ಭಾರತದ ಕೆಲವು ರಾಜ್ಯಗಳಲ್ಲಿ ಹೊಸ ವರ್ಷವನ್ನು ಯುಗಾದಿ ಅಥವಾ ಉಗಾದಿ ಎಂದು ಆಚರಿಸುತ್ತಾರೆ. ' ಯುಗ ' ಎಂದರೆ ಒಂದು ನಿಗಧಿತ ಕಾಲಾವಧಿ. ವರ್ಷ ಎಂದೂ ಅರ್ಥವಿದೆ. ' ಆದಿ ' ಎಂದರೆ ಆರಂಭ. ಯುಗಾದಿ ಎಂದರೆ ವರ್ಷದ ಆರಂಭ. ದಕ್ಷಿಣ ಭಾರತೀಯರಿಗೆ ಚೈತ್ರ ಮಾಸದ ಆರಂಭದ ದಿನವೇ ವರ್ಷದ ಆರಂಭ. ಅಂದು ಯುಗಾದಿಯನ್ನು ಕರ್ನಾಟಕ, ಆಂದ್ರಪ್ರದೇಶದಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ಯ ಎಂದು ಆಚರಿಸುತ್ತಾರೆ. ಯಾವುದೇ ಸಂತೋಷ ಸಂಭ್ರಮಾಚರಣೆಗಳು ಬದುಕಿಗೆ ನವಚೇತನವನ್ನು ನೀಡುತ್ತವೆ. ಆದ್ದರಿಂದಾಗಿ ಅಂತಹ ಅವಕಾಶಗಳನ್ನು ಆಗಾಗ ಅನುಭವಿಸಿ ಬದುಕಿಗೆ ಉತ್ಸಾಹ ತುಂಬಬೇಕು. ಅಂತಹ ಅವಕಾಶ ಒದಗಿಸುವ ಯುಗಾದಿ ಆಚರಿಸಿ ಆನಂದಿಸಿ ಆರೋಗ್ಯ ಆಯಸ್ಸು ಹೆಚ್ಚು ಮಾಡಿಕೊಳ್ಳುವುದು ಒಳಿತು.
ಹೊಸ ವರುಷ ಎನ್ನುವಂಥದ್ದು ಇಲ್ಲ! ಕ್ಯಾಲೆಂಡರ್ ಹೊಸದಾದ ಮಾತ್ರಕ್ಕೆ ಅಥವಾ ಕ್ಯಾಲೆಂಡರಿನಲ್ಲಿ ದಿನ ನಿತ್ಯಕ್ಕಿಂತ ಹೆಚ್ಚಿನ ಅಂಕಿ ಅಂಶಗಳು ಬದಲಾದ ಮಾತ್ರಕ್ಕೆ ಹೊಸ ವರುಷ ಹೇಗಾಗುತ್ತದೆ? ಹಾಗೆ ನೋಡಿದರೆ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ನಿಮಿಷವೂ ಹೊಸದೆ! ಆದ್ದರಿಂದ ಪ್ರತಿ ದಿನವನ್ನು, ಗಂಟೆಯನ್ನು ನಿಮಿಷವನ್ನು ಹೊಸ ಸಡಗರದಿಂದ ಆಚರಿಸಬೇಕಾದೀತು! ಹಾಗೆ ಆಚರಿಸುವುದೇ ಬದುಕಾಗಿಬಿಡುತ್ತದೆ. ಮಾನವನ ಬದುಕಿನಲ್ಲಿ ಬದಲಾವಣೆ ಇಲ್ಲವೆಂದರೆ ಬದುಕು ಏಕತಾನತೆಯಿಂದ ಕೂಡಿ ಬೇಸರ ಮನೆಮಾಡಿ ನಿರುತ್ಸಾಹಿಯಾಗುತ್ತಾನೆ. ಈ ಹಬ್ಬ, ಹರಿದಿನ, ಜಾತ್ರೆ ಮುಂತಾದವು ಕೆಲವು ದಿನ ಬದುಕಿನಲ್ಲಿ ಬದಲಾವಣೆ, ಉತ್ಸಾಹ ತರುವುದರಿಂದ ಮಹತ್ವ ಪಡೆದುಕೊಂಡು ಭಾರತದ ಸಂಸ್ಕೃತಿಯ, ಪರಂಪರೆಯ ಭಾಗವಾಗಿವೆ. ಮಾನವ ವ್ಯವಹಾರಿಕ ದೃಷ್ಟಿಯಿಂದ ಪ್ರಕೃತಿಯಲ್ಲಾಗುವ ಬದಲಾವಣೆ ಆಧಾರದ ಮೇಲೆ ಒಂದು ದೀರ್ಘ ಅವಧಿಯ ಕಾಲವನ್ನು ವರ್ಷ ಎಂದು ಹೆಸರಿಸಿ, ಅದರ ಆರಂಭದ ದಿನವನ್ನು ವರ್ಷಾರಂಭ ಎಂದು ವಿಜೃಂಭಣೆಯಿಂದ ಆಚರಿಸುವ ಪರಂಪರೆ ಹಿಂದಿನಿಂದ ಬೆಳೆದುಕೊಂಡು ಬಂದಿದೆ. ಅದರ ಮಟ್ಟಿಗೆ ಯುಗಾದಿ ಹೊಸ ವರುಷ
ಪುರಾಣಗಳ ಪ್ರಕಾರ ಯುಗಾದಿಯ ದಿನದಂದು ಅಂದರೆ ಚೈತ್ರಶುದ್ದ ದಿನದಂದು ಈ ಲೋಕ ಪ್ರಾರಂಭವಾಯಿತು ಎಂಬುದು ಪ್ರತೀತಿ. ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎನ್ನುವುದು ಸಹ ಒಂದು ಪ್ರತೀತಿ. ಇದೇ ದಿನ ಸೂರ್ಯ ತನ್ನ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇನ್ನೂ ಹಲವು ಕಾರಣಗಳಿಗಾಗಿ ಈ ದಿನ ಮಹತ್ವದ್ದಾಗಿದೆ. ಆದ್ದರಿಂದ ಇದನ್ನು ಯುಗಾದಿಯಾಗಿ ಆಚರಿಸುತ್ತಾ ಬಂದಂತೆ ಕಾಣುತ್ತದೆ. ಈ ದಿನವನ್ನು ಹಿಂದೂ ಧರ್ಮದ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಿಸಲಾಗುತ್ತದೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಾಂದ್ರಮಾನ, ಸೂರ್ಯನ ಚಲನೆಯ ಗಣತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ದತಿ ಮೊದಲಿನಿಂದಲೂ ರೂಢಿಯಲ್ಲಿದೆ.
ಪ್ರತಿ ವರ್ಷಕ್ಕೆ ಹೆಸರು ಕೊಡುವ ಪದ್ದತಿ ರುೂಢಿಯಲ್ಲಿದೆ. ಅರವತ್ತು ವರ್ಷಗಳವರೆಗೆ ಪ್ರತಿ ವರ್ಷಕ್ಕೆ ಒಂದು ಹೆಸರನ್ನು ಕೊಡುತ್ತೇವೆ. ನಂತರ ಅವೇ ಕ್ರಮವಾಗಿ ಪುನರಾವರ್ತನೆಯಾಗುತ್ತವೆ. ಈ ಯುಗಾದಿಯ ಹೊಸ ವರುಷದ ಹೆಸರು ಹೇಮಲಂಬಿ ನಾಮ ಸಂವತ್ಸರ. ಕೆವರು ಆ ವರ್ಷದ ಭವಿಷ್ಯವನ್ನು ಆ ವರುಷದ ಹೆಸರಿನ ಆಧಾರದಿಂದ ಹೇಳುವುದಿದೆ. ಅರವತ್ತು ವರುಷ ಪೂರೈಸಿದ ವ್ಯಕ್ತಿಗಳು ಮಾತ್ರ ಆ ಪುನರಾವರ್ತಿತ ಸಂವತ್ಸರಗಳಲ್ಲಿ ಬದುಕುತ್ತಾರೆ. ಅವರಲ್ಲಿ ಕೆಲವರು ಷಷ್ಠಾಭ್ದಿ ಆಚರಿಸಿಕೊಳ್ಳುತ್ತಾರೆ.
ನಾವು ದಕ್ಷಿಣ ಭಾರತೀಯರು ನಮಗೆ ಯುಗಾದಿಯೇ ಹೊಸ ವರುಷದ ಆರಂಭ. ಬೇರೆ ಸಂದಂರ್ಭಗಳಲ್ಲಿ ಹ್ಯಾಪಿ ನ್ಯೂ ಈಯರ್ sss… ಹ್ಯಾಪಿ ನ್ಯೂ ಈಯರ್ sss… ಹೊಸವರ್ಷದ ಶುಭಾಷಯಗಳು sss… ಎಂದು ಎಷ್ಟು ಕೂಗಿದರೂ ಹೊಸವರ್ಷವಾಗದು. ಜನವರಿಯಲ್ಲಿ ಶಿಶಿರ ಋತುವಿನ ಚಳಿಗೆ ಪ್ರಕೃತಿ ಸಿಲುಕಿ ಗಿಡ ಮರ ಎಲೆ ಉದುರಿಸಿಕೊಂಡು ಬೋಳುಬೋಳಾಗಿ ಗೋಚರಿಸುತ್ತವೆ. ಎಲ್ಲಾ ಕಡೆ ತರಗೆಲೆಗಳು ಧಾಳಿಯಿಟ್ಟು, ಕಸ ಹರಡಿ, ಜೀವಿಗಳ ಚರ್ಮ ಬಿರುಕು ಬಿಟ್ಟು ಇಡೀ ಪ್ರಕೃತಿಯೇ ಅಂದಗೆಟ್ಟಿರುತ್ತದೆ. ವಸಂತ ಋತು ಆಗಮಿಸುತ್ತಿದ್ದಂತೆ ಚೈತ್ರ ಮಾಸದಲ್ಲಿ ಇಡೀ ಪ್ರಕೃತಿಯೇ ಜನರು ಹೊಸ ರಂಗಿನ ಉಡುಗೆಯುಟ್ಟು ಸಂಭ್ರಮಿಸಿದಂತೆ ಗಿಡ ಮರಗಳು ಹೊಸ ಚಿಗುರು ಎಲೆಗಳಿಂದ, ಬಣ್ಣ ಬಣ್ಣದ ಹೂ ಕಾಯಿಗಳ ಗೊಂಚಲು ಹೊತ್ತು ಹೊಸತನವ ತೋರುತ್ತವೆ. ಪಕ್ಷಿ ಕುಲಕೆ ಸಾಕಷ್ಟು ಆಹಾರ ಸಿಗುವುದರಿಂದ ಆನಂದವಾಗಿ ಹರ್ಷದಿಂದ ಗಿಡ ಮರಗಳಲಿ ವಿಹರಿಸಿ, ಚಿಲಿಪಿಲಿಸಿ ಹೊಸತರ ಸಡಗರವನ್ನು ಸಾರುತ್ತವೆ. ಯಾರೂ ಹೊಸ ವರ್ಷ ಎಂದು ಸಾರುವ ಅವಶ್ಯಕತೆ ಬೀಳದೆ ವಸುಂಧರೆ ಹೊಸ ಹಸಿರುಡುಗೆಯುಟ್ಟು, ಗಿಡಮರ ಹೂ ಕಾಯಿಗಳ ಆಭರಣದಿಂದ ಶೃಂಗಾರಗೊಂಡು ಮದುವಣಗಿತ್ತಿಯಂತೆ ಕಾಣುತ್ತಾಳಲ್ಲವೆ? ಹೀಗೆ ಹೊಸದಾಗಿ ಪ್ರಕೃತಿ ವರ್ಷಕ್ಕೊಮ್ಮೆ ಕಾಣುವುದನ್ನೇ ಹೊಸ ವರ್ಷದ ಆರಂಭ ಎಂದು ಹಿಂದಿನವರು ನಿರ್ಣಯಿಸಿರುವುದು ಅರ್ಥಪೂರ್ಣವಲ್ಲವೆ?
ಯುಗಾದಿಯಂದು ತಳಿರು ತೋರಣ ಕಟ್ಟಿ, ಎಣ್ಣೆ ಮಜ್ಜನ ಮಾಡಿ, ಹೊಸ ಬಟ್ಟೆಯುಟ್ಟು, ದೇವಾಲಯಗಳಿಗೆ ಹೋಗುವುದು, ಬೇವು ಬೆಲ್ಲ ಹಂಚಿ ಹೊಸ ವರುಷ ಹೊಸ ಹರುಷ ತರಲೆಂದು ಆಶಿಸುವುದು, ಪಂಚಾಂಗ ಶ್ರವಣ ಮಾಡಿ, ಒಬ್ಬಟ್ಟಿನ ಊಟ ಸವಿದು ಯುಗಾದಿ ಆಚರಿಸುವುದು ವಾಡಿಕೆ. ಬೇವು – ಬೆಲ್ಲ ಕಷ್ಟ – ಸುಖಗಳ, ನೋವು – ನಲಿವಿನ ಸಂಕೇತ. ಕಷ್ಟ – ಸುಖ, ನೋವು – ನಲಿವುಗಳ ಸಮ್ಮಿಶ್ರಣವೇ ಜೀವನ! ಬರೀ ನೋವು, ಅಥವಾ ನಲಿವು ಜೀವನದಲ್ಲಿ ಏಕತಾನತೆಯನ್ನುಂಟುಮಾಡಿ ಬೇಸರವನ್ನುಂಟು ಮಾಡುತ್ತವೆ. ನೋವುಂಟಾದರೆ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾ ಚೇತನದಿಂದಿರುತ್ತೇವೆ! ನಲಿವಿದ್ದರೆ ಏನಾದರೂ ಹೊಸತನ್ನು ಮಾಡುವ ಯೋಚನೆ ಮಾಡುತ್ತೇವೆ. ಆ ಕಷ್ಡ – ಸುಖಗಳ ಸಮ್ಮಿಶ್ರಣಗಳು ಜೀವನದಲ್ಲಿದ್ದರೆ ವ್ಯಕ್ತಿಯನ್ನು ಸದಾ ಚಟುವಟಿಕೆಯಿಂದಿಡುತ್ತವೆ. ಮುಖ್ಯವಾಗಿ ಕಷ್ಟಗಳು ಮನುಷ್ಯನನ್ನು ಮಾನವನಾಗಿ ಬದುಕುವಂತೆ ಮಾಡುತ್ತವೆ! ಜೀವನದಲ್ಲಿ ಕಷ್ಟ – ಸುಖಗಳು ಸಮವಾಗಿರಲೆಂದು ಆ ಕಷ್ಟ – ಸುಖಗಳ ಸಂಕೇತವಾಗಿ ಬೇವು – ಬೆಲ್ಲ ಸಮ್ಮೀಶ್ರಣವ ಉಗಾದಿಯಲ್ಲಿ ಹಂಚಿ ಸವಿಯುತ್ತೇವೆ.
ಯುಗಾದಿಯಂದು ಒಳಿತಾದರೆ ಅಥವಾ ಒಳಿತು ಮಾಡಿದರೆ ವರ್ಷಪೂರ್ತಿ ಒಳಿತಾಗುತ್ತದೆ. ಕೆಡುಕು ಮಾಡಿದರೆ ಅಥವಾ ಕೆಡುಕಾದರೆ ಕೆಡುಕೇ ಆಗುತ್ತಿರುತ್ತದೆ ಎಂಬ ನಂಬಿಕೆ ಇದೆ. ನಮ್ಮ ಪೂರ್ವಜರ ಈ ರೀತಿ ಚಿಂತನೆ ಮಹೋನ್ನತವಾದದ್ದೆ. ಏಕೆಂದರೆ ಹೊಸ ವರುಷದಲ್ಲಿ ಎಲ್ಲರೂ ಒಳ್ಳೆಯ ಚಿಂತನೆಗಳನ್ನು, ಕೆಲಸಗಳನ್ನು ಮಾಡುವುದು ಆರಂಭಿಸುವಂತಾದಾಗ ಅವೇ ಮುಂದುವರಿಯುವುದರಿಂದ ಕೆಟ್ಟ ವಿಚಾರಗಳಿಗೆ ಆಸ್ಪದವಿಲ್ಲದಾಗಿ ಉತ್ತಮ ಸಮಾಜ ಸೃಷ್ಟಿಯಾದೀತು ಎಂಬ ಒಳ್ಳೆಯ ಭಾವನೆ ಅದರಲ್ಲಡಗಿದೆ! ಇಂದು ನಗರ ಪ್ರದೇಶಗಳಲ್ಲಿ ಎಲ್ಲಾ ಆಚರಣೆಗಳು ಕ್ಲಬ್, ಬಾರು, ಮೋಜು, ಮಸ್ತಿಗಳಲ್ಲಿ ಲೀನವಾಗುತ್ತಿವೆ! ಗ್ರಾಮದ ಜನ ಇದನ್ನು ಅನುಸರಿಸುತ್ತಿರುವುದು ದುರದುಷ್ಟಕರ!
ನಾವು ಹೊಸ ವರುಷದ ಹೊಸ್ತಿಲಲ್ಲಿ ನಿಂತು ಹಿಂದಿನ ವರ್ಷ ಅಂದುಕೊಂಡು ಯೋಜಿಸಿದ ಯೋಜನೆಗಳು ಎಷ್ಟು ಪೂರ್ಣಗೊಂಡವು? ಯಾವುದು ಪೂರ್ಣಗೊಳ್ಳಲಿಲ್ಲ? ಏಕೆ ಪೂರ್ಣಗೊಳ್ಳಲಿಲ್ಲ? ಎಂದು ಆತ್ಮಾವಲೋಕನ ಮಾಡಿಕೊಳ್ಳತ್ತಾ ಹಿಂದಿನ ವರ್ಷ ಅಪೂರ್ಣಗೊಂಡ ಕೆಲಸಗಳ ಈ ವರ್ಷ ಪೂರ್ಣಗೊಳಿಸುವುದು ಹೇಗೆ? ಹೊಸ ವರುಷದ ಹೊಸ ಗುರಿಗಳು ಯಾವುವು? ಅವುಗಳ ಸೂಕ್ತ ಯೋಜನೆಗಳನ್ನು ರೂಪಿಸಿ ಪೂರ್ಣಗೊಳಿಸುವುದು ಹೇಗೆಂದು ಚಿಂತಿಸಬೇಕಿದೆ! ಬದುಕಿನ ದಿಕ್ಕು, ದೆಸೆಯನ್ನು ಸರಿಯಾಗಿ ನಿರ್ಣಯಿಸುವ ಸಂದರ್ಭವಾಗಿದೆ. ಋಣಾತ್ಮಕ ಚಿಂತನೆಗಳಿಗೆ ತಿಲಾಂಜಲಿಯಿಟ್ಟು ಧನಾತ್ಮಕ ಚಿಂತನೆಗಳ ಪೋಷಿಸಬೇಕಿದೆ! ಅಂದುಕೊಂಡಿದ್ದನ್ನೆಲ್ಲ ಸಾಧಿಸುವ ಉತ್ಸಾಹದ ಮನಸ್ಸಿನೊಂದಿಗೆ ಯುಗಾದಿ ಆಚರಿಸೋಣ! ಸಂಭ್ರಮಿಸೋಣ! ಎಲ್ಲರಿಗೂ ಶುಭ ಕೋರೋಣ! ಯುಗಾದಿಯ ಬಾಲ ಚಂದ್ರ ಎಲ್ಲರಿಗೂ ದರ್ಶನವಿತ್ತು ಎಲ್ಲರ ಬಾಳಲ್ಲಿ ಬೆಳಕು ಹರಿಸಲಿ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.