ಮರುಜನ್ಮದಲ್ಲಿ ನಾವೇನಾಗ್ತಿವಿ ಅನ್ನೋದು ನಾವು ಮಾಡಿದ ಪಾಪ ಪುಣ್ಯದ ಫಲಕ್ಕೆ ನೇರ ಸಂಬಂಧವಿದೆ ಅಂತಾ ಹೇಳ್ತೀವಿ. ಅದನ್ನೇ ಕರ್ಮಸಿದ್ಧಾಂತ ಅಂತಲೂ ಕರೀತಾರೆ. ಮುಂದಿನ ಜನ್ಮ ಮನುಷ್ಯ ಜನ್ಮವೇ ಆಗಬೇಕು ಅಂತಾದರೆ ಸಿಕ್ಕಾಪಟ್ಟೆ ಪುಣ್ಯ ಸಂಪಾದಿಸಬೇಕು ಅಂತಾ ಹೇಳ್ತಾ ಇರೋದನ್ನು ಕೇಳಿದ್ದೀವಿ. ಹಾಗೆಯೇ ಮುಂದಿನ ಏಳು ಜನ್ಮಗಳು ಮನುಷ್ಯನಲ್ಲದ ಜನ್ಮಗಳಾಗಿರ್ತಾವೆ ಅಂತಾನೂ ಕೇಳಿದ್ದೀವಿ. ಆದ್ರೆ ಇವೆಲ್ಲದರ ನಡುವೆ ಒಂದು ಕನ್ಫ್ಯೂಸನ್ ಮತ್ತು ಉತ್ತರ ಸಿಗದ ಪ್ರಶ್ನೆ ಈ ಕರೊನಾ ವೈರಸ್ ಬಂದಾಗ ಶುರು ಆಯ್ತು…ಎನ್ ಗೊತ್ತಾ…!???
ಪ್ರಸ್ತುತ ಪ್ರಪಂಚದಲ್ಲಿ ಪ್ರಾಣಿ, ಪಕ್ಷಿಗಳನ್ನು ಒಳಗೊಂಡ ಇತರ ಜೀವಿಗಳ ಸಮೂಹ ಕಡಿಮೆ ಆಗುತ್ತಾ ಬಂದಿದೆ ಅಂತ ಅನೇಕ ತರಹದ ದಾಖಲೆಗಳು ಸಿಗುತ್ತವೆ. ಕೆಲವೊಂದು ಪ್ರಾಣಿಗಳು ಅಳಿವಿನಂಚಿನ ಪ್ರಾಣಿಗಳಾಗಿಯೂ ಇನ್ನು ಕೆಲವು ಪ್ರಾಣಿಗಳ ಅಸ್ತಿತ್ವವೇ ಇಲ್ಲದೆ ಕೇವಲ ಚಿತ್ರಗಳಲ್ಲಿ ಕಾಣುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಮನುಷ್ಯನ ಅತಿಯಾದ ಆಸೆಯಿಂದ ಅನ್ಯ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ ಎನ್ನುವುದು ಅಂಕಿ ಅಂಶಗಳ ಆಧಾರದಲ್ಲಿ ನಮಗೆ ಸಿಗುತ್ತಿದೆ. ಹಾಗಾದರೆ ಇಂತಹ ಸ್ಥಿತಿ ಬರಲು ಯಮಲೋಕದ ಚಿತ್ರಗುಪ್ತನು ಕಾರಣನಾಗಿದ್ದಾನೆಯೇ?? ಇದು ನನ್ನ ಊಹಾಪೋಹಾ…!!! ಯಾಕೆ ಕೇಳಿ.
ಭ್ರಷ್ಟಾಚಾರ ಪ್ರಪಂಚದ ಎಲ್ಲೆಡೆಯೂ ಕೇಳಿ ಬರುವ ಮಾತು…ಇಲ್ಲದ ಜಾಗವಿಲ್ಲ. ಹಾಗೆಯೇ ಇದರ ಎಫ್ಫೆಕ್ಟ್ ಯಮಲೋಕಕ್ಕೂ ಆಗಿರಬಹುದಲ್ವಾ…!!! ಚಿತ್ರಗುಪ್ತ ಇದ್ದಾನಲ್ಲ ಇರೋ ಬರೋರನ್ನೆಲ್ಲಾ ಎತ್ತಾಕೊಂಡು ಹೋಗೋನು..ಮಸಣದಿಂದ ಸ್ವರ್ಗಕ್ಕೋ ನರಕಕ್ಕೊ ಅಂತಾ ಪಾಪ ಪುಣ್ಯಗಳ ಲೆಕ್ಕಾಚಾರಮಾಡಿ ಕರೆದುಕೊಂಡು ಹೋಗುವವನು ಯಾಕೋ ಇತ್ತೀಚೆಗೆ ಸರಿ ಕೆಲ್ಸ ಮಾಡ್ತಿಲ್ಲ ಅಂತಾ ಗುಮಾನಿ ಶುರು ಆಗಿದೆ. ಈ ಚಿತ್ರಗುಪ್ತ ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಸಿಲುಕಿದ್ದಾನೆ ಅಂತಾನು ಸಂಶಯ ಉಂಟಾಗಿದೆ. ಕಾರಣ..ಹಲವುಂಟು. ಇತರೆ ಜೀವಿಗಳ ಸಂಖ್ಯೆಗಿಂತ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಸಕಲ ಜೀವಿಗಳಲ್ಲಿ ಮನುಷ್ಯನು ಒಬ್ಬನಾಗುವುದರ ಬದಲು ಜೀವಿಗಳೆಲ್ಲ ಮಾನವರಾಗುವತ್ತ ಸಾಗಿದೆ. ಅದರ ಜೊತೆ ಜೊತೆಗೆ ಜನರ ಬದುಕು ದುಸ್ತರವಾಗುತ್ತಾ ಇದೆ. ಈಗಿನ ಪ್ರಪಂಚದಲ್ಲಿ ಪುಣ್ಯ ಮಾಡುವವರು ತುಂಬಾ ಕಡಿಮೆಯೇ..ಎಲ್ಲಿ ನೋಡಿದರಲ್ಲಿ ಸ್ವಾರ್ಥ, ಅತಿಆಸೆ, ಅಹಂಕಾರ, ಕ್ರೌರ್ಯ, ದ್ವೇಷ ಹೆಚ್ಚಾಗಿದೆ. ಇವೆಲ್ಲವೂ ಚಿತ್ರಗುಪ್ತನಿಗೆ ಕಾಣುತ್ತಿಲ್ಲವೇ? ಚಿತ್ರಗುಪ್ತ ಸರಿಯಾಗಿ ಪಾಪಪುಣ್ಯಗಳ ಲೆಕ್ಕಾಚಾರ ಮಾಡುತ್ತಿಲ್ಲ ಲಂಚ ತೆಗೆದುಕೊಂಡು ಮನುಷ್ಯರಿಗೆ ಮತ್ತೆ ಮನುಷ್ಯ ಜನ್ಮ ಬರುವ ಹಾಗೆ ಮಾಡುತ್ತಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ..ಇರಬಹುದೇ…!!? ಇದರಿಂದಾಗಿ ಉಳಿದ ಪ್ರಾಣಿಗಳ ಜನ್ಮ ಇಳಿಮುಖವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ..ಹಾಗೆಯೇ ಈ ವಿಷ್ಯ ಯಮಧರ್ಮನಲ್ಲಿಯೂ ಹೋಗಿ ಆತ ಇವೆಲ್ಲವನ್ನು ಹತೋಟಿಗೆ ತುರುವುದಕ್ಕಾಗಿ ಮನುಷ್ಯನ ಬರಿಗಣ್ಣಿಗೆ ಕಾಣದ ಜೀವಿಗಳ( ಉದಾ: ಕರೊನಾ ವೈರಸ್) ಸೃಷ್ಟಿಮಾಡಿ ಮಾನವಕುಲದ ಸಮಾಧಿಗೆ ತೊಡಗಿದ್ದಾನೆ ಎನ್ನುವುದು ಇನ್ನೊಂದು ಕಡೆಯ ಅಭಿಪ್ರಾಯ.
ಹೀಗೆಲ್ಲಿಯಾದರೂ ಆಯಿತು ಅಂತಾದರೆ ಕರ್ಮ ಸಿದ್ಧಾಂತದ ಫಲ ನೋಡಲು ಸಾಧ್ಯವಿಲ್ಲವಲ್ಲ. ನನ್ನ ಜನ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಅಂತ ಸಬೂಬು ಹೇಳಲಿಕ್ಕೂ ಕಷ್ಟವಾಗುತ್ತೆ ಅಲ್ವಾ..?? ಯಾಕಂದ್ರೆ ಲಂಚ ಕೊಟ್ಟು ಬಂದಿರಬಹುದು ಹಾಗೆಯೇ ಪಾಪ ಪುಣ್ಯಗಳಿಗೆ ಬೆಲೆ ಸಿಗುವುದು ಇಲ್ಲವಾಗತ್ತೆ. ಒಂದುವೇಳೆ ಚಿತ್ರಗುಪ್ತ ಸರಿಯಾಗಿ ಕೆಲಸ ಮಾಡಿದ್ದಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂಬುದು ನನ್ನ ಕಪೋಲಕಲ್ಪಿತ.
ಚಿತ್ರಗುಪ್ತನ ಕರ್ತವ್ಯ ಲೋಪದಿಂದ ಪಾಪನಾದ್ರು ಮಾಡ್ರಿ ಪುಣ್ಯನಾದ್ರು ಮಾಡಿ ಮುಂದಿನ ಜನ್ಮ ಮನುಷ್ಯನ ಜನ್ಮವೇ ಅಂತಾ ಅಗೋಗಿದೆ ಅಲ್ವಾ!!!…ಒಂದ್ ಐಡಿಯಾ…ಲಂಚ ಮುಕ್ತ ಸಮಾಜ ನಿರ್ಮಾಣ ಮಾಡಿದ್ರೆ…ಈ ಲಂಚ ಮುಕ್ತ ಯಮಲೋಕ ಆಗಬಹುದೇ…??? ಲಂಚ ಮುಕ್ತ ಯಮಲೋಕ ಆದ್ರೆ ಮನುಷ್ಯ ಜನ್ಮಕ್ಕೆ ಕಡಿವಾಣ ಬಿದ್ದು ಇತರೆ ಜೀವಿಗಳ ಹುಟ್ಟಿಗೆ ಕಾರಣವಾಗಬಹುದೇ??? ಏನೇ ಇರಲಿ ಭ್ರಷ್ಟಾಚಾರಮುಕ್ತ ಯಮಲೋಕ ಬರಲಿ. ಯಮಧರ್ಮ ಕರೊನಾ ವೈರಸ್ ಅನ್ನು ಮಾನವರ ಮೇಲೆ ಪ್ರಯೋಗಿಸುವುದನ್ನು ಬಿಡಲಿ. ಚಿತ್ರಗುಪ್ತ ಸರಿಯಾಗಿ ಕೆಲಸ ಮಾಡಲಿ. ಕರೊನಾದಿಂದ ಜೀವ ಕಳೆದುಕೊಂಡವರಿಗೆ ಪರಿಹಾರವಾಗಿ ಮತ್ತೆ ಮನುಷ್ಯ ಜನ್ಮ ದೊರಕಲಿ.
ಶೀಘ್ರಮ್ ಕರೊನಾ ಮುಕ್ತಿರಸ್ತು.
(ವಿಮರ್ಶೆಗಲ್ಲ…ತಮಾಷೆಗಾಗಿ)
-ಪಿ.ಕೆ. ಜೈನ್ ಚಪ್ಪರಿಕೆ