ಈ ಪ್ರಶ್ನೆಯನ್ನು ವಿಶ್ವಸುಂದರಿ ಸ್ಫರ್ಧೆಯಲ್ಲಿ “ಮಾನುಷಿ ಛಿಲ್ಲರ್”ಗೆ ಕೇಳಿದ ಪ್ರಶ್ನೆ ಆಗಿತ್ತು.
ಇದಕ್ಕೆ ಉತ್ತರವಾಗಿ “ನಾನು ನಮ್ಮ ಅಮ್ಮನಿಗೆ ತುಂಬಾ ಹತ್ತಿರವಾಗಿರುವುದರಿಂದ,ನನ್ನ ಪ್ರಕಾರ ತಾಯಿಗೇ ಆತಿ ಹೆಚ್ಚಿನ ಗೌರವ ಸಿಗಬೇಕು. ವೇತನ ಅಂದರೆ,ಅದು ಹಣ ಮಾತ್ರವಲ್ಲ,ಬೇರೆಯವರಿಗೆ ತೋರಿಸುವ ಪ್ರೀತಿ-ಗೌರವವೂ ಕೂಡ ಆ ಲೆಕ್ಕಕ್ಕೆ ಬರುತ್ತದೆ. ಅಮ್ಮನೇ ನನ್ನ ಜೀವನದ ದೊಡ್ಡ ಸ್ಫೂರ್ತಿ.ಎಲ್ಲ ತಾಯಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ,ಅತಿ ಹೆಚ್ಚು ವೇತನ, ಗೌರವ ಮತ್ತು ಪ್ರೀತಿ ಸಿಗಬೇಕಾಗಿದ್ದು ತಾಯಿಂದಿರಿಗೆ.”ಈ ಉತ್ತರದಿಂದ ಇಡೀ ವಿಶ್ವಕ್ಕೆ ವಿಶ್ವ ಸುಂದರಿ ಏನಿಸಿದರು. “ಅಮ್ಮ”ಎಂಬ ಎರಡಾಕ್ಷರವೇ ಹಾಗೆ. ಹಣದಿಂದ ಪಡೆಯಲು ಸಾಧ್ಯವಿಲ್ಲ.ಅಮ್ಮನ ಋಣವನ್ನು ತಿರಿಸಲು ಸಾಧ್ಯವಿಲ್ಲ. ಅಮ್ಮ ಎಂದರೆ ಕರುಣೆ, ಮಮತೆ ಹೀಗೆ ವರ್ಣನೆ ಮಾಡಲು ಆಸಾಧ್ಯ. ಅಮ್ಮನನ್ನು ದೂರುವ ಜನರು ಅವಳ ಸ್ಥಾನದಲ್ಲಿ ನಿಂತು ಅವಳ ತ್ಯಾಗವನ್ನು ಸ್ಮರಿಸಿದರೆ ಮನಸ್ಸು ಕರಗ ಬಹುದು.
ನನ್ನ ಅಮ್ಮನ ಬಗ್ಗೆ ಹೇಳುತ್ತಾ ಹೋದರೆ…ಮೂವತ್ತು ವರ್ಷಗಳ ಕಾಲ ತುಂಬಿದ ಕುಟುಂಬದ ಹಿರಿಸೊಸೆಯಾಗಿ ಕಷ್ಟಸುಖದೊಂದಿಗೆ ಜೀವನ ನಡೆಸಿದಾಕೆ.ದೊಡ್ಡದಾದ ಕುಟುಂಬ, ದಿನಕ್ಕೆ ಐವತ್ತು ಮಂದಿಯ ಮೇಲೆ ಊಟ ತಿಂಡಿಗಳನ್ನು ಮಾಡಿ ಬಡಿಸುತ್ತಿದ್ದ ಕಾಲವದು.ನಾಲ್ಕು ವರ್ಷ ಇದ್ದಾಗ ತಾಯಿಯನ್ನು ಕಳೆದು ಕೊಂಡ ಅಮ್ಮ, ಅವಳಿಗೆ ಅಮ್ಮನ ನೆನಪುಗಳೇ ಇಲ್ಲ.ಅಂದಿನ ಕಾಲದಲ್ಲಿ ಎಲ್ಲಾ ಕಡೆಗಳಲ್ಲೂ ನೆಡೆಯುತ್ತಿತ್ತು ಬಾಲ್ಯ ವಿವಾಹ.ನಮ್ಮಮ್ಮ ಹದಿನಾಲ್ಕು ವರ್ಷಕ್ಕೆ ಜವಾಬ್ದಾರಿ ಸೊಸೆಯಾಗಿ ಗಂಡನ ಮನೆಯ ಹೊಸ್ತಿಲು ತುಳಿದು ಮನೆ ಮಂದಿ ಮನಸ್ಸನ್ನು ಕದ್ದಾಕೆಯೆನ್ನಬಹುದು.ದಿನ ಕಳೆದಂತೆ ಏಳು ಮಕ್ಕಳ ತಾಯಿಯೆನಿಸಿ ಕೊಂಡಳು. ಮೂವತ್ತು ವರ್ಷಗಳ ಕಾಲ ತುಂಬಿದ ಕುಟುಂಬದ ಹಿರಿಸೊಸೆಯಾಗಿ ಜೀವನದ ಮೆಟ್ಟಿಲುಗಳನ್ನು ಹತ್ತಿದಾಕೆ.
ತನ್ನ ಮಕ್ಕಳ ಸುಂದರವಾದ ಜೀವನ ನೋಡ ಬಯಸಿದ ಆಕೆ, ಮಕ್ಕಳಿಗಾಗಿ ಮಾಡಿದ ತ್ಯಾಗಗಳು ಅಪಾರ. ಮನೆ ಕಟ್ಟಿದ ಹೊಸತಿನಲ್ಲಿ ಮಕ್ಕಳು ತುಂಬಾ ಚಿಕ್ಕವರು.ಅವರ ವಿಧ್ಯಾಭ್ಯಾಸ ಕೊಡಿಸಲು ಸಹ ಆಗಿನ ಪರಿಸ್ಥಿತಿಯಲ್ಲಿ ಕಷ್ಟವಿದ್ದರೂ ಮಕ್ಕಳು ಓದಿ ಮುಂದೆ ಬರಬೇಕೆಂದು ಯೋಚಿಸಿದಾಕೆ.ತಮಗೆ ಬರುವ ವಿಧ್ಯೆಯನ್ನು ಕಲಿಸಿದಾಕೆ. ಮನೆಯಲ್ಲಿ ಅಡುಗೆ ತಯಾರಿಸಲು ಪದಾರ್ಥಗಳಿಲ್ಲದಿದ್ದರೂ ಉಪ್ಪು, ಖಾರ,ಹುಳಿ ಚೆನ್ನಾಗಿ ಹಾಕಿ,ಬಾಯಿಗೆ ರುಚಿಯಾಗಿ ಮಾಡಿ ಬಡಿಸುತ್ತಿದ್ದಳು.ತನಗೆ ಅನ್ನ ಇದೆಯೋ ಇಲ್ಲವೋ,ಮನೆಗೆ ಬಂದ ನೆಂಟರಿಷ್ಟರು, ಮನೆಯವರು ಕೇಳಿದಷ್ಟು ಉಣ ಬಡಿಸುತ್ತಿದ್ದಳು.
ಅಮ್ಮನೆಂದರೆ ಹಾಗೆ. ತನ್ನಲ್ಲಿ ಎಷ್ಟೇ ನೋವಿದ್ದರೂ ಮಕ್ಕಳ ಒಳಿತಿಗಾಗಿ ತ್ಯಾಗ ಮಾಡುವ ಕರುಣಾಮಯಿಯೆಂದರೆ ತಪ್ಪಾಗಲಾರದು.ಕೆಲವೊಂದು ಮನೆಯಲ್ಲಿ ವಯಸ್ಸಾದ ತಾಯಿಯನ್ನು ಮಕ್ಕಳ ರೀತಿಯಲ್ಲಿ ನೋಡುವವರು ಇದ್ದಾರೆ. ಇನ್ನೂ ಕೆಲವು ಮನೆಗಳಲ್ಲಿ ವೃದ್ದಶ್ರಾಮಕ್ಕೆ ಸೇರಿಸಿ, ಮಕ್ಕಳು ಆನಂದವಾಗಿರುವುದನ್ನು ನೋಡಿದ್ದೇವೆ. ಮತ್ತೆ ಕೆಲವು ಮನೆಯಲ್ಲಿ ಒಂದು ಗುಡಿಸಲು ಕಟ್ಟಿ ತಾಯಿ ಒಂಟಿಯಾಗಿ ಜೀವನ ನೆಡೆಸಲಿ ಎನ್ನುವರು ಇದ್ದಾರೆ.
ಮಕ್ಕಳು ಎಷ್ಟೇ ಕಷ್ಟ ಕೊಟ್ಟರು ಮಕ್ಕಳಿಗೆ ಕೆಡಕು ಬಯಸುವುದಿಲ್ಲ ಅಮ್ಮ.ಮಕ್ಕಳು ಮಾತ್ರ ತಾಯಿಯನ್ನು ಕೇವಲವಾಗಿ ನೋಡಿ ಮೂಲೆಗೆ ಹಾಕುವುದು ವಿಪರ್ಯಾಸವೆನ್ನಬಹುದು.ಅದಕ್ಕೆ ಇರಬಹುದು ತಾಯಿಯ ಬಗ್ಗೆ ಗಾದೆ ಮಾತು ಇರುವುದು. “ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತಾ ರುಚಿಯಿಲ್ಲ”ಎಂದು.ಎಷ್ಟೊಂದು ಅನುಭವದ ಮಾತು ಇದಾಗಿದೆ.ತಾನು ಹೇಗೆ ಇರಲಿ, ತನ್ನ ಮಕ್ಕಳು ಸುಖವಾಗಿರಲಿ,ಸಂತೋಷದಿಂದ ಜೀವನ ನೆಡೆಸಲಿ ಎನ್ನುವುದು ಅವಳ ಹಾರೈಕೆ.ಅಮ್ಮ ಎಂದೆಂದಿಗೂ ಅಪರಂಜಿ ಚಿನ್ನ.ಅವಳ ಮನಸ್ಸು ಮಕ್ಕಳಿಗೋಸ್ಕರ ಹಾತೊರೆಯುತ್ತಿರುತ್ತದೆ. ಮಕ್ಕಳ ಒಂದೊಂದು ನಗುವಿನಲ್ಲೂ ತನ್ನ ಸಂತೋಷವನ್ನು ಹುಡುಕುತ್ತಿರುತ್ತಾಳೆ.ಅಮ್ಮ ಮಕ್ಕಳ ಭವಿಷ್ಯದ ರೂವಾರಿ ಎನ್ನಬಹುದು. ಅಮ್ಮನಿಗೆ ತನ್ನ ಮನೆ, ಗಂಡ, ಮಕ್ಕಳು ಇಷ್ಟೇ ಅವಳ ಪ್ರಪಂಚ.
ಶಾಲಾ ದಿನಗಳಲ್ಲಿ ಬೆಳಗ್ಗೆ ಎದ್ದು ಕಾಫಿ ಮಾಡಿ ನಮ್ಮನ್ನು ಎಬ್ಬಿಸಿ ಕಾಫಿ ಕೊಟ್ಟು ಓದಲು ಹೇಳುತ್ತಿದ್ದಳು.ದಿನವೆಲ್ಲಾ ಸೇವಕಿಯಂತೆ ಮನೆಗೆಲಸ ಮಾಡುತ್ತಿದ್ದಳು. ತನ್ನ ಮಕ್ಕಳಿಗೋಸ್ಕರ ಕಷ್ಟವನ್ನೆಲ್ಲಾ ನುಂಗಿ ಕೊಂಡು ಸಂಸಾರದ ರಥವನ್ನು ಮುನ್ನೆಡೆಸುತ್ತಿದ್ದಳು.ಕಾಲೇಜಿನಲ್ಲಿ ಓದುವಾಗ ಮನೆಗೆ ಬಂದರೆ ನನಗೆ ಇಷ್ಟವಾದ “ಚಿತ್ರಾನ್ನ”ಮಾಡುತ್ತಿದ್ದಳು. ಅಮ್ಮ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದಳು.ಅವಳೊಂದಿಗೆ ಚಿಕ್ಕವರಿದ್ದಾಗ ಹಬ್ಬಗಳಲ್ಲಿ ಮಡಿ ಉಟ್ಟುಕೊಂಡು ನೈವೇದ್ಯಕ್ಕೆ ತಯಾರಿಸಿ, ಅವಳೊಂದಿಗೆ ಅಡುಗೆ ಕಲಿತ ದಿನಗಳಿವೆ.
ಅಮ್ಮ ಒಂದು ಮಗುವಿಗೆ ಜನ್ಮ ನೀಡುವಾಗ ಮರುಹುಟ್ಟು ಪಡೆದು ಕೊಳ್ಳುತ್ತಾಳೆ.ಅಮ್ಮ ಎಂದಿಗೂ ನಿಸ್ವಾರ್ಥಿ.ತಾನಾಗಿ ಏನನ್ನೂ ಬೇಡುವುದಿಲ್ಲ,ಬಯಸುವುದಿಲ್ಲ.ಎಲ್ಲವೂ ತನ್ನ ಮಕ್ಕಳಿಗಾಗಿ ತ್ಯಾಗ ಮಾಡುತ್ತಾಳೆ. ಅಮ್ಮನಲ್ಲಿ ಒಬ್ಬ ಶಿಕ್ಷಕಿ ಇರುತ್ತಾಳೆ. ಈದಿನಗಳಲ್ಲಿಯೂ ತಪ್ಪು ಯಾವುದು,ಸರಿಯಾದ ದಾರಿ ಯಾವುದು ಎಂಬುದು ತಿಳಿಸುತ್ತಾಳೆ.ನನಗಿಂತ ಕಡಿಮೆ ಓದಿದ್ದರೂ ತಿಳುವಳಿಕೆಯಲ್ಲಿ ವಿಧ್ಯೆಯನ್ನು ಮೀರಿ ನಿಂತಾಕೆ ಅವಳು.ಮಕ್ಕಳಿಗೆ ಅಮ್ಮ ಬರೀ ಅಮ್ಮ ಅಗಿರುವುದಿಲ್ಲ ತಪ್ಪು ಸರಿ ತಿದ್ದುವ ಶಿಕ್ಷಕಿಯ ಜೊತೆಗೆ ಕಷ್ಟಸುಖ ಹಂಚಿ ಕೊಳ್ಳುವ ಗೆಳತಿಯು ಆಗಿರುತ್ತಾಳೆ.ಅಮ್ಮ ಮಕ್ಕಳೊಂದಿಗೆ ಜಗತ್ತಿನ ಎಲ್ಲಾ ಕಷ್ಟಗಳನ್ನು ಮರೆತು ಬಿಡುತ್ತಾಳೆ.ಕೆಲವೊಮ್ಮೆ ಮಕ್ಕಳ ಆರೋಗ್ಯ ಸರಿಯಿಲ್ಲದಿದ್ದರೆ ದೇವರಿಗೆ ಹರಕೆ ಹೇಳಿಕೊಳ್ಳುತ್ತಿದ್ದಳು.ಈಗಲೂ ಫೋನ್ ಮಾಡಿ ಅಲ್ಲಿ ಪೂಜೆ ಮಾಡಿಸು,ಇಲ್ಲಿ ಪೂಜೆ ಮಾಡಿಸು ಎನ್ನುತ್ತಾಳೆ. ಏನಿದ್ದರೂ ಮಕ್ಕಳ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾಳೆ.
ತಾಯಿ ಮಕ್ಕಳನ್ನು ಮರೆಯುವುದಿಲ್ಲ. ಅದರೆ ಮಕ್ಕಳು ದೊಡ್ಡವರಾದಂತೆ ತಮ್ಮನ್ನು ಹೆತ್ತು ಹೊತ್ತು ಬೆಳಸಿದ ತಾಯಿಯನ್ನು ಮರೆಯುತ್ತಾರೆ. ಮಕ್ಕಳಿಗೆ ಅವರ ಸಂಸಾರವೇ ಹೆಚ್ಚಾಗುತ್ತದೆ. ತಮ್ಮನ್ನು ಸಾಕಿ ಸಲುಹಿದ ತಾಯಿ ಕೇವಲವಾಗುತ್ತಾ ಹೋಗುತ್ತಾಳೆ. ಚಿಕ್ಕವರಿದ್ದಾಗ ಏನು ಹೇಳಿದರೂ ಸರಿ ಏನಿಸಿದ್ದು, ಈಗ ಅದೇ ವಿಷಯ ತಪ್ಪಾಗಿ ಕಾಣುತ್ತದೆ.ಚಿಕ್ಕ ಪುಟ್ಟ ವಿಷಯಗಳಿಗೂ ಮನಃಸ್ತಾಪ ಉಂಟಾಗುತ್ತದೆ. ಒಂದೇ ಸೂರಿನಡಿ ಬಾಳ್ವೆ ನೆಡೆಸುವುದು ಕೆಲವೊಂದು ಕುಟುಂಬದಲ್ಲಿ ಈ ದಿನಗಳಲ್ಲಿ ಕಷ್ಟವಾಗಿದೆ. ಹೊಂದಾಣಿಕೆ ಎಂಬುದು ಬರುಬರುತ್ತಾ ದೂರದ ಮಾತಾಗಿದೆ.ಎಷ್ಟೋ ತಾಯಿಯಂದಿರು ಮಕ್ಕಳಿದ್ದರು ವೃದ್ದಶ್ರಾಮದಲ್ಲಿ ಜೀವನ ನೆಡೆಸುತ್ತಿದ್ದಾರೆ.ಕೆಲವೊಮ್ಮೆ ಅಂತ್ಯಕ್ರಿಯೆಗೂ ಎಷ್ಟೋ ಮಕ್ಕಳು ಬರದಿರುವುದನ್ನು ನೋಡಿದ್ದೇವೆ. ಇದ್ದಾಗ ನೋಡಿ ಕೊಳ್ಳದ ಮಕ್ಕಳು ಮುಂದೊಂದು ದಿನ ಅವರ ಮಕ್ಕಳು ಅದೇ ರೀತಿ ಮಾಡಿದರೆ ತಾಯಿಯ ಹೃದಯದ ಕಷ್ಟ ಗೊತ್ತಾಗುತ್ತದೆ. ಆ ಸಂಕಟ, ನೋವು ಏನೆಂದು ಅನುಭವದಿಂದಲೇ ಗೊತ್ತಾಗುವುದು.
ಅಮ್ಮ ಸಹನೆಯಲ್ಲಿ ಭೂಮಿ ತಾಯಿಯಂತೆ. ಮಕ್ಕಳು ಎಷ್ಟೇ ತಪ್ಪು ಮಾಡಿದರು ಅವಳ ಅಂತಃಕರಣದ ಒಡಲಲ್ಲಿ ಕ್ಷಮೆ ಇದ್ದೆ ಇರುತ್ತದೆ. ಮಕ್ಕಳು ತನ್ನ ತಾಯಿಗೆ ಎಷ್ಟೇ ಕಷ್ಟ ಕೊಟ್ಟರು ಅವಳು ಕ್ಷಮಿಸಿ ಮಕ್ಕಳು ಚೆನ್ನಾಗಿರಲಿ ಎಂದು ದೂರದಲ್ಲೇ ಆಶೀರ್ವಾದ ಮಾಡುವಳು.ಈಗಿನ ಕಾಲದಲ್ಲಿ ಹೆತ್ತವರು ಎಂದರೆ ಹೊರೆ ಎಂಬ ಭಾವನೆಯಿದೆ.ತಮ್ಮೊಂದಿಗೆ ಅವರಿದ್ದರೆ ಕುಟುಂಬದ ಬೇರೊಂದು ಸದಸ್ಯರು ಇದ್ದ ಅನುಭವವಾಗುವುದು ಅವರಿಗೆ.
ಹಿಂದಿನ ಕಾಲದಿಂದಲೂ ಮಾತೃದೇವೋ ಭವ,ಪಿತೃ ದೇವೋ ಭವ,ಆಚಾರ್ಯ ದೇವೋ ಭವ,ಅತಿಥಿ ದೇವೋ ಭವ ಎನ್ನುವುದು ಹಿಂದೂ ಧರ್ಮದ ಸಂಸ್ಕಾರದ ಪದ್ದತಿ. ಹಾಗೆ ಹೇಳುವಾಗಲೂ ತಾಯಿಗೆ ಮೊದಲ ಸ್ಥಾನವಿದೆ. ವಿಘ್ನನಿವಾರಕ ಗಣೇಶನಿಂದ ಹಿಡಿದು ಮನುಜ ಸಂಕುಲ ದೇವತೆ ಸ್ವರೂಪಿಯಾಗಿ ನೋಡುವುದು ತಾಯಿಯನ್ನು ಮಾತ್ರ.ಅದ್ದರಿಂದ ತಾಯಿಗಿಂತ ಮಿಗಿಲಾದ ದೇವರಿಲ್ಲ.ತಾಯಿಯೇ ಪ್ರತ್ಯಕ್ಷ ದೇವತೆ.ಅರಿತು, ಅರಿಯದೆ ಕಲ್ಲು ದೇವರನ್ನು ಪೂಜಿಸುವ ಜನ ತಾಯಿಯನ್ನು ಪೂಜಿಸಿ ನಂತರ ಅವರು ನಂಬಿದ ದೇವರನ್ನು ಪೂಜಿಸಿದರೆ ತಾಯಿಯ ಋಣ ಸ್ವಲ್ಪವಾದರೂ ಕಡಿಮೆ ಮಾಡಿ ಕೊಳ್ಳಲು ಸಾಧ್ಯ.ತಾಯಿ ಇಲ್ಲದ ಮಕ್ಕಳಿಗೆ ಗೊತ್ತಿರುತ್ತದೆ ತಾಯಿಯ ಮಹತ್ವ.
ಭಗವಂತ ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆಂದು ಅಮ್ಮನನ್ನು ಸೃಷ್ಟಿ ಮಾಡಿದನಂತೆ.ಅಮ್ಮ ಎಂದರೆ ಅಂತಹ ಅನುಭವ, ಹರುಷ. ಎರಡಕ್ಷರದಲ್ಲಿ ಎಷ್ಟೊಂದು ಉಲ್ಲಾಸ, ಚೈತನ್ಯ. ಅಮ್ಮ ಕರುಣಾಮಯಿ,ತ್ಯಾಗಮಯಿ,ದಯಾಮಯಿ.ಸೃಷ್ಟಿಯಲ್ಲಿ ಭಗವಂತ ದೇವತೆಯ ಸ್ಥಾನವನ್ನು ಕೊಟ್ಟಿದ್ದಾನೆ.ಎಷ್ಟು ದೇವರ ಪೂಜಿಸಿ ಫಲವೇನು ತಾಯಿ ದೇವರ ಮರೆತು.
ಅಮ್ಮ ಮಕ್ಕಳಿಗೆ ಜೀವವನ್ನು ಮುಡಿಪಾಗಿಸಿ ಮಕ್ಕಳನ್ನು ಸಾಕಿ ಸಲಹುತ್ತಾಳೆ ಅದರೆ ಮಕ್ಕಳು ತಾಯಿಯ ಮಮಕಾರವಿಲ್ಲದೆ ತಾಯಿಯನ್ನು ಕೀಳಾಗಿ ನೋಡುವುದು ದುರ್ದೈವವೆನ್ನಬಹುದು. ಅದಕ್ಕಾಗಿ ನಮ್ಮ ಹಿರಿಯರು ಹೇಳುತ್ತಿದ್ದರು, ಒಬ್ಬ ತಾಯಿ ಹತ್ತು ಮಕ್ಕಳುನ್ನೂ ಸಾಕಬಲ್ಲಳು,ಆದರೆ ಆ ಹತ್ತು ಮಕ್ಕಳಲ್ಲಿ ಒಂದು ತಾಯಿಯನ್ನು ಸಾಕಲು ಒಬ್ಬ ಮಕ್ಕಳು ಮುಂದೆ ಬರುವುದಿಲ್ಲವೆಂದು.ಏಳು ಜನ್ಮ ಹುಟ್ಟಿ ಬಂದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಎನ್ನುತ್ತಾರೆ.
ಅಂದಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ.ಅಂದಿನ ದಿನಗಳಲ್ಲಿ ಅಮ್ಮನೇ ಪ್ರಪಂಚವಾಗಿತ್ತು,ಆದರೆ ಇಂದಿನ ಅಮ್ಮಂದಿರು ಮಕ್ಕಳನ್ನು ಹೆತ್ತು ಬೇರೆಯವರ ಕೈಯಲ್ಲಿ ಸಾಕಿ ಸಲಹುತ್ತಿದ್ದಾರೆ.ಆರು ತಿಂಗಳ ಕಾಲ ಮಗುವಿಗೆ ಹಾಲೂಣಿಸಿ ಆರೈಕೆ ಮಾಡಲು ಅವರಿಗೆ ಪುರುಸೊತ್ತು ಇಲ್ಲವಾಗಿದೆ. ಬೇರೆಯವರ ಕೈಯಲ್ಲಿ ಮಗುವನ್ನು ಕೊಟ್ಟು ಕಛೇರಿಗೆ ಹೋಗುವ ಕಾಲವಾಗಿದೆ.ಇಂದಿನ ದಿನಗಳಲ್ಲಿ ಅಪ್ಪ,ಅಮ್ಮ,ಅತ್ತೆ, ಮಾವರಿಗಿಂತ ಮನೆಗೆಲಸದವರ ಮೇಲೆಯೇ ನಂಬಿಕೆ ಜಾಸ್ತಿಯೆನ್ನಬಹುದು.ಅವರು ಆಡಿದ್ದೇ ಆಟಗಳು. ಮನೆಗೆಲಸದವರ ಜೊತೆಗೆ ಹೊಂದಿ ಕೊಳ್ಳುವ ಜನ ಸ್ವಂತ ಅತ್ತೆ, ಮಾವರೊಂದಿಗೆ ಹೊಂದಿ ಕೊಳ್ಳುವುದು ಕಷ್ಟವಾಗಿರುವುದು ವಿಪರ್ಯಾಸ. ನಾವು ಚಿಕ್ಕವರಿದ್ದಾಗ ತುಂಬಿದ ಕುಟುಂಬದಲ್ಲಿ ಬೆಳೆದವರು.ಅಮ್ಮನೊಂದಿಗೆ ಗೋವಿನ ಹಾಡು, ರಾಮಾಯಣ, ಮಹಾಭಾರತ, ಪಾಡ್ಯ,ಬಿದಿಗೆ,ಋತು, ಸಂವತ್ಸರ ಕಲಿತ ದಿನಗಳುವು.ಈಗಿನ ಮಕ್ಕಳಿಗೆ ಎಲ್ಲಿದೆ ಈ ಭಾಗ್ಯ.ಏನಿದ್ದರೂ ಇಂಗ್ಲಿಷ್ನಲ್ಲಿ ವ್ಯವಹರಿಸುವ ಹೆತ್ತವರು. ಅವರೇ ಸುಸ್ತಾಗಿ ಮನೆಗೆ ಬಂದರೆ ಮಕ್ಕಳ ಬಗ್ಗೆ ಕಾಳಜಿ ಎಲ್ಲಿಂದ ಬರಬೇಕು.
ಅಮ್ಮ ನಮಗೆ ಯಾವತ್ತೂ ನೀನು ತರಗತಿಗೆ ಮೊದಲ ಸ್ಥಾನ ಬಾ ಎಂದು ಹೇಳಿದ ದಿನಗಳು ನೆನಪಿಲ್ಲ.ಇಂದಿನ ದಿನಗಳಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ಮೊದಲ ಸ್ಥಾನ ಬರಬೇಕು. ಶಾಲೆ ಮುಗಿದ ನಂತರ ನೃತ್ಯ, ಸಂಗೀತ ಇತರ ತರಗತಿಗೆ ಕಳುಹಿಸಿ ಮಕ್ಕಳನ್ನು ಪುರುಸೊತ್ತೇ ಇಲ್ಲದೆ ಇಡುತ್ತಾರೆ ಈಗಿನ ಕಾಲದ ಅಪ್ಪ ಅಮ್ಮಂದಿರು.ಈ ದಿನಗಳಲ್ಲಿ ತಂದೆ ತಾಯಿಗಳು ಮಕ್ಕಳ ಕಡೆಗೆ ಗಮನ ಹರಿಸಬೇಕು ಎನ್ನುವುದು ಮರೆತಿರುತ್ತಾರೆ.ಈಗಿನ ಮಕ್ಕಳಿಗೆ ಅಮ್ಮನೆಂದರೆ ಹೊರ ಪ್ರಪಂಚದಲ್ಲಿ ದುಡಿಯುವ ಯಂತ್ರವೆನ್ನಬಹುದು.ಹಿಂದಿನ ಕಾಲದಲ್ಲಿ ಅಮ್ಮಂದಿರು ಮಕ್ಕಳು ಶಾಲೆಯಿಂದ ಬರುವ ಕಾಲಕ್ಕೆ ಕಾಫಿ, ತಿಂಡಿ ಮಾಡಿ ಕಾಯುತ್ತಿದ್ದರು.ಈಗ ಆ ಜಾಗದಲ್ಲಿ ಮನೆಕೆಲಸದಾಕೆ ಕಾಯುವಂತಾಗಿದೆ.
ಅಮ್ಮನ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು. ಯಾರೇ ಆಗಲಿ “ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸಿದರೆ ಒಳ್ಳೆಯದು.” ಕಣ್ಣಿಗೆ ಕಾಣುವ ದೇವರು ಅಮ್ಮ.ಅಮ್ಮನನ್ನು ಮನೆಯಿಂದ ಹೊರಹಾಕಿ,ತಿನ್ನಲು ಅನ್ನ ಹಾಕದ ಮಕ್ಕಳಿದ್ದರೂ ಪ್ರಯೋಜನವಿಲ್ಲ.ಇದನ್ನೇ ಪುರಂದರದಾಸರು ಹಾಡಿನ ಮೂಲಕ ಹೇಳಿದ್ದಾರೆ. “ಹೆತ್ತ ತಾಯ್ತಂದೆಗಳ ಚಿತ್ತವ ನೋಯಿಸಿ,ನಿತ್ಯ ದಾನವ ಮಾಡಿ ಫಲವೇನು?”.ಈಗಿನ ಕಾಲದಲ್ಲಿ ಮಾನವೀಯತೆ ಮರೆಯಾಗುತ್ತಿದೆ. ವೃದ್ದಶ್ರಾಮ ಜಾಸ್ತಿ ಆಗುತ್ತಿದೆ.ಭಾರತೀಯ ಸಂಸ್ಕೃತಿ, ಸಂಸ್ಕಾರ ಮರೆಮಾಚುತ್ತಿದೆ.ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನಾವು ಬೇಡವಾದ ಸಂಸ್ಕಾರವನ್ನು ಹೇಳಿಕೊಡುತ್ತಿದ್ದೇವೆ.ಆದಷ್ಟು ಮಕ್ಕಳೊಂದಿಗೆ ಸಂಬಂಧ ಬೆಸೆಯೋಣ.ಯಾವ ಯಾವ ಹಂತದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿರಬೇಕು ಆಗ ಇರೋಣ.ಅಮ್ಮ- ಮಕ್ಕಳ ಬಾಂಧವ್ಯ ಬಿಡಿಸಲಾಗದ ನಂಟು.
ವೇದಾವತಿ ಹೆಚ್. ಎಸ್.