ಜನ್ನನ ಯಶೋಧರ ಚರಿತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನವಾದ ಕೃತಿ. ಕಾವ್ಯದ ವಸ್ತು ಮತ್ತು ರೂಪದಲ್ಲೂ, ಅಭಿವ್ಯಕ್ತಿಯ ಸ್ವರೂಪದಲ್ಲೂ, ಕಾವ್ಯೋದ್ಧೇಶದಲ್ಲೂ ಇದೊಂದು ಭಿನ್ನ ದಾರಿಯನ್ನೇ ತುಳಿದದೆ. ಸಾಂಪ್ರದಾgಯಿಕ ಜೈನಕಾವ್ಯಗಳಿಗಿಂತಲೂ ಮಿಗಿಲಾಗಿ ಜೀವದಯೆ ಜೈನಧರ್ಮಂ ಅನ್ನುವ ಆಶಯದೊಂದಿಗೆ ಇಡೀ ಕಾವ್ಯ ಕಂದಪದ್ಯಗಳಲ್ಲಿಯೇ ರಚಿತವಾಗಿದೆ. ಬೆರಳೆಣಿಕೆಯಷ್ಟು ವೃತ್ತಗಳಿವೆ. ಸಮಕಾಲೀನ ಸಂದರ್ಭದಲ್ಲಿ ಜರುಗುತ್ತಿದ್ದ ಧಾರ್ಮಿಕ ಮತ್ತು ರಾಜಕೀಯ ಪಲ್ಲಟಗಳಿಂದಾಗಿ ಜನ್ನ ಅನುಸರಿಸಿದ ಮತ ಪ್ರತಿಪಾದನೆಯ ಮಾರ್ಗ ಆ ಕಾಲದ ಸರಿದಾರಿ ಎನಿಸಿತು. ಈ ಕೃತಿಯ ಮತಪ್ರತಿಪಾದನೆಯ ತತ್ವವನ್ನು ಹೊಸನೋಟದಲ್ಲಿ ನೋಡಬೇಕಾದ ತುರ್ತು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಜೈನ ಎಂಬ ಪದ ಮರೆಮಾಚಿ ನೋಡಿದಾಗ “ಜೀವದಯೆ ಮಾನವಧರ್ಮಂ” ಎಂಬ ಹೊಸ ಹೊಳಹುಗಳೊಂದಿಗೆ ಯಶೋಧರ ಚರಿತ ಕಾವ್ಯವನ್ನು ನೋಡಲೇಬೇಕಾದ ವಿವೇಕ ಪ್ರಮುಖವಾದುದು. ಅತಿ ಮುಖ್ಯವಾಗಿ ಈ ಕಾವ್ಯದ ಧಾರ್ಮಿಕ ಕವಚವನ್ನು ಒಡೆದು ಒಳಗಿನ ತಿರುಳನ್ನು ನೋಡಿದರೆ ಇಲ್ಲಿ ಕಾಣುವುದು ಹಿಂಸೆ ಮತ್ತು ಕಾಮ. ಒಂದು ಕಡೆ ಮಾರಿಗುಡಿಯ ವರ್ಣನೆ , ಪ್ರಾಣಿಬಲಿ, ಮೂಕಜೀವಿಗಳ ಆಕ್ರಂದನ, ಆತ್ಮಬಲಿಯ ಪ್ರಕಾರಗಳು. ಇನ್ನೊಂದು ಕಡೆ ಯಶೋಧರ-ಅಮೃತಮತಿಯರ ಸಮಾಗಮ ಮತ್ತು ಅಷ್ಟಾವಂಕ-ಅಮೃತಮತಿಯರ ಸಮಾಗಮದ ಎರಡು ಮಾದರಿಗಳು ಇಲ್ಲಿ ಮುಖಾಮುಖಿ ಆಗುತ್ತವೆ. ದಾಂಪತ್ಯದ ಒಳಗಿನ ಮತ್ತು ಹೊರಗಿನ ಗಂಡು-ಹೆಣ್ಣು ಸಂಬಂಧಗಳು ಲೌಕಿಕ ಬದುಕಿನ ಮುಖ್ಯ ಸಂಗತಿಗಳೆನೆಸುತ್ತವೆ. ಇಲ್ಲಿ ಹಿಂಸೆ ಮತ್ತು ಭೋಗ ಪ್ರತ್ಯೇಕವಾಗಿ ಉಳಿಯುವುದಿಲ್ಲ. ಹಾಗಾಗಿಯೇ ಕಾಮದ ಅಭಿವ್ಯಕ್ತಗಳನ್ನು ಕಥನದ ಒಳಗೆ ತಂದು ಚರ್ಚಿಸುವುದು ಜನ್ನನಿಗೆ ಲೌಕಿಕದ ಗ್ರಹಿಕೆಗೆ ಅಗತ್ಯವಾಗಿತ್ತು. ಹಿಂಸಾರತಿ ಎನ್ನುವುದು ಲೌಕಿಕದ ನೆಲೆಯಲ್ಲಿ, ಪ್ರಾಣಿಬಲಿಯ ಸನ್ನಿವೇಶದಲ್ಲಿ ಅಥವಾ ಮನಸ್ಸಿಗೆ ಚುಚ್ಚಿ ನೋವುಂಟುಮಾಡುವ ಕ್ರಿಯೆಯಲ್ಲಿ ಇರಬಹುದು.
ಹಿಟ್ಟಿನ ಕೋಳಿಯನ್ನು ಬಲಿಕೊಡುವ ಪ್ರಸಂಗದಲ್ಲಿ ಸಂಕಲ್ಪಹಿಂಸೆ ಎನ್ನುವ ಪರಿಭಾಷೆಯೊಂದು ರೂಪಿತವಾಗಿದೆ. ಇದು ನಮ್ಮ ಲೌಕಿಕ ಬದುಕಿನ ಹಿಂಸೆಯ ಒಂದು ಮುಖ್ಯ ಮಾದರಿ. ಮೊದಲು ಸಂಕಲ್ಪ ಹಿಂಸೆ ಅದರ ಅನುಷ್ಠಾನದಿ ಮಾಡುವ ಕ್ರೌರ್ಯ, ಲೌಕಿಕ ಜಗತ್ತಿನಲ್ಲಿ ನಾವು ಕಟ್ಟಿಕೊಳ್ಳುವ ಸಂಕಲ್ಪಗಳು ಎಂಥವು? ಅವುಗಳಿಂದ ಒದಗುವ ಅನಾಹುತಗಳು ಯಾವ ಬಗೆಯವು? ಅವನ್ನು ನಿವಾರಿಸಲು ನಾವು ನಡೆಸುವ ಕಾರ್ಯತಂತ್ರಗಳು, ವಂಚನೆಗಳು, ಒದ್ದಾಟಗಳು ಯಶೋಧರಚರಿತದ ಭವಾವಳಿಗಳಂತೆ ಇವೆಲ್ಲಾ ಲೌಕಿಕ ಬದುಕಿನಲ್ಲಿ ಅನೇಕ ಜನ್ಮಗಳನ್ನು ತಾಳುತ್ತವೆ. ಲೌಕಿಕ ಜಗತ್ತಿನ ಒಳಗೆ ನಾವು ಕಟ್ಟಿಕೊಳ್ಳುತ್ತಿರುವ ಸ್ವರ್ಗ-ನರಕಗಳು ಯಾವ ರೀತಿಯವು? ನಾವು ರೂಪಿಸುವ ಮಾನಸಿಕ ಜಗತ್ತುಗಳು ಹೇಗೆ ಇರಬೇಕು? ಎನ್ನುವ ಹೊಳಹೇ ಇಂತಹ ಕಾವ್ಯಗಳ ಒಳನೋಟವಾಗಿದೆ. ಹಿಂಸೆಯ ಬಹಿರಂಗ ರೂಪವಾದ ಪ್ರಾಣಿಬಲಿನಿಷೇಧ ಗಾಂಧೀಜಯಂತಿಯ ಒಂದು ದಿನದ ಮಟ್ಟಿಗೆ ಆಚರಣೆಯಾಗಿ ತೋರುವ ಪ್ರಸ್ತುತದಲ್ಲಿ ಜನ್ನನ ಯಶೋಧರಚರಿತೆ ಮತ್ತೆ ಮತ್ತೆ ಕಾಡುವ ಮೂಲಕ ನಮ್ಮನ್ನು ಒಳಗುಮಾಡಿಕೊಳ್ಳುತ್ತದೆ. ಕಾವ್ಯದ ಹಿಟ್ಟಿನ ಕೋಳಿ ಬಲಿಯ ಮಾದರಿ ಹಾಗೂ ಅದರ ಕು ಕ್ಕು ಕ್ಕೋ ಎಂಬ ಉಲಿಯು ಈಗಲೂ ನಮ್ಮ ನಡುವೆ ದಿನನಿತ್ಯದ ಜೀವನದಲ್ಲಿ ಮಾರ್ದನಿಗೂಡುತ್ತದೆ. ಕಳೆದು ಹೋದ ಜೀವ ಚೇತನ ಗಾಂಧೀ ನೋವಿನ ಧ್ವನಿಯಾಗಿ ಬೆಂತರದಂತೆ ಅದು ನಮ್ಮನ್ನು ಅಣಕಿಸುತ್ತದೆ. ಈ ಕಾವ್ಯ ಹುದುಗಿಸಿಕೊಂಡಿರುವ ಸಂಕಲ್ಪ ಹಿಂಸೆ ಎನ್ನುವ ಪರಿಕಲ್ಪನೆಯು ಸಮಕಾಲೀನ ಸಮಾಜದಲ್ಲಿ ಬಹುರೂಪವಾಗಿ ಅನಾವರಣಗೊಂಡಿದೆ . “ಸಂಕಲ್ಪ ಹಿಂಸೆಯೊಂದರೋಳ್ ಆಂ ಕಂಡೆಮ್ ಭವದ ದುಃಖಮ್ ಉಂಡೆಂ” ಮಾರಿದತ್ತನಿಗೆ ಹೇಳುವ ಅಭಯರುಚಿಕುಮಾರನ ಈ ಮಾತು ನಮ್ಮ ಕಾಲದ ಆಧುನಿಕ ಮಾರಿದತ್ತರಿಗೆ ಅರಿವಾಗುವುದು ಯಾವಾಗ? ಎಂಬುದು ಯಕ್ಷಪ್ರಶ್ನೆಯಾಗಿ ಜಗದ ಕಾಳಜಿ ಇಮ್ಮಡಿಯಾಗಬೇಕು. ಅಧಿಕಾರ, ಧರ್ಮ, ಸಂಪತ್ತಿನ ಕ್ರೋಢಿಕರಣ, ಅಭಿವೃದ್ಧಿಯ ತಾರಕಮಂತ್ರಗಳ ದುರ್ಬಳಕೆಯ ಚಾಣಾಕ್ಷತೆ, ಆಧುನಿಕ ಸ್ಪರ್ಶದಿ ಹೊಸಸಮಸ್ಯೆಗಳ ಮರುಸೃಷ್ಠಿಯ ಗೋಚರ ಇವು ನಿತ್ಯವೂ ಹಿಂಸೆಯ ಬಹುರೂಪಗಳಲ್ಲಿ ಅವತಾರ ಎತ್ತುತ್ತಿವೆ. ಹಾವು,ಮೊಸಳೆ,ಹೋತ,ಕೋಣಗಳು ಕೇವಲ ಜನ್ಮಾಂತರದ ಪ್ರಾಣಿಗಳಲ್ಲ ಆಧುನಿಕ ಮಾರಿದತ್ತರು ನಮ್ಮ ನಡುವೆ ಈಗಲೂ ನರಬಲಿಗಳನ್ನು ತೆಗೆದುಕೊಳ್ಳುತ್ತಿರುವುದರ ದ್ಯೋತಕ.
ನಿತ್ಯ ಬದುಕಿನ ಒಳಗೆ ಒಂದಿಲ್ಲೊಂದು ರೀತಿಯ ಹಿಂಸೆಯ ರೂಪಗಳು ಜಗತ್ತನ್ನು ವ್ಯಾಪಿಸಿರುವ ಪ್ರಸ್ತುತದಲ್ಲಿ ಜನ್ನನ ಕೃತಿ ನಮಗೆ ಆಪ್ತವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಧವರ್i, ಜನಾಂಗದ ಹೆಸರಿನಡಿ ಶ್ರೇಷ್ಠ-ಕನಿಷ್ಟದ ಈರ್ಷೆ ರೂಪಿತವಾಗಿ ಜನರ ಬದುಕನ್ನು ಬಿಡದೆ ಕಾಡುತ್ತಿದೆ.ಹಲವು ದೇಶಗಳ ಗಡಿಭಾಗದ ಬದುಕು ನಿತ್ಯಹಿಂಸೆಯಿಂದ ಕೂಡಿದ್ದು ಆತಂಕದಲ್ಲಿ ಸಂಭ್ರಮದ ಬದುಕು ಮಾಯವಾಗಿ ಅಪನಂಬಿಕೆ, ಭಯಮಿಶ್ರಿತ ತಲ್ಲಣಗಳು ವ್ಯಾಪಿಕೊಂಡಿರುವುದು ಕೂಡ ಸಂಕಲ್ಪಿತ ಹಿಂಸೆಯ ಮತ್ತೊಂದು ಮುಖದ ಅನಾವರಣವೇ ಆಗಿದೆ. ಗನ್ನು ಬಾಂಬು ಮುಂತಾದ ಆಧುನಿಕ ಶಸ್ತ್ರಾಸ್ತ್ರಗಳ ಆಂಕ್ರಂದನದ ಮೇಲಾಟದಲ್ಲಿ ಬದುಕು ದುರ್ಬಲಗೊಂಡು ಸಂಬಂಧಗಳ ನಡುವಿನ ಬಿರುಕು ವಿಸ್ತಾರವಾಗುತ್ತಿದೆ. ಈ ಹೊತ್ತಿನಲ್ಲಿ ಇಡಿಯ ಪ್ರಪಂಚ ಅಹಿಂಸೆಯ ಅನುಷ್ಟಾನ ಮಾಡಿ ಜೀವಪರವಾದ ನಿಲುವಿಗೆ ಹಪಹಪಿಸಿ ಎಡತಾಗುತ್ತಿರುವ ಸಮಕಾಲೀನದಲ್ಲಿ ಜನ್ನನ ಜೀವಪರಕಾಳಜಿಯ ವಿವೇಕವನ್ನು ಮತ್ತೆ, ಮತ್ತೆ ಒಳಗು ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಒದಗಿಸುವ ಯಶೋಧರಚರಿತೆ ಬಹುರೂಪದಲ್ಲಿ ಮುಖ್ಯವಾಗುತ್ತದೆ. ಯಶೋಧರಚರಿತೆ ಸಾರಿದ ಸಂಕಲ್ಪ ಹಿಂಸೆ ಕೂಡದು, ಎಂಬ ವಿವೇಕ ಸಾರ್ವತ್ರೀಕರಣಗೊಳ್ಳಬೇಕಿದೆ. ಏಕೆಂದರೆ ಜಗತ್ತಿನ ಮುಕ್ಕಾಲು ರಾಷ್ಟ್ರಗಳು ತಮ್ಮ ಆದಾಯದ ಅರ್ಧಕ್ಕಿಂತ ಹೆಚ್ಚು ಪಾಲನ್ನು ರಕ್ಷಣಾವಲಯಕ್ಕೆ ಖರ್ಚು ಮಾಡುತ್ತಿರುವುದನ್ನು ಗಮನಿಸಿದರೆ ಹಿಂಸೆಯ ಬಹುರೂಪತ್ವ ಗೋಚರವಾಗುತ್ತದೆ. ಜಗತ್ತಿನ ಎಲ್ಲಾ ಧರ್ಮಗಳು ಹಿಂಸೆಯ ಸಂಕಲ್ಪಕ್ಕೆ ವಿರುದ್ಧವಾಗಿಯೇ ಇವೆ. ಹಿಂಸೆ ಮಾಡುವುದು ಮಾತ್ರವಲ್ಲ, ಮಾಡಬೇಕು ಎಂದು ಸಂಕಲ್ಪಿಸುವುದೂ ತಪ್ಪು ಎನ್ನುವ ಜನ್ನನ ಮೌಲ್ಯಯುತ ಮಾನವಪರ ಕಾಳಜಿ ಅನುಕರಣೀಯ. ವಿಶ್ವದ ಎಲ್ಲಾ ಸಂಸ್ಕøತಿಗಳೂ ಹಿಂಸೆಯ ವಿರೋಧಿ ನಿಲುವುಗಳನ್ನೇ ಒಳಗೊಂಡು ರೂಪಿತವಾದವುಗಳು. ಮುಖ್ಯವಾಗಿ ಭಾರತೀಯರ ಸಂಸ್ಕ್ರøತಿ ಹಿಂಸೆ ಅಷ್ಟೇ ಅಲ್ಲ ಹಿಂಸೆಯನ್ನು ಮಾಡಬೇಕೆಂಬುದನ್ನು ರೂಪಿಸಿ ಮನಸ್ಸಿನಲ್ಲಿ ತುಂಬಿಕೊಳ್ಳುವುದು ಕೂಡ ಅಪರಾಧ ಎಂಬುದನ್ನು ಜಗತ್ತಿಗೆ ಸಾರಿದೆ. ಸರ್ವಜನ ಹಿತದ ಅಹಿಂಸಾತತ್ವ ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆ. ಅದು ನಮ್ಮ ನೆಲದ ಅಸ್ಮಿತೆಯೂ ಹೌದು. ಆದರೆ ಸಮಕಾಲೀನ ಜಗತ್ತು ತಲ್ಲಣದಿಂದ ವಿವಿಧ ರೂಪದ ಅಹಿಂಸೆಯ ಸೋಂಕಿಗೆ ಒಳಗಾಗುತ್ತಿರುವ ಈ ಯಂತ್ರ ಯುಗದಲ್ಲಿ ಭಾರತವೂ ಸೇರಿದಂತೆ ವಿಶ್ವಸಮುದಾಯದ ಸಮಾಜದಲ್ಲಿ ಆತಂಕಿತ, ಅತಂತ್ರದ ಹಿಂಸೆಯ ರೂಪಗಳು ಭಿನ್ನವಾಗಿ ನೆಲೆಯೂರುತ್ತಿವೆ. ಫೇಶಾವರದ ಶಾಲಾ ಮಕ್ಕಳ ಮೇಲಿನ ಕ್ರೂರತ್ವ, ವಿದ್ಯೆಕಲಿಯಲು ಹೊರಡುವ ಹೆಣ್ಣುಮಕ್ಕಳ ಅಪಹರಣ, ಅವಳಿಕಟ್ಟಡಗಳ ನಾಶ, ಮತಾಂಧತೆಯಿಂದ ನಡೆಯುವ ಅನಾಹುತಗಳು, ಬದುಕನ್ನು ಭಯಗೊಳಿಸಲು ನಡೆಯುವ ವಿವಿಧ ವಿಚ್ಛಿದ್ರಕಾರಕ ಘಟನೆಗಳು, ಬಹಿಷ್ಕಾರದಂತ ಅಮಾನವೀಯತೆ, ನಿಧಿಯ ಮೌಢ್ಯದಿ ನಡೆಯುವ ನರಮೇಧ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ಹಿಂದುಳಿದ ರಾಷ್ಟ್ರಗಳ ಮೇಲೆ ಶ್ರೀಮಂತ ರಾಷ್ಟ್ರಗಳ ಬಿಗಿ ಹಿಡಿತ, ಬಲಿತವರ ದಬ್ಬಾಳಿಕೆ, ನಾಯಕರೆನಿಸಿಕೊಂಡ ಜನಪ್ರತಿನಿಧಿಗಳ ಕೊಲ್ಲು, ಕಡಿ ಹೇಳಿಕೆಗಳು, ವ್ಯಾಪಿಸುತ್ತಿರುವ ನೈತಿಕದಾರಿದ್ರ ಇವೆಲ್ಲವೂ ಹಿಂಸೆಯ ಸಂಕಲ್ಪಿತ ಬಹುರೂಪಗಳೇ, ಇವು ತಂದೊಡ್ಡುವ ಅಪಾಯ ಎಂದಿಗೂ ಜಿವ ವಿರೋದವಾಗಿಯೇ ಇರುತ್ತದೆ. ಸ್ವಚ್ಚ, ಪ್ರಾಮಾಣಿಕ ಮತ್ತು ತತ್ವ ರಾಜಕಾರಣ ಕ್ರಮದ ಸುಳಿವನ್ನು ಈ ಕೃತಿ ಅಭಿವ್ಯಕ್ತಿಸುತ್ತದೆ. ಧರೆಯನ್ನು ಪಾಲಿಸಲು ಅರ್ಥಾಥ್ ಆಡಳಿತ ನೀಡಲು ಕವಿ ಕಟ್ಟಿ ಕೊಡುವ “ನಿರ್ಮಲಧರ್ಮದಿಂದೆ ಪಾಲಿಸು ಧರೆಯಂ” ಎಂಬ ಮಾತಿನಲ್ಲಿನ ನಿರ್ಮಲತೆಯು ಒಂದು ವಿವೇಕದ ಮಾದರಿಯಾಗಿದೆ. ಈ ಮಾದರಿಯನ್ನು ವಿವಿಧ ಮಗ್ಗಲುಗಳಿಂದ ನೋಡುವ ಮೂಲಕ ಆಧುನಿಕ ರಾಜಕಾರಣ ಸಾಗಬೇಕಾದ ಪಥವನ್ನು ಕಂಡುಕೊಳ್ಳಬೇಕಾದ ತುರ್ತಿದೆ.
ಯಶೋಧರ ಚರಿತ ಒಳಗೊಂಡಿರುವ ಮತ್ತೊಂದು ಪರಿಕಲ್ಪನೆ ಜೀವಶ್ರಾದ್ಧ. ಸಂಕಲ್ಪಹಿಂಸೆಯ ಫಲಿತದ ಈ ನಿರೂಪಣೆ ಒಂದು ಅದ್ಭುತ ರೂಪಕ. ಈ ಜೀವಶ್ರಾದ್ಧದ ರೂಪಕವನ್ನು ನಮ್ಮ ಆಧುನಿಕ ಲೌಕಿಕ ಬದುಕಿಗೆ ಅನ್ವಯಿಸಬಹುದು. ಈ ಹೊತ್ತಿನ ನಮ್ಮ ಸಮಾಜದ ಬಹುಪಾಲು ಜನರ ಬದುಕು ಜೀವಶ್ರಾದ್ಧದಂತೆ ತೋರುತ್ತಿದೆ. ಅರ್ಧ ಬದುಕು ಜೀವ ಹಿಡಿದಿದ್ದರೆ, ಇನ್ನರ್ಧ ಬದುಕು ಸತ್ತು ಹೋಗಿದೆ. ಅರ್ಧ ಬದುಕಿಗಾಗಿ ದಿನನಿತ್ಯ ಶ್ರಾದ್ಧ ಮಾಡುವ ಬಡವರು, ಶೋಷಿತರು, ಅಸಹಾಯಕರು, ಅಮಾಯಕರು ಸಮಾಜದಲ್ಲಿ ಗುರುತಿಸಿರದ ಅದೆಷ್ಟೋ ಅಂಚಿನ ಸಮುದಾಯದವರು ಹೀಗೆ ಎಲ್ಲವನ್ನು, ಎಲ್ಲರನ್ನೂ ಒಳಗೊಂಡ ಸಾಮಾಜಿಕ ಬದುಕನ್ನು ಈ ರೂಪಕ ಪ್ರತಿಬಿಂಬಿಸುತ್ತದೆ. ನಮ್ಮ ತೋರಿಕೆಯ ಆಚರಣೆಗಳು, ಪ್ರದರ್ಶಾನಾತ್ಮಕ ಹಮ್ಮಿನ ಅರ್ಚನೆಗಳು, ಭೀüಕರ ಭರವಸೆಯ ಭಾಷಣ, ಹುಸಿ ಆಶಾವಾದಿತ್ವದಿ ಬದುಕುವ ಕ್ರಮ ಎಲ್ಲವೂ ಒಂದಲ್ಲ ಒಂದು ಬಗೆಯ ಜೀವಶ್ರಾದ್ಧಗಳು. ಕವಿ ನಿರೂಪಿಸಿರುವ ಆತ್ಮನಿರೀಕ್ಷಣೆಯಿಂದ ಉಂಟಾಗುವ ಸ್ವಯಂಪರಿವರ್ತನೆಯನ್ನು ನಮ್ಮ ಆಧುನಿಕ ಚಂಡಮಾರಿ ಮತ್ತು ಮಾರಿದತ್ತರು ಅರಿಯಬೇಕಾದ ಜರೂರಿದೆ ಇಲ್ಲವಾದಲ್ಲಿ ಜನ್ನನ ಹಿಟ್ಟಿನ ಕೋಳಿಯ ಕು,ಕ್ಕು,ಕ್ಕೂ ಎಂಬ ಹಿಂಸೆಯ ಉಲಿ ವಿವಿಧ ರೂಪಗಳಲ್ಲಿ ಜನರನ್ನು ನಿತ್ಯವೂ ಕೊಲ್ಲುತ್ತಲೇ ಇರುತ್ತದೆ. ಕೊಂದು ಕೂಗುತ್ತಲೇ ಇರುತ್ತದೆ.
-ದೊರೇಶ ಬಿಳಿಕೆರೆ
ಚೆನ್ನಾಗಿದೆ ಲೇಖನ. ಕಾರ್ನಾಡರ, ಯಶೋಧರ ಚರಿತ ಆಧಾರಿತ ಹಿಟ್ಟಿನ ಹುಂಜ ನಾಟಕ ಓದಿದ್ದೆ ಮತ್ತು ನೋಡಿದ್ದೆ.
ನಿಮ್ಮ ವಿವರಣೆ, ಇಂದಿನ ಕಾಲದ ಆಗು ಹೋಗುಗಳಿಗೆ, ಈ ಕೃತಿಯೊಂದಿಗೆ ನಿಮ್ಮ ತುಲನೆ ಉಚಿತವಾಗಿದೆ.