ಹೈಸ್ಕೂಲ್ ದಿನಗಳಲ್ಲಿ ನಮ್ಮ ಮೇಷ್ಟ್ರು ಒಬ್ಬರಿದ್ದರು. ಬಿಡಿ, ಒಬ್ಬರಲ್ಲ ಬಹಳ ಮಂದಿ ಗುರುಗಳಿದ್ದಾರೆ. ಅವರಲ್ಲಿ ಒಬ್ಬರು ಸಂಕಪ್ಪ ಅಂತಿದ್ದರು. ಈಗ ನಿವೃತ್ತಿಯಾಗಿ ನಮ್ಮೂರಲ್ಲೇ ಇದ್ದಾರೋ ಅವರ ಸ್ವಗ್ರಾಮ ಹಡಗಲಿ ತಾಲೂಕಿನ ಉತ್ತಂಗಿಯಲ್ಲಿದ್ದಾರೋ ಗೊತ್ತಿಲ್ಲ. ಅವರು ನಮ್ಗೆ ಗಣಿತ ವಿಷಯ ತಗಳ್ಳೋರು. ಆದರೆ ಅವರ ಇಂಗ್ಲೀಷು ಚೆನ್ನಾಗಿತ್ತು. ಎತ್ತರದ, ಸ್ಥೂಲ ದೇಹವನ್ನು ಹೊತ್ತು ಕ್ಲಾಸ್ ರೂಮಿಗೆ "ಎ ಸ್ಕ್ವೇರ್ ಪ್ಲಸ್ ಬಿ ಸ್ಕ್ವೇರ್ ಇಸ್ ಇಕ್ವಲ್ ಟು ………. " ಹೇಳುತ್ತಲೇ ಎಂಟ್ರಿ ಕೊಡುತ್ತಿದ್ರು. ಸುಮ್ನೆ ಕುಳಿತೆವೋ ನಮ್ ಪುಣ್ಯ. ಗಾಂಚಾಲಿ ಮಾಡಿದ್ವೋ ಬಿದ್ವು ಒದೆ ಅಂತಲೇ ಅರ್ಥ. ಹುಡುಗೀರಿಗೂ ವಿನಾಯಿತಿ ಇದ್ದಿಲ್ಲ. ಅವರ ಒಂದು ಪಾಲಿಸಿ ಅಂದ್ರೆ ಲೆಕ್ಕ ಮಾಡುವಾಗ ಬುಕ್ ತೆಗಿಬಾರ್ದು. ಬರಕೋ ಅನ್ನುವವರೆಗೂ ತಲೆ ತಗ್ಗಿಸಬಾರ್ದು. ಒಂದು ವೇಳೆ ಏನಾದ್ರೂ ಆ ಥರ ಎಡವಟ್ಟು ಆಯಿತೆನ್ನಿ; ಡಾಗು, ಡಾಂಕಿ, ಪಿಗ್ಗು, ಎಲ್ಲಾ ನಮ್ ಕ್ಲಾಸಲ್ಲಿ ನಮ್ ಜೊತೆ ಓಡಾಡಿಬಿಡುತ್ತಿದ್ದವು. ಅಂದ್ರೆ ಸಂಕಪ್ಪ ಮೇಷ್ಟ್ರು ನಮ್ಮನ್ನು ಹಾಗೆ ಬಯ್ಯುತ್ತಿದ್ದರು.
ನಮ್ಮ ಇಂಗ್ಲೀಷಂತೂ ಆಹಾ.. ಹೇಳೋ ಹಾಗೇ ಇಲ್ಲ. ಎಲ್ಲರದೂ ಒಂದೊಂದು ಗುಂಪಿನಂತೆ ನಮ್ಮ ಬ್ಯಾಚ್ ನಲ್ಲಿ ನಮ್ಮ ಜೊತೆ ಇಬ್ಬರು ಜಿಗರಿ ದೋಸ್ತರು ಇದ್ದರು. ಐ. ಟಿ. ಕೊಟ್ರೇಶ್ ಮತ್ತು ಮೇದಾರ ಕೊಟ್ರೇಶ್, ಇಬ್ಬರು ಜೋಡೆತ್ತು ಗಳಂತೆ. ಆಕಾರದಲ್ಲಿ ಕಾಲೇಜು ಓದುತ್ತಿರುವವರಂತೆ ಅಥವಾ ಪಿಯುಸಿ ಮುಗಿಸಿರೋರು ತರಹ ಇದ್ರೂ ನಮ್ ಜೊತೆ ಹತ್ತನೇ ಕ್ಲಾಸಿಗೆ ರಿ-ಅಡ್ಮಿ ಶನ್ ಮಾಡಿಸಿದ್ದರು. ಅದೆಷ್ಟನೇ ವರ್ಷದ್ದೋ ಅವರ "ಹತ್ತರ" ಓದು, ಗಿಡ್ಡು ಮುಂಡೇವು ನಮಗೇನು ಗೊತ್ತಾಗ್ತಾ ಇದ್ದಿಲ್ಲ. ಮೊದ್ಲೇ ನಮ್ ಇಂಗ್ಲೀಷು ಬಳಸಲಾರದೇ, ಬಳಸುವ ವಿಧಾನ ಗೊತ್ತಿಲ್ಲದೇ ಮೂಲೆಯಲ್ಲಿಟ್ಟಿಟ್ಟೆ ಸಿಕ್ಕಾಪಟ್ಟೆ ಜಂಗು ತಿಂದ ಕಬ್ಬಿಣದಂತಾಗಿತ್ತು.
ಅಂಥಾದ್ದರಲ್ಲಿ ನಾಗರಾಜ್ ಪತ್ತಾರ್ ಮೇಷ್ಟ್ರು;
"ಡು ಯು ನೊ ದಿ ಮೀನಿಂಗ್ ಆಫ್ ಪ್ಲೆಜರ್ ?" ಕೇಳುತ್ತಿದ್ದರು.
ನಮ್ಮ ಐ.ಟಿ.ಕೊಟ್ರ. ಲಾಸ್ಟ್ ಬೆಂಚಲ್ಲಿ ನಿಂತು "ಸರ್, ಅದು ಪ್ಲೆಜರ್ ಅಂದ್ರೆ ಒತ್ತಡ ಒತ್ತಡ ಸರ್ …." ಅಂದು ಎರಡು ಕೈಗಳನ್ನು ಘರ್ಷಿಸುವ ಮಾದರಿಯಲ್ಲಿ ಸನ್ನೆ ತೋರಿಸಿ ಹೇಳುತ್ತಿದ್ದ.
ಪ್ರತಿ ಬಾರಿ ಮೇಷ್ಟ್ರು "ನೀನ್ ಹೇಳ್ತೀರೋದು ಪ್ರೆಜರ್ ನ ಅರ್ಥ… ನಾನ್ ಕೇಳಿದ್ದು ಪ್ಲೆಜರ್ ಅಂದ್ರೆ ಏನಂತ?" ಅಂತಿದ್ರು. ಇಂಥಾದ್ದೆಲ್ಲಾ ಆಗಿ ಬರೋಬ್ಬರಿ ನೂರ ಮೂವತ್ತೈದು ವಿದ್ಯಾರ್ಥಿಗಳಲ್ಲಿ ಬರೀ ಹದಿನೈದು ಹುಡುಗರು ಮಾತ್ರ ಎಸ್ಸೆಲ್ಸಿ ಉತ್ತೀರ್ಣರಾಗಿದ್ದೆವು.
ಎಸ್ಸೆಲ್ಸಿ ಪಾಸಾಗಿ ನಾನು ದಾವಣಗೆರೆಯಲ್ಲಿ ಡಿಪ್ಲೋಮಾ (ಕಮರ್ಷಿಯಲ್ ಪ್ರಾಕ್ಟೀಸ್ ) ಸೇರಿಕೊಂಡೆ. ಅಲ್ಲಿ ಹುಸೇನ್ ಅಂತ ಒಬ್ರು ಲೆಕ್ಟೆರರ್ ಇದ್ರು, ಅಕೌಂಟ್ಸ್ ಪಾಠ ಮಾಡ್ತಾ ಇದ್ದರು. "debit what goes out credit what comes in" ಅಂದೇ ಶುರು ಹಚ್ಚಿಕೊಳ್ಳುತ್ತಿದ್ದ ಪಾಠ. May I come in sir? ಅಂತ ನಾವ್ ಮನವಿ ಮಾಡಿ, ಲೇಟಾಗಿದ್ರೆ "Out" ಅಂತ ಮೇಷ್ಟ್ರು ಹೇಳಿದ್ದಷ್ಟೇ ಕೇಳಿ ಮಾತ್ರ ಗೊತ್ತಿದ್ದ ನಮಗೆ, ಹೋಗ್ಗೋ ಇವನೌನ, ಇದೇನ್ಲೇ "ಒಳಗಾ ಹೊರಗಾ" ಅನ್ನಕತ್ತಾರಲ್ಲಲೇ ಅಂತಿದ್ದೆವು; ನಾವು ಕನ್ನಡದ ಕಂದಮ್ಮಗಳು.
ಮೊತ್ತೊಬ್ರು ಎನ್. ಬಿ. ಸಕ್ರಿ ಅಂತ ಇಂಗ್ಲೀಷ್ ಲೆಕ್ಟೆರರ್ ಇದ್ರು. ಅದ್ಭುತವಾಗಿ ಇಂಗ್ಲೀಷ್ ಸಾಹಿತ್ಯದ ಬಗ್ಗೆ, ಕವಿಗಳ ಬಗ್ಗೆ ಹೇಳುತ್ತಿದ್ದರು. ಕಿಟಕಿ ಪಕ್ಕ ಕುಳಿತಿದ್ದ ನಮ್ಮನ್ನು ಎಬ್ಬಿಸಿ "ಹಾಸ್ಟಲ್ ನಲ್ಲಿರ್ತೀರಾ?" ಅಂದ್ರೆ "ಹೂ" ಅಂತಿದ್ದೆವು. ಯಾಕಂದ್ರೆ ಅವ್ರು ಪಾಠ ಮಾಡುವಾಗ ನಮ್ಮಲ್ಲೇ ಕೆಲವರಿಗೆ ನಿದ್ದೆ ಮಬ್ಬು.. ಸ್ಟಾಫ್ ರೂಮಿಗೆ ಕರೆದು ಬಹಳ ಸೂಕ್ಸ್ಮವಾಗಿ ತಿಳಿ ಹೇಳಿ ಕಳಿಸುತ್ತಿದ್ದರು. ಯಾಕಂದ್ರೆ ಅವರು ಸಹ ಗ್ರಾಮೀಣ ಮಟ್ಟದಿಂದ ಓದಿ ಧಾರವಾಡದ ಯೂನಿವರ್ಸಿಟಿಯಲ್ಲಿ ಎಂ. ಎ.(ಇಂಗ್ಲೀಷ್) ಪದವಿ ಪಡೆದವ ರಾಗಿದ್ದರು . ಒಂದು ವೇಳೆ ಅವರ ಪಾಠ ನೆಟ್ಟಗೆ ಕೇಳಿದ್ದರೆ, ನಮ್ಮ ಕಲಿಕೆ ಮತ್ತು ಬಳಕೆಯ ಇಂಗ್ಲೀಷು, ಈಗಿರುವುದಕ್ಕಿಂತ ಹೆಚ್ಚು ಮೊನಚಾಗಿರುತ್ತಿತ್ತು. ಒಳ್ಳೆಯ ಯು.ಜಿ.ಸಿ ಶ್ರೇಣಿಯ ವೇತನ ಸಿಗುವ ಉಪನ್ಯಾಸಕ ವೃತ್ತಿ ಬಿಟ್ಟು ಈಗವರು ಪೋಲಿಸ್ ಇಲಾಖೆಯಲ್ಲಿ ನೇಮಕಾತಿ ಹೊಂದಿ ಬಯಸಿ ಬಯಸಿ ಸೇವೆ ಸಲ್ಲಿಸುತ್ತಿದ್ದಾರೆ. ಬಹುಶಃ ವೃತ್ತ ಆರಕ್ಷಕ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ "ಶಂಕಿತ ಉಗ್ರ" ರನ್ನು ಮಿಂಚಿನಂತೆ ಸೆರೆ ಹಿಡಿದ ಬೆಂಗಳೂರಿನ ಪೋಲಿಸ್ ತಂಡದಲ್ಲಿ ಅವರೂ ಒಬ್ಬರಾಗಿದ್ದರು. ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಗೆ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆಗೀಗ ಫೋನಿಗೆ ಸಿಗುತ್ತಾರೆ.
ನಾವು ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಬಿಸಿನೆಸ್ ಮ್ಯಾನೇಜ್ಮೆಂಟ್ ವಿಷಯಕ್ಕೆ ಲೋಕೇಶ್ ರೆಡ್ಡಿ ಎನ್ನುವ ಪಾರ್ಟ್ ಟೈಮ್ ಲೆಕ್ಚೆರರ್ ಒಬ್ಬರು ಬರುತ್ತಿದ್ದರು. ಬೇರೊಂದು ಕಾಲೇಜಿನಲ್ಲಿ ಪೂರ್ಣ ಕಾಲಿಕವಾಗಿ ಕಾಮರ್ಸ್ ಹೆಚ್. ಓ. ಡಿ. ಆಗಿದ್ದರೂ ಇತರೇ ಕಾಲೇಜುಗಳಿಗೆ ಪಾಠ ಹೇಳಿ ಬರುತ್ತಿದ್ದರು. ಅವರ "ವ್ಹಾಟ್ ವೀ ಕಾಲ್ ಇಟ್ ಯಾಜ್" ಎನ್ನುವ ಶೈಲಿ ಪಾಠದ ಮಧ್ಯೆಯ ಆಕರ್ಷಣೆ ಆಗಿತ್ತು. ಇಷ್ಟು ಚೆಂದನೆ ಇಂಗ್ಲೀಷು ಮಾತಾಡುವ, ಕಲಿಸಿಕೊಡುವ ಉಪನ್ಯಾಸಕರಿದ್ದರೂ ನಮ್ಮ ಇಂಗ್ಲೀಷು ಯಾಕಷ್ಟು ಖರಾಬ್ ಇದೆ? ಎನ್ನುವುದೇ ನಮ್ಮ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಮತ್ತು ಸೋಮಾರಿತನವಾಗಿತ್ತು. ಅದೊಮ್ಮೆ ಲೋಕೇಶ್ ರೆಡ್ಡಿಯವರು ಕನ್ನಡ ಮಾಧ್ಯಮದಲ್ಲೇ ಓದಿದ ತಾವು ತಮ್ಮ ವಿಧ್ಯಾರ್ಥಿ ದೆಸೆ ಯಲ್ಲಿನ ಪ್ರಸಂಗವನ್ನು ಹೇಳುತ್ತಿದ್ದರು. ಅದನ್ನು ಅವರ ಮಾತಿನಲ್ಲೇ ಕೇಳಿ;
"ನಾವಿನ್ನು ಪಿಯುಸಿ ಓದುತ್ತಿದ್ದೆವು. ನಾನು ಎಷ್ಟು ದಡ್ಡನೆಂದರೆ, ಪಿಯುಸಿ ಕಾಮರ್ಸ್ನಲ್ಲಿ ಎಕನಾಮಿಕ್ಸ್ ವಿಷಯವನ್ನು ಹಲವು ಬಾರಿ ಫೇಲ್ ಆಗಿದ್ದೆ. ಆಮೇಲೆ ಪಾಸು ಮಾಡಿಕೊಂಡು ಡಿಗ್ರಿ ಮುಗಿಸಿದೆ. ಎಮ್. ಕಾಂ. ಗೆ ಪ್ರವೇಶವೂ ಸಿಕ್ಕಿ ಮೊದಲ ವರ್ಷ ಪಾಸೂ ಆದೆವು. ಎರಡನೇ ವರ್ಷದ ಎಂ. ಕಾಂ. ನಲ್ಲಿ ಮುಂದೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಎದುರಿಗೆ ನಿಂತು ಪಾಠ ಮಾಡುವ ಕ್ರಮವನ್ನು ಕಲಿಯುವ ಸಲುವಾಗಿ ಮತ್ತು ಆ ಮಟ್ಟಿಗೆ ಇಂಗ್ಲೀಷನ್ನು ಮಾತಾಡುವುದನ್ನು ಕಲಿಯಲೇಬೇಕಾದ ಅನಿವಾರ್ಯ ತೆಗೆ ಬಿದ್ದೆವು. ಸರಿ, ನಾನು ನಮ್ಮ ರೂಂ ಮೇಟ್ಸ್ ಎಲ್ಲರು ಮಾತಾಡಿಕೊಂಡು "ಇನ್ಮೇಲೇ ಎದ್ದ್ಯಾ ಬಿದ್ಯಾ, ಊಟ ಆಯ್ತಾ, ಎಲ್ಲಿಗೆ ಹೋಗಿದ್ದಿ, ಯಾಕ್ ಬಂದಿ, ತರಕಾರಿ ತಗೊಂಡು ಬಾ, ಅಡುಗೆ ಮಾಡು, ಪಾತ್ರೆ ತೊಳಿ, ಕಸ ತೆಗಿ, ಹೀಗೆ ಏನೇ ಮಾತಾಡಿದ್ರು ಇಂಗ್ಲೀಷಿನಲ್ಲೇ ಮಾತಾಡ್ ಬೇಕು ನೋಡ್ರಪ್ಪಾ" ಅಂದುಕೊಂಡ ಗೆಳೆಯರೆಲ್ಲರೂ ಶುರು ಹಚ್ಚಿಕೊಂಡೆವು. ಯಾವ ಪರಿ ಅದರ ಪರಿಪಾಲನೆ ಅಂದ್ರೆ ಅಪ್ಪಿತಪ್ಪಿ ಒಬ್ಬರು ಕನ್ನಡ ಪದ ಬಳಸಿದರೆ ಒಂದೊಂದು ಬಗೆಯ ಪೆನಾಲ್ಟಿ ಬೀಳುತ್ತಿತ್ತು.
ಅದೊಂದು ದಿನ ಒಂದು ವಿಷಯವಾಗಿ ರೂಮಲ್ಲಿ ಏನೋ ಜೋರ್ದಾರ್ ಚರ್ಚೆ ನಡೀತಿತ್ತು. ಅದು ಹರಕಾ ಪರಕಾ ಇಂಗ್ಲೀಷಿನಲ್ಲೇ. ಕಂಡೀಶನ್ ಆಗಿತ್ತಲ್ಲ? ಒಂದೇ ಒಂದು ಪದ ಕನ್ನಡ ಪದ ಬಳಸೋ ಹಾಗಿಲ್ಲ. ಸರಿ, ಆ ಸಂಧರ್ಭದಲ್ಲಿ ನಾವು ಕನ್ನಡದಲ್ಲಿ ಬಳಸುತ್ತೇವಲ್ಲ? "ಯಾರಪ್ಪನ ಮನೆ ಗಂಟು ಏನು ಹೋಗ್ಬೇ ಕಾಗೈತಿ" ಅಂತ, ಅದನ್ನು ಇಂಗ್ಲೀಷಿನಲ್ಲೇ ಇದ್ದ ಗಾದೆಗಳ ರೀತಿಯಲ್ಲಿ ಬಳಸಬೇಕು. ಇಂಗ್ಲೀಷಿನಲ್ಲಿ ಏನಂತಾರೆ ಗೊತ್ತಿಲ್ಲ. ನಮ್ಮ ಹತ್ತಿರ ಇದ್ದ ಪುಸ್ತಕ ಹುಡುಕಿ ಹೇಳಬೇಕೆಂದರೆ, ನೋಡು ವಂತಿಲ್ಲ. ಭಾಷೆ ಮುರಿಬೇಕೆಂದರೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಆದರೂ ಏನಾದ್ರೂ ಹೇಳಲೇಬೇಕು. ಕನ್ನಡದಲ್ಲೇ ಇದ್ದದ್ದನ್ನು ಯಥಾವತ್ತಾಗಿ ತರ್ಜುಮೆ ಮಾಡಿಯಾದರೂ ಹೇಳಲೇ ಬೇಕು. ಸರಿ ಹೇಳಿದೆ; whose father's what bundle goes out"
ಅಂಥವನು ಎಂ. ಕಾಂ. ಮುಗಿಸಿ ಹೊರ ಬಂದಾಗ ನನ್ನ ಕೊರಳಲ್ಲಿ ಪದಕಗಳಿದ್ದವು. ಎರೆಡೆರಡು ಬಾರಿ ಅಮೇರಿಕಾಗೆ ಹೋಗಿ ಬಂದೆ. ಕಾಲೇಜುಗಳಲ್ಲಿ ಅಚ್ಚುಕಟ್ಟಾಗಿ ಪಾಠ ಮಾಡುತ್ತೇನೆ. ಕಾಮರ್ಸ್ ವಿಭಾಗದ ಮುಖ್ಯಸ್ಥನಾಗಿದ್ದೇನೆ. ನನಗೀಗ 41 ವರ್ಷ. ಬಿಲ್ಕುಲ್ ಕಾನ್ಫಿಡೆಂಟ್. ಆದ್ದರಿಂದ ನೀವು ಪುಣ್ಯ ಮಾಡೀದಿರಿ.. ನಿಮ್ ತಂದೆ ತಾಯಿ ಶಾಲೆಗೆ ಸೇರಿಸುವಾಗಲೇ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದ್ದಾರೆ. ಇನ್ನು ಕೆಲವರು ನನ್ನಂತೆ ಕನ್ನಡ ಭಾಷೆಯಿಂದ ಬಂದವರು ಯಾವುದಕ್ಕೂ ನಿಮ್ಮ ತಾಳ್ಮೆ ಮತ್ತು ಡೆಡಿಕೇಶನ್ ಕಳೆದುಕೊಳ್ಳದಿರಿ. ಅಬ್ಬಬ್ಬಾ ಅಂದ್ರೆ ಮೊದಲಿಗೆ ನಾಲ್ಕು ಮಂದಿ, ಸ್ನೇಹಿತರು ಒಂದಷ್ಟು ನಗಬಹುದು ಅಷ್ಟೇ ತಾನೇ. ಆಮೇಲಾಮೇಲೆ ನಿಮಗದು ಅಭ್ಯಾಸವೂ ಆಗುತ್ತೆ, ಕಲಿಯುವ ಅನಿವಾರ್ಯವೂ ಆಗುತ್ತೆ. ಬಿ ಬ್ರೇವ್. "
ಈ ಸನ್ನಿವೇಶ ಕೇಳಿ ಹದಿನಾರು ವರ್ಷಗಳೇ ಕಳೆದಿದ್ದವು. ಮೂರು ವರ್ಷದ ಕೆಳಗೆ ನಮ್ಮ ಹಳೇ ಗೆಳೆಯರು ಸೇರಿ ಇನ್ನೊಬ್ಬ ಗೆಳೆಯ ಪರಶುರಾಮ್ (ಪುರಾಣದ ಪರಶುರಾಮನ ಅಸ್ತ್ರ ಕೊಡ್ಲಿ ಆದ್ದರಿಂದ ನಾವೆಲ್ಲಾ ಅವನಿಗೆ ಶಾರ್ಟ್ ಆಗಿ "ಕೊಡ್ಲಿ" ಅನ್ನುತ್ತೇವೆ) ಮದುವೆಗೆ ದಾವಣಗೆರೆಗೆ ಹೋದಾಗ ಲೋಕೇಶ್ ರೆಡ್ಡಿ ಸಿಕ್ಕಿದ್ದರು. ನಾವೆಲ್ಲಾ ಸೇರಿ "ಸ್ವಲ್ಪ ಮಟ್ಟಿಗೆ ಇಂಗ್ಲೀಷು ಅರ್ಥ ಮಾಡ್ಕಂಡು ಒಂಚೂರು ಮಾತಾಡ್ತೇವೆ. ಏನ್ ಮಾಡ್ತೀರಿ, ಕರ್ನಾಟಕ ಸರ್ಕಾರದಲ್ಲಿ ಕನ್ನಡ ಆಡಳಿತ ಭಾಷೆ ಆದ್ದರಿಂದ ಮಾತಾಡದೇ ಇದ್ರೂ ಪರವಾಗಿಲ್ಲ ಬಿಡಿ ಸರ್, ಯಾರಪ್ಪನ ಮನೆ ಗಂಟು ಏನು ಹೋಗ್ಬೇಕಾಗೈತಿ" ಅಂದು ನೆನಪು ಮಾಡಿದೆವು. ಗಡ್ಡ ನೀವಿಕೊಂಡು ನಕ್ಕರು. ಮದುವೆಯಲ್ಲಿ ಪರಶುರಾಮನ ಹೆಂಡತಿಗೆ ಮದುವೆಗೆ ಬಂದ ಹೆಂಗಸರು, ಅವರ ಗೆಳತಿಯರು "ಗಂಡನ" ಹೆಸರು ಕೇಳುತ್ತಿದ್ದರು. ನಾವು ಪರಶುರಾಮನನ್ನು "ಕೊಡ್ಲಿ" ಅಂತಲೇ ಕೂಗಿ, "ಹೆಂಡತಿ" ಹೆಸರು ಕೇಳಿದರೆ ಪಕ್ಕದಲ್ಲೇ ಇದ್ದ ಆಯಮ್ಮ ಪಕ್ಕಾ ಕನ್ನಡ ಭಾಷೆಯಲ್ಲೇ "ಕುಡುಗೋಲು" ತರ್ಲಾ ಅಂತ ಅಂದ್ರೇನು ಗತಿ? ಅದಕ್ಕೆ ಅಪ್ಪಿತಪ್ಪಿ ಗೆಳೆಯರು ಯಾರೊಬ್ಬರೂ ಹೆಸರು ಕೇಳಲಿಲ್ಲ.
ಮೊನ್ನೆ ಲೋಕೇಶ್ ರೆಡ್ಡಿ ಅವರಿಗೆ ಕರೆ ಮಾಡಿ ಮಾತಾಡುತ್ತಿದ್ದೆ, ಇಂಗ್ಲೀಷು ಪುರಾಣ ಜ್ಞಾಪಿಸಿಕೊಂಡೆ. "ಆಗಲೇ ನಾನು ಕಾಲೇಜು ಬಿಟ್ಟೇ ಹತ್ತೊಂಬತ್ತು ವರ್ಷ ಮತ್ತು ನೌಕರಿಗೆ ಬಂದು ಹದಿನೇಳು ವರ್ಷ ವಾದವು ಸರ್ " ಅಂದೆ. "ನನ್ನದೂ ಇನ್ನು ಒಂದೇ ವರ್ಷ ಇದೇನಪ್ಪ ಸರ್ವಿಸ್" ಅಂದರು ಲೋಕೇಶ್ ರೆಡ್ಡಿ ಮೇಷ್ಟ್ರು.
ನಾನು ನೌಕರಿಗೆ ಬಂದ ಹೊಸತರಲ್ಲಿ ಹಾಗೂ ಇಲ್ಲಿಯವೆರೆಗೆ ಅಗತ್ಯವಾದ ಇಂಗ್ಲೀಷು ಭಾಷೆಯ ಕಲಿಕೆ ಮತ್ತು ಉಪಯೋಗಿಸುವಾಗೆಲ್ಲಾ ನನ್ನೆಲ್ಲ ಮೇಷ್ಟ್ರು ಜೊತೆಗೆ ಕೆಲಸ, ಭಾಷೆ ಕಲಿಸಿದ ಶ್ರೀ .ಎ.ಎ. ಹುಲಗೇರಿ, ಶ್ರೀ. ರಾಮರಾವ್ ಕುಲಕರ್ಣಿ, ಅವರಂತೆ ಇನ್ನಿತರ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಸಹುದ್ಯೋಗಿಗಳಾಗಿದ್ದ ಭಗವಾನ್ ದಾಸ್, ವಿಹಾರ್ ಕುಮಾರ್ ಸಹ ನೆನಪಾಗುತ್ತಾರೆ.
******
ಎಲ್ಲಾ ಗುರುಗಳನ್ನ್ ನೆನಪಿಗೆ ತಂದು, ಟಿಪ್ಪಣಿ ಮಾಡಿದ ಹಾಗಿದೆ ನಿನ್ನ ಬರಹ, ಅಮರ್ ಎಲ್ಲಾ ಗುರುಗಳ ದೂರವಾಣಿ ಸಂಖ್ಯೆ ಇದ್ದಲ್ಲಿ ಕಳಿಸು ಮಾರಾಯಾ
ರಾಜಶೇಖರ್
Adu actually, "heloarilla, keloarilla…." antha shuru aagutthe. Haagaagi, "No asker, no teller, whose father what bundle goes!" antha heli College dinagalalli naavoo thumba nagutthiddevu. Lekhanada moolaka nimma ondishtu shikshakarannu smarisiddeeri, thats good. Ondu reethiyalli idu 'Guru Vandane' Amar!
Bhale majaa ide father bundle kathe
channagide
ಚೆನ್ನಾಗಿದೆ ಖುಷೀಯಾಯ್ತು ಓದಿ.
ಆತ್ಮೀಯ ಅಮರ್ ತುಂಬಾ ಚೆನ್ನಾಗಿದೆ, ಗಣ್ಯರೊಂದಿಗೆ ನನ್ನನ್ನು ನೆನಸಿದಕ್ಕೆ ಧನ್ಯವಾದಗಳು, ಇದನ್ನೇ "ಮೇಲೆ ಎತ್ತಿಡು" ಗೊತ್ತಾಗಿಲ್ವಾ? (keep it ,,,,,,,,,,,)
ಇಂಗ್ಲೀಷು ಅಂದರೆ ಹಾಗೆ, ಬಹಳ ಕಷ್ಟ. ಹೇಳೋದೊಂದು ಬರೆಯೋದೊಂದು.. ಕನ್ನಡದ ತರ ಅಲ್ಲ.. ಉದಾ: ಕಟ್, ಪುಟ್. (cut, put).. ಮೊನ್ನೆ ಒಬ್ಬರು ನನಗೆ ಪ್ರಶ್ನೆ ಮಾಡಿದರು.. "ಅಟಲ್ ಬಿಹಾರಿ ವಾಜಪೇಯಿ ಭಾರತದ ಎಷ್ಟನೇ ಪ್ರಧಾನ ಮಂತ್ರಿಯಾಗಿದ್ದರು?" ಇದನ್ನು ಇಂಗ್ಲೀಷಿಗೆ ಯತಾವತ್ತಾಗಿ ತರ್ಜುಮೆ ಮಾಡಿ ಅಂದ್ರು… ನಾನು ಕಕ್ಕಾ.. ಬಿಕ್ಕಿ…. ಒಂದು ದಿನವೆಲ್ಲಾ… ಯೋಚನೆ ಮಾಡಿದೆ.. ನನಗೆ ತಿಳಿಲಿಲ್ಲ… ಇಂಗ್ಲೀಷ್ ಪ್ರೋ… ಕೇಳಿದೆ… ಅವರು ಬಹಳ ಕಷ್ಟ ಪಟ್ಟು ಒಂದು ಉತ್ತರ ಹೇಳಿದರು… "ATAL BIHARI VAJPAYEE AS A PRIME MINISTER OF INDIA STANDS IN WHICH RANK?" ನನಗೆ ಅರ್ಧಂಬರ್ಧ ಸರಿ ಅನಿಸಿತು… ಯಾಕೆಂದರೆ ನಮಗೆ ಗೊತ್ತಿರೋದೆ ಅಷ್ಟು…
ನಿಮ್ಮ ಲೇಖನ ಓದಿ ಬಹಳ ಖುಷಿಯಾಯಿತು.. ಲೇಖನ ಓದುತ್ತಿರುವಾಗ ನಮ್ಮ ಮೇಷ್ಟ್ರುಗಳು ನಮ್ಮ ಬಾಲ್ಯದ ದಿನಗಳು ಕಣ್ಣ ಮುಂದೆ ಹಾಗೆ ಬಂದು ಮಿಂಚಿನಂತೆ ಮರೆಯಾದವು… ಧನ್ಯವಾದಗಳು… ಅಮರ್ ಜೀ….