ಘೋಷಣೆ ಆಗಿಲ್ಲ. ಬದುಕಿನಲ್ಲಿ ಎಂಥದ್ದೇ ಅಪಚಾರ, ಅನಾಹುತಕ್ಕೆ ತುತ್ತಾದರೂ ಅದಕ್ಕೆ ಯುವಜನರೇ ಹೊಣೆ ಹೊರತು ಸಮಾಜವಲ್ಲ ಎಂದು ಬಿಂಬಿಸಲಾಗುತ್ತದೆ.

ಮನಶಾಸ್ತ್ರಜ್ಞರ ಪ್ರಕಾರ, ಎಲ್ಲಾ ವಯೋಮಾನದವರ ಬದುಕಿನ ಗತಿಯ ಅಧ್ಯಯನ ಕೈಗೊಂಡಲ್ಲಿಯುವಜನರು ಅತಿ ಹೆಚ್ಚು ಸಂಕಷ್ಟಗಳನ್ನು ಎದುರಿಸುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಾಲ್ಯದಿಂದ ಯೌವ್ವನಕ್ಕೆ ಪ್ರವೇಶಿಸುವ ಕಾಲಘಟ್ಟದಲ್ಲಿ ಯುವಜನರು ಬದುಕಿನ ಹೊಸ ಆಯಾಮಕ್ಕೆ ತೆರೆದುಕೊಳ್ಳುತ್ತಾರೆ. 18 ರಿಂದ 30ರವರೆಗಿನ ವಯೋಮಾನದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಅಚ್ಚರಿ ಮೂಡಿಸುತ್ತವೆ.ಯಾವುದೇ ಅಡತಡೆಯಿಲ್ಲದೇ ಶಿಕ್ಷಣ ಪೂರೈಸುವುದಲ್ಲದೇ ಸಕಾಲಕ್ಕೆ ಉದ್ಯೋಗ ಗಳಿಸುವುದು ಅನಿವಾರ್ಯ ಆಗುತ್ತದೆ. ಇವು ಎರಡರಲ್ಲೂ ಯಶಸ್ಸು ಕಾಣಿಸದಿದ್ದರೆ, ಸಮಾಜವು ಬೇರೆ ದೃಷ್ಟಿಯಿಂದ ನೋಡತೊಡಗುತ್ತದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಮತ್ತು ಯುವಜನರ ಹಿತದೃಷ್ಟಿಯಿಂದ ಯುವಜನರ ಆಯೋಗ ರಚಿಸಬೇಕಿದೆ. ಯುವಜನರಿಗೆ ತಮ್ಮೊಳಗಿನ ಭಾವನೆ ಹಂಚಿಕೊಳ್ಳಲು, ತುಮುಳಗಳನ್ನು ಹೇಳಿಕೊಳ್ಳಲು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಕಲ್ಪಿಸಬೇಕಿದೆ. ದೇಶ ಮತ್ತು ರಾಜ್ಯದ ಶಕ್ತಿ, ಸಂಪನ್ಮೂಲ ಮತ್ತು ಜೀವಾಳ ಆಗಿರುವ ಯುವಜನರತ್ತ ಕೊಂಚ ಗಮನಹರಿಸುವುದು ಅವಶ್ಯ ಮತ್ತು ಅನಿವಾರ್ಯವಾಗಿದೆ. ಇದರಿಂದ ಅವರ ಬದುಕು ಸುಧಾರಿಸುವುದಲ್ಲದೇ ದೇಶದ ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯಕ್ಕೂ ಪೂರಕವಾಗುತ್ತದೆ. ಯುವಜನರ ಏಳ್ಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಯುವಜನ ಆಯೋಗ ರಚಿಸುವ ಕುರಿತು ಮಹತ್ವದ ನಿರ್ಣಯ ಕೈಗೊಂಡಲ್ಲಿ ಉಪಯುಕ್ತವಾಗುತ್ತದೆ. ಈ ನಿಟ್ಟಿನಲ್ಲಿ ನಾಡಿನ ಪ್ರಜ್ಞಾವಂತರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಕೈ ಜೋಡಿಸಬೇಕಿದೆ.

ರುಕ್ಮಿಣಿ ನಾಗಣ್ಣವರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x