ಮನುಷ್ಯ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುತ್ತಾನೆ. ಅವನಿಗೆ ಪ್ರತಿದಿನವೂ ಹೊಸ ಹುಟ್ಟು. ಹಾಗೇ ಈ ಪ್ರಕೃತಿ ಕೂಡ ಪ್ರತಿವರ್ಷವೂ ಹೊಸತನದ ಹೊಸ್ತಿಲಲ್ಲಿ ಸಂಭ್ರಮಿಸುವ ಹೊಸ ಯುಗದ ಆರಂಭವನ್ನು ಯುಗಾದಿಯಾಗಿ ಸಂಭ್ರಮಿಸಿ ಸಿಹಿ ಕಹಿಯನ್ನು ಸಮವಾಗಿ ಸವಿಯಲು ಕಲಿಸುತ್ತದೆ. ಬದುಕೆಂದರೆ ಹಾಗೇ ತಾನೆ ಒಮ್ಮೆ ಸುಖ ಒಮ್ಮೆ ದುಃಖ, ಸುಂದರ ಸ್ನೇಹ ಅಸಹ್ಯ ದ್ವೇಷ, ಮುಗಿಯದ ಆಸೆ. ಕಾಡಿಸುವ ಹತಾಶೆ, ನಿರಂತರ ಭಕ್ತಿ. ಕಾಣದ ಭಯ. ಹುಟ್ಟು ಸಾವಿನ ನಡುವೆ ಹಾದು ಹೋಗುವ ಸಣ್ಣ ಗೆರೆಯಂತೆ ಈ ಬದುಕು. ತುಂಬಾ ಸೂಕ್ಷ್ಮತೆಯ ನೆರಳು.
ಜನ್ಮಕೊಂದೇ ಬಾಲ್ಯ ಒಂದೇ ಹರೆಯ. ಈ ಪ್ರಪಂಚದಲ್ಲಿ ಶಾಶ್ವತ ಅನ್ನೋದು ಯಾವುದು ಇಲ್ಲ. ಅನ್ನುವ ಸತ್ಯ ಅರಿಯುವಾಗ ಬದುಕು ಇನ್ನೆಲ್ಲೋ ಕಳೆದು ಹೋಗಿರುತ್ತದೆ. ಮೂರು ದಿನದ ಬಾಳಿನಲ್ಲಿ ನಗುವೆಷ್ಟೊ ಅಳುವೆಷ್ಟೊ ಲೆಕ್ಕವಿಟ್ಟರಾರು. ಮುಖವಾಡದ ಬದುಕಿನಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸುವ ಪಾತ್ರಧಾರಿಗಳಷ್ಟೆ ನಾವು.
ಜನನದಿಂದ ಮರಣದವರೆಗಿನ ಪಯಣವನ್ನು ನಾವು ಸಂಬಂಧಗಳನ್ನು ನಂಬಿ ಬದುಕುತ್ತೇವೆ. ಈ ಸಂಬಂಧವೆಂದರೆ ಬರಿ ನಮ್ಮವರು ನಮ್ಮ ಸ್ವಂತದವರು ಮಾತ್ರವಲ್ಲ. ನಮ್ಮ ಜೊತೆ ಇರುವ ಜೊತೆ ಬರುವ ಪ್ರತಿಯೊಂದು ಕೂಡ ಬದುಕಿನ ಬಳ್ಳಿಯಂತೆ ನಮ್ಮನ್ನು ಸುತ್ತಿಕೊಂಡು ಜೊತೆಯಾಗಿರುತ್ತದೆ. ಬಾಲ್ಯ ಕಳೆದು ಯೌವ್ವನ ಮೂಡಿದರೆ ಯೌವ್ವನ ಕಳೆದು ಮುಪ್ಪಾಗಲೇಬೇಕು ಇದು ಈ ಸೃಷ್ಟಿಯ ಸತ್ಯ. ಇಲ್ಲಿ ಯಾರಿಗೂ ಯಾರು ಇಲ್ಲ ಅನ್ನುವ ಸತ್ಯ ಗೊತ್ತಿದ್ದರೂ ಸದಾ ಬಡಿದಾಡುತ್ತಲೇ ಬದುಕುತ್ತೇವೆ. ಎಲ್ಲ ಇದ್ದರೂ ಏನು ಇಲ್ಲ ಅನ್ನುವ ಕೊರಗು ನಮ್ಮ ನೆಮ್ಮದಿಯನ್ನು ಕಿತ್ತು ತಿನ್ನುತ್ತಿರುತ್ತದೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ಶರೀರಕ್ಕೆ ಬದುಕಿನ ಸತ್ಯ ದರ್ಶನವಾಗುವುದೇ ಇಲ್ಲ.
ನಮ್ಮದು ನಿರೀಕ್ಷೆಗಳ ಬದುಕು ಕಳೆದುಕೊಂಡಿದ್ದನ್ನು ಹುಡುಕುವ ನೆಪದಲ್ಲಿ ಸುಂದರವಾದ ಕ್ಷಣಗಳನ್ನು ಕಳೆದುಕೊಂಡಿರುತ್ತೇವೆ. ಅಸಮಾನತೆಯ ಸಂಘರ್ಷ,ಸ್ವಾರ್ಥದ ಯೋಚನೆ ಆಸೆ, ಹತಾಶೆ, ಇವೆಲ್ಲವೂ ನಮ್ಮ ಸ್ಥಿತಿಯನ್ನು ಇನ್ನಷ್ಟು ಅಧಃಪತನ ಮಾಡುತ್ತದೆ. ಮನಸ್ಸು ಅನ್ನುವುದು ತೀರಾ ಸಂಕೀರ್ಣ ಮತ್ತು ಅಷ್ಟೇ ನಿಗೂಢ ಕೂಡ. ಸಮತೋಲನ ಸಾಧಿಸಿ ಬದುಕುವುದೇ ಯಶಸ್ವಿ ಬದುಕಿನ ಗುಟ್ಟು.
ಎಲ್ಲರನ್ನೂ ಪ್ರೀತಿಸು, ಆದರೆ ಕೆಲವರನ್ನು ಮಾತ್ರ ನಂಬು. ಅನ್ನುವ ಮಾತಿನಂತೆ.. ನಾವು ಎಲ್ಲರನ್ನು ಪ್ರೀತಿಸಬಹುದು.ಆದರೆ ನಂಬಿಕೆ ಅನ್ನೋದು ಮಾತ್ರ ಅಷ್ಟು ಬೇಗ ಬರಲಾರದು. ಆದರೂ ಮನುಷ್ಯ ಪ್ರೀತಿ ಕೊಡುವವನನ್ನು ಕಣ್ಣು ಮುಚ್ಚಿ ನಂಬಿ ಬಿಡುತ್ತಾನೆ. ನಂಬಿಕೆ ಅನ್ನೋದು ಒಂದು ಪುಟ್ಟ ಮಗುವಿನಂತೆ.. ಮುಗ್ಧ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆವ ಪ್ರೀತಿ ಯಾರಾದರೂ ತೋರಿಸಿದರೂ ಸಾಕು ನಾವು ಅವರನ್ನು ಕಣ್ಣು ಮುಚ್ಚಿ ನಂಬಿಬಿಡುತ್ತೇವೆ. ಎಲ್ಲರೂ ನಂಬಿಕೆಗೆ ಯೋಗ್ಯರಾಗಿರುವುದಿಲ್ಲ ಅನ್ನುವ ಸತ್ಯ ಗೊತ್ತಾದಾಗ ಬದುಕು ನಂಬಿಕೆಯನ್ನು ಕಳೆದುಕೊಂಡು ಬಿಟ್ಟಿರುತ್ತದೆ.
ಪ್ರೀತಿ ಬದುಕಾಗಬೇಕು ಸರಿ ಆದರೆ ಬದುಕನ್ನೇ ಬರಿದಾಗಿಸಿದರೆ. ಪ್ರೀತಿ ನೀರಸವಾಗುತ್ತದೆ. ಪ್ರೀತಿಗೇನು ಯಾರು ಬೇಕಾದರೂ ಕೊಡುತ್ತಾರೆ. ಆದರೆ ಕೊನೆವರೆಗೂ ನಿನ್ನ ಜೊತೆ ಇರಲಿ ಇದು ಅಂತ ಕೊಟ್ಟವರಾರು? ಪ್ರೀತಿ ಜೊತೆಗೆ ಉಚಿತವಾಗಿ ಸಿಗುವ ನೋವು ಉಸಿರು ನಿಲ್ಲೊವರೆಗೂ ಜೊತೆಯಿರುತ್ತದೆ. ಇದೆ ಅಲ್ವ ಜೀವನ. ಮನುಷ್ಯ ಸ್ನೇಹಜೀವಿ ಪ್ರೇಮಜೀವಿ,. ಅವನಿಗೆ ಅದೆಲ್ಲವೂ ಜೊತೆ ಇರುವಾಗ ಬದುಕು ಬಂಗಾರ ಅನಿಸಿಬಿಡುತ್ತದೆ. ಯಾವಾಗ ಪ್ರೀತಿ ವಿಶ್ವಾಸ ಸತ್ತು ಹೋಗುತ್ತದೆಯೋ ಆಗ ಜೀವನ ಬೇಸರ ಅನಿಸಲು ಶುರುವಾಗುತ್ತದೆ. ತನಗಾರು ಇಲ್ಲ ಅನ್ನುವ ವೇದನೆಯಲ್ಲಿ ಕ್ಷಣ ಕ್ಷಣವೂ ಒದ್ದಾಡುತ್ತಾನೆ.
ಸಂಬಂಧಗಳು ಬದುಕಿಗೆ ಬೇಕು. ಒಂಟಿಯಾಗಿ ಬದುಕಬೇಕು ಎಂದು ಹೊರಟರೆ ಅದು ಯಾವತ್ತಿಗೂ ಸ್ಪೂರ್ತಿದಾಯಕ ಬದುಕಾಗುವುದಿಲ್ಲ. ಉತ್ತಮ ಬದುಕಿಗೆ ಆರೋಗ್ಯದಾಯಕ ಸಂಬಂಧಗಳು ಜೊತೆಯಾದರೆ ಮಾತ್ರ ಬದುಕು ವಿಶ್ವಾಸದ ಉಸಿರಲ್ಲಿ ಜೀವಿಸಲು ಸಾಧ್ಯ. “ನಿನ್ನೆಗಳ ಮರೆತವರು ನಾಳೆ ಕಟ್ಟಲಾರರು” ಅದೆಷ್ಟು ನಿಜ ನಾವು ನಡೆದುಬಂದ ದಾರಿಯನ್ನು ಮರೆತರೆ ನಾಳೆಯ ಬದುಕನ್ನು ಬದುಕುವುದಾದರೂ ಹೇಗೆ.?
ಕಾಲ ಬದಲಾಗಬಹುದು ಆದರೆ ನಮ್ಮ ಸಂಸ್ಕಾರ ಬದಲಾಗಬಾರದು.
ನಾಳೆಯೆಂಬುದು ಕಾಣದ ಸತ್ಯ. ಅಲ್ಲಿ ಏನಿದೆ ಏನಿಲ್ಲ ಅನ್ನುವುದನ್ನು ಇವತ್ತು ಬಲ್ಲವರಾರು.? ಬದುಕೆಂದರೆ ಎಲ್ಲವೂ ಸಿಹಿಯಾಗಿರುವುದಿಲ್ಲ ಅಲ್ಲಿ ಕಹಿಯು ಇರುತ್ತದೆ. ಸುಖದ ಹಿಂದೆ ದುಃಖವು ಇದ್ದಂತೆ. ಆದರೆ ಯಾವುದು ಶಾಶ್ವತವಲ್ಲ. ನಮ್ಮೊಂದಿಗಿರುವ ಈ ಕ್ಷಣವಷ್ಟೆ ಸತ್ಯ. ಈ ಸತ್ಯವನ್ನು ಒಪ್ಪಿಕೊಂಡು ನೆಮ್ಮದಿಯ ಕ್ಷಣಗಳನ್ನು ಕಳೆಯುವವನು ತೃಪ್ತಿಯಾಗಿ ಬದುಕುವನು. ಮನುಷ್ಯನ ಜೀವನ ಬದಲಾದರೂ ಭಾವನೆಗಳು ಬದಲಾಗಬಾರದು.
ಪ್ರಕೃತಿಯು ತನ್ನಲ್ಲಿ ಹೊಸತನವನ್ನು ಸೃಷ್ಟಿಸಿ ನಮ್ಮ ಜೀವನದಲ್ಲಿ ಹೊಸತನದ ಬದುಕನ್ನು ರೂಪಿಸಲು ಪ್ರೇರೇಪಿಸುತ್ತದೆ. ನೋವು ತುಂಬಿದ ಮನಸ್ಸಿಗೆ ಬೇವುಬೆಲ್ಲ ಸಾಂತ್ವನ ನೀಡಲಿ ಮಾಸುವ ಮುನ್ನ ಸಂಬಂಧಗಳು ಚಿಗುರಲಿ ಅನುಬಂಧಗಳು ಬೆಳೆಯಲಿ. ದುಃಖ ಅಳಿದು ಸಂತೋಷ ಉಳಿಯಲಿ ಈ ಯುಗಾದಿ ಜಗತ್ತಿಗೆ ಹರಡಿರುವ ಮಾರಕವನ್ನು ದೂರ ಮಾಡಿ ಸಂತಸವನ್ನು ಹರಡಲಿ. ಯುಗ ಯುಗಕ್ಕೂ ಎಲ್ಲ ಯುಗಾದಿಯೂ ಶುಭವನ್ನೇ ತರಲಿ..
–ಪೂಜಾ ಗುಜರನ್, ಮಂಗಳೂರು
nice madamji