ಸ್ತ್ರೀ, ಪುರುಷ ವಶೀಕರಣ ಮಾಡಿಕೊಡುವವರು ಮಾಧ್ಯಮಗಳಲ್ಲಿ ಜಾಹೀರಾತುಗಳ ಮೂಲಕ ಹೆಚ್ಚಾಗಿ ಯುವಜನರನ್ನು ಸೆಳೆದುಕೊಳ್ಳುವುದನ್ನು ಗಮನಿಸಿದರೆ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಅನ್ನುವ ಮಾತು ಅಪ್ಪಟ ಸತ್ಯ. ವಾರ್ತಾಮಾಧ್ಯಮಗಳಲ್ಲಿ ನಿತ್ಯವೂ ನಾನಾ ತರಹದ ಆಮಿಷವೊಡ್ಡಿ ಗಾಳಕ್ಕೆ ಸಿಲುಕಿಸುತ್ತಾರೆ. ಮೀನು ಹಿಡಿಯಬೇಕಾದರೆ ಗಾಳಕ್ಕೆ ಎರೆಹುಳ ಸಿಕ್ಕಿಸದೆ ಹೋದರೆ ಅದು ಬಾರದು. ಯುವಜನರನ್ನು ಮಾತ್ರವಲ್ಲ; ಈ ವಶೀಕರಣದ ಮೂಲಕ ಬಯಸಿದವರನ್ನು, ಸುಲಭವಾಗಿ ವಶ ಮಾಡಿಕೊಳ್ಳಬಹುದು ಎನ್ನುವ ಆಸೆ ಅನೇಕ ಜನರನ್ನು ಪತಂಗದಂತೆ ಮುಕುರಿ ಬೀಳಿಸುತ್ತದೆ. ಇದಕ್ಕೆ ವಯಸ್ಸಿನ ಮಾನದಂಡವಿಲ್ಲ. ನೈಸರ್ಗಿಕವಾಗಿ ಇರಬೇಕಾದ ಕಾಮನೆಗಳು, ಹೊರಗಿನ ಅನೇಕ ಮುಕ್ತ ದೃಶ್ಯ, ಸ್ವಚ್ಚಂದತೆ, ಸ್ವೇಚ್ಚಾಚಾರ ಉಡುಗೆ, ತೊಡುಗೆ, ಎಗ್ಗಿಲ್ಲದೆ ಕುಣಿಯುವ ಜೋಡಿಗಳಿಂದ ತುಂಬಿದ ಸಿನೆಮಾ ಎಲ್ಲವೂ ದೃಶ್ಯ, ಶ್ರವ್ಯ, ವಾರ್ತಾ ಮಾಧ್ಯಮಗಳ ಮೂಲಕ ಹದಿಹರೆಯದವರನ್ನು ಚುಂಬಕದ ಹಾಗೆ ಎಳೆದುಕೊಳ್ಳುತ್ತದೆ. ಸಹಜವಾಗಿ ಶಾಲೆ, ಕಾಲೇಜು, ನೆರೆಕರೆ, ಆಪ್ತವಲಯ, ಸ್ನೇಹಿತವರ್ಗ, ಬಂಧುಗಳ ಕೂಟ ಈ ಎಲ್ಲ ಕಡೆ ಕಾಣಸಿಗುವ ಬಾಲಿಕೆಯರು, ಯುವತಿಯರು, ಮಹಿಳೆಯರು ಹರೆಯದ ಕಣ್ತುಂಬಿ, ಮನತುಂಬಿ, ತಾವೊಡ್ಡಿದ ಪ್ರೇಮದ ಆಹ್ವಾನವನ್ನು ಅವರು ಪುರಸ್ಕರಿಸದೆ ಇದ್ದಾಗ, ಕೆಲಬಾರಿ ಹೊರಗಿನ ಸಮಾಜದಲ್ಲಿ ಕಣ್ಸೆಳೆದ ತರುಣಿಯರು ಎಲ್ಲರನ್ನು ಹತ್ತಿರವಾಗಿಸುವ ಹಂಬಲ ಈಡೇರದೆ ಅದು ಮೇರೆ ಮೀರಿದಾಗ ಇಂಥ ಜಾಹೀರಾತುಗಳಿಗೆ ಶರಣಾಗುವುದು; ಆ ಮೂಲಕ ತಾವು ಬಯಸಿದ ಹುಡುಗಿಯನ್ನು " ಅವಳಾಗೇ ತಮ್ಮ ಬಳಿ ಬರುವ ಹಾಗೆ ಮಾಡುವ'' ಮಾಂತ್ರಿಕ ಶಕ್ತಿಗೆ ಜೋತುಬೀಳುತ್ತಾರೆ. ಗಾಳಕ್ಕೆ ಸಿಕ್ಕಿದ ಮೀನು ಪಾರಾಗುವ ಹಾಗುಂಟೇ? " ಬಾ ನೊಣವೆ, ಬಾ ನೊಣವೆ, ಬಾ ನನ್ನ ಬಳಿಗೆ" ಹಾಡಿನ ಹಾಗೆ ಜೇಡ ನೊಣವನ್ನು ನುಂಗುವ ತನಕ ಬಿಡದು. ಅದೇ ಹೋಲಿಕೆ ಈ ಸ್ತ್ರೀ, ಪುರುಷ ವಶೀಕರಣದ ಸ್ಪೆಷಲಿಸ್ಟ್ ಗಳಿಗೆ ಉಪಯೋಗಿಸುವುದೇ ಸೂಕ್ತ.
ಅದರಲ್ಲೂ ಅವರು ನೀಡುವ ಜಾಹೀರಾತುಗಳಂತೂ ಹೇಗಿರುತ್ತದೆ ಎಂದರೆ ಆಕಾಂಕ್ಷಿಗಳಿಗೆ ಆ ಘಳಿಗೆಗೇ ತಮ್ಮ ಕನಸಿನ ಕನ್ಯೆ ತಮ್ಮ ಪಕ್ಕ ಬಂದ ಹಾಗೆ ! ಗಂಡು ಹೆಣ್ಣಿನ ಸೆಳೆತವನ್ನು ಮೂಲವಾಗಿರಿಸಿಕೊಂಡು ವ್ಯವಹಾರ ಶುರುವಾಗುತ್ತದೆ. ಸ್ತ್ರೀ, ಪುರುಷ ವಶೀಕರಣದ ಸ್ಪೆಷಲಿಸ್ಟ್ ಎಂದು ಅವರುಗಳೇ ತಮ್ಮನ್ನು ತಾವೇ ಕರೆದುಕೊಳ್ಳುತ್ತಾರೆ. ಒಂದೇ ಕರೆಯಲ್ಲಿ '' ನಂಬಿದವರ ಪಾಲಿನ ಬೆಳಕು" ಎಂದೇ ಹೇಳಿಕೊಳ್ಳುವ ಅವರು "ಆ ಕೆಲಸ" ಮಾಡಿಕೊಡುತ್ತಾರೆ. ಬೇಕಾದರೆ ಎಲ್ಲೋ ತನ್ನ ಪಾಡಿಗೆ ತಾನಿರುವ ದೈವದ ಹೆಸರೂ ಸೇರಿಕೊಳ್ಳುತ್ತದೆ. ಪ್ರೀತಿ, ಪ್ರೇಮ, ನೀವಿಷ್ಟ ಪಟ್ಟವರು ನಿಮ್ಮವರಾಗಲು, ಅಲ್ಲದೆ ವಶೀಕರಿಸುವ ಅವಧಿಯಲ್ಲೂ ಸ್ಪರ್ಧೆ. ಕೆಲವರು ಒಂದೇ ತಾಸಿನಲ್ಲಿ ಮುಗಿಸುವ ಭರವಸೆ ಇತ್ತರೆ ಇನ್ನು ಕೆಲವರಿಗೆ ಒಂದು ದಿನ, ಮತ್ತೊಂದು ಕಡೆಯಲ್ಲಿ ಹನ್ನೊಂದೇ ಘಂಟೆಗೆ ಕಾರ್ಯ ಸಿದ್ಧಿ. ೧೦೦ ಶೇಕಡಾ ವಶೀಕರಣ ನಿಪುಣರು ಒಡ್ಡುವ ಮತ್ತೊಂದು ಆಮಿಷವ್ಯಾವುದೆಂದರೆ- ಕಾರ್ಯ ಸಿದ್ಧಿ ಆಗದೆ ಹೋದರೆ ಶುಲ್ಕ ವಾಪಸ್. ಸ್ತ್ರೀಯರಿಗೆ ಕಡಿಮೆ ಫೀಯ ರಿಯಾಯಿತಿ ಬೇರೆ! ಅಥವಾ ಸಂಪೂರ್ಣ ಉಚಿತದ ಭರವಸೆ.! ಕ್ಷಣದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವ ದೇವಾಂಶ ಸಂಭೂತರಿದ್ದಾರೆ. ಕಾರಣಿಕ ದೈವ ತಮ್ಮ ಅಂಗೈಲಿ ಇದೆ ಎಂಬಂಥ ಗಾಳ. ಕೆಲವರು ವಶೀಕರಣ ಪ್ರಯೋಗವಾಗಿದ್ದನ್ನು ಕಂಡು ಹಿಡಿದು ಅದನ್ನು ತೆಗೆವ ಭರವಸೆ ಒಡ್ದುತ್ತಾರೆ. ಹೆಚ್ಚಿನ ಸ್ಪೆಷಲಿಸ್ಟ್ ಗಳು ಇಂಥ ಜಾಹೀರಾತುಗಳಿಂದ ಎಳೆದುಕೊಳ್ಳುವುದು ಹದಿಹರೆಯದ ಮನಸ್ಸುಗಳನ್ನು. ಕನಸು ಕಾಣುತ್ತ, ನಟ, ನಟಿಯರ ಚಿತ್ರಗಳಲ್ಲಿ ತಮ್ಮ ಕನಸಿನ ಹೀರೋ ಅಥವಾ ಹೀರೋಯಿನ್ ಗಳನ್ನು ಕಲ್ಪಿಸಿಕೊಂಡು. ಹರೆಯಕ್ಕೆ ಇದೆಲ್ಲ ಸಹಜ. ಅದು ನ್ಯಾಚುರಲ್. ಸ್ತ್ರೀ ಯಾಗಲೀ ಪುರುಷನಾಗಲೀ ಸಂಗಾತಿಗೆ ಅರಸುವುದರಲ್ಲಿ ಇಂದಿನ ಪಾಶ್ಚಿಮಾತ್ಯ ಶೈಲಿಯನ್ನು ಅನುಕರಿಸುವ ಜೀವನದ ಕೊಡುಗೆ ಇದ್ದೇಇದೆ. ಗಂಡಸರು ಮಾತ್ರಾ ಈ ಕಸುಬಿಗೆ ಬೀಳುವುದಲ್ಲ; ಮಹಿಳೆಯರು ಕೂಡಾ ಇಂಥ ವಶೀಕರಣ ಪಂಡಿತರ ಮೊರೆ ಹೋಗಿ ತಾವು ಬಯಸಿದ ಪುರುಷ ತಾನಾಗಿ ತಮ್ಮ ಕಾಲಡಿಗೆ ಬಂದು ಬೀಳಲು ಇವರ ಬೆನ್ನು ಹಿಡಿಯುವುದಿದೆ.
ಈ ಸ್ಪೆಷಲಿಸ್ಟ್ ಗಳ ಕಿಸೆ ತುಂಬುವುದೇ ಇಂಥ ಜನರನ್ನು ಏಮಾರಿಸಿ ಎಂದರೆ ತಪ್ಪಲ್ಲ. ಏನಿದ್ದರೂ ಎಲ್ಲ ಪರಸ್ಪರ ಸಮ್ಮತಿಯಿಂದ, ಅನುರಾಗದಿಂದ, ಪ್ರೀತಿ, ಪ್ರೇಮದ ಮೂಲಕ, ದಾಂಪತ್ಯ ಬಂಧನದ ಮೂಲಕ, ಪ್ರಣಯದಿಂದ ಸನ್ನಿಹಿತರಾಗಬೇಕು. ಅದರಲ್ಲಿ ಸಮಾನ ವಿದ್ಯೆ, ಅಭಿರುಚಿ, ಸ್ಥಾನಮಾನ, ಚೆಲುವು, ಸಂಸ್ಕಾರ, ಸಂಪತ್ತು, ಬದುಕಿನ ರೀತಿನೀತಿ, ಹಿನ್ನಲೆ, ಇದೆಲ್ಲ ಪರಿಗಣಿಸಲ್ಪಡುತ್ತದೆ. ಅದು ಬಿಟ್ಟು ಕಣ್ಣಿಗೆ ಕಂಡ ಚೆಲುವಿನ ಹುಡುಗಿ, ಸಿನಿಮಾ ಹೀರೋಯಿನ್, ರೆಸ್ಟುರಾದಲ್ಲಿ ಎದುರಾದ ಬೆಡಗಿ, ಪಕ್ಕದ ಮನೆಯ ಎಳೆಬಾಲೆ, ಹಿಂಬಾಲಿಸಿ ಬಂದಿದ್ದಕ್ಕೆ ಚಪ್ಪಲಿ ಕೈಗೆತ್ತಿದ ಅಪರಿಚಿತ ಯುವತಿ, ಇವರೆಲ್ಲರನ್ನು ಈ ವಶೀಕರಣ ಸ್ಪೆಷಲಿಸ್ಟ್ ಗಳನ್ನು ಸಂಪರ್ಕಿಸಿ ಕಾಲುಬುಡಕ್ಕೆ ಬಂದು ಬೀಳುವ ಹಾಗೆ ಮಾಡಿ ಬಳಸಿಕೊಂಡುಬಿಡುವ ಉನ್ಮಾದವೆಂಬ ಸಾಂಕ್ರಾಮಿಕ ಪಿಡುಗಿಗೆ ಮದ್ದಿಲ್ಲ. ಈ ರೀತಿಯಲ್ಲಿ ವಶೀಕರಿಸಿದ ಹೆಣ್ಣು, ಗಂದುಗಳನ್ನು ತಮ್ಮ ತಮ್ಮ ಕಾಮನೆ ತೀರಿದ ಮೇಲೆ ಅದ್ಯಾವ ಕಸದ ಬುಟ್ಟಿಗೆ ಎಸೆದು ಹೊಸದಾಗಿ ಮತ್ಯಾವ ಆಕರ್ಷಣೀಯ ಕನ್ಯೆ ಯನ್ನೋ, ಯುವಕನನ್ನೋ ಬಗಲಿಗೆಳೆದು ಹಾಕಿಕೊಂಡು ಅವರ ಬಾಳು ಮುರಿಯಲು ಸಂಚು ಹೂಡುತ್ತಾರೆ! ಯಾವುದೇ ದೈವಗಳೂ ದುಷ್ಕೃತ್ಯಕ್ಕೆ ಎಳಸುವುದಿಲ್ಲ. ಅವಕ್ಕೆ ಸರಿ ತಪ್ಪಿನ ವಿವೇಚನೆ ಇದೆ. ಅಬೋಧ, ಅಮಾಯಕ ಕನ್ನಿಕೆಯರ ಬದುಕು ಹಾಳುಮಾಡುವ ಕಾರ್ಯಕ್ಕೆ ದೈವ ದೇವರು ಒಪ್ಪದು.
ದೈವಗಳಿರುವುದು ಕೆಟ್ಟ, ತಲೆಹೋಕ ಕೆಲಸಗಳಿಗಲ್ಲ. ಪ್ರಪಂಚ ಹಿಂದೆಂದೂ ಕಂಡರಿಯದಷ್ಟು ವೇಗವಾಗಿ ಮುಂದೋಡುತ್ತ್ತಿದೆ. ಇಂದಿನ ಹೊಸತು, ನಾಳೆಗೆ ಹಳೆಯದಾಗುತ್ತದೆ. ಆ ಅರಿವು ಇಲ್ಲದವರಿಲ್ಲ. ಅಷ್ಟೆಲ್ಲ ಗೊತ್ತಿದ್ದ ಮೇಲೆ ಈ ವಶೀಕರಣದ ಆಮಿಷ ಒಡ್ಡಿ ದುಡ್ಡು ದೋಚುವವರನ್ನು ನಂಬಿ, ಕೇಳಿದ ಮೊತ್ತ ಅವರ ಪಾದಕ್ಕೆ ಇಡುವವರಿರಬಹುದು. ತಾವು ಹಿಂಬಾಲಿಸುವ ಕನ್ಯೆ ಅಕಸ್ಮಾತ್ ಮುಗುಳ್ನಕ್ಕರೆ ಓಹ್! ವಶೀಕರಣ ಕೆಲಸ ಮಾಡಿದೆ ಎಂದು ಹಿಗ್ಗುವವರಿದ್ದಾರೆ. ಇಲ್ಲಿ ಸ್ತ್ರೀ, ಪುರುಷ ಯಾರೂ ಇರಬಹುದು. ಇಂದಿನ ದಿನಗಳಲ್ಲಿ ಅತ್ಯಾಚಾರಿಗಳು ಎಳೆಯ ಹಸುಳೆಯನ್ನೂ ಬಿಟ್ಟವರಲ್ಲ. ಮಗುವಿನಿಂದ ಹಿಡಿದು ವೃದ್ಧೆಯರ ಮೇಲೆ ಕೂಡಾ ಈ ಪಾಶವೀಯ ಕೃತ್ಯ ಹೆಚ್ಚುವುದು ನಿತ್ಯದ ವಿಚಾರವಾಗಿದ್ದೇ ಗಾಬರಿ ಹುಟ್ಟಿಸಿ ಬೆಚ್ಚಿಬೀಳಿಸುವಾಗ ಈ ವಶೀಕರಿಸುವ ಕ್ರಿಯೆ ತನ್ನ ಕಾಂಟ್ರಿಬ್ಯೂಷನ್ ಕೂಡಾ ಸೇರಿಸಿದರೆ ಪರಿಸ್ಥಿತಿ ಹೇಗೆ ತಿರುಗಬಹುದು? ಇನ್ನು ಸ್ತ್ರೀ, ಪುರುಷರ ವಶೀಕರಣ ನಿಮಿಷಗಳಲ್ಲಿ ಮಾಡಿಕೊಡುತ್ತೇವೆ; ಆಗದೆ ಇದ್ದರೆ ದುಡ್ಡು ವಾಪಸ್ ಎಂದು ಮಕಮಲ್ ಟೋಪಿ ಇಡುವವರನ್ನು ನಿಯಂತ್ರಿಸುವುದು ಸಮಾಜದ ಹಿತದ ದೃಷ್ಟಿಯಿಂದ ಅತ್ತ್ಯುತ್ತಮ ಕಾರ್ಯ ಆಗಲಾರದೇ?