ಮ್ಯಾಗ್ನೋಲಿಯಾ: ವಾಸುಕಿ ರಾಘವನ್ ಅಂಕಣ

“ಮ್ಯಾಗ್ನೋಲಿಯಾ” ನನ್ನ ಅಚ್ಚುಮೆಚ್ಚಿನ ಚಿತ್ರ. ಇದು ಕೇವಲ ಒಂದು ಚಿತ್ರವಲ್ಲ, ಇದೊಂದು ವಿಶೇಷ ಕಲಾಕೃತಿ. ತುಂಬಾ ದಿನದಿಂದ ಇದರ ಬಗ್ಗೆ ಬರೆಯಬೇಕು ಅನ್ನೋ ಆಸೆಯೇನೋ ಇತ್ತು, ಆದರೆ ಈ ಅದ್ಭುತ ಚಿತ್ರದ ಅನುಭವವನ್ನು ಪದಗಳಲ್ಲಿ ಹಿಡಿದಿಡಲು ಧೈರ್ಯ ಬಂದಿರಲಿಲ್ಲ. ಆದರೆ ಯಾಕೋ ಕೆಲವು ದಿನಗಳಿಂದ ಈ ಚಿತ್ರ ಬಹಳ ಕೈ ಹಿಡಿದು ಜಗ್ಗುತ್ತಿದೆ, ಕಾಡುವಿಕೆಯ ಮುಂದೆ ಹಿಂಜರಿಕೆ ಸೋಲ್ತಾ ಇದೆ. ಹೀಗಾಗಿ ಅದರ ಬಗ್ಗೆ ಬರೆಯುವ ಹುಚ್ಚುಸಾಹಸಕ್ಕೆ ಕೈ ಹಾಕಿದೀನಿ. ಇದನ್ನು ಓದುವುದರಿಂದ ನೀವು ಆ ಚಿತ್ರವನ್ನು ನೋಡಲು ಆಸಕ್ತಿ ಉಂಟಾದರೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನೂ ಇಲ್ಲ. ಈ ಚಿತ್ರದ ಬಗ್ಗೆ ರೋಜರ್ ಎಬರ್ಟ್ ಅವರ ಅದ್ಭುತ ವಿಮರ್ಶೆ ಕೂಡ ಓದಿರುವುದರಿಂದ ಇಲ್ಲಿ ಬರೆದಿರುವುದರಲ್ಲಿ ಅವರ ಗ್ರಹಿಕೆಗಳೂ ಸೇರಿರಬಹುದು.

ಪ್ರಪಂಚದಲ್ಲಿ ನಾವು ನಂಬಲಾಗದ, ಊಹೆಗೂ ನಿಲುಕದ ಕಾಕತಾಳೀಯ ಸನ್ನಿವೇಶಗಳು ಬಹಳಷ್ಟು ನಡೆಯುತ್ತಿರುತ್ತವೆ. ಚಿತ್ರ ಆರಂಭವಾಗುವುದೇ ಈ ವಿಚಾರವನ್ನು ಮಂಡಿಸುವುದರಿಂದ. ಗ್ರೀನ್ ಬೆರಿ ಹಿಲ್, ಲಂಡನ್ನಿನ ನಿವಾಸಿ ಎಡ್ಮಂಡ್ ವಿಲಿಯಂ ಗಾಡ್ಫ್ರೀ ಅನ್ನು ಹಣದಾಸೆಗೆ ಮೂರು ಜನ ಕೊಲೆ ಮಾಡುತ್ತಾರೆ, ನಂತರ ಅವರು ಸೆರೆ ಸಿಕ್ಕಿ ಗಲ್ಲು ಶಿಕ್ಷೆ ಅನುಭವಿಸುತ್ತಾರೆ. ವಿಚಿತ್ರವೆಂದರೆ ಆ ಕೊಲೆಗಾರರ ಹೆಸರುಗಳು ಜೋಸೆಫ್ ಗ್ರೀನ್, ಸ್ಟಾನ್ಲಿ ಬೆರಿ ಮತ್ತು ಡೇನಿಯಲ್ ಹಿಲ್. ಗ್ರೀನ್-ಬೆರಿ-ಹಿಲ್!

ಇನ್ನೊಂದು ಘಟನೆ ಹೀಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಿಡ್ನಿ ಬ್ಯಾರಿನ್ಜರ್ ಬಿಲ್ಡಿಂಗಿನ ಒಂಬತ್ತನೇ ಮಹಡಿಯಿಂದ ಧುಮುಕುತ್ತಾನೆ. ಕೆಳಗಡೆ ಸೇಫ್ಟಿ ನೆಟ್ ಹಾಕಿರೋ ಕಾರಣ ಅವನು ನೆಲವನ್ನ ತಲುಪುವುದಿಲ್ಲ. ಆದರೆ ಅವನು ಕೆಳಕ್ಕೆ ಬೀಳುವಾಗ ಆರನೇ ಮಹಡಿಯ ಕಿಟಕಿಯಿಂದ ಹೊರಬಂದ ಗುಂಡು ಅವನ ದೇಹವನ್ನು ಹೊಕ್ಕು ಸಾಯುತ್ತಾನೆ. ಆಶ್ಚರ್ಯ ಅನ್ನುವಂತೆ, ಅವನು ಆರನೇ ಮಹಡಿಯ ನಿವಾಸಿ. ಅವನು ಧುಮುಕಿದ ಸಮಯದಲ್ಲಿ ಗುಂಡು ಹಾರಿಸಿದ್ದು ಅವನ ತಾಯಿ, ಹಾರಿಸಿದ್ದು ಅವನ ತಂದೆಯ ಮೇಲೆ. ಸದಾ ಜಗಳ ಕಾಯುವ ಇವರು ಖಾಲಿ ಬಂದೂಕು ತೋರಿಸುತ್ತಾ ಜಗಳವಾಡೋದು ಮಾಮೂಲಿ ಆಗಿರುತ್ತೆ. ಇವರ ಜಗಳದಿಂದ ಬೇಸತ್ತ ಸಿಡ್ನಿ ಇವರಿಬ್ಬರೂ ಹೊಡೆದಾಡಿಕೊಂಡು ಸಾಯಲಿ ಅಂತ ಅವರಿಗೆ ಗೊತ್ತಿಲ್ಲದಂತೆ ಬಂದೂಕಿಗೆ ಕಾಡತೂಸು ತುಂಬಿಸಿರುತ್ತಾನೆ. ಹೀಗೆ ಸುತ್ತಿ ಬಳಸಿ ತನ್ನ ಸಾವಿಗೆ ತಾನೇ ಕಾರಣ ಆಗಿರುತ್ತಾನೆ!

ಚಿತ್ರಕ್ಕೆ ಸಂಬಂಧಿಸಿರದ ಈ ಘಟನೆಗಳ ಪೀಠಿಕೆಯಿಂದ ಶುರುವಾಗಿ, ಸ್ಯಾನ್ ಫರ್ನ್ಯಾಂಡೋ ವ್ಯಾಲಿಯಲ್ಲಿ ಒಂದು ದಿನದಲ್ಲಿ ನಡೆಯುವ ಹಲವು ಎಳೆಗಳ, ಬಹಳ ಪಾತ್ರಗಳಿರುವ ಕಥೆಯನ್ನು ಹೇಳುತ್ತದೆ. ಅರ್ಲ್ ಪಾರ್ಟ್ರಿಜ್ ತುಂಬಾ ಪ್ರಸಿದ್ಧ ಟಿವಿ ಕ್ವಿಜ್ ಶೋ  “ವಾಟ್ ಡು ಕಿಡ್ಸ್ ನೋ” ವಿನ ನಿರ್ಮಾಪಕ ಸಾವಿನ ಅಂಚಿನಲ್ಲಿದ್ದಾನೆ. ಕೇವಲ ಆಸ್ತಿಗೋಸ್ಕರ ಅರ್ಲ್ ಅನ್ನು ಮದುವೆಯಾಗಿದ್ದ ಲಿಂಡಾಗೆ ಈಗ ಅವನ ಮೇಲೆ ಪ್ರೀತಿ, ತಪ್ಪಿತಸ್ಥ ಭಾವನೆಯಿಂದ ಒದ್ದಾಡುತ್ತಾ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಾಳೆ. ಅರ್ಲ್ ಚಿಕ್ಕವಯಸ್ಸಿನಲ್ಲಿ ತನ್ನ ಮೊದಲ ಹೆಂಡತಿ ಮತ್ತು ಮಗ ಫ್ರಾಂಕ್ ಅನ್ನು ತೊರೆದು ಹೋಗಿರುತ್ತಾನೆ. ಈಗ ಫ್ರಾಂಕ್ ಹೆಣ್ಣುಗಳನ್ನು ವಶಪಡಿಸಿಕೊಳ್ಳುವ, ಅವರನ್ನು ಕಂಟ್ರೋಲ್ ಮಾಡುವ ವಿಧಾನಗಳ ಬಗ್ಗೆ ಕೋಚಿಂಗ್ ಕೊಡುವ ಪರಮ ಸ್ತ್ರೀದ್ವೇಷಿ. “ವಾಟ್ ಡು ಕಿಡ್ಸ್ ನೋ” ನಡೆಸಿಕೊಡುವಾತ ಜಿಮ್ಮಿ. ಇವನಿಂದ ದೂರವಾಗಿರುವ ಮಗಳು ಕ್ಲಾಡಿಯಾ ಮಾದಕ ದ್ರವ್ಯಗಳ ವ್ಯಸನಿ. ತಂದೆಯನ್ನು ಅಂತರಾಳದಿಂದ ದ್ವೇಷಿಸುವ ಕ್ಲಾಡಿಯಾಗೆ ಒಬ್ಬ ಒಳ್ಳೆಯ ಪೋಲಿಸ್ ಆಫೀಸರ್ ಪರಿಚಯ ಆಗುತ್ತೆ. ಕ್ವಿಜ್ ಶೋ ಅಲ್ಲಿ ಭಾಗವಹಿಸುತ್ತಿರುವ ಸ್ಟಾನ್ಲಿ ಪ್ರಚಂಡ ಬುದ್ಧಿವಂತ ಬಾಲಕ. ಇವನ ಬುದ್ಧಿಶಕ್ತಿಯನ್ನು ಸ್ಪರ್ಧಾತ್ಮಕತೆಯ ರೇಸಿಗಿಳಿಸಿರುವ ಅವನ ತಂದೆ. ಇದೇ ಕ್ವಿಜ್ ಶೋನಲ್ಲಿ ಸುಮಾರು ವರ್ಷಗಳ ಹಿಂದೆ ಗೆದ್ದಿದ್ದ “ಕ್ವಿಜ್ ಕಿಡ್” ಡಾನಿ ಈಗ ಶತಮೂರ್ಖ ಎನಿಸಿಕೊಂಡಿರುವಾತ. ಏನೊಂದು ಕೆಲಸ ಮಾಡಲು ಹೊರಟರೂ ಎಡವಟ್ಟು ಮಾಡಿಕೊಳ್ಳುವ ಇವನಿಗೆ ತನ್ನ ಹಲ್ಲಿಗೆ ಬ್ರೇಸಸ್ ಕಟ್ಟಿಸಿಕೊಳ್ಳುವ ವಿಚಿತ್ರ ಬಯಕೆ.

ಮೂರು ಗಂಟೆ ಐದು ನಿಮಿಷದ ಇದು ಹಾಲಿವುಡ್ ಲೆಕ್ಕದ ಪ್ರಕಾರ ತುಂಬಾ ದೀರ್ಘಾವಧಿ ಚಿತ್ರ. ಆದರೆ ಎಲ್ಲೂ ಚಿತ್ರ ತುಂಬಾ ಉದ್ದವಾಯಿತು ಅನಿಸಲ್ಲ. ಇಲ್ಲಿನ ಹಲವು ಎಳೆಗಳು ಬೆಸೆದುಕೊಂಡಿರುವುದು ‘ಪ್ಲಾಟ್’ ಇಂದ ಅಲ್ಲ, ಆದರೆ ಭಾವನಾತ್ಮಕ ಕೊಂಡಿಯಿಂದ! ಪೀಠಿಕೆಯಿಂದ ಮೇಲ್ನೋಟಕ್ಕೆ ಇದು ಕೋ-ಇನ್ಸಿಡೆನ್ಸ್ ಬಗೆಗಿನ ಚಿತ್ರ ಅನಿಸಿದರೂ, ಇದು ವಾಸ್ತವವಾಗಿ ಪೋಷಕರ-ಮಕ್ಕಳ ಸಂಬಂಧದ ಚಿತ್ರ. ಪೋಷಕರ ನಡವಳಿಕೆ, ಅವರು ತೆಗೆದುಕೊಳ್ಳೋ ನಿರ್ಧಾರಗಳು ಹೇಗೆ ಮಕ್ಕಳ ಮೇಲೆ, ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಚಿತ್ರದುದ್ದಕ್ಕೂ ನೋಡಬಹುದು! ಚಿತ್ರದ ಅಂತ್ಯವೂ ಅಷ್ಟೇ, ಒಂದು ಗಮ್ಯದೆಡೆಗೆ ಕೊಂಡೊಯ್ಯಬೇಕು ಅನ್ನುವ ಸಾಮಾನ್ಯ ಹಾಲಿವುಡ್ ನಿಯಮವನ್ನು ಮೀರಿ, ಬೇರೆ ಬೇರೆ ಎಳೆಗಳನ್ನು ವಿಭಿನ್ನ  ರೀತಿಯಲ್ಲಿ ಅಂತ್ಯಗೊಳಿಸಲಾಗಿದೆ – ಕೆಲವು ಸಂಬಂಧಗಳು ಸರಿಹೋಗುತ್ತವೆ, ಕೆಲವು ಸಂಬಂಧಗಳಲ್ಲಿದ್ದ ಕೊಳಕು ಬಹಿರಂಗವಾಗುತ್ತದೆ, ಕೆಲವು ಕ್ಷಮೆಯಲ್ಲಿ ಅಂತ್ಯಗೊಂಡರೆ, ಕೆಲವು ದುರಂತದಲ್ಲಿ ಕೊನೆಗಾಣುತ್ತವೆ!

ಚಿತ್ರ ಬಹುತೇಕ ಓಪನ್-ಎಂಡೆಡ್ ಆಗಿದ್ದು, ಇತರ ಹಲವಾರು ಥೀಮ್ ಗಳನ್ನು ಸೂಕ್ಷ್ಮವಾಗಿ ಕಾಣಬಹುದು – ಸಾವಿನಂಚಿನಲ್ಲಿರುವ ವ್ಯಕ್ತಿಗಳು, ಮದುವೆಯಾಚೆಗಿನ ಸಂಬಂಧಗಳು, ತಪ್ಪಿತಸ್ಥಭಾವನೆ, ಕ್ಷಮೆ ಮುಂತಾದವು.

ಪ್ರತಿಯೊಬ್ಬ ನಟನಟಿಯ ಅಭಿನಯವೂ ಅತ್ಯಂತ ಪರಿಣಾಮಕಾರಿಯಾಗಿದೆ. ಅದರಲ್ಲೂ ಟಾಮ್ ಕ್ರೂಸ್ ಈ ಚಿತ್ರದಲ್ಲಿ ಅಮೋಘ. ಟಾಮ್ ಕ್ರೂಸ್ ಅಂತಹ ಅಸಾಮಾನ್ಯ ನಟನೇನಲ್ಲ, ಆದರೆ ಫ್ರಾಂಕ್ ಪಾತ್ರಕ್ಕೆ ಬೇಕಾಗೋ ಗ್ಲಾಮರ್, ಸ್ಟೈಲ್, ಚಾರ್ಮ್ ಎಲ್ಲವನ್ನೂ ಅದ್ಭುತವಾಗಿ ಹೊರತಂದಿದ್ದಾರೆ. ಮುಖ್ಯವಾಗಿ ಇದು ಕೇವಲ ಮತ್ತು ಕೇವಲ ನಿರ್ದೇಶಕ ಪಾಲ್ ಥಾಮಸ್ ಆಂಡರ್ಸನ್ ಕನಸಿನ ಕೂಸು. ತಮ್ಮ ಇಪ್ಪತೊಂಭತ್ತನೆ ವಯಸ್ಸಿನಲ್ಲೇ ಇಂತಹ ಪ್ರಬುದ್ಧ ಚಿತ್ರವನ್ನು ಕೊಟ್ಟಿರುವುದು ಬಗ್ಗೆ ನನಗೆ ಗೌರವ, ಬೆರಗು ಇದೆ. ತಾಂತ್ರಿಕವಾಗಿಯೂ ಚಿತ್ರ ತುಂಬಾ ಮೇಲ್ಮಟ್ಟದ್ದು – ಛಾಯಾಗ್ರಹಣ, ಸಂಕಲನ ಮತ್ತು ಸಂಗೀತದ ಕಾಂಬಿನೇಶನ್ ಇಂದ ಹೇಗೆ ಶಕ್ತಿಯುತ, ಭಾವನಾತ್ಮಕ ಸೀನುಗಳನ್ನು ಕಟ್ಟಬಹುದು ಅನ್ನಲು ಈ ಚಿತ್ರ ಒಳ್ಳೆಯ ಉದಾಹರಣೆ.

ನಾನು ಬೇಕು ಅಂತಲೇ ಚಿತ್ರದ ಕಥೆಯ ಬಗ್ಗೆ ಹೆಚ್ಚಾಗಿ ಹೇಳಿಲ್ಲ. ನೀವು ನಿಜವಾಗಿಯೂ ಚಿತ್ರಪ್ರೇಮಿಯಾಗಿದ್ದರೆ, ಈ ಚಿತ್ರ ನೋಡಿಲ್ಲ ಅಂದರೆ ಸಾವಕಾಶವಾಗಿ ಒಮ್ಮೆ ಈ ಚಿತ್ರವನ್ನ ನೋಡಿಬಿಡಿ. ಆಗಲೇ ನೋಡಿದ್ದೀರ ಅಂದ್ರೆ ಮತ್ತೆ ನೋಡಿ. ಇನ್ನೊಂದು ವರ್ಷ ಬಿಟ್ಟು ಇನ್ನೊಮ್ಮೆ ನೋಡಿ, ಮತ್ತೊಂದು ವರ್ಷ ಬಿಟ್ಟು ಮತ್ತೊಮ್ಮೆ – ಹೊಸದೇನನ್ನೋ ಖಂಡಿತ ಕಂಡುಕೊಳ್ಳುತ್ತೀರ. ಈ ಚಿತ್ರದಲ್ಲಿ ಹೇಳುವಂತೆ “ನಾವು ನಮ್ಮ ಭೂತಕಾಲದಿಂದ ದೂರ ಸರಿದಿರಬಹುದು, ಆದರೆ ನಮ್ಮ ಭೂತಕಾಲ ನಮ್ಮನ್ನು ಬೆಂಬಿಡುತ್ತಲೇ ಇರುತ್ತದೆ”!

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಖಂಡಿತ ಮತ್ತೊಮ್ಮೆ ನೋಡಿಸಿಕೊಳ್ಳುವ ಚಿತ್ರವಿದು…ನಿಮ್ಮ ವಿವರಣೆಗೆ ಧನ್ಯವಾದಗಳು…

ಪ್ರಮೋದ್
10 years ago

ನನ್ನ ಫೇವರೇಟ್ ಚಿತ್ರಗಳಲ್ಲೊ೦ದು. ಮಗ್ನೋಲಿಯ ಹೂವಿನ ಎಸಳುಗಳ೦ತೆ ಎಲ್ಲ ದಳಗಳೂ ಸೇರಿ ಹೂವಾಗುತ್ತದೆ ಎ೦ಬುದು ಇದರ ಒಳ ನೋಟ. ಶಾರುಕ್ ಗೆ ಸ್ವದೇಸ್ ಇದ್ದ ಹಾಗೆ ಟಾಮ್ ಕ್ರೂಸ್ ಗೆ ಮ್ಯಾಗ್ನೋಲಿಯಾ. 🙂
ಈ ಚಿತ್ರ ಎಲ್ಲರಿಗೂ ಇಷ್ಟವಾಗಬೇಕ೦ತೇನಿಲ್ಲ. ಸ್ಲೋ ಪೇಸ್ ಚಿತ್ರವಾದ್ದರಿ೦ದ ಜನರಿಗೆ ನಿದ್ದೆ ಬರಿಸಬಹುದು. ಒ೦ದು ಸಾರಿ ಒಳ ಹೊಕ್ಕರೆ ಮೂರು ತಾಸು ಫಿಕ್ಸು 🙂
ಈ ಚಿತ್ರಕ್ಕೆ ರಿವ್ಯೂ ಬರೆಯುವುದು ಸ್ವಲ್ಪ ತಲೆ ಕೆಡಿಸುವಕೊಳ್ಳುವ ಕೆಲಸವೇ ಸರಿ

sharada moleyar
sharada moleyar
10 years ago

nice

niharika
niharika
10 years ago

ಈ ವಾರಾಂತ್ಯದಲ್ಲಿ ಇದನ್ನೇ ನೋಡುವೆ! 🙂

Utham Danihalli
10 years ago

Chenagidhe vimarshe

5
0
Would love your thoughts, please comment.x
()
x