ಪ್ರಸಾದ್ ಕೆ ಅಂಕಣ

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 4): ಪ್ರಸಾದ್ ಕೆ.

ಇಲ್ಲಿಯವರೆಗೆ

1991 ರ ಜೂನ್ 29 ರಂದು ಅತ್ತ ಲೇಕ್ ಗಿಬ್ಸನ್ ಕೊಳದಲ್ಲಿ ಭಾರವಾದ ಕಾಂಕ್ರೀಟಿನ ಡಬ್ಬಗಳನ್ನು ಹೊರತಂದು ಸುಳಿವಿಗಾಗಿ ತಡಕಾಡುತ್ತಿದ್ದರೆ, ಇತ್ತ ನಯಾಗರಾದ ಆಸುಪಾಸಿನ ಪ್ರಖ್ಯಾತ ಚರ್ಚ್ ಒಂದರಲ್ಲಿ ಅದ್ದೂರಿ ವಿವಾಹದ ಸಮಾರಂಭವೊಂದು ನಡೆಯುತ್ತಿರುತ್ತದೆ. ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ಕೊನೆಗೂ ತಮ್ಮ ಸ್ನೇಹಿತರು, ಹೆತ್ತವರು ಮತ್ತು ಬಂಧುಬಳಗದ ಉಪಸ್ಥಿತಿಯಲ್ಲಿ ಆ ದಿನ ಅದ್ದೂರಿಯಾಗಿ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ದಂಪತಿಗಳಾಗುತ್ತಾರೆ. ಬರೋಬ್ಬರಿ ಎರಡು ಸಾವಿರ ಡಾಲರುಗಳನ್ನು ತೆತ್ತು ಖರೀದಿಸಿದ ಮದುವಣಗಿತ್ತಿಯ ದಿರಿಸು, ಬಿಳಿಕುದುರೆಗಳನ್ನೊಳಗೊಂಡ ಸಾರೋಟು, ಮಿತಿಯಿಲ್ಲದ ಶಾಂಪೇನ್, ದುಬಾರಿ ಗಿಫ್ಟ್ ಗಳು ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ವಿಲಾಸಿ ಮದುವೆಯನ್ನು ಕಂಡ ಸ್ನೇಹಿತರು ದಂಗಾದರಂತೆ. ಕಾರ್ಲಾ ಹೊಮೋಲ್ಕಾಳ ಕೇಶವಿನ್ಯಾಸದಿಂದ ಹಿಡಿದು ಊಟದ ಮೆನುವಿನವೆರೆಗೆ ಎಲ್ಲವೂ ಅಚ್ಚುಕಟ್ಟಾಗಿರುವಂತೆ ಪೌಲ್ ನೋಡಿಕೊಂಡಿದ್ದ. “ಒಂದು ಪ್ಲೇಟಿಗೆ ಐವತ್ತು ಡಾಲರ್ ವೆಚ್ಚವಾದರೆ, ಕನಿಷ್ಠ ಒಬ್ಬ ಅತಿಥಿಯಿಂದ ನೂರು ಡಾಲರ್ ಆದರೂ ಉಡುಗೊರೆಯ ರೂಪದಲ್ಲಿ ಬರಲೇಬೇಕು'', ಎಂದು ಮದುಮಗ, ಮಾಜಿ ಅಕೌಂಟೆಂಟ್ ಪೌಲ್ ಬರ್ನಾರ್ಡೊ ಲೆಕ್ಕ ಹಾಕಿದ್ದನಂತೆ. ಸುಮಾರು ನೂರೈವತ್ತು ಅತಿಥಿಗಳು ಈ “ಫೇರಿಟೇಲ್ ವೆಡ್ಡಿಂಗ್'' ಗೆ ಆಗಮಿಸಿ ವಧುವರರ ನವಜೋಡಿಯನ್ನು ಹರಸುತ್ತಾರೆ. ಅಂತೆಯೇ ಪೌಲ್ ನ ನಿರೀಕ್ಷೆಯಂತೆ ಉಡುಗೊರೆಗಳೂ ಸಾಕಷ್ಟು ಬಂದಿರುತ್ತವೆ. ನಿಶ್ಚಿತಾರ್ಥದ ತರುವಾಯದ ಒಂದೂವರೆ ವರ್ಷಗಳು ಕಳೆದ ಬಳಿಕ ಕೊನೆಗೂ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ಅಧಿಕೃತವಾಗಿ ಪತಿಪತ್ನಿಯರಾಗಿರುತ್ತಾರೆ. 

ಆದರೆ ಕಾರ್ಲಾ ಜೊತೆಗಿನ ವಿವಾಹದಲ್ಲಿ ಪೌಲ್ ಗೆ ಅಂಥಾ ಆಕರ್ಷಣೆಯೇನೂ ಉಳಿದಿರುವುದಿಲ್ಲ. ಕಾರ್ಲಾ ಹೊಮೋಲ್ಕಾ ಇನ್ನೇನಿದ್ದರೂ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆಯಷ್ಟೇ ಎಂದು ಪೌಲ್ ಗೆ ತಿಳಿದಿರುತ್ತದೆ. ಸದಾ `ಕನ್ಯೆ'ಯರ ದೇಹಕ್ಕಾಗಿ ಹಂಬಲಿಸುವ ಸೈಕೋಪಾತ್ ನಂತೆ ಬದಲಾಗಿದ್ದ ಪೌಲ್ ನಿಗೆ ಈಗ ಕಾರ್ಲಾಳ ಸೌಂದರ್ಯ ಮಬ್ಬಾದಂತೆ ಕಂಡುಬರುತ್ತದೆ. ಅಲ್ಲದೆ ಆಕೆ ತನ್ನನ್ನು ಇನ್ನೂ ಪ್ರೀತಿಸುತ್ತಿರುವುದರಿಂದ ಮತ್ತು ತನ್ನ ವಿಕೃತ ಸಂತೋಷಕ್ಕಾಗಿ ಯಾವ ಮಟ್ಟಿಗಾದರೂ ಇಳಿಯಬಲ್ಲ ಹೆಣ್ಣಾದುದರಿಂದ, ಪೌಲ್ ತನ್ನ ಪತ್ನಿ ಕಾರ್ಲಾಳ ಮೇಲಿನ ಹಿಡಿತವನ್ನು ತನ್ನ ಸ್ವಾರ್ಥಕ್ಕೆ ತಕ್ಕಂತೆ ಇನ್ನಷ್ಟು ಬಿಗಿಗೊಳಿಸುತ್ತಾನೆ. ಟ್ಯಾಮಿಯ ಕೊಲೆಯಲ್ಲಿ ತನ್ನಷ್ಟೇ ಭಾಗೀದಾರಳಾದ ಕಾರ್ಲಾ ತನ್ನಿಂದ ದೂರಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಸತ್ಯ ಪೌಲ್ ಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಈಗಲೂ ಸಿಗರೇಟಿನ ಸ್ಮಗ್ಲಿಂಗ್ ನಿಂದ ಹಿಡಿದು ಚಿಕ್ಕಪುಟ್ಟ ಅನಾಮಿಕ ದಂಧೆಗಳನ್ನು ಮಾಡುತ್ತಲೇ ದಾಂಪತ್ಯ ಜೀವನ ಸಾಗುತ್ತಿರುತ್ತದೆ. ಈಗಾಗಲೇ ಪೌಲ್ ನ ಹಲವು ವಿಲಕ್ಷಣ, ಅನೈತಿಕ ಕೆಲಸಗಳಲ್ಲಿ ಕಾರ್ಲಾ ಭಾಗಿಯಾಗಿರುತ್ತಾಳೆ. ಇವೆಲ್ಲದರ ಮಧ್ಯೆಯೇ ಚಿಕ್ಕಪುಟ್ಟ ಅಭಿಪ್ರಾಯಭೇದಗಳಲ್ಲೂ ಹೊಡೆತ, ದೈಹಿಕ ಹಿಂಸೆ ಮುಂತಾದವುಗಳು ಕಾರ್ಲಾಳ ಮೇಲೆ ನಿರಂತರವಾಗಿ ಮುಂದುವರೆಯುತ್ತವೆ.

*************** 

1992 ರ ಎಪ್ರಿಲ್ 16 ರಂದು ಕಾರ್ಲಾ ಮತ್ತು ಪೌಲ್ ದಂಪತಿಗಳು ಕಾರೊಂದರಲ್ಲಿ ಮತ್ತೊಂದು ಮಾನವಬೇಟೆಯ ಶಿಕಾರಿಗೆ ಹೊರಡುತ್ತಾರೆ. ಮರುದಿನ ಗುಡ್ ಫ್ರೈಡೇಯ ಪವಿತ್ರದಿನ ಬರಲಿರುತ್ತದೆ. ಸೈಂಟ್-ಕ್ಯಾಥರೀನ್ ನಗರದ ಬ್ಲಾಕ್ ಗಳಲ್ಲಿ ಡ್ರೈವ್ ಮಾಡುತ್ತಾ, ನಗರದ ಉತ್ತರ ಭಾಗದಲ್ಲಿರುವ ಕ್ಯಾಥೋಲಿಕ್ ಶಾಲೆಯಾದ ಹೋಲಿ ಕ್ರಾಸ್ ಸೆಕೆಂಡರಿ ಸ್ಕೂಲಿನ ಬಳಿ ನಡೆದುಕೊಂಡು ಹೋಗುತ್ತಿರುವ ಬಾಲಕಿಯೊಬ್ಬಳು ಇವರ ಕಣ್ಣಿಗೆ ಬೀಳುತ್ತಾಳೆ. ಪಕ್ಕದಲ್ಲಿದ್ದ ಗ್ರೇಸ್ ಲುಥೆರನ್ ಚರ್ಚಿನ ಬಳಿ ಕಾರನ್ನು ಪಾರ್ಕ್ ಮಾಡಿದ ಪೌಲ್, ಕಣ್ಣಲ್ಲೇ ಕಾರಿನಲ್ಲಿ ಕುಳಿತಿದ್ದ ಕಾರ್ಲಾಗೆ ಸಂಜ್ಞೆಯನ್ನು ಮಾಡುತ್ತಾನೆ. ಕಾರ್ಲಾ ಹೊಮೋಲ್ಕಾ ಮೊದಲೇ ತಂದಿಟ್ಟುಕೊಂಡಿದ್ದ ನಗರದ ನಕಾಶೆಯೊಂದನ್ನು ಹಿಡಿದು ಕಾರಿನಿಂದ ಹೊರಬರುತ್ತಾಳೆ. 

ಶಾಲೆಯನ್ನು ಮುಗಿಸಿ ಲಗುಬಗೆಯಿಂದ ಲಿನ್ವೆಲ್ ಮಾರ್ಗವಾಗಿ ಮನೆಗೆ ತೆರಳುತ್ತಿರುವ ಹದಿನೈದರ ಬಾಲಕಿ ಕ್ರಿಸ್ಟನ್ ಫ್ರೆಂಚ್, ಕಾರೊಂದರ ಬಳಿ ನಿಂತು ನಕಾಶೆಯನ್ನು ಹಿಡಿದುಕೊಂಡ ಎತ್ತರದ ನಿಲುವಿನ, ಹೊಂಬಣ್ಣದ ಕೂದಲಿನ ಮಹಿಳೆಯೊಬ್ಬಳು ತನ್ನನ್ನು ಕರೆಯುವುದನ್ನು ನೋಡುತ್ತಾಳೆ. ತನ್ನ ಹಿರಿಯಕ್ಕನ ವಯಸ್ಸಿನ, ನಕಾಶೆ ಹಿಡಿದು ಅತ್ತಿತ್ತ ನೋಡುತ್ತಿರುವ, ಹಾಗೆಯೇ ತನ್ನೆಡೆಗೆ ಸಂಜ್ಞೆಯನ್ನು ಮಾಡುತ್ತಿರುವ ಸುಂದರ ತರುಣಿಯು ದಾರಿತಪ್ಪಿರುವಳೋ ಏನೋ ಎಂಬ ಕಾಳಜಿಯಿಂದ ಕ್ರಿಸ್ಟನ್ ಆಕೆಯ ಕಡೆ ತೆರಳುತ್ತಾಳೆ. ತನ್ನೆಡೆಗೆ ಬಂದ ಕಿಸ್ಟನ್ ಗೆ ಮುಗುಳ್ನಗೆಯನ್ನು ಬೀರುತ್ತಾ, ನಕಾಶೆಯನ್ನು ಬಿಡಿಸಿ, ಜಾಗದ ಹೆಸರೊಂದನ್ನು ಹೇಳಿ, ಅಲ್ಲಿಗೆ ಹೇಗೆ ಹೋಗಬಹುದು ಎಂದು ಕಾರ್ಲಾ ಬಾಲಕಿಯಲ್ಲಿ ಕೇಳುತ್ತಾಳೆ. 

ಕಾರ್ಲಾಳ ಬಗಲಿನಲ್ಲಿ ಕಾರಿಗೆ ಆತುಕೊಂಡು ಕ್ರಿಸ್ಟನ್ ನಕಾಶೆಯನ್ನು ನೋಡುತ್ತಿದ್ದಂತೆಯೇ ಹಿಂಬದಿಯಿಂದ ಪುರುಷ ಧ್ವನಿಯೊಂದು ತನ್ನ ಬೆನ್ನಿಗೆ ಮೆತ್ತಗೆ ಚಾಕುವಿನಿಂದ ಚುಚ್ಚುತ್ತಾ, ಸದ್ದಿಲ್ಲದೆ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಆದೇಶವನ್ನು ನೀಡುತ್ತದೆ. ಭಯಭೀತಳಾದ ಕ್ರಿಸ್ಟನ್ ಫ್ರೆಂಚ್ ಮರುಮಾತಿಲ್ಲದೆ ಆಗಂತುಕ ಚಾಲಕನ ಬಗಲಿನಲ್ಲಿದ್ದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತಾಳೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಕಾರ್ಲಾ ಬಾಲಕಿಯ ಕೂದಲನ್ನು ಹಿಂದಿನಿಂದ ಬಿಗಿಯಾಗಿ ಎಳೆದು ಹಿಡಿಯುತ್ತಾ, ಮಿಸುಕಾಡಿದರೆ ಕೊಂದೇಬಿಡುವೆನೆಂದು ಹೆದರಿಸುತ್ತಾ ಪೌಲ್ ಗೆ ಸಾಥ್ ನೀಡುತ್ತಾಳೆ. ಆ ಬೀದಿಯಲ್ಲಿ ಜನಸಂದಣೆಯೇ ಇರಲಿಲ್ಲ ಎಂದು ಹೇಳಲಾಗದಿದ್ದರೂ, ಇತರ ಬೀದಿಗಳಿಗೆ ಹೋಲಿಸಿದರೆ ತಕ್ಕಮಟ್ಟಿಗೆ ನಿರ್ಜನ ಪ್ರದೇಶವಾಗಿದ್ದ ಆ ಬೀದಿಯಿಂದ ಬಂದ ವೇಗದಲ್ಲೇ ಕಾರು ಮಾಯವಾಗುತ್ತದೆ. 

ಮನೆಯಿಂದ ಸಾಕಷ್ಟು ಹತ್ತಿರದಲ್ಲೇ ಇರುವ ಶಾಲೆಯಿಂದ ಮಗಳು ಇನ್ನೂ ಬರಲಿಲ್ಲ ಎಂದು ಭಯಭೀತರಾದ ಕ್ರಿಸ್ಟನ್ ಳ ಹೆತ್ತವರು ಸಹಾಯಕ್ಕಾಗಿ ಸ್ಥಳೀಯ ನಯಾಗರಾ ರೀಜನಲ್ ಪೋಲೀಸರ (ಎನ್.ಆರ್.ಪಿ) ಬಾಗಿಲು ತಟ್ಟುತ್ತಾರೆ. ಪ್ರತಿಭಾವಂತೆ ಕ್ರಿಸ್ಟನ್ ಓರ್ವ ವಿಧೇಯ ಹೆಣ್ಣುಮಗಳೆಂದೂ, ಹಾಗೆಲ್ಲಾ ಹೇಳದೇ ಕೇಳದೇ ಎಲ್ಲಿಗೂ ಹೋಗುವವಳಲ್ಲವೆಂದೂ, ದಿನವೂ ಶಾಲೆಯಿಂದ ಮನೆಗೆ ಗ್ರೇಸ್ ಲುಥೆರನ್ ಚರ್ಚಿನ ಮಾರ್ಗವಾಗಿಯೇ ಬರುತ್ತಿದ್ದಳೆಂದೂ ಹೆತ್ತವರು ಪೋಲೀಸರಿಗೆ ಮಾಹಿತಿಯನ್ನು ಕೊಡುತ್ತಾರೆ. ಲೆಸ್ಲೀ ಮಹಾಫಿಯ ಪ್ರಕರಣ ಇನ್ನೂ ತಣ್ಣಗಾಗಿಲ್ಲದ ಪರಿಣಾಮ, ಅಂಥಾ ಬರ್ಬರತೆಯು ಇಲ್ಲೂ ಮರುಕಳಿಸುವ ಸಾಧ್ಯತೆಯನ್ನು ಮನಗಂಡ ಎನ್.ಆರ್.ಪಿ ಪೋಲೀಸರು ಬಾಲಕಿಯ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. “ಗ್ರೀನ್ ರಿಬ್ಬನ್ ಪ್ರಾಜೆಕ್ಟ್'' ಎಂಬ ಹೆಸರಿನಲ್ಲಿ ಆರಂಭವಾಗುವ ಈ ಹುಡುಕಾಟದಲ್ಲಿ ಸಕ್ರಿಯರಾದ ಪೋಲೀಸ್ ಅಧಿಕಾರಿಗಳ ತಂಡವನ್ನೂ “ಗ್ರೀನ್ ರಿಬ್ಬನ್ ಟಾಸ್ಕ್ ಫೋರ್ಸ್'' ಎಂದು ಕರೆಯಲಾಗುತ್ತದೆ. ಅನುಭವಿ ಅಧಿಕಾರಿ ವಿನ್ಸ್ ಬೆವನ್ ಈ ಪಡೆಯ ಮುಖ್ಯಸ್ಥರಾಗಿರುತ್ತಾರೆ.  

ಗ್ರೇಸ್ ಲುಥೇರನ್ ಚರ್ಚಿನ ಬೀದಿಗೆ ಬರುವ ಎನ್.ಆರ್.ಪಿ ಪೋಲೀಸರ ತಂಡ ಕ್ರೈಂ ಟೇಪ್ ಗಳನ್ನು ಉದ್ದಕ್ಕೂ ಹಚ್ಚಿ ತನ್ನ ತನಿಖೆಯನ್ನು ಆರಂಭಿಸುತ್ತದೆ. ನಾಪತ್ತೆಯಾದ ಬಾಲಕಿಯ ಸುಳಿವಿನ ಜಾಡು ಹುಡುಕ ಹೊರಟ ಪೋಲೀಸರಿಗೆ ಪಾರ್ಕಿಂಗ್ ಲಾಟ್ ನಲ್ಲಿ ಅನಾಥವಾಗಿ ಬಿದ್ದುಕೊಂಡಿರುವ, ಹದಿನಾಲ್ಕರಿಂದ ಹದಿನಾರರ ವಯಸ್ಸಿನ ಹೆಣ್ಣುಮಕ್ಕಳು ಹಾಕಿಕೊಳ್ಳುವ ಬಲಗಾಲಿನ ಒಂದು ಶೂ ಪತ್ತೆಯಾಗುತ್ತದೆ. ಅಂತೆಯೇ ಹರಿದುಹೋಗಿದ್ದ ಟೊರಾಂಟೋ ನಗರದ ಒಂದು ನಕಾಶೆಯೂ, ಕೂದಲುಗಳೂ ಈ ಸ್ಥಳದಲ್ಲಿ ಪತ್ತೆಯಾಗುತ್ತದೆ. ಈ ನಕಾಶೆಯನ್ನು ಬೆರಳಚ್ಚಿನ ಪರೀಕ್ಷೆಗಾಗಿ ಫಾರೆನ್ಸಿಕ್ ವಿಭಾಗಕ್ಕೆ ಕಳಿಸಲಾಗುತ್ತದೆ. ಘಟನೆ ನಡೆದ ಜಾಗದ ಆಸುಪಾಸಿನ ಜನರನ್ನು ಸಂದರ್ಶಿಸುವ ಇಲಾಖೆಯ ತನಿಖಾ ತಂಡಕ್ಕೆ, ಕೊನೆಯ ಬಾರಿ ಕ್ರಿಸ್ಟನ್ ಅನ್ನು ಓರ್ವ ಸ್ಫುರದ್ರೂಪಿ ತರುಣ ಮತ್ತು ಸುಂದರಿ ತರುಣಿಯ ಜೊತೆ ಕಾರ್ ಒಂದರ ಸಮೀಪದಲ್ಲಿ ನೋಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿಯನ್ನು ನೀಡುತ್ತಾರೆ. ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆನ್ನಲಾದ ಕಾರಿನ ಬಣ್ಣ ಮತ್ತು ಮಾಡೆಲ್ ಅನ್ನು ನೋಟ್ ಮಾಡಿಕೊಂಡ ಅಧಿಕಾರಿಗಳು ಕಾರಿನ ಮತ್ತು ಅದರ ಮಾಲೀಕನಿಗಾಗಿ ಬಲೆಬೀಸುತ್ತಾರೆ. ಅಂತೆಯೇ ಕ್ರೈಂ ಸೀನಿನಲ್ಲಿ ಬರಾಮತ್ತಾದ ಶೂ ಕ್ರಿಸ್ಟನ್ ನದ್ದೇ ಎಂದು ಬಾಲಕಿಯ ಹೆತ್ತವರು ದೃಢಪಡಿಸುತ್ತಾರೆ. ನಗರದಾದ್ಯಂತ ಅಪಾಯದ ವಾಸನೆ ದಟ್ಟವಾಗಿ ಹರಡಲಾರಂಭಿಸುತ್ತದೆ. 

ಇತ್ತ ಪೋರ್ಟ್ ಡಾಲ್-ಹೌಸಿಯ ಮನೆಗೆ ಎಳೆದು ತಂದ ಕ್ರಿಸ್ಟನ್ ಳ ಮೇಲೆ ದಂಪತಿಗಳ ದೌರ್ಜನ್ಯ ಶುರುವಾಗುತ್ತದೆ. ಪ್ರಾಣಭಯದಿಂದ ನಡುಗುತ್ತಿರುವ, ನಗ್ನಳಾಗಿ ಮುದುಡಿ ಕುಳಿತಿರುವ ಬಾಲಕಿಗೆ ಒತ್ತಾಯದಿಂದ ಮದ್ಯವನ್ನು ಕುಡಿಸಿ ಆಕೆ ಎಚ್ಚರದಲ್ಲಿರುವಾಗಲೇ ಗಂಡ-ಹೆಂಡತಿಯರಿಂದ ಸರದಿಯಲ್ಲಿ ಅತ್ಯಾಚಾರ, ಅಮಾನವೀಯ ಹಿಂಸೆ ಮತ್ತು ವಿಡಿಯೋ ಚಿತ್ರೀಕರಣಗಳು ಮುಂದುವರೆಯುತ್ತವೆ. ಕ್ಯಾಮೆರಾ ಕಡೆ ಕೈ ತೋರಿಸುತ್ತಾ, ಹೊಡೆಯುತ್ತಾ, ಕ್ರಿಸ್ಟನ್ ಳನ್ನು ಭೀಕರವಾಗಿ ಹಿಂಸಿಸುವ ಪೌಲ್ ಅವಳು ಅತ್ತು, ಗೋಗರೆದರೂ ಕ್ಯಾರೇ ಎನ್ನದೆ ತನ್ನದೇ ಆದ ಭ್ರಮಾಲೋಕದಲ್ಲಿ ತೇಲಾಡುತ್ತಿರುತ್ತಾನೆ. ತನ್ನ ಟೆಲಿವಿಷನ್ ಸೆಟ್ ಅನ್ನು ಆನ್ ಮಾಡಿ ನ್ಯೂಸ್ ಬುಲೆಟಿನ್ ಗಳಲ್ಲಿ ಕಣ್ಣೀರಿಡುತ್ತಾ, ಕಾಣದ ಅಪಹರಣಕಾರರಲ್ಲಿ ತಮ್ಮ ಮುದ್ದಿನ ಮಗಳ ಪ್ರಾಣದ ಭಿಕ್ಷೆಯನ್ನು ಬೇಡುತ್ತಿರುವ ಕ್ರಿಸ್ಟನ್ ಳ ಹೆತ್ತವರನ್ನು, ತನ್ನ ಕಪಿಮುಷ್ಟಿಯಲ್ಲಿ ಬಂಧಿಯಾಗಿದ್ದ ಕ್ರಿಸ್ಟನ್ ಗೆ ತೋರಿಸುತ್ತಾ ಪೌಲ್ ಮತ್ತಷ್ಟು ಥಳಿಸುತ್ತಾನೆ. 

ಅಪಹರಣಕಾರರ ಆಣತಿಗೆ ತಕ್ಕಂತೆ ನಡೆದುಕೊಳ್ಳದಿದ್ದರೆ ಸಾವು ಖಚಿತವೆಂದು ಕಂಡುಕೊಳ್ಳುವ ಕ್ರಿಸ್ಟನ್, ಪೌಲ್ ಮತ್ತು ಕಾರ್ಲಾ ರ ಎಲ್ಲಾ ಪೈಶಾಚಿಕ ಅತಿರೇಕ ಮತ್ತು ಹಿಂಸೆಯನ್ನು ಅವುಡುಗಚ್ಚಿ ಸಹಿಸಿಕೊಂಡರೂ ಅದೃಷ್ಟ ಅವಳ ಪಾಲಿಗಿರುವುದಿಲ್ಲ. ಪೌಲ್ ನ ಎಲ್ಲಾ ಹುಚ್ಚುತನಕ್ಕೂ ತನ್ನ ಮೌನಸಮ್ಮತಿಯಿಂದಲೇ ಸಾಥ್ ಕೊಡುವ ಕಾರ್ಲಾ, ಪತಿಯೊಂದಿಗೆ ಬಾಲಕಿಯನ್ನು ನಿರಂತರವಾಗಿ ಅತ್ಯಾಚಾರಕ್ಕೊಳಪಡಿಸಿ ತನ್ನ ಇತರೆ ಕೆಲಸಗಳಿಗಾಗಿ ಕೋಣೆಬಿಟ್ಟು ತೆರಳುತ್ತಾಳೆ. ಈ ಬಾರಿ ಹಂತಕರು ಅಪಹೃತ ಬಾಲಕಿಯ ಕಣ್ಣಿಗೆ ಬಟ್ಟೆಯನ್ನು ಕಟ್ಟಿರಲಿಲ್ಲ ಎಂಬುದೂ ಕೂಡ ಗಮನಿಸಬೇಕಾದ ಒಂದು ಸಂಗತಿ.  

ಅಪಹೃತ ಬಾಲಕಿಯನ್ನು ಬಿಟ್ಟುಬಿಡುವ ಸಾಧ್ಯತೆಯೇ ಈ ಪ್ರಕರಣದಲ್ಲಿರುವುದಿಲ್ಲ. ಒಂದು ವೇಳೆ ಬಾಲಕಿಯನ್ನು ಬಿಟ್ಟುಬಿಟ್ಟರೆ, ಪೌಲ್ ಬರ್ನಾರ್ಡೊ ಮತ್ತು ಕಾರ್ಲಾ ಹೊಮೋಲ್ಕಾ ಇಬ್ಬರ ಮುಖಚರ್ಯೆಯನ್ನೂ ಕ್ರಿಸ್ಟನ್ ಫ್ರೆಂಚ್ ಎನ್.ಆರ್.ಪಿ ಪೋಲೀಸರಿಗೆ ನೀಡುವುದು ಪೌಲ್ ಗೆ ಖಚಿತವಿರುತ್ತದೆ. ಕ್ರಿಸ್ಟನ್ ಫ್ರೆಂಚ್ ಳ ಅಪಹರಣವಾದ ಮೂರನೇ ದಿನ, ಅಂದರೆ ಈಸ್ಟರ್ ಭಾನುವಾರದ ಶುಭದಿನದಂದು ಪೌಲ್ ಬರ್ನಾರ್ಡೊ ಎಲೆಕ್ಟ್ರಿಕ್ ತಂತಿಯೊಂದನ್ನು ಬಿಗಿದು ಉಸಿರುಗಟ್ಟಿಸಿ ಕ್ರಿಸ್ಟನ್ ಳನ್ನು ಸಾಯಿಸುತ್ತಾನೆ. ಅಲ್ಲದೆ ಅದೇ ದಿನ ಈಸ್ಟರ್ ಭಾನುವಾರದ ಪ್ರಯುಕ್ತ, ಏನೂ ಆಗೇ ಇಲ್ಲವೆಂಬಂತೆ ಕಾರ್ಲಾಳ ಕುಟುಂಬದ ಜೊತೆ ದಂಪತಿಗಳು ಸಾಂಪ್ರದಾಯಿಕ ಡಿನ್ನರ್ ಅನ್ನೂ ಮಾಡುತ್ತಾರೆ. 1992 ರ ಎಪ್ರಿಲ್ 19 ರಂದು ಅತ್ತ ಕ್ರಿಸ್ತನ ಪುನರ್ಜನ್ಮದ ಪವಿತ್ರ ಆಚರಣೆಯನ್ನು ಸೈಂಟ್-ಕ್ಯಾಥರೀನ್ ನಿವಾಸಿಗಳು ಆಚರಿಸುತ್ತಿದ್ದರೆ, ಇತ್ತ ಅದೇ ದಿನ ಕ್ರಿಸ್ಟನ್ ಫ್ರೆಂಚ್ ಎಂಬ ಮುಗ್ಧ, ಪ್ರತಿಭಾವಂತೆ, ನತದೃಷ್ಟೆ ಬಾಲಕಿ ಕ್ರಿಸ್ತನ ಪಾದ ಸೇರಿದ್ದಳು.    

ಕ್ರಿಸ್ಟನ್ ಫ್ರೆಂಚ್ ಳ ಅಪಹರಣದ ತನಿಖೆಯ ಬಗ್ಗೆ ದಿನವೂ ವರದಿಗಳು ಬರುತ್ತಿದ್ದರೂ, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು ನಿವಾಸಿಗಳಲ್ಲಿ ಮನವಿಯನ್ನು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಬಾಲಕಿಯ ಹೆತ್ತವರು ಮಾಧ್ಯಮಗಳಲ್ಲಿ ಕಣ್ಣೀರಿಡುತ್ತಾ ತಮ್ಮ ಮುದ್ದುಮಗಳ ಪ್ರಾಣಭಿಕ್ಷೆಯನ್ನು ಕಾಣದ ಆಗಂತುಕರಲ್ಲಿ ಬೇಡುತ್ತಾರೆ. ಮುಂದೆ ಹನ್ನೊಂದು ದಿನಗಳ ತರುವಾಯ 1992 ರ ಜೂನ್ 30 ರಂದು ಸೈಂಟ್-ಕ್ಯಾಥರೀನ್ ನಗರದಿಂದ ಡ್ರೈವ್ ಮಾಡಿಕೊಂಡು ಹೋದರೆ ಅಜಮಾಸು ನಲವತ್ತೈದು ನಿಮಿಷಗಳ ದೂರದಲ್ಲಿರುವ, ಹಾಲ್ಟನ್ ಪ್ರದೇಶದ ಕೊಳಚೆಗುಂಡಿಯೊಂದರಲ್ಲಿ ಕ್ರಿಸ್ಟನ್ ಳ ನಗ್ನ ಹಾಗೂ ತಕ್ಕ ಮಟ್ಟಿಗೆ ಕೊಳೆತ ಶವ ಬರಾಮತ್ತಾಗುತ್ತದೆ.  

ಕೊಳಚೆಗುಂಡಿಯಲ್ಲಿ ಪತ್ತೆಯಾದ ಕ್ರಿಸ್ಟನ್ ಫ್ರೆಂಚ್ ಳ ನಗ್ನ ಶವವು ಹೊಡೆತದ ಭೀಕರ ಗುರುತುಗಳನ್ನು ದೇಹದ ಮೇಲೆಲ್ಲಾ ಹೊಂದಿರುತ್ತದೆ. ಅಲ್ಲದೆ ಲೆಸ್ಲಿ ಮಹಾಫಿಯ ಪತ್ತೆಯಾದ ದೇಹದ ಭಾಗಗಳಲ್ಲಿ ಕಂಡುಬಂದಂತೆ, ದೇಹದ ಮೇಲೆಲ್ಲಾ ಸಿಗರೇಟಿನಿಂದ ಸುಟ್ಟ ಗಾಯಗಳು ಗೋಚರಿಸುತ್ತವೆ. ಸೈಂಟ್-ಕ್ಯಾಥರೀನ್ ನ ಗಲ್ಲಿಗಳಲ್ಲಿ ಸರಣಿಹಂತಕನೊಬ್ಬ ಬಂದು ಬೀಡುಬಿಟ್ಟಿರುವುದು ಪೋಲೀಸರಿಗೆ ಸ್ಪಷ್ಟವಾಗುತ್ತದೆ.  

***************             

ಕ್ರಿಸ್ಟನ್ ಫ್ರೆಂಚ್ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವ ಇಲಾಖೆಯು ಹಂತಕರಿಗಾಗಿ ಬಲೆಬೀಸುವ ತನ್ನ ಕಾರ್ಯಾಚರಣೆಯನ್ನು ತ್ವರಿತಗೊಳಿಸುತ್ತದೆ. ಲೆಸ್ಲೀ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಕೊಲೆಯ ರಹಸ್ಯವನ್ನು ಭೇದಿಸಲೆಂದೇ ಗ್ರೀನ್ ರಿಬ್ಬನ್ ಟಾಸ್ಕ್ ಫೋರ್ಸ್ ಅನ್ನು ವಿಶೇಷವಾಗಿ ರಚಿಸಲಾಗುತ್ತದೆ. ಕಳೆದ ಹತ್ತು ತಿಂಗಳ ಅಂತರದಲ್ಲಿ ಸೈಂಟ್ ಕ್ಯಾಥರೀನ್ ನಗರದಲ್ಲೇ ಭೀಕರವಾದ ಎರಡು ಕೊಲೆಗಳು ನಡೆದಿರುತ್ತವೆ. ಪ್ರಕರಣದ ಮತ್ತಷ್ಟು ಆಳಕ್ಕಿಳಿಯುವ ತನಿಖಾದಳವು ಈ ಮೊದಲು ಕೊಲೆಯಾದ ಲೆಸ್ಲಿ ಮಹಾಫಿಗೂ, ಇತ್ತೀಚೆಗೆ ಕೊಲೆಯಾದ ಕ್ರಿಸ್ಟನ್ ಫ್ರೆಂಚ್ ಗೂ ಸಾಕಷ್ಟು ಸಾಮ್ಯತೆಯಿರುವುದನ್ನು ಕಂಡುಕೊಳ್ಳುವುದಲ್ಲದೆ, ಎರಡೂ ಪ್ರಕರಣದಲ್ಲಿ ಒಂದೇ ಪಾರ್ಟಿಯ ಕೈವಾಡವಿರುವ ಸಾಧ್ಯತೆಯನ್ನೂ ಅಲ್ಲಗಳೆಯುವುದಿಲ್ಲ. ಅಲ್ಲದೆ ಕ್ರಿಸ್ಟನ್ ಳ ನಗ್ನ ಶವ ಬರಾಮತ್ತಾದ ಕೊಳಚೆಗುಂಡಿಯು ಲೆಸ್ಲಿ ಮಹಾಫಿಯನ್ನು ಅಂತ್ಯಸಂಸ್ಕಾರಗಳೊಂದಿಗೆ ಹೂತಿಟ್ಟ ಸ್ಮಶಾನದಿಂದ ಕೆಲವೇ ಮೈಲುಗಳ ದೂರದಲ್ಲಿರುತ್ತದೆ. ಹೀಗಾಗಿ ಹಂತಕ/ಹಂತಕರು ಸೈಂಟ್-ಕ್ಯಾಥರೀನ್ ನಗರದಲ್ಲೇ ಬೀಡುಬಿಟ್ಟಿದ್ದಾರೆ ಎಂಬ ಶಂಕೆಯೂ ದಟ್ಟವಾಗುತ್ತದೆ. ಪಕ್ಕದ ಸ್ಕಾರ್-ಬೋರೋ ಸರಣಿ ಅತ್ಯಾಚಾರದ ಪ್ರಕರಣಗಳನ್ನೂ ಈ ಎರಡು ಕೊಲೆಗಳೊಂದಿಗೆ ತಳುಕು ಹಾಕಿಕೊಳ್ಳುವ ಅಧಿಕಾರಿಗಳು ಸ್ಕಾರ್-ಬೋರೋದಲ್ಲಿ ಅಚಾನಕ್ಕಾಗಿ ನಿಂತುಹೋದ ಪ್ರಕರಣಗಳಿಗೂ, ಸೈಂಟ್-ಕ್ಯಾಥರೀನ್ ನಗರದಲ್ಲಿ ಒಮ್ಮೆಲೇ ಶುರುವಾದ ಕೊಲೆಗಳಿಗೂ ಏನಾದರೂ ಸಂಬಂಧವಿರಬಹುದೇ ಎಂದು ಗಂಭೀರವಾದ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.   

ಕ್ರಿಸ್ಟನ್ ಫ್ರೆಂಚ್ ಅಪಹರಣದಲ್ಲಿ ಪೌಲ್ ಬರ್ನಾರ್ಡೊ ತನ್ನ ಸ್ವಂತ ಕಾರನ್ನು ಬಳಸಲಿಲ್ಲವಾದ ಪರಿಣಾಮ, ತಕ್ಕಮಟ್ಟಿಗೆ ಕಾರಿನ ಸುಳಿವು ದಿಕ್ಕುತಪ್ಪಿದ್ದು ಸತ್ಯ. ಆದರೆ ಬಾಲಕಿಯ ಅಪಹರಣವಾದ ಬೀದಿಯಲ್ಲಿ ಪ್ರತ್ಯಕ್ಷದರ್ಶಿಗಳಿಂದ ಪಡೆದುಕೊಂಡ ವಿವರಗಳಿಂದ ಹಂತಕನ ಒಂದು ತಾತ್ಕಾಲಿಕ ಪ್ರೊಫೈಲ್ ಅನ್ನು ಸಿದ್ಧಪಡಿಸುವಲ್ಲಿ ಇಲಾಖೆಯು ಯಶಸ್ವಿಯಾಗುತ್ತದೆ. ಕೊಳಚೆಗುಂಡಿಯಲ್ಲಿ ಬರಾಮತ್ತಾದ ಕ್ರಿಸ್ಟನ್ ಳ ಶವದಲ್ಲಿ ಆಕೆಯ ನೀಳಕೂದಲುಗಳನ್ನು ಹಂತಕರು ಕತ್ತರಿಸಿರುವುದನ್ನು ಅಪರಾಧ ವಿಭಾಗವು ತನ್ನ ವರದಿಯಲ್ಲಿ ಉಲ್ಲೇಖಿಸಿರುತ್ತದೆ. ಕೊಲೆಗಳನ್ನು ಮಾಡಿ ಮೃತವ್ಯಕ್ತಿಗಳ ಕೆಲವೊಂದು ವಸ್ತುಗಳನ್ನು ಸೈಕೋಪಾತ್ ಗಳು ನೆನಪಿಗಾಗಿ, `ಟ್ರೋಫಿ'ಗಳೆಂದು ಇಡುವುದು ಸಾಮಾನ್ಯವಾದುದರಿಂದ, ಬಹುಷಃ ಬಾಲಕಿಯ ಕೂದಲನ್ನು ಟ್ರೋಫಿಯಾಗಿ ಇಟ್ಟಿರಬಹುದು ಎಂಬ ವಾದವನ್ನು ಹೆಣೆಯಲಾಗುತ್ತದೆ. ಅಲ್ಲದೆ ಕೂದಲನ್ನು ತನ್ನ ಲೈಂಗಿಕ ಸುಖಕ್ಕಾಗಿ ಬಳಸುವ “ಹೇರ್ ಫೆಟಿಷ್'' ಮನೋಸ್ಥಿತಿಯ ಹಂತಕನೂ ಈತ ಆಗಿರಬಹುದು ಎಂದು ಲೆಕ್ಕಹಾಕುತ್ತಾರೆ. 

ಮಾಧ್ಯಮಗಳಿಂದ, ಸೈಂಟ್-ಕ್ಯಾಥರೀನ್ ನಿವಾಸಿಗಳಿಂದ ತೀವ್ರ ಒತ್ತಡ ಮತ್ತು ಟೀಕೆಗಳ ಮಧ್ಯೆಯೂ ಈ ಬಾರಿ ಪೋಲೀಸ್ ಇಲಾಖೆಯು ಪ್ರಕರಣಗಳ ಸಾಕಷ್ಟು ಆಳಕ್ಕಿಳಿದಿರುತ್ತದೆ. ಅಲ್ಲದೆ ಸ್ಕಾರ್-ಬೋರೋ ಭಾಗದಲ್ಲಾದಂತೆ ಅಪರಾಧಗಳನ್ನು ಹತ್ತಿಕ್ಕಲಾಗದೆ ತೀವ್ರ ಮುಖಭಂಗವನ್ನು ಅನುಭವಿಸುವ ಯಾವುದೇ ಮೂರ್ಖತಪ್ಪುಗಳನ್ನು ಮಾಡಲು ಸೈಂಟ್-ಕ್ಯಾಥರೀನ್ ನಗರದ ಪೋಲೀಸ್ ಇಲಾಖೆಯ ಅಧಿಕಾರಿಗಳು ಸಿದ್ಧರಿರಲಿಲ್ಲ. ನಿಗೂಢ ಹಂತಕನನ್ನು ಬೀಳಿಸಲು ಹೆಣೆಯಲಾಗುತ್ತಿದ್ದ ಜಾಲವು ದಿನದಿಂದ ದಿನಕ್ಕೆ ಸದ್ದಿಲ್ಲದೆ ಬಿಗಿಯಾಗುತ್ತಿದ್ದುದಂತೂ ಸತ್ಯ.  

***************    

(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *