ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 10): ಪ್ರಸಾದ್ ಕೆ.

prasad k

ಇಲ್ಲಿಯವರೆಗೆ
ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ ವರದಿಯು ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳಲ್ಲದೆ ಉಳಿದ ಪ್ರಕರಣಗಳ ಮೇಲೂ ಬೆಳಕು ಚೆಲ್ಲಿ ಉತ್ತಮ ಒಳನೋಟವನ್ನು ಕೊಡುತ್ತದೆ. 

ಕಾರ್ಲಾ ಹೊಮೋಲ್ಕಾಳ ತಂಗಿ ಟ್ಯಾಮಿ ಹೊಮೋಲ್ಕಾಳ “ಆಕಸ್ಮಿಕ ಮತ್ತು ಸ್ವಾಭಾವಿಕ'' ಸಾವೆಂದು ತಪ್ಪಾಗಿ ದಾಖಲಾದ ಘಟನೆಯನ್ನು ಉಲ್ಲೇಖಿಸುತ್ತಾ, ಟ್ಯಾಮಿಯ ಎಡಕೆನ್ನೆ, ಮೇಲ್ದುಟಿ ಮತ್ತು ಎಡಭುಜದ ಮೇಲೆ ಕಂಡುಬಂದಿದ್ದ ದಟ್ಟಕೆಂಪುಕಲೆಗಳ ಬಗ್ಗೆ ವರದಿಯು ಒತ್ತಿಹೇಳುತ್ತದೆ. ಹಚ್ಚೆಯಂತೆ ದಟ್ಟವಾಗಿ ಮೂಡಿಬಂದಿದ್ದ ಈ ಅಪರೂಪದ ಕಲೆಗಳನ್ನು ಕಡೆಗಣಿಸುವುದು ಸಾಧ್ಯವೇ ಇರಲಿಲ್ಲ. ಅಸಲಿಗೆ ಆಕೆಯ ಉಸಿರಾಟ ನಿಂತುಹೋದಾಗಲೇ ಈ ಕಲೆಗಳು ಬಂದಾಗಿದ್ದವು. ಕಾರ್ಲಾ ಆಂಬ್ಯುಲೆನ್ಸ್ ಗೆ ಕರೆಮಾಡಿದ ನಂತರ ಬಂದ ಆಸ್ಪತ್ರೆಯ ಸಿಬ್ಬಂದಿವರ್ಗ ಮತ್ತು ಪೋಲೀಸ್ ಅಧಿಕಾರಿಗಳು ಆಗಲೇ ಈ ಕಲೆಗಳನ್ನು ಗುರುತಿಸಿದ್ದರು. ಈ ಬಗ್ಗೆ ಕಾರ್ಲಾ-ಪೌಲ್ ರಲ್ಲಿ ಪ್ರತ್ಯೇಕವಾಗಿ ವಿಚಾರಿಸಿದಾಗ, “ಟ್ಯಾಮಿಯನ್ನು ನಾವು ಬೇಸ್-ಮೆಂಟ್ ಹಾಲ್ ನಿಂದ ಪಕ್ಕದ ಬೆಡ್ ರೂಮಿಗೆ ವರ್ಗಾಯಿಸಿದ್ದೆವು. ಅವಳನ್ನು ಕಂಬಳಿ ಸಮೇತ ಎತ್ತಿಕೊಂಡು ಹೋದ ಪರಿಣಾಮವಾಗಿ, ಈ ಕಲೆಗಳು ಬಂದಿರಬಹುದು'' ಎನ್ನುತ್ತಾರೆ. 

ತನಿಖಾಧಿಕಾರಿಯು ಕಾರ್ಲಾ, ಪೌಲ್ ಮತ್ತು ಇನ್ನೋರ್ವ ಸಹೋದರಿ ಲೋರಿಯೊಂದಿಗೆ ಪ್ರಾಥಮಿಕ ಹಂತದ ವಿಚಾರಣೆಯನ್ನು ಮಾಡಿದ ಬಳಿಕ, ದುಃಖಿತಳಾಗಿದ್ದ ಲೋರಿ ಬೇಸ್-ಮೆಂಟಿನಿಂದ ಮೇಲ್ಭಾಗದ ತನ್ನ ಕೋಣೆಗೆ ತೆರಳುತ್ತಾಳೆ. ಸದ್ದಿಲ್ಲದೆ ಅವಳನ್ನು ಹಿಂಬಾಲಿಸುವ ಅಧಿಕಾರಿಯು, ಕೋಣೆಯ ಮೂಲೆಯಲ್ಲಿ ಕುಳಿತು ಆಕೆ ಗೋಳೋ ಎಂದು ಅಳುವುದನ್ನು ನೋಡುತ್ತಾನೆ. ಅಲ್ಲಿಂದ ಮರಳಿ ಬೇಸ್-ಮೆಂಟಿನ ಕೋಣೆಗೆ ಬಂದಾಗ ಕಾರ್ಲಾ ಹೊಮೋಲ್ಕಾಳ ಕೈಯಲ್ಲಿದ್ದ ಬಟ್ಟೆಯೊಂದನ್ನು ಆ ಪೋಲೀಸ್ ಅಧಿಕಾರಿ ಗಮನಿಸುತ್ತಾನೆ. ಮೈಮೇಲೆ ಹೊದ್ದುಕೊಳ್ಳುವ ಕಂಬಳಿಯಂತಿದ್ದ ಆ ಬಟ್ಟೆಯಲ್ಲಿ ವಾಂತಿಯ ಕೆಲವು ಒಣಗಿದ ಕಲೆಗಳಿದ್ದವು ಮತ್ತು ಕಾರ್ಲಾ ಆ ಬಟ್ಟೆಯನ್ನು ವಾಷಿಂಗ್ ಮಷೀನಿನಲ್ಲಿ ಒಗೆಯಲು ಹಾಕುವ ತಯಾರಿಯಲ್ಲಿದ್ದಳು. ಅಂಥಾ ಗೊಂದಲದ ಹೊತ್ತಿನ ಅಪರಾತ್ರಿಯಲ್ಲಿ ಬಟ್ಟೆ ಒಗೆಯಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಕಾರ್ಲಾಳನ್ನು ನೋಡುವ ಪೋಲೀಸ್ ಅಧಿಕಾರಿ ಸಾಕ್ಷ್ಯಾಧಾರಗಳ ನಾಶದ ಜಾಡು ಹಿಡಿದು ಆ ಬಟ್ಟೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾನೆ. ಈ ಅಸಹಜ ಸಾವಿನ ಹಿಂದೆ ಕೊಲೆಯ ಸಾಧ್ಯತೆಯನ್ನು ಯೋಚಿಸುತ್ತಿದ್ದ ಅಧಿಕಾರಿಗಳು ಪೋಸ್ಟ್-ಮಾರ್ಟಮ್ ವರದಿ ಬರುವವರೆಗೆ ಕಾಯಲು ನಿರ್ಧರಿಸುತ್ತಾರೆ. 

ಆದರೆ ಸಾಕ್ಷಿಗಳು ಪೋಲೀಸ್ ಮತ್ತು ಆಂಬ್ಯುಲೆನ್ಸ್ ಬರುವ ಮೊದಲೇ ನಾಶವಾಗಿರುತ್ತವೆ. ಉಳಿದಿದ್ದ ಹ್ಯಾಲೋಥೇನ್ ಅನ್ನು ಕಾರ್ಲಾ ಹೊಮೋಲ್ಕಾ ಶೌಚಾಲಯದ ಗುಂಡಿಯಲ್ಲಿ ಸುರಿದು ಫ್ಲಷ್ ಮಾಡಿರುತ್ತಾಳೆ. ಹ್ಯಾಲೋಥೇನಿನ ಖಾಲಿ ಬಾಟಲ್ ಮತ್ತು ಹ್ಯಾಲ್ಸಿಯನ್ ಮಾತ್ರೆಗಳ ಪೊಟ್ಟಣಗಳನ್ನು ಅಡಗಿಸಿಡಲಾಗುತ್ತದೆ. ಟ್ಯಾಮಿಯ ಮೇಲೆ ಇಬ್ಬರೂ ಸೇರಿ ಸರದಿಯಂತೆ ನಡೆಸಿದ ಅತ್ಯಾಚಾರದ ವೀಡಿಯೋ ಟೇಪ್ ಗಳನ್ನು ಪೌಲ್ ಬರ್ನಾರ್ಡೊ ಸುರಕ್ಷಿತವಾಗಿ ಬಚ್ಚಿಟ್ಟಿರುತ್ತಾನೆ. ಸೈಂಟ್ ಕ್ಯಾಥರೀನ್ ಜನರಲ್ ಆಸ್ಪತ್ರೆಯಿಂದ ಟ್ಯಾಮಿಯ ಸಾವಿನ ಬಗ್ಗೆ ತಿಳಿಸುವ ದೂರವಾಣಿ ಕರೆಬಂದಾಗ ಪೋಲೀಸ್ ಅಧಿಕಾರಿಗಳೂ ಮನೆಯಲ್ಲಿದ್ದರು. ಪೌಲ್ ಬರ್ನಾರ್ಡೊ ನೆಲದಲ್ಲಿ ಹೊರಳಾಡುತ್ತಾ ಗೋಳೋ ಎಂದು ಅತ್ತಿದ್ದ. ಸಂಶಯಾಸ್ಪದ ವಸ್ತುಗಳೇನೂ ಸೈಂಟ್ ಕ್ಯಾಥರೀನ್ ಪ್ರದೇಶದ ಆ ಮನೆಯಿಂದ ಬರಾಮತ್ತಾಗಲಿಲ್ಲ. ವಿಧಿಯಿಲ್ಲದೆ ಪೋಲೀಸರು ಸುಮ್ಮನೆ ವಾಪಾಸಾಗಿದ್ದರು. 

ದುರದೃಷ್ಟವೆಂದರೆ ಟ್ಯಾಮಿಯ ಮುಖದ ಮೇಲೆ ಮೂಡಿದ ಈ ದಟ್ಟಕೆಂಪುಕಲೆಗಳ ರಹಸ್ಯಗಳು ಪಂಚನಾಮೆ ಮಾಡಿದ ತಜ್ಞರಿಗೂ ತಿಳಿಯಲಿಲ್ಲ. ನೋಡಲು ಸುಟ್ಟಕಲೆಗಳಂತಿದ್ದರೂ ಈ ಭಾಗಗಳು ಸುಟ್ಟಿರಲಿಲ್ಲ. ಆಸಿಡ್ ನಂಥಾ ದ್ರವಪದಾರ್ಥವನ್ನು ಸುರಿದ ಲಕ್ಷಣಗಳೂ ಆ ಕಲೆಗಳಲ್ಲಿರಲಿಲ್ಲ. ಮಾದಕದ್ರವ್ಯವಾಗಿದ್ದ ಕೊಕೇನ್ ಬಳಕೆಯ ಬಗ್ಗೆ ಎದ್ದ ವಾದಗಳೂ ಬಿದ್ದುಹೋದವು. ಟ್ಯಾಮಿ ಹೊಮೋಲ್ಕಾ ಅತ್ಯಾಚಾರಕ್ಕೊಳಗಾಗಿದ್ದಳೇ, ಅಥವಾ ಸಾಯುವ ಮುನ್ನ ಯಾವುದೇ ರೀತಿಯ ಲೈಂಗಿಕ ಕ್ರಿಯೆ ನಡೆದಿತ್ತೇ ಎಂದು ಪರೀಕ್ಷಿಸುವ ಗೋಜಿಗೆ ತಜ್ಞರು ಹೋಗಿರಲಿಲ್ಲ. ಈ ದಟ್ಟಕಲೆಗಳು ಯಾವುದೋ ರಾಸಾಯನಿಕ ಕ್ರಿಯೆಯಿಂದ ಮೂಡಿಬಂದದ್ದಾಗಿದ್ದವು. ಟ್ಯಾಮಿಯ ದೇಹದಲ್ಲಿ ಆಲ್ಕೋಹಾಲ್ ನ ಅಂಶ ಕಂಡುಬಂದಿತ್ತು. ಬಾಲಕಿಯ ವಯಸ್ಸು ಹದಿನೈದೇ ಆದರೂ, ಹಬ್ಬದ ಸಮಯದಲ್ಲಿ ಮದ್ಯವನ್ನು ಮಕ್ಕಳೂ ಕುಡಿಯುವುದು ಸಾಮಾನ್ಯವಾಗಿತ್ತು. ಅಪರೂಪಕ್ಕೊಮ್ಮೆ, ಹಬ್ಬದ ದಿನಗಳಲ್ಲಿ ಮತ್ತು ಹುಟ್ಟುಹಬ್ಬದ ಆಚರಣೆಯಂಥಾ ವಿಶೇಷ ದಿನಗಳಲ್ಲಿ ಟ್ಯಾಮಿ ವೈನ್ ಕುಡಿಯುತ್ತಿದ್ದಳು ಎಂಬುದನ್ನು ಬಾಲಕಿಯ ಮನೆಯವರೇ ಒಪ್ಪಿದ್ದರು. ಅಲ್ಲದೆ ಇನ್ನೂ ತಿಳಿದಿರದ ಹ್ಯಾಲೋಥೇನ್ ಅನ್ನು ಪತ್ತೆಹಚ್ಚುವುದು ಸುಲಭದ ಮಾತಾಗಿರಲಿಲ್ಲ. ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವ ಮುನ್ನ ಹ್ಯಾಲೇಥೇನ್ ಅನ್ನು ಉಸಿರಾಡುವಂತೆ ಮಾಡಿ ಅವುಗಳ ಪ್ರಜ್ಞೆ ತಪ್ಪಿಸುತ್ತಾರೆ. ಹವೆಯೊಂದಿಗೆ ಸೇರಿ ಬೇಗನೇ ಆವಿಯಾಗುವುದರಿಂದ ಅದನ್ನು ಪತ್ತೆಹಚ್ಚುವುದು ಕಷ್ಟ. 

“ಉಳಿದೆರಡು ಸಹೋದರಿಯರಂತೆಯೇ ಟ್ಯಾಮಿ ಹೊಮೋಲ್ಕಾಗೆ ತಕ್ಕಮಟ್ಟಿನ ಅಸ್ತಮಾ ಇತ್ತು'', ಎಂದು ಆಕೆಯ ಸಹೋದರಿಯರಾದ ಲೋರಿ ಮತ್ತು ಕಾರ್ಲಾ ಹೊಮೋಲ್ಕಾ ಹೇಳಿಕೆಯನ್ನು ನೀಡಿರುತ್ತಾರೆ. ಆದರೆ ಅಸ್ತಮಾಗೂ, ಈ ಕಲೆಗಳಿಗೂ ಯಾವ ಸಂಬಂಧಗಳೂ ಕಂಡುಬರುವುದಿಲ್ಲ. ಉಸಿರಾಟದ ವಿಭಾಗದ ತಜ್ಞರು ಇದನ್ನು ಸಮರ್ಥಿಸಿಕೊಳ್ಳಲು ವಿಫಲರಾಗುತ್ತಾರೆ ಮತ್ತು ಉಸಿರಾಟ ತಜ್ಞರನ್ನು ಹೊರತುಪಡಿಸಿ ಡರ್ಮಿಟಾಲಜಿಸ್ಟ್ (ಚರ್ಮರೋಗ ತಜ್ಞರು), ಪಾಥಾಲಜಿ (ರೋಗಪತ್ತೆ) ಮತ್ತು ಟಾಕ್ಸಿಕಾಲಜಿ (ರಾಸಾಯನಿಕ ವಿಜ್ಞಾನ) ವಿಭಾಗದಿಂದಲೂ ಪರೀಕ್ಷೆಯನ್ನು ಮಾಡಿಸಿ ವರದಿಗಳನ್ನು ಪಡೆಯಬೇಕಾಗಿದ್ದವು. ಆದರೆ ಸಮಯವು ಯಾರಿಗೂ ಕಾಯದೆ ತನ್ನಷ್ಟಕ್ಕೇ ಉರುಳುತ್ತಲೇ ಹೋಗುತ್ತಿತ್ತು. ಅಲ್ಲದೆ ವರದಿಗಾಗಿ ಈ ಪ್ರಕರಣದ ಮುಖ್ಯ ಅಧಿಕಾರಿಗೆ ಒತ್ತಡಗಳು ಹೆಚ್ಚುತ್ತಾ ಹೋದವು. 

“ಟ್ಯಾಮಿ ಅಚಾನಕ್ಕಾಗಿ ಕೆಮ್ಮುತ್ತಾ, ಸ್ವಲ್ಪ ವಾಂತಿಯನ್ನೂ ಮಾಡಿ ಮತ್ತೆ ನಿದ್ರಾವಸ್ಥೆಗೆ ಮರಳಿದಳು'' ಎಂಬ ಕಾರ್ಲಾ-ಪೌಲ್ ದಂಪತಿಗಳ ಹೇಳಿಕೆಯನ್ನಾಧರಿಸಿದ ತಜ್ಞರು ಬಟ್ಟೆಯೊಂದನ್ನು ಬಳಸಿ ವಾಂತಿಯನ್ನು ಮುಖದಿಂದ ಒರೆಸಿದ ಪರಿಣಾಮದಿಂದಾದ ಕಲೆಗಳೇ ಇವು, ಎಂದು ಅಂದಾಜಿಸಿದರು. ಆದರೆ ಈ ವಾದವೂ ಸರಿಕಾಣಲಿಲ್ಲ. ದೇಹದೊಳಗೆ ನಡೆದ ಯಾವುದೋ ರಾಸಾಯನಿಕ ಕ್ರಿಯೆಯೊಂದು ಈ ಕಲೆಗಳನ್ನು ಮೂಡಿಸಿದ್ದು ನಿಜವಾದರೂ, ನಿಖರವಾದ ಕಾರಣಗಳೇನು ಎಂಬುದೇ ತಿಳಿಯದಂತಾಯಿತು. ಕೊನೆಗೂ ಇದೊಂದು ಸ್ವಾಭಾವಿಕ, ಆಕಸ್ಮಿಕ ಸಾವು ಎಂದು ಟಾಕ್ಸಿಕಾಲಜಿ ವಿಭಾಗದ ವರದಿಯಿಲ್ಲದೆಯೇ ಅಂತಿಮವರದಿಯನ್ನು ಪೋಸ್ಟ್-ಮಾರ್ಟಮ್ ತಂಡವು ತಯಾರುಗೊಳಿಸಿತು. ಉಮ್ಮಳಿಸಿ ಬಂದ ವಾಂತಿಯು ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ, ಉಸಿರುಗಟ್ಟುವಿಕೆಯಿಂದಾದ ಸಾವು ಎಂದು ವರದಿಯ `ಸಾವಿನ ಕಾರಣ' ಎಂದು ನಮೂದಿಸಲಾಗುವ ಭಾಗದಲ್ಲಿ ದಾಖಲಿಸಲಾಯಿತು. ಮೊದಲೇ ಹೆಚ್ಚಿದ ಒತ್ತಡದಿಂದ, ಗಡಿಬಿಡಿಯಲ್ಲಿದ್ದ ಇಲಾಖೆಯ ಮುಖ್ಯಾಧಿಕಾರಿಗೆ ಈ ಸಾವಿನ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸಂಶಯವಿದ್ದರೂ, ಮುಂದೆ ಕೆದಕುವ ಗೋಜಿಗೆ ಅವರು ಹೋಗಲಿಲ್ಲ. ಪೋಸ್ಟ್-ಮಾರ್ಟಮ್ ವರದಿಯು ಇದನ್ನೊಂದು “ಸ್ವಾಭಾವಿಕ ಮತ್ತು ಆಕಸ್ಮಿಕ'' ಸಾವೆಂದು ಅಧಿಕೃತವಾಗಿ ವರದಿ ಕೊಟ್ಟಾದ ಮೇಲೆ ಅದರ ಹಿಂದೆಯೇ ಸುತ್ತುವುದು ತನಿಖಾ ಮುಖ್ಯಾಧಿಕಾರಿಗೆ ಸರಿಕಾಣಲಿಲ್ಲ.

ಟ್ಯಾಮಿ ಹೊಮೋಲ್ಕಾಳ ಸಾವನ್ನು “ಸ್ವಾಭಾವಿಕ ಮತ್ತು ಆಕಸ್ಮಿಕ'' ಸಾವೆಂದು ಅಂತಿಮ ವರದಿಯಲ್ಲಿ ಷರಾ ಬರೆಯುವ ಹೊರತಾಗಿ, “ಸಂಶಯಾಸ್ಪದ ಸಾವು'' ಎಂದಾದರೂ ಬರೆದಿದ್ದರೆ ಮುಂದೆ ಪೌಲ್ ಬರ್ನಾರ್ಡೊನನ್ನು ಶಂಕಿತ ಆರೋಪಿಯಾಗಿ ವಿಚಾರಣೆ ನಡೆಸಲಾಗುತ್ತಿದ್ದ ಸಮಯದಲ್ಲಿ, ಹಿಂದೆ ನಡೆದಿದ್ದ ಈ ಅಸಹಜ ಸಾವಿನ ದಾಖಲೆಯ ನೆರವಿನಿಂದ ತನಿಖೆಯು ಇನ್ನಷ್ಟು ಚುರುಕುಗೊಳ್ಳುವ ಸಂಭವವಿತ್ತು. ಆದರೆ ಹಾಗೇನೂ ಆಗಲಿಲ್ಲ. ಪೋಸ್ಟ್ ಮಾರ್ಟಮ್ ವರದಿಯ ಈ ಅವಸರದ ಅಚಾತುರ್ಯದಿಂದಾಗಿ, ಪೌಲ್ ಬರ್ನಾರ್ಡೊನ ಅಪರಾಧಿ ಜೀವನದ ಹಿನ್ನೆಲೆಯನ್ನು ಬೊಟ್ಟುಮಾಡಿ ಹೇಳಬಹುದಾಗಿದ್ದ ಒಂದೇ ಒಂದು ಎಳೆಯೂ ಕೈಬಿಟ್ಟುಹೋಗಿತ್ತು.

ಆಹಾರ, ಹ್ಯಾಲ್ಸಿಯನ್ ಮಾತ್ರೆಗಳು, ಮದ್ಯ ಇವೆಲ್ಲವೂ ಸೇರಿ, ಕಲಸುಮೇಲೋಗರವಾಗಿ ಟ್ಯಾಮಿಯ ದೇಹದಲ್ಲಿ ತನ್ನದೇ ಆಟವನ್ನು ಮುಂದುವರೆಸಿದ್ದಾಗ, ಕಾರ್ಲಾ ಹೊಮೋಲ್ಕಾ ಹ್ಯಾಲೋಥೇನಿನಲ್ಲಿ ಅದ್ದಿದ ಬಟ್ಟೆಯನ್ನು ಟ್ಯಾಮಿಯ ಮುಖದ ಎಡ ಭಾಗದಲ್ಲಿ, ಆಕೆಯ ಮೂಗು ಮತ್ತು ತುಟಿಗೆ ಒತ್ತಿಹಿಡಿದಿದ್ದ ಪರಿಣಾಮವಾಗಿ ಈ ಕಲೆಗಳು ಮೂಡಿಬಂದಿದ್ದವು. ಉಮ್ಮಳಿಸಿ ಬಂದ ವಾಂತಿಯು ತನ್ನಲ್ಲಿ ಅಸಿಡಿಕ್ ಅಂಶಗಳನ್ನು ಹೊಂದಿದ್ದು, ಹ್ಯಾಲೋಥೇನ್ ಅನ್ನು ಸೋಕುತ್ತಿದ್ದ ಮುಖದ ಚರ್ಮದ ಮೇಲೆ ತನ್ನ ಬಣ್ಣವನ್ನು ಬಿಡಲಾರಂಭಿಸಿತ್ತು. ಟ್ಯಾಮಿ ಆಗಲೇ ಆಹಾರವನ್ನು ಸೇವಿಸಿದ್ದರಿಂದ ಹ್ಯಾಲೋಥೇನ್ ಅಪಾಯಕಾರಿಯಾಗುವ ಸಾಧ್ಯತೆಗಳ ಬಗ್ಗೆ ಗೊತ್ತಿದ್ದೂ ಕಾರ್ಲಾ ಹೊಮೋಲ್ಕಾ ತನ್ನ ಮುದ್ದುತಂಗಿಯನ್ನು ಮೃತ್ಯುಕೂಪಕ್ಕೆ ತಳ್ಳಿದ್ದಳು. 

ಮುಂದೆ 1993 ರ ಜುಲೈ ತಿಂಗಳಲ್ಲಿ ಎರಡನೇ ಬಾರಿಗೆ ಟ್ಯಾಮಿ ಹೊಮೋಲ್ಕಾಳ ಪೋಸ್ಟ್-ಮಾರ್ಟಮ್ ನಡೆದಾಗ ಕಾರ್ಲಾ ಹೊಮೋಲ್ಕಾಳ ಹೊಸ ಹೇಳಿಕೆಗಳ ಆಧಾರದಲ್ಲೇ ತಜ್ಞರು ಹ್ಯಾಲ್ಸಿಯನ್ ಮತ್ತು ಹ್ಯಾಲೋಥೇನ್ ಅಂಶಗಳನ್ನು ನಿಖರವಾಗಿ ಅವಲೋಕಿಸಿದರು. ಮೊದಲೇ ಹೇಳಿದಂತೆ ಹ್ಯಾಲೋಥೇನ್ ಅಂಶಗಳು ಪತ್ತೆಯಾಗುವ ಸಾಧ್ಯತೆಗಳು ಬಹುತೇಕ ಕಮ್ಮಿಯಿದ್ದರೂ, ಹ್ಯಾಲ್ಸಿಯನ್ ಅಂಶಗಳು ಮೃತದೇಹದಲ್ಲಿ ಪತ್ತೆಯಾಗಿದ್ದವು. ಸಂಶಯಾಸ್ಪದ ಸಾವುಗಳನ್ನು ತೀವ್ರವಾದ ತನಿಖೆಗೊಳಪಡಿಸದೆ, ಅಂತಿಮ ವರದಿಯನ್ನು ಬಿಡುಗಡೆಗೊಳಿಸುವ ಕ್ರಮಗಳನ್ನು ಮುಂದೆ ನ್ಯಾಯಮೂರ್ತಿ ಕ್ಯಾಂಪ್ಬೆಲ್ ರ ವರದಿಯ ಶಿಫಾರಸಿನ ಆಧಾರದಿಂದ ಭವಿಷ್ಯದಲ್ಲಿ ಕಡಿವಾಣ ಹಾಕಲಾಯಿತು.     

ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಸಾವಿನ ಸಂಬಂಧದ ತನಿಖೆಯ ಮೊದಲ ಹಂತಗಳಲ್ಲಿ ಎನ್.ಆರ್.ಪಿ ಮತ್ತು ಗ್ರೀನ್ ರಿಬ್ಬನ್ ಟಾಸ್ಕ್ ಫೋರ್ಸ್ ಗಳ ಜಂಟಿಕಾರ್ಯಾಚರಣೆಯನ್ನು ಶ್ಲಾಘಿಸುವುದರ ಜೊತೆಗೇ, ಪೌಲ್ ಬರ್ನಾರ್ಡೊನ ಹಿಂಬಾಲಿಕೆಯ ಪ್ರಕರಣಗಳನ್ನು ಕಡೆಗಣಿಸಿದುದನ್ನು ನ್ಯಾಯಮೂರ್ತಿ ಕ್ಯಾಂಪ್ಬೆಲ್ ತನ್ನ ವರದಿಯಲ್ಲಿ ಟೀಕಿಸುತ್ತಾರೆ. ಪೌಲ್ ಬರ್ನಾರ್ಡೊನಿಂದ ಸತತವಾಗಿ ಹಿಂಬಾಲಿಕೆಗೊಳಗಾದ ಮಹಿಳೆಯೊಬ್ಬರು ನಂತರ ಸ್ವತಃ ಈತನ ಜಾಡು ಹಿಡಿದುಕೊಂಡು ಹೋಗಿ, ಪೌಲ್ ನ ಕಾರಿನ ಲೈಸೆನ್ಸ್ ಪ್ಲೇಟ್ ನಂಬರನ್ನೂ ನೋಟ್ ಮಾಡಿಕೊಂಡು ಪೋಲೀಸರಿಗೆ ನೀಡಿದ್ದಳು. ಆದರೆ ಈ ದೂರಿನಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕ್ರಿಸ್ಟನ್ ಫ್ರೆಂಚ್ ಕೊಲೆಯಾದ ದಿನದಂದೇ ಪೌಲ್ ಬರ್ನಾರ್ಡೊನನ್ನು ಪಿಜ್ಜಾ ಸ್ಟೋರ್ ಒಂದರ ಬಳಿ ಕಂಡು ಗುರುತಿಸಿದ್ದ ಕೆರ್ರಿ ಪ್ಯಾಟ್ರಿಚ್ ಎಂಬ ಯುವತಿ ಪೋಲೀಸರಿಗೆ ಈ ಬಗ್ಗೆ ಮಾಹಿತಿಯನ್ನೂ ಕೊಟ್ಟಿದ್ದಳು. `ಈ ವ್ಯಕ್ತಿ ತನ್ನನ್ನು ಕೆಲದಿನಗಳ ಹಿಂದೆ ಸತತವಾಗಿ ಹಿಂಬಾಲಿಸುತ್ತಿದ್ದ' ಎಂದು ಆಕೆ ದಾಖಲಿಸಿದ್ದ ದೂರು ಬಹುಷಃ ಎಗ್ಗಿಲ್ಲದೆ ಜಮೆಯಾಗುತ್ತಿದ್ದ ಕಾಗದಗಳ ರಾಶಿಯಲ್ಲಿ ಎಲ್ಲೋ ಕಳೆದುಹೋಗಿತ್ತು. 

ಅಸಲಿಗೆ ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಕೊಲೆಪ್ರಕರಣಗಳಲ್ಲಿ ಸಾಕಷ್ಟು ಸಾಮ್ಯತೆಗಳನ್ನು ಕಂಡುಕೊಂಡಿದ್ದ ಹಾಲ್ಟನ್ ರೀಜನ್ ಮತ್ತು ನಯಾಗರಾ ರೀಜನ್ ನ ಪೋಲೀಸರು ಬಹುತೇಕ ಒಂದೇ ಶೈಲಿಯಲ್ಲಿ ತಮ್ಮ ತನಿಖಾಪ್ರಕ್ರಿಯೆಯನ್ನು ಆರಂಭಗೊಳಿಸಿದ್ದರು. ಎರಡೂ ಇಲಾಖೆಗಳು ತಮ್ಮತಮ್ಮಲ್ಲೇ ಕಚ್ಚಾಡದೆ, ಹಂತಕನನ್ನು ಹಿಡಿಯಲೇಬೇಕೆಂಬ ಏಕಮಾತ್ರಗುರಿಯ ಬೆನ್ನುಹತ್ತಿ ರಾತ್ರಿಹಗಲುಗಳನ್ನು ಒಂದಾಗಿಸಿದ್ದವು. ಒಂದು ಅಂದಾಜಿನ ಪ್ರಕಾರ ಈ ಪ್ರಕರಣಗಳ ಮಾಹಿತಿಯನ್ನು ಕಲೆಹಾಕಲೆಂದೇ ಅಳವಡಿಸಲಾಗಿದ್ದ ಹಾಟ್-ಲೈನ್ ಒಂದರಲ್ಲಿ ಘಂಟೆಗೆ ಅರವತ್ತು ಕರೆಗಳು ಬಂದು ಅಪ್ಪಳಿಸುತ್ತಿದ್ದವು. ಬಹುಬೇಗನೇ ಬರೋಬ್ಬರಿ ನಲವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ತಕ್ಷಣದ ಮಾಹಿತಿಗಳು ಜಮೆಯಾಗಿದ್ದವು. ಶಂಕಿತ ಆರೋಪಿಗಳ ಸಂಖ್ಯೆ ಮೂರು ಸಾವಿರಕ್ಕೂ ಮೀರಿತ್ತು.  

ಇನ್ನು ಕ್ರಿಸ್ಟನ್ ಫ್ರೆಂಚ್ ಳ ಅಪಹರಣ ಮತ್ತು ಕೊಲೆಯ ಪ್ರಕರಣಗಳ ತನಿಖೆಯಲ್ಲಿ ಪ್ರತ್ಯಕ್ಷದರ್ಶಿಗಳು ಗುರುತಿಸಿದ್ದ “ಕಮಾರೋ'' ಮಾಡೆಲ್ ನ ಕಾರಿನ ಸುಳಿವಿನ ಬೆನ್ನು ಹತ್ತಿದ್ದ ಸ್ಥಳೀಯ ಪೋಲೀಸ್ ಇಲಾಖೆಯು, ನೂರಾರು “ಕಮಾರೋ'' ಮಾಡೆಲ್ ನ ಕಾರುಗಳನ್ನು, ಅದರ ಮಾಲೀಕರನ್ನು ವಿಚಾರಣೆಗೊಳಪಡಿಸಿತ್ತು. ಇಲಾಖೆಯ ಈ ನಡೆಗೆ ವ್ಯಾಪಕವಾದ ವಿರೋಧವು ಆಂತರಿಕವಾಗೇ ಕೇಳಿಬಂದಿತ್ತು. ಆದರೆ ಆ ಸಮಯದಲ್ಲಿ ಪೋಲೀಸ್ ಇಲಾಖೆಯ ಬಳಿಯಿದ್ದ, ನಂಬಲರ್ಹವಾಗಿದ್ದ ಏಕೈಕ ಸುಳಿವೆಂದರೆ “ಕಮಾರೋ ಮಾಡೆಲ್ ನ ಕಾರು'' ಮಾತ್ರ ಎಂದು ಈ ವರದಿಯು ಸ್ಪಷ್ಟಪಡಿಸುತ್ತದೆ. ದುರಾದೃಷ್ಟವಶಾತ್ ಪೌಲ್ ಬರ್ನಾರ್ಡೊ “ನಿಸಾನ್'' ಮಾಡೆಲ್ ನ ಶೈಲಿಯ ಕಾರನ್ನು ಬಳಸುತ್ತಿದ್ದ. ಇಲಾಖೆಯ ತನಿಖೆಯು ಮತ್ತೊಮ್ಮೆ ದಾರಿ ತಪ್ಪಿತ್ತು. 

ಹಾಗಿದ್ದರೆ ಪ್ರತ್ಯಕ್ಷದರ್ಶಿಗಳು ಸುಳ್ಳುಹೇಳಿದ್ದರೇ? ಒಬ್ಬಿಬ್ಬರ ಹೇಳಿಕೆಗಳಲ್ಲಿ ತಪ್ಪಿದ್ದರೂ ಹಲವು ಜನರು ಹೇಗೆ ತಪ್ಪು ಹೇಳಿಕೆಗಳನ್ನು ಕೊಟ್ಟರು? ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ. ಶಂಕಿತ ಅಪಹರಣಕಾರರ ಕಾರಿನ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಪಡೆದುಕೊಂಡ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೊಸ ಸತ್ಯವೊಂದು ತೆರೆದುಕೊಳ್ಳುತ್ತದೆ. ಮೂವತ್ತೈದು ಪ್ರತ್ಯಕ್ಷ್ಯದರ್ಶಿಗಳಲ್ಲಿ ಹದಿನೇಳು ಜನರು ತಾವು ನೋಡಿದ್ದ ಕಾರು “ಕಮಾರೋ'' ಮಾಡೆಲ್ ನದ್ದು ಎಂದಿದ್ದರು. ಉಳಿದ ಪ್ರತ್ಯಕ್ಷದರ್ಶಿಗಳು ಆ ಕಾರು “ಕಮಾರೋ ಶೈಲಿ''ಯದ್ದಾಗಿತ್ತು ಅಂದಿದ್ದರು. ಅಂದರೆ ಆ ಕಾರು ಒಂದೋ “ಕಮಾರೋ'' ಮಾಡೆಲ್ ನದ್ದಾಗಿತ್ತು, ಅಥವಾ “ಕಮಾರೋ'' ಮಾಡೆಲ್ ನಂತೆ ಕಾಣುವ ಇನ್ಯಾವುದೋ ಬೇರೆ ಮಾಡೆಲ್ ನದ್ದಾಗಿತ್ತು. ಹಾಗಿದ್ದರೆ ಆಗಿದ್ದಾದರೂ ಏನು?

ಕ್ರಿಸ್ಟನ್ ಫ್ರೆಂಚ್ ಳ ಅಪಹರಣ ಮತ್ತು ಕೊಲೆಯ ಅವಧಿಯಲ್ಲೇ ಮತ್ತೊಂದು ಪ್ರಕರಣವು ನಗರದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಈ ಪ್ರಕರಣದಲ್ಲಿ ಆರೋಪಿ ಪುರುಷನೊಬ್ಬ ತನ್ನ ಗರ್ಲ್ ಫ್ರೆಂಡ್ ಅನ್ನು ಸತತವಾಗಿ ಹಿಂಬಾಲಿಸುತ್ತಿದ್ದ ಎಂಬ ಮಾತುಗಳಿದ್ದವು. ಮತ್ತು ಈತ ತನ್ನ ಈ ಹಿಂಬಾಲಿಕೆಯ ಅಪರಾಧಗಳಿಗೆ “ಕಮಾರೋ'' ಮಾಡೆಲ್ ನ ಕಾರನ್ನು ಬಳಸುತ್ತಿದ್ದ. ಎರಡೂ ಪ್ರಕರಣಗಳು ಹಿಂಬಾಲಿಕೆ ಮತ್ತು ಅಪಹರಣಗಳಿಗೆ ಪುಷ್ಟಿಯನ್ನು ಕೊಡುತ್ತಿದ್ದುದರಿಂದ ಪ್ರತ್ಯಕ್ಷದರ್ಶಿಗಳು ಗೊಂದಲಕ್ಕೊಳಗಾಗಿದ್ದರು. ಇನ್ನೊಂದು ಮುಖ್ಯ ಕಾರಣವೆಂದರೆ ಪೌಲ್ ಬರ್ನಾರ್ಡೊ, ಕ್ರಿಸ್ಟನ್ ಫ್ರೆಂಚ್ ಳ ಅಪಹರಣ ಸೇರಿದಂತೆ ತನ್ನ ಇತರ ಪ್ರಕರಣಗಳಿಗೆ ಬಳಸುತ್ತಿದ್ದ “ನಿಸಾನ್'' ಮಾಡೆಲ್ ನ ಕಾರು “ಕಮಾರೋ'' ಮಾಡೆಲ್ ಅನ್ನು ಬಹುತೇಕ ಹೋಲುತ್ತಿತ್ತು. ಒಟ್ಟಿನಲ್ಲಿ ಪೌಲ್ ಬರ್ನಾರ್ಡೊನ ಅದೃಷ್ಟ ಚೆನ್ನಾಗಿತ್ತು.       

ಪೌಲ್ ಬರ್ನಾರ್ಡೊನ ಮನೆಯನ್ನು ಹಲವು ಅಡೆತಡೆಗಳ ಮಧ್ಯೆಯೂ, ಎಪ್ಪತ್ತೊಂದು ದಿನಗಳ ಕಾಲ ಶೋಧಕಾರ್ಯವನ್ನು ಮಾಡಿ, ಹಲವು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೋಲೀಸ್ ಇಲಾಖೆಯನ್ನು ನ್ಯಾಯಮೂರ್ತಿ ಕ್ಯಾಂಪ್ಬೆಲ್ ತನ್ನ ವರದಿಯಲ್ಲಿ ಶ್ಲಾಘಿಸುತ್ತಾರೆ. ಪ್ರಕರಣದ ಪ್ರಮುಖ ಸಾಕ್ಷಿಯಾದ ವೀಡಿಯೋ ಟೇಪ್ ಗಳು ಈ ಶೋಧಕಾರ್ಯದಲ್ಲಿ ಪೋಲೀಸರ ಕೈತಗುಲದಿದ್ದರೂ, ಇತರೆ ಹಲವು ಸಾಕ್ಷಿಗಳನ್ನು ಕಲೆಹಾಕುವುದರಲ್ಲಿ ಇಲಾಖೆಯು ಸಫಲವಾಗಿತ್ತು. ಶೋಧಕಾರ್ಯ ನಡೆಸುತ್ತಿದ್ದ ತಂಡವನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ಒಂದು ತಂಡವು ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳ ವಿರುದ್ಧ ಸಾಕ್ಷಿಗಳನ್ನು ಕಲೆಹಾಕಿದರೆ, ಇನ್ನೊಂದು ತಂಡ ಟ್ಯಾಮಿ ಹೊಮೋಲ್ಕಾ-ಲೆಸ್ಲಿ ಮಹಾಫಿ-ಕ್ರಿಸ್ಟನ್ ಫ್ರೆಂಚ್ ರ ಕೊಲೆಗಳ ಸಂಬಂಧದ ಸಾಕ್ಷಿಗಳನ್ನು ಸಂಗ್ರಹಿಸತೊಡಗಿದವು. ಮಂಜೂರಾದ ಸರ್ಚ್ ವಾರಂಟ್ ಸೀಮಿತವಾದ ಅಧಿಕಾರವನ್ನಷ್ಟೇ ಹೊಂದಿದ್ದು, ಹಲವು ಷರತ್ತುಗಳನ್ನು ಹೊಂದಿತ್ತು. ಶೋಧಕಾರ್ಯದ ನೆಪದಲ್ಲಿ ಮನೆಯನ್ನು ಹಾನಿಗೊಳಪಡಿಸುವುದಾಗಲೀ, ವಸ್ತುಗಳನ್ನು ಅಸ್ತವ್ಯಸ್ತಗೊಳಿಸುವುದಾಗಲೀ ನಿಷೇಧಿಸಲಾಗಿತ್ತು. ಈ ವಿಶೇಷವಾದ ಶೋಧಕಾರ್ಯಕ್ಕೆಂದೇ ಹಲವು ಹೊಸ ಜೊತೆ ಶೂಗಳನ್ನು ತರಿಸಿಕೊಂಡು, ಶೋಧದ ಸಮಯವಷ್ಟೇ ಮನೆಯೊಳಗೆ ಧರಿಸಿಕೊಂಡು ಓಡಾಡಲು ಅನುಮತಿಯನ್ನು ಕೊಡಲಾಯಿತು. ಒಟ್ಟಾರೆಯಾಗಿ ನಾಲ್ಕು ಬಾರಿ ಸರ್ಚ್ ವಾರಂಟ್ ಅನ್ನು ಬಿಡುಗಡೆಗೊಳಿಸಬೇಕಾಗಿ ಬಂದ ಈ ಮಹಾಗೊಂದಲದ ಪರಿಸ್ಥಿತಿಯಲ್ಲೂ, ಶೋಧಕಾರ್ಯ ನಡೆಯದ ಅವಧಿಗಳಲ್ಲಿ ಇಲಾಖೆಯಿಂದ ಬಿಗಿಪಹರೆಯನ್ನು ಈ ಮನೆಗೆ ಒದಗಿಸಲಾಯಿತು. ಯಾರು ಬೇಕಾದರೂ, ವಿನಾಕಾರಣ ಈ ಮನೆಗೆ ಭೇಟಿ ಕೊಡುವಂತಿರಲಿಲ್ಲ. ಮನೆಯ ಆವರಣದ ಒಳಗೆ-ಹೊರಗೆ ಹೋಗಿಬರುತ್ತಿರುವ ಪ್ರತಿಯೊಬ್ಬರ ದಾಖಲೆಯನ್ನು ಇರಿಸಿಕೊಳ್ಳಲು ಹೊಸ ಲಾಗ್ ಬುಕ್ ಒಂದನ್ನೂ ಇದಕ್ಕೆಂದೇ ಮೀಸಲಿಡಲಾಗಿತ್ತು.  

ಪೌಲ್ ತನ್ನ ದಾಳಿಗಳಲ್ಲಿ ಬಳಸುತ್ತಿದ್ದ ಚಾಕು ಮತ್ತು ಬಾಲಕಿಯರ ಕತ್ತು ಹಿಸುಕಿದ್ದ ಎಲೆಕ್ಟ್ರಿಕ್ ತಂತಿ ಈ ಪೋರ್ಟ್ ಡಾಲ್-ಹೌಸಿ ಪ್ರದೇಶದ ಮನೆಯಿಂದ ಬರಾಮತ್ತಾಯಿತು. ಮಾಸ್ಟರ್ ಬೆಡ್ ರೂಮಿನ ಒಂದು ಕ್ಲೋಸೆಟ್ ನ ಮೂಲೆಯಲ್ಲಿ ಕಂಡುಬಂದ, ಒಣಗಿಹೋಗಿದ್ದ ವಾಂತಿಯ ಒಂದು ಚಿಕ್ಕ ಗುರುತಿನಿಂದ, ಮತ್ತು ಕತ್ತರಿಸಲಾಗಿದ್ದ ಕೂದಲಿನ ಒಂದು ಚಿಕ್ಕ ಎಳೆಯನ್ನು ಇದೇ ಕೋಣೆಯ ಕಾರ್ಪೆಟ್ ನಿಂದ ಸಂಗ್ರಹಿಸಿದ್ದರಿಂದ ಕ್ರಿಸ್ಟನ್ ಫ್ರೆಂಚ್ ಳ ಡಿ.ಎನ್.ಎ ಮಾದರಿಗಳು ಇವೆರಡಕ್ಕೂ ತಾಳೆಯಾದವು. ಬಟ್ಟೆಯೊಂದರಲ್ಲಿ ಪತ್ತೆಯಾದ ಒಣಗಿದ ರಕ್ತದ ಒಂದು ಚಿಕ್ಕ ಕಲೆಯ ಮಾದರಿಯ ಜೊತೆ ಲೆಸ್ಲಿ ಮಹಾಫಿಯ ಡಿ.ಎನ್.ಎ ಮಾದರಿಯು ಹೋಲಿಕೆಯಾಯಿತು. ಮನೆಯ ಬೇಸ್-ಮೆಂಟ್ ನ ಒಂದು ಮೂಲೆಯಲ್ಲಿರಿಸಿದ್ದ ಹಾರೆಯೊಂದರಿಂದ ತೆಗೆದ ಸಿಮೆಂಟಿನ ತುಣುಕು, ಲೇಕ್ ಗಿಬ್ಸನ್ ಕೊಳದಲ್ಲಿ ಪತ್ತೆಯಾದ ಡಬ್ಬದೊಳಗಿದ್ದ ಸಿಮೆಂಟ್ ಮಾದರಿಗಳಿಗೆ ತಾಳೆಯಾದವು. ಅಲ್ಲದೆ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿಡಿಯೋ ಟೇಪ್ ಗಳೂ, ಸಿಗರೇಟಿನ ಸ್ಮಗ್ಲಿಂಗಿಗೆಂದು ಪೌಲ್ ಬರ್ನಾರ್ಡೊ ಬಳಸುತ್ತಿದ್ದ ಹಲವು ಕದ್ದ ಲೈಸೆನ್ಸ್ ಪ್ಲೇಟ್ ಗಳೂ ನಂತರ ಪತ್ತೆಯಾದವು. 

ಪ್ರಕರಣದ ಪ್ರಬಲ ಸಾಕ್ಷಿಗಳಾಗಿದ್ದ ವಿಡಿಯೋ ಟೇಪ್ ಗಳನ್ನು ಶೋಧಕಾರ್ಯದ ಸಮಯದಲ್ಲಿ ಪೋಲೀಸ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳು ಪತ್ತೆಹಚ್ಚಲು ವಿಫಲರಾದರು ಎಂದು ನೇರವಾಗಿ ತಪ್ಪನ್ನು ಹೊರಿಸುವುದು ಕಷ್ಟ. ಪೌಲ್ ಬರ್ನಾರ್ಡೊ ತನ್ನ ವಕೀಲನಾಗಿದ್ದ ಕೆನ್ ಮುರ್ರೇಗೆ ವೀಡಿಯೋಗಳನ್ನು ಬಚ್ಚಿಟ್ಟ ಜಾಗವನ್ನು ಹೇಳಿದ್ದರಿಂದಲೇ ಅವನು ಆ ಟೇಪ್ ಗಳನ್ನು ಗಿಟ್ಟಿಸಿಕೊಳ್ಳಲು ಸಫಲನಾದನೇ ಹೊರತು, ಪೋಲೀಸರ ವೈಫಲ್ಯದಿಂದಲ್ಲ. ಮನೆಯ ಬಚ್ಚಲುಮನೆಯ ಸೀಲಿಂಗ್ ಭಾಗವು ವಸ್ತುಗಳನ್ನಿಡಲು ತಕ್ಕಮಟ್ಟಿನ ಜಾಗವನ್ನು ಹೊಂದಿದ್ದರೂ ಬಹಳ ಇಕ್ಕಟ್ಟಾಗಿತ್ತು. ಸ್ವಾರಸ್ಯಕರ ವಿಷಯವೆಂದರೆ ತನಿಖಾ ದಳದ ಓರ್ವ ಅಧಿಕಾರಿ ಇಕ್ಕಟ್ಟಾದ ಈ ಜಾಗದಲ್ಲೂ ತನ್ನ ಕೈಯಾಡಿಸಿದ್ದ. ಆದರೆ ಕೆಲವೇ ಇಂಚುಗಳಿಂದ ದೂರವಿದ್ದ ಈ ಟೇಪ್ ಗಳು ದುರದೃಷ್ಟವಶಾತ್ ಇವನ ಕೈಸೇರಿರಲಿಲ್ಲ.

ಅದರಲ್ಲೂ ಮುಖ್ಯವಾಗಿ ಈ ಅಪಹರಣ, ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಚಿತ್ರೀಕರಿಸಲ್ಪಟ್ಟ ವೀಡಿಯೋಟೇಪ್ ಗಳ ಸಾಕ್ಷಿಗಳಿವೆ ಎಂಬ ವಿಷಯವೇ ಪೋಲೀಸರಿಗೆ ತಿಳಿದಿರಲಿಲ್ಲ. ಈ ಶೋಧಕಾರ್ಯದ ಅವಧಿಯಲ್ಲೇ ಕಾರ್ಲಾ ಹೊಮೋಲ್ಕಾ ತನ್ನ ಪ್ಲೀ ಬಾರ್ಗೈನ್ ಒಪ್ಪಂದವನ್ನು ಪಡೆದುಕೊಂಡಿದ್ದಳು. ಕೊಲೆ ಪ್ರಕರಣಗಳ ಸಂಬಂಧ ಕಾರ್ಲಾಳ ವಿಚಾರಣೆ ತನಿಖಾದಳದ ಅಧಿಕಾರಿಗಳಿಂದ ಇನ್ನೂ ಆಗಿರಲಿಲ್ಲ. ಮತ್ತು ನಡೆದ ಬೆರಳೆಣಿಕೆಯ ಅನೌಪಚಾರಿಕ ಮಾತುಕತೆಗಳಲ್ಲಿ ಯಾವುದೇ ವೀಡಿಯೋ ಟೇಪ್ ಗಳ ಬಗ್ಗೆ ಕಾರ್ಲಾ ಹೊಮೋಲ್ಕಾ ಬಾಯಿಬಿಟ್ಟಿರಲಿಲ್ಲ. ಈ ಕಾಲಾವಧಿಯನ್ನು ಇನ್ನಷ್ಟು ವಿವರವಾಗಿ ನೋಡುವುದಾದರೆ, 17/02/1993 ರಂದು ಪೌಲ್ ಬರ್ನಾರ್ಡೊನ ಬಂಧನವಾಗಿತ್ತು. ಇನ್ನು 19/02/1993 ರಂದು ಶುರುವಾದ ಶೋಧಕಾರ್ಯಗಳು ಮುಗಿದಿದ್ದು 30/04/1993 ರಂದು (ಎಪ್ಪತ್ತೊಂದು ದಿನಗಳು). ಕಾರ್ಲಾ ಹೊಮೋಲ್ಕಾಳ ಪ್ಲೀ ಬಾರ್ಗೈನ್ ಅಧಿಕೃತವಾಗಿ ಪರಿಪೂರ್ಣಗೊಂಡು ಜಾರಿಯಾಗಿದ್ದು 14/05/1993 ರಂದು. ಅಂದರೆ ಮೇ 14 ರ ನಂತರವೇ ಕಾರ್ಲಾಳ ವಿಚಾರಣೆ ಅಧಿಕೃತವಾಗಿ ಶುರುವಾಗಿದ್ದು. ಈ ಹೊತ್ತಿಗೆ ಪೋಲೀಸರ ಬಳಿ ಇದ್ದಿದ್ದು ಜೇನ್ ಡೋ ಎಂಬ ಬಾಲಕಿಯ ಅತ್ಯಾಚಾರವನ್ನು ಹೊಂದಿದ್ದ, ಒಂದೂವರೆ ನಿಮಿಷಗಳ ಒಂದೇ ಒಂದು ವೀಡಿಯೋ ಟೇಪ್ ಮಾತ್ರ. ಬಿಗಿಪಹರೆಯ ಹೊರತಾಗಿಯೂ ಪೌಲ್ ನ ಆಣತಿಯ ಪ್ರಕಾರ ಆತನ ಮನೆಗೆ 06/05/1993 ರಂದು ಭೇಟಿಕೊಟ್ಟಿದ್ದ ಡಿಫೆನ್ಸ್ ಪರ ವಕೀಲ ಕೆನ್ ಮುರ್ರೇ, 12/09/1994 ರ ವರೆಗೆ (ಅಂದರೆ ಹದಿನೇಳು ತಿಂಗಳುಗಳ ಕಾಲ) ಈ ವೀಡಿಯೋಟೇಪ್ ಗಳನ್ನು ಅಕ್ರಮವಾಗಿ ತನ್ನ ಸುಪರ್ದಿಯಲ್ಲಿರಿಸಿದ್ದ.             

ಇನ್ನು ತನ್ನ ಅಕ್ರಮ ವಶದಲ್ಲಿರಿಸಿದ್ದ ಈ ವೀಡಿಯೋ ಟೇಪ್ ಗಳನ್ನು ವಕೀಲ ಕೆನ್ ಮುರ್ರೇ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜಾನ್ ರೊಸೆನ್ ಹೊಸ ವಕೀಲರಾಗಿ ನಿಯುಕ್ತರಾಗಿ ಬಂದು, ವಿಚಾರಣೆ ಶುರುವಾಗುವಷ್ಟರ ಹೊತ್ತಿಗೆ ಕಾರ್ಲಾ ಹೊಮೋಲ್ಕಾ ತನ್ನ ಪ್ಲೀ ಬಾರ್ಗೈನ್ ನ ಭದ್ರಕೋಟೆಯಲ್ಲಿ ಸುರಕ್ಷಿತವಾಗಿದ್ದಳು. ಆದರೆ 1995 ರ ಸಪ್ಟೆಂಬರ್ ಒಂದರಂದು ನ್ಯಾಯಾಲಯವು ಪೌಲ್ ಬರ್ನಾರ್ಡೊನನ್ನು ದೋಷಿಯೆಂದು ತೀರ್ಪುಕೊಟ್ಟು ಪರೋಲ್ ಗೆ ಅವಕಾಶವಿಲ್ಲದ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. 
             

 (ಮುಂದುವರೆಯುವುದು)

*******************

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x