ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಕೊನೆಯ ಭಾಗ): ಪ್ರಸಾದ್ ಕೆ.

prasad kಇಲ್ಲಿಯವರೆಗೆ

ಕಾರ್ಲಾ ಹೊಮೋಲ್ಕಾ ಮಹಿಳೆಯರ ಕಿಂಗ್-ಸ್ಟನ್ ಜೈಲಿನಲ್ಲಿ ಬಂಧಿಯಾಗಿರುತ್ತಾಳೆ. ಮುಂದೆ 1997 ರಲ್ಲಿ ಆಕೆಯನ್ನು ಕ್ಯೂಬೆಕ್ ನಗರದ ಜೋಲಿಯೆಟ್ ಇನ್ಸ್ಟಿಟ್ಯೂಷನ್ ಗೆ ವರ್ಗಾಯಿಸಲಾಗುತ್ತದೆ. ಹಲವು ಮನಃಶಾಸ್ತ್ರಜ್ಞರು, ನ್ಯಾಯಾಲಯದ ಅಧಿಕಾರಿಗಳು, ಅಪರಾಧ ವಿಭಾಗದ ತಜ್ಞರ ತಂಡಗಳು ಸತತವಾಗಿ ಕಾರ್ಲಾಳನ್ನು ನಿಯಮಿತವಾಗಿ ಭೇಟಿ ಮಾಡುತ್ತಾ, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿರುತ್ತವೆ. ಕಾರ್ಲಾ ಹೊಮೋಲ್ಕಾ ತೀವ್ರವಾದ ಗೃಹದೌರ್ಜನ್ಯಕ್ಕೆ ಬಲಿಯಾದ ಹೆಣ್ಣೆಂಬುದು ಸತ್ಯವಾದರೂ, ತನ್ನ ಪತಿಯ ಹಿಂಸಾಮನೋಭಾವಗಳೆಡೆಗೆ ವಿಪರೀತ ಎನ್ನುವಷ್ಟು ವ್ಯಾಮೋಹವಿದ್ದುದು ಅಧ್ಯಯನಗಳಿಂದಲೂ ತಿಳಿದುಬಂದವು. ಇಂಪಲ್ಸಿವ್ ಮತ್ತು ಸ್ಯಾಡಿಸ್ಟ್ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಹೊಂದಿದ್ದ ಕಾರ್ಲಾ, ಹಲವು ತಜ್ಞರೊಂದಿಗೆ ಹಲವು ಮುಖವಾಡಗಳಲ್ಲಿ ಮಾತನಾಡಿ ಕ್ಷಣಕಣವೂ ಗೋಸುಂಬೆಯಂತೆ ಬಣ್ಣ ಬದಲಿಸುವ `ಸೈಕೋಪಾತ್' ನ ಲಕ್ಷಣಗಳನ್ನೂ ಹೊಂದಿದ್ದಳು. “ತಾನೇನು ಮಾಡುತ್ತಿದ್ದೆನೆಂದು ಆಕೆಗೆ ಸಂಪೂರ್ಣವಾಗಿ ತಿಳಿದಿದ್ದರೂ, ತನ್ನ ಆತ್ಮಸಮ್ಮಾನವನ್ನು ಉಳಿಸಿಕೊಳ್ಳಲು ಆಕೆ ಅಸಹಾಯಕಳಾಗಿದ್ದಳು'', ಎಂದು ಪೌಲ್ ನ ವ್ಯಕ್ತಿತ್ವಕ್ಕೆ ಅಂಟಿಕೊಂಡಂತಿದ್ದ ಕಾರ್ಲಾಳ ವ್ಯಕ್ತಿತ್ವದ ಬಗ್ಗೆ ಹೇಳುತ್ತಾ ಡಾ. ಮಾಲ್ಕಂ ದಾಖಲಿಸುತ್ತಾರೆ. “ಕಾರ್ಲಾ ಹೊಮೋಲ್ಕಾ ತನ್ನ ಪತಿಯ ಹಿಂಸೆಯಿಂದಲೇ ರೋಮಾಂಚಿತಳಾಗುತ್ತಿದ್ದಳು. ಆಕೆ ಹಿಬ್ರಿಸ್ಟೋಫೀಲಿಯಾ ಎಂಬ ಮನೋಸ್ಥಿತಿಗೆ ಒಂದು ಉತ್ತಮ ಉದಾಹರಣೆ'', ಎಂದು ಫಾರೆನ್ಸಿಕ್ ಮನೋವೈದ್ಯೆ ಡಾ. ಗ್ರಹಾಮ್ ಗ್ಲಾನ್ಸಿ ಅಭಿಪ್ರಾಯಪಡುತ್ತಾರೆ. “ಬಹುಷಃ ನೈತಿಕತೆಯ ಜೀನ್ ಎಂಬುದೇ ಅವಳಿಗಿರಲಿಲ್ಲ'', ಎಂದು ಗ್ಲೋಬ್ ಪತ್ರಿಕೆಯ ವರದಿಗಾರ್ತಿ ಮಾರ್ಗರೆಟ್ ತನ್ನ ಅಂಕಣದಲ್ಲಿ ಖಾರವಾಗಿ ಬರೆಯುತ್ತಾರೆ.    

ಜೋಲಿಯೆಟ್ ಜೈಲಿನಲ್ಲಿ ಕಾರ್ಲಾ ಹೊಮೋಲ್ಕಾಗೆ ಲಿಂಡಾ ಎಂಬ ಮತ್ತೊಬ್ಬ ಮಹಿಳಾ ಕೈದಿಯ ಪರಿಚಯವಾಗಿ, ಗೆಳೆತನವು ಪ್ರೇಮದಲ್ಲಿ ಬದಲಾಗಿರುತ್ತದೆ. “ತಾನು ಯಾವುದೇ ರೀತಿಯ ಸಂಲಿಂಗ ಸಂಬಂಧವನ್ನು ಜೈಲಿನಲ್ಲಿ ಇಟ್ಟುಕೊಂಡಿಲ್ಲ'' ಎಂದು ಹೇಳುವ ಕಾರ್ಲಾ ಹೋಮೋಲ್ಕಾ, “ಲಿಂಡಾ ತನ್ನನ್ನು ತಾನು ಪುರುಷನಂತೆ ಕಾಣುತ್ತಿದ್ದಳು. ಹೀಗಾಗಿ ಶೀಘ್ರದಲ್ಲೇ ಆಕೆ ಲಿಂಗಬದಲಾವಣೆಯನ್ನೂ ಮಾಡಲಿದ್ದಾಳೆ'' ಎಂಬ ಹೇಳಿಕೆಯನ್ನೂ ನಂತರ ಕೊಟ್ಟಿದ್ದಳು. “ಕಾರ್ಲಾ ಹೊಮೋಲ್ಕಾ ತನ್ನ ಅಸಹಜ ಸಂಬಂಧವನ್ನು ಒಪ್ಪಿಕೊಂಡು ಮುಜುಗರಕ್ಕೀಡಾಗಲು ತಯಾರಿರಲಿಲ್ಲ. ಹೀಗಾಗಿ ಈ ಸಂಬಂಧವನ್ನು ಆಕೆ ರಹಸ್ಯವಾಗಿಟ್ಟುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಳು'', ಎಂದು ಮನೋವೈದ್ಯ ಡಾ. ರಾಬಿನ್ ಮೊರಿಸೆತ್ ತನ್ನ ವರದಿಯಲ್ಲಿ ಹೇಳುತ್ತಾರೆ. ಮುಂದೆ ಅವಳು ಲಿಂಡಾಗೆ ಬರೆಯುತ್ತಿದ್ದ ಬಾಲಿಶ ಗ್ರೀಟಿಂಗ್ ಕಾರ್ಡುಗಳು, ಪ್ರೇಮಪತ್ರಗಳು ಮಾಧ್ಯಮಗಳಲ್ಲಿ ಸೋರಿಹೋಗುತ್ತವೆ.   

ಜೈಲಿನಲ್ಲೇ ಕುಳಿತು ಸ್ಥಳೀಯ ಕ್ವೀನ್ಸ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದ ಕೋರ್ಸೊಂದನ್ನು ಪೂರ್ಣಗೊಳಿಸುವ ಕಾರ್ಲಾ, ಅದೇ ವಿದ್ಯಾಸಂಸ್ಥೆಯಿಂದ ಮನಶಾಸ್ತ್ರದಲ್ಲೂ ಪದವಿಯನ್ನು ಪಡೆಯುತ್ತಾಳೆ. ಮನೋಸಂಬಂಧಿ ಚಿಕಿತ್ಸೆಯ ಎಲ್ಲಾ ಹಂತಗಳಲ್ಲೂ ನಿಯಮಿತವಾಗಿ ವೈದ್ಯರೊಂದಿಗೆ ಸಹಕರಿಸುವ ಕಾರ್ಲಾ ಉತ್ತಮಪ್ರಗತಿಯನ್ನೂ ಕಾಲಕಳೆದಂತೆ ತೋರಿಸಿರುತ್ತಾಳೆ. ಆದರೂ ಕಾರ್ಲಾ ಹೊಮೋಲ್ಕಾ ಳ ಚಿಕಿತ್ಸಾಸಂಬಂಧಿ ವರದಿಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ. `ಕಾರ್ಲಾ ಹೊಮೋಲ್ಕಾ ಈಗಲೂ ಸಮಾಜಕ್ಕೆ ಅಪಾಯಕಾರಿ' ಎಂದು ಕೆಲವು ತಜ್ಞರು ವಾದಿಸಿದರೆ, `ಸಮಾಜಕ್ಕೆ ಆಕೆ ಅಪಾಯಕಾರಿಯಾಗಿ ಉಳಿದಿಲ್ಲ' ಎಂದು ಇನ್ನು ಕೆಲವು ತಜ್ಞರು ದಾಖಲಿಸುತ್ತಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಲಾಳ ಅಭಿಪ್ರಾಯಗಳ ಬಗ್ಗೆ ಮನೋವೈದ್ಯರಿಂದಲೂ ಅಸಮಾಧಾನದ ಅನಿಸಿಕೆಗಳು ಬಂದಿರುತ್ತವೆ. “ಕಾರ್ಲಾ ಹೊಮೋಲ್ಕಾ ಜೈಲುವಾಸದ ಬಳಿಕವೂ ಓರ್ವ ಹಿಂಸಾತ್ಮಕ ಮನೋಭಾವದ ಗಂಡು ಅಥವಾ ಹೆಣ್ಣಿನೆಡೆಗೆ ಲೈಂಗಿಕವಾಗಿ ಆಕರ್ಷಿತಳಾದರೆ ಅಚ್ಚರಿಯೇನೂ ಇಲ್ಲ'', ಎಂಬ ವಾದಗಳೂ ಕರೆಕ್ಷನ್ ಸರ್ವಿಸ್ ಕೆನಡಾದ ಫಾರೆನ್ಸಿಕ್ ಮನೋವೈದ್ಯ ಡಾ. ಹ್ಯೂಬೆರ್ಟ್ ವಾನ್ ನಂಥಾ ಅನುಭವಿ ತಜ್ಞರಿಂದ ಅಧಿಕೃತವಾಗಿ ದಾಖಲಾಗುತ್ತವೆ. ಇವಕ್ಕೆ ಕಾರಣಗಳೂ ಇಲ್ಲದಿಲ್ಲ. 

ಕೊಲೆಯಾದ ಇಬ್ಬರು ಬಾಲಕಿಯರನ್ನೂ ಸೇರಿದಂತೆ, ಬಲಿಯಾದ ಯಾವುದೇ ಜೀವಗಳ ಪ್ರತಿ ಕಾರ್ಲಾ ಹೊಮೋಲ್ಕಾಳಿಗೆ ಅನುಕಂಪವಾಗಲೀ, ಭೀಕರವಾದ ಅತ್ಯಾಚಾರಕ್ಕೊಳಗಾದ ಜೀವಗಳು ಅನುಭವಿಸುತ್ತಿರುವ ಯಾತನೆಯ ಕಿಂಚಿತ್ತು ಅರಿವಾಗಲೀ ಇರಲಿಲ್ಲ. ಕಾರ್ಲಾಳ ವಿಚಾರಣೆಗಳಲ್ಲಿ ಪೋಲೀಸ್ ಅಧಿಕಾರಿಗಳಿಗೆ, ಮನೋವೈದ್ಯರ ತಂಡಗಳಿಗೆ, ಫಾರೆನ್ಸಿಕ್ ತಜ್ಞರಿಗೆ, ವಕೀಲರಿಗೆ ಆಕೆಯ ಮಾತುಗಳಲ್ಲಿ ಬೇಜವಾಬ್ದಾರಿ, ನುಣುಚಿಕೊಳ್ಳುವಿಕೆ, ವಿಕ್ಷಿಪ್ತತೆ, ಸುಳ್ಳಿನ ಮುಖವಾಡಗಳು ಕಂಡುಬಂದವೇ ಹೊರತು ಅನುಕಂಪ, ದುಃಖ, ಪಶ್ಚಾತ್ತಾಪಗಳಲ್ಲ. ಜೈಲುವಾಸದ ಅವಧಿಯಲ್ಲಿ ತನ್ನ ಹೆತ್ತವರಿಗೆ ಮತ್ತು ತಂಗಿ ಲೋರಿಗೆ ಪತ್ರವನ್ನು ಬರೆಯುವ ಕಾರ್ಲಾ ಹೊಮೋಲ್ಕಾ, ಟ್ಯಾಮಿಯ ಅತ್ಯಾಚಾರ ಮತ್ತು ಕೊಲೆಯ ಸಂಬಂಧವಾಗಿ ಕ್ಷಮೆಯನ್ನು ಕೇಳುತ್ತಾ `ಪೌಲ್ ನ ಒತ್ತಡದಿಂದಲೇ ನಾನು ಎಲ್ಲವನ್ನೂ ಮಾಡಬೇಕಾಯಿತು' ಎಂದು ಬರೆಯುತ್ತಾಳೆ. ಪ್ರತೀಬಾರಿಯೂ ತನ್ನನ್ನು ದೌರ್ಜನ್ಯಕ್ಕೊಳಗಾದ ಬಡಪಾಯಿ ಹೆಣ್ಣೆಂದು ತೋರಿಸುವ ಕಾರ್ಲಾ, ಅಪರಾಧಗಳ ಪೂರ್ಣ ಹೊಣೆಯನ್ನು ಪೌಲ್ ಬರ್ನಾರ್ಡೊನ ಮೇಲೆ ಹಾಕಿ, ತನ್ನನ್ನು ನಿರಪರಾಧಿಯ ಸ್ಥಾನದಲ್ಲಿ ಪ್ರತಿಷ್ಠಾಪಿಸಿರುತ್ತಾಳೆ. ತನ್ನ ಮತ್ತು ತನ್ನ ಮಾಜಿ ಪತಿಯ ವಿಕೃತ ವಾಂಛೆಗಳಿಗೆ ಬಲಿಯಾದ ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಹೆತ್ತವರು ಮತ್ತು ಕುಟುಂಬದ ಸದಸ್ಯರಲ್ಲಿ ಆಕೆ ಒಮ್ಮೆಯೂ ವೈಯಕ್ತಿಕವಾಗಿ ಅಥವಾ ಸಾರ್ವಜನಿಕವಾಗಿ ಸೌಜನ್ಯಕ್ಕಾದರೂ ಕ್ಷಮೆಯನ್ನು ಕೇಳಿರುವುದಿಲ್ಲ. 

*******************

ಮಾರ್ಚ್ 2001 ರಲ್ಲಿ ತನ್ನ ಅವಧಿ ಪೂರ್ಣಗೊಳಿಸುವ ಮುನ್ನವೇ ಬಿಡುಗಡೆಯನ್ನು ಕೋರಿ ಕಾರ್ಲಾ ಹೊಮೋಲ್ಕಾ ಸಲ್ಲಿಸಿದ ಅರ್ಜಿಯನ್ನು ಪೀಠವು ತಳ್ಳಿಹಾಕುತ್ತದೆ. `ಶಿಕ್ಷೆಯ ಅವಧಿಯನ್ನು ಅನುಭವಿಸುತ್ತಿರುವ ಮಹಿಳಾ ಅಪರಾಧಿಯನ್ನು ಅವಧಿಗೆ ಮುನ್ನವೇ ಬಿಡುಗಡೆಗೊಳಿಸಿ ವ್ಯಕ್ತಿ ಮತ್ತು ಸಮಾಜದ ಹಿತಕ್ಕೆ ತನ್ನ ಅಪರಾಧಗಳಿಂದ ಧಕ್ಕೆಯನ್ನುಂಟುಮಾಡುವ ಸಾಧ್ಯತೆಗಳು ಇನ್ನೂ ಇರುವುದರಿಂದ ಅಪರಾಧಿಯ ಈ ಅಪೀಲನ್ನು ವಜಾಗೊಳಿಸಗಾಗಿದೆ', ಎಂದು ನ್ಯಾಷನಲ್ ಪರೋಲ್ ಬೋರ್ಡ್ (ಎನ್.ಪಿ.ಬಿ) ವರದಿಗಳ ಆಧಾರದಿಂದ ತನ್ನ ತೀರ್ಪನ್ನು ಕೊಡುತ್ತದೆ. ಕಾರ್ಲಾ ಹೊಮೋಲ್ಕಾಳ ಅಪರಾಧಗಳನ್ನು `ಪೈಶಾಚಿಕ'ವೆಂದು ಕರೆಯುವ ಎನ್.ಪಿ.ಬಿ, `ಅಪರಾಧಿಯ ಅಂಕೆ ಮೀರಿದ, ಅಮಾನವೀಯ, ವಿಕೃತ ಲೈಂಗಿಕ ಸಾಹಸಗಳು ಅಪಾಯಕಾರಿಯಾಗಿ ಪರಿಣಮಿಸಿ, ಆಕೆಯಿಂದ ಇನ್ನಷ್ಟು ಅಪರಾಧಗಳನ್ನು ಮಾಡಿಸುವ ಸಂಭವವಿದೆ' ಎಂದು ಸ್ಪಷ್ಟವಾಗಿ ಹೇಳಿರುತ್ತದೆ.  

ಜೋಲಿಯೆಟ್ ಜೈಲಿನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮತ್ತು ಇನ್ನೂ ಕೆಲವು ಖಾಸಗಿಚಿತ್ರಗಳು 2000 ನೇ ಇಸವಿಯ ಸೆಪ್ಟೆಂಬರಿನಲ್ಲಿ, ಮಾಧ್ಯಮಗಳಲ್ಲಿ ಸೋರಿಕೆಯಾದ ಬಳಿಕ ಕಾರ್ಲಾ ಹೊಮೋಲ್ಕಾಳ ಮೋಜಿನ ಕಾರಾಗೃಹ ಜೀವನದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತದೆ. ಜೋಲಿಯೆಟ್ ಜೈಲಿನಲ್ಲಿ ಮೋಜಿನ ಸಮಯವನ್ನು ಕಳೆಯುತ್ತಿರುವ ಕಾರ್ಲಾಳ ಚಿತ್ರಗಳು ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಲೇ `ಕೋರ್ಟ್ ಆಫ್ ಪಬ್ಲಿಕ್' ನ ಹೆಚ್ಚಿದ ಒತ್ತಡದಿಂದ ಪುರುಷರ ಜೈಲಿಗೆ ಕಾರ್ಲಾಳನ್ನು ಕಾರಣಾಂತರಗಳಿಂದ ತಾತ್ಕಾಲಿಕವಾಗಿ ವರ್ಗಾಯಿಸಬೇಕಾಗಿ ಬಂದಾಗ, ಅಲ್ಲಿ ಜೀನ್ ಗಾರ್ಬೆಟ್ ಎಂಬ ಪುರುಷ ಕೈದಿಯೊಬ್ಬನೊಂದಿಗೆ ನಡೆಯುವ ಮತ್ತೊಂದು ಪ್ರೇಮಪ್ರಕರಣವೂ ಸಾಕಷ್ಟು ಸುದ್ದಿಯಾಗುತ್ತದೆ. ವಿಕ್ಷಿಪ್ತತೆಯಲ್ಲಿ ಪೌಲ್ ನ ಪ್ರತಿರೂಪದಂತಿದ್ದ ಈತ ತನ್ನ ಪ್ರೇಯಸಿಯನ್ನು ಕೊಂದ ಅಪರಾಧಕ್ಕಾಗಿ ಜೈಲು ಸೇರಿರುತ್ತಾನೆ. ಕಾರ್ಲಾಳ ಜೋಲಿಯೆಟ್ ಜೈಲಿನ ಪ್ರಿಯತಮೆ ಲಿಂಡಾ, ತನ್ನ ಮತ್ತು ಕಾರ್ಲಾಳ ಸಂಬಂಧದ ಹಲವು ಹಸಿಬಿಸಿ, ವಿಲಕ್ಷಣ ಸತ್ಯಗಳನ್ನು ಆಗಲೇ ತಜ್ಞರಲ್ಲಿ ಮತ್ತು ವರದಿಗಾರರಲ್ಲಿ ಬಾಯಿಬಿಟ್ಟಿರುತ್ತಾಳೆ.  

ಕೆನಡಾದ ಕ್ಯೂಬೆಕ್ ನಗರದಲ್ಲಿರುವ ಗರಿಷ್ಠ ಭದ್ರತೆಯ ಸೈಂಟ್ ಆನ್-ದೆ-ಪ್ಲೈನ್ಸ್ ಜೈಲಿನ ಪುಟ್ಟ ಕೋಣೆಯಲ್ಲಿ ಕಾರ್ಲಾ ಹೊಮೋಲ್ಕಾಳೊಂದಿಗೆ ಹತ್ತು ತಿಂಗಳು ಕಳೆದಿದ್ದ ಸಹಕೈದಿ ಶಂಟಾಲ್ ಮ್ಯೂನೀರ್, ಕಾರ್ಲಾಳ ಜೈಲಿನೊಳಗಿನ ವೈಯಕ್ತಿಕ ಜೀವನ ಮತ್ತು ವಿಲಕ್ಷಣ ದೈಹಿಕ ಆಕರ್ಷಣೆಗಳ ಬಗ್ಗೆ ಹೇಳುತ್ತಾ, “ಕಾರ್ಲಾ ಈ ಕ್ರಿಮಿನಲ್ ಗಳಲ್ಲಿ ಅಂಥದ್ದೇನು ನೋಡುತ್ತಿದ್ದಳು ಎಂಬುದು ಈಗಲೂ ನನಗೆ ಅಚ್ಚರಿಯಾಗುತ್ತದೆ. ಪೌಲ್ ಬರ್ನಾರ್ಡೊ ಜೊತೆಗಿನ ಪ್ರಕರಣದಲ್ಲಿ ಅವಳು ಜೈಲು ಸೇರಿದ್ದಳು. ಜೈಲಿನಲ್ಲಿ ಲಿಂಡಾ ಎನ್ನುವ ಮಹಿಳಾ ಅಪರಾಧಿ ಅವಳಿಗೆ ಹತ್ತಿರವಾದಳು. ಮುಂದೆ ಆಕೆ ಜೀನ್ ಗಾರ್ಬೆಟ್ ನ ಹಿಂದೆ ಬಿದ್ದಳು. ಜೀನ್ ಒಬ್ಬ ಕೊಲೆಗಾರನಾಗಿದ್ದ. ಸಾಮಾನ್ಯನಂತಿರದೆ ವಿಚಿತ್ರ ಮನುಷ್ಯನಾಗಿದ್ದ. ಅವಳಿಗೆ ಇಂಥವರೇ ಇಷ್ಟವಾಗುತ್ತಿದ್ದರು. ಜೀನ್ ಗಾಗಿ ಆಕೆ ಲಿಂಡಾಳನ್ನು ಕಸದಂತೆ ಎಸೆದುಬಿಟ್ಟಿದ್ದಳು. ಲೈಬ್ರರಿಯ ಪುಸ್ತಕಗಳಲ್ಲಿ ಕಾರ್ಲಾ ಮತ್ತು ಜೀನ್ ರ ಪ್ರೇಮಪತ್ರಗಳು ಹರಿದಾಡುತ್ತಿದ್ದವು. ಜೀನ್ ನನ್ನು ವಿವಾಹವಾಗುವ ಕನಸೂ ಅವಳಿಗಿತ್ತು. ಜೈಲಿನ ಕರಾಳ ಕತ್ತಲ ಮೂಲೆಗಳ ನರಕದಲ್ಲಿ, ದೇಹಸಂಬಂಧದಲ್ಲಿ ಬದಲಾಗಿದ್ದ ಈ ಸಂಬಂಧವನ್ನು ತಡೆಯಲು ಕರೆಕ್ಷನಲ್ ಸರ್ವಿಸ್ ಕೆನಡಾ (ಸಿ.ಎಸ್.ಸಿ) ಅಡ್ಡಗಾಲಿಕ್ಕಿದಾಗ ಆಕೆ ದುಃಖದಲ್ಲಿ ಮುಳುಗಿದ್ದಳು'', ಎಂದು ಅಚ್ಚರಿಪಡುತ್ತಾರೆ. ಅಪರಾಧಿಗಳಿಬ್ಬರ ಖುಲ್ಲಂಖುಲ್ಲಾ ಲೈಂಗಿಕ ಸಂಬಂಧದ ಈ ವಿವಾದಿತ ಪ್ರೇಮಪ್ರಕರಣದಿಂದಾಗಿ ಮುಜುಗರಕ್ಕೀಡಾದ ಕರೆಕ್ಷನಲ್ ಸರ್ವಿಸ್ ಕೆನಡಾದ ಆಡಳಿತ ಮಂಡಳಿಯು, ಜೀನ್ ಗಾರ್ಬೆಟ್ ನನ್ನು ಬೇರೆ ಜೈಲಿಗೆ ವರ್ಗಾಯಿಸಿ, “ಇವರೀರ್ವರ ನಡುವೆ ತೀರಾ ವೈಯಕ್ತಿಕ ಅನ್ನುವಂಥಾ ಪತ್ರಗಳ ವಿನಿಮಯವಿತ್ತೇ ಹೊರತು ದೈಹಿಕ ಸಂಬಂಧವೇನಲ್ಲ'' ಎಂದು ಹೇಳಿ ಕೈತೊಳೆದುಕೊಂಡಿತು. ಆದರೆ ಈ ಪ್ರಕರಣವನ್ನು ಹತ್ತಿರದಿಂದ ಬಲ್ಲವರು ಸಿ.ಎಸ್.ಸಿ ಯ ಈ ಬಾಲಿಶ ಸಮಜಾಯಿಷಿಯನ್ನು ಒಪ್ಪುವುದಿಲ್ಲ.    

ಹನ್ನೆರಡು ವರ್ಷಗಳು ಕಳೆದು ಕಾರ್ಲಾ ಹೊಮೋಲ್ಕಾಳ ಬಿಡುಗಡೆಯ ವರ್ಷವಾದ 2005 ಬಳಿ ಬಂದಂತೆ, ಆಕೆಯ ಬಿಡುಗಡೆಯನ್ನು ವಿರೋಧಿಸಿ ಜನರು ಬೀದಿಗಿಳಿದಿರುತ್ತಾರೆ. ಸಮಾಜದ ಸುರಕ್ಷತೆಯ ನಿಟ್ಟಿನಲ್ಲಿ ಕಾರ್ಲಾ ಹೊಮೋಲ್ಕಾಳ ಬಿಡುಗಡೆಯ ವಿಚಾರವು ಜೈಲಿನ ಮತ್ತು ನ್ಯಾಯಾಂಗದ ಒಳಗೂ, ಹೊರಗೂ ವ್ಯಾಪಕವಾಗಿ ಚರ್ಚೆಯಾಗುತ್ತದೆ. ಕಾರ್ಲಾ ಹೊಮೋಲ್ಕಾ ಬಿಡುಗಡೆಯಾಗಿ ಹೊರಬಂದರೆ ಆಕೆ ಜೀವ ಸಹಿತ ಉಳಿಯುವುದಿಲ್ಲ ಎಂಬ ಮಾತುಗಳು ದಟ್ಟವಾಗಿ ಹಬ್ಬಿರುತ್ತವೆ. ಇದಕ್ಕನುಗುಣವಾಗಿ ಹಲವು ಜೀವಬೆದರಿಕೆಗಳೂ ವಿವಿಧ ಮೂಲಗಳಿಂದ ಆಕೆಗೆ ಬಂದಿರುತ್ತವೆ. ಕೆಲ ವೆಬ್-ಸೈಟುಗಳಂತೂ ಜೀವಬೆದರಿಕೆಗಳ ಜೊತೆಗೇ, ಕಾರ್ಲಾಳ ಬಿಡುಗಡೆಯ ಮತ್ತು ಸಾವಿನ ಅವಧಿಯ ಮೇಲೆ ಖುಲ್ಲಂಖುಲ್ಲಾ ಬೆಟ್ ಕಟ್ಟುತ್ತವೆ.   

ಕಾರ್ಲಾ ಹೊಮೋಲ್ಕಾಳ ರಕ್ಷಣೆ ಜೈಲಿನ ಅಧಿಕಾರಿವರ್ಗಕ್ಕೂ, ಆಕೆಯ ವಕೀಲರ ತಂಡಕ್ಕೂ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತದೆ. ಜೈಲಿನೊಳಗೂ ಕಾರ್ಲಾ ತನ್ನ ಬದಲಿಸಿದ ಹೆಸರಿನ ಸಹಾಯದಿಂದ, ತನ್ನ ಅಸಲಿ ಗುರುತನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾಳೆ. ಭದ್ರತೆಯ ದೃಷ್ಟಿಯಿಂದ ಜೈಲು ಮತ್ತು ಮೆಂಟಲ್ ಇನ್ಸ್ಟಿಟ್ಯೂಟ್ ಗಳ ಮಧ್ಯೆ ನಿರಂತರ ವರ್ಗಾವಣೆ ಮುಂದುವರೆಯುತ್ತದೆ. ಮುಂದೆ ಜೋಲಿಯೆಟ್ ಜೈಲಿನಿಂದ ಬಿಗಿಭದ್ರತಾ ವ್ಯವಸ್ಥೆಯುಳ್ಳ ಮಾಂಟ್ರಿಯಲ್ ನ ಒಂದು ಕುಖ್ಯಾತ ಜೈಲಿಗೆ ಕಾರ್ಲಾಳ ವರ್ಗಾವಣೆಯಾಗುತ್ತದೆ. 

ಅತ್ತ ಬಿಡುಗಡೆಯ ಕಾರ್ಯಾಚರಣೆಯಲ್ಲಿ ಕಾರ್ಲಾ ಹೊಮೋಲ್ಕಾಳ ವಕೀಲರು ತಮ್ಮನ್ನು ತೊಡಗಿಸಿಕೊಂಡಿದ್ದರೆ, ಇತ್ತ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಬಲಿಯಾಗಿದ್ದ ಹೆಣ್ಣುಮಕ್ಕಳ ಕುಟುಂಬವನ್ನು ಪ್ರತಿನಿಧಿಸುತ್ತಿದ್ದ ವಕೀಲ ಟಿಮ್ ಡಾನ್ಸನ್ ತನ್ನ ತಂಡದೊಂದಿಗೆ ಮುಂದಿನ ಹಂತಗಳಿಗೆ ತಯಾರಾಗಿರುತ್ತಾರೆ. `ಕಾರ್ಲಾ ಹೊಮೋಲ್ಕಾ ಬಿಡುಗಡೆಯಾದರೂ ಆಕೆ ಪೋಲೀಸರ ಕಣ್ಗಾವಲಿನಲ್ಲೇ ಇರಬೇಕು ಮತ್ತು ಇಲಾಖೆಯು ನಿಯಮಿತವಾಗಿ ನಡೆಸಬೇಕಾಗಿದ್ದ ಆಕೆಯ ಸೈಕಾಲಾಜಿಕಲ್ ಮತ್ತು ಸೈಕಿಯಾಟ್ರಿಕ್ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು', ಎಂದು ಟಿಮ್ ಡಾನ್ಸನ್ ನೊಂದ ಕುಟುಂಬಗಳ ಪರವಾಗಿ ತಮ್ಮ ಅಪೀಲನ್ನು ಸಲ್ಲಿಸುತ್ತಾರೆ. ಅಂತೆಯೇ ಕ್ಯೂಬೆಕ್ ಸುಪೀರಿಯರ್ ನ್ಯಾಯಾಲಯಕ್ಕೆ ಅಪೀಲನ್ನು ಸಲ್ಲಿಸುವ ಕಾರ್ಲಾ, ತನಗಿರುವ ಜೀವಭಯದ ಕಾರಣದಿಂದ ತನ್ನ ಬಿಡುಗಡೆಯ ಯಾವ ವರದಿಯನ್ನೂ ಮಾಧ್ಯಮಗಳು ಮಾಡದಂತೆ ನಿರ್ಬಂಧವನ್ನು ಹೇರಲು ಅರ್ಜಿಯನ್ನು ಸಲ್ಲಿಸುತ್ತಾಳೆ.  

`ಕಾರ್ಲಾ ಹೊಮೋಲ್ಕಾ ಸಮಾಜಕ್ಕೆ ಇನ್ನೂ ಅಪಾಯಕಾರಿ' ಎಂಬ ವಾದವನ್ನು ಒಪ್ಪುವ ಜೀನ್ ಬ್ಯೂಲಿಯೋ ರ ನ್ಯಾಯಪೀಠ, 2005 ರ ಜೂನ್ ನಾಲ್ಕರಂದು ಕೆನಡಾದ ಕ್ರಿಮಿನಲ್ ಕೋಡ್ ನ ಹಲವು ಸೆಕ್ಷನ್ ಗಳನ್ನು ಬಳಸಿ, ಒಂದು ವರ್ಷದ ಮಟ್ಟಿಗೆ ಪಾಲಿಸಬೇಕಾಗಿರುವ, ಹಲವು ಬಿಗಿ ಷರತ್ತುಗಳನ್ನೊಳಗೊಂಡ ಬಿಡುಗಡೆಯ ಆದೇಶವನ್ನು ಹೊರಡಿಸುತ್ತದೆ. ತನ್ನ ಹೆಸರು, ಮನೆ, ಕಾರ್ಯಾಲಯ ಮತ್ತು ಸಂಗಾತಿಯ ಪೂರ್ಣ ವಿವರಗಳನ್ನು ಪೋಲೀಸ್ ಇಲಾಖೆಗೆ (ನಿಯಮಿತವಾಗಿ/ಬದಲಾದ ಪಕ್ಷದಲ್ಲಿ) ಸಲ್ಲಿಸಬೇಕೆಂದೂ, ನಲವತ್ತೆಂಟು ಘಂಟೆಗಳಿಗೂ ಹೆಚ್ಚು ಅವಧಿಯವರೆಗೆ ತನ್ನ ಮನೆಯಿಂದ ದೂರವಿದ್ದರೆ ಸ್ಥಳೀಯ ಪೋಲೀಸ್ ಠಾಣೆಗೆ ಮುಂಚಿತವಾಗಿ ಸೂಚಿಸಬೇಕೆಂದೂ, ಪ್ರಕರಣಗಳಲ್ಲಿ ಬಲಿಯಾದ ಕುಟುಂಬದ ಸದಸ್ಯರನ್ನೂ, ಪೌಲ್ ನ ಕುಟುಂಬದ ಸದಸ್ಯರನ್ನೂ, ಹಾಗೆಯೇ (ಹಿಂಸಾತ್ಮಕ ಮತ್ತು ಲೈಂಗಿಕ ಅಪರಾಧಗಳ ಹಿನ್ನೆಲೆಯುಳ್ಳ) ಅಪರಾಧಿಗಳ ಜೊತೆಗೆ ಯಾವುದೇ ಪ್ರಕಾರದ ನಂಟನ್ನು ಹೊಂದಿರಬಾರದೆಂದೂ, ವೈದ್ಯರು ಸೂಚಿಸಿದ ಔಷಧಿಗಳ ಹೊರತಾಗಿ ಯಾವುದೇ ಮಾದಕದ್ರವ್ಯ ಅಥವಾ ತತ್ಸಂಬಂಧಿ ಔಷಧಿಗಳನ್ನು ಸೇವಿಸಬಾರದೆಂದೂ, ಹದಿನಾರು ವರ್ಷದ ಕೆಳಗಿನ ಮಕ್ಕಳ ಜೊತೆ ಯಾವ ನಂಟನ್ನೂ ಹೊಂದಿರಬಾರದೆಂದೂ, ಬಿಡುಗಡೆಯ ನಂತರ ತನ್ನ ಡಿ.ಎನ್.ಎ ಮಾದರಿಯನ್ನು ಪೋಲೀಸ್ ಇಲಾಖೆಗೆ ಸಲ್ಲಿಸಬೇಕೆಂದೂ, ನಿಯಮಿತವಾಗಿ ಕೌನ್ಸೆಲಿಂಗ್ ಅನ್ನು ಮುಂದುವರೆಸಬೇಕೆಂದೂ ಬಿಗಿ ಷರತ್ತನ್ನು ಹಾಕಿತು. ಈ ಷರತ್ತುಗಳನ್ನು ಉಲ್ಲಂಘಿಸಿದರೆ ಎರಡು ವರ್ಷದ ಜೈಲುವಾಸವನ್ನೂ ವಿಧಿಸಲಾಗುತ್ತದೆ ಎಂದು ಘೋಷಿಸಲು ನ್ಯಾಯಾಲಯವು ಮರೆಯಲಿಲ್ಲ. 

ಅಂತೂ 2005 ರ ಜುಲೈ ಮೊದಲ ವಾರದಲ್ಲಿ ಮೂವತ್ತೈದರ ಪ್ರಾಯದ ಕಾರ್ಲಾ ಹೊಮೋಲ್ಕಾ ಹನ್ನೆರಡು ವರ್ಷಗಳ ಜೈಲು ವಾಸದ ಅವಧಿಯನ್ನು ಪೂರ್ತಿಗೊಳಿಸಿ ಹೊರಬರುತ್ತಾಳೆ. ಕುಖ್ಯಾತ ಸೈಂಟ್ ಆನ್-ದೆ-ಪ್ಲೈನ್ಸ್ ಜೈಲಿನ ಮುಂಭಾಗದ ಹಾದಿಯುದ್ದಕ್ಕೂ ನಿಂತು ಕುತೂಹಲದಿಂದ ಕಾಯುತ್ತಿದ್ದ ಮಾಧ್ಯಮದವರ ಕಣ್ಣುಗಳಿಗೆ ಬೀಳದೆ ಕಾರ್ಲಾ ಯಶಸ್ವಿಯಾಗಿ ಹೊರಬಿದ್ದಿರುತ್ತಾಳೆ. ಜೈಲಿನಿಂದ ಬಿಡುಗಡೆಯಾದ ಬಳಿಕ ರೇಡಿಯೋ ಕೆನಡಾ ಟೆಲಿವಿಷನ್ ಗೆ ಫ್ರೆಂಚ್ ಭಾಷೆಯಲ್ಲಿ ಕಾರ್ಲಾ ತನ್ನ ಮೊದಲ ಸಂದರ್ಶನವನ್ನು ನೀಡುತ್ತಾಳೆ. “ಜೈಲುವಾಸದ ನಂತರದ ಜೀವನದ ಭಾಗವನ್ನು ಎಲ್ಲಿ ಕಳೆಯುವಿರಿ?'' ಎಂಬ ನಿರೂಪಕನ ಪ್ರಶ್ನೆಗೆ ಜಾಣತನದಿಂದ ಉತ್ತರಿಸುವ ಕಾರ್ಲಾ ಹೊಮೋಲ್ಕಾ, ಮಾಧ್ಯಮಗಳ ಮುಂದೆ ತನ್ನ ವಿಳಾಸದ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸುತ್ತಾಳೆ.  

ಆದರೆ ಮುಂದೆ 2005 ರ ನವೆಂಬರ್ ತಿಂಗಳಲ್ಲಿ ಕ್ಯೂಬೆಕ್ ಸುಪೀರಿಯರ್ ನ್ಯಾಯಾಲಯವು ಕಾರ್ಲಾ ಹೊಮೋಲ್ಕಾಳ ಮೇಲೆ ಹೇರಲಾದ ಎಲ್ಲಾ ಷರತ್ತುಗಳನ್ನು, `ಸಮರ್ಥಿಸುವ ಪ್ರಬಲ ಕಾರಣಗಳನ್ನು ಇಲಾಖೆಯು ನೀಡಲು ವಿಫಲವಾದ ಕಾರಣ' ತೆಗೆದುಹಾಕುತ್ತದೆ. ಜೈಲುವಾಸದ ಬಳಿಕ ಹೇರಲಾದ ಈ ಷರತ್ತುಗಳು ಜಾರಿಯಾದ ಪ್ಲೀ ಬಾರ್ಗೈನ್ ಅನ್ನು ಉಲ್ಲಂಘಿಸುತ್ತವೆ ಎಂದು ವಾದಿಸುವ ಕಾರ್ಲಾಳ ವಕೀಲರ ವಾದ ಯಶಸ್ಸನ್ನು ಪಡೆದುಕೊಳ್ಳುತ್ತದೆ. ಮುಂದೆ ಈ ತೀರ್ಪನ್ನು ಎತ್ತಿಹಿಡಿಯುವ ಕ್ಯೂಬೆಕ್ ಜಸ್ಟಿಸ್ ಡಿಪಾರ್ಟ್ಮೆಂಟ್, ಕಾರ್ಲಾ ಹೊಮೋಲ್ಕಾಳ ವಿರುದ್ಧದ ಪ್ರಕರಣಗಳನ್ನು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಓಂಟಾರಿಯೋ ಪ್ರಾಸಿಕ್ಯೂಷನ್ ನ ಹೊಸ ಅಪೀಲನ್ನು ವಜಾ ಮಾಡುತ್ತದೆ. 

“ಬಾರ್ಬಿ-ಕೆನ್ ಕಿಲ್ಲರ್ಸ್'' ಎಂದೇ ಕುಖ್ಯಾತರಾದ ಕಾರ್ಲಾ-ಪೌಲ್ ಜೋಡಿಯ `ಬಾರ್ಬಿ'ಯಾದ ಕಾರ್ಲಾ ಹೊಮೋಲ್ಕಾಳನ್ನು ಮಾಧ್ಯಮಗಳು ಮುಂದೆಯೂ ಬೇತಾಳದಂತೆ ಬೆನ್ನು ಹತ್ತಿದವು. ಕೆನಡಾ ಮತ್ತು ಅಮೇರಿಕಾದ ಹಲವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಾದ ಟಿ.ವಿ.ಎ, ಸಿಟಿ ನ್ಯೂಸ್, ಸನ್ ಮೀಡಿಯಾ, ವಾಂಕೋವರ್ ಸನ್ ಇತ್ಯಾದಿಗಳು ಕಾರ್ಲಾ ಹೊಮೋಲ್ಕಾಳ ನಿವಾಸದ ವಿಳಾಸವನ್ನು ಬಹಿರಂಗಪಡಿಸಲು ಯತ್ನಿಸಿದವು. ಜೈಲಿನಿಂದ ಬಿಡುಗಡೆಯಾದ ವರ್ಷದೊಳಗೇ ತನ್ನನ್ನು ಪ್ರತಿನಿಧಿಸುತ್ತಿದ್ದ ವಕೀಲರ ಸಂಬಂಧಿಯೊಬ್ಬನನ್ನು ವಿವಾಹವಾದ ಕಾರ್ಲಾ ಹೊಮೋಲ್ಕಾ, ಮುಂದೆ 2007 ರಲ್ಲಿ ಗಂಡುಮಗುವಿನ ತಾಯಿಯಾದಾಗಲೂ ಮಾಧ್ಯಮಗಳು ಸಾಕಷ್ಟು ಬರೆದವು. 

2006 ರಲ್ಲಿ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊರ ರಕ್ತಸಿಕ್ತ ಕಥೆಯನ್ನಾಧರಿಸಿ ಜೋಲ್ ಬೆಂಡರ್ ನಿರ್ದೇಶನದಲ್ಲಿ “ಕಾರ್ಲಾ'' ಎಂಬ ಚಲನಚಿತ್ರ ತೆರೆಗೆ ಬಂದಿತು. ಕಾರ್ಲಾಳ ಪಾತ್ರದಲ್ಲಿ ಲೌರಾ ಪ್ರೆಪನ್ ನಟಿಸಿದರೆ, ಪೌಲ್ ಪಾತ್ರಕ್ಕೆ ಮಿಶಾ ಕೊಲಿನ್ಸ್ ಈ ಚಿತ್ರದಲ್ಲಿ ಜೀವ ತುಂಬಿದ್ದಾರೆ. ಚಿತ್ರೀಕರಣದ ಸಮಯದಲ್ಲಿ “ಡೆಡ್ಲೀ`'' ಎಂಬ ಶೀರ್ಷಿಕೆಯನ್ನು ಹೊಂದಿದ್ದ ಈ ಚಲನಚಿತ್ರವನ್ನು ಬಿಡುಗಡೆಯ ಸಮಯದಲ್ಲಿ “ಕಾರ್ಲಾ'' ಎಂದು ಬದಲಾವಣೆಯನ್ನು ಮಾಡಿ ಥಿಯೇಟರುಗಳಲ್ಲಿ ಬಿಡುಗಡೆ ಮಾಡಲಾಯಿತು. ನೈಜ ಕಥೆಗೆ ಬಲು ಹತ್ತಿರವಾದ ನಿರೂಪಣೆಯಿರುವ ಈ ಚಲನಚಿತ್ರವು ವೀಕ್ಷಕರನ್ನು ತೀವ್ರವಾಗಿ ವಿಚಲಿತಗೊಳಿಸಿದ್ದರಲ್ಲಿ ಸಂಶಯವಿಲ್ಲ. ಮೊದಮೊದಲು ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಕುಟುಂಬಗಳಿಂದ ತೀವ್ರ ವಿರೋಧಗಳು ಬಂದ ಹೊರತಾಗಿಯೂ ಚಿತ್ರತಂಡ ಮತ್ತು ವಕೀಲರ ಉಪಸ್ಥಿತಿ, ಸಂಧಾನಗಳಿಂದ ವಿವಾದಗಳು ತಿಳಿಯಾದವು. ನಿಜಜೀವನದಲ್ಲಿ ನಡೆದ ಭಯಾನಕ ಘಟನೆಗಳನ್ನು ನೈಜವಾಗಿ ತೆರೆಗೆ ತಂದ ಈ ಚಲನಚಿತ್ರವು ಅತಿಯಾದ ಹಿಂಸೆ ಮತ್ತು ಲೈಂಗಿಕತೆಯನ್ನು ಹೊಂದಿದ್ದ ಪರಿಣಾಮವಾಗಿ ಕೆನಡಾದಲ್ಲಿ ತೀವ್ರವಾಗಿ ವಿವಾದ ಮತ್ತು ಟೀಕೆಗೊಳಗಾಯಿತು ಎಂದರೆ ತಪ್ಪಾಗಲಿಕ್ಕಲ್ಲ.

ಓಂಟಾರಿಯೋದ ಸೈಂಟ್-ಕ್ಯಾಥರೀನ್ ಭಾಗದಲ್ಲಿರುವ ಗ್ರೀನ್ ರಿಬ್ಬನ್ ಮೆಮೋರಿಯಲ್ ಉದ್ಯಾನದಲ್ಲಿ ಕ್ರಿಸ್ಟನ್ ಫ್ರೆಂಚ್ ಮತ್ತು ಬಲಿಯಾದ ಎಲ್ಲಾ ಬಾಲಕಿಯರ ನೆನಪಿಗಾಗಿ ಪುಟ್ಟ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ವರ್ಷಂಪ್ರತಿ ಕ್ರಿಸ್ಟನ್ ಫ್ರೆಂಚ್ ದೈವಾಧೀನಳಾದ ದಿನದಂದು ಆಕೆಯ ಮತ್ತು ಇತರ ಶೋಷಿತ ಕುಟುಂಬಗಳೂ ಸೇರಿದಂತೆ ಸಾರ್ವಜನಿಕರು ಈ ಸ್ಮಾರಕದ ಬಳಿ ತೆರಳಿ ತಮ್ಮ ನಮನವನ್ನು ಸಲ್ಲಿಸುತ್ತಾರೆ. ಅಲ್ಲದೆ ಕ್ರಿಸ್ಟನ್ ಫ್ರೆಂಚ್ ಳ ಹೆಸರಿನಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ಆಗಾಗ ಹಮ್ಮಿಕೊಂಡು ಆಕೆಯ ಕುಟುಂಬ ಸದ್ದಿಲ್ಲದೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.    

*******************

ಕಾರ್ಲಾ ಹೊಮೋಲ್ಕಾ, ಪ್ರಸ್ತುತ `ಲಿಯಾನೆ ಟೀಲ್ ಬೋರ್ಡೆಲಾಯಿಸ್ / ಎಮಿಲಿ ಬೋರ್ಡೆಲಾಯಿಸ್' ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಬದುಕುತ್ತಿದ್ದಾಳೆ ಎಂದು ಮೂಲಗಳು ಹೇಳುತ್ತವೆ. ಸದ್ಯಕ್ಕೆ ಮೂರು ಮಕ್ಕಳ ತಾಯಿಯಾಗಿರುವ ಕಾರ್ಲಾ ಕೆನಡಾದಲ್ಲಿ ವಾಸವಾಗಿದ್ದಾಳೆ ಎಂದು ಹೇಳಲಾಗುತ್ತಿದೆಯಾದರೂ, ನಿಖರವಾಗಿ ಆಕೆ ಎಲ್ಲಿ ವಾಸವಾಗಿದ್ದಾಳೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕ್ಯೂಬೆಕ್, ಮಾಂಟ್ರಿಯಲ್, ಫ್ರೆಂಚ್ ಕೆರಿಬಿಯನ್ ದ್ವೀಪ ಮತ್ತು ಗ್ವಾಡೆಲೋಪ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾರ್ಲಾ ಹೊಮೋಲ್ಕಾ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾಳೆ ಎಂದು ವಿವಿಧ ಪತ್ರಿಕೆಗಳು ಆಕೆಯ ಬಿಡುಗಡೆಯ ನಂತರದ ಕಾಲಾವಧಿಯಲ್ಲಿ ಬರೆದವು. ಲೇಖಕಿ, ಪತ್ರಕರ್ತೆ ಪೌಲಾ ಟಾಡ್, ಗ್ವಾಡೆಲೋಪ್ ಪ್ರದೇಶದಲ್ಲಿ ಕಾರ್ಲಾಳನ್ನು ಮತ್ತು ಆಕೆಯ ಪತಿ ಮತ್ತು ಮೂವರು ಮಕ್ಕಳೊಂದಿಗೆ ಭೇಟಿಮಾಡಿರುವುದಾಗಿ ತನ್ನ ಪುಸ್ತಕದಲ್ಲಿ ದಾಖಲಿಸುತ್ತಾಳೆ. 

“ಕಾರ್ಲಾ ಹೊಮೋಲ್ಕಾ'' ಎಂಬ ಹೆಸರು ಈಗಲೂ ಕೆನಡಾ ದೇಶವನ್ನು ಬೆಚ್ಚಿಬೀಳಿಸುತ್ತದೆ. ಹಲವು ವರ್ಷಗಳೇ ಕಳೆದು ಹೋಗಿದ್ದರೂ ಕೆನಡಾದ ಜನರು ಕಾರ್ಲಾಳ ಹೆಸರೆತ್ತಿದೊಡನೆ ಇಂದಿಗೂ ಉರಿದು ಬೀಳುತ್ತಾರೆ. ವಿವಿಧ ನಗರಗಳಲ್ಲಿ ಆಕೆ ತನ್ನ ಕುಟುಂಬದೊಂದಿಗೆ ಅಜ್ಞಾತಳಾಗಿ ವಾಸಿಸುತ್ತಿದ್ದಾಳೆಂಬ ವರದಿಗಳು ಆಗಾಗ ಪ್ರಕಟವಾದಾಗ, ಆಯಾ ನಗರದ ನಿವಾಸಿಗಳಿಂದ ವಿರೋಧಗಳೂ, ಭಯಮಿಶ್ರಿತ ಆತಂಕದ ಪ್ರತಿಕ್ರಿಯೆಗಳೂ ಕೇಳಿಬಂದವು. ತನ್ನ ಮತ್ತು ತನ್ನ ತುಂಬುಕುಟುಂಬದ ಭವಿಷ್ಯದ ನಿಟ್ಟಿನಲ್ಲಿ ಆಕೆ ಅಜ್ಞಾತವಾಗಿ ಬದುಕುತ್ತಿರುವುದಂತೂ ಸತ್ಯ. ಮುಂದೆ ಪೌಲ್ ಬರ್ನಾರ್ಡೊ “ಎ ಮ್ಯಾಡ್ ವಲ್ರ್ಡ ಆರ್ಡರ್'' ಎಂಬ ಇ-ಬುಕ್ ಅನ್ನು ಬರೆದು, ಪ್ರಕಟಿಸಿ ಖ್ಯಾತ ಅಮೆಝಾನ್ ವೆಬ್-ಸೈಟಿನಲ್ಲಿ ಮಾರಾಟಕ್ಕಿರಿಸಿದಾಗಲೂ ಆನ್-ಲೈನ್ ಗ್ರಾಹಕರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಎಚ್ಚರಗೊಂಡ ವೆಬ್-ಸೈಟ್ ಸದ್ದಿಲ್ಲದೆ ಈ ಪುಸ್ತಕದ ಮಾರಾಟವನ್ನು ಸ್ಥಗಿತಗೊಳಿಸಿತು.  

ಕೆನಡಾ ದೇಶದ ಇತಿಹಾಸದಲ್ಲೇ ಕಂಡುಕೇಳರಿಯದಷ್ಟು ಕುಖ್ಯಾತಿಯನ್ನು ಪಡೆದ ಪೌಲ್ ಬರ್ನಾರ್ಡೊ-ಕಾರ್ಲಾ ಹೊಮೋಲ್ಕಾರ “ದ ಬಾರ್ಬಿ-ಕೆನ್ ಕಿಲ್ಲರ್ಸ್'' ಪ್ರಕರಣದಲ್ಲಿ ಹಿಂಸೆಗೆ ಬಲಿಯಾದ ಕುಟುಂಬಗಳಷ್ಟೇ ಅಲ್ಲದೆ ಪೌಲ್ ಮತ್ತು ಕಾರ್ಲಾಳ ಕುಟುಂಬಗಳೂ ಕೂಡ ಮಾನಸಿಕವಾಗಿ ಸಾಕಷ್ಟು ಜರ್ಝರಿತರಾಗಿದ್ದು ಒಪ್ಪಲೇಬೇಕಾದ ಸತ್ಯ. ಅದರಲ್ಲೂ ಪ್ರಕರಣ ಬೆಳಕಿಗೆ ಬಂದಾಗಿನಿಂದ ಬಿಡುವಿಲ್ಲದೆ, ಕ್ಯಾಮೆರಾಗಳ ಕಣ್ಣುಕುಕ್ಕುವ ಬೆಳಕಿನಿಂದ ಕಂಗೆಟ್ಟುಹೋದ ಕಾರ್ಲಾ ಹೊಮೋಲ್ಕಾಳ ಕುಟುಂಬ ಸೈಂಟ್-ಕ್ಯಾಥರೀನ್ ನಲ್ಲಿ ಬದುಕುವುದೇ ಒಂದು ಸಾಹಸವಾಗಿ ಹೋಯಿತು. ಕಾರ್ಲಾ ಜೈಲು ಸೇರಿದ ಬಳಿಕವೂ ಆಕೆಯೊಂದಿಗೆ ಸತತವಾಗಿ ಒಡನಾಟವನ್ನಿಟ್ಟುಕೊಂಡಿದ್ದ ಕಾರ್ಲಾಳ ತಂಗಿ ಲೋರಿ ಹೋಮೋಲ್ಕಾ, “ಲೋಗನ್'' ಎಂದು ನಂತರದ ಕಾಲಾವಧಿಯಲ್ಲಿ ತನ್ನ ಹೆಸರನ್ನು ಬದಲಿಸಿಕೊಂಡಳು.  

ಪೌಲ್ ಬರ್ನಾರ್ಡೊ ಬಿಗಿ ಭದ್ರತೆಯ ಜೈಲಿನ ನಾಲ್ಕು ಗೋಡೆಗಳ ಮಧ್ಯದಲ್ಲಿ ತನ್ನ ಉಳಿದ ಜೀವನವನ್ನು ಕಳೆಯುತ್ತಿದ್ದಾನೆ. ಮಹಿಳೆಯರ ಮತ್ತು ಮಕ್ಕಳ ಮೇಲೆ ಅಪರಾಧವೆಸಗಿ ಜೈಲು ಸೇರಿದ ಅಪರಾಧಿಗಳು ಜೈಲುಗಳಲ್ಲಿ ಸಹಕೈದಿಗಳಿಂದ ಹಿಂಸೆಯನ್ನು ಅನುಭವಿಸುವುದು ಸಾಮಾನ್ಯ. ಈ ಅಪರಾಧಗಳು ಅತ್ಯಂತ ಕೀಳುಮಟ್ಟಿನವೆಂಬ ಭಾವನೆ ಈ ನರಕಸದೃಶ ಜೈಲುಗಳಲ್ಲಿ ಇಂದಿಗೂ ಇದೆ. ಹೀಗಾಗಿ ಸ್ವಾಭಾವಿಕವಾಗಿಯೇ ಪೌಲ್ ಹಲವು ಬಾರಿ ಜೈಲಿನ ಆವರಣದಲ್ಲೇ ಹಲ್ಲೆಗೊಳಗಾದ. ಪೌಲ್ ಬರ್ನಾರ್ಡೊ ಮತ್ತು ಕಾರ್ಲಾ ಹೊಮೋಲ್ಕಾರ ಪ್ರಕರಣಗಳನ್ನು ಆರಂಭದಿಂದಲೇ ಟೊರಾಂಟೋ ಸ್ಟಾರ್ ಗಾಗಿ ವರದಿ ಮಾಡುತ್ತಲೇ ಬಂದಿರುವ, ಈ ಪ್ರಕರಣಗಳನ್ನು ಸಾಕಷ್ಟು ಅಧ್ಯಯನ ಮಾಡಿರುವ, ಅಲ್ಲದೆ ಈ ಪ್ರಕರಣಗಳ ಬಗ್ಗೆ “ಲೀಥಲ್ ಮ್ಯಾರೇಜ್'' ಎಂಬ ವಿಸ್ತøತವಾದ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಬರೆದಿರುವ ಕ್ರೈಂ ವರದಿಗಾರ, ಲೇಖಕ ನಿಕ್ ಪ್ರಾನ್ ಕುಖ್ಯಾತ ಕಿಂಗ್-ಸ್ಟನ್ ಜೈಲಿನ ಭಯಾನಕತೆಯನ್ನು ನೆನಪಿಸಿಕೊಳ್ಳುತ್ತಾರೆ. ಮಲ, ಮೂತ್ರ, ಬೆವರು, ವಾಂತಿ, ಉಗುಳು, ರಕ್ತ ಇತ್ಯಾದಿಗಳ ವಾಸನೆಗಳಿಂದ ತುಂಬಿಹೋಗಿರುವ ಆ ದೈತ್ಯಜೈಲಿನ ಲೋಕವೇ ಭಯಾನಕ ಎಂದು ದಾಖಲಿಸುತ್ತಾ ಪೌಲ್ ಬರ್ನಾರ್ಡೊನ ಸಂಕ್ಷಿಪ್ತ ಭೇಟಿಗಾಗಿ ತೆರಳಿದ ಅವಧಿಯನ್ನು ನೆನಪಿಸಿಕೊಳ್ಳುತ್ತಾರೆ. “ಮೂಲೆಯಲ್ಲಿ ಟಾಯ್ಲೆಟ್ ಕಮೋಡ್ ಅನ್ನು ಹೊಂದಿದ್ದ, ಪ್ರಾಣಿಯೊಂದನ್ನು ಕೂಡಿ ಹಾಕಿದ ಚಿಕ್ಕ ಬೋನಿನಂತಿದ್ದ ಆ ಜೈಲಿನಲ್ಲಿ ಪೌಲ್ ಬರ್ನಾರ್ಡೊ ಬಂಧಿಯಾಗಿದ್ದ. ಒಳಗೆ ಕಾಲಿಕ್ಕಿದ ಒಂದೂವರೆ ನಿಮಿಷದಲ್ಲೇ ಆ ಗೂಡಿನಲ್ಲಿ ನನಗೆ ಉಸಿರುಗಟ್ಟಿವಂತಾಯಿತು ಮತ್ತು ನಾನಲ್ಲಿಂದ ಹೊರಬಂದೆ'', ಎಂದು ನಿಕ್ ಪ್ರಾನ್ ತನ್ನ ಮರೆಯಲಾಗದ ಅನುಭವದ ಬಗ್ಗೆ ಬರೆಯುತ್ತಾರೆ. 

ಆದರೆ ಪೌಲ್ ಬರ್ನಾರ್ಡೊ ಆ ಸರ್ಪಗಾವಲಿನ, ಉಸಿರುಗಟ್ಟಿಸುವ ನರಕದಲ್ಲೇ ತನ್ನ ಉಳಿದ ಜೀವಿತದ ದಿನಗಳನ್ನು ಕಳೆಯಲಿದ್ದಾನೆ.     

(ಮುಗಿಯಿತು)

*******************    
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Anantha Ramesh
7 years ago

ಲೇಖಕರು ಬಹಳ ಉತ್ತಮ ರೀತಿಯಲ್ಲಿ ವಿಕ್ಷಿಪ್ತ ಮನಸ್ಠಿತಿಯ ವ್ಯಕ್ತಿಗಳ ಕತೆ ಓದುಗರಿಗೆ ಕೊಟ್ಟಿದ್ದಾರೆ. ಎಲ್ಲ ಕಂತುಗಳನ್ನು ಓದಿದ ನಂತರ ವಿಷಾದ ನಮ್ಮಲ್ಲಿ ಆವರಿಸುತ್ತದೆ. ಪರಿಶ್ರಮದ ಬರಹಕ್ಕೆ ಅಭಿನಂದನೆಗಳು.

1
0
Would love your thoughts, please comment.x
()
x