ಮೌನ ತಳೆದ ಹುಡುಗಿ: ರುಕ್ಮಿಣಿ ನಾಗಣ್ಣವರ

ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ ಮೌನಕ್ಕೆ ಶರಣಾಗಿದ್ದ. ಮನದ ಮೈದಾನದಲಿ ಜಾನಕಿಯೆಡೆಗಿನ ವಿಚಾರಗಳು ಕಾಳಗದ ಹೋರಿಯಂತೆ ಕಾದಾಟ ನಡೆಸಿದ್ದವು. ಅರಳು ಹುರಿದಂತೆ ಮಾತಾಡುವ ಜಾನಕಿ ಕಳೆದ ಆರು ತಿಂಗಳಿನಿಂದ ಮೌನವಾಗಿದ್ದಳು. ಆ ದೀರ್ಘಮೌನ ರಮೇಶನನ್ನು ಭಾದಿಸುತ್ತಿತ್ತು.  ತಲೆ ಚಿಟ್ಟೆನ್ನುವ ಅಸಹನೆ. ಅವಳೇಕೆ ಹೀಗೆ ಎಂದು ತನ್ನ ಮನಸ್ಸನ್ನು ತಿವಿದು ತಿವಿದು ಮತ್ತೆ ಮತ್ತೆ ಕೇಳುತ್ತಿದ್ದ. ಮೌನ ಮಾತಾಗದೇ ಎದೆಯ ನೋವು ಮಡುಗಟ್ಟಿತ್ತು. ಅಸಡ್ಡೆಗೊಳಗಾದ ಮನಸು ಅರಚುತ್ತ ಚೀರುತ್ತ ಗಂಟಲು ಹರಿದುಕೊಳ್ಳುತ್ತಿತ್ತು. ರಮೇಶನ ಬದುಕು ಅಕಾಲದ ಬಿರುಗಾಳಿಗೆ ಸಿಲುಕಿದ ಪತಂಗವಾಗಿತ್ತು.

ಜಾನಕಿ ತನಗಿನ್ನು ಸಿಗುವುದಿಲ್ಲ ಎಂಬ ಅಳುಕು ಅವನ ಬೆನ್ನು ಬಿಡದೆ ಕಾಡಹತ್ತಿತು. ರಜೆ ಹಾಕಿ ಮನೆಗೆ ಹೋದರೂ ಅವ್ವನ ಬಾಯಿಯಿಂದ ಪ್ರಮಿಳೆಯ ವಿಷಯ ಬರುವುದು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಆಗಿತ್ತು. ರಮೇಶನಿಗೆ ಆ ಉಪದ್ರವದಿಂದ ಪಾರಾಗಬೇಕಿತ್ತು. ರಮೇಶನ ಮನಸಲ್ಲಿ ಬಿಡಾರ ಹೂಡಿದ ಜಾನಕಿ ಮತ್ತೆ ಮತ್ತೆ ಮೊಳೆತು ಕನಸಾಗಸಕೆ ಹಾರುವ ಹುಚ್ಚು ಹಂಬಲ ಹಚ್ಚುತ್ತಿದ್ದಳು. ಕಥೆಯ ಕ್ಲೈಮಾಕ್ಸ್ ಇನ್ನೂ ಬಾಕಿ ಇರಬಾರದೇಕೆ ಎನ್ನಿಸಿರಬಹುದು. ಎದುರುಬದುರು ಕುಳಿತರೆ ಮಾತ್ರವೇ ಆಕೆಯ ಮನಸಲ್ಲಿ ತನ್ನೆಡೆಗೆ ಇರುವ ಭಾವನೆಗಳನ್ನು ತಿಳಿಯಲು ಸಾಧ್ಯವೆಂದು ಅರಿತ ರಮೇಶನಿಗೆ ಇದ್ದಕ್ಕಿದ್ದಂತೆ ಜಾನಕಿಯನ್ನು ಖುದ್ದಾಗಿ ಭೇಟಿ ಮಾಡುವುದು ಜರೂರಿ ಎನಿಸಿತು.

ಅಡ್ಡಲಾಗಿ ಮಲಗಿದ್ದ ರಮೇಶ್ ಗಕ್ಕನೆ ಎದ್ದು ಕುಳಿತ. ಜಾನಕಿಯ ನೆನಪುಗಳನ್ನೆಲ್ಲ ತನ್ನ ಸುತ್ತಲೂ ಹರವಿಕೊಂಡ. ರಮೇಶ್ ಮತ್ತು ಜಾನಕಿ ಗೋಕಾಕದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದಿದವರು. ಕಾಲೇಜು ದಿನಗಳಲ್ಲೇ ಹರಿಣಿ ನಡಿಗೆಯ ಜಾನಕಿಯನ್ನು ಇಷ್ಟಪಡುತ್ತಿದ್ದ. ರಮೇಶನ ಪ್ರೀತಿ ಬಲಿತದ್ದು ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿರ್ವಹಣೆಗೆಂದು ಆಕೆ ಪುಣೆಗೆ ಬಂದ ನಂತರವೇ. ಫೇಸ್ಬುಕ್ ಎಂಬ ಜಾಲತಾಣದ ಮೂಲಕ ಸಂಪರ್ಕಕ್ಕೆ ಸಿಕ್ಕಿದ್ದರು. ದಿನ ಕಳೆದಂತೆ ಚಾಟಿಂಗ್ ನಿಂದ ಬೆಳೆದ ಸ್ನೇಹ ಸೆಲ್ಫೋನ್ ನಂಬರ್ಗಳನ್ನು ಎಕ್ಸಚೇಂಜ್ ಮಾಡಿಕೊಳ್ಳುವಲ್ಲಿಗೂ ತಲುಪಿತ್ತು. ಕಾಲ್ ಮತ್ತು ಮೆಸೆಜ್ಗಳು ಮತ್ತಷ್ಟು ನಿಕಟತೆಯನ್ನ ಹೆಚ್ಚಿಸಿದ್ದವು. ತಾಸುಗಟ್ಟಲೆ ಫೋನಿನಲ್ಲಿ ಹರಟುವುದು ನಿತ್ಯದ ಕರ್ಮ. ಇಂತಿರಲು, ಒಂದು ದಿನ ಯಾವುದೋ ಕಾರಣಕ್ಕೆ ಜಾನಕಿ ತನ್ನ ಕೆಲಸದ ಕುರಿತು ಸಂಸ್ಥೆಯ ಅಡ್ರೆಸ್ ಜೊತೆಗೆ ತನ್ನ ದಿನಚರಿಯ ಸಮೇತ ವಿವರಿಸಿದ್ದುದು ರಮೇಶನಿಗೆ ಥಟ್ಟನೆ ಹೊಳೆಯಿತು. ಎಂದಿನಂತೆಯೇ ಆ ದಿನದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಟ್ಟಿದ್ದರ ಪರಿಣಾಮವಾಗಿ ಆಕೆಯನ್ನು ಭೇಟಿ ಮಾಡಲೇಬೇಕೆನ್ನುವ ವಿಚಾರಕ್ಕೆ ಪುಷ್ಠಿ ಸಿಕ್ಕಂತಾಯಿತು.

ಜಾನಕಿಯ ಇಂಪಾದ ಧ್ವನಿ ಕೇಳಿ ರಿಲ್ಯಾಕ್ಸ್ ಆಗುವುದು ರಮೇಶನ ಆ ದಿನಗಳ ನಿತ್ಯದ ರೂಢಿಗಳಲ್ಲಿ ಒಂದು. ಆಕೆಯೇ ಧ್ವನಿಯೇ ಅಂಥದ್ದು. ತುಂಬ ಸೌಮ್ಯ. ಗಿಣಿಯ ಮುದ್ದು. ಪ್ರಶಾಂತವಾದ ನದಿಯ ಮೇಲೆ ಮಂದವಾಗಿ ಸೂಸುವ ತಣ್ಣನೆ ಗಾಳಿ. ಕೇಳ ಕೇಳುತ್ತಿದ್ದಂತೆ ಬಾವಪರವಶನಾಗಿ ಕುಳಿತುಬಿಡುತ್ತಿದ್ದ. ನಿತ್ಯವೂ ಹೊಸ ಹೊಸ ಕನಸು ಕಾಣುವವನಿಗೆ ಸ್ಪೂರ್ತಿ ಚಿಲುಮೆ. ಕಟ್ಟಿಕೊಂಡ ಕನಸುಗಳ ಗಮ್ಯದತ್ತ ಸಾಗಹೊರಟವನಿಗೆ ರೆಕ್ಕೆ ಪುಕ್ಕ ಕಟ್ಟಿ ಕೊಡುತ್ತಿತ್ತು ಆಕೆಯ ಧ್ವನಿ.

ಜಾನಕಿಯ ಧ್ವನಿಗೆ ಕಿವಿ ತಾಕಿಸಿಯೇ ನಿದ್ದೆಗೆ ಪರದೆ ಎಳೆಯುವ ರಮೇಶನ ಹುಚ್ಚು ಆಸೆಗಳ ಪರಿಣಾಮ ಎಂಬಂತೆ ವಾಯ್ಸ್ ಕ್ಲಿಪ್ಗಳ ಸಂಖ್ಯೆ 40 ದಾಟಿತ್ತು. ಲ್ಯಾಪ್ ಟಾಪಿನಲ್ಲಿ ಸಂಗ್ರಹಿಸಿಟ್ಟ 40 ಕ್ಲಿಪ್ಗಳ ಪೈಕಿ ತಲಾ ಒಂದು ಕ್ಲಿಪ್ 12 ರಿಂದ 15 ನಿಮಿಷದ ಸಂಭಾಷಣೆಯಿಂದ ಕೂಡಿತ್ತು. ಅಡ್ರೆಸ್ ನಮೂದಿಸಿರುವ ಕ್ಲಿಪ್ಪನ್ನು ಹೆಕ್ಕುವ ಹೊತ್ತಿಗೆ ಗೋಡೆಯ ಮೇಲೆ ನೇಣು ಹಾಕಿಕೊಂಡ ಗಡಿಯಾರದ ಕೈಗಳು ಮಾತ್ರ ತಿರುಗುವುದರ ಮೂಲಕ ತಮ್ಮ ಜೀವಂತಿಕೆಯನ್ನು ಪ್ರತಿಪಾದಿಸುತ್ತಿದ್ದವು. ಸಣ್ಣ ಮುಳ್ಳು 1 ನ್ನು ತೋರಿಸಿದರೆ ದೊಡ್ಡದು 3 ನ್ನು ತೋರಿಸುತ್ತ ಜಾನಕಿಯೆಡೆಗಿನ ರಮೇಶನ ತುಡಿತಗಳನ್ನು ಧಾಕಲಿಸುತ್ತಲೇ ಇದ್ದವು.

ಬೆಳಗಿನ ಜಾವ 5.30 ಕ್ಕೆ ರೆಡಿ ಆಗಿ ಗೆಳೆಯನೊಬ್ಬನ ಗೃಹಪ್ರವೇಶಕ್ಕೆ ಸಾಂಗ್ಲಿಗೆ ಹೊರಟಿರುವುದಾಗಿ ಮನೆಯವರಿಗೆ ಸಣ್ಣದೊಂದು ಸುಳ್ಳು ಹೇಳಿ ಜಾನಕಿಯನ್ನು ನೋಡಲು ಹೊರಟು ನಡೆದ.

6 ಗಂಟೆಗೆ ಗೋಕಾಕನಿಂದ ಪ್ರಯಾಣ ಶುರುವಾಯಿತು. ಧ್ಯಾನಸ್ಥಾಗಿ ಕುಳಿತಿದ್ದವನಿಗೆ ಭಂಗ ತಂದದ್ದು ಚಿಕ್ಕೋಡಿಗೆ ಸೇರಿಕೊಳ್ಳುವ ರಸ್ತೆ. ಕಚ್ಚಾ ರಸ್ತೆಗಿಂತಲೂ ಕಿತ್ತೋದ ಪಕ್ಕಾ ಎಂದು ಕರೆಯಲ್ಪಡುವ ರಸ್ತೆ ಅದು. ಈ ರಸ್ತೆಗಳ ಗೋಳೇ ಇಷ್ಟು. ಮೊನ್ನೆ ಮೊನ್ನೆ ಇಲೆಕ್ಷನ್ ಟೈಮ್ನಲ್ಲಿ ರಸ್ತೆಗಳೆಲ್ಲ ಟಾರ್ ಚಮತ್ಕಾರಕ್ಕೆ ಕಪ್ಪಗೆ ಮಿಣಮಿಣ ಮಿನುಗುವುದಲ್ಲದೇ ನುಣುಪಾಗಿ ಕಂಗೊಳಿಸುತ್ತಿದ್ದವು. ಈಗ ನೋಡಿದರೆ ಅರೆಬೆತ್ತಲಾಗಿ ಅಲ್ಲಲ್ಲಿ ತಗ್ಗುಗಳನ್ನು ಕಾಣಿಸಿಕೊಂಡು ಉಸ್ಸಪ್ಪ ಸಾಕು ಸಾಕು ಅನ್ನಿಸುತ್ತಿದೆ ಎಂದು ತನ್ನಲ್ಲೇ ಗೊಣಗಿಕೊಂಡ. ಚಿಕ್ಕೋಡಿ ತಲುಪುವುದರೊಳಗೆ ಧೂಳಿಡಿದ ಮುಖ ಒರೆಸುಷ್ಚರಲ್ಲಿ ಜೀವ ಹೈರಾಣಾಗಿದ್ದಂತೆ ಕಂಡಿತು. ಅಲ್ಲಿಂದ ಬೆಳಗಾವಿ-ಬಿಜಾಪೂರ ಬಸ್ ಹಿಡಿದು ಕೇವಲ ಅರ್ಧ ಗಂಟೆಯಲ್ಲಿ ಶಿರಗುಪ್ಪಿ ತಲುಪಿದ ಮೇಲೆ ಗೆಲುವಾದ.

ಬಸ್ಸಿನಿಂದ ಗಡಬಡಿಯಲ್ಲಿ ಇಳಿದು ಮೊಬೈಲ್ ನೋಡುವಾಗ ವೇಳೆ ಕೇವಲ 8.30. ಇನ್ನೂ  ಟೈಮ್ ಇರುವುದ ಕಂಡು ನಿರಾಳವಾದ.

ಜಾನಕಿ ತನ್ನ ಹಳ್ಳಿಯಿಂದ ಶಿರಗುಪ್ಪಿಯವರೆಗೂ ಸ್ಕೂಟಿನಲ್ಲಿ ಬರುತ್ತಾಳೆ. ನಂತರ ಶಿರಗುಪ್ಪಿಯ ತನ್ನ ರಿಲೆಟೀವ್ ಮನೆಯಲ್ಲಿ ಸ್ಕೂಟಿ ಬಿಟ್ಟು ಅಲ್ಲಿಂದ ಕರೆಕ್ಟಾಗಿ 9 ರ ಮಿರಜ್ ಬಸ್ ಹತ್ತುತ್ತಾಳೆ ಎಂಬುದು ರಮೇಶನಿಗೆ ಖಚಿತವಾಗಿ ಅಲ್ಲದಿದ್ದರೂ ಆಕೆಯ ಫೋನಿನ ಕಾನ್ವರ್ಜೇಶನ್ ಆಧಾರದ ಮೇಲೆ ನಂಬಿಕೆ ಇರಿಸಿ ಅಲ್ಲಿ ಕಾಯುತ್ತಿದ್ದ. ಅವನ ನಂಬಿಕೆ  ಹುಸಿ ಆಗಲಿಲ್ಲ ಕೂಡ. ಈ ದಿನ ತನ್ನ ಹೃದಯವನ್ನೆಲ್ಲ ತೆರೆದಿಟ್ಟು ಆಕೆಯಲ್ಲಿ ತನಗಿರುವ ಪ್ರೀತಿಯನ್ನು ಹೇಳಿಕೊಳ್ಳಬೇಕೆನ್ನುವ ಛಾತಿ ಇಟ್ಟುಕೊಂಡು ಅವಳು ಬರುವುದನ್ನೇ ತದೇಕಚಿತ್ತದಿಂದ ಧ್ಯಾನಿಸುತ್ತಿದ್ದ.

ಸ್ವಭಾವತಃ ತುಂಬು ಸೌಜನ್ಯನಾದ ರಮೇಶ ಈ ರೀತಿ ಒಂದು ಹುಡುಗಿಯನ್ನು ಫಾಲೋ ಮಾಡಿ ಅವಳ ದೃಷ್ಟಿಯಲ್ಲಿ ಚೀಪ್ ಅನ್ನಿಸಿಕೊಳ್ಳುತ್ತೇನೆ ಎನ್ನುವುದು ಅವನಿಗೆ ಮನವರಿಕೆಯಾಗಿತ್ತಾದರೂ, ಈ ದಿನ ಹೀಗೆ ಧಿಡೀರನೆ ಇಲ್ಲಿ ಪ್ರತ್ಯಕ್ಷವಾಗುವುದರ ಹಿಂದೆ ಕೆಲವು ಕಾರಣಗಳೂ ಇದ್ದವು.

              *****

ಕೆಲಸದಲ್ಲಿನ ಒತ್ತಡಗಳ ನಡುವೆಯೂ ತನ್ನದಲ್ಲದ ಈ ಮಹಾನಗರಿಯಲ್ಲಿನ ಯಾಂತ್ರಿಕ ಜೀವನಕ್ಕೆ ಬೇಸತ್ತು ನೆಮ್ಮದಿ ಅರಸುತ್ತ, ಬಾಯಿತುಂಬ ಕನ್ನಡ ಮಾತಾಡಲು ಹಸಿದ ಮಗುವಿನಂತೆ ರಮೇಶ್ ತಿಂಗಳಲ್ಲಿ ಎರಡುಬಾರಿ ಪುಣೆಯಿಂದ ಗೋಕಾಕಗೆ ಹೋಗಿ ಬಂದು ಮಾಡುತ್ತಿದ್ದ. 

ಪುಣೆ ಲೈಫಿಗೆ ಒಗ್ಗಿಕೊಂಡು 3  ವರ್ಷ ಆಗಿತ್ತು. ಆದರೂ, ಸ್ವಂತ ಊರಿಗೆ ಬಂದರೆ ತನ್ನ ಕೆಲವು ರೂಢಿಗಳನ್ನು ಮೂಲಭೂತ ಕರ್ತವ್ಯಗಳೇನೊ ಎನ್ನುವಷ್ಟು ಆಸ್ಥೆವಹಿಸಿ ನಿರ್ವಹಿಸುತ್ತಿದ್ದ. ಅವುಗಳಲ್ಲಿ: ಕನ್ನಡ ಚಿತ್ರರಂಗದ ಅಪ್ಪಟ ಅಭಿಮಾನಿಯಾದ ಅವನು ಪ್ರತಿ ಬಾರಿಯೂ ಒಂದೊಳ್ಳೆಯ ಕನ್ನಡ ಸಿನೆಮಾ ನೋಡುವುದು. ಹಾಗೂ ಹೊಲ ಮನೆಯ ಕೆಲಸ ಮತ್ತು ಕೊಡು-ತೆಗೆದುಕೊಳ್ಳುವ ವ್ಯವಹಾರಗಳಲ್ಲಿ ಅಪ್ಪನ ಜೊತೆಗಿರುವುದು. ಹಾಗೆಯೇ ಮಾವನ ಮಗಳು ಪ್ರಮಿಳೆ ಮನೆಗೂ ಭೇಟಿ ಕೊಡುವುದು.

ರಮೇಶ್ ಮತ್ತು ಪ್ರಮಿಳ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಊರಿಗೆ ಹೋದಾಗಲೆಲ್ಲ ಪ್ರಮಿಳ ಮನೆಗೂ ಭೇಟಿ ನೀಡಿ ಆಕೆಯೊಡನೆ ಒಂದಷ್ಟು ಹರಟುವುದು ರಮೇಶನಿಗೆ ಪರಿಪಾಠವಾಗಿತ್ತು. ಕೇವಲ ಅವಳಷ್ಟೇ ಅಲ್ಲ ಅವಳ ಅಣ್ಣ ತಮ್ಮಂದಿರು ಸಹ ತುಂಬ ಆಪ್ತರು. ಅವರೆಲ್ಲ ತನಗೆ ಸಮಾನ ಮನಸ್ಕರರೂ ಹಾಗೂ ಓರಗೆಯವರೆನ್ನುವ ಒಂದೇ ಒಂದು ಕಾರಣಕ್ಕೆ ಚೋಟುದ್ದ ಇದ್ದಾಗಿನಿಂದಲೂ ಅವರ ಸ್ನೇಹ ಇವತ್ತಿನವರೆಗೂ ಮುಂದುವರೆದುಕೊಂಡು ಬಂದಿತ್ತು. ರಮೇಶನಿಗೂ ಪ್ರಮಿಳೆಗೂ ಗೆಳೆತನವಿತ್ತೆ ಹೊರತು ಅದರಾಚೆಗೆ ಮತ್ಯಾವುದೇ ಭಾವನೆಗಳು ಅವರನ್ನು ಬಂಧಿಸಿರಲಿಲ್ಲ. 

ರಮೇಶ್ ಇಂಜಿನಿರಿಂಗ್ ಓದಿ ಪುಣೆಯಲ್ಲಿ ಕೆಲಸ ಮಾಡಲು ಎಂದು ಶುರುವಿಟ್ಟೆನೋ ಅಂದಿನಿಂದ ಅವನ ತಾತನಿಗೆ ಅದೇನೋ ಖುಷಿ. ರಮೇಶ್ ಅವರ ಮನೆಗೆ ಭೇಟಿ ನೀಡುವುದಕ್ಕೂ, ಪ್ರಮಿಳ ತನ್ನ ಮಾವನ ಮಗಳಾಗಿರುವುದಕ್ಕೂ, ಅವರಿಬ್ಬರೂ ಮುಚ್ಚು ಮರೆಯಿಲ್ಲದೇ ಮುಕ್ತವಾಗಿ ಮಾತನಾಡುವುಕ್ಕೂ, ಹಾಗೂ ರಮೇಶನ ತಾಯಿಗೆ ತವರು ಮನೆಯ ಹೆಣ್ಣನ್ನು ತನ್ನ ಸೊಸೆ ಮಾಡಿಕೊಳ್ಳುವುದಕ್ಕೂ ಅತೀವ ಬಯಕೆ ಇದ್ದುದರಿಂದಲೋ ಏನೋ ಇತ್ತೀಚೆಗೆ ಒಂದೆರಡು ಬಾರಿ ಹೀಗೆಯೇ ಮಾತು ಮಾತಿನಲಿ ರಮೇಶನ ತಾತ ಮದುವೆಯ ವಿಚಾರ ಎತ್ತಿದ್ದರು. ಅದನ್ನು ಕೇಳಿದಾಗಿನಿಂದಲೇ ರಮೇಶನಿಗೆ ಸಂಕಟ ಶುರುವಾಗಿದ್ದು. ತಾನು ಮನಸಾರೆ ಇಷ್ಟಪಡುವ ಹುಡುಗಿಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಆಕೆಯೊಡನೆಯೇ ಬದುಕು ಕಟ್ಟಿಕೊಳ್ಳಬೇಕೆಂದು ಕೊರೆವ ಚಳಿಯಲಿ ಎದ್ದು ಹೀಗೆ ಜಾನಕಿಗಾಗಿ ಪರಿತಪಿಸಿ ಓಡಿ ಬಂದುದಾಗಿತ್ತು.

ಮೀರಜ್ ತಲುಪುವಷ್ಟರಲ್ಲಿ 9.30 ಆಗಿರುತ್ತದೆ. ಜಾನಕಿ ಜೊತೆ ಕಾಫಿ ಡೇ ನಲ್ಲಿ ಕೂತು ಮಾತಾಡುತ್ತ ಕಾಫಿ ಹೀರಬಹುದು ಎಂದು ಲೆಕ್ಕಾಚಾರ ಹಾಕುತ್ತ ತಿಂಡಿ ತಿನ್ನುವ ಪ್ರಮೇಯಕ್ಕೆ ಹೋಗದೆ ಅವಳು ಬರುವುದನ್ನು ಎದುರುಗೊಳ್ಳುತ್ತ ನಿಂತುಕೊಂಡ.

              *******
ಆ ಕಡೆಯಿಂದ ಮೀರಜ್ ಬಸ್ಸು ಬರುವುದು ಕಂಡ ರಮೇಶ್  ಒಂದು ಕ್ಷಣ ವಿಚಲಿತನಾದ. ಜಾನಕಿ ಇನ್ನೂ ಬಂದಿರಲಿಲ್ಲ. ಅಲ್ಲಿಯೇ ನಿಂತುಕೊಂಡರೆ ಆಕೆ ತನ್ನನ್ನು ಗುರುತಿಸಬಹುದು ಎಂದೆನಿಸಿ ಸ್ವಲ್ಪ ಮರೆಯಲ್ಲಿ ನಿಂತು ಗುರುತು ಸಿಗಕೂಡದೆಂದು ಮುಖಕ್ಕೆ ಕರ್ಚಿಫು ಕಟ್ಟಿಕೊಂಡ. ಆಕೆ ಓಡಿ ಬಂದು ಬಸ್ಸು ಹತ್ತುವದನ್ನು ಗಮನಿಸಿ ಆಕೆಯ ಹಿಂದೆಯೇ ಧಡಬಡಾಯಿಸಿ ಬಸ್ ಹತ್ತಿದ.

ಜಾನಕಿಯೊಂದಿಗೆ ಏನೆಲ್ಲ ಮಾತಾಡಬೇಕು ತನ್ನನ್ನು ಹೀಗೆ, ಇಲ್ಲಿ ಕಂಡರೆ ಆಕೆಯ ರೆಸ್ಪಾನ್ಸ್ ಹೇಗೆಲ್ಲ ಬರಬಹುದು? ಎಂಬಿತ್ಯಾದಿಗಳನ್ನು ಊಹಿಸಿಕೊಳ್ಳುತ್ತ, ಅವಳನ್ನು ಸಮಾಧಾನಿಸಿ ಮಾತನಾಡುವ ತಂತ್ರಗಳನ್ನು ಹುಡುಕುವಲ್ಲಿ ಮಗ್ನನಾದವನಿಗೆ ಮಿರಜ್ ತಲುಪಿದ್ದು ಗಮನಕ್ಕೆ ಬಂದದ್ದು, 'ಭಾಯಿ ಸಹಾಬ್, ಉತರಿಯೇ. ಯಹೀ ಸ್ಟಾಪ್ ಬೋಲೇ ಥೆ ಆಪ್' ಎನ್ನುವ ಕಂಡಕ್ಟರನ ಗಡಸು ಧ್ವನಿ ಕೇಳಿಯೆ.

ಮಿರಜ್ ನಿಂದ ಒಂದು ಸಿಟಿ ಬಸ್ ಮೂಲಕ ಜಾನಕಿಯನ್ನು ಫಾಲೋ ಮಾಡುತ್ತಲೇ ನಡೆದ. ಬಸ್ ಇಳಿದ ಜಾನಕಿ ತನ್ನ ಆಫೀಸಿರುವ ದಿಕ್ಕಿನೆಡೆಗೆ ದೊಡ್ಡದಾಗಿ ಹೆಜ್ಜೆ ಹಾಕುತ್ತ ನಡೆಯುದನ್ನು ಕಂಡು, ಕೂಡಲೇ ಆಕೆಯ ಫೋನಿಗೆ ಕರೆ ಮಾಡಿದ. ಕಾಲ್ ಬರುವುದನ್ನು ನೋಟಿಸ್ ಮಾಡಿದರು ಆಕೆ ಫೋನ್ ತೆಗೆಯದಿರುವುದು ರಮೇಶನಲ್ಲಿ ದಿಗಿಲು ಹುಟ್ಟಿಸಿತು.

ಜಾನಕಿ.. ಜಾನಕಿ.. ಎಂದು ಕೂಗುತ್ತ ಆಕೆಯ ಹಿಂದೆಯೇ ಅವಸರದ ಹೆಜ್ಡೆಗಳನ್ನು ಇರಿಸತೊಡಗಿದ. ತಾನು ಜಾನಕಿ ಅಲ್ಲವೇ ಅಲ್ಲ ಎನ್ನುವ ರೀತಿಯಲ್ಲಿ ಜಾನಕಿ ಹೆಜ್ಜೆ ಹಾಕುತ್ತಿದ್ದಳು.
"ನೀನು ಜಾನಕಿ ಅಂತ ನನಗೆ ಗೊತ್ತು,
ನಿಲ್ಲು ಜಾನಕಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ". ಎಂದಾಗ ಜಾನಕಿ ಒಂದು ಕ್ಷಣಕ್ಕೆ ನಿಂತು ನಂತರ ಹೊರಳಿ ನೋಡಿದಳು. ಆಕೆ ಕೆಂಡಾಮಂಡಲವಾಗಿದ್ದು ಕಂಡು ರಮೇಶ್  ಭಯಭೀತನಾದ.

ದಯವಿಟ್ಟು ಬೈಬೇಡ ಜಾನಕಿ. ನಿನಗೆ ಯಾವೊಂದು ವಿಷಯವನ್ನು ತಿಳಿಸದೆ ಹೀಗೆ ನಿನ್ನನ್ನು ಫಾಲೋ ಮಾಡುತ್ತ ಹೊರಟುಬಂದೆ ಎಂದು ಒಂದೇ ಉಸಿರಿನಲ್ಲಿ ಉಸುರತೊಡಗಿದ."ರಮೇಶ್, ದಯವಿಟ್ಟು ನನ್ನ ಫಾಲೋ ಮಾಡಬೇಡಿ. ನಮ್ ರಿಲೇಟಿವ್ಸ್ ಯಾರಾದ್ರೂ ನೋಡಿದ್ರೆ ಇಬ್ಬರೂ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೇವೆ. ಮೊದಲು ಇಲ್ಲಿಂದ ಹೊರಟುಬಿಡಿ"ಎಂದಳು ಜಾನಕಿ. ಜಾನಕಿಯ ಮುಖವನ್ನೇ ನೋಡುತ್ತಿದ್ದ ರಮೇಶನ ಎದೆಯಬಡಿತ ಒಂದು ಕ್ಷಣಕ್ಕೆ ನಿಂತ ಅನುಭವ! ಎವೆ ಇಕ್ಕದೇ ನೋಡುತ್ತಲೇ ಇದ್ದ. ನಿರ್ಭಾವುಕಿಯಂತೆ ಕಂಡ ಜಾನಕಿ ಮಾತ್ರ ತನಗೂ ರಮೇಶನಿಗೂ ಯಾವುದೇ ತೆರನಾದ ಸಂಬಂಧವಿಲ್ಲ ಎಂಬಂತೆ ಅಲ್ಲಿಂದ ಹೆಜ್ಜೆ ಕಿತ್ತಿದಳು. ತನ್ನ ಮೇಲೆ ಕಿಂಚಿತ್ತೂ ಪ್ರೀತಿ ಇಲ್ಲ ಎನ್ನಿಸಿಬಿಟ್ಟಿತು ರಮೇಶನಿಗೆ. ಗಂಟಲು ಕಟ್ಟಿಬಂದು ಬಲಹೀನನಾಗಿ ಕುಸಿದು ಬೀಳುವಂತವನಾದ.

ಗೋಕಾಕನಿಂದ ನೂರಾರು ಮೈಲಿ ಪ್ರಯಾಣಿಸಿ ಸಾಂಗ್ಲಿವರೆಗೆ ರಮೇಶ್ ಬಂದಿದ್ದೇ ಜಾನಕಿಗಾಗಿ. ದೂರದಿಂದ ಬಂದವನನ್ನು ಕಂಡು ಪ್ರೀತಿಯಿಂದ ಎರಡು ಮಾತೂ ಆಡದೆ ಖಾರವಾಗಿ ರೆಸ್ಪಾನ್ಸ್ ಮಾಡಿದಳಲ್ಲ! ರಮೇಶನಿಗೆ ಅಚ್ಚರಿಯ ಜೊತೆಜೊತೆಗೆ ತನ್ನ ಜೊತೆ ಫೋನಲ್ಲಿ ತಾಸುಗಟ್ಟಲೆ ಹರಟುತ್ತಿದ್ದ ಹುಡುಗಿ ಇವಳೇನಾ ಎನ್ನುವ ಗುಮಾನಿಯೂ ಹುಟ್ಟಿತು. ಹೆಗಾದರೂ ಮಾಡಿ ತನ್ನ ಪ್ರೀತಿಯನ್ನು ಗೆದ್ದು ಬಿಡಬೇಕೆಂದು ಹುಂಬತನದಿಂದ ಹೊರಟುಬಂದ ರಮೇಶನ ಹೃದಯ ಚೂರು ಚೂರಾಗಿತ್ತು. "ರಮೇಶ್, ದಯವಿಟ್ಟು ಇಲ್ಲಿಂದ ಹೊರಟುಬಿಡಿ" ಎಂದು ಜಾನಕಿ ಹೇಳಿದಾಗ ಜಾನಕಿ ಮೇಲಿನ ಪ್ರೀತಿಗೋ, ಆಕೆಯ ಬಗ್ಗೆ ಬೇರೆಯವರು ಏನೆಂದುಕೊಂಡಾರು ಎಂಬ ಕನಿಕರಕ್ಕೋ ಅಥವಾ ತನ್ನದೇ ಮೂರ್ಖತನಕ್ಕೋ ಏನೋ ಆಕೆಯನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ಮತ್ತೆ ಹೋಗದೇ ರಮೇಶ್ ಅಲ್ಲಿಂದ ಹೊರಡಲು ನಿಶ್ಚಯಿಸಿದ. ಆಕೆಯನ್ನು ಮನಸ್ಸಿನಿಂದ ಅಳಿಸಿ ಹಾಕಬೇಕು ಎಂದುಕೊಂಡು ಸೋತ ಹೆಜ್ಜೆಗಳನ್ನಿಡುತ ತನ್ನ ಗೂಡು ಸೇರಿದ.

             ******

ರಮೇಶನ ಅಜ್ಜಿ ಅದಷ್ಟೇ ಊಟ ಮಾಡಿ ಕಟ್ಟೆಗೆ ಕೂತು ತನ್ನ ಓರಗೆಯ ಅಜ್ಡಿಯರೊಡನೆ ಜೋರಾಗಿ ಮಾತಿಗೆ ಇಳಿದಿತ್ತು,"ಪಾಟೀಲ ಕಿಟ್ಟಪ್ಪ ಗೌಡ್ರು ಮಗಳನ್ನ ತೋರ್ಸಾಕ ಸುರು ಮಾಡ್ಯಾರ ಕಾಣ್ತದ. ಹ್ವಾದ್ ಐತಾರ್ ಜಾನಕವ್ವ ಊರಿಗಿ ಬಂದ್ ಹ್ವಾದ್ರ. ಎನ್ನುವ ಅಜ್ಜಿ ಮಾತು ರಮೇಶನ ಕಿವಿಗಳನ್ನು ನೆಟ್ಟಗಾಗಿಸಿದವು.

ಜಾನಕಿ ತಂದೆ ಕೃಷ್ಣೇಗೌಡರು ಮೂಲತಃ ಗೋಕಾಕನವರೇ. ಕೃಷ್ಣೇಗೌಡರ ಮಡದಿ ವೆಂಕಟಸುಬ್ಬಮ್ಮ ತನ್ನ ತಂದೆ ತಾಯಿಗೆ ಏಕೈಕ ಸಂತಾನವಾದ್ದರಿಂದ ಹೊಲ-ಮನೆ, ದನ-ಕರ, ಆಳು-ಕಾಳು ಎಲ್ಲ ಉಸ್ತುವಾರಿ ನೋಡಿಕೊಳ್ಳುವ ಕಾರಣಕ್ಕೆ ಕೃಷ್ಣೇಗೌಡರು ಇರುವ ಇಬ್ಬರು ಅಣ್ಣಂದಿರು ಮಲಗೌಡ ಹಾಗು ರುದ್ರಗೌಡರಿಗೆ ತಮ್ಮ ಪಾಲಿಗೆ ದಕ್ಕುವ ಎಲ್ಲ ಆಸ್ತಿಯನ್ನು ಅಣ್ಣಂದಿರಿಗೆ ಉಣ್ಣಲು ಬಿಟ್ಟು ಶಿರಗುಪ್ಪಿಯಲ್ಲಿ ಉಳಿದುಕೊಂಡಿದ್ದಾಗಿತ್ತು. ಗೌಡಕಿತನದ ಗತ್ತು ಇರುವುದರಿಂದಲೇ ಮಲಗೌಡ ಮತ್ತು ರುದ್ರಗೌಡರೇ ಊರಿನ ಎಲ್ಲ ಕಾರೋಬಾರುಗಳನ್ನು ನೋಡಿಕೊಳ್ಳುತ್ತಿದ್ದರು. ತಲೆಮಾರುಗಳಿಂದ ಪಾಟೀಲರ ಮನೆತನಕ್ಕೆ ಒಂದು  ಘನತೆಯಿತ್ತು. ಗೌರವವಿತ್ತು.

ಈ ಹೊತ್ತು ಈ ಅಜ್ಜಿಯರೆಲ್ಲ ಜಾನಕಿ ಅಪ್ಪ ಕೃಷ್ಣೇಗೌಡರ ಬಗ್ಗೆ ಮಾತನಾಡುತ್ತಿರುವವರಲ್ಲ. ಏಕಿರಬಹುದು? ಕೇಳಿಯೂ ಕೇಳದವನಂತೆ ತಲೆದಿಂಬಿಗೆ ಒರಗಿ ನಿದ್ರಿಸುವವನಂತೆ ನಟಿಸುತ್ತಿದ್ದ ರಮೇಶ್ ತನ್ನ ಕಿವಿಗಳನ್ನು ಅವರೆಡೆಗೆ ಚಾಚಿಬಿಟ್ಟ.

ಕಿಟ್ಟಪ್ಪ ಗೌಡ್ರೀಗಿ ಇದ್ದುದ್ದುವ ಯಾಡ ಹೆಣ್ಮಕ್ಕಳು. ದ್ವಾಡ್ದ ಹುಡುಗಿ ಸೀತವ್ವನವ್ರು ಶಾ$ರ ಆಪೀಸ್ನ್ಯಾಗ ಕೆಲಸ ಮಾಡಕೋಂತ ಅಲ್ಲೇ ತಮ್ಮ ಕೂಡ ಕೆಲಸ ಮಾಡ್ತಿದ್ ಹುಡುಗನ ಪಸಂದ್ ಮಾಡಿದ್ರಂತ. ಮದ್ವಿ ಅಂತ ಏನರ ಆದ್ರ ತಾ ಪಸಂದ ಮಾಡಿದ ಹುಡುಗನ ಕೂಡ ಆಗುದು ಅಂತ ಹಠ ಮಾಡಿದ್ರಂತ. ಮನ್ಯಾಗ ಒಪ್ಪಲ್ಲಿಲ್ಲ ಆಗಾನ ಮನಿಯವರಿಗೂ ಹೇಳದ, ಆ ಹುಡುಗನ ಜತಿಲಿ ರಿಜಿಸ್ಟ್ರ ಆಪೀಸ್ನ್ಯಾಗ ಹಾರಾ ಬದ್ಲಿ ಮಾಡ್ಕೊಂಡ್ ಮನಿ ಬಿಟ್ಟ್ ಹ್ವಾದ್ರಂತ. ಎಂದು ಮತ್ತೊಂದು ಅಜ್ಜಿ ಹೇಳುವಾಗ ರಮೇಶನ ಕಿವಿಗಳು ಮತ್ತಷ್ಟು ಚುರುಕುಗೊಂಡಿದ್ದವು.

ಜಾತಿ, ಕುಲ, ಗೋತ್ರ ಗೊತ್ತಿಲ್ಲದ ಹುಡುಗನ ಜತಿ ಮದ್ವಿ ಆಗ್ಯಿ ಮನಿತನದ ಮರಿಯಾದಿ ಮಣ್ಣ ಪಾಲ ಮಾಡಿದ್ಳಲ್ಲ ಅಂತ  ರುದ್ರಗೌಡ್ರು ಸೀತವ್ವನವರ ಮ್ಯಾಗ ಕೆಂಡದಂಗ ಸಿಟ್ ಮಾಡ್ಕೊಂಡಿದ್ರು.
ಜಾನಕವ್ವನವರೂ ಎಲ್ಲಿ ಸೀತವ್ವನವರ ಹೆಜ್ಜಿ ತುಳದ ಗಿಳದಾರು ಅನ್ನು ಹೆದರಿಕಿ ರುದ್ರಗೌಡ್ರಿಗಿ. ಪುಣಾದಾಗ ಕೆಲಸ ಮಾಡು ಕೂಸಿನ ಬಿಡಿಸಿ ಶಿರಗುಪ್ಪಿ ಮನಿಗಿ ಕರ್ಸ್ಕೊಂಡ್ರು. ಸಾಂಗ್ಲಿಗಿ ಜಾಬ್ ಮಾಡಿಸ್ಯಾರಂತ. ಜಾನಕವ್ವನವರು ಈಗ ಶಿರಗುಪ್ಪಿಯಿಂದ ಹೋಗಿ ಬಂದು ಮಾಡ್ತಾರಂತ ಎಂದು ಅಜ್ಜಿ ಹೇಳುವಾಗಲೇ ಆರು ತಿಂಗಳುಗಳಿಂದ ಮೌನವಾಗಿದ್ದ ಜಾನಕಿ ನಿಧಾನವಾಗಿ ರಮೇಶನಿಗೆ ಅರ್ಥವಾಗತೊಡಗಿದಳು.  ಬೆಳಿಗ್ಗಿನ ಆಕೆಯ ಬಿರುನುಡಿಯ ಹಿಂದಿನ ಮೃದುತನಕ್ಕೆ ರಮೇಶ್ ಮತ್ತೇ ಕಂಪಿಸಿದ. ಕುಟುಂಬ ಪ್ರೀತಿಯಲ್ಲಿ ಜಾನಕಿ ಕಟ್ಟುಬಿದ್ದಿದ್ದಳು. ಆಕೆಯ ಅಸಹಾಯಕತೆಗೆ ರಮೇಶನ ಕಣ್ಣು ತುಂಬಿ ಬಂತು. ಎದೆಯೊಳಗೆ ಅವಳ ಪ್ರೀತಿಯನ್ನ ಮತ್ತಷ್ಟು ಹಬ್ಬಿಸಿಕೊಂಡು ನಿದಿರೆಗೆ ಜಾರಿದ.

ಝುನುಗುಡುವ ಚಳಿ ರಾತ್ರಿಯಲ್ಲಿ ಜಾನಕಿಯ ನೆನಪಿನ ಕಂಬಿಯೊಳಗೆ ಬಂಧಿಯಾಗುವ ವಿಸ್ಮಯದ ಕನಸು! ಆಹಾ ಅದೆಷ್ಟು ಸುಂದರ! ರಮೇಶ್ ಚಕಿತಗೊಂಡ. ಕುತೂಹಲಕ್ಕೆ ಕಣ್ಣು ತೆರೆದು ಸುತ್ತಲೂ ನೋಡಿದ. ಅವಳಿಗಾಗಿ ಹಪಹಪಿಸಿದ. ಹುಡುಕಾಡಿದ.ಇಲ್ಲ. ಅಲ್ಲೇನೂ ಇರಲಿಲ್ಲ. ಕಣ್ಣು ಹಾಯಿಸಿದಷ್ಟೂ ಬರೀ ಕತ್ತಲೆ.

-ರುಕ್ಮಿಣಿ ಎನ್.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
umesh desai
umesh desai
9 years ago

ಮೇಡಂ ಕತೆಯಲ್ಲಿ ಅಂಗ್ರೇಜಿ ಪದ ಬಹಳ್ ಆದವು ಈ ಫೇಸಬುಕ್ಕು, ಚಾಟಿಂಗ್ ಹೊರತಾಗಿಯೂ ಕತಿಗೋಳು ನಿಮ್ಮಿಂದ ಬರಲಿ.. 

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಭಾಳ ಹುಡುಗೀರ ಕತೇನೂ ಇಂಥದ್ದೇ ಆಗಿರುತ್ತೆ…… ಕುಟುಂಬದ ಹೆಸರಿನ ಹೆದರಿಕೆಗೆ ಚೆಂಡು ಕೊಟ್ಟಿರುತ್ತಾರೆ. ಚಂದಿದೆ ಕತೆ….ರುಕ್ಕಮ್ಮ.

2
0
Would love your thoughts, please comment.x
()
x