ಯುರೇಕಾ..! ಯುರೇಕಾ..!! : ಎಸ್.ಜಿ.ಶಿವಶಂಕರ್

’ರೀ…’ ಅಲೆಅಲೆಯಾಗಿ ತೇಲಿಬಂದು ವಿಶ್ವನ ಕರ್ಣಪಟಲದ ಮೇಲೆ ಪ್ರಹರಿಸಿದುವು-ಶಬ್ದ ತರಂಗಗಳು!

ತೂಕಡಿಸುತ್ತಿದ್ದ ವಿಶ್ವ ಮೆಟ್ಟಿ ಬಿದ್ದ!! ನಿದ್ರೆ ಹಾರಿತು! ಬಿ.ಪಿ ಏರಿತು! ಅದು ತನ್ನ ಜೀವನ ಸಂಗಾತಿ ವಿಶಾಲೂ ದನಿಯೆಂದು ತಿಳಿದು. ಆ ಕ್ಷಣ ಏನು ಮಾಡಬೇಕೆಂದು ತೋಚದೆ ಅವಾಕ್ಕಾದ. ಆ ದನಿಯಲ್ಲಿನ ಭಾವ ಅರ್ಥ ಮಾಡಿಕ್ಕೊಳ್ಳಲು ಪ್ರಯತ್ನಿಸಿದ.

ಮೊದಲಿಗೆ ದನಿ ಬಂದ ದಿಕ್ಕು ಗುರುತಿಸಲು ಪ್ರಯತ್ನಿಸಿದ. ಅದು ಮನೆಯ ಹಿಂಭಾಗದಿಂದ ಬಂತು ಎಂಬುದನ್ನು ಯಶಸ್ವಿಯಾಗಿ ಗುರುತಿಸಿದ. ನಂತರ ಆ ದನಿಯಲ್ಲಿ ಆತಂಕವಿದೆಯೆ..? ಗಾಬರಿಯಿದೆಯೆ..? ಇಲ್ಲಾ ಸಹಜವಾದ ಕರೆಯೇ..? ಕೆಲವು ಕ್ಷಣಗಳು ಯೋಚಿಸಿದ. ಗಾಬರಿಗೆ ಕಾರಣವಿಲ್ಲ, ಕಾರಣ ವಿಶಾಲೂ ಧೈರ್ಯವಂತೆ! ರಿಟೈರ್‍ಡ್ ಮೇಜರ್ ಮಗಳು! ಕೊಡಗಿನ ವೀರ ಮಹಿಳೆ!! ಅಂದರೆ ಆತಂಕಕ್ಕೆ ಕಾರಣವಾಗುವ ಯಾವುದೇ ಸಂಗತಿಯೂ ಘಟಿಸುವ ಸಾಧ್ಯತೆಯಿರಲಿಲ್ಲ ಅತ್ಯಂತ ನಿರ್ಲಿಪ್ತವಾದ ದಿನಚರಿ ತಮ್ಮದು. ಅಂದ ಮೇಲೆ ಅದು ಸಹಜವಾದ ಕರೆ ಎಂಬ ತೀರ್ಮಾನಕ್ಕೆ ಬಂದ ವಿಶ್ವ.

"ಕೇಳಿಸ್ತಾ ಕೂಗಿದ್ದು? ತೂಕಡಿಸ್ತಾ ಇದ್ದೀರಾ..?"

ಇನ್ನೊಮ್ಮೆ ಬಂತು ಅದೇ ಕರೆ. ಈ ಸಾರಿ ಶಬ್ದದ ತೀವ್ರತೆ ಹೆಚ್ಚಾಗಿತ್ತು. ಅದಕ್ಕೆ ಓಗೊಡದಿದರೆ ಅದು ಇನ್ನೂ ಹೆಚ್ಚಾಗಬಹುದು, ಕೊನೆಗೆ ಹುಚ್ಚಾಗಬಹುದು ಎನಿಸಿತು.

"ಇಲ್ಲಾ ಬಂದೇ…" 

ಕುರ್ಚಿಯಿಂದ ಗಡಬಡಿಸಿ ಎದ್ದು ಶಬ್ದ ಬಂದತ್ತ ಧಾವಿಸಿದ ವಿಶ್ವ.

ಸೊಂಟದ ಮೇಲೆ ಕೈಯಿಟ್ಟುಕೊಂಡು ಒನಕೆ ಓಬವ್ವನ ಫೋಸಿನಲ್ಲಿ ವಾಷಿಂಗ್ ಮೆಷಿನ್ ಮುಂದೆ ನಿಂತಿದ್ದಳು ವಿಶಾಲು. ಪುಣ್ಯಕ್ಕೆ ಕೈಯಲ್ಲಿ ಒನಕೆ ಇಲ್ಲ ಎಂಬ ಯೋಚನೆ ಬಂದು ಮುಖದಲ್ಲಿ ನಗು ಮಿಂಚಿತು.

"ಯಾಕ್ಹಾಗೆ ಹಲ್ಕಿರೀತೀರಿ..?"

ಮಾತಿನಲ್ಲಿ ಮೂವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ದಂಪತಿಗಳ ಸಹಜ ವರಸೆಯಿತ್ತು!

"ಏನಿಲ್ಲಾ, ಇನ್ನೊಂದು ಕೈನಲ್ಲಿ ಒನಕೆ ಇದ್ದಿದ್ದರೆ ಸಾಕ್ಷಾತ ಒನಕೆ ಓಬ್ವನ ತರಾನೇ ಕಾಣಿಸ್ತಿದ್ದೆ’

’ಇಂತಾ ಕೆಟ್ಟ ಹಾಸ್ಯಕ್ಕೇನೂ ಕಮ್ಮಿ ಇಲ್ಲ’ ಮಾತಲ್ಲಿ ತಿವಿದಳು ವಿಶಾಲೂ.

’ಹಾಸ್ಯದಲ್ಲಿ ಒಳ್ಳೆಯದು ಕೆಟ್ಟದ್ದು ಇಲ್ಲವೇ ಇಲ್ಲ! ಹಾಸ್ಯ ಹಾಸ್ಯವೇ’ ವಿಶ್ವ ಸಮಜಾಯಿಸಿ ನೀಡಿದ.

’ನಿಮ್ಮದು ಹಾಸ್ಯವಲ್ಲ! ಅಪಹಾಸ್ಯ’ ವಿಶಾಲು ಕೆರಳಿದ್ದಳು.

’ಸರಿ, ಕರೆದ ವಿಷಯ ಪೇಳುವಂvವಳಾಗು ನಾಗವೇಣಿ’ ನಾಟಕೀಯವಾಗಿ ಕೇಳಿದ ವಿಶ್ವ.

’ನನ್ನ ತಲೆಗೂದಲು ಕಾವೇರಿ ನೀರು ನಲ್ಲಿಯಲ್ಲಿ ಬರೋವಾಗ ಚೆನ್ನಾಗೇ ಇತ್ತು. ಕಾರ್ಪೊರೇಷನ್ನಿನವರು ಬೋರ್‍ವೆಲ್ ನೀರು ಕೊಡೋಕೆ ಶುರುಮಾಡಿದ ಮೇಲೆ ಈ ಸ್ಥಿತಿಗೆ ಬಂದಿದೆ. ಅದನ್ನೇನೂ ಹಂಗಿಸೋದು ಬೇಡ! ಮೊದಲು ನಿಮ್ಮ ತಲೆ ನೋಡ್ಕೊಳ್ಳಿ’ ವಿಶಾಲೂ ಗುರ್ರೆಂದಳು!

’ಇಲ್ಲ ಮಹರಾಯ್ತಿ ಹಂಗಿಸಲಿಲ್ಲ. ಪೌರಾಣಿಕ ನಾಟಕದ ಡೈಲಾಗು ನೆನಪಾಯ್ತು ಅಷ್ಟೆ’ ವಿಶ್ವ ತನ್ನ ಬಕ್ಕ vಲೆಯ ಮೇಲೆ ಕೈಯಾಡಿಸಿಕೊಂಡ.

’ಇಲ್ಲಿ ನೋಡಿ’ ವಿಶಾಲೂ ಅವನ ಗಮನ ಸೆಳೆದಳು.

’ಎಲ್ಲಿ..?’

’ನೋಡಿ ನಿಮ್ಮ ಷರ್ಟು’ ಒಗೆಯಲೆಂದು ಕೈಯಲ್ಲಿ ಹಿಡಿದಿದ್ದ ವಿಶ್ವನ ಷರ್ಟನ್ನು ಮುಂದೆ ಚಾಚಿದಳು.

’ನೋಡಿದೆ’

’ತೋಳು ನೋಡಿ’

’ನೋಡಿದೆ’

’ಇಲ್ಲೇನೂ ಕಾಣಿಸ್ತಿಲ್ಲವೆ..?’

’ಷರ್ಟಿನ ತೋಳು ಕಾಣಿಸ್ತಿದೆ’

’ಥೂ ನಿಮ್ಮ..ಇಲ್ಲಿ ನೋಡಿ ಮುಂಗೈ’

ಮಾತಿನಿಂದ ಮಾತಿಗೆ ವಿಶಾಲೂ ದನಿ ಏರುತ್ತಿತ್ತು!

’ನೋಡಿದೆ’

’ನಿಮ್ಮ ಬುದ್ದಿ ಜೊತೆಗೆ ಕಣ್ಣಿನ ದೃಷ್ಟೀನೂ ಮಂದವಾಗಿದೆ’

’ಅದೇನು ಹೇಳ್ಬೇಕೂಂತಿದ್ದೀಯೋ ನೇರವಾಗಿ ಹೇಳು ಮಹರಾಯ್ತಿ! ಮಾತುಮಾತಿಗೂ ನಗೆ ವಯಸ್ಸಾಗಿದೆ ಅಂತ ನೆನಪಿಸಬೇಡ! ನಿನಗೂ ವಯಸ್ಸಾಗಿದೆ’

ನಾನೂ ಎದುರ ಮಾತಾಡಬಲ್ಲೆ ಎಂಬ ದಿಟ್ಟ ಸಂದೇಶವನ್ನು ಮುಟ್ಟಿಸಿದ ವಿಶ್ವ!

’ಮಾತಿಗೆ ಮಾತು ಜೋಡಿಸೋದು ಚೆನ್ನಾಗಿ ಬರುತ್ತೆ! ಇಲ್ಲಿ ನೋಡಿ ಈ ಷರ್ಟಿನ ಮಂಗೈ ಎಷ್ಟು ಹೊಲಸಾಗಿದೆ. ಇಲ್ಲಿ ನೋಡಿ! ಚೆನ್ನಾಗಿ ನೋಡಿ’

ಘೋರ ಅಪರಾಧ ಮಾಡಿದ ಕೈದಿಯನ್ನು ಗದರಿಸು ಪೋಲೀಸ್ ಇನ್ಸ್‌ಪೆಕ್ಟರ್ ದರ್ಪ ಮಾತಿನಲ್ಲಿತ್ತು.

’ನಿಜ, ತುಂಬಾ ಗಲೀಜಾಗಿದೆ’ ವಿಶ್ವ ಒಪ್ಪಿದ. 

’ಅದೇ..ಯಾತಕ್ಕೇಂತ? ನೀವೇನು ಕಾಲೇಜಲ್ಲಿ ಪಾಠ ಮಾಡ್ತೀರೋ..ಇಲ್ಲಾ ಯಾವುದಾದರೂ ಗ್ಯಾರೇಜಲ್ಲಿ ಮೆಷೀನು ರಿಪೇರಿ ಮಾಡ್ತೀರೋ..?’

’ಇಷ್ಟು ವರ್ಷ ಆದಮೇಲೆ ಅನುಮಾನವೇನೆ ನನ್ನ ಕೆಲಸದ ಬಗ್ಗೆ"

’ಅನುಮಾನ ಬರದೆ ಇರುತ್ತ್ತಾ? ಶರ್ಟಿನ ತೋಳು ಈ ಪಾಟಿ ಹೊಲಸು ಹೇಗಾಯ್ತು? ಷರ್ಟಿನ ಉಳಿದ ಕಡೆ ಇಷ್ಟು ಗಲೀಜಿಲ್ಲ. ಎರಡು ದಿನಕ್ಕೆ ಷರ್ಟು-ಪ್ಯಾಂಟು ಬದಲಾಯಿಸ್ತೀರ! ಅಂತಾದ್ರಲ್ಲಿ ಇದೇನು ಅಧ್ವಾನ? ಇದೊಂದು ಷರ್ಟಲ್ಲ..ನಿಮ್ಮ ಎಲ್ಲಾ ಷರ್ಟುಗಳೂ ಹೀಗೇ ಇರುತ್ತವೆ"

ವಿಶಾಲೂ ಲಾಜಿಕ್ಕಿಗೆ ವಿಶ್ವ ಬೆರಗಾದ. ನಿಜಕ್ಕೂ ಈಕೆ ಷರ್ಲಾಕ್ ಹೋಮ್ಸ್‌ನ ಜೀನ್ಸ್ ಹೊಂದಿದ್ದಾಳೆ ಅನ್ನಿಸಿತು.

’ಹೌದು. ಷರ್ಟಿನ ಉಳಿದ ಭಾಗವೆಲ್ಲಾ ಚೆನ್ನಾಗೇ ಇದೆ, ಅದ್ರೆ ತೋಳು ಮಾತ್ರ ಸಿಕ್ಕಾಪಟ್ಟೆ ಗಲೀಜಗಿದೆ’

ವಿಶ್ವನಿಗೂ ಇದು ಅಚ್ಚರಿಯ ಸಂಗತಿಯೇ!

’ಅದನ್ನೇರೀ ನಾನು ಕೇಳ್ತಿರೋದು. ನಿಮಗೆ ಪ್ರಾಬ್ಲಮ್ ಅರ್ಥವಾಗೋಕೆ ಇಷ್ಟು ಟೈಮು ಬೇಕಾಯ್ತು. ಇನ್ನು ಇದಕ್ಕೆ ಉತ್ತರ ಹೇಳೋಕೆ ನಿಮಗೆ ತಿಂಗಳೇ ಬೇಕಾಗುತ್ತೆ. ನಿಮ್ಮ ಹತ್ರ ಇದನ್ನೆಲ್ಲಾ ಬಡ್ಕೋತೀನಲ್ಲಾ ನನಗೆ ಬುದ್ದಿಯಿಲ್ಲ..ಹೋಗಿ..ಹೋಗಿ ಆ ದರಿದ್ರ ಟಿವಿ ಮುಂದೆ ಕೂತು ತೂಕಡಿಸಿ’

ಬತ್ತಳಿಕೆಯಲ್ಲಿನ ಬಾಣಗಳೆಲ್ಲಾ ಮುಗಿದ ಮೇಲೆ ಹತಾಶನಾಗಿ ಯುದ್ಧದಿಂದ ಹಿಂತಿರುಗುವ ಯೋಧನಂತೆ ವಿಶ್ವ ಸ್ವಸ್ಥಾನಕ್ಕೆ ಮರಳಿದ-ಯಾನೆ ಕುರ್ಚಿಯಲ್ಲಿ ಕುಳಿತು ತೂಕಡಿಸಲು.

ಇಲ್ಲ, ವಿಶ್ವನಿಗೆ ತೂಕಡಿಸಲು ಸಾಧ್ಯವಾಗಲಿಲ್ಲ! ಷರ್ಟಿನ ತೋಳುಗಳು ಮಾತ್ರ ಯಾಕೆ ಗಲೀಜಾಗುತ್ತವೆ..? ಧೂಳಿನಲ್ಲಿ ಕೈಯಾಡಿಸಿದಂತೆ..? ತನ್ನ ಚಟುವಟಿಕೆಗಳೆಂದರೆ ಪಾಠ ಮಾಡುವುದು, ತಪ್ಪಿದರೆ ಕ್ಯಾಂಟೀನಿನಲ್ಲಿ ಟೀ ಕುಡಿಯುವುದು, ಒಮ್ಮೊಮ್ಮೆ ಅಪರೂಪಕ್ಕೆ ಲೈಬ್ರರಿಗೆ ಹೋಗಿ ಪುಸ್ತಕ ಪರಿಶೀಲನೆ ಇಲ್ಲವೇ ಪೇಪರುಗಳನ್ನು ಓದುವುದು. ಈಗಂತೂ ಚಾಕ್‌ಪೀಸ್ ಹಿಡಿದು ಬೋರ್ಡಿನಲ್ಲಿ ಬರೆಯುವುದೂ ಕಮ್ಮಿ! ಬಹುತೇಕ ಎಲ್.ಸಿ.ಡಿ ಪ್ರೊಜೆಕ್ಟರುಗಳ ಮೂಲಕ ಸಿನಿಮಾದಂತೆ ತೆರೆಯ ಮೇಲೆ ಪಾಠದ ಸ್ಲೈಡುಗಳನ್ನು ತೋರಿಸಿ ವಿವರಿಸುವುದು! ಮತ್ತೆ ತೋಳಿನ ಗಲೀಜು ಹೇಗೆ? ಎಲ್ಲಿ ಆಗುತ್ತಿದೆ..? ವಿಶ್ವನ ತಲೆ ಬಿಸಿಯಾಯಿತು. ಇದು ಇತ್ತೀಚಿನದೆ..? ಹಿಂದೆ ಆಗಿರಲಿಲ್ಲವೆ..? 

ಹಿಂದೆ ಇಲ್ಲದ್ದು ಈಗ ಅಗುತ್ತಿರುವಂತಾದ್ದು ಏನಿರಬಹದು? ವಿಶ್ವ ಯೋಚಿಸತೊಡಗಿದ. ಎದುರಿನಲ್ಲಿ ಟಿವಿ ತನ್ನಷ್ಟಕ್ಕೆ ತಾನೇ ಆನಂದಿಸುತ್ತಿತ್ತು! ಅದು ತನ್ನ ಯೋಚನೆಗೆ ಭಂಗ ಎನಿಸಿ ಎದ್ದು ಹೋಗಿ ಆಫ್ ಮಾಡಿದ. 

’ಟಿವಿ ಯಾಕೆ ಆಫ್ ಮಾಡಿದ್ದು..?’ ಒಳಗಿನಿಂದಲೇ ವಿಶಾಲೂ ಗುಡುಗಿದಳು.

’ಯಾರೂ ನೋಡ್ತಿಲ್ಲ’ ವಿಶ್ವ ಸಮಜಾಯಿಸಿ ನೀಡಿದ.

’ಆದ್ರೆ ನಾನು ಕೇಳ್ತಿದ್ದೀನಲ್ಲ..?’

ವಿಶಾಲೂ ಲಾಜಿಕ್ಕಿಗೆ ವಿಶ್ವ ಮರುಮಾತಾಡದೆ ಟಿವಿ ಆನ್ ಮಾಡಿದ.

*****

’ಯಾಕ್ಸಾರ್, ಏನೋ ಒಂತರಾ ಇದ್ದೀರಲ್ಲ..?’

ಮಾರನೆಯ ದಿನ ಕಾಲೇಜಿನಲ್ಲಿ ವಿಶ್ವನ ಕಿರಿಯ ಸಹೋದ್ಯೋಗಿ ಕೇಳಿದ.

’ಬನ್ನಿ ಟೀಗೆ ಹೋಗೋಣ’

ಮನಸ್ಸಿನಲ್ಲಿದ್ದುದನ್ನು ಹೇಳದೆ ಸಹೋದ್ಯೋಗಿ ಜೊತೆ ಕ್ಯಾಂಟೀನಿನತ್ತ ಹೆಜ್ಜೆ ಹಾಕಿದ.

ವಿಶಾಲೂ ಹಿಂದಿನ ದಿನ ಹೇಳಿದ ವಿಷಯ ತಲೆ ತುಂಬಾ ತುಂಬಿತ್ತು. ಷರ್ಟಿನ ಮುಂದೋಳು ಅತಿಯಾಗಿ ಗಲೀಜಾಗುವುದೇಕೆ..?  ಷರ್ಟಿನ ಉಳಿದ ಭಾUಕ್ಕೆ ಬಾರದ ಈ ಸ್ಥಿತಿ ಷರ್ಟಿನ ಮುಂದೋಳಿಗೆ ಯಾಕೆ..? ಅದೂ ಹಸ್ತದ ಬಳಿಯೇ ಅತಿಯಾಗಿ ಹೊಲಸಾಗುವುದು ಏಕೆ..?

’ಇಲ್ಲ ಸಾರ್, ನಿಮ್ಮನ್ನ ಯಾವುದೋ ಗಹನವಾದ ಚಿಂತೆ ಕಾಡ್ತಿದೆ! ಯಾವುದಾದ್ರೂ ರಿಸರ್ಚ ಬಗೆಗಾ ಸಾರ್..?’

ಕಿರಿಯ ಮಿತ್ರ ಕಿರಿಕಿರಿ ಮಾಡಿದ.

’ಏನಿಲ್ಲಪ್ಪಾ..ಆರಾಮವಾಗಿ ಟೀ ಕುಡಿ’

ಎಂದು ಹೇಳುವಾಗ ಅಚಾನಕ್ ವಿಶ್ವನ ಕಣ್ಣಿಗೆ ಸಹೋದ್ಯೋಗಿಯ ಷರ್ಟಿನ ಮುಂದೋಳು ಕಂಡಿತು. ಅದೂ ಅವನ ಷರ್ಟಿನಷ್ಟೇ ಹೊಲಸಾಗಿತ್ತು! 

’ಎಲ್ಲರ ಮನೆ ದೋಸೇನೂ ತೂತೇ!’ ವಿಶ್ವ ಉದ್ಗರಿಸಿದ.

’ಏನ್ಸಾರ್ ಹಾಗಂದ್ರೆ?’

’ಟೀ ಅನ್ನುವ ಕಲಗಚ್ಚು ಕುಡಿ ಆಮೇಲೆ ಹೇಳ್ತೀನಿ"

ಇಂಟರ್ನೆಟ್ ಯುಗದ ಕಿರಿಯ ಮಿತ್ರನ ಪ್ರಶ್ನೆಗೆ ಚುಟುಕು ಉತ್ತರ ನೀಡಿದ ವಿಶ್ವ.

ಸ್ಟ್ಯಾಫ್ ರೂಮಿಗೆ ಬಂದಾಗ ವಿಶ್ವ ಚುರುಕಾಗಿದ್ದ. ಬೆಳಗಿನ ಜಡತ್ವ ತೊಲಗಿತ್ತು. ಏನನ್ನೋ ಸಂಶೋಧನೆ ಮಾಡುವ ಹುರುಪಿತ್ತು!

ಸೂಕ್ಷ್ಮವಾಗಿ ತನ್ನ ಸಹೋದ್ಯೋಗಿಗಳ ಚಟುವಟಿಕೆಗಳನ್ನು ಗಮನಿಸತೊಡಗಿದ. ತುಂಬು ತೋಳಿನ ಷರ್ಟು ಧರಿಸಿದವರ ಮುಂದೋಳು ಉಳಿದ ಭಾಗಗಳಿಗಿಂತ ಹೆಚ್ಚು ಗಲೀಜಾಗಿತ್ತು! ಆದರೆ ಅರ್ಧ ತೋಳಿನ ಷರ್ಟು ಧರಿಸಿದವರಲ್ಲಿ ಈ ಸಮಸ್ಯೆ ಇರಲಿಲ್ಲ! ಬದಲಿಗೆ ಅವರ ಮುಂಗೈ ಚರ್ಮವೇ ಗಲೀಜಾಗಿತ್ತು! ಆದರೆ ಯಾಕೆ ಹೀಗಾಗುತ್ತಿದೆ..? ಇದು ವಿಶ್ವನಿಗೆ ಯಕ್ಷಪ್ರಶ್ನೆಯಾಗಿ ಕಾಡಿತು. ಅವರ ಚಟುವಟಿಕೆಗಳನ್ನೇ ಪರೀಕ್ಷಕ ದೃಷ್ಟಿಯಿಂದ ಕೆಲ ಕಾಲ ವೀಕ್ಷಿಸಿದ. ಅವರು ಟೇಬಲ್ಲಿನ ಮೇಲೆ ಬರೆಯುವ ಕ್ರಿಯೆಯನ್ನೇ ಕೆಲ ನಿಮಿಷ ತೀವ್ರವಾಗಿ ಗಮನಿಸಿದ. ನಂತರ ತಾನೂ ಅವರ ಕ್ರಿಯೆಯನ್ನು ಅನುಕರಿಸಿ ತನ್ನ ಕೈಮೇಲೇ ಗಮನ ನೀಡಿದ.ತನ್ನ ಷರ್ಟಿನ ಮುಂದೋಳು ನೋಡಿಕೊಂಡ. ಕುರ್ಚಿಯಿಂದೆದ್ದು ಆನಂದಾತಿರೇಕದಿಂದ ಕೂಗಿದ.

"ಯುರೇಕಾ..ಯುರೇಕಾ..!!"

ಸಹೋದ್ಯೋಗಿಗಳು ಗಾಬರಿಯಿಂದ ವಿಶ್ವನತ್ತ ನೋಡಿದರು. ಅವನ ಮುಖದಲ್ಲಿ ಮಿನುಗುತ್ತಿದ್ದ ಸಂತೋಷಕ್ಕೆ ಆಶ್ಚರ್ಯಪಟ್ಟರು!

’ಕ್ಯಾ ಕಿಸ್ಸಾ..?’ ಮುಸ್ಲಿಂ ಸಹೋದ್ಯೋಗಿ ಅನ್ವರ್ ಕೇಳಿದ.

"ಏನಾಯ್ತು..?’

’ನೀನೇನು ಆರ್ಕಿಮಿಡೀಸಾ..?’

’ಸ್ನಾನದ ತೊಟ್ಟೀಲೂ ಇಲ್ಲವಲ್ಲ?’

ತಲೆಗೊಂದರಂತೆ ಮಾತಾಡಿದರು.

’ಹತ್ನಿಮಿಷದ ಹಿಂದೆ ಕ್ಯಾಂಟೀನಿನಲ್ಲಿ ಟೀ ಕುಡಿಯುವಾಗ ಚೆನ್ನಾಗೇ ಇದ್ದರು’

ಕಿರಿಯ ಸಹೋದ್ಯೋಗಿ ಪ್ರಶ್ನಾರ್ಥಕ ಚಿನ್ಹೆಗಳಾಗಿದ್ದ ಉಳಿದವರಿಗೆ ಹೇಳಿದ.

’ಈಗಲೂ ನಾನು ಸರಿಯಾಗೇ ಇದ್ದೀನಿ ಸ್ನೇಹಿತರೆ. ಬಹಳ ದಿನಗಳಿಂದ ಕೊರೆಯುತ್ತಿದ್ದ ಪ್ರಶ್ನೆಗೆ ಅಚಾನಕ್ ಉತ್ತರ ಸಿಕ್ಕಿದೆ"

’ಏನದು?’ ಕೋರಸ್ಸಿನಲ್ಲಿ ಕೇಳಿದರು ಮಿತ್ರರು.

’ನಿಮ್ಮನಿಮ್ಮ ಷರ್ಟಿನ ಮುಂಗೈ ನೋಡಿಕ್ಕೊಳ್ಳಿ ’

ವಿಶ್ವನ ಸೂಚನೆಯನ್ನು ಮಿತ್ರರು ಪಾಲಿಸಿದರು. ಮತ್ತೇನು ಎಂಬಂತೆ ವಿಶ್ವನ ಮುಖ ನೋಡಿದರು.

’ನಿಮ್ಮ ಉಡುಪಿನ ಈ ಭಾಗ ಉಳಿದ ಭಾಗಗಳಿಗಿಂತ ಹೆಚ್ಚು ಕೊಳೆಯಾಗಿದೆ ಅಲ್ಲವೆ..?’

ಅವರು ಮತ್ತೆ ತಮ್ಮ ಉಡುಪುಗಳನ್ನು ಪರಿಶೀಲಿಸಿದರು.

"ಹೌದು, ಹೌದು" ಒಕ್ಕೊರಲನಿಂದ ಹೇಳಿ ಕೋಲೇಬಸವನಂತೆ ತಲೆಯಾಡಿಸಿದರು.

"ಆದರೆ ಏಕೆ..?’  ವಿಶ್ವನ ಪ್ರಶ್ನೆ ಅವರ ಕಿವಿಗಳಲ್ಲಿ ರಿಂಗಣಿಸಿತು. ಅದಕ್ಕೆ ಅವರಲ್ಲಿ ಉತ್ತರವಿರಲಿಲ್ಲ!

’ಗೊತ್ತಿಲ್ಲ" ಅಜ್ಞಾನವನ್ನು ಒಪ್ಪಿದರು.

’ನಮ್ಮ ಡಿಪಾರ್ಟ್ಮೆಂಟಿನ ಕಸ ಗುಡಿಸುವವರು ಯಾರು..?’ ವಿಶ್ವ ಏರಿದ ದನಿಯಲ್ಲಿ ಕೇಳಿದ.

’ಯಾರೂ ಇಲ್ಲ..ತಿಂಗಳುಗಟ್ಟಲೆ ಕಸ ದಂಡಿಯಾಗಿ ಬಿದ್ದಿದೆ!’

ಒಬ್ಬ ಧೈರ್ಯ ಮಾಡಿ ಹೇಳಿದ.

’ನಿಮ್ಮ ಟೇಬಲ್ಲು, ಚೇರು, ಕಂಪ್ಯೂಟರು, ಅದರ ಕೀ ಬೋರ್ಡು ಇದನ್ನು ಯಾರಾದರೂ ಕ್ಲೀನ್ ಮಾಡ್ತಾರಾ..?’

’ಇಲ್ಲ. ತಿಂಗಳಿಗೊಮ್ಮೆ ಮಾತ್ರ ಇದರ ಸಫಾಯಿ’

’ಅಂದರೆ ಮಿತ್ರರೆ ಒಂದು ತಿಂಗಳ ಟೇಬಲ್ಲು ಮತ್ತು ಕುರ್ಚಿಯ ಮೇಲಿನ ಧೂಳು, ಕಸ ನಮ್ಮ ಬಟ್ಟೆಗೇ ಹತ್ತಿಕ್ಕೊಳ್ಳುತ್ತವೆ!’

’ಗ್ರೇಟ್…ಇಂಟರೆಸ್ಟಿಂಗ್..!’ ಎಲ್ಲ ಒಕ್ಕೊರಲಿನಿಂದ ನುಡಿದರು.

’ಒಬ್ಬ ಅಟೆಂಡರಿಗೆ ಸಂಬಳ ಕೊಡೋಕೆ ಜಿಪುಣತನ ಮಾಡ್ತಿದೆ ನಮ್ಮ ಮ್ಯಾನೇಜ್ಮೆಂಟು! ಅದಕ್ಕೇ ನಮಗೆ ವಿಪರೀತ ಸೋಪ್ ಪೌಡರ್ ಖರ್ಚು, ಜೊತೆಗೆ ಶ್ರೀಮತಿಯಿಂದ ಮೂದಲಿಕೆ!’

ಇನ್ನೊಬ್ಬ ಧೈರ್ಯ ಮಾಡಿ ಹೇಳಿದ.

’ಈ ಕಾರಣಕ್ಕೇ ನಮ್ಮ ಷರ್ಟು ಮತ್ತು ಪ್ಯಾಂಟುಗಳ ಕೆಲವು ಭಾಗಗಳು ಹೆಚ್ಚಿಗೆ ಗಲೀಜಾಗ್ತಿವೆ. ನಾವು ಬರೆಯುವಾಗ ಟೇಬಲ್ಲು, ಕುಳಿತಾಗ ಕುರ್ಚಿ ಕ್ಲೀನಾಗುತ್ತವೆ! ಕಾರಣ ನಮ್ಮ ಅರಿವೇ ಇಲ್ಲದೆ ಅದರ ಕೊಳೆಯನ್ನು ನಮ್ಮ ಬಟ್ಟೆಗೆ ನಾವು ವರ್ಗಾಯಿಸಿಕ್ಕೊಳ್ಳುತ್ತಿದ್ದೇವೆ’

’ಯುರೇಕಾ..ಯುರೇಕಾ!!’

ವಿಶ್ವನ ಸಹ ಅಧ್ಯಾಪಕರೆಲ್ಲಾ ಒಟ್ಟಿಗೇ ಕೂಗಿದರು-ಸೂರು ಹಾರುವಂತೆ! 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x