ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 6): ಪ್ರಸಾದ್ ಕೆ.

prasad kಇಲ್ಲಿಯವರೆಗೆ

ಪೌಲ್ ಬರ್ನಾರ್ಡೊ ನ ಬಂಧನದ ಬೆನ್ನಿಗೇ ಮಾಧ್ಯಮಗಳು “ದ ಸ್ಕಾರ್-ಬೋರೋ ರೇಪಿಸ್ಟ್'' ನ ಬಂಧನವಾಯಿತು ಎಂದು ಒಂದರ ಹಿಂದೊಂದರಂತೆ ಮುಖಪುಟಗಳಲ್ಲಿ ಪ್ರಕಟಿಸುತ್ತವೆ. ಮೊದಲೇ ಸೆನ್ಸೇಶನಲ್ ನ್ಯೂಸ್ ಆಗಿದ್ದ ಈ ಪ್ರಕರಣವು ಈಗಂತೂ ದಂಪತಿಗಳ ಬಂಧನದ ಬಳಿಕ ನಿತ್ಯವೂ ಒಂದಲ್ಲಾ ಒಂದು ಸುದ್ದಿಯನ್ನು ಬಿತ್ತರಿಸಿ ಪ್ರಕರಣದ ಬಿಸಿಯನ್ನು ಕಾಯ್ದುಕೊಂಡಿರುವಂತೆ ಮಾಡುತ್ತವೆ. ಈ ಸಂಬಂಧ ಒಂದು ಅಪೀಲನ್ನು ಸಲ್ಲಿಸುವ ದ ಕ್ರೌನ್ (ಪ್ರಾಸಿಕ್ಯೂಷನ್), `ಈ ಪ್ರಕರಣದ ಮಿತಿಮೀರಿದ ಕುಖ್ಯಾತಿಯ ಪರಿಣಾಮವಾಗಿ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಜ್ಯೂರಿ ಸಮೂಹವು ಗಾಳಿಮಾತು ಮತ್ತು ಮಾಧ್ಯಮಗಳಿಂದ ಪ್ರೇರಿತರಾಗಿ, ತೀರ್ಪು ಏಕಪಕ್ಷೀಯವಾಗುವ ಸಂಭವವಿದೆ. ಹೀಗಾಗಿ ಪ್ರಕರಣದ ಮುಖ್ಯ ಆರೋಪಿ ಪೌಲ್ ಬರ್ನಾರ್ಡೋ ತನ್ನ ಹಕ್ಕಾದ ನಿಷ್ಪಕ್ಷಪಾತ ವಿಚಾರಣೆಯ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಈ ಸಂಬಂಧ ಪ್ರಕರಣದ ಆರೋಪಿ ಪೌಲ್ ಬರ್ನಾರ್ಡೊ ನ ವಿಚಾರಣೆಯು ಅಂತ್ಯಗೊಂಡು, ತೀರ್ಪು ಹೊರಬೀಳುವವರೆಗೂ ಯಾವುದೇ ಮಾಧ್ಯಮ ಪ್ರತಿನಿಧಿಗಳನ್ನು ಕೋರ್ಟ್ ಆವರಣದಲ್ಲಿ ಬಿಡಬಾರದಷ್ಟೇ ಅಲ್ಲದೆ ಪ್ರಕರಣ ಸಂಬಂಧದ ಯಾವುದೇ ವರದಿಯನ್ನು ಬಹಿರಂಗಪಡಿಸುವಂತಿಲ್ಲವೆಂಬ ಆದೇಶ ಬಿಡುಗಡೆಯಾಗಲಿ' ಎಂದು ಅರ್ಜಿಯನ್ನು ಸಲ್ಲಿಸುತ್ತದೆ.

ಕಾರ್ಲಾ ಹೊಮೋಲ್ಕಾಳ ವಕೀಲರ ತಂಡ ಕ್ರೌನ್ ನ ಈ ನಡೆಯನ್ನು ಅನುಮೋದಿಸುತ್ತದೆ. ಆದರೆ ಪೌಲ್ ಬರ್ನಾರ್ಡೊ ಪರ ವಕೀಲರು ಈ ಅಪೀಲನ್ನು ವಿರೋಧಿಸುತ್ತಾ, `ಮಾಧ್ಯಮಗಳಿಗೆ ಒತ್ತಾಯಪೂರ್ವಕವಾಗಿ ನಿರ್ಬಂಧವನ್ನು ವಿಧಿಸಿದರೆ, ಮೊದಲೇ ಸಾಕಷ್ಟು ಕುಖ್ಯಾತಿಯನ್ನು ಪಡೆದುಕೊಂಡಿರುವ ಈ ಪ್ರಕರಣವು ಮತ್ತಷ್ಟು ಪೌಲ್ ಬರ್ನಾರ್ಡೊ ನ ವಿರುದ್ಧವೇ ಏಕಪಕ್ಷೀಯವಾಗಿ ಬದಲಾಗುವ ಸಂಭವವಿದೆ' ಎಂದು ವಾದಿಸುತ್ತಾರೆ. ಕೊನೆಗೂ ಹಲವು ವಾದಗಳನ್ನು ಆಲಿಸಿ, ಪರೀಕ್ಷಿಸುವ ನ್ಯಾಯಪೀಠವು 1993 ರ ಜುಲೈ 3 ರಂದು ಈ “ಸ್ಕಾರ್-ಬೋರೋ ರೇಪಿಸ್ಟ್'' ಪ್ರಕರಣದ ಸಂಬಂಧ ಮಾಧ್ಯಮಗಳಿಗೆ (ಟಿ.ವಿ, ರೇಡಿಯೋ ಮತ್ತು ಪತ್ರಿಕೆಗಳು) ನಿರ್ಬಂಧವನ್ನು ವಿಧಿಸುತ್ತದೆ. 

ಆದರೆ ಈ ನಿರ್ಬಂಧ ಅಷ್ಟೇ ದಯನೀಯವಾಗಿ ವಿಫಲವಾಗಿದ್ದೂ ಸತ್ಯ. ಏಕೆಂದರೆ ಈ ಮಾಧ್ಯಮ ನಿರ್ಬಂಧದ ಆದೇಶ ಓಂಟಾರಿಯೋ ಪ್ರದೇಶದ ಮಾಧ್ಯಮಗಳಿಗಷ್ಟೇ ಅನ್ವಯವಾಗುತ್ತಿತ್ತು. ಬಗಲಿನಲ್ಲಿರುವ ಅಮೇರಿಕಾದ ಮಾಧ್ಯಮಗಳು ಪ್ರಕರಣದ ಬಗ್ಗೆ ತಮ್ಮ ಮೂಲಗಳಿಂದ ಮಾಹಿತಿಗಳನ್ನು ಪಡೆದು ದಂಡಿಗಟ್ಟಲೆ ಬರೆಯುತ್ತವೆ. “ಸ್ಕಾರ್-ಬೋರೋ ರೇಪಿಸ್ಟ್'' ಪ್ರಕರಣದ ಬಿಸಿಯನ್ನು ರಾತ್ರೋರಾತ್ರಿ ಮಾಯವಾಗಿಸುವುದು ಸುಲಭದ ಮಾತಾಗಿರಲಿಲ್ಲ. ಪ್ರಕರಣವನ್ನು ಕೆನಡಾ ಮತ್ತು ಅಮೆರಿಕಾದ ಮಾಧ್ಯಮಗಳು ಆರಂಭದಿಂದಲೇ ವರದಿ ಮಾಡುತ್ತಲೇ ಬಂದಿದ್ದವು. ಅದರಲ್ಲೂ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ನ ಬಂಧನದ ಬಳಿಕ, ಈ ಎರಡು ಮುಖಗಳು ಆಗಾಗ ಮಾಧ್ಯಮಗಳಲ್ಲಿ ಗೋಚರವಾಗಿ ಎಲ್ಲರಿಗೂ ಚಿರಪರಿಚಿತವಾಗಿದ್ದವು. ಈ ಸುಂದರವಾದ ಜೋಡಿಯನ್ನು ಬಾರ್ಬಿ ಗೊಂಬೆಗಳಿಗೆ ಹೋಲಿಸುತ್ತಾ “ಬಾರ್ಬಿ ಆಂಡ್ ಕೆನ್ ಕಿಲ್ಲರ್ಸ್'', “ಕಿಲ್ಲರ್ ಕಾರ್ಲಾ'' ಎಂದೆಲ್ಲಾ ಮಾಧ್ಯಮಗಳು ಇವರಿಬ್ಬರನ್ನು ಪ್ರಸ್ತುತಪಡಿಸಿದ್ದವು. ಅಂತರ್ಜಾಲದ ಯುಗದಲ್ಲಿ ಮಾಹಿತಿಯ ಸೋರಿಕೆಯು ಸಾಮಾನ್ಯವಾಗಿರುವುದರಿಂದ ಪ್ರಕರಣದ ಗೌಪ್ಯತೆಯನ್ನು ಕಾದಿಡಲು ಮಾಡಿದ ನ್ಯಾಯಾಲಯದ ಪ್ರಯತ್ನವು ವಿಫಲವಾಗುತ್ತದೆ. ಆದರೂ ರಹಸ್ಯ ವಿಡಿಯೋ ಟೇಪ್ ಗಳ ಸತ್ಯಗಳು ಬಹಳ ತಡವಾಗಿ ಸಾರ್ವಜನಿಕರಿಗೆ ತಲುಪಿದ್ದವು. ಈ ಸಂಪೂರ್ಣ ಪ್ರಕರಣದಲ್ಲಿ, ಅದರಲ್ಲೂ ವಿಶೇಷವಾಗಿ ಕಾರ್ಲಾ ಹೊಮೋಲ್ಕಾಳ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳಲು ಸಾರ್ವಜನಿಕರು ತುದಿಗಾಲಿನಲ್ಲಿ ನಿಂತಿದ್ದಿದು ಸತ್ಯ. ಆದರೆ ವೀಡಿಯೋ ಟೇಪ್ ಗಳಂಥಾ ವಿವಾದಾತ್ಮಕ ಸಾಕ್ಷಿಗಳ ವಿಚಾರದಲ್ಲಿ ನ್ಯಾಯಾಲಯವು ಅಷ್ಟೇ ಜಾಗರೂಕತೆಯನ್ನು ವಹಿಸಿದ ಪರಿಣಾಮ ಎಲ್ಲವೂ ನಿರೀಕ್ಷಿಸಿದ್ದ ವೇಗದಲ್ಲಿ ಸುದ್ದಿಯಾಗಲಿಲ್ಲ.

ಮುಂದೆ ವಿಶೇಷವಾಗಿ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ರ ಅಪರಾಧಗಳನ್ನು ಹಸಿಹಸಿಯಾಗಿ ಬಿಚ್ಚಿಟ್ಟಿದ್ದ ವೀಡಿಯೋ ಟೇಪ್ ಗಳು ರಹಸ್ಯವಾಗೇ ಉಳಿದು ಮಹಾಫಿ, ಫ್ರೆಂಚ್ ಮತ್ತು ಜೇನ್ ಡೋ ರ ಕುಟುಂಬಗಳು ನಿಟ್ಟುಸಿರು ಬಿಡುವಂತಾಯಿತು. ಈ ಬಗ್ಗೆ ಪ್ರಬಲ ಒತ್ತಡ ಹೇರಿದ್ದ ಕುಟುಂಬಗಳ ವಕೀಲರು “ಇಂಥಾ ಭಯಾನಕ, ವಿಕೃತ, ಕೀಳುಮಟ್ಟದ ಮತ್ತು ಹಿಂಸೆಯ ಅತಿರೇಕದ ವೀಡಿಯೋ ಗಳನ್ನು ಸಾಕ್ಷಿಯ ನೆಪದಲ್ಲಿ ಪದೇಪದೇ ತೋರಿಸಿ ತಮ್ಮ ಕಕ್ಷಿದಾರರ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಗೌರವಗಳಿಗೆ ತೀವ್ರ ಧಕ್ಕೆ ತರುವುದರಿಂದ ಯಾವುದೇ ಪ್ರಯೋಜನವಿಲ್ಲ'', ಎಂದು ವಾದಿಸುತ್ತಾರೆ. ಪ್ರಕರಣ ಬೆಳಕಿಗೆ ಬರುವರೆಗೂ ತನ್ನ ಮೇಲೆ ನಡೆದ ದೌರ್ಜನ್ಯಗಳ ಅರಿವೇ ಇಲ್ಲದಿದ್ದ ಜೇನ್ ಡೋ, ತಾನು ಮೂರ್ಛಾವಸ್ಥೆಯಲ್ಲಿದ್ದಾಗ ತನ್ನ ಮೇಲೆ ಮಾಡಲಾದ ಎಲ್ಲಾ ಸರಣಿ ಅಮಾನುಷ ಅತಿರೇಕಗಳನ್ನು ಬಹಿರಂಗಪಡಿಸುವ ವೀಡಿಯೋ/ಆಡಿಯೋ ಗಳನ್ನು ಮತ್ತು ಈ ವೀಡಿಯೋ/ಆಡಿಯೋ ಸಾಕ್ಷ್ಯಗಳ ಕೆಲ ಗಂಭೀರ ಮತ್ತು ಅತೀ ವೈಯಕ್ತಿಕ ಎನಿಸುವ ಭಾಗಗಳ ವಿಚಾರಣೆ/ಚರ್ಚೆಯ ಭಾಗಗಳನ್ನು ಸಾರ್ವಜನಿಕರಿಂದ ದೂರವಿಡಲು ಮನವಿ ಮಾಡಿಕೊಳ್ಳುತ್ತಾರೆ. ಈ ವಾದಗಳನ್ನು ಗಂಭೀರವಾಗಿ ಪರಿಗಣಿಸುವ ನ್ಯಾಯಾಲಯವು, “ಪ್ರಕರಣಗಳ ವಿಚಾರಣೆಗಳು ಸಂಪೂರ್ಣವಾಗಿ ಮುಗಿಯುವವರೆಗೆ ವೀಡಿಯೋ ಟೇಪ್ ಗಳು ನ್ಯಾಯಾಲಯದ ಅಧೀನದಲ್ಲಿರಲಿದ್ದು ಯಾವ ರೀತಿಯಲ್ಲೂ, ಯಾವ ಸಂದರ್ಭದಲ್ಲೂ ಸಾರ್ವಜನಿಕರು/ಮಾಧ್ಯಮಗಳು ಇದನ್ನು ಪಡೆಯುವಂತಿಲ್ಲ. ಮತ್ತು ಈ ಕಠಿಣ ನಿರ್ಬಂಧ ಪ್ರಕರಣದ ವಿಚಾರಣೆಗಳು ಮುಗಿದ ನಂತರವೂ ಪರಿಸ್ಥಿತಿಗಳಿಗೆ ಅನುಗುಣವಾಗಿ ಮುಂದುವರೆಯಬಹುದು'' ಎಂದು ಆದೇಶವನ್ನು ಹೊರಡಿಸಿ ಈ ರಹಸ್ಯ ವಿಡಿಯೋ ಟೇಪ್ ಗಳ ಸಂಪೂರ್ಣ ಸಾರ್ವಭೌಮತೆಯನ್ನು ತನ್ನ ಕಬಂಧಬಾಹುಗಳಲ್ಲಿರಿಸುತ್ತದೆ.    

ಸದ್ಯದ ಮಟ್ಟಿಗೆ ಕಾರ್ಲಾ ಹೊಮೋಲ್ಕಾ ವಿವಾದಾತ್ಮಕ ಪ್ರಕರಣದ ಏಕಮಾತ್ರ ಪ್ರತ್ಯಕ್ಷ ಸಾಕ್ಷಿಯಾಗಿದ್ದಳು. ಪೌಲ್ ಬರ್ನಾರ್ಡೊನ ಭವಿಷ್ಯ ಕಾರ್ಲಾಳ ಹೇಳಿಕೆಯ ಮೇಲೆ ಅವಲಂಬಿತವಾಗಿತ್ತು. ಬಿಡುಗಡೆಯಾದ ಸರ್ಚ್ ವಾರಂಟಿನ ಆಧಾರದಲ್ಲಿ ನಡೆದ ಶೋಧದಲ್ಲಿ ಒಂದು ವೀಡಿಯೋ ಟೇಪ್ ಅಷ್ಟೇ ಪೋಲೀಸರ ಕೈ ಸೇರಿತ್ತು. ಮೂರ್ಛಾವಸ್ಥೆಯಲ್ಲಿದ್ದ ಓರ್ವ ಅಪ್ರಾಪ್ತ ಬಾಲಕಿಯ ಅತ್ಯಾಚಾರವು ಒಂದೂವರೆ ನಿಮಿಷಗಳ ಈ ವೀಡಿಯೋ ತುಣುಕಿನಲ್ಲಿ ಸೆರೆಯಾಗಿತ್ತು. ಈ ಬಾಲಕಿಯು ಮೊದಲು ಕ್ರಿಸ್ಟನ್ ಫ್ರೆಂಚ್ ಎಂದು ಅಂದಾಜಿಸಲಾದರೂ ಅಸಲಿಗೆ ಜೇನ್ ಡೋ ಎಂಬ (ಬದಲಿಸಿದ) ಹೆಸರಿನಿಂದ ಕರೆಯಲ್ಪಡುವ ಬಾಲಕಿಯದ್ದಾಗಿತ್ತು. ಈಗಾಗಲೇ ಮೂವರು ಬಾಲಕಿಯರ ಪ್ರಕರಣಗಳು ಜೀವಂತವಾಗಿದ್ದಾಗಲೇ ವಿನಾಕಾರಣ ನಾಲ್ಕನೇ ಕೇಸೊಂದು ತೆರೆದುಕೊಂಡಿತ್ತು. ಮುಂದೆ 1993 ರ ಮೇ 6 ರಂದು ಬರ್ನಾರ್ಡೊ ತನ್ನ ವಕೀಲನಾದ ಕೆನ್ ಮುರ್ರೇ ಬಳಿ ತನ್ನ ಮನೆಯ ಬಾತ್ ರೂಮಿನ ಮೇಲ್ಛಾವಣಿಯ ಭಾಗದಲ್ಲಿ ಬಚ್ಚಿಟ್ಟಿದ್ದ ಆರು ವೀಡಿಯೋ ಟೇಪ್ ಗಳ ಬಗ್ಗೆ ಮಾಹಿತಿಯಿತ್ತು, ಅವುಗಳನ್ನು ತಂದಿಟ್ಟುಕೊಳ್ಳಲು ಸೂಚಿಸುತ್ತಾನೆ. ಮೇ 17 ರಂದು ಕಾರ್ಲಾ ತನಿಖಾಧಿಕಾರಿಗಳನ್ನು ಪೋರ್ಟ್ ಡಾಲ್-ಹೌಸಿ ಮನೆಗೆ ಕರೆದುಕೊಂಡು ಹೋಗಿ, ಲೆಸ್ಲಿಯ ಕತ್ತರಿಸಿದ ದೇಹದ ಭಾಗಗಳನ್ನು ಬಚ್ಚಿಡಲು ಖರೀದಿಸಿದ ಸಿಮೆಂಟ್ ಬ್ಯಾಗುಗಳ ರಸೀದಿಯನ್ನು ಖುದ್ದಾಗಿ ಅವರಿಗೆ ಹಸ್ತಾಂತರಿಸುತ್ತಾಳೆ.

ಪೋರ್ಟ್ ಡಾಲ್-ಹೌಸಿ ಮನೆಯ ಬಾತ್ ರೂಮಿನಿಂದ ತಂದ ವೀಡಿಯೋ ಟೇಪುಗಳನ್ನು ವೀಕ್ಷಿಸಿದ ಪೌಲ್ ನ ವಕೀಲ ಕೆನ್ ಮುರ್ರೇ ಗೆ ವೀಡಿಯೋದಲ್ಲಿ ಕಾರ್ಲಾಳ ಭಾಗೀದಾರಿಕೆಯು ಸ್ಪಷ್ಟವಾಗಿ ಕಾಣುತ್ತಿತ್ತು. ಈ ವೀಡಿಯೋ ಟೇಪುಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿ ಕಾರ್ಲಾಳನ್ನೂ ಕೂಡ ಪೌಲ್ ನಂತೆಯೇ ತಪ್ಪಿತಸ್ಥೆಯ ಸ್ಥಾನದಲ್ಲಿರಿಸುವ ಯೋಜನೆಯನ್ನು ಕೆನ್ ಹಾಕಿಕೊಂಡ. ಆದರೆ ಕೆನ್ ನ ಈ ನಡೆಯು ತಿರುಗುಬಾಣವಾಗಿ ಪೌಲ್ ಬರ್ನಾರ್ಡೊನ ವಾದವನ್ನು ಇನ್ನಷ್ಟು ಕ್ಷೀಣಗೊಳಿಸಿತು. ಈ ವೀಡಿಯೋ ಟೇಪುಗಳನ್ನು ತನಿಖಾದಳಗಳು ಇನ್ನೂ ನೋಡಿಲ್ಲದ ಪರಿಣಾಮವಾಗಿ, ಸಾಕ್ಷಿಗಳನ್ನು ಉದ್ದೇಶಪೂರ್ವಕವಾಗಿ ಹಿಡಿದಿಟ್ಟುಕೊಂಡು ಪ್ರಕರಣದ ದಿಕ್ಕು ತಪ್ಪಿಸಿದ ಆರೋಪವನ್ನು ಹೊತ್ತುಕೊಳ್ಳಬೇಕಾಗಿ ಬಂದು, ಪೌಲ್ ಮತ್ತು ಅವನ ಅನನುಭವಿ ವಕೀಲರ ಪಡೆ ತೀವ್ರ ಮುಖಭಂಗವನ್ನು ಅನುಭವಿಸಬೇಕಾಯಿತು.

ದಿನಗಳು ಕಳೆದಂತೆ ಪ್ರಕರಣವು ಹೊಸ ಹೊಸ ತಿರುವನ್ನು ಪಡೆದುಕೊಳ್ಳುತ್ತಾ ಹೋಗುವುದು ಸಾಮಾನ್ಯವಾಯಿತು. ಅತ್ಯಾಚಾರ, ಹಿಂಸೆ ಮತ್ತು ಕೊಲೆ ಪ್ರಕರಣಗಳಲ್ಲಿ ಕಾರ್ಲಾಳೂ ಸಮಭಾಗೀದಾರಳೆಂದೂ, ತನ್ನ ಪತಿಯ ಒತ್ತಡದಿಂದಲ್ಲದೆ ತಾನೇ ಸ್ವಇಚ್ಛೆಯಿಂದ ಈ ಕ್ರಿಯೆಗಳಲ್ಲಿ ತೊಡಗಿದ್ದಾಳೆಂದೂ ಪೌಲ್ ಪರ ವಕೀಲ ಪದೇ ಪದೇ ವಾದಿಸಿದರೂ, ನ್ಯಾಯಾಲಯದಲ್ಲಿ ವಾದವು ಬಿದ್ದುಹೋಗುತ್ತಿತ್ತು. ಕಾಲವು ಪೌಲ್ ಪರ ವಕೀಲರಿಗೆ ಮಿಂಚಿಹೋಗಿತ್ತು. ದಿಕ್ಕು ತಪ್ಪಿದಂತಾದ ಕೆನ್ ತನ್ನ ಕೆಲವು ಸಹೋದ್ಯೋಗಿಗಳನ್ನು ಮತ್ತು ಕಾನೂನು ತಜ್ಞರನ್ನು ಸಂಪರ್ಕಿಸಿದಾಗ ಈ ವೀಡಿಯೋ ಟೇಪುಗಳನ್ನು ಅಧಿಕೃತವಾಗಿ ನ್ಯಾಯಾಲಯಕ್ಕೆ ಹಸ್ತಾಂತರಿಸಿ, ಪೌಲ್ ನ ವಕೀಲನಾಗಿ ತನ್ನ ಸೇವೆಯನ್ನು ಮುಗಿಸಬೇಕೆಂದೂ ಅಭಿಪ್ರಾಯಗಳು ಕೇಳಿಬಂದವು. ಮುಂದೆ 1995 ರಲ್ಲಿ ವಕೀಲ ಜಾನ್ ರೊಸೆನ್, ಪೌಲ್ ಬರ್ನಾರ್ಡೊ ನ ವಕೀಲರಾಗಿ ಕೆನ್ ನ ಸ್ಥಾನದಲ್ಲಿ ಬಂದು ಪೌಲ್ ನನ್ನು ಪ್ರತಿನಿಧಿಸುತ್ತಾರೆ. ವಿವಾದಿತ ವೀಡಿಯೋ ಟೇಪುಗಳು ಅಧಿಕೃತವಾಗಿ ನ್ಯಾಯಾಲಯದ ಅಧೀನವಾಗುತ್ತವೆ. ಆದರೆ ಪ್ರಕರಣವು ಈಗಾಗಲೇ ಪೌಲ್ ಬರ್ನಾರ್ಡೊನ ವಿರುದ್ಧವಾಗಿ ಬಹುತೇಕ ಮಗುಚಿ ನೆಲಕಚ್ಚಿರುತ್ತದೆ.

ಪ್ರಕರಣದ ಪ್ರಬಲ ಸಾಕ್ಷಿಯಾದ, ಹಲವು ದಿನಗಳಿಂದ ವಿವಾದಕ್ಕೆ ಕಾರಣವಾದ ವೀಡಿಯೋ ಟೇಪುಗಳನ್ನಾಧರಿಸಿದ ವಿಚಾರಣೆಯು ಶುರುವಾಗುತ್ತದೆ. ಈವರೆಗೆ ಈ ಸಂಪೂರ್ಣ ಪ್ರಕರಣದಲ್ಲಿ ಪೌಲ್ ಮತ್ತು ಕಾರ್ಲಾರ ಪಾಲುಗಳು ಎಷ್ಟೆಷ್ಟು ಎಂಬುದು ಇದುವರೆಗೂ ಯಾರಿಗೂ ತಿಳಿದಿರುವುದಿಲ್ಲ. ಪೌಲ್-ಕಾರ್ಲಾ ಜೋಡಿಯಿಂದ ಅತ್ಯಾಚಾರ ಮತ್ತು ಕೊಲೆಗಳಿಗೆ ಬಲಿಯಾದ ಕುಟುಂಬಗಳನ್ನು ಪ್ರತಿನಿಧಿಸುತ್ತಿದ್ದ ವಕೀಲ ಟಿಮ್ ಡಾನ್ಸನ್ ಈ ಭಯಾನಕ ವೀಡಿಯೋ ಟೇಪ್ ಗಳನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರು, ವಕೀಲರುಗಳು, ಜ್ಯೂರಿ ಸಮೂಹ ಮತ್ತು ಉಪಸ್ಥಿತರಿದ್ದ ಕೆಲವೇ ನ್ಯಾಯಾಲಯದ ಸಿಬ್ಬಂದಿಗಳಿಗೆ ಸಾಕ್ಷಿಯ ರೂಪದಲ್ಲಿ ವೀಕ್ಷಿಸಲು ಅನುಮತಿಯನ್ನು ಆಗ್ರಹಿಸಿ ಸಫಲರಾಗಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತವರಿಗೆ ಈ ವೀಡಿಯೋ ಟೇಪುಗಳ ಆಡಿಯೋ ಭಾಗವನ್ನಷ್ಟೇ ಹೆಡ್-ಫೋನ್ ಗಳ ಸಹಾಯದಿಂದ ಕೇಳಿಸಲಾಗುತ್ತದೆ. ವಿಪರೀತ ಎನ್ನಬಹುದಾದಷ್ಟು ಕೀಳುಮಟ್ಟದ ಕಂಟೆಂಟ್ ಗಳನ್ನು ಹೊಂದಿರುವ ಈ ವೀಡಿಯೋ ಟೇಪ್ ಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುತ್ತಿದ್ದಾಗ ಟ್ಯಾಮಿ ಹೊಮೋಲ್ಕಾ, ಲೆಸ್ಲಿ ಮಹಾಫಿ, ಕ್ರಿಸ್ಟನ್ ಫ್ರೆಂಚ್ ಮತ್ತು ಜೇನ್ ಡೋರ ಕುಟುಂಬಗಳನ್ನು ನ್ಯಾಯಾಲಯದ ಸಭಾಂಗಣದಿಂದ ದೂರವಿರಿಸಿದ್ದು ಸಮಯೋಚಿತ ಮತ್ತು ಶ್ಲಾಘನೀಯ.

ಏನೇ ಆದರೂ ಈ ಭೀಭತ್ಸ ವೀಡಿಯೋ ಟೇಪುಗಳಿಂದ ಕಾರ್ಲಾ ಹೊಮೋಲ್ಕಾ ಕೂಡ ತನ್ನ ಪತಿ ಪೌಲ್ ಬರ್ನಾರ್ಡೊ ನಂತೆಯೇ ಸ್ಯಾಡಿಸ್ಟ್ ಮಹಿಳೆಯಾಗಿದ್ದಳು ಎಂಬುದು ಸಾಬೀತಾಗುತ್ತದೆ. ಪ್ರಕರಣಗಳ ಭೀಕರತೆಯನ್ನು ತೋರಿಸುವ ಈ ವೀಡಿಯೋ ಟೇಪುಗಳು ಕಾರ್ಲಾ ಹೊಮೋಲ್ಕಾ ಈ ಎಲ್ಲಾ ಪ್ರಕ್ರಿಯೆಗಳಲ್ಲೂ ಸ್ವಇಚ್ಛೆಯಿಂದ ಪಾಲ್ಗೊಂಡಿದ್ದಲ್ಲದೆ, ಪೌಲ್ ಬರ್ನಾರ್ಡೊನಷ್ಟೇ ಜವಾಬ್ದಾರಳು ಎಂಬುದು ಬಟಾಬಯಲಾಗುತ್ತದೆ. ಈ ವಿಲಕ್ಷಣ, ಭೀಭತ್ಸ ವೀಡಿಯೋಗಳನ್ನು ನೋಡಿದ ಜ್ಯೂರಿಯ ಸದಸ್ಯರು ಮುಖಕಿವುಚಿಕೊಂಡರೆ, ಹೆಡ್ ಫೋನ್ ಗಳನ್ನು ಬಳಸಿ ಆಡಿಯೋ ಭಾಗವನ್ನಷ್ಟೇ ಕೇಳಿದ ಗ್ಯಾಲರಿಯಲ್ಲಿದ್ದ ಕೆಲವರು `ಆಡಿಯೋನೇ ಇಷ್ಟು ಭಯಾನಕವಾಗಿತ್ತು, ಇನ್ನು ವೀಡಿಯೋ ಹೇಗಿರಬಹುದು', ಎಂದು ಬೆಚ್ಚಿಬೀಳುತ್ತಾರೆ. ಅದರಲ್ಲೂ ತಡವಾಗಿಯಾದರೂ ಇಂಥಾ ಸೂಕ್ಷ್ಮ ವಿಷಯಗಳು ನ್ಯಾಯಾಲಯದ ಆವರಣದಿಂದ ಹೊರಗೆ ಸೋರಿ ಹೋಗಿ ಮಾಧ್ಯಮಗಳ ಮೂಲಕ ಅಪ್ಪಳಿಸಿದ ಮೇಲಂತೂ ಕಾರ್ಲಾ ಹೊಮೋಲ್ಕಾಳ ವಿರುದ್ಧ ಕೆನಡಾದಾದ್ಯಂತ ಧಿಕ್ಕಾರದ ಕೂಗು ಎದ್ದಿರುತ್ತದೆ.

ಆದರೆ ಕಾರ್ಲಾ ಹೊಮೋಲ್ಕಾ ಈಗಾಗಲೇ ಪ್ಲೀ ಬಾರ್ಗೈನ್ ನಡೆಯನ್ನು ಈ ವಿವಾದಿತ ಕಾನೂನಿನ ಸಮರದ ಚದುರಂಗದಲ್ಲಿ ನಡೆಸಿದ ಪರಿಣಾಮವಾಗಿ ಸುರಕ್ಷಿತವಾಗಿರುತ್ತಾಳೆ. ಕಾರ್ಲಾಳಿಗೆ ಹನ್ನೆರಡು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂಬ ಲಿಖಿತ ಒಪ್ಪಂದವನ್ನು ಈಗಾಗಲೇ ಮಾಡಿರುವುದರಿಂದ ಬಿಡುಗಡೆಯಾದ ವಿಡಿಯೋ ಟೇಪುಗಳು ಕಾನೂನಿನ ಪರಿಧಿಯಲ್ಲಿ ಅವಳಿಗೆ ಯಾವ ತೊಂದರೆಯನ್ನೂ ಮಾಡುವುದಿಲ್ಲ. ಅಲ್ಲದೆ ಪ್ಲೀ ಬಾರ್ಗೈನ್ ಒಪ್ಪಂದದ ಪ್ರಕಾರ ಈಗಾಗಲೇ ಪ್ರಕರಣದ ಸಾಕಷ್ಟು ಮಾಹಿತಿಗಳನ್ನು ತನಿಖಾಧಿಕಾರಿಗಳಿಗೆ ಕಾರ್ಲಾ ಹೋಮೋಲ್ಕಾ ಕೊಟ್ಟಿರುವ ಕಾರಣದಿಂದಾಗಿ, ಒಪ್ಪಂದದ ವಿರುದ್ಧ ಕಾನೂನಿನ ಸಮರವನ್ನು ಮಾಡುವುದಾಗಲೀ, ಪ್ರಕರಣವನ್ನು ಇನ್ನೊಂದು ಹಂತದಲ್ಲಿ ಮರುವಿಚಾರಣೆ ಮಾಡುವ ಸಾಧ್ಯತೆಗಳಾಗಲೀ ನೆಲಕಚ್ಚುತ್ತವೆ.

ಶೋಷಿತೆ ಜೇನ್ ಡೋ, ಮೃತ ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಕುಟುಂಬದ ಸದಸ್ಯರು ದಂಗುಬಡಿದವರಂತೆ ನ್ಯಾಯಾಲಯದಲ್ಲಿ ಕುಳಿತಿದ್ದರೆ, ಕಿರಿಮಗಳು ಟ್ಯಾಮಿಯ “ಆಕಸ್ಮಿಕ'' ಸಾವಿನಲ್ಲಿ ಕಾರ್ಲಾ-ಪೌಲ್ ರ ಕೈವಾಡವನ್ನು ಅರಿತ ಆಕೆಯ ಹೆತ್ತವರು ಆಘಾತದಲ್ಲಿ ಜೀವಂತ ಶವಗಳಂತೆ ಸ್ತಬ್ಧರಾಗಿರುತ್ತಾರೆ. ಆದರೆ ಯಾರಿಗೂ ಕಾರ್ಲಾ ಹೊಮೋಲ್ಕಾಳ ಮುಖದಲ್ಲಿ ಪಶ್ಚಾತ್ತಾಪದ ಲವಲೇಶವೂ ಕಾಣುವುದಿಲ್ಲ. 

***************       

(ಮುಂದುವರೆಯುವುದು)   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x