ಟಿಪ್ಪಣಿ:
ನಮ್ಮ ಜೀವನವೇ ಹಾಗೆ ಅಲ್ಲವೇ, ಜೀವನಪೂರ್ತಿ ನಾವು ಬದುಕುವುದೇ ಹಾಗೆ. ನಮಗೆ ಯಾವುದು ಸರಿಯಾಗಿ ಕಾಣುತ್ತದೆಯೋ ಅದನ್ನೇ ನಾವು ಮಾಡುತ್ತೇವೆ. ನಮಗೆ ಸರಿಯಾಗಿ ಕಂಡ ನಿರ್ಧಾರ ನಮ್ಮೆದುರಲ್ಲಿರುವವರಿಗೆ ಸಹ ಸರಿಯಾಗಿ ಕಾಣಬೇಕೆಂದೇನಿಲ್ಲ. ಅಷ್ಟೇ ಅಲ್ಲ, ಸ್ವಲ್ಪ ಸಮಯದ ನಂತರ ನಮ್ಮ ನಿರ್ಧಾರ ನಮಗೇ ಸರಿಯಾಗಿ ಕಾಣದೇ ಹೋಗಬಹುದು. ಇಬ್ಬರ ನಡುವಿನ ಒಂದು ವಾದದಲ್ಲಿಯೇ ಆಗಲೀ, ಜೀವನದ ಅತಿಮುಖ್ಯ ನಿರ್ಧಾರಗಳಲ್ಲಿಯೇ ಆಗಲೀ, ಇನ್ನೊಬ್ಬರ ಬಗೆಗಿನ ಸರಿತಪ್ಪುಗಳ ನಿರ್ಣಯದಲ್ಲಿಯೇ ಆಗಲೀ, ಒಂದೇ ಸರಿ ಮತ್ತು ಒಂದೇ ತಪ್ಪು ಇರಲು ಸಾಧ್ಯವಿಲ್ಲ. ನಮಗೆ ಸರಿಯಾಗಿ ಕಂಡಿದ್ದು ಬೇರೆಯವರಿಗೆ ತಪ್ಪಾಗಿ ಕಾಣಬಹುದು. ಎಲ್ಲರ ದೃಷ್ಟಿಕೋನದಿಂದ ನೋಡಲು ಬಂದ ಹೊರತು ನಾವು ಅಂದುಕೊಳ್ಳುವ ಯಾವುದೇ ಸರಿಯೂ ಒಂದು ‘absolute’ ಸರಿ ಅಲ್ಲ. ಏನೇ ಇರಲಿ ಈ ಟಿಪ್ಪಣಿಯ ಬಗ್ಗೆಯಾಗಲೀ, ಆ ತಲೆಬರಹದ ಬಗೆಗಾಗಲೀ, ಹೆಚ್ಚು ತಲೆ ಕೆಡಿಸಿಕೊಳ್ಳದೇ ಸುಮ್ಮನೇ ಓದಿಕೊಳ್ಳಿ, ಒಂದು ಕಿರುಕಥೆ ಮಾತ್ರ ಎಂದುಕೊಂಡು.
೧೯೮೬, ಮೈಸೂರು:
ಮುಂಜಾನೆಯ ಎಳೆಬಿಸಿಲಿನಲ್ಲಿ ಮಳೆ ಬಿದ್ದಂತಿತ್ತು ರಾಯರ ಮನೆಯ ವಾತಾವರಣ. ಸಂತಸ, ಸಂಭ್ರಮ ಬೆರೆತ ಹವೆಯಲ್ಲಿ ಕಂಡೂ ಕಾಣದಂತೆ ಬಂದುಕೂತಿತ್ತು ಅಗಲಿಕೆಯ ಬೇಸರ. ಇಂಜಿನಿಯರಿಂಗ್ ಕಲಿಯಲು ಕಾಣದ ಬಾಂಬೆ ಐ. ಐ. ಟಿ.ಗೆ ಹೋಗುತ್ತಿರುವ ಮಗನನ್ನು ಕಳಿಸಿಕೊಡಲು ರಾವ್ ದಂಪತಿಗಳು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡ ಸಡಗರದೊಂದಿಗೆ, ಒಬ್ಬನೇ ಮಗ ತಮ್ಮನ್ನು ಬಿಟ್ಟು ಹೋಗುತ್ತಿದ್ದಾನಲ್ಲಾ ಎಂಬ ದುಃಖದ ಸೆಳವಿತ್ತು. ಅತ್ತು ಸುಧಾರಿಸಿಕೊಂಡರು ಅಮ್ಮ ಅಲಮೇಲಮ್ಮ, ಹಲ್ಲು ಕಚ್ಚಿ ದುಃಖಕ್ಕೆ ಆಣೆಕಟ್ಟನ್ನು ಕಟ್ಟಿದ್ದರು ಸತ್ಯನಾರಾಯಣರಾಯರು. ಇದ್ದ ಒಬ್ಬನೇ ಮಗ, ಪುಟ್ಟು, ತಮ್ಮ ಕಣ್ಣ ಮುಂದೇ ಇರಲಿ ಎಂಬ ಬಯಕೆ ಅದಮ್ಯವಾಗಿದ್ದರೂ, ಮಗನ ಶ್ರೇಯಸ್ಸಿಗೆ ಸಹಕಾರಿ ಈ ಅಗಲಿಕೆ ಎಂಬ ಜ್ಞಾನವೂ, ಮಹಾತ್ವಾಕಾಂಕ್ಷಿ ಮಗನ ಹಠವೂ ಸೇರಿ ಸತ್ಯನಾರಾಯಣರಾಯರ ಮತ್ತು ಅಲಮೇಲಮ್ಮನವರ ಬಾಯಿ ಕಟ್ಟಿಹೋಗಿತ್ತು. ರಾಯರು ಹೇಗೋ ಗಟ್ಟಿ ಮನಸ್ಸನ್ನು ಮಾಡಿ ತಡೆದುಕೊಂಡರಾದರೂ ಮೊದಲೇ ಕಾಯಿಲೆಗೆ ಬಿದ್ದಿದ್ದ ಅಲಮೇಲಮ್ಮನವರು ಇದೇ ಕೊರಗಿನಲ್ಲಿ ಸವೆಯುತ್ತಾ ಹೋದರು.
ಮಗನಿಂದ ದೂರ ಇದ್ದ ಪ್ರತೀ ದಿನವೂ ಕೊರಗಿ ನವೆಯುತ್ತಿದ್ದ ತಂದೆತಾಯಿಗೆ ಪುಟ್ಟು ರಜೆಯಲ್ಲಿ ಮನೆಗೆ ಬಂದಾಗ ಹಬ್ಬ. ದಿನವೂ ತಪ್ಪದೇ ಪೂಜಿಸುತ್ತಿದ್ದ ಸಾಕ್ಷಾತ್ ದೇವರೇ ಅವತರಿಸಿದರೂ ಅಷ್ಟು ಸಂಭ್ರಮವಿರುತ್ತಿರಲಿಲ್ಲವೇನೋ ರಾಯರ ಮನೆಯಲ್ಲಿ. ಇದ್ದ ಒಬ್ಬನೇ ಮಗನಿಂದ ದೂರ ಇರಬೇಕಾದ ನೋವನ್ನಾದರೂ ಅಲಮೇಲಮ್ಮ ಸಹಿಸಿಕೊಂಡಿರುತ್ತಿದ್ದರೇನೋ, ಆದರೆ ಯಾವಾಗ ಮಗರಾಯ ಮನೆಯವರ ಇಚ್ಛೆಗೆ ವಿರುದ್ಧವಾಗಿ ತನ್ನ ಇಂಜಿನಿಯರಿಂಗಿನ ಸಹಪಾಠಿ ಜಾನು ಚಲವಾದಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದನೋ ಆಗ ಆ ತಾಯಿ ಹೃದಯ ಭಯಂಕರ ಆಘಾತವನ್ನು ಅನುಭವಿಸಿತ್ತು. ದಿನವಿಡೀ ದೇವರು ದಿಂಡಿರು ಎಂದು, ಮಡಿ ಮೈಲಿಗೆ ಎಂದು, ಅಸ್ಪ್ರಶ್ಯತೆಯನ್ನೂ ದೈವವಿದಿತ ನಿರ್ಬಂಧವೆಂದು ಯಥಾವತ್ತಾಗಿ ಪಾಲಿಸಿಕೊಂಡು ಬದುಕಿದ್ದ ಅಲಮೇಲಮ್ಮನವರಿಗೆ, ಮಗ ಹರಿಜನ ಹುಡುಗಿಯೊಬ್ಬಳನ್ನು ಮದುವೆಯಾಗುವುದು ಜೀರ್ಣಿಸಿಕೊಳ್ಳಲಾಗಲೇ ಇಲ್ಲ. ಅದೇ ಹೃದಯಾಘಾತದಿಂದ ಅವರು ಅಸುನೀಗಿದ್ದರು. ಸತಿ, ಗೆಳತಿ, ಅರ್ಧಾಂಗಿ, ಆತ್ಮಬಂಧು ಎಲ್ಲ ಆಗಿದ್ದ ಹೆಂಡತಿಯನ್ನು ಕಳೆದುಕೊಂಡ ಮೇಲೆ ರಾಯರು ಬದುಕಿಯೂ ಸತ್ತಂತಾಗಿದ್ದರು. ಮಗನನ್ನು ತಾನು ಬದುಕಿರುವವರೆಗೂ ಕ್ಷಮಿಸಿರಲಿಲ್ಲ, ಕೊನೆಯವರೆಗೂ ಅವನನ್ನು ಮನದೊಳಕ್ಕೂ, ಮನೆಯೊಳಗೂ ಬಿಟ್ಟುಕೊಳ್ಳಲಿಲ್ಲ.
ಸಂಪ್ರದಾಯವೆಂಬ ಹೆಸರಿನಲ್ಲಿ ಹಳೆಯ ಗೊಡ್ಡು ಮೂಢನಂಬಿಕೆಗಳೊಳಗೆ ಮುಳುಗಿದ್ದ ತಂದೆತಾಯಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದರೂ ಅವರ ವಿಚಾರಗಳು ಒಪ್ಪಿಕೆಯಾಗಿರಲಿಲ್ಲ ಪುಟ್ಟುವಿಗೆ. ಕಾಲ ಬದಲಾದಂತೆ ನಾವು ಬದಲಾಗಬೇಕು, ಜಾತಿ, ಧರ್ಮಗಳೆಂಬ ಭೇದಗಳನ್ನು ಮೀರಿ ನಿಲ್ಲಬೇಕು ಎಂದು ಎಷ್ಟು ವಾದ ಮಾಡಿದರೂ ಕಿವಿಗೇ ಹಾಕಿಕೊಳ್ಳದ ತಂದೆತಾಯಿಯರ ಬಗ್ಗೆ ಬೇಜಾರಿತ್ತು ಮಗನಿಗೆ. ಮೊದಲನೆಯದಾಗಿ ಇಂಜಿನಿಯರಿಂಗಿಗೋಸ್ಕರ ಮುಂಬೈಗೆ ಕಳಿಸಲೇ ಇಬ್ಬರಿಗೂ ಇಷ್ಟವಿರದೇ ಇದ್ದುದು ಗುಟ್ಟೇನೂ ಅಗಿರಲಿಲ್ಲ. ಇಲ್ಲಿ ಕರ್ನಾಟಕದ ಯಾವುದೋ ಒಂದು ಇಂಜಿನಿಯರಿಂಗ್ ಕಾಲೇಜಿಗೆ ಹೋಗು ಎಂದು ಕೊನೆಯವರೆಗೂ ಒತ್ತಾಯಿಸಿದ್ದರು. ಆಗಲೂ ಸಾಕಷ್ಟು ವಾದವಿವಾದಗಳಾಗಿತ್ತು. ಯಾವುದೋ ಮಾತಿನ ಭರದಲ್ಲಿ ಪುಟ್ಟ “ನಿಮ್ಮ ಸರ್ಕಾರಿ ನೌಕರಿಗಳ ತಲೆಮಾರಿನವರಿಗೆ ಮಹಾತ್ವಾಕಾಂಕ್ಷೆಯೇ ಇಲ್ಲ, ಅಲ್ಪತೃಪ್ತರು ನೀವು. ನಿಮ್ಮಂತಹವರಿಂದಲೇ ನಮ್ಮ ದೇಶ ಇನ್ನೂ ಅಭಿವೃದ್ಧಿಶೀಲ ದೇಶವಾಗಿಯೇ ಉಳಿದಿರುವುದು” ಎಂದುಬಿಟಿದ್ದ.
ಮುಂದೆ ಹಾಗೆ ಹೇಳಬಾರದಾಗಿತ್ತು ಎಂದು ಸಾವಿರ ಬಾರಿ ಎಂದುಕೊಂಡರೂ ಆಡಿದ ಮಾತು, ಕಳೆದುಕೊಂಡ ನಂಬಿಕೆ ಎರಡೂ ಹಿಂದಕ್ಕೆ ತಿರುಗಿ ಬರಲಿಲ್ಲ. ಅದಕ್ಕಿಂತ ದೊಡ್ಡ ಜಗಳ ಮದುವೆಯ ವಿಚಾರದಲ್ಲಿ ಆಗಿತ್ತು. ಗಾಂಧಿತತ್ವಗಳ ಬಗ್ಗೆ ಊರಿಡೀ ಭೋಧನೆ ಮಾಡುತ್ತಿದ್ದ ಅಪ್ಪ,ಅಣ್ಣಾವ್ರು ಕಾಮನಬಿಲ್ಲು ಚಿತ್ರದಲ್ಲಿ ಸರಿತಾಳನ್ನು ಅಂತರ್ಜಾತಿ ಮದುವೆಯಾಗುವಾಗ ಭಾವಪರವಶವಾಗುವ ಅಮ್ಮ, ಇಬ್ಬರೂ ತಮ್ಮ ಮನೆಯ ವಿಷಯಕ್ಕೆ ಬಂದಾಗ ಚೈತ್ರಳನ್ನು ಪೂರ್ವಾಗ್ರಹ ಪೀಡಿತವಾಗಿ ತಿರಸ್ಕರಿಸಿದಾಗ ಪುಟ್ಟನ ಆಶಾಸೌಧ ಕುಸಿದಿತ್ತು. ಚೈತ್ರಳ ಜಾತಿಯ ಆಧಾರದ ಮೇಲೆ ಅವಳನ್ನು ಸಂಸ್ಕಾರಹೀನಳು ಎಂದು ಅಮ್ಮ ಕರೆದಾಗ ಪುಟ್ಟನ ಮೈ ಕುದ್ದು ಹೋಗಿತ್ತು, ಕೈ ಎತ್ತುವುದೊಂದು ಬಾಕಿ ಇತ್ತು. ಅಷ್ಟರೊಳಗೆ ಮೊದಲೇ ಹೃದ್ರೋಗಿಯಾಗಿದ್ದ ಅಲಮೇಲಮ್ಮ ಹೃದಾಯಾಘಾತಕ್ಕೊಳಗಾಗಿ ಹಾಗೆಯೇ ಮೃತಪಟ್ಟಿದ್ದರಿಂದ ಪುಟ್ಟನ ಮನಸ್ಸಿನ ತುಂಬ, ಗೊತ್ತೇ ಇರದಂತೆ ಪಶ್ಚಾತ್ತಾಪ ಮಡುಗಟ್ಟಿತ್ತು. ಮೊಮ್ಮಗನ ಆಗಮನದ ನಂತರ ರಾಯರು ಸೊಸೆಯನ್ನು ಸ್ವೀಕರಿಸಿದರಾದರೂ ಮಗನೇ ಹೆಂಡತಿಯ ಸಾವಿಗೆ ಕಾರಣ ಎಂದು ನಂಬಿದ್ದ ಅವರು ಪುಟ್ಟನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ತನ್ನ ಚಿತೆಗೆ ಮೊಮ್ಮಗನೇ ಅಗ್ನಿಸ್ಪರ್ಷ ಮಾಡಬೇಕು ಎಂದು ರಾಯರ ವಿಲ್ ಬೇರೆ ಮಾಡಿಬಿಟ್ಟಿದ್ದರು, ಎಂಬಲ್ಲಿಗೆ ಒಂದು ತಂದೆಮಗನ ಸಂಬಂಧ ಮುರಿದುಬಿದ್ದಿತ್ತು.
೨೦೧೧, ಬೆಂಗಳೂರು:
ಧೋ ಎಂದು ಮಳೆಬಂದು ನಿಂತ ಮೇಲಿನ ಮೇಲಿನ ಮೌನ ಮನೆಮಾಡಿತ್ತು ವಿಶ್ವಮೂರ್ತಿಯವರ ಮನೆಯಲ್ಲಿ. ಹಿಂದಿನ ಆರು ತಿಂಗಳ ಕಾಲದಷ್ಟು ಸಮಯದಿಂದ ವಾದ ಮಾಡಿದರೂ ಒಪ್ಪದೇ, ವಿದೇಶಕ್ಕೆ ಹೊರಟುನಿಂತಿದ್ದ ಮಗನ ಎದುರು ಮತ್ತೆ ವಾದಕ್ಕೆ ನಿಲ್ಲುವುದು ಮೂರ್ಖತನ ಎಂದು ಗೊತ್ತಿದ್ದೂ ಜಗಳಕ್ಕೆ ನಿಂತಿದ್ದರು ಮೂರ್ತಿಗಳು ಮತ್ತು ಜಾನಕಮ್ಮ. ತಂದೆತಾಯಿಯರಿಗೆ ಗೊತ್ತೇ ಇಲ್ಲದಂತೆ GRE ಬರೆದುಕೊಂಡಿದ್ದಷ್ಟೇ ಅಲ್ಲದೇ, ಅಮೇರಿಕದ ಎರಡು ಬಹುಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ ಆಹ್ವಾನ ಬಂದಮೇಲಷ್ಟೇ ತಂದೆತಾಯಿಯರಿಗೆ ಹೇಳುವ ಉಡಾಫೆ ತೋರಿದ್ದ ಮಗ ಅನಿಕೇತ. ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿರುವಾಗ ಒಮ್ಮೆ ವಿದೇಶಕ್ಕೆ ಹೋಗುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಅನಿಕೇತ, ಆದರೆ ತಂದೆತಾಯಿಯರಿಬ್ಬರೂ ವಿರೋಧವನ್ನು ವ್ಯಕ್ತಪಡಿಸಿದ ಮೇಲೆ, ಪಕ್ಕದ ಮನೆಯ ಅರಿಹಂತನ ಮೇಲೆ ಆಸ್ಟ್ರೇಲಿಯದಲ್ಲಿ ಆದ ಜನಾಂಗೀಯ ಧಾಳಿಯ ಬಗ್ಗೆ ಉದಾಹರಿಸಿದ ಮೇಲೆ ಸ್ವಲ್ಪ ಸುಮ್ಮನಾಗಿದ್ದ. ಅಷ್ಟಾದ ಮೇಲೂ ಮತ್ತೂ ತನ್ನ ಹಠವನ್ನೇ ಸಾಧಿಸಿ ಅನಿಕೇತ GRE ಬರೆಯಲು ಪ್ರಯತ್ನಿಸಿದನೆಂಬ ವಿಷಯ, ಅದೂ ತನ್ನ ಬೆನ್ನಹಿಂದೆ ಹೀಗೆ ಮಾಡುತ್ತಾನೆಂಬ ಅನಿರೀಕ್ಷಿತ ಹೊಡೆತ ಮೂರ್ತಿಗಳನ್ನು ಹಣ್ಣು ಮಾಡಿತ್ತು. ಇನ್ನು ಮಗನಿಗೆ ಅತಿವಿರೋಧ ವ್ಯಕ್ತಪಡಿಸಿದರೆ ಹಗ್ಗ ಹರಿದೀತು ಎಂದು ಭಾವಿಸಿ ಒಲ್ಲದ ಮನಸ್ಸಿನಿಂದ್ದಲೇ ಮಗನ ವಿದೇಶೀ ಕನಸಿಗೆ ಅನುಮತಿ ಕೊಟ್ಟರು ಮೂರ್ತಿಗಳು.
ಅನಿಕೇತ ಅಷ್ಟೆಲ್ಲಾ ಇಷ್ಟಪಟ್ಟು ವಿದೇಶಕ್ಕೆ ಕಲಿಯಲು ಹೋಗುತ್ತೇನೆ ಎಂದಾಗ ಬೇಡ ಎನ್ನಲು ಶಿಕ್ಷಣಪ್ರೇಮಿ ಎಂದು ಗುರುತಿಸಿಕೊಂಡಿದ್ದ, ಯಾವುದೋ ಗುರುತು ಪರಿಚಯ ಇಲ್ಲದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾ ಬಂದಿದ್ದ ಮೂರ್ತಿಗಳಿಗೆ ಇಷ್ಟ ಇರಲೇ ಇಲ್ಲವಾದರೂ ಒಬ್ಬ ತಂದೆಯಾಗಿ ಮಗನ ಬಗೆಗಿನ ಅತಿ ಕಕ್ಕುಲತೆಯೋ, ಅರಿಹಂತನ ಮೇಲಾಗಿದ್ದ ಮಾರಣಾಂತಿಕ ಹಲ್ಲೆಗಳಿಂದ ಮನಸ್ಸಿನ ಮೇಲೆ ಉಳಿದು ಹೋಗಿದ್ದ ಭಯದ ನೆರಳೋ, ಒಟ್ಟಾರೆಯಾಗಿ ಮೂರ್ತಿಗಳು ಖಡಾಖಂಡಿತವಾಗಿ ಮಗನ ವಿದೇಶೀ ಶಿಕ್ಷಣದ ಬಯಕೆಯನ್ನು ವಿರೋಧಿಸಿದ್ದರು. ಕೊನೆಗೂ ಎರಡೇ ವರ್ಷಗಳ ಮಟ್ಟಿಗೆ ಅಷ್ಟೇ ಅಲ್ಲವೇ ಎಂದುಕೊಂಡು ಒಪ್ಪಿದ್ದರು, ಅಲ್ಲಿ ’ಕೇವಲ’ ವಿದ್ಯಾಭ್ಯಾಸಕ್ಕೆ ಹೋಗುತ್ತಿರುವುದು ಎಂಬ ಪ್ರಮಾಣವನ್ನು ತೆಗೆದುಕೊಂಡ ಮೇಲೆ. MS ಮುಗಿದ ಮೇಲೆ ಯಾವಾಗ ಮಗರಾಯ ಸ್ವಲ್ಪವರ್ಷ ಅಲ್ಲಿಯೇ ಕೆಲಸಮಾಡಿ, ಅದರಿಂದ ಸಿಗುವ ಅನುಭವದ ಲಾಭದ ಬಗ್ಗೆ ಮಾತನಾಡತೊಡಗಿದನೋ ಆಗ ಮೂರ್ತಿಗಳಲ್ಲಿದ್ದ ನಿರಾಶಾವಾದಿ ಬೆಳೆಯುತ್ತ ಹೋದ, ಮಗ ಎಂದಿಗೂ ಹಿಂದಿರುಗಿ ಬರಲಾರ ಎನ್ನಿಸತೊಡಗಿತು. ಅಂತ್ಯಕಾಲದಲ್ಲಿ ಇರುವ ಒಬ್ಬ ಮಗನಿಂದ ದೂರವಿರುವಾ ಈ ಸಂಭ್ರಮಕ್ಕಾ ಅಷ್ಟೆಲ್ಲ ಪ್ರೀತಿಯಿಂದ ಮಗನನ್ನು ಬೆಳೆಸಿದ್ದು, ಇಂಜಿನಿಯರಿಂಗ್ ಕಲಿಸಿದ್ದು, ವಿದೇಶಕ್ಕೆ ಕಳಿಸಿ ಕಲಿಸಿದ್ದು ಎಂಬ ಪಶ್ಚಾತ್ತಾಪದ ಭಾವ ಮನಸ್ಸಲ್ಲಿ ಮನೆಮಾಡತೊಡಗಿತ್ತು.
ಮತ್ತಾರು ತಿಂಗಳಿಗೆ ಜಾನಕಮ್ಮನವರಿಗೆ ಹೃದಯದ ಶಸ್ತ್ರಚಿಕಿತ್ಸೆ ಆದಾಗ, ಜೀವಕ್ಕಿಂತ ಹೆಚ್ಚಾಗಿ ಮಗನನ್ನು ಪ್ರೀತಿಸಿದ ತಾಯಿಯ ಸಾಯಲೂಬಹುದು ಎಂಬ ಸಂಶಯ ಇದ್ದರೂ ಏನೇನೋ ಕಾರಣ ಕೊಟ್ಟು ಮಗ ಬರದೇ ಇದ್ದಾಗ ಮತ್ತಷ್ಟು ಘಾಸಿಗೊಂಡಿತ್ತು ಮೂರ್ತಿಗಳ ಮನಸ್ಸು. ಇಷ್ಟೆಲ್ಲಾ ಸಾಲದು ಎಂದು ಅದೇ ಸಮಯದಲ್ಲಿ ಬಂದ ಗಾಳಿಸುದ್ದಿಯ ಪ್ರಕಾರ ಅನಿಕೇತ ಯಾರೊ ಒಬ್ಬ ಅಮೇರಿಕನ್ ಹುಡುಗಿಯ ಜೊತೆ ಲಿವ್-ಇನ್ ಇದ್ದನಂತೆ. ತನ್ನ ಮಗನ ಬಗ್ಗೆ ಯಾರಿಂದಲೋ ಕೇಳುವುದಾಯಿತಲ್ಲಾ ಎಂದು ಹಳಹಳಿಸುವುದೋ ಅಥವಾ ಭಾರತೀಯ ಸಂಸ್ಕ್ರತಿಯ ಬಗ್ಗೆ ಅಷ್ಟೆಲ್ಲಾ ಮಾತನಾಡುತ್ತಿದ್ದ ತನ್ನ ಮಗ ಒಬ್ಬ ಅಮೇರಿಕನ್ ಹುಡುಗಿಯ ಜೊತೆ ಅದೂ ಲಿವ್ ಇನ್ ಸಂಬಂಧದಲ್ಲಿ ಇದ್ದಾನಲ್ಲಾ ಎಂದು ಕೊರಗುವುದೋ ಎಂದು ತಿಳಿಯದಾಗಿತ್ತು ಮೂರ್ತಿಗಳಿಗೆ. ಆದರೂ ಯಾವುದೋ ಗಾಳಿಸುದ್ದಿಯನ್ನು ನಂಬಿ ಮಗನ ಬಗ್ಗೆ ಹೀಗೆ ಸಂದೇಹಿಸುವುದು ಸರಿಯಲ್ಲ ಎಂಬ ಭಾವನೆಯಿದ್ದಿದ್ದರಿಂದ ಮಗನನ್ನು ಕೇಳಲು ಹೋಗಿರಲಿಲ್ಲ ಮೂರ್ತಿಗಳು.
ಎರಡು ತಿಂಗಳ ನಂತರ ಒಂದು ದಿನ ಮಗ ಕರೆಮಾಡಿದ್ದಾಗ ನಿಧಾನವಾಗಿ ವಿಷಯವನ್ನು ಎತ್ತಿದಾಗಲೂ ಮಗನ ಮನವೊಲಿಸಿ ಸರಿದಾರಿಗೆ ತರಬಹುದೆಂದು ಮೂರ್ತಿಗಳು ಶಾಂತವಾಗಿಯೇ ಇದ್ದರು, ಆದರೆ ಯಾವಾಗ ಮಗರಾಯ ಔಪಚಾರಿಕವಾಗಿಯೇನೋ ಎಂಬಂತೆ “ಮುಂದಿನ ತಿಂಗಳು ಮದುವೆಯಾಗುತ್ತಿದ್ದೇನೆ, ಬಂದುಬಿಡಿ, ಟಿಕೆಟ್ ಕಳಿಸುತ್ತೇನೆ” ಎಂದಾಗ ಮೂರ್ತಿಗಳಿಗೆ ಹೃದಯಾಘಾತವಾಗದೇ ಇದ್ದದ್ದು ದೊಡ್ಡದು. “ಇಲ್ಲಿಯವರೆಗಿನ ನಿನ್ನ ಎಲ್ಲ ತಪ್ಪುಗಳನ್ನು ಕ್ಷಮಿಸುತ್ತಾ, ನಿನ್ನ ಪರವಾಗಿ ನಿನ್ನ ಅಮ್ಮನಲ್ಲಿ ವಾದಿಸುತ್ತ ಬಂದ ನನಗೆ ನೀನು ನೀಡಿದ ಉಡುಗೊರೆಯೇ ಇದು ಅನಿಕೇತ? ಈ ವಿಷಯವನ್ನು ಜಾನಕಿಗೆ ಹೇಳಬೇಡ ಯಾವುದೇ ಕಾರಣಕ್ಕೂ. ಹಾರ್ಟ್ ಆಪರೇಶನ್ ಆದ ಮೇಲೆ ಯಾವುದೇ ಆಘಾತಕಾರಿ ಸುದ್ದಿ ಹೇಳಬಾರದು ಎಂದು ವೈದ್ಯರು ಹೇಳಿದ್ದಾರೆ. ಇನ್ನು ನನ್ನ ಜೀವನದ ಏಕೈಕ ಆಧಾರ ಅವಳು, ಅವಳನ್ನು ನಿನ್ನಿಂದಾಗಿ ಕಳೆದುಕೊಳ್ಳಲು ಇಷ್ಟವಿಲ್ಲ ನನಗೆ. ಅವಳಾಗಿಯೇ ಕೇಳಿದರೆ ಏನಾದರೂ ಕಾರಣವನ್ನು ಹೇಳಿ ಮದುವೆಯ ವಿಷಯವನ್ನು ಮುಂದೂಡು. ದಯವಿಟ್ಟು ಅಷ್ಟನ್ನು ಮಾಡು. please. ” ಎಂದು ಹೇಳಿ ಫೋನನ್ನು ಕುಕ್ಕಿದ ವಿಶ್ವಮೂರ್ತಿ ರಾಯರಿಗೆ ಪುಟ್ಟನಾಗಿ ತಾನು ಮಾಡಿದ್ದು ತಪ್ಪೇ? ಎಂದು ಮೊದಲ ಬಾರಿಗೆ ಅನ್ನಿಸಿತು.
History repeats!
ಕಾಲಕಳೆದಂತೆ ನಮ್ಮ ನಿಲುವುಗಳು, ಧೋರಣೆಗಳು ಬದಲಾಗುತ್ತವೆ ಎಂಬುದಕ್ಕೆ ನಿಮ್ಮ ಕಥೆ ನೈಜ ನಿದರ್ಶನ. ಹರೆಯದಲ್ಲಿ ಕ್ರಾಂತಿ ಗೀಂತಿ ಅಂತ ಮಾತನಾಡುವವರು, ಪರಮ ನಾಸ್ತಿಕರಂತೆ ನಡೆದುಕೊಳ್ಳುವವರು ವಯಸ್ಸಾಗ್ತಾ ಆಗ್ತಾ ದೈವಭಕ್ತರಾಗಿಬಿಡುತ್ತಾರೆ.
ಕಥೆ ಚೆನ್ನಾಗಿದೆ ಸರ್.
nice story…
yavudu tappalla
tande ,tayiya manassu saripadisi marrige agbakittu
very nice …story..