ಇಲ್ಲಿಯವರೆಗೆ
ಈ ಕುಖ್ಯಾತ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ 1996 ರ ವಿಸ್ತøತ ವರದಿಯನ್ನು ಅವಲೋಕಿಸಿದರೆ ಈ ಪ್ರಕರಣಗಳ ಹಲವು ಭಯಾನಕ ರಹಸ್ಯಗಳು ಒಂದೊಂದಾಗಿ ತೆರೆದುಕೊಳ್ಳುವುದು ಸತ್ಯ.
ಸ್ಕಾರ್-ಬೋರೋದ ಸರಣಿ ಅತ್ಯಾಚಾರಗಳ ಪ್ರಕರಣಗಳ ಮೇಲೆ ಮೊದಲು ಸಂಕ್ಷಿಪ್ತವಾಗಿ ಕಣ್ಣಾಡಿಸೋಣ. ಸ್ಥಳೀಯ ಮೆಟ್ರೋ ಟೊರಾಂಟೋ ಪೋಲೀಸ್ ಇಲಾಖೆಯು ಶಂಕಿತ ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದ ನಂತರ ಮಾಹಿತಿಗಳ ಮಹಾಪ್ರವಾಹವೇ ಹಲವು ಮೂಲಗಳಿಂದ ಹರಿದುಬಂದಿತ್ತು. ಮೊದಲೇ ಹೇಳಿದಂತೆ 1990 ರ ಅಕ್ಟೋಬರ್ ಅಂತ್ಯದ ಅವಧಿಯಲ್ಲಿ ಬರೋಬ್ಬರಿ ಒಂಭೈನೂರು ಹೆಸರುಗಳು ಶಂಕಿತ ಆರೋಪಿಗಳೆಂದು ಹೆಸರಿಸಲ್ಪಟ್ಟಿದ್ದವು. ಒಬ್ಬೊಬ್ಬರ ಬಾಗಿಲನ್ನು ತಟ್ಟುತ್ತಾ, ಪ್ರಶ್ನೆಗಳನ್ನು ಕೇಳುತ್ತಾ ಅಪರಾಧಿಯನ್ನು ಪತ್ತೆಹಚ್ಚುವುದು ಸುಲಭದ ಮಾತೇನೂ ಆಗಿರಲಿಲ್ಲ. ದಿನದಿಂದ ದಿನಕ್ಕೆ “ಸ್ಕಾರ್-ಬೋರೋ ರೇಪಿಸ್ಟ್'' ಪ್ರಕರಣದ ಫೈಲುಗಳು ಬೇಕಾಬಿಟ್ಟಿ ಜಮೆಯಾಗುತ್ತಾ ಹೋಗಿ, ಮಾಹಿತಿಗಳನ್ನು ವ್ಯವಸ್ಥಿತವಾಗಿ ಕಾಯ್ದಿರಿಸಿಕೊಳ್ಳುವುದೇ ಒಂದು ಸಾಹಸವಾಯಿತು.
ಪೌಲ್ ಬರ್ನಾರ್ಡೊ ಈ ಪ್ರಕರಣದ ಹಲವು ಶಂಕಿತ ಅಪರಾಧಿಗಳಲ್ಲಿ ಒಬ್ಬನಾಗಿದ್ದನಷ್ಟೇ. 1990 ರ ಮೇ ತಿಂಗಳಿನ ಕೊನೆಯಲ್ಲಿ ನಡೆದ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಹೊರತುಪಡಿಸಿ ಯಾವೊಬ್ಬ ಯುವತಿಯೂ ದಾಳಿ ನಡೆಸಿದ ಆಗಂತುಕನ ಮುಖವನ್ನು ಸರಿಯಾಗಿ ನೋಡಿರಲಿಲ್ಲ. ರೇಖಾಚಿತ್ರದ ಮುಖಚರ್ಯೆಯನ್ನು ಹೋಲುತ್ತಿದ್ದ, ಈ ಮೊದಲು ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿದ್ದ, ಅಪರಾಧ ನಡೆದಿದ್ದ ಸ್ಥಳಗಳಲ್ಲಿ ಉಪಸ್ಥಿತನಿದ್ದನೆಂಬ ಅಂದಾಜಿದ್ದ ಹಲವು ಜನರನ್ನು ಬಂಧಿಸಿ, ಪ್ರಾಥಮಿಕ ಹಂತದ ವಿಚಾರಣೆಗೊಳಪಡಿಸಿ, ನಂತರ ಬಿಡುಗಡೆಗೊಳಿಸಲಾಯಿತು. ಬಂಧಿಸಲಾಗಿದ್ದ ಕೆಲ ಶಂಕಿತ ಆರೋಪಿಗಳನ್ನು ಸಾಲಾಗಿ ನಿಲ್ಲಿಸಿ ಅವರನ್ನು ಗುರುತಿಸುವ, ಇದ್ದ ಧ್ವನಿ ಮಾದರಿಗಳನ್ನು ಆಧರಿಸಿ ಆಗಂತುಕನ ದನಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಪದೇ ಪದೇ ಮಾಡುತ್ತಾ ದಾಳಿಗೊಳಗಾಗಿದ್ದ ಯುವತಿಯರೂ ಸೇರಿದಂತೆ, ಪ್ರತ್ಯಕ್ಷದರ್ಶಿಗಳೂ ಗೊಂದಲಕ್ಕೊಳಗಾಗಿದ್ದರು. ಚದುರಿಹೋಗಿದ್ದ, ಮಬ್ಬಾಗಿದ್ದ ಇವರ ನೆನಪುಗಳನ್ನು ತೀಕ್ಷ್ಣಗೊಳಿಸಲು ಹಲವು ಬಾರಿ ಫಾರೆನ್ಸಿಕ್ ಹಿಪ್ನೋಟಿಸಂ ನ ಮೊರೆಹೋಗಬೇಕಾಗಿತ್ತು.
ಪೋಲೀಸರ ಹಾಟ್-ಲೈನ್ ಗಳಲ್ಲಿ ಹರಿದು ಬರುತ್ತಿದ್ದ ಮತ್ತು ಪೋಲೀಸರು ಖುದ್ದಾಗಿ ವಿಚಾರಿಸಿ ಕಲೆಹಾಕುತ್ತಿದ್ದ ಮಾಹಿತಿಗಳು ಜಮೆಯಾಗುತ್ತಾ ಹೋಗಿ ಕಾಗದಗಳ ಪರ್ವತಗಳೇ ಸೃಷ್ಟಿಯಾದವೇ ಹೊರತು ದಡಕಾಣುವ ಲಕ್ಷಣಗಳೇ ಕಾಣಬರುತ್ತಿರಲಿಲ್ಲ. ಅಸಲಿಗೆ ಈ ಪ್ರಕರಣಗಳನ್ನು ಉನ್ನತ ಮಟ್ಟದಲ್ಲಿ ಯಾರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಅತ್ಯಾಚಾರಕ್ಕೊಳಗಾಗಿದ್ದ ಯುವತಿಯರು ಹಲವು ಪೋಲೀಸ್ ಅಧಿಕಾರಿಗಳ ಬಳಿಯಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದರು. ಲೆಕ್ಕವಿಲ್ಲದಷ್ಟು ಅಧಿಕಾರಿಗಳ ಬಳಿ ಲೆಕ್ಕವಿಲ್ಲದಷ್ಟು ಬಾರಿ, ತೀವ್ರ ಮುಜುಗರಕ್ಕೊಳಗಾಗಿ ಈ ಖಾಸಗಿ ಸಂಗತಿಗಳನ್ನು ಹೇಳಬೇಕಾಗಿ ಬರುತ್ತಿದ್ದ ಪರಿಣಾಮವಾಗಿ ಸ್ವಾಭಾವಿಕವಾಗಿಯೇ ಈ ಯುವತಿಯರು ಅಸಮಾಧಾನಗೊಂಡಿದ್ದರು. ಈ ಪ್ರಕರಣಗಳು ಯಾರ ಸುಪರ್ದಿಯಲ್ಲಿದ್ದವು ಎಂಬುದೇ ಅವರಿಗೆ ತಿಳಿದಿರಲಿಲ್ಲ.
ಮಾಹಿತಿಗಳಿಲ್ಲವೆಂದು ಕತ್ತಲಿನಲ್ಲಿ ತಡಕಾಡುತ್ತಿದ್ದ ಮೆಟ್ರೋ ಟೊರಾಂಟೋ ಪೋಲೀಸ್ ಇಲಾಖೆ ಈಗ ಮಾಹಿತಿಗಳ ಸಾಗರವನ್ನೇ ಕಂಡು ಬೆಚ್ಚಿಬಿದ್ದಿತ್ತು. ಸರಣಿಹಂತಕರನ್ನು, ಅತ್ಯಾಚಾರಿಗಳನ್ನು, ಸೈಕೋಪಾತ್ ಗಳನ್ನು ಬಲೆಬೀಸುವ ಪ್ರಕರಣಗಳಲ್ಲಿ ಇವೆಲ್ಲಾ ಸ್ವಾಭಾವಿಕವೇ ಆಗಿದ್ದರೂ, ಪ್ರಾಥಮಿಕ ವರದಿಯ ಈ ಮುಖ್ಯ ಹಂತದಲ್ಲಿ ಹಲವು ಉಪಯುಕ್ತ ಮಾಹಿತಿಗಳು ಕಸದ ಬುಟ್ಟಿಯನ್ನು ಸೇರುವ ಸಾಧ್ಯತೆಗಳೂ ಹೆಚ್ಚಿದ್ದವು. ಉದಾಹರಣೆಗೆ ಪೌಲ್ ನ ಗೆಳೆಯ ಮತ್ತು ಆತನ ಪತ್ನಿ ಟೀನಾ ಸ್ಮಿರ್ನಿಸ್ ಕೊಟ್ಟ ಮಾಹಿತಿಗಳು ಪೋಲಿಸರಿಂದ ದಿವ್ಯನಿರ್ಲಕ್ಷ್ಯಕ್ಕೊಳಗಾದವು. ಇದಾದ ಎರಡು ತಿಂಗಳ ಬಳಿಕ ಪೌಲ್ ಬರ್ನಾರ್ಡೊನನ್ನು ಭೇಟಿಯಾದ ತನಿಖಾಧಿಕಾರಿಗಳಿಗೆ ಸಂಶಯಕ್ಕೆ ಎಡೆಮಾಡಿಕೊಡುವಂಥಾ ಅಂಶಗಳೇನೂ ಅವನಲ್ಲಿ ಕಂಡುಬರಲಿಲ್ಲ. ಅಲ್ಲದೆ ಅಪರಾಧದ ಯಾವುದೇ ಹಿನ್ನೆಲೆಯೂ ಅವನಿಗಿರಲಿಲ್ಲ. ಈ ಭೇಟಿಯ ಸಮಯದಲ್ಲಿ ಆತನಿಂದ ಪಡೆದುಕೊಂಡ ಮಾದರಿಗಳು ಇತರ ಇನ್ನೂರಕ್ಕೂ ಹೆಚ್ಚು ಮಾದರಿಗಳೊಂದಿಗೆ ಸೆಂಟರ್ ಆಫ್ ಫಾರೆನ್ಸಿಕ್ ಸೈನ್ಸ್ (ಸಿ.ಎಫ್.ಎಸ್) ನ ಲ್ಯಾಬೋರೇಟರಿಯಲ್ಲಿ ಅನಾಥವಾಗಿ ಸೇರಿಕೊಂಡವು.
1990 ರ ಮೇ ತಿಂಗಳಿನಲ್ಲಿ ಸ್ಕಾರ್-ಬೋರೋದಲ್ಲಿ ನಡೆದ ಕೊನೆಯ ಅತ್ಯಾಚಾರದ ಪ್ರಕರಣದ ಬಳಿಕ, ಸರಣಿ ಅತ್ಯಾಚಾರದ ಪ್ರಕರಣಗಳು ಹಟಾತ್ತನೆ ನಿಂತುಹೋದವು. ಈ ಆಗಂತುಕ ಒಂದೋ ಸತ್ತುಹೋಗಿದ್ದ, ಅಥವಾ ಜೈಲು ಸೇರಿದ್ದ, ಅಥವಾ ದೇಶವನ್ನೇ ಬಿಟ್ಟುಹೋಗಿದ್ದ. `ಆದರೆ ಈತ ನಿಜಕ್ಕೂ ಏನಾದ' ಎಂಬುದನ್ನು ಪತ್ತೆಹಚ್ಚುವ ಅಗತ್ಯ ಪ್ರಾಯಶಃ ಯಾರಿಗೂ ಕಾಣಲಿಲ್ಲ. ಸ್ಕಾರ್-ಬೋರೋದಲ್ಲಿ ಪ್ರಕರಣಗಳು ನಿಂತುಹೋದ ಬಳಿಕ ಸ್ಥಳೀಯ ಅಧಿಕಾರಿಗಳು ನಿರಾಳತೆಯ ನಿಟ್ಟುಸಿರಿಟ್ಟು ಸುಮ್ಮನಾದರು. ಪೋಲೀಸರು ರಾತ್ರಿಯ ಅವಧಿಯಲ್ಲಿ ಗಸ್ತು ತಿರುಗುವುದು, ಮಹಿಳಾ ಪೋಲೀಸ್ ಅಧಿಕಾರಿಗಳು ರಾತ್ರಿಯ ಏಕಾಂಗಿ ಬೀದಿಗಳಲ್ಲಿ ಅಡ್ಡಾಡುವುದು ಮುಂತಾದವುಗಳೆಲ್ಲಾ ಅಚಾನಕ್ಕಾಗಿ ಅರ್ಥವನ್ನೇ ಕಳೆದುಕೊಂಡಂತಾಗಿ ಎಲ್ಲವೂ ನಿಂತುಹೋದವು. ಪ್ರಕರಣದ ಬಿಸಿಯೂ ಕ್ರಮೇಣ ತಣ್ಣಗಾಗುತ್ತಾ ಹೋಯಿತು. ಇತರ ಬಾಕಿ ಪ್ರಕರಣಗಳಲ್ಲಿ ವ್ಯಸ್ತರಾದ ಪೋಲೀಸ್ ಅಧಿಕಾರಿಗಳ ತಂಡಗಳು ನಿಧಾನವಾಗಿ ನೆನಪಿನಿಂದ ಮರೆಯಾಗುತ್ತಿದ್ದ ಈ ಭೀಕರ ಸರಣಿ ಪ್ರಕರಣಗಳನ್ನು ಕಣ್ಣೆತ್ತಿಯೂ ನೋಡಲಿಲ್ಲ.
ರಾತ್ರಿಹಗಲೆನ್ನದೆ ದುಡಿಯುತ್ತಿದ್ದ ಮೊಟ್ರೋ ಟೊರಾಂಟೋ ವಿಭಾಗದ ದಕ್ಷ ಅಧಿಕಾರಿಗಳ ಸತತ ಪ್ರಯತ್ನಗಳ ಹೊರತಾಗಿಯೂ ತನಿಖೆಯು ಹಳ್ಳಹಿಡಿದಿತ್ತು. ತಮ್ಮ ಕೆಲಸ ಮುಗಿಯಿತೆಂದು ತಮ್ಮತಮ್ಮಲ್ಲೇ ನಿರ್ಧಾರವನ್ನು ಮಾಡಿ, ಇನ್ನೇನಿದ್ದರೂ ಈ ಪ್ರಕರಣಗಳು ಅಪರಾಧ ವಿಭಾಗದ ಜವಾಬ್ದಾರಿ ಎಂದು ಇಲಾಖೆಯು ಕೈತೊಳೆದುಕೊಂಡಿತ್ತು. ಹೀಗೆ “ಪೋಲೀಸ್ ಕೇಸ್'' ಗಳು ಅಚಾನಕ್ಕಾಗಿ “ಫಾರೆನ್ಸಿಕ್ ಕೇಸ್''ಗಳಾಗಿ ಸದ್ದಿಲ್ಲದೆ ಬದಲಾಗಿಬಿಟ್ಟಿದ್ದವು. ಪೋಲೀಸ್ ಇಲಾಖೆಯ ಅಭಿಪ್ರಾಯದ ಪ್ರಕಾರ ಚೆಂಡು ಈಗ ಸೆಂಟರ್ ಆಫ್ ಫಾರೆನ್ಸಿಕ್ ಸೈನ್ಸ್ (ಸಿ.ಎಫ್.ಎಸ್) ನ ಅಂಗಳದಲ್ಲಿ ಬಿದ್ದಿತ್ತು.
ಇತ್ತ ಸೆಂಟರ್ ಆಫ್ ಫಾರೆನ್ಸಿಕ್ ಸೈನ್ಸ್ (ಸಿ.ಎಫ್.ಎಸ್) ತನ್ನದೇ ಆದ ತಾಂತ್ರಿಕ ಸಮಸ್ಯೆಗಳಲ್ಲಿ ಮುಳುಗಿ ಹೋಗಿತ್ತು. 1987-88 ರ ದಿನಗಳಲ್ಲಿ ಸಾಂಪ್ರದಾಯಿಕ ಸೆರಾಲಜಿ ವಿಭಾಗವನ್ನಷ್ಟೇ ಹೊಂದಿದ್ದ ಸಿ.ಎಫ್.ಎಸ್ ಗೆ ಆಧುನಿಕ ಡಿ.ಎನ್.ಎ ಪರೀಕ್ಷಾ ವಿಧಾನದ ಉಪಕರಣಗಳು ಬಂದು, ಪರೀಕ್ಷೆಗಳು ಅಧಿಕೃತವಾಗಿ ಆರಂಭಗೊಂಡಿದ್ದೇ 1990 ರ ಜುಲೈ ತಿಂಗಳ ನಂತರ. ಡಾ. ಲೂಕಾಸ್ ನಿರ್ದೇಶಕರಾಗಿದ್ದ ಈ ಸಿ.ಎಫ್.ಎಸ್ ನಲ್ಲಿ ಕಿಮ್ ಜಾನ್ಸ್ಟನ್ ಸೆರಾಲಜಿ ವಿಭಾಗದ ಮುಖ್ಯಸ್ಥೆಯಾಗಿ ಸೇವೆಸಲ್ಲಿಸುತ್ತಿದ್ದರು. ಸ್ಥಳೀಯ ಪೋಲೀಸ್ ವಿಭಾಗದ ಬಹುತೇಕ ಎಲ್ಲಾ ಅಪರಾಧ ವಿಭಾಗದ ಮಾದರಿಗಳು ಸಿ.ಎಫ್.ಎಸ್ ಗೇ ಬರುತ್ತಿದ್ದುದರಿಂದ ಕಿಮ್ ಜಾನ್ಸ್ಟನ್ ಪೋಲೀಸರಿಗೆ ಚಿರಪರಿಚಿತ ಮಹಿಳೆಯಾಗಿದ್ದರು. ಮುಂದೆ ಡಿ.ಎನ್.ಎ ತಂತ್ರಜ್ಞಾನದ ಪಾದಾರ್ಪಣೆಯಾದ ಬಳಿಕ ಪಾಮ್ ನಾವೆಲ್ ಎಂಬಾಕೆ ಡಿ.ಎನ್.ಎ ವಿಭಾಗದ ಚುಕ್ಕಾಣಿಯನ್ನು ಹಿಡಿದುಕೊಂಡಳು.
ಡಿ.ಎನ್.ಎ ತಂತ್ರಜ್ಞಾನದ ಆ ಆರಂಭದ ದಿನಗಳಲ್ಲಿ ಡಿ.ಎನ್.ಎ ಪರೀಕ್ಷೆಯನ್ನು ನಡೆಸಲು ಸಿ.ಎಫ್.ಎಸ್ ಕೇಂದ್ರದಲ್ಲಿ ಇದ್ದಿದ್ದು ಪಾಮ್ ಮತ್ತು ಆಕೆಯ ಓರ್ವ ಸಹಾಯಕನಷ್ಟೇ. ಮುಂದಿನ ದಿನಗಳಲ್ಲಿ ಚಾಲ್ತಿಗೆ ಬಂದ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿ.ಸಿ.ಆರ್) ಎಂಬ ತ್ವರಿತಗತಿಯಲ್ಲಿ ಫಲಿತಾಂಶವನ್ನು ನೀಡುವ ತಂತ್ರಜ್ಞಾನವು ಆ ಆರಂಭದ ದಿನಗಳಲ್ಲಿರಲಿಲ್ಲ. ರಿಸ್ಟ್ರಿಕ್ಷನ್ ಫ್ರಾಗ್ಮೆಂಟ್ ಲೆಂಗ್ತ್ ಪಾಲಿಮಾರ್ಫಿಸಮ್ (ಆರ್.ಎಫ್.ಎಲ್.ಪಿ) ಎಂಬ ವಿಧಾನದಲ್ಲಿ ನಡೆಸಲಾಗುತ್ತಿದ್ದ ಪರೀಕ್ಷಾ ವಿಧಾನದಲ್ಲಿ ಒಂದು ಮಾದರಿಯ ಸಂಪೂರ್ಣ ಪರೀಕ್ಷೆಗೆ ಬರೋಬ್ಬರಿ ಎರಡು ವಾರಗಳು ತಗುಲುತ್ತಿದ್ದವು. ವರ್ಷಕ್ಕೆ ಹೆಚ್ಚೆಂದರೆ ಮೂವತ್ತೈದು ಪರೀಕ್ಷೆಗಳನ್ನು ಡಿ.ಎನ್.ಎ ತಜ್ಞನೊಬ್ಬ ಆ ದಿನಗಳಲ್ಲಿ ಮಾಡಬಹುದಾಗಿತ್ತು.
ನಗರದಲ್ಲಿ ಅಪರಾಧಗಳ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದ್ದವು. ಸಿ.ಎಫ್.ಎಸ್ ನ ಬಳಿ ಮೊದಲೇ ಬೇಕಾದಷ್ಟು ಮಾದರಿಗಳು ಡಿ.ಎನ್.ಎ ಮತ್ತು ಇತರೆ ಪರೀಕ್ಷೆಗಳಿಗಾಗಿ ಕಾಯುತ್ತಿದ್ದವು. ನ್ಯಾಯಾಲಯಗಳ ವಿಚಾರಣೆಯ ನಿಗದಿತ ದಿನಾಂಕಗಳು ಹತ್ತಿರ ಬರುತ್ತಿದ್ದಂತೆಯೇ, ತಜ್ಞರ ಸಂಖ್ಯೆಯು ಕಮ್ಮಿಯಿದ್ದ ಸಿ.ಎಫ್.ಎಸ್ ನಲ್ಲೂ ಜವಾಬ್ದಾರಿಯ ಒತ್ತಡವು ಹೆಚ್ಚಾಗುತ್ತಿತ್ತು. ಕಿಮ್ ರ ವಿಪರೀತವಾದ ಕೆಲಸದ ಒತ್ತಡದಿಂದಾಗಿ ಒಂದು ವರ್ಷದಲ್ಲಿ ಮುಗಿಯಬೇಕಾಗಿದ್ದ ಡಿ.ಎನ್.ಎ ತಂತ್ರಜ್ಞಾನದ ತರಬೇತಿಯು ಎರಡು ವರ್ಷಗಳಿಗೆ ಎಳೆಯಲ್ಪಟ್ಟಿದ್ದವು. ತರಬೇತಿಯ ಒಂದೆರಡು ತಿಂಗಳುಗಳು ಇನ್ನೂ ಬಾಕಿಯಿರುವಂತೆಯೇ ವಿಧಿಯಿಲ್ಲದೆ ಪಾಮ್ ಳನ್ನು ಡಿ.ಎನ್.ಎ ವಿಭಾಗದ ಸಾರಥಿಯ ಸ್ಥಾನದಲ್ಲಿ ಕುಳ್ಳಿರಿಸಬೇಕಾಯಿತು. ಹೀಗಾಗಿ ಸ್ಕಾರ್-ಬೋರೋ ಪ್ರಕರಣದ ಸಂಬಂಧದ ಡಿ.ಎನ್.ಎ ಮಾದರಿಯ ಪರೀಕ್ಷೆಗಾಗಿ, ಮಾದರಿಗಳನ್ನು ಬೇಕಾಬಿಟ್ಟಿಯಾಗಿ ಸಿ.ಎಫ್.ಎಸ್ ನ ಪರೀಕ್ಷಾಲಯದಲ್ಲಿ ರಾಶಿಹಾಕುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಪೋಲೀಸರು ಇನ್ನಷ್ಟು ನಿಖರವಾದ ಮಾಹಿತಿಗಳನ್ನು ಪ್ರಾಥಮಿಕ ಹಂತದಲ್ಲಿ ಕಲೆಹಾಕಿ, ಬೇರ್ಪಡಿಸಿ, ಆರಿಸಿದ ಕೆಲವೇ ಮಾದರಿಗಳನ್ನಷ್ಟೇ ಸಿ.ಎಫ್.ಎಸ್ ಗೆ ಮುಂದಿನ ಪರೀಕ್ಷೆಗಳಿಗಾಗಿ ನೀಡಬೇಕಾಗಿತ್ತು.
ಸೆರಾಲಜಿ ಹಂತದ ಪರೀಕ್ಷೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಲ್ಪಟ್ಟು, ಬೇರ್ಪಟ್ಟ ಕೆಲ ಮಾದರಿಗಳನ್ನಷ್ಟೇ ಮುಂದಿನ ಹಂತವಾದ ಡಿ.ಎನ್.ಎ ಪರೀಕ್ಷೆಗಾಗಿ ತೆಗೆದುಕೊಳ್ಳಬೇಕಾಗಿತ್ತು. ಸಿ.ಎಫ್.ಎಸ್ ನ ನಿರ್ದೇಶಕರಾಗಿದ್ದ ಡಾ. ಲೂಕಾಸ್ ರ ಲಿಖಿತ ಒಪ್ಪಿಗೆ ಎಲ್ಲಾ ಡಿ.ಎನ್.ಎ ಪರೀಕ್ಷೆಗಳಿಗೆ ಕಡ್ಡಾಯವಾಗಿತ್ತು. ಮೊದಮೊದಲು ತಾನೇ ಖುದ್ದಾಗಿ ನೋಡುತ್ತಿದ್ದರೂ, ಪಾಮ್ ರ ನಿಯುಕ್ತಿಯ ಬಳಿಕ ಈ ಒಪ್ಪಿಗೆಯೆಂಬ ಕಾಟಾಚಾರದ ಸಂಪ್ರದಾಯವನ್ನು ನಿರ್ದೇಶಕರು ಪಾಮ್ ರ ಹೆಗಲಿಗೇರಿಸಿದ್ದರು. ಬಂದ ಮಾದರಿಯ ಬಗ್ಗೆ ಪಾಮ್ ರ ಅಭಿಪ್ರಾಯವನ್ನು ಕೇಳಿ ತಿಳಿದುಕೊಂಡು ಕಣ್ಣುಮುಚ್ಚಿ ಸಹಿಹಾಕುವುದಷ್ಟೇ ಅವರ `ರಬ್ಬರ್ ಸ್ಟಾಂಪ್' ಕೆಲಸವಾಯಿತು. ಹೀಗಾಗಿ ಪಾಮ್ ನಾವೆಲ್ ಎಂಬ ಹೊಸ ಮಹಿಳೆ ಸಿ.ಎಫ್.ಎಸ್ ನಲ್ಲಿ ನಿಧಾನವಾಗಿ ಕಿಮ್ ರಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದರಲ್ಲಿ ಸಫಲರಾಗಿದ್ದರು.
ಸಾಮಾನ್ಯವಾಗಿ ಪೋಲೀಸರು ಸಂಗ್ರಹಿಸಿದ ಮಾದರಿಯನ್ನು ಸೆರಾಲಜಿ ಹಂತದ ಪರೀಕ್ಷೆಗಾಗಿ ಸಿ.ಎಫ್.ಎಸ್ ನ ಕಿಮ್ ರನ್ನು ಸಂಪರ್ಕಿಸಿ, ಆಕೆಗೆ ಮಾದರಿಯನ್ನು ಅಧಿಕೃತವಾಗಿ ಹಸ್ತಾಂತರಿಸುತ್ತಿದ್ದರು. ಸೆರಾಲಜಿ ಹಂತದ ಪರೀಕ್ಷೆಯ ಬಳಿಕ ಕಿಮ್ ಜಾನ್ಸ್ಟನ್ ಒಂದು ವರದಿಯನ್ನು ತಯಾರಿಸಿ ಯಾವ ಮಾದರಿಗಳು ಡಿ.ಎನ್.ಎ ಪರೀಕ್ಷೆಗೆ ಯೋಗ್ಯ ಎಂಬುದನ್ನು ಶಿಫಾರಸು ಮಾಡಿ, ಮಾದರಿಗಳನ್ನು ಪೋಲೀಸರಿಗೆ ಮರಳಿಸಬೇಕಿತ್ತು. ಹೀಗೆ ಡಿ.ಎನ್.ಎ ಪರೀಕ್ಷೆಗೆ ಯೋಗ್ಯ ಎಂದು ಪರಿಗಣಿಸಲ್ಪಟ್ಟ ಮಾದರಿಯ ಆರೋಪಿಗಳನ್ನು ಇನ್ನಷ್ಟು ತನಿಖೆಗೊಳಪಡಿಸಿ, ಈ ಪಟ್ಟಿಯನ್ನು ಇನ್ನಷ್ಟು ನಿಖರಗೊಳಿಸಬೇಕಾಗಿರುವುದು ಪೋಲೀಸರ ಜವಾಬ್ದಾರಿಯಾಗಿತ್ತು. ಈ ವಿಧಾನದಿಂದ ಅನವಶ್ಯಕ ಮಾದರಿಗಳನ್ನು ಕ್ಲಿಷ್ಟಕರವಾದ ಡಿ.ಎನ್.ಎ ಮಾದರಿಯ ಪರೀಕ್ಷೆಗೊಳಪಡಿಸುವುದನ್ನು ತಪ್ಪಿಸಿದಂತಾಗಿ ಫಲಿತಾಂಶಗಳು ನಿಖರವಾಗಿಯೂ, ತ್ವರಿತವಾಗಿಯೂ ಬರುವುದು ಖಚಿತವಾಗಿದ್ದವು.
1990 ರ ನವೆಂಬರ್ 21 ರಂದು ಸ್ಕಾರ್-ಬೋರೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೌಲ್ ಬರ್ನಾರ್ಡೊನ ಮಾದರಿಗಳು ಸ್ಥಳೀಯ ಪೋಲೀಸರಿಂದ ಸಿ.ಎಫ್.ಎಸ್ ಅನ್ನು ತಲುಪಿದ್ದವು. ಮೊದಲ ಹಂತದ ಸೆರಾಲಜಿ ವಿಭಾಗದ ಪರೀಕ್ಷೆಗಳು 1990 ರ ಡಿಸೆಂಬರ್ 13 ರಲ್ಲಿ ಮುಕ್ತಾಯವಾದವು. ಆದರೆ ಮುಂದೆ ನಡೆದದ್ದೇ ಬೇರೆ. 1991 ರ ಅಕ್ಟೋಬರ್ 17 ರಲ್ಲೂ ಉಳಿದ ಐದು ಮಾದರಿಗಳೊಂದಿಗೆ ಪೌಲ್ ಬರ್ನಾರ್ಡೊನ ಮಾದರಿಗಳು ಇದೇ ಹಂತದಲ್ಲಿ ಸಿಲುಕಿಕೊಂಡಿದ್ದವು. ಅಂದರೆ ಈ ನಡುವಿನ ಹತ್ತು ತಿಂಗಳ ಅವಧಿಯಲ್ಲಿ, ಐವರು ಶಂಕಿತ ಆರೋಪಿಗಳ ಮಾದರಿಯ ಪರೀಕ್ಷೆಗೆ ಸಂಬಂಧಪಟ್ಟಂತೆ ಯಾವುದೇ ಪ್ರಗತಿಯಾಗಿರಲಿಲ್ಲ. ಮುಂದೆ ಸೆರಾಲಜಿ ಹಂತದ ಪರೀಕ್ಷೆಗಳು ಮುಗಿದು ಹದಿನೈದು ತಿಂಗಳುಗಳೇ ಕಳೆದಿದ್ದರೂ ಮತ್ತು ಈ ಪರೀಕ್ಷೆಗಳಿಂದ ಅಂತಿಮವಾಗಿ ಐದು ಮಾದರಿಗಳು ಡಿ.ಎನ್.ಎ ಮಾದರಿಯ ಅಂತಿಮ ಪರೀಕ್ಷೆಗೆಂದು ಆಯ್ಕೆಯಾಗಿದ್ದರೂ, ನೈಜವಾಗಿ ಯಾವ ಪ್ರಗತಿಯೂ ಆಗಿರಲಿಲ್ಲ.
ಅಸಲಿಗೆ ಈ ಐದು ಮಾದರಿಗಳು ಡಿ.ಎನ್.ಎ ಪರೀಕ್ಷೆಗೆ ತಯಾರಾಗಿ ಕಿಮ್ ರ ಪರೀಕ್ಷಾಲಯದ ಶೆಲ್ಫ್ ಗಳಲ್ಲಿ ಕುಳಿತಿವೆ ಎಂಬುದೇ ನಿರ್ದೇಶಕ ಡಾ. ಲೂಕಾಸ್ ಮತ್ತು ಡಿ.ಎನ್.ಎ ವಿಭಾಗದ ಮುಖ್ಯಸ್ಥೆ ಪಾಮ್ ಗೆ ತಿಳಿದಿರಲಿಲ್ಲ. ಸಹೋದ್ಯೋಗಿಗಳಾಗಿದ್ದ ಪಾಮ್ ನಾವೆಲ್ ಮತ್ತು ಕಿಮ್ ಜಾನ್ಸ್ಟನ್ ಒಳಗೊಳಗೇ ಕಚ್ಚಾಡುತ್ತಿರುವುದು ರಹಸ್ಯವಾಗೇನೂ ಉಳಿದಿರಲಿಲ್ಲ. ಸ್ಥಳೀಯ ಪೋಲೀಸ್ ವಿಭಾಗದ ಜೊತೆಗಿನ ನಂಟಿನ ಬಗ್ಗೆ ಇದ್ದ ಒಣಹೆಮ್ಮೆಯ ಜೊತೆಗೇ ಇತರ ಆಂತರಿಕ ವಿಷಯಗಳ ಕುರಿತಂತೆ ಈ ಇಬ್ಬರು ಮಹಿಳೆಯರಲ್ಲಿ ಶೀತಲ ಸಮರವೊಂದು ನಡೆಯುತ್ತಿತ್ತು. ತಾವು ಸಿ.ಎಫ್.ಎಸ್ ಗೆ ಕೊಟ್ಟ ಐದು ಮಾದರಿಗಳು ಏನಾದವು ಎಂದು ಕೇಳುವ ಗೋಜಿಗೆ ಪೋಲೀಸರೂ ಹೋಗಲಿಲ್ಲ. ಹಾಗೆಯೇ ಬಾಕಿಯಿರುವ ಐದು ಮಾದರಿಗಳನ್ನು ಇನ್ನೇನು ಮಾಡಬೇಕಾಗಿದೆ ಎಂದು ಮುಂದುವರೆಯುವ ಗೋಜಿಗೆ ಕಿಮ್ ಕೂಡ ಹೋಗಲಿಲ್ಲ. ಅತ್ತ ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳು ಹಟಾತ್ತನೆ ನಿಂತುಹೋದ ಮೇಲೆ ಈ ಕ್ಲಿಷ್ಟಕರ ಡಿ.ಎನ್.ಎ ಪರೀಕ್ಷೆಗಳ ಜಂಜಾಟಗಳು ಯಾರಿಗೂ ಬೇಡವಾದವು. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಇತರ ಕೇಸುಗಳತ್ತ ಗಮನ ಹರಿಸಿದ ಪೋಲೀಸ್ ಇಲಾಖೆಯು ಭಯಾನಕ ಸ್ಕಾರ್-ಬೋರೋ ಪ್ರಕರಣಗಳ ಐವರು ಶಂಕಿತ ಆರೋಪಿಗಳನ್ನು ಮರೆತೇಬಿಟ್ಟಿತ್ತು.
ಮುಂದೆ 1992 ರ ಎಪ್ರಿಲ್ ನಲ್ಲಿ ಎಚ್ಚರಗೊಂಡ ಪೋಲೀಸ್ ಇಲಾಖೆಯು ನೆನೆಗುದಿಗೆ ಬಿದ್ದಿದ್ದ ಡಿ.ಎನ್.ಎ ಮಾದರಿಗಳ ಪರೀಕ್ಷೆಗಳನ್ನು ಆಗ್ರಹಿಸಿ ಹೊಸ ಅರ್ಜಿಯೊಂದನ್ನು ಸಿ.ಎಫ್.ಎಸ್ ಗೆ ಸಲ್ಲಿಸಿತು. ಐದು ಮಾದರಿಗಳನ್ನು ತನ್ನಲ್ಲಿ ಇಟ್ಟುಕೊಂಡಿದ್ದ ಸಿ.ಎಫ್.ಎಸ್ ಯಾವುದೇ ಕಾರಣಗಳನ್ನು ಕೊಡದೆ ಐದೂ ಮಾದರಿಗಳನ್ನು ಪೋಲೀಸ್ ಇಲಾಖೆಗೆ ಮರಳಿಸಿ, “ಈ ಮಾದರಿಗಳ ಆರೋಪಿಗಳನ್ನು ಇನ್ನೂ ಪರೀಕ್ಷೆಗೊಳಪಡಿಸಿ, ಒಂದೆರಡು ಮಾದರಿಗಳನ್ನು ಕೈಬಿಟ್ಟು, ನಿಖರವಾದ ಮಾದರಿಗಳನ್ನಷ್ಟೇ ಡಿ.ಎನ್.ಎ ಪರೀಕ್ಷೆಗಾಗಿ ಶಿಫಾರಸ್ಸು ಮಾಡಿ'' ಎಂದು ಹೇಳಿ ಕೈತೊಳೆದುಕೊಂಡಿತು. ಹದಿನೈದು ತಿಂಗಳುಗಳು ವಿನಾಕಾರಣ ಮಣ್ಣುಪಾಲಾಗಿದ್ದವು. ಮಾದರಿಗಳನ್ನು ಪೋಲೀಸ್ ವಿಭಾಗವು ಮರಳಿ ಪಡೆದುಕೊಂಡಿತಾದರೂ, ಕ್ರಮೇಣ ಪ್ರಾಮುಖ್ಯತೆಗಳು ಬದಲಾದವು. ಅತ್ತ ಸಿ.ಎಫ್.ಎಸ್, ತಾನು ಕೊಟ್ಟ ಮಾದರಿಗಳಲ್ಲಿ ಒಂದೆರಡಾದರೂ ಕಮ್ಮಿಯಾಗಿ ಮಾದರಿಗಳು ಮರಳಿ ಕೈಸೇರುತ್ತವೆ ಎಂದು ಯೋಚಿಸಿ ಈ ಮಾದರಿಗಳನ್ನು ಮರೆತೇ ಬಿಟ್ಟಿತು. ಪೋಲೀಸ್ ಇಲಾಖೆಯ ಯಾವುದೇ ಉನ್ನತ ಮಟ್ಟದ ಅಧಿಕಾರಿಯೂ ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳಲ್ಲಿ ಏನು ಪ್ರಗತಿಯಾಗುತ್ತಿದೆ ಎಂಬ ಮಾಹಿತಿಯನ್ನು ಕುತೂಹಲಕ್ಕಾದರೂ ಕೇಳಲಿಲ್ಲ. ಅಂತೆಯೇ ಡಿ.ಎನ್.ಎ ಮಾದರಿಯ ಪರೀಕ್ಷೆಗಾಗಿ ಸಿ.ಎಫ್.ಎಸ್ ನ ನಿರ್ದೇಶಕರಾದ ಡಾ. ಲೂಕಾಸ್ ರ ಮೇಲೆಯೂ ಯಾವ ಒತ್ತಡವನ್ನೂ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಹೇರಲಿಲ್ಲ. ಅಸಲಿಗೆ ಒಂದು ವ್ಯವಸ್ಥಿತವಾದ ಸಂವಹನ ಎಂಬುದೇ ಸ್ಕಾರ್-ಬೋರೋ ಸರಣಿ ಅತ್ಯಾಚಾರಗಳ ಪ್ರಕರಣಗಳಲ್ಲಿ ಪೋಲೀಸ್ ಇಲಾಖೆ ಮತ್ತು ಸಿ.ಎಫ್.ಎಸ್ ನ ಮಧ್ಯೆ ಇರಲಿಲ್ಲ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಮುಂದೆ ಹಲವು ತಿಂಗಳುಗಳ ಅಮೂಲ್ಯವಾದ ಸಮಯವನ್ನು ಹಾಳುಮಾಡಿದ ಪೋಲೀಸ್ ಇಲಾಖೆಯು ಮತ್ತೊಮ್ಮೆ ಆ ಐದು ಮಾದರಿಗಳನ್ನೇ ಸಿ.ಎಫ್.ಎಸ್ ಗೆ ಡಿ.ಎನ್.ಎ ಮಾದರಿಯ ಪರೀಕ್ಷೆಗಾಗಿ ಹಸ್ತಾಂತರಿಸಿತು. ಮಾದರಿಗಳು ಕಮ್ಮಿಯಾಗಿ ಕೈಸೇರುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ಸಿ.ಎಫ್.ಎಸ್ ಗೆ ಈ ಬಾರಿ ನಿರಾಶೆಯಾಗಿತ್ತು. ಕೊನೆಗೂ ಪರೀಕ್ಷೆಗಳನ್ನು ನಡೆಸಿ, “ಪೌಲ್ ಬರ್ನಾರ್ಡೊನ ಡಿ.ಎನ್.ಎ ಮಾದರಿಗಳು ಸ್ಕಾರ್-ಬೋರೋ ಅತ್ಯಾಚಾರಕ್ಕೊಳಗಾದ ಮೂವರು ಯುವತಿಯರ ದೇಹದಿಂದ ಪಡೆದುಕೊಂಡ ವೀರ್ಯದ ಡಿ.ಎನ್.ಎ ಮಾದರಿಗಳಿಗೆ ಸಂಪೂರ್ಣವಾಗಿ ಹೋಲಿಕೆಯಾಗಿವೆ'' ಎಂಬ ಫಲಿತಾಂಶವು ಹೊರಬಂದಾಗ ದಿನಾಂಕವು 1993 ರ ಡಿಸೆಂಬರ್ 1 ಅನ್ನು ತೋರಿಸುತ್ತಿದ್ದವು.
ಕೊನೆಗೂ ಇಪ್ಪತ್ತೈದೂವರೆ ತಿಂಗಳುಗಳ ಬಳಿಕ ಸ್ಕಾರ್-ಬೋರೋ ಪ್ರಕರಣಗಳಿಗೆ ತಾರ್ಕಿಕ ಅಂತ್ಯವೊಂದು ಸಿಕ್ಕಿತ್ತು.
*******************
(ಮುಂದುವರೆಯುವುದು)