ಮೌಲ್ಯಗಳ ಕುಸಿತ ಭ್ರಷ್ಟಾಚಾರಕ್ಕೆ ನಾಂದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

somashekar-k-t

      ಹಿಂದೆ ಪ್ರತಿ ಗ್ರಾಮದಲ್ಲಿ ರಾಮಾಯಣ,  ಮಹಾಭಾರತ, ಪುರಾಣ  ಕತೆಗಳು ಯಕ್ಷಗಾನ ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ  …. ಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು. ಓಲೆ ಬಸವ  … ಗಳ ಮೂಲಕವೂ ರಾಮ ಸೀತೆಯರ ಕತೆ ಜಾತ್ರೆ,  ಹಬ್ಬಹರಿದಿನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದು ಹಳ್ಳಿ ಜನರಿಗೆ ಮನರಂಜನೆ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ, ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರತಿ ಮನೆಗಳಲಿ ಗ್ರಾಮದ ದೇವಾಲಯಗಳಲಿ, ಪಂಚಾಯಿತಿ ಕಟ್ಟೆಗಳಲ್ಲಿ,  ಕಛೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಹರಿಕಥೆ,  ಪುರಾಣ,  ಪುಣ್ಯಕಥೆ,  ಶಿವಲೀಲಾಮೃತ, ರಾಮಾಯಣ, ದೇವಿ ಪುರಾಣ,  ಜೈಮಿನಿ ಭಾರತದ ಪಾರಾಯಣ , ವಾಚನ ನಡೆಯುತ್ತಿದ್ದವು, ಬಯಲಾಟ, ದೊಡ್ಡಾಟ, ಯಕ್ಷಗಾನಗಳ ಮೂಲಕ ರಂಗ ಸ್ಥಳದಲ್ಲಿ ಪ್ರದರ್ಶನಗಳೂ ನಡೆಯುತಿದ್ದವು. ಧರ್ಮರಾಯ, ಕರ್ಣ, ನಳ ಮಹಾರಾಜ,  ಸತ್ಯಹರಿಶ್ಚಂದ್ರ, ರಾಮ, ಲಕ್ಷ್ಮಣ, ಭರತ ,ಹನುಮಂತ, ಧ್ರುವ….ಸೀತೆ ಸಾವಿತ್ರಿ,  ಅನಸೂಯ ಅಹಲ್ಯ  ಮಂಡೋದರಿ.. ಮುಂತಾದ ಪಾತ್ರಗಳು ಅವರ ಆದರ್ಶಗಳಾದ್ದರಿಂದ ಅವರಂತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಂದಿನ ಸಮಾಜದ ಜನ  ಪ್ರಯತ್ನಿಸಿ ಮಾದರಿಯಾಗಿದ್ದರು. ಆತ್ಮೋದ್ದಾರ ಅವರ ಗುರಿಯಾಗಿತ್ತು!  ಶಾಂತಿ, ಸಹನೆ, ತಾಳ್ಮೆ, ತ್ಯಾಗ ಅವರ ಜೀವನದಲ್ಲಿ ಅಳವಟ್ಟಿದ್ದವು. ಪ್ರಾಮಾಣಿಕರಿಗೆ, ನೈತಿಕತೆಗೆ ಬೆಲೆ ಇದ್ದ ಪ್ರಯುಕ್ತ ಉತ್ತಮ, ನೈತಿಕ, ಮೌಲ್ಯಯುತ ಸಮಾಜ ನಿರ್ಮಾಣವಾಗಿತ್ತು.

         ವೇದ, ಉಪನಿಷತ್ತು, ಪುರಾಣಗಳ ಪ್ರಭಾವ ಕುಗ್ಗುವ ಮುನ್ನ ಬೌದ್ದ, ಜೈನ, ವೈದಿಕ ಧರ್ಮಗಳು ದೇವರ ಬಗ್ಗೆ ಒಲವನ್ನು ಬೆಳೆಯಿಸಿ ಸನ್ನಡತೆ, ಸದ್ಧರ್ಮ, ಪುರುಷಾರ್ಥ ಬೋಧಿಸಿ, ಜೀವನದ ಉದ್ಧೇಶ ಮುಕ್ತಿ ಪಡೆಯುವುದು ಎಂಬುದನ್ನು ಸಾರಿ, ಜನರ ಮನಸ್ಸನಲ್ಲಿ ಭಕ್ತಿಯನ್ನು ಬಿತ್ತಿ, ಆತ್ಮೋದ್ಧಾರದ ಮಾರ್ಗಗಳ ತಿಳಿಸಿ, ಪಾಪ, ಪುಣ್ಯ, ಕರ್ಮದ ಫಲಾನುಫಲಗಳ ಆಳವಾಗಿ ಬೇರೂರಿಸಿದ್ದರಿಂದ  ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನೈತಿಕತೆಯ ಮಾಡು ಗಟ್ಟಿಗೊಳಿಸಿದ್ದರಿಂದ ಉತ್ತಮ ಸಮಾಜ ಇತ್ತು! ಅವುಗಳ ಪ್ರಭಾವ ಕುಗ್ಗುವ ಮುನ್ನ. ವಚನಕಾರರು ನಡೆ – ನುಡಿ ಒಂದಾದ ಸರಳ ಮೌಲ್ಯಯುತ ಜೀವನ ಸಾಗಿಸಿ, ಕಾಯಕ ಯೋಗಿಗಳಾಗಿ, ಪ್ರಾಮಾಣಿಕ, ಪಾರದರ್ಶಕವಾಗಿ ಜೀವಿಸಿ, ಭಕ್ತಿಯಿಂದ ನೀತಿಯುತವಾಗಿ ಪ್ರತಿಯೊಬ್ಬರೂ ಬದುಕಿ , ಬಹಿರಂಗ ಮತ್ತು ಅಂತರಂಗ ಶುದ್ದಿಯಿಂದ ಮಾತ್ರ  ಭಗವಂತನನ್ನು ಒಲಿಸಲು ಸಾಧ್ಯ! ಭಗವಂತನನ್ನು ಒಲಿಸುವುದೆ ಜೀವನದ ಉದ್ದೇಶ ಎಂದು ಸಾರಿ ಹಾಗೆ ಬದುಕಿ  ಆದರ್ಶವಾದುದರಿಂದ ಉತ್ತಮ ಸಮಾಜ ಸೃಷ್ಟಿಗೆ ವಚನಕಾರರು ಕಾರಣರಾದರು!  ಇವರ ನಂತರ ದಾಸರು ಮನೆಮನೆಗೆ ಹೋಗಿ ಇಂಪಾದ ಸಂಗೀತ ಹಾಡುಗಳ ಮುಖಾಂತರ ಸಮಾಜದ ಅಂಕು ಡೊಂಕು, ಢಾಂಬಿಕತೆ ತಿದ್ದಿ, ಭಕ್ತಿಯುತವೂ,  ನೀತಿಯುತವೂ, ಮೌಲ್ಯಯುತವೂ ಆದ ಆದರ್ಶದ  ಬದುಕನ್ನು ಜನತೆಗೆ  ತಲುಪಿಸಿದ್ದರಿಂದ ಉತ್ತಮ ಸಮಾಜ ಸೃಷ್ಟಿಯಾಗಿತ್ತು. " ಮಾನವ ಜನ್ಮ ದೊಡ್ಡದು ಇದ ಹಾಳು ಮಾಡದಿರಿ ಹುಚ್ಚಪ್ಪಗಳಿರ " , " ಇರುವೆ ಎಂಬತ್ತುನಾಲ್ಕುಕೋಟಿ ಜೀವ ರಾಶಿಗಳಲಿ ಮಾನವ ಜನ್ಮ ಶ್ರೇಷ್ಠವಾದದ್ದು " ಎಂಬ ಭಾವನೆ ಮೂಡಿದುದರಿಂದ ಮತ್ತು  ಸಾಧು ಸಂತರು,  ಮಠಾಧೀಶರು,  ಹಲವು ರಾಜರು, ಧರ್ಮಗಳು ಸಮಾಜದ ನೈತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಿದ್ದರಿಂದ ಉತ್ತಮ ಸಮಾಜ ಸೃಷ್ಟಿಯಾಗಿತ್ತು.  ಹೀಗೆ ವೈದಿಕ, ಜೈನ, ಬೌದ್ದ, ವೀರಶೈವ ಧರ್ಮಗಳು ಸಮಾಜವನ್ನು ಹಾಳಾಗದಂತೆ ಕಾಪಾಡಿ ನೈತಿಕ ಜೀವನಕ್ಕೆ ಬೆಲೆ ಬರುವಂತೆ ಮಾಡಿದುವು!

      ಭಾರತದ ಮೇಲೆ ಮೊಗಲ ಮುಸಲ್ಮಾನರ, ಪರ್ಶಿಯನ್ನರ ಧಾಳಿ ಆರಂಭವಾಯಿತು. ಅವರ ಲೂಟಿ, ಹೆಣ್ಣಮಕ್ಕಳ ಮೇಲಿನ ಅತ್ಯಾಚಾರ ನಡೆಗಳು, ದುರಾಚಾರ, ಬೇಧ ಭಾವ, ತುಘಲಕ್ ಆಡಳಿತ ಭಾರತದಲ್ಲಿ ಆರಂಭವಾದ್ದರಿಂದ ಅವರ ಬದುಕು , ನಡೆ, ನುಡಿ ಸಮಾಜದ ಮೇಲೆ ಪ್ರಭಾವ ಭೀರಿತು! ಆಗ ಭಾರತೀಯರ ಧರ್ಮ, ನಂಬಿಕೆ, ಬದುಕಿಗೆ ಪೆಟ್ಟು ಬಿದ್ದುದರಿಂದ ಭಾರತೀಯರು  ತಮ್ಮ  ಧರ್ಮ, ನಂಬಿಕೆ, ಬದುಕನ್ನು ಪರಾಮರ್ಶಿಸಬೇಕೆ? ಬೇಡವೋ? ಎಂಬ ಚಿಂತನೆಗೆ ಗೊಂದಲವಾಗಲು ಅವಕಾಶ  ಮಾಡಿಕೊಟ್ಟಿತು! ನಂತರ ಯೂರೋಪಿಯನ್ನರ ಆಗಮನ, ಅವರ ಬದುಕು, ಆಡಳಿತ, ಧರ್ಮ ಸಂಸ್ಕೃತಿ, ಒಡೆದು ಆಳುವ ನೀತಿ, ಸಂಪತ್ತಿನ ದೋಚುವಿಕೆ, ಭಾರತೀಯರನ್ನು ಶೋಷಿಸಿದ ರೀತಿ, ಭಾರತೀಯರ ಮೇಲೆ ಗಾಢ ಪರಿಣಾಮ ಭೀರ ತೊಡಗಿದವು. ತಮ್ಮ ಬದುಕನ್ನು ಭಾರತೀಯರು ಪರಾಮರ್ಶಿಸಿಕೊಳ್ಳುವ ಚಿಂತನೆಗೆ ಹಚ್ಚಿತು! ಪಾಶ್ಚಿಮಾತ್ಯರ ಶಿಕ್ಷಣ, ನಮ್ಮವರು ಯೂರೋಫಿಗೆ ಹೋಗಿ ಶಿಕ್ಷಣ ಪಡೆದು ಬಂದುದು, ಅವರ ಜೀವನ ಭಾರತೀಯರ ಮೇಲೆ ಪ್ರಭಾವ ಭೀರಿತು. ವಿಜಯನಗರ ಸಾಮ್ರಾಜ್ಯ  ದಕ್ಷಿಣ ಭಾರತದ ಮೇಲೆ ಮುಸಲ್ಮಾನರ ಪ್ರಭಾವ ಹೆಚ್ಚು ಆಗದಂತೆ ತಡೆಯುವ ಪ್ರಯತ್ನ ನಡೆಯಿತಾದರೂ  ಬ್ರಿಟೀಷರ ಆಳ್ವಿಕೆಯನ್ನು ತಡೆಯಿಡಿಯಲಾಗಲಿಲ್ಲ! ಹೇಗಾದರೂ ಗಳಿಸಬೇಕು, ಹೇಗಾದರೂ ಸುಖ ಪಡಬೇಕೆಂಬ ನೀತಿಯನ್ನು ತಡೆಯಲಾಗಲಿಲ್ಲ!  ಬ್ರಿಟೀಷರು ಭಾರತಕ್ಕೆ ಬರುವ ಮುನ್ನು ಭಾರತ ಆರುನೂರಕ್ಕೂ ಹೆಚ್ಚು ಆಡಳಿತದಲ್ಲಿ ಹಂಚಿ ಹೋಗಿತ್ತು. ಬ್ರಿಟಿಷರು ಸುಮಾರು ಎರಡು ಶತಮಾನಗಳ ಕಾಲ ಭಾರತೀಯರನ್ನು ಆಳಿದ ಪ್ರಯುಕ್ತ ಅವರ ಪ್ರಭಾವ ಭಾರತೀಯ ಜನ ಜೀವನದ ಮೇಲೆ ಸಾಕಷ್ಟು ಆಯಿತು! ಆಗ ಭಾರತೀಯ ಕೆಲ ನಂಬಿಕೆ ಆಚಾರ, ವಿಚಾರಗಳು ಪರಿಶೀಲನೆಗೊಳಪಟ್ಟವು. ಕೆಟ್ಟ ನಡೆಗಳು ಅಂತ್ಯವೂ ಆರಂಭವಾಗುವುದರ ಜತೆಗೆ, ಕೆಲ ಒಳಿತುಗಳಿಗೆ ಧಕ್ಕೆಯಾಯಿತು! ಆದರೂ ನಂತರ ಸ್ವಾತಂತ್ರ್ಯ ಹೋರಾಟಗಾರರು, ಆಧ್ಯಾತ್ಮ ಜೀವಿಗಳು ಗಾಂಧಿ ರಾಮಕೃಷ್ಣಪರಮಹಂಸ , ಸ್ವಾಮಿವಿವೇಕಾಂದ,  ಸಂತರು, ಸಮಾಜ ಸುಧಾರಕರು ಸಮಾಜದ ಅನಿಷ್ಟ ಪದ್ದತಿಗಳ ಓಡಿಸಲು ಪ್ರಯತ್ನಿಸುತ್ತಾ ಮೌಲ್ಯಗಳ ಬಿತ್ತುತ್ತಾ, ಮೌಲ್ಯಯುತ ಆದರ್ಶ ಜೀವನ ನಡೆಸಿ  ಉತ್ತಮ ಸಮಾಜದ ಸೃಷ್ಟಿಗೆ ಕಾರಣರಾದರು. 

         ಸ್ವಾತಂತ್ರ ಬಂದು ಅಧಿಕಾರ ಕೈಗೆ ಸಿಕ್ಕಮೇಲೆ ಅಧಿಕಾರಕ್ಕಾಗಿ, ಹಣಕ್ಕಾಗಿ ಮೇಲಾಟ ಸದ್ದಿಲ್ಲದೆ ಆರಂಭವಾಗಿದ್ದರೂ ಪ್ರಾಮಾಣಿಕತೆಗೆ ಬೆಲೆ ಇತ್ತು. ಬರುಬರುತ್ತಾ ಮಿತಿಮೀರತೊಡಗಿತು. ಅಧಿಕಾರ ಮತ್ತು ಹಣದ ಅಪರಿಮಿತ ಶಕ್ತಿಯ ಅನಾವರಣವಾಗುತ್ತಿದ್ದಂತೆ ಅದನ್ನು ಪಡೆಯಲು ಸ್ಪರ್ದೆ ಉಂಟಾಗಿ ಭ್ರಷ್ಟಾಚಾರಕ್ಕೆ ರಹದಾರಿಯಾಯಿತು,  ಕೆಲವು ಮಠ, ಸಂಘ ಸಂಸ್ಥೆಗಳು, ಕೆಲ ಪ್ರಮುಖರು ಮೌಲ್ಯಯುತ ಬದುಕಿಗ ಪ್ರಾಮುಖ್ಯತೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಆಧುನಿಕತೆ ಅನೈತಿಕತೆ, ಭ್ರಷ್ಟಾಚಾರ , ಭಯೋತ್ಪಾದನೆ ಅಬ್ಬರದಲ್ಲಿ ಅವು ಗೌಣವಾಗಿವೆ. ಯುರೋಪಿಯನ್ನರ ಆಗಮನ, ಅವರ ವಿಭಿನ್ನ ಜೀವನದ ಪ್ರಭಾವ, ಭ್ರಷ್ಟರಿಗೆ ಮಾನ ಮನ್ನಣೆ ಸಿಗುತ್ತಿರುವುದು, ಮಾಧ್ಯಮಗಳಲ್ಲಿ ವಿಭಿನ್ನ ಬದುಕು, ಸಂಸ್ಕೃತಿಗಳ ಕಾಣಲು ಸಾಧ್ಯವಾಗುತ್ತಿರುವುದು,  ಅಧಿಕಾರ, ಹಣ, ಆಸ್ತಿ ಸುತ್ತ  ರಾಜಕೀಯ ಸುತ್ತುತ್ತಿರುವುದು,  ಉತ್ತಮ ಚಾರಿತ್ರ್ಯವಂತರಿಗಿಂತ ಅನೀತಿವಂತರಾದರೂ ಬುದ್ದಿ ಜೀವಿಗಳಿಗೆ ಗೌರವ ಲಭಿಸುತ್ತಿರುವುದು, ಐ ಟಿ, ಬಿ ಟಿ ಯಿಂದ ಹಿರಿಯರಿಗಿಂತ  ಕಿರಿಯರಿಗೆ ಬೇಡಿಕೆ ಹೆಚ್ಚಿ ಹಿರಿಯರು ನಿರುಪಯುಕ್ತ ಆಗುತ್ತಿರುವುದು, ಹಣ ಅಧಿಕಾರ ಮುಖ್ಯವಾಗಿ ಗುಣಕ್ಕೆ, ಶೀಲಕ್ಕೆ ಬೆಲೆ ಸಿಗದಿರುವುದು, ಮಾರ್ಗ ಮುಖ್ಯವಾಗದೆ ಹೇಗಾದರೂ ಆಗಲಿ ಹಣ ಮಾಡುವುದು ಮುಖ್ಯವಾಗುತ್ತಿರುವುದು, ರಾಜ ಮಾರ್ಗದಲ್ಲಿ ಸಾಗಿದವರ ಕೆಲಸಗಳು ನಿಧಾನವಾಗುವುದು, ಆಗದಿರುವುದು. ವಾಮ ಮಾರ್ಗದಲ್ಲಿ ಹೋದವರ ಕೆಲಸಗಳು ಕ್ಷಣಾರ್ಧದಲ್ಲಿ ಆಗುವುದು,  ಭ್ರಷ್ಟರಿಗೆ, ಬುದ್ದಿ ಜೀವಿಗಳಿಗೆ, ರಾಜಕಾರಣಿಗಳಿಗೆ ಬದುಕುವ ಅವಕಾಶಗಳು ಕೈಬೀಸಿ ಕರೆಯುತ್ತಿರುವುದರಿಂದ ಮೌಲ್ಯಗಳಿಲ್ಲದ ಸಮಾಜದ ಸೃಷ್ಟಿ ಆಗುತ್ತಾ ಇದೆ. ಅಂದರೆ ಬುದ್ದಿವಂತಿಕೆ, ಚಾಣಾಕ್ಷತೆ, ಆಕರ್ಷಿಸುವಿಕೆ , ಭ್ರಷ್ಟತೆ, ಗಮನಸೆಳೆವ ತಂತ್ರ, ತಂತ್ರಗಾರಿಕೆ, ಸಾಪ್ಟ್ವೇರ್ ಜ್ಙಾನ, ಅಧಿಕಾರ, ಹಣ, ದುಷ್ಟತೆ, ಶ್ರೀಮಂತಿಕೆ,  ….ಮುಂತಾದವು ಮೌಲ್ಯಗಳಾಗುತ್ತಿವೆ. ಉತ್ತಮ ಚಾರಿತ್ರ್ಯ ಉಳ್ಳವರು ಕೆಲಸಕ್ಕೆ ಬಾರದವರೂ, ಬೆಲೆ ಇಲ್ಲದವರೂ ಆಗುತ್ತಿದ್ದಾರೆ.

      ಅನೈತಿಕ ಜೀವನ, ಮೌಲ್ಯಗಳ ಕುಸಿತ ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡುತ್ತದೆ. ಇಂದಿನ ಭ್ರಹ್ಮಾಂಡ ಭ್ರಷ್ಟಾಚಾರ ನೈತಿಕ ಅದ:ಪತನದ ಪ್ರತಿಫಲವಾಗಿದೆ! ಭ್ರಷ್ಟಾಚಾರ ಎಂದರೆ ಅನೈತಿಕ ಜೀವನ ನಡೆಯಿಸುವುದು. ಅಸತ್ಯವಾಗಿ, ಅಪ್ರಾಮಾಣಿಕವಾಗಿ, ಅನ್ಯಾಯವಾಗಿ, ಅಧರ್ಮಿಯಾಗಿ ಬದುಕುವುದು. ಆಡಳಿತದಲ್ಲಿ ತಮ್ಮ ಅಧಿಕಾರ, ಸ್ಥಾನವನ್ನು ವೈಯಕ್ತಿಕ ಲಾಭಕ್ಕಾಗೆ ದುರುಪಯೋಗ ಮಾಡುವುದು! ತನ್ನ ಅಧೀನದಲ್ಲಿರುವ ಸಾರ್ವಜನಿಕ ಆಸ್ತಿಗಳ ದುರುಪಯೋಗ ಮಾಡುವುದು. ನೀತಿ ನಿಯಮ ಮೀರಿ ಕಾರ್ಯ ನಿರ್ವಹಿಸುವುದು. ನೈತಿಕತೆ ಇಲ್ಲದಿರುವವರೇ ವೈಯಕ್ತಿಕ ಲಾಭಕ್ಕಾಗಿ ಲಂಚ, ಆಮಿಷಗಳ ದಾಸರಾಗುತ್ತಾ ಭ್ರಷ್ಟರಾಗುತ್ತಿದ್ದಾರೆ! ಭಾರತೀಯ ದಂಡ ಸಂಹಿತೆ 161, ಭ್ರಷ್ಟಾಚಾರಕ್ಕೆ ತಡೆ ಕಾಯ್ದೆ 1947, ಕೇಂದ್ರ ತನಿಖಾ ದಳ, ಕೇಂದ್ರ ಜಾಗೃತ ಆಯೋಗ, ಲೋಕಪಾಲ, ಲೋಕಾಯುಕ್ತ, ಎಸಿಬಿ ಇಂಥಾ ಎಷ್ಟೋ ಕಾನೂನುಗಳು, ಸಂಘ, ಸಂಸ್ಥೆಗಳು ಇದನ್ನು ಮಟ್ಟಹಾಕಲು ಸಾಧ್ಯವಾಗದಿರುವುದು, ಭ್ರಷ್ಟಾಚಾರದ ವಿರುದ್ದ ಸಮರ ಸಾರಿದವರಿಗೆ ಸಾಲು ಸಾಲು ಸೋಲಾಗುತ್ತಿರುವುದು ಸಮಾಜದ ನೈತಿಕ ಅದ:ಪತನ ಹೊಂದಿರುವ ಮಟ್ಟವನ್ನು ಸೂಚಿಸುತ್ತದೆ. ಇದು ದೇಶವನ್ನು ಎಲ್ಲಾ ರಂಗಗಳಲ್ಲೂ ಅಧ:ಪತನ ಹೊಂದುತ್ತಿರುವುದಕ್ಕೆ ಕನ್ನಡಿಯಾಗಿದೆ. ಹೀಗಾದರೆ ಉತ್ತಮ ಸಮಾಜದ ಸೃಷ್ಟಿ, ದೇಶದ ಉದ್ಧಾರ ಹೇಗೆ ಸಾಧ್ಯವಾಗುತ್ತದೆ?

      ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ಬಂದು ವಿದ್ಯಾರ್ಥಿಗಳಲ್ಲಿ ನೀತಿಯನ್ನು, ಉತ್ತಮ ಮೌಲ್ಯಗಳನ್ನು ಬೆಳೆಸಬೇಕಿದೆ. ಮನೆಯಲ್ಲಿ ತಂದೆ ತಾಯಿಗಳು ಉತ್ತಮ ನೀತಿ, ಆಚಾರ – ವಿಚಾರ, ಒಳ್ಳೆ ನಡೆ – ನುಡಿ ಹೇಳಿಕೊಟ್ಟು, ಕಲಿಸಿ ಉತ್ತಮರಾಗಿಸಬೇಕಿದೆ. ಹಣಕ್ಕಿಂತ ಗುಣಕ್ಕೆ, ಮೌಲ್ಯಯುತ ಬದುಕಿಗೆ ಬೆಲೆ ಬರಬೇಕಿದೆ!  ಜನ ಪ್ರತಿನಿಧಿಗಳ,  ನಮ್ಮ ನಾಯಕರ, ನಟ ನಟಿಯರ, ಸಾರ್ವಜನಿಕ ರಂಗಗಳಲ್ಲಿರುವವರ ಬದುಕು ಮೌಲ್ಯಯುತವೂ ಆದರ್ಶವೂ ಆಗುವ ಅನಿವಾರ್ಯತೆ ಇದೆ. ಉತ್ತಮ ಚಾರಿತ್ರ್ಯವಂತರಿಗೆ, ಸದಾಚಾರಿಗಳಿಗೆ ಉದ್ಯೋಗಾವಕಾಶಗಳು,  ಉತ್ತಮ ಬದುಕು ದೊರೆತು ಅವರ ಬದುಕಿಗೆ ಬೆಲೆ ಬರಬೇಕಿದೆ. ಅವರ ಗೌರವಗಳು ಹೆಚ್ಚಿದಾಗ ಕಿರಿಯರು ಅವರ ಅನುಕರಿಸಿ ಮೌಲ್ಯಯುತ ಸಮಾಜದ ಸೃಷ್ಟಿಗೆ ಕಾರಣವಾಗಬಹುದು. ಇದರಿಂದ ವ್ಯಕ್ತಿಯ ಉದ್ಧಾರ ಆ ಮೂಲಕ ಸಮಾಜ, ದೇಶೋದ್ಧಾರವಾಗುತ್ತದೆ!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x