ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ

ಇತ್ತ ಕತ್ತಲಿನಲ್ಲಿ ಸುಳಿವಿಗಾಗಿ ತಡಕಾಡುತ್ತಿದ್ದ ಮೊಟ್ರೋಪಾಲಿಟನ್ ಟೊರಾಂಟೋ ಪೋಲೀಸರಿಗೆ ಮಹತ್ವದ್ದೇನೂ ಸಿಕ್ಕಿರಲಿಲ್ಲ. ಬದಲಿಗೆ 1987 ರ ಡಿಸೆಂಬರಿನಲ್ಲಿ ಹದಿನೈದರ ಪ್ರಾಯದ ಇನ್ನೊಬ್ಬ ಬಾಲಕಿ ಆಗಂತುಕನೊಬ್ಬನಿಂದ ಎಂದಿನ ರೀತಿಯಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು. ಸ್ಕಾರ್-ಬೋರೋ ನಗರದ ನಿವಾಸಿಗಳು ಸ್ವಾಭಾವಿಕವಾಗಿಯೇ ಕಂಗಾಲಾಗಿದ್ದರು. ಪೋಲೀಸರೂ ಕೈಚೆಲ್ಲಿ ಕುಳಿತಿರುವಾಗ ಯಾರ ಬಳಿ ಸಹಾಯಕ್ಕೆ ಧಾವಿಸುವುದೆಂಬುದೇ ಅವರಿಗೆ ತಿಳಿಯಲಿಲ್ಲ. ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿದ್ದು ಸ್ಪಷ್ಟವಾಗಿತ್ತು. ಕತ್ತಲಾದ ಬಳಿಕ ಹೆಣ್ಣುಮಕ್ಕಳು ಒಂಟಿಯಾಗಿ ಅಲೆದಾಡುವುದನ್ನು, ಓಡಾಡುವುದನ್ನು ಆದಷ್ಟು ಕಮ್ಮಿ ಮಾಡಬೇಕೆಂದೂ, ಪ್ರಕರಣದ ಬಗ್ಗೆ ಯಾವ ಸುಳಿವು ಸಿಕ್ಕರೂ ತಕ್ಷಣವೇ ಇಲಾಖೆಯನ್ನು ಸಂಪರ್ಕಿಸಬೇಕೆಂದೂ ಮಾಧ್ಯಮಗಳ ಮೂಲಕ ಜನತೆಯಲ್ಲಿ ಮನವಿಯನ್ನು ಮಾಡಲಾಯಿತು.   

ಇದಾದ ಒಂದೇ ವಾರದ ನಂತರ ಪೋಲೀಸ್ ಇಲಾಖೆಯ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದಂತೆ, ಹದಿನೇಳು ವರ್ಷದ ಮತ್ತೊಬ್ಬ ತರುಣಿಯ ಅತ್ಯಾಚಾರವಾಯಿತು. ದಿಕ್ಕುತಪ್ಪಿ ಹೋಗಿದ್ದ ಪೋಲೀಸ್ ಇಲಾಖೆಯ ತನಿಖೆಯನ್ನು ಟೀಕಿಸುತ್ತಾ ಮಾಧ್ಯಮಗಳು `ದ ಸ್ಕಾರ್-ಬೋರೋ ರೇಪಿಸ್ಟ್' ಉದಯವಾದ ಎಂದು ಪುಟಗಟ್ಟಲೆ ಬರೆದವು.

1988 ರಲ್ಲೂ ಪ್ರಕರಣದ ಕುರಿತ ಯಾವುದೇ ಸುಳಿವುಗಳು ಮೆಟ್ರೋಪಾಲಿಟನ್ ಪೋಲೀಸ್ ಇಲಾಖೆಯ ಕೈಗೆ ಸಿಗಲಿಲ್ಲ. ಬದಲಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೂ, ಬಲಿಯಾದ ಹೆಣ್ಣುಮಕ್ಕಳ ಸ್ಥಿತಿ ಪ್ರಕರಣದಿಂದ ಪ್ರಕರಣಕ್ಕೆ ಗಂಭೀರವಾಗಿಯೂ ಹೋಗಲಾರಂಭಿಸಿತ್ತು. 1988 ರ ಎಪ್ರಿಲ್ ತಿಂಗಳಲ್ಲಿ ಹದಿನೇಳರ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದಳು. ಮೇ ತಿಂಗಳಲ್ಲಿ ಬಸ್ ನಿಲ್ದಾಣದ ಪೊದೆಯೊಂದರ ಬಳಿ ಅಡಗಿ ಕುಳಿತು, ಹೊಂಚು ಹಾಕುತ್ತಿದ್ದ ಓರ್ವ ಸಂಶಯಾಸ್ಪದ ವ್ಯಕ್ತಿ ಪೋಲೀಸ್ ಅಧಿಕಾರಿಯೊಬ್ಬನಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಹೋದ. ಇದಾದ ಒಂದು ವಾರಕ್ಕೂ ಕಡಿಮೆಯ ಅವಧಿಯಲ್ಲಿ ಹದಿನೆಂಟರ ತರುಣಿಯೊಬ್ಬಳನ್ನು ಅತ್ಯಾಚಾರ ಮಾಡಲಾಯಿತು. ಕ್ರಮವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಒಂದು ಅತ್ಯಾಚಾರದ ವಿಫಲ ಯತ್ನ ಮತ್ತು ಅತ್ಯಾಚಾರದ ಪ್ರಕರಣಗಳು ದಾಖಲಾದವು. ಈ ಎರಡು ಪ್ರಕರಣಗಳಲ್ಲಿ ಬಲಿಯಾದ ಹದಿನೆಂಟು, ಹತ್ತೊಂಬತ್ತರ ಆಸುಪಾಸಿನಲ್ಲಿದ್ದ ಯುವತಿಯರು ಘಟನೆಯಲ್ಲಾದ ಗಂಭೀರ ಗಾಯಗಳ ಪರಿಣಾಮವಾಗಿ ಹಲವು ತಿಂಗಳುಗಳ ಮಟ್ಟಿಗೆ ಆಸ್ಪತ್ರೆಗಳಲ್ಲಿ ಅಲೆದಾಡಬೇಕಾಯಿತು.

1988 ರ ನವೆಂಬರ್ ನಲ್ಲೇ ಮೆಟ್ರೋಪಾಲಿಟನ್ ಪೋಲೀಸ್ ವಿಭಾಗವು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದ್ದ ಅಜ್ಞಾತ `ದ ಸ್ಕಾರ್-ಬೋರೋ ರೇಪಿಸ್ಟ್' ನ ಬೇಟೆಗಾಗಿ ವಿಶೇಷವಾದ ತಂಡವೊಂದನ್ನು ರಚಿಸಿತ್ತು. ಆದರೂ ಡಿಸೆಂಬರ್ ನಲ್ಲಿ ಯುವತಿಯೊಬ್ಬಳ ಮೇಲೆ ಆಗಂತುಕನೊಬ್ಬ ಅತ್ಯಾಚಾರದ ವಿಫಲ ಪ್ರಯತ್ನವನ್ನು ಮಾಡಿ ಪರಾರಿಯಾಗಿದ್ದ. ಅನಿರೀಕ್ಷಿತ ಪಶುಸದೃಶ ದಾಳಿಯಿಂದ ಕಂಗಾಲಾಗಿದ್ದ ತರುಣಿಯು ಚೀರಾಡಿದ ಪರಿಣಾಮ ಅಕ್ಕಪಕ್ಕದವರು ಜಾಗೃತರಾಗಿದ್ದರು. ಆದರೆ ಆತ ಈ ಬಾರಿಯೂ ಯಶಸ್ವಿಯಾಗಿ ಕತ್ತಲಿನಲ್ಲಿ ಮಾಯವಾಗಿ ಹೋಗಿದ್ದ.

1988 ಮುಗಿದು 1989 ಬಂದಾಗಿತ್ತು. ಬಿಡಿಸಲಾರದ ಒಗಟಾಗಿದ್ದ ಸರಣಿ ಅತ್ಯಾಚಾರದ ಪ್ರಕರಣಗಳು ಈಗಾಗಲೇ ಮಾಧ್ಯಮಗಳಿಗೆ ವಸ್ತುವಾಗಿದ್ದವು. ಅತ್ತ ಪೋಲೀಸ್ ಇಲಾಖೆ ಮತ್ತು ವಿಶೇಷ ತನಿಖಾ ದಳ `ಹಿಡಿಯುವವರೇ ಇಲ್ಲದಂತೆ' ಆದಂಥಾ ಈ ಆಗಂತುಕನ ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಶಥಪಥ ತಿರುಗುತ್ತಿದ್ದರೆ, ಆತ ಬಹುಷಃ ಎಲ್ಲೋ ಬಿಯರ್ ಕುಡಿಯುತ್ತಾ, ಟೆಲಿವಿಷನ್ ನ ನ್ಯೂಸ್ ಬುಲೆಟಿನ್ ಗಳಲ್ಲಿ ಪ್ರಸಾರವಾಗುತ್ತಿದ್ದ ಭಯಾನಕ ಆಗಂತುಕನ ಕಥೆಯನ್ನು ನೋಡುತ್ತಾ ಪೈಶಾಚಿಕ ನಗೆಯನ್ನು ಬೀರುತ್ತಿದ್ದ. 

***************

1988 ರಲ್ಲಿ ಕಾರ್ಲಾ ಹೊಮೋಲ್ಕಾಳ ಗ್ರಾಜುಯೇಷನ್ ಮುಗಿದಿತ್ತು. ಪೌಲ್ ಮತ್ತು ಕಾರ್ಲಾ ರ ಪ್ರೇಮಕಥೆ ಯಾವುದೇ ಅಡೆತಡೆಗಳಿಲ್ಲದೆ ಮುಂದುವರೆಯುತ್ತಿತ್ತು. ಪೌಲ್ ಬರ್ನಾರ್ಡೊ ಆಗಾಗ ಕಾರ್ಲಾಳ ಮನೆಗೂ ಬಂದು ಹೋಗುತ್ತಾ ಅಕೆಯ ಮನೆಯವರಲ್ಲಿ ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದ್ದ. ಮೂರು ಹೆಣ್ಣುಮಕ್ಕಳನ್ನು ಹೆತ್ತಿದ್ದ ಕಾರ್ಲಾಳ ಹೆತ್ತವರಿಗೆ ಸಹಜವಾಗಿಯೇ ಸ್ಫುರದ್ರೂಪಿ ಪೌಲ್ ಭಾವೀ ಅಳಿಯನಿಗಿಂತ ಹೆಚ್ಚಾಗಿ ಮಗನಂತೆ ಕಂಡ. ಪೌಲ್ ಮತ್ತು ಕಾರ್ಲಾರ ನಡುವೆ ಆರು ವರ್ಷಗಳ ವ್ಯತ್ಯಾಸವಿದ್ದರೂ ಪೌಲ್ ಸುಸಂಸ್ಕøತನಾಗಿ, ವಿದ್ಯಾವಂತನಾಗಿದ್ದರಿಂದ ಒಬ್ಬ ಆದರ್ಶ ಅಳಿಯನಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಕಾರ್ಲಾಳ ತಂಗಿ ಟ್ಯಾಮಿಗೆ ಪೌಲ್ ಒಬ್ಬ ಸ್ನೇಹಿತನಂತೆ, ಹಿರಿಯಣ್ಣನಂತೆ ಕಂಡ. ಕಾರ್ಲಾಳ ಕಣ್ಣುಗಳಲ್ಲಿ ಪೌಲ್ ನೆಡೆಗೆ ಉಕ್ಕಿಹರಿಯುತ್ತಿದ್ದ ಪ್ರೀತಿ ಆಕೆಯ ತಾಯಿಯ ಕಣ್ಣಿಗೆ ಬೀಳದೇನೂ ಇರಲಿಲ್ಲ. ಅಲ್ಲದೆ ಕಾರ್ಲಾಳ ಗ್ರಾಜುಯೇಷನ್ ಮುಗಿದಿತ್ತು. ಬಗಲಿನಲ್ಲಿದ್ದ ಥೋರೋಲ್ಡ್ ವೆಟರ್ನರಿ ಕ್ಲಿನಿಕ್ಕಿನಲ್ಲಿ ವೆಟರ್ನರಿ ಅಸಿಸ್ಟೆಂಟ್ ಆಗಿ ನೌಕರಿಯೂ ಕಾರ್ಲಾಳಿಗೆ ದೊರಕಿತ್ತು. ಬಾಲ್ಯದಿಂದಲೂ ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿಯಿದ್ದ ಕಾರ್ಲಾ ಅದೇ ಕ್ಷೇತ್ರದಲ್ಲಿ ಕಾಲಿರಿಸಿ ತನ್ನ ಔದ್ಯೋಗಿಕ ಬದುಕಿಗೆ ಮುನ್ನುಡಿ ಬರೆದಿದ್ದಳು. ಪಕ್ಕದಲ್ಲಿ ನೆರಳಾಗಿ ಇನಿಯ ಪೌಲ್ ಇದ್ದ. ಇನ್ನೇನು ಬೇಕಿತ್ತು ಆಕೆಗೆ?

ಪೌಲ್ ಬರ್ನಾರ್ಡೊ ತನ್ನ ಇತರ ಗರ್ಲ್ ಫ್ರೆಂಡ್ ಗಳಂತೆ ಕಾರ್ಲಾ ಜೊತೆಗೂ ಆಗಾಗ ವಿಚಿತ್ರವಾಗಿ ನಡೆದುಕೊಂಡಿದ್ದ. ಆತನ ಫ್ಯಾಂಟಸಿಗಳನ್ನು ದೀರ್ಘಕಾಲದವರೆಗೆ ಬಚ್ಚಿಟ್ಟುಕೊಳ್ಳುವುದು, ರಾತ್ರೋರಾತ್ರಿ ಬದಲಾಗುವುದು ಸುಲಭದ ಮಾತೇನೂ ಆಗಿರಲಿಲ್ಲ. ಆದರೆ ಕಾರ್ಲಾ ಹೊಮೋಲ್ಕಾ ಪ್ರೀತಿಯ ನಶೆಯಲ್ಲಿದ್ದಳು. ಹಲವು ಬಾರಿ ಪೌಲ್ ನಿಂದ ಪ್ರಾಣಿಯಂತೆ ಏಟುಗಳನ್ನು ತಿಂದರೂ ಆಕೆ ಅವನನ್ನು ಧಾರಾಳವಾಗಿ ಕ್ಷಮಿಸಿದಳು. ಲೈಂಗಿಕತೆಯ ವಿಷಯದಲ್ಲಿ ಅವನಲ್ಲಿದ್ದ ರಭಸ, ರಾಕ್ಷಸ ಸದೃಶ ಒರಟುತನ, ಹುಚ್ಚು ಫ್ಯಾಂಟಸಿಗಳು ಬಹುಷಃ ಆ ಕಾಲಘಟ್ಟದಲ್ಲಿ ಅವಳಿಗೆ ಒಂದು ಮೈನವಿರೇಳಿಸುವ ಅಡ್ವೆಂಚರ್ ಆಗಿ ಕಂಡವಷ್ಟೇ. ವಿಶ್ವವಿಖ್ಯಾತ ನಯಾಗರಾ ಜಲಾಪತದ ಬಳಿ 1989 ರ ಡಿಸೆಂಬರ್ ತಿಂಗಳಿನಲ್ಲಿ ಪೌಲ್ ಬರ್ನಾರ್ಡೊ ಮೊಣಕಾಲಿನಲ್ಲಿ ನಿಂತು, ಸಿನಿಮೀಯ ಶೈಲಿಯಲ್ಲಿ “ವಿಲ್ ಯೂ ಮ್ಯಾರೀ ಮೀ?'' ಎಂದಾಗ “ನೋ'' ಅನ್ನಲು ಅವಳಿಗೆ ಕಾರಣಗಳೇ ಇರಲಿಲ್ಲ. ದೇ ವೇರ್ ಸಿಂಪ್ಲೀ ಮೇಡ್ ಫಾರ್ ಈಚ್ ಅದರ್. ಬಹುಬೇಗನೇ ಪೌಲ್ ಬರ್ನಾರ್ಡೊ-ಕಾರ್ಲಾ ಹೋಮೋಲ್ಕಾ ಜೋಡಿಯ ನಿಶ್ಚಿತಾರ್ಥವೂ ನೆರವೇರಿತು.

ಹಾಗಿದ್ದರೆ ಎಲ್ಲವೂ ಸರಿಯಾಗಿತ್ತೇ? ಖಂಡಿತವಾಗಿಯೂ ಇಲ್ಲ. ಪೌಲ್ ಬರ್ನಾರ್ಡೊನ ಹೊಸ ಸಾಹಸವೊಂದು ಕೆಲ ದಿನಗಳಿಂದ ಕಾರ್ಲಾಳ ನಿದ್ದೆಗೆಡಿಸಿತ್ತು. ಆ ಕಹಿಸತ್ಯವಾದರೂ ಏನು?

***************    

ಈ ಮಧ್ಯೆ ಸರಣಿ ಅತ್ಯಾಚಾರ ಪ್ರಕರಣಗಳೂ ಪೋಲೀಸರ ಮುಖಕ್ಕೆ ಮಂಗಳಾರತಿ ಮಾಡುವಂತೆ ಮುಂದುವರೆಯುತ್ತಲೇ ಹೋದವು. 1989 ರ ಜೂನ್ ತಿಂಗಳಲ್ಲಿ ಓರ್ವ ತರುಣಿಯ ಮೇಲೆ ಅತ್ಯಾಚಾರದ ವಿಫಲ ಪ್ರಯತ್ನವೊಂದು ನಡೆಯಿತು. ಪ್ರಾಣಿಯಂತೆ ಮೈಮೇಲೆರಗಿದ ಆಗಂತುಕನ ಜೊತೆ ಸೆಣಸಾಡಿದ ಆಕೆ ಆತನ ಮುಖವನ್ನು ಪರಚಿದ್ದಳು. ಚೀರಾಟದ ಸದ್ದನ್ನು ಕೇಳಿ ಜನರು ಸಹಾಯಕ್ಕೆಂದು ಓಡೋಡಿ ಬರುವಷ್ಟರಲ್ಲಿ ಆಗಂತುಕ ಮಾಯವಾಗಿದ್ದ. ಆಗಸ್ಟ್ ನಲ್ಲಿ ಇಪ್ಪತ್ತರ ಮತ್ತೊಬ್ಬ ಯುವತಿಯೊಬ್ಬಳು ಈ ನಿಗೂಢ ವ್ಯಕ್ತಿಯ ಕಾಮತೃಷೆಗೆ ಬಲಿಯಾದಳು. ನವೆಂಬರ್ ಮತ್ತು ಡಿಸೆಂಬರ್ ನಲ್ಲೂ ಕ್ರಮವಾಗಿ ಹದಿನೈದು ಮತ್ತು ಹತ್ತೊಂಬತ್ತರ ವಯಸ್ಸಿನ ಇಬ್ಬರು ಯುವತಿಯರ ಅತ್ಯಾಚಾರವಾಯಿತು. 1988 ರಂತೆ 1989 ರ ವರ್ಷವೂ ಕೂಡ ಸುಮ್ಮನೆ ಸರಿದುಹೋಯಿತು. ಕಾಲ ಕಾದು ನಿಲ್ಲುವುದೇ?

ಆದರೆ ಈ ಬಹುಚರ್ಚಿತ ನಿಗೂಢ, ಮುಖವಿಲ್ಲದ ಮಾನವಾಕೃತಿಯೊಂದು ಈಗಲೂ ಸ್ವತಂತ್ರವಾಗಿತ್ತು. ಬಹುಷಃ ಕೆನಡಾದ ಶಾಪಗ್ರಸ್ತ ಓಂಟಾರಿಯೋ ಪ್ರೊವಿನ್ಸ್ ಗೆ ಶಾಪವಿಮೋಚನೆಯ ಅಮೃತಘಳಿಗೆ ಇನ್ನೂ ಬಂದಿರಲಿಲ್ಲ.

***************  

1990 ಆಗಲೇ ಕಾಲಿಟ್ಟಾಗಿತ್ತು. ಪೌಲ್ ಬರ್ನಾರ್ಡೊ ಸ್ಕಾರ್-ಬೋರೋ ನಗರದಿಂದ ಕಾರ್ಲಾ ವಾಸವಾಗಿದ್ದ ಸೈಂಟ್-ಕ್ಯಾಥರೀನ್ ನಗರಕ್ಕೆ ಪ್ರತೀ ವಾರಾಂತ್ಯದಲ್ಲೂ ಡ್ರೈವ್ ಮಾಡಿಕೊಂಡು ಬರುವುದು ಇನ್ನೇನು ಮದುವೆಯಾಗಲಿರುವ ಜೋಡಿಗೆ ಕಷ್ಟದ ವಿಷಯವಾಗಿತ್ತು. ಕಾರ್ಲಾ, ಥೋರೋಲ್ಡ್ ವೆಟರ್ನರಿ ಕ್ಲಿನಿಕ್ಕಿನಿಂದ ಮ್ಯಾಟಿಂಡೇಲ್ ಅನಿಮಲ್ ಕ್ಲಿನಿಕ್ಕಿಗೆ ತನ್ನ ನೌಕರಿಯನ್ನು ಬದಲಾಯಿಸಿಕೊಂಡಿದ್ದಳು. ಹೀಗಾಗಿ ಪೌಲ್ ಬರ್ನಾರ್ಡೊ ಕೂಡ ತನ್ನನ್ನು ಸೈಂಟ್-ಕ್ಯಾಥರೀನ್ ನಗರಕ್ಕೆ ವರ್ಗಾಯಿಸಿಕೊಂಡ. ಈ ಮೂಲಕ ಪ್ರೇಮಪಕ್ಷಿಗಳಾದ ಪೌಲ್ ಮತ್ತು ಕಾರ್ಲಾ ತಮ್ಮ ಹೆಚ್ಚಿನ ಸಮಯವನ್ನು ಜೊತೆಯಾಗಿ ಕಳೆಯುವಂತಾಯಿತು.

ಹಾಗಿದ್ದರೆ ಇನ್ನೇನು ಒಂದು ವರ್ಷದೊಳಗೆ ಮದುವಣಗಿತ್ತಿಯಾಗಲಿರುವ ಕಾರ್ಲಾ ಹೊಮೋಲ್ಕಾಳ ನಿದ್ದೆಗೆಡಿಸಿದ್ದಾದರೂ ಏನು? ಪೌಲ್ ಬರ್ನಾರ್ಡೊ ಸೈಂಟ್-ಕ್ಯಾಥರೀನ್ ನಗರಕ್ಕೆ ಬಂದಾಗಿನಿಂದ ಹೆಚ್ಚಿನ ಸಮಯವನ್ನು ಕಾರ್ಲಾಳ ಮನೆಯಲ್ಲಿ ಕಳೆಯುತ್ತಿದ್ದನು. ಅಸಲಿಗೆ ಪೌಲ್ ತನ್ನ ಅಸಿಸ್ಟೆಂಟ್ ಅಕೌಂಟೆಂಟ್ ನೌಕರಿಯನ್ನು ಕಳೆದುಕೊಂಡಿದ್ದ. ಆದರೆ ಈ ವಿಷಯವು ಕಾರ್ಲಾಳಿಗೂ ಸೇರಿದಂತೆ ಯಾರಿಗೂ ತಿಳಿದಿರಲಿಲ್ಲ. ಕೆನಡಾ-ಯು.ಎಸ್.ಎ ಸರಹದ್ದಿನ ಮೂಲಕ ಸಿಗರೇಟುಗಳ ಕಳ್ಳಸಾಗಾಣಿಕೆಯ ಚಿಕ್ಕ ದಂಧೆಯಿಂದ ಅವನ ದಿನನಿತ್ಯದ ಖರ್ಚುಗಳು ಹೊಂದಿಕೆಯಾಗುತ್ತಿದ್ದವು. ಸಹೋದರರಿಲ್ಲದ ಆ ಮನೆಯಲ್ಲಿ ಕಾರ್ಲಾಳ ತಂಗಿ ಹದಿನೈದರ ಹರೆಯದ ಟ್ಯಾಮಿ, ಸ್ವಾಭಾವಿಕವಾಗಿಯೇ ಪೌಲ್ ನನ್ನು ಹಿರಿಯಣ್ಣನಂತೆ ಇಷ್ಟಪಡುತ್ತಿದ್ದಳು. ಆದರೆ ಪೌಲ್ ನ ಕಣ್ಣುಗಳಲ್ಲಿ ಬೇರೆಯದೇ ಆಕಾಂಕ್ಷೆಯನ್ನು ಕಾರ್ಲಾ ಸ್ಪಷ್ಟವಾಗಿ ಗುರುತಿಸಿದ್ದಳು. ಅಲ್ಲದೆ ಕಾರ್ಲಾಳನ್ನು ನೋಡಲು ಮನೆಗೆ ಬರುವ ನೆಪದಲ್ಲಿ ಟ್ಯಾಮಿಯನ್ನು ಸಿನಿಮಾ, ಶಾಪಿಂಗ್, ಸುತ್ತಾಟ ಎಂದೆಲ್ಲಾ ಪೌಲ್ ಕರೆದೊಯ್ಯುವುದು ಅವಳ ಕಣ್ಣಿಗೆ ಬೀಳದೇನೂ ಇರಲಿಲ್ಲ. ಕಾರ್ಲಾ ಪೌಲ್ ನನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದಳೆಂದರೆ ಪೌಲ್ ಗಾಗಿ ಆಕೆ ಏನು ಮಾಡಲೂ ತಯಾರಿದ್ದಳು. ಕಾರ್ಲಾಗೆ ಪೌಲ್ ಇಡಿಯಾಗಿ ಬೇಕಿದ್ದ. ಅವನನ್ನು ತನ್ನ ತಂಗಿಯೊಡನೆ ಹಂಚಿಕೊಳ್ಳುವುದು ಅವಳಿಗೆ ಸುತರಾಂ ಇಷ್ಟವಿರಲಿಲ್ಲ.   

ಅಲ್ಲದೆ ಪೌಲ್ ಇತ್ತೀಚೆಗೆ, “ನನಗೆ `ವರ್ಜಿನ್' ಹೆಣ್ಣುಗಳೆಂದರೆ ಇಷ್ಟ. ನೀನು ವರ್ಜಿನ್ ಅಲ್ಲ'', ಎಂಬ ಹೊಸ ಹುಚ್ಚುಹಟವೊಂದನ್ನು ಶುರುಹಚ್ಚಿಕೊಂಡಿದ್ದ. ಕಾರ್ಲಾಳ ತಂಗಿ ಟ್ಯಾಮಿಯ ಬಗೆಗಿದ್ದ ಆತನ ಮೋಹ ದಿನೇ ದಿನೇ ಹುಚ್ಚಿನ ರೂಪ ತಾಳುತ್ತಿತ್ತು. “ಟ್ಯಾಮಿಗೆ ಹದಿನೈದು ವರ್ಷವಷ್ಟೇ ತುಂಬಿದೆ. ನಿನ್ನ ಮುದ್ದು ತಂಗಿ `ಕನ್ಯೆ'ಯೂ ಹೌದು. ಹೇಗಾದರೂ ಮಾಡಿ ಅವಳನ್ನು ನನಗೆ ಕೊಡಿಸು'', ಎಂದು ಪೌಲ್ ದುಂಬಾಲು ಬೀಳಲಾರಂಭಿಸಿದ್ದ. `ನಾವು ಶೀಘ್ರದಲ್ಲಿ ಮದುವೆಯಾಗಲಿದ್ದೇವೆ' ಎಂಬ ಕಾರ್ಲಾಳ ಎಚ್ಚರಿಕೆಯ ಮಾತುಗಳೂ ಪೌಲ್ ನನ್ನು ಸಂತೈಸಲಿಲ್ಲ. ಪೌಲ್ ನನ್ನು ಭೇಟಿ ಮಾಡಿದ ಆ ಹೋಟೆಲ್ ರೂಮಿನ ಮೊದಲ ರಾತ್ರಿಯು ಕಾರ್ಲಾ ಹೊಮೋಲ್ಕಾಗೆ ತನ್ನ ಜೀವನದ ಮೊದಲ ಸಮಾಗಮವಾಗಿರಲಿಲ್ಲ. ಅಲ್ಲದೆ ತನ್ನ `ಸೋಲ್-ಮೇಟ್' ಆಗಿದ್ದ ಪೌಲ್ ನಿಂದ ತನ್ನ ಕನ್ಯತ್ವವನ್ನು ಕಳೆದುಕೊಳ್ಳಲಾಗಲಿಲ್ಲ ಎಂಬ ಪಶ್ಚಾತ್ತಾಪವೂ ಕಾರ್ಲಾಗಿತ್ತು. “ಈ ಸಂಬಂಧವು ನನ್ನ ಮತ್ತು ನಿನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹೇಗಾದರೂ ಮಾಡಿ ಅವಳನ್ನು ನನಗೆ ಕೊಡಿಸು'', ಎಂದು ಪೌಲ್ ಬೆನ್ನು ಬಿದ್ದಿದ್ದ. ಮೊದಲೇ ಹೇಳಿದಂತೆ ಕಾರ್ಲಾಳ ಪೌಲ್ ಬಗೆಗಿನ ಮೋಹ ಯಾವ ಮಟ್ಟಿಗಿತ್ತೆಂದರೆ ಆಕೆ ಏನೆಂದರೆ ಏನು ಮಾಡಲೂ ತಯಾರಿದ್ದಳು. ಆದರೆ ತಾನೆಂದೂ ಕೊಡಲಾಗದ ಉಡುಗೊರೆಯೊಂದನ್ನು ಪೌಲ್ ಆಕೆಯಲ್ಲಿ ಕೇಳುತ್ತಿದ್ದ. ಕಾರ್ಲಾ ಹೊಮೋಲ್ಕಾ ಧರ್ಮಸಂಕಟದಲ್ಲಿ ಬಿದ್ದಿದ್ದಳು.   

ಸದ್ಯದ ಮಟ್ಟಿಗಂತೂ ಕಾರ್ಲಾಳಿಗೆ ಪೌಲ್ ಬಿಟ್ಟು ಬೇರ್ಯಾರೂ ಕಾಣುತ್ತಿರಲಿಲ್ಲ. ತಾನು ಒಪ್ಪದೇ ಇದ್ದರೆ ಒಂದೋ ತನ್ನ ಪ್ರಿಯಕರನಿಂದ ಒದೆತ ತಿನ್ನಬೇಕಾಗುತ್ತದೆ ಅಥವಾ ಆತ ತನ್ನನ್ನು ಬಿಟ್ಟು ಹೋಗಿಬಿಡುತ್ತಾನೆ ಎಂಬ ಭಯ ಅವಳನ್ನು ಕಾಡುತ್ತಿತ್ತು. ಪೌಲ್ ಬರ್ನಾರ್ಡೊ ಈ ಎರಡು ವರ್ಷಗಳಲ್ಲಿ ಕಾರ್ಲಾಳ `ಅಡಿಕ್ಷನ್' ಆಗಿ ಬಿಟ್ಟಿದ್ದ. ಅವನನ್ನು ಯಾವ ಕಾರಣಕ್ಕೂ ಅವಳು ಬಿಡುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೂ ಒಲ್ಲದ ಮನಸ್ಸಿನಿಂದ ಕಾರ್ಲಾ ತನ್ನ ಭವಿಷ್ಯದ ಪತಿಯ ವಿಲಕ್ಷಣವಾದ ಬೇಡಿಕೆಗೆ ಅಸ್ತು ಅನ್ನುತ್ತಾಳೆ. ಬಹುಷಃ ಆ ದಿನ ತನಗಾಗಿ ಕಾರ್ಲಾ ಯಾವ ಮಟ್ಟಿಗಾದರೂ ಇಳಿಯಬಲ್ಲಳು ಎಂಬ ಸತ್ಯ ಪೌಲ್ ಗೆ ಅರಿವಾಗುತ್ತದೆ.

ಟ್ಯಾಮಿ ಬಗೆಗಿನ ಹುಚ್ಚು ಪೌಲ್ ನ ನೆತ್ತಿಗೇರಿರುತ್ತದೆ. ಆಗಾಗ ಅವಳ ಕೋಣೆಗೆ ಥಟ್ಟನೆ ನುಗ್ಗುವುದು, ಅವಳ ಕೋಣೆಯೊಳಗೆ ಏನು ನಡೆಯುತ್ತಿದೆಯೆಂಬುದನ್ನು ಕಿಟಕಿಯಿಂದ ಇಣುಕುವುದು, ಟ್ಯಾಮಿ ಮಲಗಿದ್ದಾಗ ಅವಳ ಕೋಣೆಗೆ ನುಸುಳಿ ಅವಳನ್ನೇ ಸುಮ್ಮನೆ ನೋಡುವುದು… ಹೀಗೆ ಈತನ ಹಲವು ದುರಭ್ಯಾಸಗಳು ಕಾರ್ಲಾಳಿಗೆ ಉಸಿರುಗಟ್ಟಿಸುವಂತಿದ್ದವು. ಆದರೆ ವಿಲಕ್ಷಣತೆಯಲ್ಲಿ ಕಾರ್ಲಾಳೂ ಕಮ್ಮಿಯಿರಲಿಲ್ಲ. ಹಲವು ಬಾರಿ ಕಾರ್ಲಾಳ ಸಹಾಯದಿಂದಲೇ ಪೌಲ್, ಹದಿನೈದರ ಬಾಲಕಿ ಟ್ಯಾಮಿಯ ಕೋಣೆಯೊಳಕ್ಕೆ ಗುಟ್ಟಾಗಿ ನುಗ್ಗುತ್ತಿದ್ದ. ಪೌಲ್ ಬರ್ನಾರ್ಡೊ ಹದಿನೈದರ ತನ್ನ ತಂಗಿಗೆ ಮದ್ಯವನ್ನು ಕುಡಿಸಿ ಲಾಂಗ್ ಡ್ರೈವ್ ಗೆ ತೆರಳುವುದೇನೂ ಅವಳಿಗೆ ತಿಳಿಯದ ವಿಷಯವಾಗಿರಲಿಲ್ಲ. ಆದರೆ `ವರ್ಜಿನ್' ಟ್ಯಾಮಿಯನ್ನು ತಾನು ಪೌಲ್ ಗೆ ಕೊಡುತ್ತೇನೆ ಎಂದು ಅವಳು ಮಾತುಕೊಟ್ಟಾಗಿತ್ತು.

ಈವರೆಗೆ ಆತ ಟ್ಯಾಮಿಯನ್ನು ಸುತ್ತಾಟದ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗುತ್ತಿದ್ದನಾದರೂ ದೈಹಿಕವಾಗಿ ಅವಳನ್ನು ಬಳಸಿರಲಿಲ್ಲ ಎಂದು ಅವಳಿಗೆ ತಿಳಿದಿತ್ತು. ಟ್ಯಾಮಿಗೆ ಮದ್ಯವನ್ನು ಕುಡಿಸಿ, ಏನಾದರೂ ಆತ ಮಾಡಿರಬಹುದಿತ್ತೇ ಹೊರತು ಆಕೆ ತನ್ನ ಪ್ರಜ್ಞಾಸ್ಥಿತಿಯಲ್ಲಿ ಇದ್ದಾಗ ಅಲ್ಲ. ಯಾಕೆಂದರೆ ಟ್ಯಾಮಿಗೆ ಪೌಲ್ ಬಗ್ಗೆ ಅಂಥಾ ವಯೋಸಹಜ ದೈಹಿಕ ಆಕರ್ಷಣೆಯೇನೂ ಇರಲಿಲ್ಲ. ಮೇಲಾಗಿ ಆತ ತನ್ನ ಸಹೋದರಿಯನ್ನು ವಿವಾಹವಾಗಬೇಕಿದ್ದ ಗಂಡಸಾಗಿದ್ದ. ಪೌಲ್ ಸ್ವಲ್ಪ ದುಡುಕಿದರೂ ಕಾರ್ಲಾಳ ಹೆತ್ತವರು ಆತನ ಕತ್ತು ಹಿಡಿದು ಹೊರದಬ್ಬುವ ಸಾಧ್ಯತೆಯಿತ್ತು.

ಅಂತೂ 1990 ರ ಡಿಸೆಂಬರ್ 23 ರ ರಾತ್ರಿಯನ್ನು ಕಾರ್ಲಾ ತನ್ನ ಪ್ರಿಯಕರನ ಆಸೆಯನ್ನು ಈಡೇರಿಸಲು ಮೂಹೂರ್ತವಾಗಿ ಇಟ್ಟಿದ್ದಳು. ಪೌಲ್ ನ ವಿಚಿತ್ರವಾದ ಆಸೆಯನ್ನು ಒಮ್ಮೆ ಪೂರೈಸಿದ ಬಳಿಕ ಅವನ ತೃಷೆಯು ಕಮ್ಮಿಯಾಗಬಹುದು ಎಂಬ ಯೋಚನೆಯೂ ಆಕೆಗೆ ಇದ್ದಿರಬಹುದು. ಏನೇ ಆದರೂ ಹದಿನೈದರ ಹರೆಯದ ಟ್ಯಾಮಿ ತನ್ನ ಅಕ್ಕನನ್ನು ವಿವಾಹವಾಗಲಿರುವ ಗಂಡಸಿನ ಜೊತೆ ಹಾಸಿಗೆ ಹಂಚಿಕೊಳ್ಳಲು ಒಪ್ಪುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಉಪಾಯವಾಗಿ ಟ್ಯಾಮಿಯನ್ನು ಈ ಖೆಡ್ಡಾಗೆ ಬೀಳಿಸದೆ ವಿಧಿಯಿರಲಿಲ್ಲ. ಇನ್ನೆರಡು ದಿನದ ಬಳಿಕ ಕ್ರಿಸ್‍ಮಸ್ ಹಬ್ಬವಿತ್ತು. ಕಾರ್ಲಾ ಈ ದಿನವನ್ನು ಉದ್ದೇಶಪೂರ್ವಕವಾಗಿಯೇ ಆಯ್ದುಕೊಂಡಿದ್ದಳು. ಪೌಲ್ ಗೆ ಕ್ರಿಸ್ ಮಸ್ ಹಬ್ಬದ `ಉಡುಗೊರೆ'ಯಾಗಿ ಕಾರ್ಲಾ ತನ್ನ ಸಹೋದರಿಯ `ಕನ್ಯತ್ವ'ವನ್ನು ಕೊಡುತ್ತಿದ್ದಳು. ಪೌಲ್ ಬರ್ನಾರ್ಡೊನ ವಿಲಕ್ಷಣ ಫ್ಯಾಂಟಸಿಯೊಂದು ನನಸಾಗುವ ದಿನ ಬಂದೇ ಬಿಟ್ಟಿತ್ತು.

1990 ರ ಡಿಸೆಂಬರ್ 23 ರ ದಿನವನ್ನು ಜೊತೆಯಾಗಿ ಕಳೆಯುವ ಪೌಲ್, ಕಾರ್ಲಾಳ ಹೆತ್ತವರು, ಕಾರ್ಲಾ, ಕಾರ್ಲಾಳ ತಂಗಿ ಲೋರಿ ಮತ್ತು ಮನೆಯ ಕಿರಿಮಗಳು ಟ್ಯಾಮಿ ಕ್ರಿಸ್-ಮಸ್ ಹಬ್ಬದ ಪ್ರಯುಕ್ತ ಮನೆಯನ್ನು ಸಿಂಗರಿಸುತ್ತಾರೆ. ಪೌಲ್ ತನ್ನ ಹೊಸ ವೀಡಿಯೋಕ್ಯಾಮ್ ರೆಕಾರ್ಡರ್ ನಿಂದ ಈ ಖುಷಿಯ ಘಳಿಗೆಗಳನ್ನು ರೆಕಾರ್ಡ್ ಮಾಡುತ್ತಾನೆ. ಡಿಸೆಂಬರ್ 23 ರ ರಾತ್ರಿಯಂದು ಡಿನ್ನರ್ ಆದ ಬಳಿಕ ಕಾರ್ಲಾಳ ಹೆತ್ತವರು ಮತ್ತು ಲೋರಿ ತಮ್ಮತಮ್ಮ ಕೋಣೆಗಳಲ್ಲಿ ನಿದ್ದೆ ಮಾಡಲು ತೆರಳುತ್ತಾರೆ. ಇತ್ತ ಮನೆಯ ಬೇಸ್-ಮೆಂಟಿನಲ್ಲಿ ಕಾರ್ಲಾ, ಆಕೆಯ ಪ್ರಿಯಕರ ಪೌಲ್ ಮತ್ತು ಕಾರ್ಲಾಳ ತಂಗಿ ಟ್ಯಾಮಿ ಮೂವರೂ ಚಲನಚಿತ್ರವೊಂದನ್ನು ನೋಡಲು ಒಟ್ಟಾಗಿ ಕುಳಿತುಕೊಳ್ಳುತ್ತಾರೆ. ಡ್ರಿಂಕ್ ತರುತ್ತೇನೆಂದು ಒಳಗೆ ತೆರಳುವ ಕಾರ್ಲಾ ಮದ್ಯದಲ್ಲಿ ಹ್ಯಾಲ್ಸಿಯನ್ ಮಾತ್ರೆಗಳನ್ನು ಬೆರೆಸಿ ತನ್ನ ತಂಗಿಗೆ ಕೊಡುತ್ತಾಳೆ. ಕೆಲ ಸಮಯದ ಬಳಿಕ ಟ್ಯಾಮಿ ತನ್ನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾಳೆ. ಕೂಡಲೇ ಕಾರ್ಯಪ್ರವೃತ್ತರಾಗುವ ಪೌಲ್ ಮತ್ತು ಕಾರ್ಲಾ ಆಕೆ ಪೂರ್ತಿಯಾಗಿ ಮೂರ್ಛಾವಸ್ಥೆಯಲ್ಲಿದ್ದಾಳೆ ಎಂಬುದನ್ನು ಮೊದಲಾಗಿ ಖಚಿತ ಪಡಿಸಿಕೊಳ್ಳುತ್ತಾರೆ. ಕಾರ್ಲಾಳ ಸಹಾಯ ಪಡೆಯುವ ಪೌಲ್ ಆ ದಿನ ಟ್ಯಾಮಿಯ ಕನ್ಯತ್ವವನ್ನು “ಕ್ರಿಸ್-ಮಸ್ ಗಿಫ್ಟ್'' ಆಗಿ ಪಡೆದುಕೊಳ್ಳುತ್ತಾನೆ. ಹಾಗೆಯೇ ಕಾರ್ಲಾಳನ್ನು ತನ್ನ ತಂಗಿಯ ಜೊತೆ ಲೈಂಗಿಕವಾಗಿ ಬಳಸಿಕೊಂಡು ತನ್ನ ನೋಡುವ ವಿಕೃತಚಟವನ್ನೂ ತೀರಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲದೆ ತನ್ನ ಪ್ರಿಯತಮೆ ಕಾರ್ಲಾ, ಪ್ರಜ್ಞೆ ತಪ್ಪಿ ಮಲಗಿದ್ದ ತನ್ನ ತಂಗಿಯನ್ನು ಅತ್ಯಾಚಾರ ಮಾಡುವ ದೃಶ್ಯವನ್ನು ಪೂರ್ತಿಯಾಗಿ ಚಿತ್ರೀಕರಿಸುತ್ತಾನೆ. ಅಂದಹಾಗೆ ಖಾಸಗಿ ಕ್ಷಣಗಳನ್ನು ವೀಡಿಯೋ ಚಿತ್ರೀಕರಣ ಮಾಡಿ ತನ್ನ ಸಂಗ್ರಹದಲ್ಲಿಡುವ ವಿಲಕ್ಷಣ ಚಟವೂ ಪೌಲ್ ಬರ್ನಾರ್ಡೊಗಿತ್ತು.    

ಡಿಸೆಂಬರ್ 24 ರ ದಿನ ಆಗಲೇ ಕಾಲಿರಿಸಿರುತ್ತದೆ. ಅಪರಾತ್ರಿ ಒಂದರ ಸಮಯ. ಟ್ಯಾಮಿ ಯಾವ ಕ್ಷಣದಲ್ಲಾದರೂ ಎಚ್ಚರವಾಗಬಹುದು ಎಂಬ ಭಯದಿಂದ ಹ್ಯಾಲೋಥೇನ್ ಎಂಬ ದ್ರವದಲ್ಲಿ ಅದ್ದಿದ್ದ ಬಟ್ಟೆಯೊಂದನ್ನು ಟ್ಯಾಮಿಯ ಮುಖಕ್ಕೆ ಕಾರ್ಲಾ ಮೆತ್ತಗೆ ಒತ್ತಿಹಿಡಿದಿರುತ್ತಾಳೆ. ಮತ್ತಿನ ಜೊತೆಗೇ ಹ್ಯಾಲೋಥೇನಿನ ಅಮಲು ಅವಳನ್ನು ಗಾಢವಾದ ನಿದ್ರೆಗೆ ತಳ್ಳಿರುತ್ತದೆ. ಕಾರ್ಲಾ ಈ ರಾತ್ರಿಗೆಂದೇ ಹ್ಯಾಲೋಥೇನ್ ಅನ್ನು ತನ್ನ ವೆಟೆರ್ನರಿ ಕ್ಲಿನಿಕಿನಿಂದ ಕದ್ದು ತಂದಿದ್ದಳು. ಆದರೆ ಅಚಾನಕ್ಕಾಗಿ ಕಾರ್ಲಾ-ಪೌಲ್ ರ ಸಂಚು ಬುಡಮೇಲಾಗುತ್ತದೆ. ಮತ್ತಿನಲ್ಲಿದ್ದ ಟ್ಯಾಮಿ ಹಟಾತ್ತನೆ ಉಸಿರುಗಟ್ಟಿದವಳಂತೆ ಕೆಮ್ಮತೊಡಗಿ, ಸ್ವಲ್ಪ ವಾಂತಿಯಾಗಿ, ಹಾಗೇ ಮತ್ತೊಮ್ಮೆ ನಿದ್ರಾವಸ್ಥೆಗೆ ಜಾರುತ್ತಾಳೆ. ಗಾಬರಿಗೊಳಗಾದ ಕಾರ್ಲಾ ಟ್ಯಾಮಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಉಸಿರಾಟ ನಿಂತಿರುವುದು ಕಂಡುಬರುತ್ತದೆ. ಕಂಗಾಲಾದ ಇಬ್ಬರೂ ಬೇಗಬೇಗನೆ ಬಟ್ಟೆಯನ್ನು ತೊಟ್ಟು, ನಗ್ನಾವಸ್ಥೆಯಲ್ಲಿದ್ದ ಟ್ಯಾಮಿಗೂ ಬಟ್ಟೆಯನ್ನು ತೊಡಿಸಿ ಬೆಡ್ ರೂಮಿಗೆ ಕೊಂಡೊಯ್ದು ಮಲಗಿಸುತ್ತಾರೆ. ಬಿಕ್ಕುತ್ತಲೇ ಆಂಬ್ಯುಲೆನ್ಸಿಗೆ ಕರೆ ಮಾಡುವ ಕಾರ್ಲಾ ಸಹಾಯಕ್ಕಾಗಿ ಅಂಗಲಾಚುತ್ತಾಳೆ. ತಕ್ಷಣವೇ ವಾಹನ ಸಮೇತ ಬಂದ ಆಂಬ್ಯುಲೆನ್ಸ್ ಸಿಬ್ಬಂದಿಗಳು ಟ್ಯಾಮಿಯನ್ನು ಸ್ಥಳೀಯ ಆಸ್ಪತ್ರೆಗೆ ತುರ್ತುಚಿಕಿತ್ಸೆಗಾಗಿ ಕೊಂಡೊಯ್ಯುತ್ತಾರೆ. ಆದರೆ ಟ್ಯಾಮಿಯ ದೇಹ ಆಗಲೇ ತಣ್ಣಗಾಗತೊಡಗಿರುತ್ತದೆ.

ಇದಾದ ಕೆಲವೇ ಘಂಟೆಗಳ ನಂತರ ಆಸ್ಪತ್ರೆಯಿಂದ ಬಂದ ದೂರವಾಣಿ ಕರೆಯೊಂದು ಹದಿನೈದರ ಹರೆಯದ ಟ್ಯಾಮಿ ಕೊನೆಯುಸಿರೆಳೆದ ಸುದ್ದಿಯನ್ನು ಖಚಿತಪಡಿಸುತ್ತದೆ. ಮೋಜಾಗಿ ಶುರುವಾದ ವಿಲಕ್ಷಣವಾದ ಕಾಮದಾಟವೊಂದು ಕೊಲೆಯಲ್ಲಿ ಅಂತ್ಯವಾಗಿರುತ್ತದೆ.

(ಮುಂದುವರೆಯುವುದು)

***************

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x