ಯಮಕಿಂಕರರು: ಒಂದು ಭಯಾನಕ ಸತ್ಯಕಥೆ: ಪ್ರಸಾದ್ ಕೆ.

 

1987 ರ ದಿನಗಳು

ಕೆನಡಾದ ಓಂಟಾರಿಯೋ ಪ್ರೊವಿನ್ಸಿನ ಸ್ಕಾರ್-ಬೋರೋ ಭಾಗದಲ್ಲಿ ಸೂರ್ಯ ಎಂದಿನಂತೆ ಮುಳುಗುತ್ತಾ ಕತ್ತಲೆಯ ಚಾದರವನ್ನು ಮೆಲ್ಲಗೆ ಎಳೆಯುತ್ತಿದ್ದ. ಅತ್ತ ಸಂಜೆಯೂ ಅಲ್ಲದ, ಇತ್ತ ಪೂರ್ಣ ಪ್ರಮಾಣದ ರಾತ್ರಿಯೂ ಇಲ್ಲದ ಈ ಹೊತ್ತಿನಲ್ಲಿ ಕೈ-ಕೈ ಹಿಡಿದು ಪಾರ್ಕುಗಳಿಗೆ ಹೋಗುವ ಜೋಡಿಗಳು, ವಾಕಿಂಗಿಗೆ ತೆರಳುವ ವೃದ್ಧರು, ಬಿಯರ್ ಕುಡಿಯುವ ನೆಪದಲ್ಲಿ ಸಂಗಾತಿಗಳನ್ನು ಅರಸಿಕೊಂಡು ಹೋಗುವ ಹದಿಹರೆಯದ ಯುವಕ-ಯುವತಿಯರು ಹೀಗೆ ಹಲವು ಬಗೆಯ ಜನರು ತಮ್ಮದೇ ಗುಂಗಿನಲ್ಲಿ ಅಡ್ಡಾಡುವುದು ಇತರರಂತೆ ಸ್ಕಾರ್-ಬೋರೋ ನಿವಾಸಿಗಳಿಗೂ ಹೊಸದೇನಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಕೆನಡಾದ ಸ್ಕಾರ್-ಬೋರೋ ಭಾಗದ ರಾತ್ರಿಗಳು ಜಗತ್ತಿನ ಇತರ ಭಾಗದ ಸಾಮಾನ್ಯ ರಾತ್ರಿಗಳಂತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಜನರು, ವಿಶೇಷವಾಗಿ ಹೆಣ್ಣುಮಕ್ಕಳು ದಾಪುಗಾಲಿಕ್ಕುತ್ತಾ ಮನೆಸೇರಲು ಹವಣಿಸುತ್ತಿದ್ದರು. ಮನೆಯಿಂದ ಹೊರಟ ಹದಿಹರೆಯದ ಹೆಣ್ಣುಮಕ್ಕಳು ಮನೆಸೇರುವವರೆಗೆ ಕುಟುಂಬಗಳಿಗೆ ಸಮಾಧಾನವಿರುತ್ತಿರಲಿಲ್ಲ. ಮಹಿಳೆಯರು ಕತ್ತಲಾದ ನಂತರ ಒಂಟಿಯಾಗಿ ಅಡ್ಡಾಡುವುದನ್ನು ಸಾಕಷ್ಟು ಕಮ್ಮಿ ಮಾಡಿದ್ದರು. ರಾತ್ರಿ ಹಗಲೆಂಬ ಭೇದವಿಲ್ಲದೆ ನಗರದ ನಿವಾಸಿಗಳು ಬಾಗಿಲ ಚಿಲಕಗಳು ಭದ್ರವಾಗಿವೆ ಎಂಬುದನ್ನು ಖಚಿತಗೊಳಿಸುತ್ತಿದ್ದರು. ಒಟ್ಟಾರೆಯಾಗಿ ಸ್ಕಾರ್-ಬೋರೋ ನಗರದಲ್ಲಿ ಕತ್ತಲಿನೊಂದಿಗೆ ಭಯವೂ ದಿನಗಳೆದಂತೆ ದಟ್ಟವಾಗುತ್ತಾ ಹೋಗುತ್ತಿರುವುದು ಗುಟ್ಟಿನ ವಿಷಯವಾಗೇನೂ ಉಳಿದಿರಲಿಲ್ಲ. 

ಹೀಗೆ ಸ್ಕಾರ್-ಬೋರೋ ನಿವಾಸಿಗಳು ನಿಗೂಢವಾದ ಭಯವೊಂದರಲ್ಲಿ ಉಸಿರುಗಟ್ಟುತ್ತಿರುವಂತೆಯೇ, ಸ್ಥಳೀಯ ಪೋಲೀಸ್ ವಿಭಾಗದ ನಿದ್ರೆಯೂ ಹಾರಿಹೋಗಿತ್ತು. ಕಳೆದ ನಾಲ್ಕು ತಿಂಗಳುಗಳಲ್ಲಿ ನಾಲ್ಕು ನಿಗೂಢ ಅತ್ಯಾಚಾರದ ಪ್ರಕರಣಗಳು ಸ್ಕಾರ್-ಬೋರೋ ನಗರವೊಂದರಲ್ಲೇ ದಾಖಲಾಗಿದ್ದವು. 1987 ರ ಮೇ ತಿಂಗಳ ಮೊದಲ ವಾರದಲ್ಲಿ ಇಪ್ಪತ್ತೊಂದರ ತರುಣಿಯ ಅತ್ಯಾಚಾರದ ಬೆನ್ನಿಗೇ, ಎರಡನೇ ವಾರದಲ್ಲಿ ಹತ್ತೊಂಬತ್ತರ ತರುಣಿಯೊಬ್ಬಳ ಅತ್ಯಾಚಾರವಾಗಿತ್ತು. ಮುಂದೆ ಜುಲೈ ತಿಂಗಳಲ್ಲಿ ಭಯದಿಂದ ತತ್ತರಿಸಿ ಹೋಗಿದ್ದ ಯುವತಿಯೊಬ್ಬಳು ನಡುಗುತ್ತಾ, ಕಣ್ಣೀರಿಡುತ್ತಾ ಆಗಂತುಕನೊಬ್ಬ ನನ್ನನ್ನು ಅತ್ಯಾಚಾರ ಮಾಡಲು ಯತ್ನಿಸಿದ ಎಂದು ತನ್ನ ಹೇಳಿಕೆಯನ್ನು ಸ್ಥಳೀಯ ಠಾಣೆಯಲ್ಲಿ ದಾಖಲಿಸಿದ್ದಳು. ಅತ್ಯಾಚಾರದ ಪ್ರಕರಣಗಳು ಒಂದಕ್ಕೊಂದು ತಾಳೆಯಾಗುತ್ತಿದ್ದುದರಿಂದ ಇವೆಲ್ಲದರ ಹಿಂದೆ ಒಬ್ಬನದೇ ಕರಾಮತ್ತಿದೆ ಎಂದು ಲೆಕ್ಕಹಾಕಲು ಮಹಾ ಬುದ್ಧಿವಂತಿಕೆಯೇನೂ ಪೋಲೀಸರಿಗೆ ಬೇಕಾಗಿರಲಿಲ್ಲ.

ಕತ್ತಲಿನಲ್ಲಿ ದಾಳಿ ಮಾಡುತ್ತಿದ್ದ ಎನ್ನಲಾದ ಈ ಆಗಂತುಕ ಹದಿಹರೆಯದ ಯುವತಿಯರನ್ನು ಅಥವಾ ಬಾಲಕಿಯರನ್ನು ಆಯ್ಕೆಮಾಡುತ್ತಿದ್ದ. ಕತ್ತಲಾಗುತ್ತಿದ್ದಂತೆ ಒಂಟಿಯಾಗಿ ಪಾರ್ಕುಗಳಲ್ಲಿ ಅಡ್ಡಾಡುತ್ತಿರುವ, ಬಸ್ಸುಗಳಿಂದ ಇಳಿದು ಕೆಲ ಬ್ಲಾಕ್ ಗಳನ್ನು ದಾಟಿ ಮನೆಸೇರುತ್ತಿದ್ದ, ರಾತ್ರಿಪಾಳಿಗಳನ್ನು ಮುಗಿಸಿ ಮನೆಸೇರುತಿದ್ದ ಯುವತಿಯರು ಮುಖ್ಯವಾಗಿ ಟಾರ್ಗೆಟ್ ಆಗಿರುವುದು ಕಂಡುಬರುತ್ತಿತ್ತು. ಇವರುಗಳು ನಡೆದಾಡುತ್ತಿದ್ದ ಹಾದಿಯ ಯಾವುದೋ ಒಂದು ಮೂಲೆಯಲ್ಲಿ ಅಡಗಿರುತ್ತಿದ್ದ ಈ ಆಗಂತುಕ ಏನಾಗುತ್ತಿದೆಯೆಂದು ಗೊತ್ತಾಗುವುದರ ಮೊದಲೇ ಹಿಂದಿನಿಂದ ದಾಳಿ ನಡೆಸಿ ಮೂಲೆಯ ಒಂದು ಕತ್ತಲಿನ ಜಾಗಕ್ಕೋ, ದಟ್ಟವಾದ ಪೊದೆಯ ಹಿಂದಕ್ಕೋ ಯುವತಿಯರನ್ನು ಎಳೆದೊಯ್ಯುತ್ತಿದ್ದ. ಅರ್ಧಘಂಟೆಯಿಂದ ಒಂದು ಘಂಟೆಯವರೆಗೆ ನಡೆಯುತ್ತಿದ್ದ ಈ ಭೀಕರ ದಾಳಿಯಲ್ಲಿ, ಎಳೆದೊಯ್ದ ಯುವತಿಯರ ಮೇಲೆ ಅತ್ಯಾಚಾರವೆಸಗಿ, ಥಳಿಸಿ, ಕೆಲವೊಮ್ಮೆ ಅವರ ಕೈಕಾಲುಗಳನ್ನು ಕಟ್ಟಿ, ಅಲ್ಲೇ ಬಿಟ್ಟು ಕತ್ತಲಿನಲ್ಲಿ ಮಾಯವಾಗುತ್ತಿದ್ದ. 1987 ರ ಸಪ್ಟೆಂಬರಿನಲ್ಲಂತೂ ಆಗಂತುಕನೊಬ್ಬ ಹದಿನೈದರ ವಯಸ್ಸಿನ ಬಾಲಕಿಯ ಬೆಡ್ ರೂಮಿನೊಳಗೆ ನುಗ್ಗಿ ಆಕೆಯ ಅತ್ಯಾಚಾರದ ವಿಫಲ ಯತ್ನವನ್ನು ನಡೆಸಿದ್ದ. ಬಾಲಕಿಯ ಕೋಣೆಯೊಳಗೆ ಬಂದಿದ್ದ ಆಕೆಯ ತಾಯಿ ಆಂಗತುಕನನ್ನು ನೋಡಿ ಗಾಬರಿಗೊಂಡು ಬೊಬ್ಬೆ ಹೊಡೆದಿದ್ದರೆ, ಆತ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ. ಇಷ್ಟಾಗಿಯೂ ಯಾವೊಬ್ಬ ಯುವತಿಯೂ ಸರಿಯಾಗಿ ಆತನ ಮುಖವನ್ನು ನೋಡಿರಲಿಲ್ಲ.

ತಮ್ಮ ಅಂಗಳದಲ್ಲೇ ಆಗಂತುಕನೊಬ್ಬ ಒಂದರ ಹಿಂದೊಂದಂತೆ ಅಪರಾಧಗಳನ್ನೆಸಗುತ್ತಾ ಹೋಗುತ್ತಿರುವುದು ಸ್ಥಳೀಯ ಪೋಲೀಸರಿಗೆ ನುಂಗಲಾರದ ತುತ್ತಾಗಿತ್ತು. ಪ್ರಕರಣಗಳು ಮುಂದುವರಿದಂತೆ ಭೀಕರತೆಯೂ ಹೆಚ್ಚುತ್ತಲೇ ಹೋಗುತ್ತಿರುವುದು ಸ್ಪಷ್ಟವಾಗಿತ್ತು. ಹೊಸಹೊಸ ಪ್ರಕರಣಗಳಲ್ಲಿ ಬಲಿಯಾಗುತ್ತಿದ್ದ ಯುವತಿಯರ ದೇಹದ ಭಾಗಗಳಲ್ಲಿ ಗಾಯದ ಪ್ರಮಾಣವೂ ಹೆಚ್ಚಾಗುತ್ತಲಿದ್ದವು. ಗಾಯದ ಪ್ರಮಾಣಗಳು ಹೆಚ್ಚುತ್ತಾ ಹೋದಂತೆ ಮುಂದಿನ ಅತ್ಯಾಚಾರದ ಪ್ರಕರಣಗಳಲ್ಲಿ ದಾಳಿಗೊಳಗಾಗುವ ಯುವತಿಯರು ಸಾವಿನ ಕದ ತಟ್ಟುವ ಸಾಧ್ಯತೆಗಳೂ ಹೆಚ್ಚಾಗುತ್ತಿರುವಂತೆ ಕಂಡುಬಂದವು. ಸ್ಕಾರ್-ಬೋರೋದ ಪ್ರದೇಶ ಆತನಿಗೆ ಅಂಗೈಯ ಗೆರೆಯಂತೆ ಪರಿಚಿತವಾಗಿದ್ದು ಸ್ಪಷ್ಟವಾಗಿತ್ತು. ನಿಸ್ಸಂದೇಹವಾಗಿ ಆತ ಸ್ಕಾರ್-ಬೋರೋ ನಗರದಲ್ಲೇ ವಾಸಿಸುತ್ತಿದ್ದ ಅಥವಾ ಉದ್ಯೋಗವನ್ನು ಮಾಡುತ್ತಿದ್ದ. ಮೆಟ್ರೋಪಾಲಿಟನ್ ಟೊರಾಂಟೋ ಪೋಲೀಸ್ ತನ್ನ ತಂಡವನ್ನು ಬಿಗಿಗೊಳಿಸಿತಾದರೂ ನಂಬಲಾಗದ ವೇಗದಲ್ಲಿ ಹೆಚ್ಚುತ್ತಿದ್ದ ಪ್ರಕರಣಗಳ ಸಂಖ್ಯೆ ಅಧಿಕಾರಿಗಳನ್ನು ಕಂಗೆಡಿಸಿತ್ತು. ಪರಿಸ್ಥಿತಿ ಕೈ ಮೀರಿ ಹೋಗಿ ಇಲಾಖೆಯ ಮಾನ ಹರಾಜಾಗುವ ಮುನ್ನ, ಈ ಅಪರಾಧಿಗೆ ಕೈಕೋಳ ತೊಡಿಸುವವರೆಗೂ ಜಾಗರಣೆ ಮಾಡದೆ ವಿಧಿಯಿರಲಿಲ್ಲ.

ಸಾಮಾನ್ಯರ ದಿರಿಸುಗಳನ್ನು ಧರಿಸಿ ಓಡಾಡುತ್ತಿದ್ದ ಮಹಿಳಾ ಪೋಲೀಸರು ಬಸ್ಸುಗಳಲ್ಲಿ, ರಾತ್ರಿಯ ಏಕಾಂಗಿ ಬೀದಿಗಳಲ್ಲಿ ಈತನಿಗೆ ಬಲೆಬೀಸಲೆಂದೇ ಮೈಯೆಲ್ಲಾ ಕಣ್ಣಾಗಿ ಓಡಾಡುತ್ತಿದ್ದರು. ಆಕಸ್ಮಿಕವಾಗಿ ಆಗಂತುಕನಿಂದ ದಾಳಿಗೊಳಗಾದರೆ ಇವರ ರಕ್ಷಣೆಗೆಂದೇ ದೂರದಲ್ಲಿ ಕಣ್ಣಿಟ್ಟ ಇನ್ನೊಂದು ಪಡೆಯಿತ್ತು. ಬಸ್ಸುಗಳು ಸಾಮಾನ್ಯವಾಗಿ ನಿಲ್ಲುವ ನಿಲ್ದಾಣಗಳ ಆಸುಪಾಸಿನಲ್ಲಿ ಜನಸಾಮಾನ್ಯರಂತೆ ಓಡಾಡುತ್ತಿರುವ ಪೋಲೀಸ್ ಅಧಿಕಾರಿಗಳಿದ್ದರು. ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ಮಹಿಳಾ ಪೋಲೀಸರಿಂದ ವಿಶೇಷವಾಗಿ ಈ ಪ್ರಕರಣಗಳ ಬಗ್ಗೆ ಜಾಗೃತಿಯ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆತ್ಮರಕ್ಷಣೆಯ ವಿಧಾನಗಳನ್ನು ಹೆಣ್ಣುಮಕ್ಕಳಿಗೆ ವಿವರವಾಗಿ ತಿಳಿಸಿ ಹೇಳುತ್ತಿದ್ದ ಈ ಪೋಲೀಸ್ ಪಡೆಗಳು, ಆಕಸ್ಮಿಕವಾಗಿ ದಾಳಿಗಳೇನಾದರೂ ನಡೆದ ಪಕ್ಷದಲ್ಲಿ, ಆಸುಪಾಸಿನಲ್ಲಿ ಗಸ್ತು ತಿರುಗುತ್ತಿರುವ ಪೋಲೀಸರು ರಕ್ಷಣೆಗೆ ಬರುವವರೆಗೆ ಈ ಆಗಂತುಕನನ್ನು ಕೆಲನಿಮಿಷಗಳವರೆಗೆ ಗೊಂದಲದಲ್ಲಿ ಹಿಡಿದಿಡುವ ಉಪಾಯಗಳನ್ನು ತಿಳಿಸಿಕೊಡುತ್ತವೆ. ಈ ಎಲ್ಲಾ ಉಪನ್ಯಾಸಗಳ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಲಾಖೆಯು, ಈ ಉಪನ್ಯಾಸಗಳಿಗೆ ಈ ಶಂಕಿತ ಅಪರಾಧಿಯೂ ಬಂದರೂ ಬರಬಹುದು ಎಂಬ ಸಂದೇಹ ಮತ್ತು ನಿರೀಕ್ಷೆಯಿಂದ ಕಣ್ಣಿಗೆ ಎಣ್ಣೆಹಚ್ಚಿಕೊಂಡು ಹುಡುಕುತ್ತಲಿತ್ತು.

ಆದರೆ ಇತ್ತ ಮುಖವಿಲ್ಲದ ಮಾನವಾಕೃತಿಯೊಂದು ಸ್ಕಾರ್-ಬೋರೋ ನಗರದ ಗಲ್ಲಿಗಳಲ್ಲಿ ಪೋಲೀಸರಿಗೆ ಕ್ಯಾರೇ ಎನ್ನದೇ ತನ್ನ ಅಮಾನುಷ ಬೇಟೆಯನ್ನು ಮುಂದುವರೆಸಿತ್ತು.

*************

1987 ರ ಅಕ್ಟೋಬರ್ ತಿಂಗಳ ಸಮಯ. ಸ್ಕಾರ್-ಬೋರೋ ನಗರದ ಒಂದು ರೆಸ್ಟೋರೆಂಟ್ ಒಂದರಲ್ಲಿ ಕುಳಿತ ಕಾರ್ಲಾ ತನ್ನ ಗೆಳತಿಯೊಂದಿಗೆ ಹರಟುವುದರಲ್ಲಿ ಮಗ್ನಳಾಗಿದ್ದಳು. ಕರೇಲ್ ಹೊಮೋಲ್ಕಾ ಮತ್ತು ಡೊರೋಥಿ ಹೊಮೋಲ್ಕಾ ದಂಪತಿಯ ಹಿರಿಮಗಳಾಗಿದ್ದ ಕಾರ್ಲಾ ಹೊಮೋಲ್ಕಾಗೆ ಆಗ ಹದಿನೇಳರ ಪ್ರಾಯ. ಎತ್ತರ ನಿಲುವಿನೊಂದಿಗೆ ಹೊಂಬಣ್ಣದ ಕೂದಲನ್ನು ಹೊಂದಿದ್ದ ಕಾರ್ಲಾ ನಿಜಕ್ಕೂ ರೂಪವತಿಯಾಗಿದ್ದಳು. ಚಿಕ್ಕಂದಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷವಾದ ಒಲವಿದ್ದ ಈಕೆ ಸರ್ ವಿನ್ಸ್ಟನ್ ಚರ್ಚಿಲ್ ಸೆಕೆಂಡರಿ ಸ್ಕೂಲಿನಲ್ಲಿ ಓದುತ್ತಿದ್ದಾಗ ಸಾಕುಪ್ರಾಣಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ ಚಿಕ್ಕ ಅಂಗಡಿಯೊಂದರಲ್ಲಿ ಪಾರ್ಟ್ ಟೈಂ ಉದ್ಯೋಗವನ್ನು ಮಾಡುತ್ತಿದ್ದಳು. ರೆಸ್ಟೋರೆಂಟಿನಲ್ಲಿ ಕುಳಿತ ಈ ಇಬ್ಬರು ಹರೆಯದ ಹೆಣ್ಣುಮಕ್ಕಳು ಕೂತಲ್ಲೇ ರೆಸ್ಟೊರೆಂಟಿಗೆ ಬಂದು ಹೋಗುತ್ತಿರುವ ಯುವಕರನ್ನು ನೋಡುತ್ತಾ, ತಮ್ಮತಮ್ಮಲ್ಲೇ ಪಿಸುಮಾತಾಡುತ್ತಾ, ನಗುತ್ತಾ ಮೋಜು ಮಾಡುವುದರಲ್ಲೇ ತಲ್ಲೀನರಾಗಿದ್ದರು. ಸಂಜೆ ನಿಧಾನವಾಗಿ ಕಳೆಗಟ್ಟುತ್ತಿತ್ತು.

ಹೀಗೆ ಕಾರ್ಲಾ ತನ್ನ ಗೆಳತಿಯೊಂದಿಗೆ ಹರಟುತ್ತಿರುವ ಸಮಯದಲ್ಲೇ ರೆಸ್ಟೊರೆಂಟಿಗೆ ಬಂದ ಇಬ್ಬರು ಯುವಕರು ಯುವತಿಯರನ್ನು ನಿಧಾನವಾಗಿ ಮಾತಿಗೆಳೆದರು. ಈ ಇಬ್ಬರು ಯುವಕರೂ ಕಾರ್ಲಾ ಮತ್ತು ಅವಳ ಗೆಳತಿಯಂತೆಯೇ ಸುಮ್ಮನೆ ಅಡ್ಡಾಡುತ್ತಾ ತಮ್ಮ ಸಂಜೆಯನ್ನು ಕಳೆಯಲು ರೆಸ್ಟೊರೆಂಟಿಗೆ ಬಂದಿದ್ದರು. ಮೂಲೆಯ ಟೇಬಲ್ ಒಂದರಲ್ಲಿ ಕುಳಿತ ಇಬ್ಬರು ಹುಡುಗಿಯರು ಸ್ವಾಭಾವಿಕವಾಗೇ ಈ ಹುಡುಗರ ಕಣ್ಣಿಗೆ ಬಿದ್ದಿದ್ದರು. ನಾಲ್ವರೂ ಜೊತೆಯಾಗಿ ಕುಳಿತು ಹರಟುತ್ತಾ ಹೋದಂತೆ ಸಂಜೆಯೂ ಹಿತವೆನಿಸಿತು. ಅದರಲ್ಲೂ ಬಂದ ಇಬ್ಬರಲ್ಲೊಬ್ಬನಾದ ಪೌಲ್ ಅಂತೂ ಕಾರ್ಲಾಗೆ ಸಿಕ್ಕಾಪಟ್ಟೆ ಇಷ್ಟವಾದ. ನಗುಮುಖದ, ಹೊಂಬಣ್ಣದ ಕೂದಲಿನ, ಉತ್ತಮ ಮಾತುಗಾರಿಕೆಯುಳ್ಳ ಇಪ್ಪತ್ಮೂರರ ಪೌಲ್ ನಲ್ಲಿ ಎಂಥದ್ದೋ ಒಂದು ವಿಚಿತ್ರ ಆಕರ್ಷಣೆಯಿತ್ತು. ಕಾರ್ಲಾಳಂತೂ ಆ ಮೊದಲ ಭೇಟಿಯಲ್ಲೇ ವಿದ್ಯಾವಂತನಾಗಿದ್ದ, ಅಸಿಸ್ಟೆಂಟ್ ಅಕೌಂಟೆಂಟ್ ಉದ್ಯೋಗದಲ್ಲಿದ್ದ ಪೌಲ್ ನಲ್ಲಿ ತನ್ನ ಬಾಳಸಂಗಾತಿಯನ್ನು ಗುರುತಿಸಿದ್ದಳು. ಕಣ್ಣಲ್ಲೇ ತನ್ನನ್ನು ಅಳೆಯುತ್ತಿದ್ದ ಸುಂದರಿ ಕಾರ್ಲಾಳ ಸೌಂದರ್ಯವು ಪೌಲ್ ನನ್ನೂ ತನ್ನ ಮಾಯೆಯಲ್ಲಿ ಕ್ಷಣಾರ್ಧದಲ್ಲಿ ಕೆಡವಿತ್ತು.

ಅದೇ ರಾತ್ರಿ ಆಸುಪಾಸಿನ ಹೋಟೆಲ್ ರೂಮೊಂದರಲ್ಲಿ ಕಾರ್ಲಾ ಹೊಮೋಲ್ಕಾ, ಪೌಲ್ ಎಂಬ ಯುವಕನ ಬಾಹುಬಂಧನದಲ್ಲಿ ಕರ್ಪೂರದ ಗೊಂಬೆಯಂತೆ ಕರಗಿಹೋದಳು.

*************

ಕಾರ್ಲಾಳ ಸಂತಸಕ್ಕಂತೂ ಎಣೆಯೇ ಇರಲಿಲ್ಲ. ಪೌಲ್ ವಿದ್ಯಾವಂತನಾಗಿದ್ದ. ಮೂರು ಹೊತ್ತಿನ ಅನ್ನ ತಿನ್ನಲು ಚಿಕ್ಕದಾದರೂ  ಒಂದು ಉದ್ಯೋಗವಿತ್ತು. ನೋಡಲಂತೂ ಸುರಸುಂದರಾಂಗನಾಗಿದ್ದ. ಎಂಥಾ ಹೆಣ್ಣಾದರೂ ಅವನ ರೂಪಕ್ಕೆ, ವ್ಯಕ್ತಿತ್ವಕ್ಕೆ ಮಾರುಹೋಗುವುದರಲ್ಲಿ ಸಂದೇಹವೇ ಇರಲಿಲ್ಲ. ಖಾಸಗಿ ಸಮಯಗಳಲ್ಲಿ ಪೌಲ್ ಆಕೆಯ ಮೇಲೆ ಇಟ್ಟುಕೊಳ್ಳಬಯಸುವ ಹಿಡಿತ, ಆತನ ಭಾವನೆಗಳ ತೀವ್ರತೆಗಳು ಕಾರ್ಲಾಗೆ ಮತ್ತೇರಿಸುತ್ತಿದ್ದವು. ಆ ರಾತ್ರಿಯ ಬಳಿಕ ಪೌಲ್ ಮತ್ತು ಕಾರ್ಲಾ ಪ್ರೇಮಿಗಳಂತೆ ತಮ್ಮ ಬಹುಪಾಲು ಸಮಯವನ್ನು ಜೊತೆಯಾಗಿ ಕಳೆಯಲಾರಂಭಿಸಿದರು. ಪಠ್ಯಕ್ರಮದ ಕ್ಯಾಲೆಂಡರಿನ ಪ್ರಕಾರ 1988 ರಲ್ಲಿ ಕಾರ್ಲಾಳ ಗ್ರಾಜುಯೇಷನ್ ಮುಗಿಯಲಿತ್ತು. ಪೌಲ್ ಈಗ ಕಾರ್ಲಾಳ ಪುಟ್ಟ ಖಾಸಗಿ ಜಗತ್ತಿನಲ್ಲಿ ಒಬ್ಬನಾಗಿದ್ದ. ಕಾರ್ಲಾಳ ಗೆಳೆಯರ ಬಳಗಕ್ಕೂ ಈ ಹಸನ್ಮುಖಿ, ವಿನಯವಂತ ಪೌಲ್ ಪ್ರಿಯವಾಗಿದ್ದ. ಅವನ ವ್ಯಕ್ತಿತ್ವದಲ್ಲಿರುವ ಒಂದು ನಿಗೂಢತೆ ಆತನಿಗೊಂದು ವಿಚಿತ್ರವಾದ ಆಕರ್ಷಣೆಯನ್ನು ತರುತ್ತಿತ್ತು. ಗ್ರಾಜುಯೇಷನ್ ಮುಗಿದ ಬಳಿಕ ಪೌಲ್ ನೊಂದಿಗೆ ವಿವಾಹವಾಗುವ ಯೋಜನೆಯನ್ನು ಕಾರ್ಲಾ ಮನಸ್ಸಿನಲ್ಲೇ ಹಾಕಿಕೊಂಡಿದ್ದಳು. ಕಾರ್ಲಾ ಗೆ ತನ್ನ `ಸೋಲ್ ಮೇಟ್', ಕನಸಿನ ರಾಜಕುಮಾರ ಸಿಕ್ಕಿಯಾಗಿತ್ತು. ಇನ್ನೇನಿದ್ದರೂ ಕಾನೂನಿನ ಪ್ರಕಾರ ವಿವಾಹದ ಮೊಹರೊಂದು ಬೀಳಲು ಬಾಕಿಯಿತ್ತಷ್ಟೇ. 

 

1. ಪೌಲ್ ಬರ್ನಾರ್ಡೊ ಮತ್ತು ಕಾರ್ಲಾ ಹೊಮೋಲ್ಕಾರ ಆರಂಭದ ದಿನಗಳು

ಪೌಲ್ ಕೂಡ ಈ ಅವಧಿಯಲ್ಲಿ ಕಾರ್ಲಾ ಹೊಮೋಲ್ಕಾಳೊಡನೆ ಉತ್ತಮ ಸಮಯವನ್ನೇ ಕಳೆಯುತ್ತಿದ್ದ. ಕಾರ್ಲಾ ಎಂಥಾ ಗಂಡಾದರೂ ಬಯಸುವ ಸುಂದರಿಯಾಗಿದ್ದಳು. ತನ್ನ ಕುಟುಂಬದಲ್ಲೂ, ಸ್ನೇಹಿತರ ಬಳಗದಲ್ಲೂ ಎಲ್ಲರಿಗೂ ಪ್ರಿಯವಾಗಿಯೂ, ಬೇಕಾಗಿದ್ದವಳೂ ಆಗಿದ್ದಳು. ಖಾಸಗಿ ಸಮಯದಲ್ಲಂತೂ ಪ್ರೀತಿ ತುಸು ಹೆಚ್ಚೇ ಅನ್ನುವಷ್ಟು ರಂಗೇರುತ್ತಿತ್ತು. ಆದರೆ ಪೌಲ್ ಬಗ್ಗೆ ಕಾರ್ಲಾ ತಿಳಿದುಕೊಳ್ಳದ ವಿಷಯಗಳೂ ಸಾಕಷ್ಟಿದ್ದವು. ಪೌಲ್ ಬರ್ನಾರ್ಡೊನ ಬಾಲ್ಯ ಅಷ್ಟೇನೂ ಆರೋಗ್ಯಕರವಾಗಿರಲಿಲ್ಲ. ಪೌಲ್ ನ ತಂದೆ ಕೆನೆತ್ ವಿರುದ್ಧ ಹೆಣ್ಣುಮಗುವೊಂದರ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯದ ಒಂದು ಪ್ರಕರಣವಿತ್ತು. ಅಲ್ಲದೆ ಕೆನೆತ್ ತನ್ನ ಸ್ವಂತ ಮಗಳನ್ನೂ ತನ್ನ ಕಾಮವಿಕೃತಿಗೆ ಬಳಸಿಕೊಳ್ಳುತ್ತಿದ್ದ ಎಂಬ ಮಾತಿದೆ. ತನ್ನ ಪತಿಯ ನಿರಂತರ ದೌರ್ಜನ್ಯವನ್ನು ತಾಳಲಾರದೆ ಪೌಲ್ ನ ತಾಯಿ ದಿನೇದಿನೇ ಖಿನ್ನತೆಗೆ ಜಾರುತ್ತಿದ್ದಳು. ಆಕೆಯ ದೇಹದ ಬೊಜ್ಜು ಮಿತಿಮೀರುತ್ತಲೇ ಹೋಗುತ್ತಿತ್ತು. ಒಂದು ದಾಖಲೆಯ ಪ್ರಕಾರ ತನ್ನ ಹದಿನಾರನೇ ವಯಸ್ಸಿನಲ್ಲಿ ಪೌಲ್ ಗೆ ಕೆನೆತ್ ತನ್ನ ನಿಜವಾದ ತಂದೆಯಲ್ಲವೆಂಬ ಭೀಕರ ಸತ್ಯ ತನ್ನ ತಾಯಿಯಿಂದ ಗೊತ್ತಾಗುತ್ತದೆ. ಅಂದಿನಿಂದ ಪೌಲ್ ಗೆ ತನ್ನ ತಾಯಿಯ ಬಗ್ಗೆ ಇದ್ದ ಅಲ್ಪಸ್ವಲ್ಪ ಗೌರವವೂ ಮಣ್ಣುಪಾಲಾಗುತ್ತದೆ. ತಂದೆಯ ಕಚ್ಚೆಹರುಕತನ, ಹಿಂಸಾತ್ಮಕ ಪ್ರವೃತ್ತಿ, ತಾಯಿಯ ಒಂದು ಕಾಲದ ಅಕ್ರಮ ಸಂಬಂಧ ಅವನನ್ನು ಕಂಗೆಡಿಸುತ್ತದೆ.  

ಇಂಥಾ ವಿಲಕ್ಷಣ ಪರಿಸರದಲ್ಲಿ ಬೆಳೆದ ಹೊರತಾಗಿಯೂ ಪೌಲ್ ಸಮಾಜದಲ್ಲಿ ಒಬ್ಬ ಪ್ರೆಸೆಂಟೇಬಲ್ ಹುಡುಗನಾಗಿ ಬೆಳೆದಿದ್ದ. ಈ ಚೂಟಿ, ವಿನಯವಂತ, ನಗುಮುಖದ ಮುದ್ದಾದ ಹುಡುಗ ಪೌಲ್ ಎಲ್ಲರಿಗೂ ಕಣ್ಮಣಿಯಾಗಿದ್ದ. ಸರ್ ವಿಲ್ಫ್ರೆಡ್ ಲಾರಿಯರ್ ಇನ್ಸ್ಟಿಟ್ಯೂಟಿನಲ್ಲಿ ಗ್ರಾಜುಯೇಷನ್ ಮುಗಿಸಿ ಮುಂದೆ ಖಾಸಗಿ ಕಂಪೆನಿಯೊಂದರಲ್ಲಿ ಪುಟ್ಟ ಉದ್ಯೋಗವೊಂದರಲ್ಲಿ ಸೇರಿಕೊಂಡ. ಹಾಗೆಯೇ ಮುಂದೆ ಸ್ಕಾರ್-ಬೋರೋ ದಲ್ಲಿರುವ ಯೂನಿವರ್ಸಿಟಿ ಆಫ್ ಟೋರಾಂಟೋದಲ್ಲಿ ಮುಂದಿನ ಅಧ್ಯಯನಕ್ಕೆಂದು ಪೌಲ್ ಸೇರಿಕೊಳ್ಳುತ್ತಾನೆ. ಹುಡುಗಿಯರು ಆಗಾಗ ತನ್ನ ಬೆನ್ನುಬೀಳುತ್ತಿದ್ದುದು ಡ್ಯಾಶಿಂಗ್ ಪರ್ಸನಾಲಿಟಿಯನ್ನು ಹೊಂದಿದ್ದ ಪೌಲ್ ಗೆ ಹೊಸ ವಿಷಯವೇನೂ ಆಗಿರಲಿಲ್ಲ. ಆದರೆ ಆತನಿಗೆ ಹತ್ತಿರವಾಗುತ್ತಿದ್ದ ಯುವತಿಯರು ಬಂದ ವೇಗದಲ್ಲೇ ದೂರವಾಗುತ್ತಿದ್ದುದೂ ಕೂಡ ಅಷ್ಟೇ ಸತ್ಯವಾಗಿತ್ತು.

ಅಸಲಿಗೆ ಬಾಹ್ಯ ಸಮಾಜಕ್ಕೆ ಕಾಣದ ಪೌಲ್ ನ ಇನ್ನೊಂದು ಮುಖ ಇದಕ್ಕೆ ಕಾರಣವಾಗಿತ್ತು. ತನ್ನ ಹದಿನೇಳು, ಹದಿನೆಂಟರ ವಯಸ್ಸಿನಲ್ಲಿ ಆತನ ಗೆಳೆಯರ ಬಳಗದಲ್ಲಿ ಪುಂಡರು, ಚಿಕ್ಕಪುಟ್ಟ ಕಳ್ಳತನ ಮಾಡುವವರು, ಮಾದಕದ್ರವ್ಯ ವ್ಯಸನಿಗಳು ತುಂಬಿಹೋಗಿದ್ದರು. ಟೊರಾಂಟೋ ಯೂನಿವರ್ಸಿಟಿಯ ದಿನಗಳಲ್ಲಿ ಪೌಲ್ ನ ಯೌವನದ ಫ್ಯಾಂಟಸಿಗಳು ನಿಧಾನಕ್ಕೆ ಪೊರೆಕಳಚಲು ಆರಂಭಿಸಿದ್ದವು. ಪೌಲ್ ಗುಟ್ಟಾಗಿ ತನ್ನ ಆಸುಪಾಸಿನ ಮನೆಯವರ ಕಿಟಕಿಗಳನ್ನು ಇಣುಕಿ ನೋಡುತ್ತಿದ್ದ. ಮುಚ್ಚಿದ ಕೋಣೆಯೆಂದು ಭಾವಿಸಲಾಗಿದ್ದ ಕೋಣೆಗಳಲ್ಲಿ ಇತರರ ಖಾಸಗಿ ಸಮಯವನ್ನು ಗಂಟೆಗಟ್ಟಲೆ ನೋಡುತ್ತಾ ಕಾಲಕಳೆಯುವುದು ಅವನಿಗೆ ಮೋಜೆನಿಸುತ್ತಿತ್ತು. ಹೀ ವಾಸ್ ಎ `ಪೀಪಿಂಗ್ ಟಾಮ್' (ಈ ಶಬ್ದ 1960 ರಲ್ಲಿ ಬಿಡುಗಡೆಯಾದ ಇದೇ ಹೆಸರಿನ ಹಾಲಿವುಡ್ ಚಲನಚಿತ್ರದಿಂದಾಗಿ ಜನಪ್ರಿಯವಾಗಿದೆ). ಇತರರು ಬಟ್ಟೆ ಬದಲಾಯಿಸುವುದರಿಂದ ಹಿಡಿದು, ಅನ್ಯ ಖಾಸಗೀ ಜೀವನದ ಭಾಗಗಳನ್ನು ಗುಟ್ಟಾಗಿ ನೋಡುವ, ಆ ಮೂಲಕ ಲೈಂಗಿಕವಾಗಿ ಸುಖವನ್ನು ಅನುಭವಿಸುವ ಈ ಮನೋಸ್ಥಿತಿಯನ್ನು `ವೋಯುರಿಸಂ' ಎನ್ನಲಾಗುತ್ತದೆ. ಅಲ್ಲದೆ ಪೌಲ್ ನ ಗರ್ಲ್ ಫ್ರೆಂಡ್ ಗಳು ಆತನ ಲೈಂಗಿಕ ಒರಟುತನ, ಆತ ದೈಹಿಕವಾಗಿ ಎಸಗುವ ಹಿಂಸೆ ಮತ್ತು ಒಮ್ಮೆಲೇ ಬದಲಾಗುವ ಮೂಡ್ ಬಗ್ಗೆ ಕಂಗಾಲಾಗುತ್ತಿದ್ದರು. ಪೌಲ್ ನ ಫ್ಯಾಂಟಸಿಗಳಿಗೆ ನೀರೆರೆದು ಪೋಷಿಸಿ, ಅವನನ್ನು ಸಂತಸಪಡಿಸುವ ಶಕ್ತಿ ಸ್ವಾಭಾವಿಕವಾಗಿಯೇ ಈ ಹೆಣ್ಣುಮಕ್ಕಳಿಗಿರಲಿಲ್ಲ. ಒಟ್ಟಾರೆಯಾಗಿ ತನ್ನ ಹಿಡಿತವಿಲ್ಲದ ಮನಸ್ಸಿನ, ಮೆದುಳಿನ ಮೇಲೆ ಒಂದು ಆಕರ್ಷಕವಾದ ಮುಖವಾಡವನ್ನು ಧರಿಸಿ ಎಲ್ಲರಂತೆ ಸಾಮಾನ್ಯನಾಗಿ ಕಾಣುವುದರಲ್ಲಿ ಆತ ಯಶಸ್ವಿಯಾಗಿದ್ದ.

ಹೀಗೆ ಕಾರ್ಲಾ ಹೊಮೋಲ್ಕಾಳಿಗೆ ಪೌಲ್ ಬರ್ನಾರ್ಡೊ ಬಗ್ಗೆ ತಿಳಿಯದ ವಿಷಯಗಳು ಸಾಕಷ್ಟಿದ್ದವು. ಅಂತೆಯೇ ಅವನ ಸುತ್ತಮುತ್ತಲಿದ್ದವರಿಗೂ ಕೂಡ.

************* 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
shivashankar
shivashankar
8 years ago

cennagide. asakthi keraLisuttade

1
0
Would love your thoughts, please comment.x
()
x