ಲೇಡೀಸ್ ಕ್ಲಬ್ ನಲ್ಲಿ ನವರಾತ್ರಿ ಉತ್ಸವ. ಕೈಯ್ಯಲ್ಲಿ ಪೂಜಾ ಸಾಮಗ್ರಿ ಹಿಡಿದು ಹಿಡಿದು ಗಡಿಬಿಡಿಯಲ್ಲೇ ಹೊರಟಿದ್ದಳು ಕವನ. ಹಿಂದಿಂದ ಬಂದ ಬೈಕೊಂದು ಅವಳನ್ನು ದಾಟಿಕೊಂಡು ನಾಲ್ಕು ಮಾರು ಮುಂದೆ ನಿಂತಿತು. ಬೈಕ್ ಸವಾರ ಹೆಲ್ ಮೆಟ್ ತೆಗೆದು ಸಣ್ಣಗೆ ನಕ್ಕರು. ಈ ವ್ಯಕ್ತಿಯನ್ಬ ಎಲ್ಲೋ ನೋಡಿದ ನೆನಪು ಎಲ್ಲಿ ? ತಲೆಕೆರೆದುಕೊಂಡಳು ಕವನ. ಓ ಹೌದಲ್ವಾ ತಾನು ಗೇಟಿಗೆ ಬೀಗ ಸಿಕ್ಕಿಸುವಾಗ ಎದುರುಗಡೆ ಮನೆಯ ಅಂಗಳದಲ್ಲಿ ನಿಂತಿದ್ದರು ಆ ವ್ಯಕ್ತಿ . ಕಳೆದ ವಾರವಷ್ಟೇ ಆ ಮನೆಯ ಹಳೆಬಾಡಿಗೆದಾರರು ಮನೆಕಾಲಿ ಮಾಡಿದ್ದು ಹೊಸದಾಗಿ ಬರುವ ಬಾಡಿಗೆದಾರರಿರಬಹುದು. ಬರುವ ಪೂರ್ವದಲ್ಲೇ ಅಕ್ಕಪಕ್ಕದವರ ಸ್ನೇಹ ಗಳಿಸುವ ಹುನ್ನಾರ, ಪರವಾಗಿಲ್ವೇ ಅಂದುಕೊಂಡ ಕವನ ಹಲ್ಲು ಕಾಣದ ಹಾಗೆ ಸಣ್ಣಗೆ ನಕ್ಕಳು. “ನಮಸ್ತೆ ಮೇಡಮ್ ನನ್ನ ಗುರುತಾಗಲಿಲ್ವಾ?” ತುಂಬಾ ಸ್ನೇಹದ ನಗು ನಕ್ಕರವರು . ಕವನಳಿಗೀಗ ಪೇಚಿಗಿಟ್ಟುಕೊಂಡಿತು. ಹಾಗಿದ್ರೆ ಹಿಂದೆ ಕೂಡ ಈ ವ್ಯಕ್ತಿಯನ್ನು ನಾನು ನೋಡಿದ್ದೇನೆ. ತನಗೆ ಹತ್ತಿರದಿಂದ ಪರಿಚಿತರಲ್ಲದೇ ಆ ವ್ಯಕ್ತಿ ಅಷ್ಟೊಂದು ಸಲಿಗೆಯಿಂದ ಮಾತಾಡೋಕೆ ಸಾಧ್ಯವಾ? ಯಾರೀತ ತಲೆಕೆರೆದುಕೊಂಡಳು. ಎದುರಿಗೆ ಅಷ್ಟೇನು ಎತ್ತರವಿಲ್ಲದ ಆಕರ್ಷಕ ನಗುವಿನ ವ್ಯಕ್ತಿ ತೀರಾ ಸಭ್ಯರಂತೆ ಕಾಣುತಿದ್ದರು. ಪರಿಚಯ ಹತ್ತಲೊಲ್ಲದು. “ಉಹುಂ ನನ್ಗೆ ಗೊತ್ತಾಗ್ಲಿಲ್ಲ ಕ್ಷಮಿಸಿ ಸರ್” ಎಂದಳು. ತನ್ನ ಮರೆವಿನ ತಲೆಮೇಲೊಂದು ಮೊಟಕ ಬೇಕೆನ್ನುವಷ್ಟು ಸಿಟ್ಟು ಅವಳಿಗೆ.
ಅವಳು ಮುಖ ಪೆಚ್ಚ ಮಾಡ್ಕೊಂಡು ನಿಂತಿದ್ದು ಕಂಡ ಮನುಷ್ಯ “ಏ, ಪರ್ವಾಗಿಲ್ಲ ಬಿಡಿ ಮೇಡಮ್, ಅಷ್ಟೊಂದು ಯೋಚನೆ ಮಾಡ್ಬೇಡಿ. ನಾನು ನಿಮ್ಮ ವಿನಯಾ ಭಟ್ ಇದ್ದಾರಲ್ಲ, ನಿಮ್ ಫ್ರೆಂಡ್”. . . ಅಂತ ಹೇಳ್ತಿದ್ದ ಹಾಗೇ ಕವನ ನಡುವೆ ತಡೆದು “ಓ ವಿವೇಕ್ ಸರ್, ಕ್ಷಮಿಸಿ ನನ್ಗೆ ಗೊತ್ತಾಗ್ಲಿಲ್ಲ. ತುಂಬಾ ದಿನ ಆಯ್ತಲ್ಲಾ ಸರ್ ನಿಮ್ಮ ನೋಡಿ. ಅದೂ ಅಲ್ದೇ ನೀವು ದಪ್ಪ ಆಗ್ಬಿಟ್ಟಿದ್ದೀರಲ್ಲ. ಕ್ಷಮಿಸಿ ಸರ್” ಎಂದು ಬಿದ್ರೂ ಮೂಗು ಮಣ್ಣಾಗಲಿಲ್ಲ ಎನ್ನುವಂತೆ ಮುಖಮಾಡಿ ನಿಂತಳು. ಇವಳೊಳಗಿನ ತಳಮಳವನ್ನು ಓದಿಕೊಂಡವರಂತೆ ವಿವೇಕ್ “ಇರ್ಲಿಬಿಡಿ ಮೇಡಮ್, ದಪ್ಪ ಆಗಿದ್ದು ನಂದೆ ತಪ್ಪು ” ಎಂದು ಹಾಸ್ಯ ಮಾಡಿ ಇವಳ ಮನದ ದುಗುಡ ಕಳೆದು ನಕ್ಕು ನಾವೀಗ ನಿಮ್ಮನೆ ಎದ್ರಿನ ಮನೆಗೆ ಬಾಡಿಗೆಗೆ ಬರೋಣ ಅಂತಿದ್ದೇವೆ. ಹೇಗೆ ಪರಿಸರ, ಓನರ್ ಸ್ವಭಾವ . . . . ವಿಚಾರಿಸಿದರು ಓ ಆರಾಮ್ ಆಗಿ ಬನ್ನಿ ಸರ್, ಏನೂ ಪ್ರಾಬ್ಲಮ್ ಇಲ್ಲ. ಜನ ತುಂಬ ಶಾಂತ ಇಲ್ಲಿ, ಕ್ರಿಶ್ಚಿಯನ್ ಮೆಜಾರಿಟಿ, ತಾವಾಗಿ ಯಾರಮೇಲೂ ಏರಿ ಹೋಗೋರಲ್ಲ, ಸಿಟಿಗೆ ಹತ್ತೇ ನಿಮಿಷದ ದಾರಿಯಲ್ಲಿ ಹಳ್ಳಿ ವಾತಾವರಣದ ಓಣಿ. ಎಲ್ಸಿಗುತ್ತೆ ಹೇಳಿ ಕಾರವಾರದಲ್ಲಿ. ಆ ಮನೆ ಸಿಕ್ಕಿದ್ದು ನಿಮ್ ಪುಣ್ಯ. ಓನರ್ ಒಂಚೂರು ಖಡೂಸ್. ಅದ್ನ ಕಟ್ಕೊಂಡು ಏನ್ಮಾಡ್ತೀರಿ ? ಹೊತ್ತು ಹೊತ್ತಿಗೆ ಬಾಡಿಗೆ ಕೈಲಿಟ್ಟುಬಿಟ್ರೆ ಆಯ್ತು, ಅವನಷ್ಟಕ್ಕೆ ಅವ್ನು. ಕೇಳಿದ್ದಕ್ಕಿಂತ ಹತ್ರುಪಾಯಿ ಹೆಚ್ಕೊಟ್ಟುಬಿಡಿ, ಓನರ್ ಕಿರಿಕಿರಿ ಪ್ರಾಬ್ಲೆಮ್ ಸಾಲ್ವ. ” ಒಂದೆ ಉಸಿರಿಗೆ ಎಲ್ಲ ಮುಗಿಸಿ ಹಲ್ಕಿರಿದಳು. ಇವಳ ಗಡಿಬಿಡಿ ವಿವೇಕ್ ಗೆ ಹೊಸತಲ್ಲ.
ಒಂದೆರಡು ಸಲ ವೀಣಾಳನ್ನು ಹುಡುಕಿಕೊಂಡು ಮನೆಗೆ ಬಂದ ಹೆಣ್ಣು ಎದ್ದುಹೋದಮೇಲೆ ಮಳೆಬಂದು ನಿಂತ ಮೇಲಿನ ಶಾಂತಿ ಅನ್ನಿಸಿದ್ದಿದೆ. ” ಆಯ್ತು ಮೇಡಮ್, ನಿಮ್ಮನೆ ಎದುರಿಗೆ ಬಾಡಿಗೆಮನೆ ಅಂತ ಗೊತ್ತಾದ್ಮೇಲೆ ವೀಣಾ ತುಂಬಾ ಖುಷಿಯಲ್ಲಿದ್ದಾಳೆ. ನಾಡಿದ್ದು ವಿಜಯ ದಷಮಿ. ಅವತ್ತು ಶಿಫ್ಟ ಆಗೋಣ ಅಂದ್ಕೊಂಡಿದ್ದೇವೆ. ನಮಗೆ ಹೆಣ್ಮಗುವಾಗಿದೆ. ನಿಮಗೆ ವಿನಯಾ ಹೇಳಿರ್ಬೇಕಲ್ಲಾ? ಗೊತ್ತಿರಬೇಕಲ್ಲಾ? “ಅಂದ್ರು. “ಏನಿಲ್ಲ ಸರ್, ನಿಮ್ಮ ಶ್ರೀಮತಿಯವ್ರು ನನ್ನ ಮರ್ತೇ ಬಿಟ್ಟಿದ್ದಾರೆ. ಕೈಮುಂದೆ ಬಟನ್ ಇದ್ರೂ ಒಂದು ಕಾಲ್ ಮಾಡಿಲ್ಲ. ನಾನಾದ್ರೂ ಕರೆಮಾಡಿ ಮಾತಾಡೋಣ ಅಂದ್ರೆ ಒಂದೂವರೆ ವರ್ಷದಿಂದ ಅವ್ರ ಸೆಲ್ ಯಾವಾಗ್ಲೂ ಸ್ವಿಚ್ಡ ಆಫ್ . ನನ್ಗೆ ಯಾರೋ ಫ್ರೆಂಡ್ ಹೇಳಿದ್ರು. “–ಅಂತ ರಸ್ತೆಯ ನಡುವೆಯೇ ನಿಂತು ಪುಕಾರು ತೆಗೆದಳು. “ಇಲ್ಲಾ ಮೇಡಮ್ ಅವ್ಳು ನಿಮ್ಮ ನೆನಪು ಮಾಡದ ದಿನವೇ ಇಲ್ಲ. ಮಗಳನ್ನ ಎತ್ತಿ ಅವರ ಕೈಲಿಟ್ಟು ಖುಷಿ ಹಂಚ್ಕೋತೇನೆ ನೋಡ್ತಾ ಇರಿ, ಕರಗಿ ಹೋಗ್ತಾರೆ ಗೊತ್ತಾ?” ಅಂತಾಳೆ. ಸರಿ ಮೇಡಮ್ ನಾಬರ್ತೇನೆ. ನಾಳೆಎಲ್ಲಾ ಆ ಮನೆಯಿಂದ ಸಾಮಾನು ತಂದು ಸೆಟ್ ಮಾಡೋ ಕೆಲ್ಸ ನಮ್ಮ ಅಸಿಸ್ಟಂಟ್ ಮಾಡ್ತಾರೆ. ನಾನು ವೀಣಾನ್ನ ಕರೆಯೋಕೆ ಹೋಗ್ತಿದ್ದೇನೆ. ಒಂಚೂರು ಮನೆಕಡೆ ಲಕ್ಷ್ಯ ಇರ್ಲಿ. ” ಎನ್ನುತ್ತ ಗಾಡಿ ಕೀಲಿ ತಿರುವಿದರು. ಓಹ್ ವೀಣಾ ಇನ್ನೂ ಊರಲ್ಲಿದ್ದಾರಾ? ಸರಿ ಹೋಗ್ಬನ್ನಿ ಸರ್ ” ಎಂದಳು, ಅಲ್ಲಿ ನೀವಿದ್ದ ಮನೆ ತುಂಬಾ ಚೆನ್ನಾಗಿತ್ತಲ್ಲ ಯಾಕೆ ಬದಲಾಯಿಸಿದ್ರಿ? ಕೇಳ್ಬೇಕು ಅಂದ್ಕೊಂಡ ಮಾತನ್ನು ನುಂಗಿಕೊಂಡು.
ಅವರು ಸರಿದುಹೋದ ಮೇಲೆ ಮುಂದಕ್ಕೆ ಹೊರಟಳಾದರೂ ಅವಳ ತಲೆಯಲ್ಲಿ ವೀಣಾ ತುಂಬಿಕೊಂಡಿದ್ದಳು. ನಾಲ್ಕು ವರ್ಷದ ಹಿಂದೆ ಪರಿಚಯವಾದವಳು ವೀಣಾ. ಎಷ್ಟು ಚಂದದ ಹುಡುಗಿ. ಮೆಲ್ಮಾತು. ಹಸಿಗೋಡೆಯ ಮೇಲೆ ಹರಳಿಟ್ಟಂತೆ ವೀಣಾ ಇವಳ ತಲೆಯಲ್ಲಿ ಕೂತದ್ದು ತನ್ನ ಹಿತವಾದ ಸ್ನೇಹದಿಂದ. ತಲೆಯಲ್ಲಿ ಒಂದಷ್ಟು ಆದರ್ಶಗಳನ್ನು ತುಂಬಿಕೊಂಡು ತಿರುಗುವ ಹೆಣ್ಣು ಕವನ. ಉಂಡುಡಲು ಬರಗಾಲವಿಲ್ಲದ ಮನೆಯ ಗ್ರಹಿಣಿ. ಬಿಡುವಿನ ವೇಳೆಯಲ್ಲಿ ಕೊಳಗೇರಿಯ ಶಾಲೆಗಳ ಮಕ್ಕಳಿಗೆ ಪಾಠ ಮಾಡುತ್ತ, ಅವರಿಗಾಗಿ ಪುಕ್ಕಟೆ ಮನೆಪಾಠ ಹೇಳುತ್ತ ಅಲ್ಲಿನ ಮಕ್ಕಳಿಗೆ ಸಂಗೀತ ನತ್ಯ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದವಳು. ಒಮ್ಮೆ ಕೊಳಗೇರಿಯ ಮಕ್ಕಳಿಗಾಗಿ ಸಂಗೀತ ಸ್ಪರ್ಧೆಯೊಂದನ್ನು ಪ್ರಾಯೋಜಿಸಿದ್ದಳು ಕವನ . ನಿರ್ಣಾಯಕರನ್ನು ಹುಡುಕುತಿದ್ದಾಗ ಯಾರೋ ಸಂಗೀತದಲ್ಲಿ ಪದವಿ ಪಡೆದ ವಿನಯಾ ಭಟ್ ಪರಿಚಯ ಮಾಡಿಸಿದ್ದರು. ಮಡಿವಂತ ಕುಟುಂಬದ ಹೆಣ್ಣಾದರೂ ವಿನಯಾ ಎಲ್ಲ ಪೂರ್ವಾಗ್ರಹಗಳನ್ನು ಕೊಡವಿಕೊಂಡು ಹಗುರಾಗಿ ನಿಂತ ಹೆಣ್ಣು . ತುಂಬ ಆಸಕ್ತಿಯಿಂದ ಕೊಳಗೇರಿಯ ಶಾಲೆಗೆ ಬಂದು ಅಲ್ಲಿ ಎಲ್ಲರೊಡನೆ ಬೆರೆತು ಅವಳಂದು ನಡೆದುಕೊಂಡ ರೀತಿಗೆ ಕವನಳ ಎದೆ ತುಂಬಿ ಬಂದಿತ್ತು. ತದನಂತರ ಸಮಾನ ಮನಸ್ಕರಲ್ಲಿ ಸಹಜವಾಗಿಯೇ ಸ್ನೇಹ ಕುದುರಿತ್ತು. ಎಷ್ಟೊಂದು ಕುಶಾಲು ಮನಸ್ಸಿನ ಹಿರಿಗುಣದ ಹೆಣ್ಣಾದರೂ ಅವಳ ಕಣ್ಣಾಳದಲ್ಲಿ ಯಾವುದೋ ನೋವು ಗುಡ್ಡೆ ಬಿದ್ದಿದೆಯೇನೋ ಎಂಬ ಅನುಮಾನ ವಿನಯಳನ್ನು ನೋಡಿದಾಗಲೆಲ್ಲ ಕವನಳನ್ನು ಕಾಡುತಿತ್ತು.
ಕೊಳಗೇರಿಯ ಮಹಿಳೆಯರಿಗಾಗಿ ಯೋಗ ಶಿಬಿರವೊಂದನ್ನು ಪ್ರತಿವರ್ಷ ತನ್ನ ಮನೆಯಲ್ಲಿಯೇ ಪ್ರಾಯೋಜಿಸುತ್ತಿದ್ದಳು ಕವನ ಇತರ ಗೆಳತಿಯರು ಕವನಳ ಈ ಹುಚ್ಚಿಗೆ ಮೂಗು ಮುರಿದರೂ ಎರಡು ವರ್ಷಗಳ ಹಿಂದೆ ಅವರೊಟ್ಟಿಗೆ ತಾನೂ ಯೋಗ ಕಲಿಯಲೆಂದು ವಿನಯ ಇವಳ ಮನೆಗೆ ಬರತೊಡಗಿದ ಮೇಲಂತೂ ಇಬ್ಬರಲ್ಲೂ ಸಲುಗೆ ಬೆಳೆದು ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಹತ್ತಿರ ವಾಗಿದ್ದರು. ಆಗ ಗೊತ್ತಾಗಿದ್ದು ವಿನಯಾ ಮದುವೆಯಾಗಿ ಹದಿಮೂರು ವರ್ಷಗಳಾದರೂ ಮಕ್ಕಳಾಗದೇ ಅವಳು ಮನದಲ್ಲೇ ಕೊರಗುವ ವಿಷಯ . ಈಗಿನ್ನೂ ನಿನ್ನೆ ಮೊನ್ನೆ ಹಸೆಮಣೆ ತುಳಿದವಳಂತೆ ತೋರುತ್ತಿದ್ದ ಮುಗ್ಧೆ ವಿನಯಾ. ಗುಣವೂ ಅಷ್ಟೇ ಮೇಲು ಕೀಳು ಮಡಿಮೈಲಿಗೆಗಳೆಂಬ ಪೂರ್ವಾಗ್ರಹಗಳನ್ನೆಲ್ಲ ಕೊಡವಿಕೊಂಡ ಸುಂದರ ಮನಸ್ಸಿನ ಹೆಣ್ಣು ಅವಳು. ದೇವರೇ ಇಂಥ ಹೆಣ್ಣಿಗೆ ಎಂಥ ಶಿಕ್ಷೆ? ‘ಮಲ್ಲಿಗೆಯಂಥ ಮನಸ್ಸೊಳಗೊಂದು ಮುರಿದ ಮುಳ್ಳು’ ಎಂದು ಮರುಗಿದ್ದಳು ಕವನ. ಒಂದಿನ ಯೋಗಾಭ್ಯಾಸ ಮುಗಿದು ಎಲ್ಲ ಮಹಿಳೆಯರು ಹೊರಟುಹೋದ ಮೇಲೆ ಕವನ ವಿನಯಳಿಗೆ ಒಂದೇ ಮಾತು ಹೇಳಿದ್ದಳು . (ಈಗವರ ಸ್ನೇಹ ಏಕವಚನಕ್ಕೆ ತಲುಪಿತ್ತು. ) ” ನೀನೇನೇ ಹೇಳು ವಿನಯಾ ಹೆರುವದೇ ಹೆಣ್ಣಿನ ಜೀವನ ಸಾರ್ಥಕ್ಯ ಎನ್ನುವದನ್ನು ನಾನು ಒಪ್ಪುವದಿಲ್ಲ. ಹೆಣ್ಣು ಹೇಗಿದ್ರೂ ತಾಯಿಯೇ. ಹೆಣ್ಣಿಗನ್ವರ್ಥಕವೇ ಅಮ್ಮ.
ಅಮ್ಮನ ಬಿಸಿಯಪ್ಪುಗೆಯ ವಂಚಿತರಾಗಿ ಅದೆಷ್ಟು ಕಂದಮ್ಮಗಳು ನರಳುತ್ತಿಲ್ಲ ಹೇಳು ಅನಾಥಾಶ್ರಮಗಳಲ್ಲಿ . ಅವುಗಳಲ್ಲೊಂದಕ್ಕೆ ನಿನ್ನ ತೋಳಪ್ಪುಗೆಯ ಸಂತ್ರಪ್ತಿಯನ್ನು ಇನ್ನೂ ತನಕ ನೀಡದೇ ಸ್ವಂತ ಮಕ್ಕಳಿಗಾಗಿ ಹಲುಬುವ ಸ್ವಾರ್ಥಿಯಂತೂ ನೀನಲ್ಲ . ಆದ್ರೆ ನಿನ್ನನ್ನು ತಡೆದಿದ್ದು ಯಾವ ಕಾಣದ ಕೈಯ್ಯೋ? ” ಎಂದು ಅವಳ ಒಳ ಮನವ ಕೆಣಕಿದ್ದಳು. “ನಮಗೇನೋ ಇಷ್ಟಾ ಇದೇರಿ ಕವನಕ್ಕ. ನಮ್ಮತ್ತೆ ಮನೆಯಲ್ಲಿ ಒಂದೇ ಹಾಡು—ಹಾಗೆ ತಕ್ಕೊಳ್ಳೋದಾದ್ರೆ ಕುಟುಂಬದ ಮಕ್ಕಳನ್ನೇ ತಕ್ಕೊಳ್ಳಿ ಅಂತ ಒತ್ತಡ. ನಮ್ಮಮ್ಮನಂತೂ ನಿಂಗೇನು ಅಂಥ ವಯಸ್ಸು. ನಂಗೂ ಮಕ್ಕಳಾಗುವಾಗ ತಡವೇ ಆಗಿತ್ತು ಇನ್ನೈದು ವರ್ಷ ಆ ಸುದ್ದಿನೇ ಬೇಡ ಅಂತ ಬಾಯಿ ಮುಚ್ಚಿಸ್ತಾರೆ. ” ಎಂದು ಮುಖ ಚಿಕ್ಕದು ಮಾಡಿಕೊಂಡು ಕಂಬನಿದುಂಬಿ ಕೂತಿದ್ದಳು
ವಿನಯಾ. ಅಲ್ಲಿಗೆ ಮಾತು ಇನ್ನೆಲ್ಲೋ ತಿರುಗಿ ಆ ವಿಷಯ ಅಲ್ಲೇ ಮರೆತಿದ್ದಳು ಕವನ.
ಇದಾಗಿ ಎರಡು ವರ್ಷಗಳು ಕಳೆದಿದ್ದವು. ಟೆಂಥ್ ಪಾಸಾದ ಮಗಳು ಮಂಗಳೂರಿನ ಪಿಯು ಕಾಲೇಜು ಸೇರಿದ ಮೇಲೆ ಮಗಳಿಗೆ ಹಾಸ್ಟೇಲಿನ ಆಹಾರ ಪರಿಸರ ಹೊಂದದೆ ಕವನ ಅಲ್ಲಿಯೇ ಬಾಡಿಗೆ ಮನೆಮಾಡಿ ಮಗಳೊಂದಿಗೆ ನಿಂತಿದ್ದಳು. ಕಳೆದೆರಡು ವರ್ಷಗಳಿಂದ ಅವಳಿಗೆ ವಿನಯಾಳ ಸ್ನೇಹ ತಪ್ಪಿ ಹೋಗಿತ್ತು. ಮೊಬೈಲ್ ಗೆ ಹೆಚ್ಚಾಗಿ ಅಂಟಿಕೊಳ್ಳದ ಕವನ ಯಾರೊಂದಿಗೂ ಹೆಚ್ಚು ಸಂಪರ್ಕದಲ್ಲಿ ಇರದಿರೋದು ಮಗಳ ಓದಿನ ಕಾರಣಕ್ಕೆ . ಅಪರೂಪಕ್ಕೊಮ್ಮೆ ಊರಿಗೆ ಬಂದಾಗ ಗೆಳತಿಯರಿಂದ ವಿನಯಾ ಹೆಣ್ಣು ಮಗುವಿಗೆ ತಾಯಾದ ಸುದ್ದಿ ಕೇಳಿ ಖುಷಿಪಟ್ಟಿದ್ದಳು. ಮಗಳು ಎಂಜಿನಿಯರಿಂಗ್ ಓದಲು ಬೆಂಗಳೂರು ಸೇರಿದಮೇಲೆ ವಿನಯಾ ಬಿಡುವಾಗಿ ತನ್ನ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಳು . ಹೆರಿಗೆಗೆಂದು ಹೋದ ವಿನಯಾ ಎಂಟು ತಿಂಗಳು ಬಿಟ್ಟು ಕಾರವಾರಕ್ಕೆ ಬರುತ್ತಿದ್ದು ತನ್ನ ಮನೆಯೆದುರೇ ವಾಸಕ್ಕೆ ಬರುತ್ತಿದ್ದುದು ಅವಳಿಗೆ ತುಂಬಾ ಖುಷಿಯ ವಿಷಯ. ವಿನಯಳನ್ನು ಮಗುವನ್ನು ನೋಡಲು ಮೂರುದಿನ ಕಾಯಬೇಕಿತ್ತವಳು. ಮೂರುದಿನ ಕಳೆಯುವಾಗ ಮೂರುವರ್ಷ ಅನ್ನಿಸಿಬಿಟ್ಟಿತ್ತು ಕವನಳಿಗೆ. ಎಂಟು ತಿಂಗಳು ತುಂಬಿದ ಮುದ್ದು ಮುದ್ದಾದ ಹೆಣ್ಮಗುವನ್ನು ಮಡಿಲಲ್ಲಿಟ್ಟುಕೊಂಡು ದಷಮಿಯ ದಿನ ಎದುರು ಮನೆಗೆ ವಾಸಕ್ಕೆ ಬಂದಿದ್ದಳು ವಿನಯಾ.
ಅವಳು ಬರುವಾಗ ಸರಿರಾತ್ರಿಯಾಗಿದ್ದರಿಂದ ನಾಳೆ ಹೋಗಿ ನೋಡಿಬಂದರಾಯಿತೆಂದು ಮಗು ಹಾಗೂ ವಿನಯಳನ್ನು ನೋಡುವ ಅತೀವ ಆಸೆಯಿದ್ದರೂ ತಡೆದುಕೊಂಡು ಮನಹೊಡೆದುಕೊಂಡು ಮಲಗಿದಳು ಕವನ. ಬೆಳಗಿನ ಕೆಲಸದ ಗಡಿಬಿಡಿಯಲ್ಲಿಯೇ ಅಡಿಗೆ ಮನೆ ಕಿಟಕಿಯಿಂದ ಇಣುಕಿ ಎದುರು ಮನೆಯ ಅಂಗಳಕ್ಕೆ ಕಣ್ಣಿಟ್ಟಳು. ಮುದ್ದಾದ ಮಗು ಅಜ್ಜನ ತೋಳೇರಿ ಅವರ ಮೈಮೇಲೆ ಅಡ್ಡಕ್ಕೆ ಮಲಗಿದ ಜನಿವಾರವನ್ನು ಎಳೆದೆಳೆದು ಆಟವಾಡುತ್ತಿದ್ದಳು. ವಿನಯಳಿಗೆ ಮಗು ನೋಡಿಕೊಳ್ಳುವದು ಕಷ್ಟವಾಗದಿರಲೆಂದು ಅವಳ ಅಪ್ಪ ಅಮ್ಮ ಒಟ್ಟಿಗೆ ಬಂದು ಇಲ್ಲೆ ನಿಂತಿದ್ದರು. ಕವನ ನಿಮಿಷ ಬಿಡುವು ಮಾಡಿಕೊಂಡು ಗೇಟುದಾಟಿ ಮಗುವನ್ನು ಎತ್ತಿ ಮುದ್ದಸಿ ಮರಳಿ ಬಂದಿದ್ದಳು. ಮಧ್ಯಾಹ್ನ ಎದುರಿನ ಬಾಗಿಲಲ್ಲಿ ಕೂತ ವಿನಯಾ ಮಗಳಿಗೆ ಹಾಲನ್ನದ ತುತ್ತು ತಿನ್ನಿಸುತ್ತಿದ್ದಳು. ಮಗಳ ಜೊಲ್ಲಿಳಿದ ಕೊನೆ ತುತ್ತನ್ನ ಎತ್ತಿ ತನ್ನ ಬಾಯ್ಗಿಟ್ಟುಕೊಂಡದ್ದನ್ನ ಕಿಟಕಿಯಲ್ಲಿ ಕಂಡ ಕವನ ದೇವರೇ ಇದೇ ಅಲ್ಲವೇ ತಾಯ್ತನದ ಪರಮ ಸುಖ ಅಂದುಕೊಂಡಳು. ವೀಣಾ ಮುಸ್ಸಂಜೆ ಬಿಡುವಾಗಿ ಮಗುವನ್ನೆತ್ತಿಕೊಂಡು ಬಂದು ಕವನಳ ಮಡಿಲಿಗಿಟ್ಟು “ನನ್ನ ಮಗಳಿಗೆ ಒಳ್ಳೇದಾಗಲಿ ಎಂದು ಹರಸಿಬಿಡಿ” ಎಂದಳು. “ಬಸಿರು ಬಯಕೆ ಬಾಣಂತಿತನದ ಹೊತ್ತಲ್ಲಿ ನಿನ್ನಮ್ಮನಿಗೆ ನನ್ನ ನೆನಪೇ ಆಗಲಿಲ್ಲ ನೋಡು ಕಂದಾ” ಎಂದು ಕವನ ಕೆಣಕಿದಳು. ಹಾಗೇನಿಲ್ಲ ನಿಮ್ಮಂತೆ ಎಲ್ಲರನ್ನೂ ಪ್ರೀತಿಸುವ ಹೆಣ್ಣು ಮಗುವನ್ನು ಕೊಡು ಎಂದು ನಿತ್ಯ ದೇವರಲ್ಲಿ ಬೇಡುತ್ತಿದ್ದೆ ಗೊತ್ತಾ ಕವನಕ್ಕ . ನಿಮಗೆ ಸರ್ಪ್ರೈಸ್ ಕೊಡಬೇಕೂಂತಿದ್ದೆ ” ಅಂತ ಮನತುಂಬಿ ನಕ್ಕಿದ್ದಳು ವಿನಯಾ.
ಮಗುವಿಗೀಗ ವರ್ಷ ತುಂಬಿತ್ತಲಿತ್ತು. ನಿತ್ಯ ಮುಸ್ಸಂಜೆ ಮಗುವಿನೊಟ್ಟಿಗೆ ಬಂದು ಕವನಳ ಅಂಗಳದಲ್ಲಿ ಆಡಿ ನಲಿದು ಹರಟೆ ಹೊಡೆದು ಕಾಲ ಕಳೆಯುತ್ತಿದ್ದಳು ವಿನಯಾ. ಪುಟ್ಟ ಮಗು ‘ಅವಿಕಾ’ ಗೆಜ್ಜೆ ಗುಲುಗುಲಿಸುತ್ತ ಅಂಗಳದಲ್ಲ ಆಡಿದರೆ ಮಗಳು ತೇಜುವಿನ ಬಾಲ್ಯ ನೆನಪಾಗಿ ಎದೆ ತುಂಬುತ್ತಿತ್ತು ಕವನಳಿಗೆ. ಬಹುಬೇಗ ಸುಸ್ತಾಗಿ ಕೈಕಾಲುಗಳಲ್ಲಿ ವಿಪರೀತ ಬೆವರುತ್ತಿದ್ದಳು ‘ಅವಿಕಾ’. ಮಗಳ ಅನಾರೋಗ್ಯಕ್ಕಾಗಿ ಸದಾ ಮಂಕಾಗುತ್ತಿದ್ದಳು ವಿನಯ. ಮಗಳಿಗೆ ನಿತ್ಯ ಕಬ್ಬಿಣಾಂಶದ ಗುಳಿಗೆ ಚೀಪಿಸುತ್ತಿದ್ದಳು. ವಿನಯ ಅವಿಕಾಳಿಗೆ ಎದೆಹಾಲು ಕುಡಿಸದೇ ಬಾಟಲಿ ಹಾಲು ಕುಡಿಸುವದನ್ನು ನೋಡಿದ್ದ ಕವನ ಒಳಗೊಳಗೇ ಚಡಪಡಿಸುತ್ತಿದ್ದಳು. ಒಮ್ಮೆ ತಡೆಯದೇ “ವಿನಯಾ. . . ಹಿರಿಯಳಾಗಿ ಒಂದು ಮಾತು ಹೇಳ್ತೇನೆ ಬೇಸರ ಮಾಡ್ಬೇಡ. ಮಗುವಿಗಿನ್ನೂ ವರ್ಷವೂ ತುಂಬಿಲ್ಲ. ಆಗ್ಲೇ ಎದೆ ಹಾಲು ಬಿಡಿಸಿ ಬಾಟಲಿ ಕೊಟ್ಟರೆ ಕೆಲ್ಶಿಯಂ ಕೊರತೆ ಆಗದೇ ಇರೋಕೆ ಸಾಧ್ಯವಾ? ನೀನು ಹೀಗೆ ಮಾಡ್ತೀಯಾ ಅಂತ ನಾನು ಅಂದ್ಕೊಂಡಿರಲಿಲ್ಲ ಎಂದು ಗಂಭೀರಳಾಗಿದ್ದಳು . ವಿನಯಾಳ ಕಣ್ಗಳು ಪಕ್ಕನೆ ತುಂಬಿಕೊಂಡು ಪಳಕ್ಕನೆ ಹನಿಗಳುದುರಿ ಬಿದ್ದಿದ್ದವು . ಅವಳು ತಟ್ಟನೆ ಕವನಳ ಕೈಹಿಡಿದುಕೊಂಡು “ನನ್ನ ಕ್ಷಮಿಸಿ. ಈ ಕೂಸು, ಇದು ದೇವರ ಕೊಟ್ಟ ನನ್ನೆದೆಯ ಕಂದ. ಇದಕ್ಕೆ ಎದೆಯೂಡಲಾಗದ ನೋವು ನನ್ನೊಳಗೂ ಇದೆ. ಆದರೇನ ಮಾಡ್ಲಿ ಹೇಳಿ. ಆ ವಿಷಯದಲ್ಲಿ ನಾವಿಬ್ಬರೂ ಅಮ್ಮ ಮಗಳು ಅಭಾಗ್ಯರೇ ಎಂದು ಮಗುವಿಗಾಗಿ ಎರಡು ವರ್ಷ ಊರನ್ನೇ ತೊರೆದು ಹೋಗಿ ಅನಾಥಾಲಯದಿಂದ ಮಗುವನ್ನು ದತ್ತಕ ಪಡೆದದ್ದನ್ನು, ಅದಕ್ಕಾಗಿ ತನ್ನವರನ್ನೆಲ್ಲ ಎದುರುಹಾಕಿಕೊಂಡು ಪಟ್ಟ ಮಾನಸಿಕ ವೇದನೆಯನ್ನು, ತನ್ನ ಮಗು ಅನಾಥವೆಂದು ಲೋಕದ ಕಣ್ಣಲ್ಲಿ ಹಗುರಾಗದಿರಲೆಂದು ಇಲ್ಲಿ ಎಲ್ಲರಿಂದ ಮುಚ್ಚಿಟ್ಟದ್ದನ್ನು ಮೊದಲ ಬಾರಿಗೆ ಕವನಳಿಗೆ ಹೇಳಿ ಅತ್ತು ಹಗುರಾದಳು. ಕವನ ತನ್ನೆದುರು ಕೂತ ಹೆಣ್ಣ ಹೊನ್ನಿನ ಗುಣಕೆ ಶರಣಾಗಿ ಮೌನದಲಿ ಮನಕರಗಿ ನೀರಾಗಿ ಹರಿದಿದ್ದಳು. ಪುಟ್ಟ ಅವಿಕಾ ವಿನಯಳ ತಬ್ಬಿ ಅ. . . . ಮ್ಮ ಅ. . . . ಮ್ಮ ಎಂದು ತೊದಲುಲಿಯುತ್ತಿದ್ದಳು. ಅವಳನೆತ್ತಿ ಎದೆಗೊತ್ತಿಕೊಂಡಳು ವಿನಯಾ, ಹಾಲಿಲ್ಲದಿದ್ದರೇನು ಕಂದಾ? ಎದೆಯ ವಾತ್ಸಲ್ಯವೆಲ್ಲ ನಿನಗೇ ಚಿನ್ನಾ ಎಂಬಂತೆ. ಈ ಸುಂದರ ದೃಷ್ಯ ಕಾವ್ಯಕ್ಕೆ ಮುಸ್ಸಂಜೆ ಸಾಕ್ಷಿಯಾಗಿತ್ತು.
-ಪ್ರೇಮಾ ಟಿ ಎಂ ಆರ್