ಯುಗಾದಿ ಬರುತ್ತಿದ್ದಂತೆ ” ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ” ಎಂಬ ದ ರಾ ಬೇಂದ್ರೆಯವರ ಪ್ರಸಿದ್ದ, ಜನಪ್ರಿಯ ನಿತ್ಯನೂತನ ಗೀತೆ ಪ್ರತಿ ವರುಷ ನೆನಪಾಗುವುದು. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತಂದು ಹೊಸತೆಂಬಂತೆ ಯುಗಾದಿ ಗೋಚರಿಸಿದರೆ ಈ ಗೀತೆಯೂ ಹೊಸತೆಂಬಂತೆ ಹಾಡಿಸಿಕೊಳ್ಳುವುದು. ಹೊಸತೆಂಬ ಯುಗಾದಿ ಸುಂದರವೂ ಹಿತಕಾರಿಯೂ ಮನಮೋಹಕವು ಆಗಿರುವುದರಿಂದ ಇಷ್ಟವಾಗುವುದು! ಚೈತ್ರಮಾಸದಲ್ಲಿ ಇಡೀ ಪ್ರಕೃತಿಯೇ ಹರಿದ ಹಾಳಾದ ತೂತುಬಿದ್ದ ಅಂದಗೆಟ್ಟ ಎಲೆಗಳೆಂಬ ಹಳೆ ಕೊಳೆ ಮಲಿನ ಉಡುಪು ಇಲ್ಲವಾಗಿಸಿಕೊಂಡು ಹೊಸ ಚಿಗುರು ಹಸಿರು ಹೊಸಎಲೆಯೆಂಬ ಹಸಿರುಸೀರೆಯ ತುಂಬ ವಿವಿಧ ಆಕಾರದ ವಿವಿದ ಬಣ್ಣದ ಹೂಗಗಳ ಚಿನ್ನದಬಣ್ಣದ ಚಿತ್ತಾರಗಳ ಬಿಡಿಸಿ, ಅದರ ಸುತ್ತ ಹಾರಾಡುವ ದುಂಬಿ, ಪಾತರಗಿತ್ತಿಗಳ ಚಿತ್ತಾರಗಳ ಚಿತ್ರಿಸಿ, ಅಲ್ಲಲ್ಲಿ ಮಿಡಿ ಹಿಡಿ ಎಳೆಗಾಯಿಗಳ ಗೊಂಚಲ ಚಿತ್ರಿಸಿ, ಒಂದು ಮರಕ್ಕೆರಡು ಮೂರು ಕುಕಿಲೆಂಬ ಕೋಗಿಲೆಗಳ ಕೊರಳ ನೆಯ್ದ ಸುಂದರ ರಂಗುಂಗಿನ ಸೀರೆಯುಟ್ಟು ಪಲ್ಲವಿಸುತ ತೊನೆಯುತ ನಲಿಯುವುದು! ಹೀಗೆ ಪ್ರಕೃತಿಯೇ ಹೊಸತಾಗಿ ತೋರಿ ಯುಗದ ಆದಿ ಇದು ಯುಗಾದಿ ಎಂದು ಡಿಜೆಸೌಂಡಲಿ ಮೈಕಾಗುವುದು. ಇದುವೆ ಹೊಸ ವರುಷ ಎಂದು ಸಾರುವುದು. ಹೊಸತಾಗಿಯೇ ತೋರುವುದರಿಂದ ಸಾರುವ ಅಗತ್ಯ ಕಾಣದು. ಶಿಶಿರ ವಸಂತನ ಆದಿಯಾದರೂ ಹೊಸತೆನಿಸುವುದಿಲ್ಲ! ಶಿಶಿರದಲ್ಲಿ ಎಲ್ಲೆಡೆ ತುಂಬಿಹುದು ಹಾಳು ಬೋಳು ವಿಕಾರ ಕರಾಳತೆ ಕಳಾರಹಿತತೆ ವಿನಾಶ ವಿಕಾರ. ಆದ್ದರಿಂದ ಶಿಶಿರ ಋತುವಲಿ ಮೈದೋರುವ ಜನವರಿ ಸಾವಿರಾರು ಸಾರಿ ಗಂಟಲು ಹರಿಯುವತನಕ ಕೂಗಿದರೂ ಹೊಸ ವರುಷವಾದೀತೇ? ಅಂಕಿ ಸಂಖ್ಯೆಗಳು ಬದಲಾದ ಮಾತ್ರಕ್ಕೆ ಹೊಸವರುಷವಾಗದು!
ನಾವು ಚಿಕ್ಕವರಿದ್ದಾಗ ಯುಗಾದಿಯೆಂದರೆ ಹೊಸಬಟ್ಟೆ, ಹೊಸಬಟ್ಟೆಯೆಂದರೆ ಯುಗಾದಿ ಆಗಿತ್ತು ಅಂದರೆ ವರುಷಕ್ಕೆ ಒಂದೆರಡು ಸಲ ಮಾತ್ರ ಹೊಸ ಬಟ್ಟೆ ತರುತ್ತಿದ್ದರು. ಹೊಸಬಟ್ಟೆ ಧರಿಸುವುದೆಂದರೆ ಮಕ್ಕಳಿಗಷ್ಟೇ ಅಲ್ಲ ಹಿರಿಯರಿಗೂ ಹಿಗ್ಗು! ಹೊಸಬಟ್ಟೆ ತೊಡಲು ಐದಾರು ತಿಂಗಳು ಕಾಯಬೇಕಾಗಿದ್ದರಿಂದ ಅದ ತಂದಾಗ ಅಪರಿಮಿತ ಆನಂದವಾಗುತ್ತಿತ್ತು. ಹೊಸಬಟ್ಟೆ ತಂದು ಟೈಲರಿಗೆ ಹೊಲೆಯಲು ಕೊಡುವತನಕ ಪೋಷಕರಿಗೆ ಕಾಟಕೊಡುತ್ತಿದ್ದೆವು. ಟೈಲರಿಗೆ ಕೊಟ್ಟಮೇಲೆ ಅವನು ಹೊಲೆದು ಕೊಡುವ ತನಕ ಹೊಲಿದಿರಾ ಆಯ್ತಾ ಇನ್ನು ಯಾವಾಗ ಆಗುತ್ತದೆ ಇನ್ನೂ ಆಗಲಿಲ್ಲವ ಎಂದು ನಾನು, ನನ್ನ ನಂತರ ನನ್ನ ತಂಗಿ ಮೇಲೆ ಮೇಲೆ ಮತ್ತೆ ಮತ್ತೆ ಹೋಗಿ ಹೋಗಿ ಕಾಟ ಕೊಡುತ್ತಿದ್ದಿವಿ. ರಾತ್ರಿಯೆಲ್ಲಾ ಅಪರೂಪಕ್ಕೊಮ್ಮೆ ಎಣ್ಣೆ ಮಜ್ಜನ ಮಾಡಿ ಹೊಸ ಬಟ್ಟೆ ಧರಿಸಿ ಕುಣಿವ ಕನಸು! ಬೆಳಿಗ್ಗೆ ಟೈಲರ್ ಬಾಗಿಲು ತೆಗೆಯುವ ಮುನ್ನವೆ ಟೈಲರ್ ಅಂಗಡಿಗೆ ಓಟ! ಟೈಲರ್ ನಮ್ಮ ಕಾಟ ತಾಳದೆ ಬೇಗ ಹೊಲೆದು ಕೊಡುತ್ತಿದ್ದ! ಹಬ್ಬದಂದು ಉಟ್ಟು ಸಂಬಂಧಿಕರ ಮನೆಗೆ ಹೋಗಿ ಅವರಿಗೆ ತೋರಿ ಸ್ನೇಹಿತರಿಗೂ ತೋರಿಸಿ ಅವರ ಉಡುಪ ನೋಡಿ ಖುಷಿಯಿಂದ ಕುಣಿದು, ಚಂದ್ರನ್ನ ಕಂಡು, ಬೇವು – ಬೆಲ್ಲ ಕೊಟ್ಟು, ಹಿರಿಯರ ಪಾದಗಳಿಗೆ ನಮಿಸಿ ಆಶೀರ್ವಾದ ಮಾಡಿಸಿಕೊಂಡು ದೇವಸ್ಥಾನಕ್ಕೆ ಸಂಭ್ರಮದಿಂದ ಹೋಗುತ್ತಿದ್ದಿವಿ. ಅಂತಹ ಆನಂದ ಇಂದು ಏಸು ದಿರಿಸು ಧರಿಸಿದರೂ ಆಗುತ್ತಿಲ್ಲ! ಏಕೆಂದರೆ ಹಿಂದೆ ಬಟ್ಟೆ ತರಲು ತುಂಬ ಕಷ್ಟಪಡಬೇಕಿತ್ತು. ಯಾವತ್ತಿಗೂ ಕಷ್ಟದ ಫಲ ಸುಂದರವೂ, ರುಚಿಕರವೂ ಆಗಿರುತ್ತದೆ. ಅಂದು ದುಡ್ಡಿಗೆ, ಬಟ್ಟೆಗೆ ಬೆಲೆ ಹೆಚ್ಚು ಇತ್ತು. ಅಂದು ಬಟ್ಟೆ ಮಿತವಾಗಿ ತಯಾರಿಸುತ್ತಿದ್ದರು. ಬಟ್ಟೆ ತಯಾರಿಸಲು ಹೆಚ್ಚು ಖರ್ಚಾಗುತ್ತಿತ್ತು! ಎಷ್ಟು ಶ್ರಮಿಸಿದರೂ ಬಟ್ಟೆ ಕೊಳ್ಳುವಷ್ಟು ಹಣ ಗಳಿಸಲಾಗುತ್ತಿರಲಿಲ್ಲ! ಎಷ್ಟೋ ಸಲ ಬಟ್ಟೆ ಹೊಲಿದವರಿಗೆ ಕೂಲಿ ಹಣ ಕೊಡಲು ಕಾಸು ಇರುತ್ತಿರಲಿಲ್ಲ! ದುಡ್ಡು, ಬಟ್ಟೆ ಅಷ್ಟು ಬೆಲೆಯುತವಾಗಿತ್ತು. ಪ್ರಯುಕ್ತ ಅವು ತರುವುದು ಅಪರೂಪವಾಗಿದ್ದವು. ಅವಶ್ಯಕವಾದಾಗಲೂ ತರಲಾಗುತ್ತಿರಲಿಲ್ಲ! ಹರಿದ ಬಟ್ಟೆಯಲ್ಲಿಯೇ ಬಡವರು ಇರಬೇಕಿತ್ತು! ಯುಗಾದಿ ಹಬ್ಬಕ್ಕೆಂದೇ ಅನೇಕ ದಿನಗಳಿಂದ ಗಳಿಸಿ ಕೂಡಿಟ್ಟು ಯುಗಾದಿಗೆ ತಪ್ಪದೆ ಹೊಸ ಉಡುಪು ಕೊಡಿಸುತ್ತಿದ್ದರಿಂದ ಯುಗಾದಿ ಸಂತೋಷವನ್ನು ನೀಡುತ್ತಿತ್ತು. ಅಂದು ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಗಾದೆಗೆ ಅನುಗುಣವಾಗಿ ಬದುಕುತ್ತಿದ್ದುದರಿಂದ, ಗುಡ್ಡಕ್ಕೆ ಕಟ್ಟುವ ಬಳ್ಳಿ ಹಾಸದಿದ್ದರಿಂದ, ಬರಿ ಸುಖದ ಕನವರಿಕೆಗಳು ಇಲ್ಲದ್ದರಿಂದ ಅಂದು ಒಂದೇ ಜತೆ ಬಟ್ಟೆಯಲ್ಲಿ ಸಂತೋಷವಾಗಿ ಬದುಕುತ್ತಿದ್ದರು! ಹೊಸ ಬಟ್ಟೆಗೆ ಇಂದು ಬರವಿಲ್ಲ. ಆದರೆ ಅವುಗಳ ಧರಿಸಲು ಹಿಂದಿನಂತಹ ಕುತೂಹಲ ಆಸೆ ಇಲ್ಲ! ಧರಿಸಿದರೂ ಅಂದಿನಂತೆ ಇಂದು ಸಂತಸವಾಗುತ್ತಿಲ್ಲ! ಆದರೂ ಯುಗಾದಿ ತನ್ನಪಾಡಿಗೆ ತಾನು ಬರುತ್ತದೆ ಓಕಳಿಯಾಡಿಸುತ್ತದೆ, ಹೊಸ ಉಡುಗೆ ತೊಡಿಸುತ್ತದೆ, ಚಂದ್ರನ್ನ ದರಶನ ಮಾಡಿಸುತ್ತದೆ, ಬೇವುಬೆಲ್ಲ ಕೊಡಿಸುತ್ತದೆ ಮತ್ತೆ ಬರುವೆನೆಂದು ಹೋಗುತ್ತದೆ.
ಇಂದು ನಾವು ಯುಗಾದಿಯ ಹೊಸ್ತಿಲಲ್ಲಿದ್ದೇವೆ. ಇಂದು ಯಾರಿಗೂ ಹೊಸದ ತರಲು, ತೊಡಲು ಬರವಿಲ್ಲ! ಎಲ್ಲರ ಮನೆಯಲು ಇಂದು ರಾಶಿ ರಾಶಿ ಬಟ್ಟೆಗಳು ಇಹವಲ್ಲ! ಆದರು ಎಲ್ಲರೂ ಹೊಸ ಬಟ್ಟೆ ತರುವುದ ಬಿಡುವುದಿಲ್ಲ! ಎಲ್ಲರ ಮನೆಗಳು ಉಡುಪುಗಳ ಅಂಗಡಿಗಳಾಗಿವೆ! ಒಬ್ಬೊಬ್ಬರ ಉಡುಪುಗಳು ಮನೆಯಲ್ಲಿ ಇಡಲು ಜಾಗವಿಲ್ಲದಂತೆ ಅಲ್ಮೆರ ತುಂಬಿವೆ. ಉಡುಪು ಧರಿಸುವುದು ಮಾನಮುಚ್ಚಿ ದೇಹವನ್ನು ಗಾಳಿ ಮಳೆ ಚಳಿ ಕ್ರಿಮಿ ಕೀಟ ಮುಂತಾದವುಗಳಿಂದ ರಕ್ಷಣೆ ಪಡೆಯಲು ಎಂಬ ಉದ್ದೇಶ ಹೋಗಿ ಉಡುಪುಗಳ ಧರಿಸುವುದು ಅಂದ ಕಾಣಲು, ಸ್ಟೈಲ್ ಮಾಡಲು, ಇತರರ ತನ್ನೆಡೆಗೆ ಸೆಳೆಯಲು, ಸಿರಿತನ ಪ್ರದರ್ಶಿಸಲು ಎಂಬಂತಾಗಿ ಮನೆ ಬಟ್ಟೆಅಂಗಡಿಯಾಗಿದೆ! ಜತೆಗೆ ಅಂದು ಎಲ್ಲರಿಗೂ ಕೈಗೆಟುಕದ ಬಟ್ಟೆ ಎಂತಹವರಿಗೂ ಇಂದು ಕೈಗೆಟುಕುವಂತಾಗಿರುವುದರಿಂದ, ಮದುವೆಯಂತಹ ಶುಭ ಸಮಾರಂಭಗಳಿಗೆ ಸಂಬಂಧಿಕರು ಬಡವ ಬಲ್ಲಿದರೆನ್ನದೆ ತುಂಬು ಉಡುಗೊರೆ ಕೊಟ್ಟು ಆಹ್ವಾನಿಸುವ ಸಂಪ್ರದಾಯಕ್ಕೆ ಎಲ್ಲರೂ ಮೊರೆ ಹೋಗುತ್ತಿರುವುದರಿಂದ, ಬೇಕಿಲ್ಲದಿದ್ದರೂ ಅವಶ್ಯಕವಿಲ್ಲದಿದ್ದರೂ ಹೊಸದೆಂದು ಕೊಳ್ಳುತ್ತಿರುವ ಖಯಾಲಿ ಬೆಳೆಯುತ್ತಿರುವುದರಿಂದ, ಹುಟ್ಟುಹಬ್ಬ, ಯುಗಾದಿ, ಪಿತೃಪಕ್ಷ ಎಂಬ ಅನೇಕ ಕಾರಣಗಳಿಗೆ ಹೊಸ ಬಟ್ಟೆಗಳ ಖರೀದಿಸುತ್ತಿರುವುದರಿಂದ ಮನೆ ಉಡುಪುಗಳ ತಿಪ್ಪೆಯಯಾಗಿದೆ! ಕಾರ್ಖಾನೆಗಳು ಲಾಭ ಗಳಿಸಲು ಸ್ಪರ್ದೆಗೆ ಇಳಿದು ರಾಸಾಯನಿಕಗಳ ಉಪಯೋಗಿಸಿ, ಅಪಾಯಕಾರಿ ಬಣ್ಣಗಳ ಬಳಸಿ ಹೊಸ ವಸ್ತುವಿನಿಂದ ಬಟ್ಟೆ ತಯಾರಿಸುತ್ತಿರುವುದರಿಂದ, ಹೊಸ ಡಿಸೈನ್ ಗಳಿಂದ ಆಕರ್ಷಿಸುವುದರಿಂದ, ರೀಯಾಯತಿ ದರದಲ್ಲಿ ಮಾರುತ್ತಿರುವುದರಿಂದ, ಬಟ್ಟೆ ಹೆಚ್ಚಾಗಿ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ಸುರಿದು ಕಡಿಮೆ ಬೆಲೆಗೆ ಮಾರುತ್ತಿರುವುದರಿಂದ, ಸಿನಿಮಾ ನಟರು ದೃಶ್ಯಕ್ಕೊಂದು ಡ್ರೆಸ್ ಬದಲಿಸುವುದರಿಂದ, ಧರಿಸಿದವುಗಳ ಅವರು ಮತ್ತೆ ಧರಿಸದಿರುವುದರಿಂದ, ಅವು ಮಾರಾಟಕ್ಕೆ ಬರುತ್ತಿರುವುದರಿಂದ, ಸಿನಿಮಾ ನಟರಂತೆ ಒಮ್ಮೆ ಉಟ್ಟ ಉಡುಪ ಇನ್ನೊಮ್ಮೆ ಉಡದವರು ಹೆಚ್ಚುತ್ತಿರುವುದರಿಂದ ಉಡುಪುಗಳು ಹೆಚ್ಚಿ ರಸ್ತೆ, ಚರಂಡಿ, ತಿಪ್ಪೆ, ಕೆರೆ ಕಟ್ಟೆ, ಕಾಡುಗಳ, ಜೀವಿಗಳ, ಸಮುದ್ರದ ಒಡಲ ಸೇರಿ ಪರಿಸರ ಮಲಿನವಾಗಿದೆ! ಜೀವಿಗಳ ಜೀವಕ್ಕೆ ಕುತ್ತು ಬಂದಿದೆ!
ಬಟ್ಟೆ ತಯಾರಿಸಲು ಹಿಂದೆ ಹತ್ತಿ, ರೇಷ್ಮೆ, ಉಣ್ಣೆ ಬಳಸುತ್ತಿದ್ದರು. ಅವು ಪರಿಸರ ಸ್ನೇಹಿಯಾಗಿದ್ದವು. ಇಂದು ಬಹಳ ದಿನ ಹರಿಯದ ಬಣ್ಣಗೆಡದ, ಪರಿಸರ ಮಾಲಿನ್ಯ ಮಾಡುವ ಬಟ್ಟೆಗಳ ತಯಾರಿಸುತ್ತಿದ್ದಾರೆ. ಅವುಗಳ ನೈಲಾನ್, ಟೆರಿನ್, ಟರ್ಲಿನ್, ಸ್ಪನ್, ಪಾಲಿಯೆಸ್ಟರ್ ಮುಂತಾದ ಎಳೆಗಳ ತಯಾರಿಸುವರು. ಈ ಎಳೆಗಳ ತಯಾರಿಸಲು ಕಲ್ಲಿದ್ದಲು ಪೆಟ್ರೋಲಿಯಂ ಮುಂತಾದ ಕಚ್ಚಾ ವಸ್ತುಗಳ ಬಳಸಲಾಗುವುದು! ಕಾರ್ಖಾನೆಗಳು ಹಣ ಗಳಿಸುವ ಏಕಮೇವ ಉದ್ದೇಶ ಹೊಂದಿ ಹೊಸ ಬಟ್ಟೆ ತಯಾರಿಸುವ ಸ್ಪರ್ದೆಗಿಳಿದಿರುವುದರಿಂದ ಪ್ರಕೃತಿಯ ಬಗ್ಗೆ ಚಿಂತಿಸದಿರುವುದರಿಂದ ಒಂದೇ ಸಮನೆ ಕಲ್ಲಿದ್ದಲು ಪೆಟ್ರೋಲ್ ವಿವೇಚನೆಯಿಲ್ಲದೆ ಬಳಸುತ ಪ್ರಕೃತಿಯ ಸಿರಿ ಬಸಿರ ಬರಿದು ಮಾಡಿ ಬಟ್ಟೆಗಳ ತಯಾರಿಸುತ್ತಾ ಪರಿಸರ ಮಲಿನವಾಗಿಸಿ ನಾಶ ಮಾಡುತ್ತಿವೆ. ಹೀಗೆ ಮಾನವನ ಒಂದು ಬಟ್ಟೆಯ ಬಗೆಗಿನ ದಾಹ ಬಹಳಷ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾದರೆ ಉಳಿದ ಅನೇಕ ಮಾನವನ ದುರಾಸೆಯ ದಾಹಗಳಿಂದ ಎಷ್ಟು ಪರಿಸರ ನಾಶ ಆಗುತ್ತಿರಬಹುದು? ಅತಿ ಹತ! ಡೈನೋಸಾರುಗಳ ಯುಗ ಏಕೆ ಅಂತ್ಯವಾಗಿರಬಹುದು? ಅವು, ಅವುಗಳ ಕ್ರೌರ್ಯ ಅತಿಯಾದುದರಿಂದಲೆ ಆಗಿರಬೇಕು! ಆಮ್ಲ ಮಳೆಗಳು, ಭೂತಾಪ ಹೆಚ್ಚಳ, ಓಜೋನ್ ಪದರದ ನಾಶ, ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ, ದ್ರುವ ಪ್ರದೇಶಗಳಲ್ಲಿನ ಮಂಜು ಕರಗುವಿಕೆ, ಜ್ವಾಲಾಮುಖಿಗಳ ನಿರಂತರ ಕ್ರೀಯಾಶೀಲವಾಗುವಿಕೆ ಮಾನವ ಪ್ರಕೃತಿಯ ಮೇಲೆ ನಿತ್ಯ ನಿರಂತರವಾಗಿ ನಡೆಯಿಸುವ ಅತ್ಯಾಚಾರಗಳ ಸಂಕೇತ! ಮಾನವನ ಅಪರಿಮಿತ ಸುಖದ ಬಯಕೆಗಳ ಪರಿಣಾಮ! ಬಾಂಬುಗಳ ಪ್ರಾಯೋಗಿಕ ಪರೀಕ್ಷೆಗಳಿಂದ, ಖನಿಜ ತೈಲಗಳು ಸಮುದ್ರದ ಒಡಲ ಸೇರುತ್ತಿರುವುದರಿಂದ, ಪ್ಲಾಸ್ಟಿಕ್ಕಿನ ಮಿತಿಮೀರಿದ ಬಳಕೆಗಳಿಂದ, ರಾಸಾಯನಿಕಗಳ ಯಥೇಚ್ಛ ಬಳಕೆಯಿಂದ, ಪ್ಲಾಸ್ಟಿಕ್ಕಿನ ರೀಸೈಕಲ್ಲಿನಿಂದ, ಕಾಡುಗಳ, ಖನಿಜಗಳ, ಅಂತರ್ಜಲದ ನಿರಂತರ ಲೂಟಿಯಿಂದ, ವನ್ಯಮೃಗಗಳ ಬೇಟೆಯಿಂದ, ನೀರಿನ, ನಿತ್ಯ ಮೂಲಭೂತ ಅವಶ್ಯಕಗಳ ಅಭಾವ ಕಾಡಿ ಪ್ರಕೃತಿ ನಾಶವಾಗುತ್ತಿದೆ. ಮಾನವನ ಸ್ವೇಚ್ಛಾಚ್ಚಾರ, ಭ್ರಷ್ಟಾಚಾರ, ಭಯೋತ್ಪಾದನೆ, ಉಗ್ರಗಾಮಿತನ, ಭೂ ಕಬಳಿಕೆ, ಅಗಣಿತ ಕೊಳವೆ ಬಾವಿಗಳ ಕೊರೆತ, ಮುಗಿಲೆತ್ತರ ಕಾಂಕ್ರೇಟ್ ಕಾಡುಗಳ ಕಟ್ಟುವಿಕೆಯಿಂದ ಪರಿಸರ ನಾಶ ಮಾಡುತ್ತಿದ್ದಾನೆ. ಮಾನವ ಒಂದು ಕಡೆ ನಿರಂತರವಾಗಿ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡುತ್ತಾ ಇನ್ನೊಂದು ಕಡೆ ಪ್ರಕೃತಿಯ ರಕ್ಷಿಸುವ ಮಾತನಾಡುತ್ತಿದ್ದಾನಾಗಲಿ ನಿಯಂತ್ರಿಸುವ ಕಾರ್ಯ ಯೋಜನೆಯಂತೆ ಮಾಡುತ್ತಿಲ್ಲ! ಇದ ಕಂಡು ರೋಸಿಹೋದ ಪ್ರಕೃತಿ ಮಾತೆ ಯುಗಾದಿ ಆರಂಭಕ್ಕೆ ಮುನ್ನವೇ ತನ್ನ ತಾನು ರಕ್ಷಿಸಿಕೊಳ್ಳಲು ಮಾನವನು ತನ್ನ ಮೇಲೆ ಎಸಗುತ್ತಿರುವ ನಿರಂತರ ಅತ್ಯಾಚಾರವನ್ನು ಅಂತ್ಯವಾಗಿಸಲು ದುಷ್ಟರಿಗೆ ಪಾಠ ಕಲಿಸಲೋ ಎಂಬಂತೆ ಪ್ರಕೃತಿ ಕೊರೋನ ವೈರಸ್ಸಿನ ಏಕಾಣುವಿನ ಅತ್ಯಂತ ಚಿಕ್ಕ ದೇಹಿಯಾಗಿ ರೌದ್ರ ನರ್ತನಗೈಯ್ಯುತ ಮಾನವ ಕುಲಕೋಟಿಯ ನುಂಗಿ ನೊಣೆಯುತ್ತಿರುವುದು ನೋಡಿದರೆ ಈ ಯುಗಾದಿ ಯುಗಾಂತ್ಯ ಅನ್ನಿಸದಿರದು! ಇಟಲಿಯ ಪರಿಸ್ಥಿತಿಯ ಕಂಡವರಿಗೆ ಈ ಭಾವನೆ ಬರದಿರದು! ಇದು ಅತಿಶಯೋಕ್ತಿಯಾಗಲಿ ಎಂಬುದು ಆಶಯ!
ಯಾರ ಮಾತನು ಕೇಳದ, ಯಾರಿಗೂ ಶರಣೆನ್ನದ ಸ್ವೇಚ್ಛಾಚ್ಚಾರಿ, ದುರಹಂಕಾರಿ, ದುಷ್ಟ, ಭ್ರಷ್ಟ, ರಾಕ್ಷಸನಾದ ಮಾನವನ ಕೈಕಾಲು ಮುಖ ತೊಳೆದು ಗೃಹ ಪ್ರವೇಶಿಸುವಂತಹ ಭಾರತೀಯ ಸಂಸ್ಕಾರಗಳಿಗೆ, ಸ್ನಾನಮಾಡಿ ಅಡುಗೆ ಮನೆ ಪ್ರವೇಶಿಸುವ, ಅಡುಗೆ ತಯಾರಿಸಿ ಕೈ ತೊಳೆದು ಬಡಿಸುವ, ಎಂಜಲನ್ನು ಹಂಚಿಕೊಳ್ಳದಂತಹ, ಕೈತೊಳೆದೇ ತಿನ್ನುವ ವಸ್ತುಗಳ ಮುಟ್ಟವ, ಹಿರಿಯರಿಗೆ, ಸಹಾಯಕರಿಗೆ ತಲೆಬಾಗುವಂತಹ ಸತ್ಸಂಪ್ರದಾಯಗಳಿಗೆ, ದೂರದಿಂದನೆ ಕೈಮುಗಿಯುವ ನಮಸ್ಕಾರದಂತಹ ಶಿಷ್ಟಾಚಾರಗಳಿಗೆ ಕರೆದೊಯ್ದು ತಿದ್ದಿ ಬುದ್ದಿ ಕಲಿಸಿ ನೀತಿಯುತನ, ನಿರ್ಮಲನ, ಸದಾಚಾರಿಯ, ಸಾತ್ವಿಕಾಹಾರಿಯ, ಮಿತಾಹಾರಿಯ, ಗೃಹಾಹಾರಿಯ, ಒಳ್ಳೆ ಮಾನವನ ಮಾಡಿ ಸರಿದಾರಿಗೆ ತರಲು ಕೊರೋನ ಬಂದಿರಬಹುದೆಂಬ ಗುಮಾನಿಯ ಅದು ಹರಡದಂತೆ ತಡೆಯುವ ಕ್ರಮಗಳು ಮೂಡಿಸುತ್ತಿವೆ. ಈ ಯುಗಾದಿ ಕೊರೋನ ಬೀತಿಯ ಓಡಿಸಿ ಇದೇ ಸದ್ಬದ್ದಿಯ ಬಹುದಿನ ಉಳಿಸಿ ಮಾನವ ಮಾನವನಾಗಿರುವಂತೆ ಮಾಡಲಿ! ಮಾನವ ಈಗಲಾದರೂ ಮಾನವನಾಗಿ ಬಾಳುವುದ ಕಲಿಯಲಿ!
-ಕೆ ಟಿ ಸೋಮಶೇಖರ್ ಹೊಳಲ್ಕೆರೆ