ನಿಮಗೆ ಈ ಚಿತ್ರದ ಎಲ್ಲಾ ಹಾಡುಗಳು ಗೊತ್ತಿರಬಹುದು. ಕೇಳಿದ್ದರೆ ಮರೆತಿರಲಿಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಆದರೂ ನೀವು ಈ ಸಿನಿಮಾ ನೋಡಿರೋ ಸಾಧ್ಯತೆಗಳು ಕಡಿಮೆ. ನಿಮಗೆ ಪರಿಚಯ ಇರೋರಲ್ಲಿ ಕೂಡ ಈ ಚಿತ್ರವನ್ನ ಯಾರೂ ನೋಡಿರಲಾರರು. ಚಾನ್ಸ್ ಸಿಕ್ಕರೆ ಈ ಚಿತ್ರವನ್ನ ನೋಡ್ತೀರಾ ಅಂದ್ರೆ ಇಲ್ಲಪ್ಪಾ ಅಂತೀರ!
ಇದ್ಯಾವ ಚಿತ್ರನಪ್ಪಾ ಅಂತ ತಲೆ ಕೆರ್ಕೊತಾ ಇದೀರಾ? ತಡೀರಿ ಆ ಚಿತ್ರದ ಒಂದು ಹಾಡು ಇಲ್ಲಿದೆ:
ಕಣ್ಣು ಕಡಲ ಹೊನ್ನು ನಸು ನಾಚಿದಾಗ ನೀನು
ಸೌಂದರ್ಯ ನಿನ್ನ ನೋಡಿ ಶರಣಾಯ್ತು ತನಗೆ ತಾನು
ಎಲ್ಲೋ ಕೇಳಿರೋ ಹಂಗಿದ್ಯಲ್ಲಾ ಅನ್ಕೊತಿದೀರಾ?
ಹೋಗಿ ಮತ್ತೆ ಬರಲೇ
ಒಹ್ ಚಿನ್ನ ನಿನ್ನ ಮುತ್ತನೊಂದ ತರಲೇ
ಪ್ರೀತಿ ತುಂಬಿ ಬಂತು ನಿನ್ನ ಯೌವನ
ಛೇ ಯಾವ್ದಪ್ಪಾ ಇದು?
ನಿನ್ನಾಆಆ…ರೂಪಾಆಆ ಕಂಡೂಊ ಚೆಲುವೆ
ಮನಸೋತೆ ನಾನು ನನಗಾಗಿ ನೀನು
ಡಾಮ್ ಡಾಮ್ ಡಿಗಾ ಡಿಗಾ
ಎದುರಲಿ ಇಡು ನಿಗಾ
ಕರೆಕ್ಟ್! ಇದು ಗುಲ್ಜಾರ್ ಖಾನ್ (ಬಿ.ಎ.) ಅಭಿನಯದ ಎವರ್-ಗ್ರೀನ್ ಕ್ಲಾಸಿಕ್ “ತನಿಖೆ”. ಜ್ಞಾಪಕ ಇದ್ಯಾ, ಚಿತ್ರಮಂಜರಿಯಲ್ಲಿ ಒಂದೇ ದಿನದಲ್ಲಿ ಈ ಚಿತ್ರದ ಮೂರ್ನಾಕು ಹಾಡುಗಳು ಹಾಕ್ತಾ ಇದ್ರು? ನಾವು ಚನ್ನಾಗಿ ಬೈಕೋತಾ ಇದ್ವಿ?
ಕಥೆ ಇಷ್ಟೇ. ಹಳ್ಳಿಯ ಕೆರೆಯಲ್ಲಿ ಜಗನ್ನಾಥ ಅನ್ನುವವನ ಹೆಣ ಸಿಗುತ್ತೆ. ತನಿಖೆ ನಡೆಸಲು ಬರುವ ಇನ್ಸ್ಪೆಕ್ಟರ್ ಗೆ ಊರಲ್ಲಿ ಯಾರಿಗೂ ಜಗನ್ನಾಥನ ಕಂಡರೆ ಆಗುತ್ತಿರಲಿಲ್ಲ ಅಂತ ತಿಳಿಯುತ್ತೆ. ಕೊಲೆಗಾರನ ಪತ್ತೆ ಮಾಡುತ್ತಾ ಹೊರಟಂತೆ, ಹೊಸ ಹೊಸ ಸಾಕ್ಷಿಗಳು ಸಿಕ್ಕು ಸಮಸ್ಯೆ ಇನ್ನೂ ಜಟಿಲವಾಗ್ತಾ ಹೋಗುತ್ತೆ. ಕಡೆಗೆ ಜಗನ್ನಾಥನಂತೆ ವೇಷ ಧರಿಸಿ ಬರೋ ಸಿಬಿಐ ಆಫೀಸರ್ ನೆರವಿಂದ ಕೊಲೆಗಾರನ ಪತ್ತೆ ಆಗುತ್ತೆ.
ಹೊರನೋಟಕ್ಕೆ ತುಂಬಾ ಸರಳ ಅನ್ನಿಸೋ ಈ ಕಥೆ ಕೇವಲ ಒಂದು ಕಮರ್ಷಿಯಲ್ ಚಿತ್ರ ಆಗದೇ ಒಂದು ಕಲೆ ಅನ್ನಿಸಿಕೊಳ್ಳುತ್ತೆ. ಇದಕ್ಕೆ ಹಲವಾರು ಕಾರಣ ಇವೆ. ಸಿಟಿಜನ್ ಕೇನ್ ಚಿತ್ರದ “ರೋಸ್ ಬಡ್” ಅಷ್ಟೇ ಕೌತುಕ ಇಲ್ಲಿ ಮೂಡಿಸೋದು “ಜಗನ್ನಾಥ”! ಹೇಗೆ ಸಿಟಿಜನ್ ಕೇನ್ ಒಂದು ಎಮೋಷನಲ್ ಪತ್ತೇದಾರಿ ಕಥೆಯಾಗಿತ್ತೋ, ಹಾಗೆಯೇ ತನಿಖೆ ಒಂದು ಸಬ್ ಕಾನ್ಷಿಯಸ್ ಮಟ್ಟದಲ್ಲಿ ನಡೆಯುವ ಪತ್ತೇದಾರಿ ಚಿತ್ರ. ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಲ್ಲ, ನಮ್ಮ ಸತ್ಯವನ್ನ ನಾವೇ ಹುಡುಕಿಕೊಳ್ಳಬೇಕಾಗುತ್ತೆ. ಮುಖದಲ್ಲಿ ಭಾವನೆಗಳೇ ಇಲ್ಲದ ಅಭಿನಯ ಕೂಡ ಒಂದು ತಂತ್ರವಿರಬಹುದಾ? ಗೊತ್ತಿಲ್ಲ!
ಇನ್ಸ್ಪೆಕ್ಟರ್ ಎಲ್ಲರನ್ನೂ ಏಕವಚನದಿಂದಲೇ ಮಾತಾಡಿಸೋದು. “ಬೊಗಳೋ ಗುಳ್ಳೆ ನರಿ ನನ್ಮಗನೇ” ಅಂದಾಗ ಎಂತಹ ಶೂರನಿಗೂ ಎದೆ ಧಸಕ್ಕೆನ್ನದೇ ಇರದು. ಹಳ್ಳಿಯ ಜನರ ಜೊತೆ ಮಾತಾಡುವಾಗ “ಬಾಯ್”, “ಗುಡ್” ಅಂತಹ ಪದಗಳನ್ನು ಉಪಯೋಗಿಸಿರೋದು ಯಾಕೆ? ತುಂಬಾ ಸಸ್ಪೆನ್ಸ್ ಸೀನುಗಳಲ್ಲಿ “ಪಿಂಕ್ ಪ್ಯಾಂಥರ್” ಮಾದರಿಯ ತಮಾಷೆ ಹಿನ್ನಲೆ ಸಂಗೀತ ಬಳಸಿರುವ ಕಾರಣ ಏನು? ಎಲ್ಲಾ ಡ್ರೀಮ್ ಸಾಂಗುಗಳಲ್ಲಿ ಫಾರ್ಮಲ್ ಡ್ರೆಸ್ ಯಾಕೆ ಹಾಕಿರ್ತಾನೆ ಹೀರೋ? ಕೊಲೆಯ “ವಿಚಾರ” ಯಾಕೆ ಮಾಡ್ತಿರ್ತಾರೆ? (“ವಿಚಾರಣೆ” ಅಲ್ಲ!) ಕೇವಲ ಜಗನ್ನಾಥನದ್ದಷ್ಟೇ ಅಲ್ಲ, ಹಾಡುಗಳಲ್ಲಿ ವಿಭಕ್ತಿ ಪ್ರತ್ಯಯಗಳದ್ದೂ ಕೊಲೆ ಯಾಕಾಗುತ್ತೆ? ಸಿಬಿಐ ಆಫೀಸರ್ ಮಾರುವೇಷ ಧರಿಸಲು ಹಳ್ಳಿಗೆ ಬರುವಷ್ಟು ಖಾಲಿ ಕೂತಿರ್ತಾರಾ? “ಇದು ನಂದೇ ಪ್ಲಾನ್” ಅಂತ ಕ್ಲೈಮಾಕ್ಸ್ ಅಲ್ಲಿ ಗುಲ್ಜಾರ್ ಖಾನ್ ಹೆಮ್ಮೆಯಿಂದ ಬೀಗುವಾಗ, ಈ ಪ್ರಶ್ನೆಗಳೆಲ್ಲಾ ಮಾಯವಾಗಿ, ವಿವರಿಸಲಾರದ ಈ ಕಲಾನುಭಾವದಲ್ಲಿ ಲೀನರಾಗಿರ್ತೀವಿ.
ಇದೆಲ್ಲದರ ಮಧ್ಯೆ ಒಂದು ನವಿರಾದ ಪ್ರೇಮ ಕಥೆ ಇದೆ. ಹೀರೋ ಹೀರೋಯಿನ್ ಭೇಟಿ ಆಗೋದು ಹೀಗೆ. ಹಾವನ್ನು ಕಂಡು ಬೆದರಿ ಓಡಿ ಬರುತ್ತಿರೋ ಹೀರೋಯಿನ್ ಹೀರೋ ತೋಳುಗಳಲ್ಲಿ ಆಶ್ರಯ ಪಡೆಯುತ್ತಾಳೆ. ಆಗ ಎಂತಹ ಕಲ್ಲು ಮನಸ್ಸಿನವರಿಗೂ ಕಣ್ಣಂಚಿನಲ್ಲಿ ಒಂದು ಸಣ್ಣ ಹನಿ ಮೂಡುತ್ತದೆ. ಮುಂದಿನ ಭೇಟಿ ಬೆಟ್ಟದ ಮೇಲೆ. ಸ್ನೇಹಿತೆಯರ ಜೊತೆ ಕಣ್ಣಾಮುಚ್ಚಾಲೆ ಆಡಲು ಹೋಗಿರ್ತಾಳೆ ಹೀರೋಯಿನ್. ಗೆಳತಿಯರನ್ನು ಹುಡುಕುತ್ತಾ ಹುಡುಕುತ್ತಾ ಬೆಟ್ಟದ ತುದೀಗೆ ಬಂದುಬಿಟ್ಟಿರ್ತಾಳೆ. ಗಾಬರಿ ಆಗೋದೇನೂ ಬೇಕಿಲ್ಲ, ನಮ್ಮ ಹೀರೋ ಸರಿಯಾದ ಸಮಯಕ್ಕೆ ಬಂದು ಅವಳು ಬೆಟ್ಟದ ತುದಿಯಿಂದ “ಡೈವ್” ಮಾಡೋದನ್ನ ತಪ್ಪಿಸ್ತಾನೆ!
ಗುಲ್ಜಾರ್ ಖಾನ್ ಕೇವಲ ಸಾಹಿತ್ಯದಿಂದ ಅಷ್ಟೇ ಅಲ್ಲ, ಹಾಡಿನ ಚಿತ್ರೀಕರಣದಿಂದ ಕೂಡ ಮನಸ್ಸು ಗೆಲ್ತಾರೆ. ಹಾಡಿನ ಮಧ್ಯ “ಇನ್ಸೆಟ್” ಅಲ್ಲಿ ತಾವು ಹಾಡುತ್ತಿರುವ ವೀಡಿಯೊ ತೋರಿಸಿರುವುದು ನಿಜಕ್ಕೂ ಜೀನಿಯಸ್! ಕಲಾವಿದ ಮತ್ತು ಕಲೆಯನ್ನು ಒಟ್ಟಿಗೆ ತೋರಿಸಿ, ಸೃಷ್ಟಿಕರ್ತನಾದ ತನಗೂ ತನ್ನ ಸೃಷ್ಟಿಗೂ ಇರುವ ಗೆರೆಯನ್ನು ಅಳಿಸಿಬಿಡುತ್ತಾರೆ. ಒಂದು ಮುಖ್ಯ ವಿಷಯ ನಾವು ಮರೆಯಬಾರದು. ನಟರು ಒಂದೋ ಎರಡೋ ಹಾಡುಗಳನ್ನ ಹೇಳಿದರೆ ಅದೇ ಹೆಚ್ಚು. ಅಂತಹ ರಾಜಕುಮಾರ್ ಕೂಡ ತಮ್ಮ ನಂತರದ ಚಿತ್ರಗಳಿಂದ ಮಾತ್ರವೇ ಹಾಡಲು ಶುರುಮಾಡಿದ್ದು. ಆದರೆ ಗುಲ್ಜಾರ್ ಖಾನ್ ಬಹುಷಃ ಪ್ರಪಂಚದ ಏಕೈಕ ನಟ ತನ್ನೆಲ್ಲಾ ಚಿತ್ರಗಳಲ್ಲಿ (ಗ್ರಾಂಡ್ ಟೋಟಲ್ ಒಂದು!) ಹಾಡಿರೋದು.
ಹಾಡುಗಳು, ಸಾಹಿತ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಸಂಭಾಷಣೆ ಕೂಡ ಅಷ್ಟೇ ಚುರುಕಾಗಿದೆ. ಇಲ್ಲಿದೆ ಸ್ಯಾಂಪಲ್ ನೋಡಿ.
“ನೆತ್ತಿ ಮೇಲೆ ಬಿಸಿಲು. ಹೊಟ್ಟೆಯಲ್ಲಿ ಹಸಿವು. ಎದುರಿಗೆ ಸುಂದರವಾಗಿರೋ ಆಪಲ್ ಥರ ಹುಡುಗಿ. ಬಿಸಿ ಬಿಸಿ ಊಟ ತರ್ತಿದ್ರೆ ಹೊಟ್ಟೆ ತುಂಬಾ ಊಟ ಮಾಡು ಅಂತ ನನ್ನ ಮನಸು ಹೇಳಿತು…”
“ಬೆಂಕಿ ಇಲ್ಲದೇ ಹೋಗೆ ಆಡಲ್ಲ. ಬೂದಿ ಮುಚ್ಚಿದ ಕೆಂಡದ ಥರ ತಪ್ಪಿಸಿಕೊಳ್ತೀನಿ ಅಂತ ಯಾರೇ ತಿಳ್ಕೊಂಡ್ರೂ ಗಾಳಿ ಬೀಸಿದಾಗ ಬೂದಿ ಎಲ್ಲಾ ಹಾರಿಹೋಗಿ ಕೆಂಡದ ನಿಜವಾದ ಬಣ್ಣ ಬಯಲಾಗುತ್ತೆ…”
ಈ ಚಿತ್ರದ ಬಗ್ಗೆ ಎಷ್ಟು ಹೇಳಿದ್ರೂ ಮುಗಿಯಲ್ಲ. ಒಂದೇ ವಾಕ್ಯದಲ್ಲಿ ಹೇಳಬೇಕು ಅಂದ್ರೆ, ಗುಲ್ಜಾರ್ ಖಾನ್ ಅವರೇ ಹೇಳುವಂತೆ “ಈ ಚಿತ್ರ ನನ್ನ ರುದಯದಲ್ಲಿ ಯಾವತ್ತಿಗೂ ನೆಲೆಸಿರುತ್ತೆ”!
ಅಬ್ಬಾ ! ಅಂತೂ ತನಿಖೆಯ ಗುಲ್ಜಾರಖಾನ್ ಚಿತ್ರವನ್ನೂ ನಾನು ಕಾಲೇಜು ದಿನಗಳಲ್ಲಿ ನೋಡಿದ ನೆನಪು. ಇಷ್ಟು ವರುಷಗಳ ನಂತರವೂ 'ತನಿಖೆ'ಯ ಕುರಿತು ಆಳವಾದ ವಿಶ್ಲೇಷಣೆ ಮಾಡಿಸಿಕೊಳ್ಳುವಂತಹ ಚಿತ್ರ ನೀಡಿದ ದಿವಂಗತ ಗುಲ್ಜಾರಖಾನ್ ಸಾಹೇಬರಿಗೆ (ಕೇಸೊಂದರಲ್ಲಿ ಸಿಕ್ಕಿ ಹಾಕಿಕೊಂಡು ಜೈಲಿನಲ್ಲಿ ಇತಿಹಾಸವಾದರು) ಸಲಾಂ…..ಗಳು !
ಈಗ ನೆನಪಾದದ್ದು : ಬಹಳಷ್ಟು ಜನ ಇಷ್ಟ ಪಡದ ಚಿತ್ರ ಮತ್ತು ಮೂವಿಲ್ಯಾಂಡ್ ಚಿತ್ರಮಂದಿರವನ್ನು ಬಾಡಿಗೆ ಹಿಡಿದು ನೂರು ದಿನ ಬಲವಂತದಿಂದ ಓಡಿಸಿದ ಚಿತ್ರವೆಂಬ ಇತಿಹಾಸ ಈ ಚಿತ್ರದ್ದು !
ನೆನಪಿಸಿದ್ದಕ್ಕೆ ಸ್ನೇಹಿತರಿಗೆ ಧನ್ಯವಾದಗಳು !
ಶಶಿಕುಮಾರ್ ಅಭಿನಯದ ಭಯ೦ಕರ ಸ೦ಭಾಷಣೆ ಇರುವ ಕೆರಳಿದ ಕೇಸರಿ ನೆನಪಾಯಿತು. 😉