ಸಂಪಾದಕೀಯ

ಯಾರ ಜೊತೆ ಯಾವಾಗ ಎಲ್ಲಿ ಎಷ್ಟು ಕುಡೀಬೇಕು ಅಥವಾ ಕುಡಿಯಬಾರದು ಎನ್ನುವುದು ತಿಳಿದರೆ: ನಟರಾಜು ಎಸ್ ಎಂ

ನಟರಾಜು ಎಸ್ ಎಂ

ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಬೆಂಗಳೂರಿಗೆ ಕಾಲಿಟ್ಟ ಹೊಸತು. ನಮ್ಮೂರಿನ ಒಂದಷ್ಟು ಗೆಳೆಯರು ಎಂ.ಜಿ. ರೋಡಿನ ಹತ್ತಿರವಿರುವ ಹಾಸ್ಟೆಲ್ ನಲ್ಲಿದ್ದರು. ಆ ಗೆಳೆಯರಲ್ಲಿ ಒಂದಷ್ಟು ಜನ ಹಾಸ್ಟೆಲ್ ಗೆ ಸೇರಿದ್ದು ಡಿಗ್ರಿ ಓದಲಿಕ್ಕಾದರೂ ಹೊಟ್ಟೆಪಾಡಿಗಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದರು. ಊರಿನಿಂದ ಯಾರಾದರು ಹುಡುಗರು ಸ್ಕೂಲನ್ನೋ ಕಾಲೇಜನ್ನೋ ಅರ್ಧಕ್ಕೆ ಬಿಟ್ಟು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದರೆ ಅವರು ಮೊದಲು ಬಂದಿಳಿಯುತ್ತಿದ್ದ ಜಾಗ ಅದೇ ಆ ಎಂ.ಜಿ. ರೋಡಿನ ಹಾಸ್ಟೆಲ್ ಆಗಿತ್ತು. ಹಾಗೆ ಬಂದಿಳಿದ ಹುಡುಗರಿಗೆ ಊಟ ತಿಂಡಿ ಮಲಗಲಿಕ್ಕೆ ಜಾಗವನ್ನು ಆ ಗೆಳೆಯರು ಹೇಗೋ ಆ ಹಾಸ್ಟೆಲ್ ನಲ್ಲಿಯೇ ಅರೇಂಜ್ ಮಾಡುತ್ತಿದ್ದರು. ಆ ಕಾರಣಕ್ಕೆ ಆ ಗೆಳೆಯರ ಗುಂಪಿನಲ್ಲಿ ಒಬ್ಬನಿಗೆ ತಾಯಿ ಎಂದೇ ಕರೆಯುತ್ತಿದ್ದರು. ಯಾಕೆಂದರೆ ಆತ ಊರಿನಿಂದ ಯಾವ ಹುಡುಗನೇ ಬಂದರೂ ಬೇಸರಿಸದೆ ಅವನಿಗೆ ಬೆಂಗಳೂರಿನಲ್ಲಿ ಒಂದು ನೆಲೆ ಕಾಣಿಸುತ್ತಿದ್ದ. ಹೀಗಿರುವಾಗ ಡಿಗ್ರಿಗೆಂದು ಬಂದ ಗೆಳೆಯರು ಡಿಗ್ರಿ ಮುಗಿಸದಿದ್ದರೂ ಮೂರು ವರ್ಷದಲ್ಲಿ ಹತ್ತಾರು ಪಾರ್ಟ್ ಟೈಮ್ ಕೆಲಸಗಳನ್ನು ಮಾಡಿ ಬೆಂಗಳೂರಿನಲ್ಲಿ ಒಂದು ಕೆಲಸವನ್ನು ಗಿಟ್ಟಿಸಿಕೊಂಡಿದ್ದರು. ಊರು ಬಿಟ್ಟು ಬಂದ ಹುಡುಗರೂ ಸಹ ಅಲ್ಲಿ ಇಲ್ಲಿ ಕೆಲಸ ಗಿಟ್ಟಿಸಿಕೊಂಡು ಹೊಟ್ಟೆಬಟ್ಟೆಗೆ ದಾರಿ ಮಾಡಿಕೊಂಡು ತಮ್ಮ ತಮ್ಮ ದಾರಿ ನೋಡಿಕೊಳ್ಳುತ್ತಿದ್ದರು. ಡಿಗ್ರಿ ಮೂರು ವರ್ಷವಾದ ಕಾರಣ ಹಾಸ್ಟೆಲ್ ಸಹ ಮೂರು ವರ್ಷಕ್ಕಷ್ಟೇ ದೊರೆಯುತ್ತಿತ್ತು. ಆದ ಕಾರಣ ಮೂರು ವರ್ಷದ ನಂತರ ಹಾಸ್ಟೆಲ್ ಬಿಡಲೇಬೇಕಾದ ಪರಿಸ್ಥಿತಿ ಬಂದಾಗ ಆ ಗೆಳೆಯರು ಒಂದಷ್ಟು ಜನ ಸೇರಿ ಪುಟ್ಟ ಮನೆಯನ್ನು ಬೆಂಗಳೂರಿನಲ್ಲಿ ಬಾಡಿಗೆಗೆ ಪಡೆದಿದ್ದರು. ಆ ಮನೆ ಶಾಂತಿನಗರದ ಹತ್ತಿರ ಹಾಕಿ ಸ್ಟೇಡಿಯಂ ಇದೆಯಲ್ಲ ಆ ಏರಿಯಾದಲ್ಲಿತ್ತು. ಕ್ರಮೇಣ ಆ ಮನೆ ಊರಿನಿಂದ ಯಾವ ಹುಡುಗರೇ ಬಂದರೂ ಅವರ ತಾತ್ಕಾಲಿಕ ತಂಗುದಾಣವಾಯಿತು.

ನನಗೆ ನನ್ನ ಹಾಸ್ಟೆಲ್ ಇದ್ದರೂ ಊರಿನ ಗೆಳೆಯರನ್ನು ಮೀಟ್ ಮಾಡಲು ಅವರ ಬಾಡಿಗೆ ಮನೆಗೆ ಆಗಾಗ ಹೋಗುತ್ತಿದ್ದೆ. ಅಲ್ಲಿ ವಾರಾಂತ್ಯಗಳಲ್ಲಿ ಒಮ್ಮೊಮ್ಮೆ ತಂಗುತ್ತಿದ್ದೆ. ಹಾಗೆ ತಂಗಿದ್ದಾಗ ವಾರಾಂತ್ಯದ ಸ್ಪೆಷಲ್ ಅಂತ ನಾನ್ ವೆಜ್ ಅದೂ ಇದೂ ಅಡುಗೆಗಳು ಆ ರೂಮಿನಲ್ಲಿ ತಯಾರಾಗುತ್ತಿದ್ದವು. ನಾಲ್ಕೈದು ಗೆಳೆಯರು ಬೆಂಗಳೂರಿನ ಒಂದೊಂದು ಮೂಲೆಯಲ್ಲಿ ಕೆಲಸ ಮಾಡುವ ಕಾರಣ ಎಲ್ಲರೂ ಬಂದ ಮೇಲೆಯೇ ಊಟದ ಕಾರ್ಯಕ್ರಮವಿರುತ್ತಿತ್ತು. ಊಟ ಮಾಡಿ ಮೂರ್ನಾಲ್ಕು ಗೆಳೆಯರು ಇಸ್ಪೀಟ್ ಎಲೆ ಕೈಗೆತ್ತಿಕೊಂಡು ಕುಳಿತುಕೊಂಡರೆ ಮುಂಜಾನೆ ಐದರವರೆಗೂ ಕಣ್ಮುಚ್ಚದೆ ರಮ್ಮಿ ಆಡುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿದು ದಣಿದು ಬಂದು ರಾತ್ರಿ ಆರಾಮಾಗಿ ಮಲಗದೆ ರಾತ್ರಿಯಿಡೀ ಅವರು ನಿದ್ದೆಗೆಡೆವುದನ್ನು ನೋಡಿ ಬೇಸರಿಸಿಕೊಂಡ ಗೆಳೆಯನೊಬ್ಬ ಆ ಇಸ್ಪೀಟ್ ಎಲೆಗಳನ್ನು ಅಲ್ಲಿ ಇಲ್ಲಿ ಅವಿತ್ತಿಟ್ಟ ದಿನಗಳೂ ಇದ್ದವು. ಹೀಗಿರುವಾಗ ಒಮ್ಮೊಮ್ಮೆ ನಾಲ್ಕೈದು ಜನ ಮಲಗಬಹುದಾದ ರೂಮಿನಲ್ಲಿ ಹತ್ತು ಹನ್ನೆರಡು ಜನ ಒಟ್ಟಿಗೆ ಮಲಗಬೇಕಾಗುತ್ತಿತ್ತು. ಯಾಕೆಂದರೆ ನನ್ನಂತಹ ಅತಿಥಿಗಳು ಒಮ್ಮೆಲೇ ಬರುವ ಚಾನ್ಸ್ ಗಳಿರುತ್ತಿದ್ದವು. ಆ ರೀತಿ ಹತ್ತಾರು ಗೆಳೆಯರು ಒಂದೆಡೆ ಸೇರಿದರೆ ಒಂತರಾ ಹಬ್ಬದ ವಾತಾವರಣ ಅಲ್ಲಿ ತಯಾರಾಗುತ್ತಿತ್ತು. ಅಂತಹ ಹಬ್ಬದ ವಾತಾವರಣ ಆ ರೂಮಿನಲ್ಲಿ ವಿಶೇಷವಾಗಿ ಡಿಸೆಂಬರ್ 31ರ ರಾತ್ರಿ ತಪ್ಪದೇ ತಯಾರಾಗುತ್ತಿತ್ತು. ಆ ದಿನಗಳಲ್ಲಿ ಯಾವುದೇ ಮೊಬೈಲ್ ಗಳಿಲ್ಲದ್ದರೂ ನಮ್ಮೂರಿನ ಹುಡುಗರು ಅಲ್ಲಿಗೆ ಬರಬೇಕು ಎನ್ನುವ ಅಲಿಖಿತ ಸಂದೇಶ ಎಲ್ಲರನ್ನೂ ಹೇಗೋ ತಲುಪಿರುತ್ತಿತ್ತು. ಆ ಸಂದೇಶ ತಲುಪಿದ ಎಷ್ಟೋ ಜನ ಗೆಳೆಯರು ಆ ರಾತ್ರಿ ಅಲ್ಲಿ ಹಾಜರಾಗುತ್ತಿದ್ದರು.

ಡಿಸೆಂಬರ್ 31ರ ರಾತ್ರಿಯ ತಯಾರಿ ಎಂದರೆ ಕೇಳಬೇಕೆ. ಎಲ್ಲರಲೂ ಏನೋ ಸಡಗರ, ಏನೋ ಉಲ್ಲಾಸ. ಸಂಜೆಯಾಗುತ್ತಿದ್ದಂತೆ ಕೆಲಸದಿಂದ ಬೇಗ ಬಂದ ಹುಡುಗನೊಬ್ಬ ಕುಳಿತು ಅಡುಗೆಗೆ ಬೇಕಾಗುವ ಅಷ್ಟು ಸಾಮಾನುಗಳ ಲಿಸ್ಟ್ ತಯಾರಿಸಿದರೆ. ನಾವೆಲ್ಲಾ ಸೇರಿ ಶಾಪಿಂಗ್ ಮಾಡಿ ಬರುತ್ತಿದ್ದೆವು. ಅಕ್ಕಿ, ಚಿಕನ್, ಮಟನ್, ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಪುದಿನ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ, ಟೊಮ್ಯಾಟೊ, ಚಿಕನ್ ಮಸಾಲೆ, ಶುಂಠಿ, ಹೀಗೆ ಜ್ಞಾಪಕಕ್ಕೆ ಬಂದ ಅಷ್ಟು ವಸ್ತುಗಳ ಕೊಂಡು ತಂದು ರೂಮು ಸೇರಿದರೆ ನಮ್ಮ ಹೆಡ್ ಕುಕ್ ಅಡುಗೆ ಶಾಸ್ತ್ರ ಶುರು ಮಾಡುತ್ತಿದ್ದ. ಬೇಯುತ್ತಿರುವ ಚಿಕನ್, ಮಟನ್ ನ ಘಮ ರೂಮನ್ನೆಲ್ಲಾ ತುಂಬುತ್ತಿರುವಾಗ “ಲೋ ಮಗ, ಉಪ್ಪು ತರೋದೆ ಮರೆತುಬಿಟ್ಟೆವಲ್ಲೋ.. ಓಡು ಓಡು ಬೇಗ ಒಂದು ಪಾಕೆಟ್ ಉಪ್ ತಗೊಂಡ್ ಬಾ” ಎನ್ನುವ ಸದ್ದು ಕೇಳುತ್ತಿತ್ತು. ಬರೀ ಅನ್ನ ಮಾಡೋದು ಬೇಡ ಎನ್ನುವ ಕಾರಣಕ್ಕೆ ಚಿಕನ್ ಕರ್ರಿಯ ಜೊತೆಗೆ ಬಿರಿಯಾನಿ, ಕಬಾಬ್ ತಯಾರಿಕೆಯ ಪ್ರಯೋಗಗಳು ಆ ದಿನ ನಡೆಯುತ್ತಿದ್ದವು. ಒಂದೆಡೆ ಘಮ್ ಎನ್ನುವ ಅಡುಗೆ ತಯಾರಾಗುತ್ತಿದ್ದರೆ ಮತ್ತೊಂದೆಡೆ ಹುಡುಗರು ಕೇಸ್ ಗಟ್ಟಲೆ ಬಿಯರ್ ಬಾಟಲ್ ಗಳನ್ನು ಹೊತ್ತು ತಂದು ರೂಮಿನಲ್ಲಿ ಜೋಡಿಸಿಡುತ್ತಿದ್ದರು. ದೊಡ್ಡ ದೊಡ್ಡ ಬಿಯರ್ ಬಾಟಲ್ ಗಳ ಜೊತೆಯಲ್ಲಿ ಕುಡಿಯುವ ಅಭ್ಯಾಸ ಜಾಸ್ತಿ ಇಲ್ಲದ ಹುಡುಗರಿಗಾಗಿ “ಎಲ್ಲಾ ಓಕೆ ಕೂಲ್ ಡ್ರಿಂಕ್ಸ್ ಯಾಕೆ?” ಎನ್ನುವ ಉಪ್ಪಿಯ ಜಾಹೀರಾತಿನ ಹದಿನೇಳು ರೂಪಾಯಿಯ ಯೂಬಿ ಪಿಂಟ್ ಬಾಟಲ್ ಗಳು ಸಹ ಜಾಗಪಡೆಯುತ್ತಿದ್ದವು. ಬಿಯರ್ ಚಿಕ್ಕ ಹುಡುಗ್ರು ಹುಡುಗಿಯರು ಕುಡಿಯೋ ಡ್ರಿಂಕ್ಸ್ ಎನ್ನುವ ಗೆಳೆಯರ ಗುಂಪೊಂದು ಆರ್ ಸಿ, ಓಸಿಯ ಬಾಟಲ್ ಗಳನ್ನು ಸೆಪರೇಟ್ ಆಗಿ ತಂದಿಟ್ಟುಕೊಳ್ಳುತ್ತಿದ್ದರು. ಆಗೆಲ್ಲಾ ಡ್ರಿಂಕ್ಸ್ ಗೆ ಮಿಕ್ಸ್ ಮಾಡೋಕೆ ಅಂತ ಮಿನರಲ್ ವಾಟರ್ ಸಿಕ್ತಾ ಇರಲಿಲ್ಲ ಎನ್ನುವ ಪಾಯಿಂಟ್ ನೀವು ನೋಟ್ ಮಾಡಿಕೊಳ್ಳಬೇಕು. ಇವತ್ತಿನ ದಿನಗಳಲ್ಲಿ ಮಿನರಲ್ ವಾಟರ್ ಇಲ್ಲದೆ ಜನ ಡ್ರಿಂಕ್ಸ್ ಕುಡಿಯಲ್ಲ. ಹೀಗೆ ತಿಂಡಿ ತೀರ್ಥದ ತಯಾರಿ ಒಂದೆಡೆ ನಡೆಯುತ್ತಿದ್ದರೆ ರಾಧಿಕಾಳ ಫ್ಯಾನ್ ಆದ ನನ್ನ ಕಸಿನ್ ರೂಮಿನ ಸೌಂಡ್ ಸಿಸ್ಟಮ್ ನಲ್ಲಿ ನಿನಗಾಗಿ ಚಿತ್ರದ ಹಾಡುಗಳ ಲೈಟ್ ಆಗಿ ಶುರು ಮಾಡುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಬೆಂಗಳೂರಿನ ಯಾವುದ್ಯಾವುದೋ ಮೂಲೆಯಲ್ಲಿ ವಾಸಿಸುವ ನಮ್ಮೂರಿನ ಹುಡುಗರು ಆ ರೂಮು ತಲುಪುತ್ತಿದ್ದರು. ಹಾಗೆ ಎಲ್ಲರೂ ಬಂದ ಮೇಲೆ ಹಾಡು, ಕುಣಿತ, ಕುಡಿತ ಶುರುವಾಗುತ್ತಿತ್ತು. ಕುಡಿತದ ಜೊತೆ ನಂಚಿಕೊಳ್ಳಲು ಚಿಕನ್, ಸೌತೆಕಾಯಿ, ಈರುಳ್ಳಿ, ನಿಂಬೆಹಣ್ಣು ಸಹ ಇರುತ್ತಿತ್ತು.

ರಾತ್ರಿ ಹನ್ನೆರಡಾಗಲು ಇನ್ನು ಕೆಲವೇ ನಿಮಿಷಗಳು ಬಾಕಿ ಇವೆ ಎನ್ನುವಾಗ ಕುಡಿತದ ಮತ್ತಿನಲ್ಲೇ ಪಟಾಕಿ ರೆಡಿ ಮಾಡಿಕೊಂಡು ನಿಂತಿರುತ್ತಿದ್ದ ಹುಡುಗರು ರಾತ್ರಿ ಹನ್ನೆರಡಾಗುತ್ತಿದ್ದಂತೆ ಪಟಾಕಿ ಸಿಡಿಸಿ ಜೋರಾಗಿ ಕೇಕೆ ಹೊಡೆದು ಹೊಸ ವರ್ಷವನ್ನು “ಹ್ಯಾಪಿ ನ್ಯೂ ಯೀಯರ್” ಎನ್ನುತ್ತಾ ಒಬ್ಬರನ್ನೊಬ್ಬರು ಕೈ ಕುಲುಕಿ ಅಪ್ಪಿ ಆಲಂಗಿಸಿ ವಿಶ್ ಮಾಡುತ್ತಿದ್ದರು. ಅದೇ ಸಮಯಕ್ಕೆ ಬೆಂಗಳೂರಿನ ತುಂಬೆಲ್ಲಾ ಸಿಡಿವ ಪಟಾಕಿಗಳ ಸದ್ದು ಕಿವಿ ತುಂಬಿಕೊಳ್ಳುತ್ತಿತ್ತು. ಕ್ರಮೇಣ ಆ ಸದ್ದು ಕ್ಷೀಣವಾಗುತ್ತಿದ್ದಂತೆ ಇತ್ತ ಸಹ ಹುಡುಗರ ಸದ್ದುಗಳು ಕಡಿಮೆಯಾಗುತ್ತಾ ಹೋಗಿ ಖಾಲಿಯಾದ ಬಾಟಲ್ ಗಳ ಸದ್ದು ಕೇಳತೊಡಗಿ ನಂತರ ಎಲ್ಲರೂ ಊಟ ಮಾಡುವ ಸದ್ದು ಕೇಳುತ್ತಿತ್ತು. ಮನೆಯ ಮುಂದಿರುವ ಖಾಲಿ ಜಾಗದಲ್ಲಿ ಕುಳಿತು ಎಲ್ಲರೂ ಊಟ ಮಾಡುವಾಗ ಎಷ್ಟೆಲ್ಲಾ ಡ್ರಿಂಕ್ಸ್ ಮಾಡಿದರೂ ಒಂಚೂರು ಕಿಕ್ ಬರದವನ ಹಾಗೆ ಒಂದೆಡೆ ಶಾಂತವಾಗಿ ಕುಳಿತಿರುತ್ತಿದ್ದ ನನ್ನನ್ನು ನೋಡಿ “ನಟಂಗೆ ಸಾಕಾಗಲಿಲ್ಲ ಅನಿಸುತ್ತೆ. ಮಗಾ ಇನ್ನೊಂದೆರಡು ಬಾಟಲ್ ತರೋಣ್ವ?” ಎಂದು ಹೇಳುವುದಲ್ಲದೇ ಆ ಸರಿ ರಾತ್ರಿಯಲ್ಲೂ ಕುಡಿತದ ಅಮಲಿನಲ್ಲೇ ಅಲ್ಲಿ ಇಲ್ಲಿ ವೈನ್ ಶಾಪ್ ಹುಡುಕಿ ಇನ್ನೊಂದಷ್ಟು ಬಾಟಲ್ ಗಳನ್ನು ತಂದು ಮತ್ತೆ ತೀರ್ಥ ಸೇವನೆಗೆ ತೊಡಗುವ ಗೆಳೆಯರ ಗುಂಪಿನಲ್ಲಿ ಎಷ್ಟು ಕುಡಿತರೂ ಏನೂ ಆಗದವನಂತೆ ಕುಳಿತುಕೊಳ್ಳುತ್ತಿದ್ದ ನನ್ನನ್ನು ನೋಡಿ ಅವರೆಲ್ಲಾ ಮತ್ತೆ ಮತ್ತೆ ಸೋಜಿಗಪಡ್ತಾ ಇದ್ದರು.

ಅವರು ಪಟ್ಟಿದ್ದ ಸೋಜಿಗವನ್ನು ಇಂದಿಗೂ ನಾನು ಪಡುತ್ತಿದ್ದೇನೆ. ಯಾಕೆಂದರೆ ಇಪ್ಪತ್ತೆರಡನೇ ವಯಸ್ಸಿಗೆ ಕುಡಿಯಬೇಕು ಎನ್ನುವ ಇಚ್ಚೆ ಮನಸ್ಸಿಗೆ ಬಂದಾಗ ಗಂಗೇನಹಳ್ಳಿಯ ವೈನ್ ಶಾಪ್ ಒಂದರ ಬಳಿ ಹೋಗಿ “ಒಂದು ನೈಂಟಿ ಕೊಡಿ” ಎಂದು ಕೇಳಿದಾಗ “ಯಾವ ಬ್ರಾಂಡ್ ಸರ್?’ ಎಂದು ಆ ಹುಡುಗ ಕೇಳಿದ್ದು ಇನ್ನೂ ನೆನಪಿದೆ. “ಯಾವುದೋ ಒಂದು ಕೊಡಿ” ಎಂದು ನಾನು ಹೇಳಿದಾಗ ಎರಡು ಬಾಟಲ್ ಗಳನ್ನು ಕೈಯಲ್ಲಿ ಹಿಡಿದು ಒಂದು ತುಂಬಿದ ಬಾಟಲ್ ನಿಂದ ಅರ್ಧವನ್ನು ಮತ್ತೊಂದು ಖಾಲಿ ಬಾಟಲ್ ಗೆ ಸುರಿದು ಎರಡೂ ಬಾಟಲ್ ಗಳನ್ನು ಕಣ್ಣೆದುರು ತಂದುಕೊಂಡು ಅಳತೆ ಸರಿ ಕಾಣದ ಕಾರಣ ಮತ್ತೆ ಕಡಿಮೆ ಇರುವ ಬಾಟಲ್ ಗೆ ಒಂದಷ್ಟು ಸುರಿದು ಅಳತೆ ಸರಿಯಾಗಿದೆ ಅಂತ ಖಾತ್ರಿ ಮಾಡಿಕೊಂಡು ಅರ್ಧ ತುಂಬಿದ ಮ್ಯಾಕ್ ಡೆವಲ್ ವಿಸ್ಕಿಯ ಬಾಟಲ್ ಒಂದನ್ನು ಆ ವ್ಯಕ್ತಿ ನನ್ನ ಕೈಗಿಟ್ಟಿದ್ದ ದಿನ ನೈಂಟಿ ಅಂದ್ರೆ ಇದೆ ಅಂತ ಗೊತ್ತಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮಪ್ಪ ಹೇಳುವ ಹಾಗೆ “ಲೈಫಲ್ಲಿ ಎಲ್ಲವನ್ನೂ ಒಂಚೂರು ಟೇಸ್ಟ್ ಮಾಡಬೇಕು” ಎನ್ನುತ್ತಾ ನೀರಾ, ಹೆಂಡ, ವಿಸ್ಕಿ, ಬ್ರಾಂದಿ, ರಮ್, ಜಿನ್, ವೈನ್, ಕಂಟ್ರಿ ಲಿಕ್ಕರ್, ಬಿಯರ್, ಹೀಗೆ ಎಲ್ಲದರ ಟೇಸ್ಟ್ ನೋಡಿದ್ದೇನೆ. ಕ್ರಿಕೆಟ್ ಮ್ಯಾಚ್ ಗೆದ್ದಾದ ಮೇಲೆ ಆಟಗಾರರು ದೊಡ್ಡ ದೊಡ್ಡ ಬಾಟಲ್ ಗಳ ಬಿರಡೆ ಬಿಚ್ಚಿ ನೊರೆ ಸಿಡಿಸುತ್ತಾರಲ್ಲ ಅದಕ್ಕೆ ಶಾಂಪೇನ್ ಅನ್ನುತ್ತಾರಂತೆ. ಅದನ್ನು ಇಲ್ಲಿಯವರೆಗೂ ಕುಡಿದಿಲ್ಲ. ತುಂಬಾ ಕಾಸ್ಟಲೀ ಅಂತ ಕೇಳಿದ್ದೇನೆ. ಯಾವತ್ತಾದರೂ ಒಂದು ಸಿಪ್ ಕುಡಿದರೂ ಕುಡಿಯುತ್ತೇನೆ. ನಾನಿರುವ ಜಾಗದಲ್ಲಿ ಕೊರೆಯುವ ಚಳಿಯಿದೆ. ಜೊತೆಗೆ ಇವತ್ತು ಡಿಸೆಂಬರ್ 31. ಮನೆಯಿಂದ ಐದು ನಿಮಿಷ ನಡೆದರೆ ವೈನ್ ಶಾಪ್ ಇದೆ. ದುಡ್ಡು ಕೊಟ್ಟರೆ ಬಾಟಲ್ ಸಿಗುತ್ತದೆ. ಆದರೆ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಯಾರ ಜೊತೆ ಯಾವಾಗ ಎಲ್ಲಿ ಎಷ್ಟು ಕುಡೀಬೇಕು ಯಾರ ಜೊತೆ ಯಾವಾಗ ಎಲ್ಲಿ ಕುಡಿಯಬಾರದು ಎಂಬುದನ್ನು ಬದುಕು ಒಂದು ದಶಕದಲ್ಲಿ ಕಲಿಸಿಕೊಟ್ಟಿದೆ. ಆ ಪಾಠವನ್ನು ಮದ್ಯವನ್ನು ತುಟಿಗೆ ಕಚ್ಚುವ ಪ್ರತಿ ಪಾನಪ್ರಿಯರಿಗೂ ಬದುಕು ಕಲಿಸಿಕೊಡುತ್ತದೆ. ಅರಿತವನು ಪಾನಪ್ರಿಯನಾದರೆ ಅರಿಯದವನು ಫೀಓಟ್ ಆಗುತ್ತಾನೆ.

ಪಂಜು ಬಳಗದ ಪರವಾಗಿ ಪಂಜುವಿನ ಸಹೃದಯಿ ಓದುಗರ ಬಳಗಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹಾಗು ಪಂಜು 50 ಸಂಚಿಕೆಯ ಮೈಲಿಗಲ್ಲು ತಲುಪುವಂತೆ ಮಾಡಿದ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು

 

ವಿ.ಸೂ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

20 thoughts on “ಯಾರ ಜೊತೆ ಯಾವಾಗ ಎಲ್ಲಿ ಎಷ್ಟು ಕುಡೀಬೇಕು ಅಥವಾ ಕುಡಿಯಬಾರದು ಎನ್ನುವುದು ತಿಳಿದರೆ: ನಟರಾಜು ಎಸ್ ಎಂ

  1. ಈ ಹುಡುಗರಿಗೆ ಹೊಸ ವರುಷ ಅಂದ್ರೆ ಕುಡಿಯೋದು ತಿನ್ನೋದು ಇದೇ ಆಗೋಯ್ತು..:)

  2. ನಟಣ್ಣ… ಹೃದಯಶಿವ ಒಂದ್ ಮಾತು ಹೇಳಿದ್ರು. ‘ಒಬ್ರೆ ಕೂತ್ಕೊಂಡ್ ಕುಡಿಯೋದು ತಾಯಿ ಗರ್ಭದಲ್ಲಿದ್ದಷ್ಟೇ ನೆಮ್ದಿ’ ಅಂತ. ನಾನಿನ್ನು ಟ್ರೈ ಮಾಡಿಲ್ಲ. ಆದ್ರೆ ನಿಮಿಗೆ ಅನಿವಾರ್ಯ ಇದೆ ಅನ್ನುಸ್ತಿದೆ. ನೋಡಿ.. ಚಿಯರ್ಸ್,

  3. ನೀವು ಸಹ “ತೀರ್ಥಂ”ಕರ ಪಂಗಡದವರೆಂದು ತಿಳಿದು ಥಂಡಿ ಬೆರೆತ ಮನಸಿನಲ್ಲಿ ಬೆಚ್ಚನೆಯ ಹಳದಿ ದ್ರವದ ಪಾರದರ್ಶಕ ಭಾವನೆ ಮೂಡಿತು….

  4. ತುಂಬಾ ಚೆನ್ನಾಗಿ ಬಂದಿದೆ ಈ ಲೇಖನ. ಕಣ್ನ ಮುಂದೆ ನಡೆದ ಅನುಭವವಾಯಿತು.
    ಹೊಸ ವರ್ಷದ ಶುಭಾಶಯಗಳು – ನಿಮಗೆಲ್ಲಾ.
    ಪಂಜಿನ ಬೆಳಕು ಎಲ್ಲೆಡೆ ಹರಡಲಿ ಅನ್ನುವ ಹಾರೈಕೆಗಳೊಂದಿಗೆ

  5. NICE ARTCILE BRO… 50 SANCHIKEGALANNU YASHASHWIYAGI NADSIKPONDU BANDIDDEERA.. SHUBHASHAYAGALU 

     

  6. ಎಲ್ಲ ಓಕೆ ! 

    ಆದ್ರೆ ಕುಡಿಯಲೇ ಬೇಕು ಅನ್ನುವುದು ಯಾಕೆ ?
     

    ಅದಿರದೆ ಸಹ ಹೊಸವರ್ಷ ಆಚರಿಸಬಹುದಲ್ವ ?

    ಬೇಸರ ಬೇಡ. ನನಗೆ ಅನ್ನಿಸಿದು ಹೇಳಿದೆ .
    -ಪಾರ್ಥಸಾರಥಿ

  7. ಹೊಸ ವರುಷದ ಹಾರ್ದಿಕ ಶುಭಾಶಯಗಳು 🙂 ಒಂದು ಕಡೆ ನಗು, ಇನ್ನೊಂದು ಕಡೆ ಬರಹವನ್ನು ಓದಿದ ಖುಷಿಯಾಯಿತು

  8. ಬರಹ ಚೆನ್ನಾಗಿದೆ, ನನ್ನ ಕಾಲೇಜಿನ ದಿನಗಳು ನೆನಪಾದವು. ತಮಗೂ ಹಾಗೂ ಪಂಚುವಿನ ಬಳಗಕ್ಕೂ ಹೊಸ ವರುಷದ ಶುಭಾಶಯಗಳು.

Leave a Reply

Your email address will not be published. Required fields are marked *