ಮೌನ ಕ್ಯಾನ್ವಾಸಿನಲ್ಲೊಂದು ಕುಸುರಿ – ಬಾರನ್: ಸಚೇತನ ಭಟ್

ಮಧ್ಯ ಪ್ರಾಚ್ಯದ ವಿಶಿಷ್ಟ ದೇಶ ಇರಾನ್, ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ಇರಾನಿನ ಭಾಷೆಯಾದ ಪರ್ಷಿಯಾ ಭಾಷೆಯಲ್ಲಿ ತಯಾರಾಗುವ ಸಿನಿಮಾಗಳಿಗೆ, ಅಲ್ಲಿನ ಪ್ರಸಿದ್ಧ ಜಮಖಾನದ ಸೂಕ್ಷ್ಮ ಕುಸುರಿ ಕೆಲಸದ ಪ್ರಭಾವವಿದೆ. ಜಗತ್ತಿನ ೩೦ ಪ್ರತಿಶತ ಜಮಾಖಾನಗಳು ಇರಾನಿ ಜನರ ಪಳಗಿದ ಕುಸುರಿಯಲ್ಲಿ ನೇಯಲ್ಪಡುತ್ತವೆ ಹಾಗೂ ಜಮಖಾನದೆಡೆಯಲ್ಲೆ ಬೆಳೆದ ಇರಾನಿನ ಸಿನಿಮಾ ಜಗತ್ತು,  ಜಮಖಾನದ ಕುಸುರಿಯಷ್ಟೇ ಅದ್ಭುತವಾದ ಚೆಂದನೆಯ ಆಪ್ತವಾದ ಮೆತ್ತಗಿನ ಮೋಹಕವಾದ ಸರಳವಾದ ಕಲಾಕೃತಿಯನ್ನು  ಪರದೆಯಲ್ಲಿ ಮೂಡಿಸಿಬಿಡುತ್ತದೆ. 

ಇರಾನಿ ಸಿನಿಮಾಗಳ ಜೀವಾಳವೆಂದರೆ ಸರಳತೆ ಮತ್ತು ಸೂಕ್ಷ್ಮತೆ. ಕಳೆದ ಏಕೈಕ   ಬೂಟಿನ ಜೋಡಿಯನ್ನು ಹುಡುಕುವ ಮಕ್ಕಳ ಅಸಹಾಯಕತೆ,  ಯಾರದೋ ಮಗುವಿಗೆ ತಂದೆಯಾಗಿ ತನ್ನನ್ನು ಒಪ್ಪಿಸಬೇಕಾದ ಸ್ಥಿತಿ , ಕೆಲಸ ಕಳೆದುಕೊಂಡ ಮಧ್ಯಮ ವರ್ಗದವನೊಬ್ಬನ ಜೀವನ,  ಅಕಸ್ಮಾತ ಆಗಿ ತರಗತಿಯಲ್ಲಿ ಅದಲು ಬದಲಿ ಆದ  ಗೆಳೆಯನೊಬ್ಬನ  ಪುಸ್ತಕ ಮುಟ್ಟಿಸುವ ಕಾತುರತೆ, ಹೊಸ ವರ್ಷಕ್ಕೆ ಸಾಕಲು ಬಂಗಾರದ ಮೀನು ತರಬೇಕೆಂಬ ಎಳೆಯ ಹುಡುಗಿಯ ಪ್ರಯತ್ನ, ಕಾಣುವ ಕಣ್ಣಿಲ್ಲದೆ ನೂಕಲ್ಪಟ್ಟವನ ಸಂಕಟ, ಕೈ ತಪ್ಪಿ ಚರಂಡಿಗೆ ಬಿದ್ದ ನೋಟನ್ನು ಹೊರ ತೆಗೆಯುವ ಮಕ್ಕಳ ಸಾಹಸ,..  ಹೀಗೆ  ಇರಾನಿನ ಸಿನಿಮಾದ ಕತೆ ಯಾವುದು ಬೇಕಾದರೂ ಆಗಬಹುದು. ಅವು ಎಲ್ಲಿಂದಲೋ ತಂದ, ಸಿದ್ಧಪಡಿಸಿ ಅಸಾದ್ಯ ಮೇಧಾವಿತನದಿಂದ ಹೆಣೆದ ತರ್ಕದ ಬಲೆಗಳಲ್ಲ. ಕತೆಗಳು ನಮ್ಮ, ನಿಮ್ಮ, ಅವರ, ಇವರ, ಮತ್ಯಾರದೋ ಮಧ್ಯದಲ್ಲಿ, ಇದಿರಿನಲ್ಲಿ, ಅಕ್ಕ ಪಕ್ಕ   ಘಟಿಸಿದ ನಿರುಪದ್ರವಿ ಘಟನೆಗಳು. ನಮ್ಮ ನಿಮ್ಮ ಕಣ್ಣಿನಲ್ಲಿ ಮಹತ್ವ ಕಳೆದಕೊಂಡ ಅಥವಾ ಅಸ್ತಿತ್ವವೇ ಇಲ್ಲದ ಸಾಮಾನ್ಯ ಘಟನೆಗಳು. ಅಲ್ಲಿನ ಪಾತ್ರಗಳು ಅಷ್ಟೇ ದೊಡ್ಡ ಕಣ್ಣಿನ, ಉಬ್ಬಿದ ಕೆನ್ನೆಯ ಪುಟ್ಟ ಪೋರಿ, ಚಿಂದಿ ಆಯುವ ಹುಡುಗ, ಸಾಧ್ಯವಾದಷ್ಟು ಸಣ್ಣಗೆ ಹೇರ್ ಕಟಿಂಗ್ ಮಾಡಿಸಿಕೊಂಡ  ಮುಗ್ದತೆಯಿನ್ನು ಮರೆಯಾಗದ ಚಿಕ್ಕ ಬಾಲಕ,      ಕಳೆದುಕೊಂಡ ಬೂಟು, ಕೈ ಇಲ್ಲದ ಮಗು, ಕಣ್ಣರಳಿಸಿದ ಆಕಳು, ತಂದೆ, ಇದ್ದಕ್ಕಿದ್ದಂತೆ ನಾಪತ್ತೆಯಾದ ಹುಡುಗಿ, ಕಳೆದುಕೊಂಡ ಕೆಲಸ,  ಯಾರಿಗೂ ಸಿಗದ, ಯಾವತ್ತೂ ಕೈಗೂಡದ ಮಧ್ಯಮ ವರ್ಗದ  ಪಾಪದ ಕನಸು, ಮರೆತುಹೋದ ನೋಟ್ಬುಕ್ , ಎಲ್ಲಿಯೋ ನೋಡಿದ ಹುಡುಗಿ,  ಆಗಷ್ಟೇ ಕಣ್ಣಿನ ಆಪರೇಶನ್ ಮಾಡಿಸಿಕೊಂಡು ಬಂದ ಮಧ್ಯ ವಯಸ್ಕ, ಗಡ್ಡ ಬಿಟ್ಟ  ಕಾಲರ್ ಕೊಳೆಯಾದ  ಬೆವರಿನ ಬಗಲಿನ ಮ್ಯಾಚೆ ಆಗದ  ಷರ್ಟ್ ಮತ್ತು ಪ್ಯಾಂಟ್ ಧರಿಸಿರುವ ಅಪ್ಪ, ಗಾಜಿನ ಭರಣಿಯಲ್ಲಿ  ಮೀನು ಸಾಕುವದೇ ಧ್ಯೇಯವಾದ ಜೀವನದಲ್ಲಿರುವ ಹುಡುಗ,  ಸಂಸಾರದ ಎಲ್ಲ ಭಾರ ಹೊತ್ತ ಪ್ರೌಢ ಅಮ್ಮ ,ಇದ್ದಕ್ಕಿದ್ದಂತೆ ಹಾಸಿಗೆಯಲ್ಲಿ ಮಲಗಲು ಬಂದ ಅನಾಥ ಮಗು, ಸಮುದ್ರದ ಅಲೆಗಳು, ರಸ್ತೆಯಲ್ಲಿನ ಹೊಂಡ, ಒಂದು ಕಪ್ ಚಹ, ನೀರಿನ ಹನಿಗಳು, ಸೋಪಿನ ನೊರೆಯಿಂದ ಬಣ್ಣಗಳ ನೋಡಿ ಚಪ್ಪಾಳೆ ತಟ್ಟುವ ಪುಟಾಣಿ ಹುಡುಗಿ, ತಂಗಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗಿರುವ ಮತ್ತು ತಾನು ಅವಳಿಗಿಂತ ದೊಡ್ಡವನು ಎಂದು ಓಡಾಡುವ ಇವನು, ಇಣುಕಿ ನೋಡುವ ಅವಳು, ಏನನ್ನೋ ಹೇಳ ಹೊರಟಿರುವ ಕಣ್ಣುಗಳು, ಅರ್ಧ ಕಟ್ಟಿದ ಕಟ್ಟಡ,  ಬೀದಿ ಕಟ್ಟೆಯಲ್ಲಿ ಸೋಮಾರಿಯಾಗಿ ಕುಳಿತ ಮನುಷ್ಯ..  ಹೀಗೆ ಇರಾನಿನ ಸಿನಿಮಾಗಳಲ್ಲಿನ ಪಾತ್ರಗಳು ಯಾವುದೋ ಲೋಕದಿಂದ ಅಥವಾ ಜಗತ್ತಿನ ಇನ್ಯಾವುದೋ ಮೂಲೆಯಿಂದ ಕೊಂಡು ತಂದ ಪಾತ್ರಗಳಲ್ಲ. ನಮ್ಮ ಸುತ್ತ ಮುತ್ತ ಓಡಾಡಿಕೊಂಡಿರುವ ನಮ್ಮವೇ ಜಗತ್ತಿನ ಒಂದಿಷ್ಟು ಕತೆಯನ್ನು ಅದರೊಳಗಿನ  ಪಾತ್ರಗಳನ್ನು ಜತನದಿಂದ ಎತ್ತಿ ಅವನ್ನು,  ಇದ್ದ ಹಾಗೆಯೇ ಅಷ್ಟೇ ಸರಳವಾಗಿ , ಫ್ರೇಮ್ ತೊಡಿಸಿ  ತೆರೆಯ ಮೇಲೆ ತಂದು ಬಿಟ್ಟ ಮೀಯಿಸಿ ಮಲಗಿಸುವ  ಮೊದಲು ಮೆತ್ತಗಿನ ಬಟ್ಟೆಯಲ್ಲಿ ಸುತ್ತಿಟ್ಟ ಪಿಳ್ಳೆಯ೦ತ  ಜೀವಗಳು. 

ಹೀಗೆ ಕತೆಗಳಿಗೆ ಫ್ರೇಮ್ ತೊಡಿಸುವ ಅದ್ಭುತ  ನಿರ್ದೇಶಕರಲ್ಲಿ ಮಜಿದ್ ಮಜಿದಿ ಸಹ ಒಬ್ಬರು. 

ಮೌನದ ಅರ್ಥ, ಮೌನದ ವಿವರಣೆ, ಮೌನದ ಪ್ರಖರತೆ  ಮಾತಿಗಿಂತ ಹೆಚ್ಚು. ಮೌನವೊಂದು ಹೇಳುವ ಕ್ರಿಯೆಯಲ್ಲಿ ಸಾವಿರ ಭಾವಗಳಿರುತ್ತವೆ, ಹಾವವೊಂದು ತೋರ್ಪಡಿಸುವ ಭಾವದಲ್ಲಿ ಮಾತಿಲ್ಲದ ಮೌನ ಬಹುಕಾಲ ಕಾಡುತ್ತದೆ. ಮಾತಿಗಿಂತ ಕಾಡುವದು ಮೌನ, ಕಾಡುವ  ಮೌನದಲ್ಲಿ ಕಟ್ಟಿದ ಕವನ ಬಾರನ್.  ಹೇಳದ ಪ್ರೀತಿಯೊಂದರ ಅದ್ಭುತ ಕಥಾನಕ ಬಾರನ್. 

 ಸಿನಿಮಾದ ಕಟ್ಟ ಕಡೆಯ ದೃಶ್ಯದ ತನಕ, ಹುಡುಗ – ಹುಡುಗಿಯ ನಡುವೆ ಪಸರಿಸುವ  ಮಾತಿಲ್ಲದ, ಸ್ಪರ್ಶವಿಲ್ಲದ ಭಾವಕ್ಕೆ ಪ್ರೀತಿಯೆಂದಾಗಲಿ, ಆಕರ್ಶಣೆಯೆಂದಾಗಲಿ, ಕನಿಕರವೆಂದಾಗಲಿ, ಕರುಣೆಯೆಂದಾಗಲಿ, ಹುಚ್ಚು   ಪ್ರೇಮವೆಂದಾಗಲಿ,ಇನ್ನೊಬ್ಬರ ಬದುಕಿನೊಳಗೆ ಇಣುಕುವ  ಕುತೂಹಲವೆಂದಾಗಲಿ ಅಥವಾ ಮನುಷ್ಯ ಸಹಜ ತೋರಿಕೆಗೆ ಮೀರಿದ ಇವೆಲ್ಲ ಭಾವನೆಗಳಿಗೆ ಹೊರತಾದ ಇನ್ಯಾವುದೋ  ಭಾವವೆಂದಾಗಲಿ   ಹೆಸರನ್ನು ಸೇರಿಸಲಾಗದು. ಅಥವಾ ಸಂಪ್ರದಾಯನಿಷ್ಠ ಸಮಾಜದ, ಗಂಡು ಹೆಣ್ಣು ಪರಸ್ಪರ ಮುಕ್ತವಾಗಿ ಸ್ನೇಹದಿಂದ ಇರುವದನ್ನು ನಿಷಿದ್ಧ ಎನ್ನುವ ಸಮಾಜದಲ್ಲಿ ಇಂತಹ ಅದೆಷ್ಟೋ ಭಾವನೆಗಳ ಪ್ರತೀಕವಾದ ಭಾವ ಮೂರ್ತಿಗಳೇ  ಎನ್ನುವ ಪ್ರಶ್ನೆ ಕಾಡುವದು ನಿಜ. 

ಸಿನಿಮಾದ ಕತೆ – ವಸ್ತು ಅತ್ಯಂತ ಸರಳವಾದುದು. ಟೆಹ್ರಾನ್ ನಲ್ಲಿ  ಇರಾನಿ ಹಾಗೂ  ಕೆಲವು ಕಾನೂನು ಬಾಹಿರವಾಗಿ  ಆಫ್ಘಾನ್ ಕೂಲಿಗಳು  ದುಡಿಯುತ್ತಿರುವ  ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ  ಹದಿನೇಳು ವರ್ಷದ ಬಾಲಕ ಲತಿಫ್  ಚಹಾ ಮಾಡಿಕೊಡುವ ಹುಡುಗನಾಗಿ  ಕೆಲಸ ಮಾಡುತ್ತಿರುವನು.  ಮುಂಗೋಪಿಯಾದ  ಲತಿಫ್ ಗೆ ಒಂದಿಲ್ಲೊಂದು ಕಾರಣದಿಂದ ಇತರರೊಡನೆ ಜಗಳ ಕಾಯುವದು ಅವನ ಕೆಲಸದ ಒಂದು ಭಾಗವೇ ಆಗಿದ್ದು ನಿಜ. ಕಟ್ಟಡ ನಿರ್ಮಾಣದ  ಆಫ್ಘಾನ್ ಸಹ ಕೆಲಸಗಾರನೊಬ್ಬ ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ಬರದೆ, ತನ್ನ ಬದಲು ಕಿರಿ ಮಗ ರಹಮತ್ ನನ್ನು ಕೆಲಸಕ್ಕೆ ಕಳಿಸಿದಾಗ.  ರಹಮತ್ ಇನ್ನು ಎಳೆಯ ಬಾಲಕನಾದ್ದರಿಂದ ಅವನಿಗೆ ಚಹಾ ಮಾಡುವ ಕೆಲಸವನ್ನು ವಹಿಸಿ, ಲತಿಫ್ ನಿಗೆ ಭಾರ ಹೊರುವ ಕೆಲಸವನ್ನು ಕೊಡಲಾಗುತ್ತದೆ. ಇದೇ ಕಾರಣದಿಂದ ಸಿಟ್ಟಿಗೆದ್ದ ಲತಿಫ್ ಸಮಯ ಸಿಕ್ಕಾಗೆಲ್ಲ ರಹಮತ್ ಗೆ ತೊಂದರೆ ಉಂಟುಮಾಡುವದರಲ್ಲಿ ಸಕ್ರೀಯನಾಗುತ್ತನೆ. ಆಕಸ್ಮಿಕವಾಗಿ ಒಂದು ದಿನ ಲತಿಫ್ ಗೆ ರಹಮತ್ ಗಂಡಿನ ಮಾರು ವೇಷದಲ್ಲಿ ಬಂದು ಕೆಲಸ ಮಾಡುತ್ತಿರುವ ಹುಡುಗಿ ಎನ್ನುವದು ಗೊತ್ತಾಗುತ್ತದೆ. ಅಲ್ಲಿಂದ ರಹಮತ್ ಮೇಲೆ ಮೃದು ಭಾವ ತಾಳುವ ಲತಿಫ್ ಆಕೆಗೆ ಬಹುತೇಕ ಕೆಲಸಗಳಲ್ಲಿ ಸಹಾಯ ಮಾಡತೊಡುಗುತ್ತಾನೆ. ಮಾತಿಲ್ಲದೆ ಲತಿಫ್ ಮೃದು ಭಾವವನ್ನು ಸ್ವೀಕರಿಸುವ  ರಹಮತ್ ಗೆ ಸಹಾಯ ಮಾಡುವದರಲ್ಲೇ ಖುಷಿ ಕಾಣುವ ಲತಿಫ್ ಬದುಕು ತೋರಿಸುವಲ್ಲಿನ ಅದ್ಭುತ ಫ್ರೇಮ್ ಗಳು ಚಿತ್ರದುದ್ದಕ್ಕೂ ತುಂಬಿಕೊಳ್ಳುತ್ತದೆ. ಲತಿಫ್ ಮತ್ತು ರಹಮತ್ ನಡುವೆ ನಡೆಯುವ ಮೌನ ಭಾವ ಸ್ಫುರಣೆಯ ದಿವ್ಯ ಅನುಭವ  ಬಾರನ್.  

ಬಾರನ್ ಸಿನಿಮಾ ನೋಡುಗರ ಆಳಕ್ಕೆ ಇಳಿದು ಕಣ್ಣೀರನ್ನು ಹರಿಸುವದಿಲ್ಲ, ಬದಲಾಗಿ ಹಿತವಾಗಿ,ತಾಕುತ್ತದೆ. ಪುರುಷನೊಬ್ಬನ ಭಾವನೆ ,  ವರ್ತನೆ ಹೇಗೆ ಮಹಿಳೆಯೊಬ್ಬಳ ಸಮಕ್ಷಮದಲ್ಲಿ ನಯವಾಗಿ ನಾಜೂಕಾಗಿ ಬದಲಾಗ ಬಲ್ಲದು ಎನ್ನುವದನ್ನು ಸಿನಿಮಾದ ಉದ್ದಕ್ಕೂ ದೃಶ್ಯಗಳು  ತೋರಿಸುತ್ತವೆ.  ಹುಡುಗಿಯೊಬ್ಬಳ ಆಕರ್ಷಣೆಗೊಳಗಾದ ಹುಡುಗ ಅವಳ ಉಪಸ್ಥಿತಿಯಲ್ಲಿ ಮೂರ್ತಗಟ್ಟುವ ರೀತಿಯನ್ನು ಹಿಡಿದಿಡುವ ಸೂಕ್ಷ್ಮ ಕಲೆಯ ಚಿತ್ರವಾಗಿ ಬಾರನ್  ಕಾಡುತ್ತದೆ. ನಮ್ಮ ನಿಮ್ಮ ನಡುವೆ ನಡೆದ ಅದೆಷ್ಟೋ ಮೃದು ಕತೆಯ ನಾಯಕ ನಾಯಕಿಯಾಗಿ ಲತಿಫ್ ಮತ್ತು ರಹಮತ್  ಕಾಣಿಸಿಕೊಳ್ಳುತ್ತಾರೆ. 

ಆಫ್ಘನ್ ವಲಸೆ ಕೂಲಿಗಳ ದುಸ್ಥಿತಿ, ಇರಾನಿ ಕೆಳ ವರ್ಗದ ಜನರ ಬದುಕು ಅಲ್ಲಿನ ಸಾಮಾಜಿಕ ಸ್ಥಿತಿಯ ನಡುವೆ ಎಲ್ಲವನ್ನು ಮೀರಿ ರಹಮತ್  ಎನ್ನುವ ಗಂಡು ಮಾರು ವೇಷ ದಲ್ಲಿನ ಹುಡುಗಿಯೆಡೆಗಿನ ಲತಿಫ್ ನ ತುಡಿತ  ದೇಶ ಕಾಲ ಎಲ್ಲವನ್ನು ಮೀರಿ ಮನ ಮುಟ್ಟುತ್ತದೆ. 

ಲತಿಫ್ ಆಗಿ ಅದ್ಭುತ ಅಭಿನಯ ನೀಡಿರುವ  ಯುವ ನಟ  ಹುಸೇನ್ ಅಬ್ಡಿನಿ ಹಾಗೂ ರಹಮತ್ ಪಾತ್ರದಲ್ಲಿ ಜಹರಾ ಬಹ್ರಾಮಿ ಅವರ ಸಾಮರ್ಥ್ಯಕ್ಕೆ ಒಂದು ಸಲಾಂ. 

ಮಜಿದ್ ಮಜಿದಿ ಸಿನಿಮಾಗಳಲ್ಲಿನ ಬಹು ಮುಖ್ಯ ಅಂಶವೆಂದರೆ  ಹಲವಷ್ಟು ಆಪ್ತವಾದ ಸುಂದರ ದೃಶ್ಯಗಳನ್ನು ಚಿಕ್ಕ ಚೊಕ್ಕ ಫ್ರೇಮ್ ಗಳಲ್ಲಿ ಹಿಡಿದಿಡುವದು. ಅಲ್ಲಿ ಅಬ್ಬರದ ಸಂಗೀತಗಳಿಲ್ಲ, ರೋಷಾವೇಷದ ಮಾತುಗಳಿಲ್ಲ, ನಾಯಕಿಯ ಕನಸಿನಲ್ಲಿ ಹಾಡಿ ಇರಾನಿನಲ್ಲಿ ಆದ ಪ್ರೀತಿಗೆ ಅಮೇರಿಕಾದಲ್ಲಿ ಹಾದಿ ಕುಣಿಯುವ ನಾಯಕನಿಲ್ಲ, ಅಲ್ಲಿ ನೈಜತೆಯಿದೆ ಸರಳತೆಯಿದೆ, ಸಿನಿಮಾದ ಕೊನೆಯವರೆಗೂ ಮೇಕಪ್ ಇಲ್ಲದ ಮಾತಾಡದ ಸಹಜ ಕೋಮಲತೆಯ ಹೊರತಾಗಿ, ವಯ್ಯಾರದಿಂದ ಬಳುಕದ  ನಾಯಕಿ ನೆನಪಿನಲ್ಲಿ ಇಳಿಯುತ್ತಾಳೆ.  
ಮಾಜಿದ್ ಅವರ ಸಿನಿಮಾಗಳು ಕೇವಲ ಸಿನಿಮಾಗಳಲ್ಲ ಅವು ತೆರೆಯ ಮೇಲೆ ಶಕ್ತ, ಪಳಗಿದ ಕಲಾವಿದನ ಏಕಾಗ್ರತೆಯ ತಪಸ್ಸಿನ ಕುಸುರಿ ಕೆಲಸಗಳು. 

ಸ್ಪರ್ಶವಿರದ, ಮಾತಿರದ ಅದ್ಭುತ ಕಾವ್ಯದ ಕಲಾಶಿಲ್ಪಗಳಾಗಿ  ಬಾರನ್ ಸಿನಿಮಾದ ನಾಯಕ ನಾಯಕಿ ಕಾಡುತ್ತಾರೆ. 

ಸಿನಿಮಾ : ಬಾರನ್  (Baaran)
ಭಾಷೆ :ಪರ್ಷಿಯಾ  (Majid Majidi)
ದೇಶ : ಇರಾನ್ 
ನಿರ್ದೇಶನ : ಮಜಿದ್ ಮಜಿದಿ 

Final Cut : ಬಾರನ್ ಎಂದರೆ ಪರ್ಷಿಯನ್ ಬಾಷೆಯಲ್ಲಿ  ಮಳೆ  ಎಂದರ್ಥ, ಸಿನಿಮಾದ ಕೊನೆಯ ದೃಶ್ಯ ನಿಮ್ಮೆದೆಯಲ್ಲೂ ಮಳೆ ತರಬಹುದು 

ಇಂತಿ,
ಸಚೇತನ ಭಟ್ 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x