ಪ್ರಶಸ್ತಿ ಅಂಕಣ

ಮೌನಿ:ಪ್ರಶಸ್ತಿ ಪಿ.

ಬೆರೆವ ಭಾವಗಳ ಸರಳ ಸುಂದರಿಯು ಮೌನ ತಾಳಿದ್ದಾಳೆ. ಧುಮುಕಲನುವಾಗಿ ನಲ್ಲಿಯಂಚಲ್ಲಿ ನಿಂತ ಹನಿಯೊಂದು ಗುರುತ್ವವನ್ನೂ ಲೆಕ್ಕಿಸದೆ ನಲ್ಲಿಯನ್ನೇ ಅಂಟಿಕೊಂಡಂತೆ ತನ್ನ ಕಾದಿರುವವರ ನಿರೀಕ್ಷೆಗಳಿಗೆ ಸ್ಪಂದಿಸದಂತೆ ಮೌನವಾಗಿದ್ದಾಳೆ. ಉಕ್ಕಿ ಹರಿಯುತ್ತಿದ್ದ ಹುಚ್ಚುಹೊಳೆ, ಜೀವ ಸೆಲೆ, ತಾಯಿ ಮೌನಿಯಾಗಿದ್ದಾಳೆ.

ಮಳೆಯೆಂದರೆ ಹುಚ್ಚೆದ್ದು ಹೊಡೆವ ದಿನಗಳವು. ಬೇಸಿಗೆಯೆಂದರೆ ಕಲ್ಲಂಗಡಿ ಹೋಳೋ,ಇಬ್ಬಟ್ಟಲ, ಮುರುಗನುಳಿ(ಕೋಕಂ) ಪಾನಕಗಳು ಮನೆಮನೆಯಲ್ಲೂ ಖಾಯಂ ಆಗಿರುತ್ತಿದ್ದ ದಿನಗಳವು. ಚಳಿಗಾಲವೆಂದ್ರೆ ಏಳರ ಮೇಲೆ ಮನೆಯಿಂದ ಹೊರಗೆ ಕಾಲಿಡಲು ಬೇಸರಿಸುತ್ತಿದ್ದ ಕಾಲವದು. ಒಂದೇ ದಿನದಲ್ಲಿ ಮೂರೂ ಋತುಗಳ ದರ್ಶನವಾಗುತ್ತಿದ್ದ ಚೌಚೌ ಬಾತ್ ದಿನಗಳಲ್ಲ. ಹಿನ್ನೀರ ಶರಾವತಿ ತುಂಬಿ ಹರಿದು ದೋಣಿಯವನಿಗೆ ವರ್ಷಪೂರ್ತಿ ಕೆಲಸವಿರುತ್ತಿದ್ದ ಕಾಲಮಾನದ ಮಾತುಗಳಿವು. ಜುಳು ಜುಳು ಸದ್ದಿನ ನದಿಯನ್ನ, ಅದರ ಹಿನ್ನೀರಿನಲ್ಲಿ ಅಂಬಿಗ ದೋಣಿಗೆ ಹುಟ್ಟು ಹಾಕೋದ ನೋಡೋದೇ ಒಂದು ಚಂದ. ನಾನೂ ಹುಟ್ಟು ಹಾಕ್ತೀನಿ ಅಂತ ಮತ್ತೊಂದು ಹುಟ್ಟು ತಕ್ಕೊಂಡು ಒಂದು ಹತ್ತು ಸಲ ಹಾಕೋದ್ರೋಳಗೆ ಕೈಸೋತು ಅಂಬಿಗ ಯಾವುದೇ ಸುಸ್ತಿಲ್ಲದಂತೆ ಹುಟ್ಟು ಹಾಕೋದ ಕಂಡು ಆಶ್ಚರ್ಯ ಪಟ್ಟಿದ್ದುಂಟು.ಬೆಳಗ್ಗಿನಿಂದ ಸಂಜೆಯವರೆಗೆ, ಅನಿವಾರ್ಯ ಬಿದ್ದಾಗ ರಾತ್ರಿಯಲ್ಲೂ ಈ ಕೆಲಸ ಮಾಡುತ್ತಿದ್ದ ಅವನ ತೋಳ್ಬಲ ಯಾವ ಶಕ್ತಿಮಾನ್ಗಿಂತಲೂ ಕಮ್ಮಿಯಿಲ್ಲ ಅನಿಸಿದ್ದು ಸುಳ್ಳಲ್ಲ ! ಹಿನ್ನೀರಿನ ಮತ್ತೊಂದು ಬದಿಗೆ ಲಾಂಛ್ ಅಂತ ಬಂದು ಅದಕ್ಕೆ ಐವತ್ತು ಪೈಸೆಯ ಟಿಕೆಟ್ ಪಡೆದು ಹತ್ತೋ ಮಜವೂ ಕಮ್ಮಿಯಲ್ಲ. ಈಗ ಟಿಕೇಟಿನ ಬೆಲೆ ಒಂದು ರೂಪಾಯಿಯಾದ್ರೂ ಲಾಂಚಿನಲ್ಲಿ ಹೋಗುವಾಗ ಸಿಗೋ ಮಜ ಕಮ್ಮಿಯಾಗಿಲ್ಲ. ನೀರ ಹಿಂದೆ ತಳ್ಳಿ ತಳ್ಳಿ ಸಾಗುವಾಗ ಉಂಟಾಗೋ ಬಿಳಿ ನೊರೆ, ನೀರ ಅಲೆಗಳು, ಅಲೆಗಳ ಮೇಲೆ ತೇಲುತ್ತಿರೋ ಯಾರೋ ಬಿಟ್ಟ ಕಾಗದದ ದೋಣಿ, ಅಲೆಗಳ ಏರಿಳಿತಕ್ಕೆ ತಮ್ಮ ಎತ್ತರ ಹೆಚ್ಚು ಕಮ್ಮಿಯಾಗಿದೆಯೋ ಎಂಬಂತೆ ಕುಣಿವ ನೀರ ಮಧ್ಯದ ಮರಗಳು, ತನಗೂ ಬರುತ್ತಿರೋ ಲಾಂಚಿಗೂ, ಅದರೊಳಗಿನ ಜನಕ್ಕೂ ಸಂಬಂಧವಿಲ್ಲದಂತೆ ಆ ಮರಗಳ ಮೇಲೆ ಕೂತಿರೋ ಕಾಗೆಗಳು, ಅಲ್ಲಲ್ಲಿ ಕಾಣ ಸಿಗೋ ಕೊಕ್ಕರೆಗಳು, ಅಲ್ಲಲ್ಲಿ ಬಲೆ ಹಾಕಿರೋ ತೆಪ್ಪದ ಬೆಸ್ತರು.. ಹಿಂಗೆ ಹಲವು ದೃಶ್ಯಾವಳಿಗಳು ಕಣ್ಣು ತುಂಬುತ್ತಿತ್ತು ಆ ಹದಿನೈದು ನಿಮಿಷದ ನೀರಯಾನದಲ್ಲಿ. ಮುಂಜಾವಾದರೆ ನೀರಲ್ಲಿ ಈಜ ಕಲಿಯೋಕೆ ಬಂದಿರೋ ತರ ನೀರ ಅಲೆಗಳಲ್ಲಿ ತಾನೂ ತೇಲೋ ಸೂರ್ಯ, ಸಂಜೆಯಾದರೆ ಸೂರ್ಯ ಅಟ್ಟಿಸಿಕೊಂಡು ಬರ್ತಿದ್ದಾನೋ ಎಂಬಂತೆ ಅವನ ಹಿಂದೆ ಬಿಟ್ಟು ಹಾರುತ್ತಿದ್ದ ಹಕ್ಕಿಗಳ ಬಳಗ, ನೋಡೋ ಕಣ್ಣುಗಳಿಗೆ ತಕ್ಕಂತೆ ಆನೆ, ಗೂಬೆ, ಪಾರಿವಾಳಗಳಾಗುತ್ತಿದ್ದ ಮೋಡಗಳ ಹಿಂಡು ಅಕ್ಕಪಕ್ಕದ ಪರಿಚಯಸ್ಥರ ನಡುವೆ ಮಾತನೆಬ್ಬಿಸುತಿತ್ತು. ಈ ಲಾಂಛಿಗೆ ಬಂದೋರು ಮಾತಾಡೋಕೆ ಸಂಬಂಧಿಗಳೇ ಆಗಬೇಕಿಂದಿಲ್ಲ.ಮಳೆಗಾಲವಾದರೆ ಲಾಂಛಿನೊಳಗೂ ನುಗ್ಗುತ್ತಿದ್ದ ಮಳೆಯ ಇಸಿರು ಬಸ್ಸಲ್ಲಿ ಜೊತೆಗಿದ್ದರೂ ಮಾತಾಡದಿದ್ದವರನ್ನು ಮಾತಾಡಿಸಿಬಿಡುತ್ತಿತ್ತು !

ಮಳೆ ತನಗೆ ಹೊಡೆಯದಂತೆ ಛತ್ರಿ ಹಿಡಿದಿದ್ದಾನಲ್ಲ ಅಂತನೋ, ಒಳ್ಳೆಯ ದೃಶ್ಯ ಕಾಣೋ ತರದ ಸೀಟು ನಂಗೆ ಬಿಟ್ಟುಕೊಟ್ಟ ಅಂತ್ಲೋ ಅದಕ್ಕೊಂದು ಧನ್ಯವಾದ ಹೇಳೋಣ ಅನ್ನೋ ಭಾವ ಮಾತುಕತೆ ಶುರು ಮಾಡುತ್ತಿತ್ತು.ಸಮವಯಸ್ಕರಾದ್ರೆ ಏ ನಿಮ್ಮನ್ನು ಸಾಗರದಲ್ಲಿ ಎಲ್ಲೋ ನೋಡಿದ ಹಾಗಿದೆಯಲ್ಲಾ ಅಂತ್ಲೋ , ಸಣ್ಣವರಿಗೆ ಯಾವೂರಾತಾ ತಮಾ ನಿಂಗೆ ಅಂತ್ಲೋ ಮಾತುಕತೆ ಶುರುವಾಗುತ್ತಿತ್ತು ಮಳೆಯ ಹೊಡೆತ ಕಮ್ಮಿಯಾದ ಸಂದರ್ಭದಲ್ಲಿ. ಘಟ್ಟದ ಕೆಳಗಿನವರಾದ್ರೆ ಹ್ವಾಯ್ ಒಂದು ಕವಳ ಕೊಡಿನಿ ಅಂತ್ಲೋ, ಒಂದು ಅಡಿಕೆ ಎಲೆ ಇತ್ತಾ ಅಂತ್ಲೋ ಪಕ್ಕದಲ್ಲಿರೋರ ಜೊತೆ ಮಾತುಕತೆ ಶುರು ಮಾಡ್ತಿದ್ರು. ಘಟ್ಟದ ಮೇಲಿರೋರೋ, ಕೆಳಗಿರೋರೋ ಯಾರಾದ್ರಾಗ್ಲಿ ಎದ್ರಿಗಿರೋರು. ಅವ್ರತ್ರ  ಎಲೆಯಡಿಕೆ, ಯಕ್ಷಗಾನದ ಸುದ್ದಿ ಎರಡಿದ್ಬುಟ್ರೆ ಸಾಕು. ಬೆಳಗಿಂದ ಸಂಜೆಯವರೆಗೂ ಆ ಲಾಂಛಲ್ಲೇ ಅವ್ರತ್ರ ಮಾತಾಡ್ತಾ ಕೂರ್ತಾರೇನೋ ಅನ್ನೋ ಜನಗಳು ಪ್ರತೀ ಲಾಂಛಿನ ಟ್ರಿಪ್ಪಲ್ಲೂ ಇದ್ದೇ ಇರ್ತಿದ್ರು. ಹ್ವಾಯ್, ಸಾಲಿಗ್ರಾಮ ಮೇಳದ್ ಪ್ರಸಂಗ ಇತ್ತ ನಾಡಿದ್ದು. ಬರೋರಿದ್ರಾ ? ಬಂದ್ರೆ ಮುದ್ದಾಂ ಸಿಗಿ ಹಾಂ ಅಂತ ಲಾಂಛಿನ ಪಯಣ ಕೊನೆಯಾಗುವಲ್ಲಿ ಕೊನೆಯಾಗುತ್ತಿದ್ದ ಮಾತುಗಳಲ್ಲಿ ಸಂಪದ ಲಕ್ಷ್ಮೀನಾರಾಯಣರ ಚಂಡೆ, ಕಾಳಿಂಗ ನಾವಡರ ಅಂದಿನ ಭಾಗವತಿಕೆ, ಹೊಸ್ತೋಟ ಮಂಜುನಾಥ ಭಾಗವತರ ಇಂದಿನ ಭಾಗವತಿಕೆ, ಪೆರ್ಡೂರು ಮೇಳದ ಮತ್ತೊಂದು ಪ್ರಸಂಗ, ಕೊಂಡದಕುಳಿ ರಾಮಚಂದ್ರ ಹೆಗ್ಡೇರು, ಕೊಳಗಿ ಕೇಶವ ಹೆಗ್ಡೇರು.. ಹಿಂಗೆ ಸುಮಾರಷ್ಟು ವಿಚಾರಗಳು ಬಂದು ಹೋಗುತ್ತಿದ್ವು. 

ಆದ್ರೆ ಈಗೇನಿದೆ ? ಇದ್ದ ಬದ್ದ ಕಾಡನ್ನೆಲ್ಲಾ ಕಡಿದು ಕಾಫೀತೋಟವೋ, ರೆಸಾರ್ಟೋ ಮಾಡಿದ ಚಿಕ್ಕಮಂಗಳೂರು, ಕೊಡಗು, ಮಸಿನಗುಡಿಗಳ ಸಂಸ್ಕೃತಿ ಮಲೆನಾಡಿಗೂ ಕಾಲಿಡತೊಡಗಿದೆ. ಹೋಂ ಸ್ಟೇಗಳ ಕಾಟ ಅಷ್ಟಿಲ್ಲದಿದ್ರೂ ಅವುಗಳು ಕಾಡ ಹಾಳು ಮಾಡಿ ಅಲ್ಲಿನ ಮಂಗಗಳೆಲ್ಲಾ ಹೊಟ್ಟೆಗಿಲ್ಲದೆ ನಮ್ಮ ಮನೆಯೆದ್ರು ಸತ್ಯಾಗ್ರಹ ಮಾಡುವಷ್ಟರ ಮಟ್ಟಿಗಂತೂ ಬಂದಿದೆ. ಇದ್ದ ಪುಣ್ಯ ಕ್ಷೇತ್ರಗಳು ಜಪ-ತಪ ಮಾಡುವವರ, ದೇವರು ದಿಂಡರು ಏನೂ ನಂಬಲ್ಲ, ಒಂದಿಷ್ಟು ಶಾಂತಿಯಾದ್ರೂ ಸಿಗತ್ತೆ ಇಲ್ಲಿ ಅಂತ ಬರ್ತೀನಿ ಅನ್ನುವವರ ನಂಬಿಕೆಗಳನ್ನು ಹಾಳು ಮಾಡುವಷ್ಟರ ಮಟ್ಟಿಗೆ ಬದಲಾಗಿದೆ. ಹತ್ತು ಹದಿನೈದು ನಿಮಿಷಕ್ಕೊಂದಂತೆ ಧೂಳೆಬ್ಬಿಸೋ ಬಸ್ಸುಗಳು, ಜನರ ಕಾರು, ಬೈಕುಗಳು ಬೇರೆ. ದೇವಸ್ಥಾನಕ್ಕೆ ಬರೋ ವಾಹನಗಳ ಪಾರ್ಕಿಂಗಿಗೆ ಅಂತ ಕಡಿದ ಗುಡ್ಡದ ಮೇಲಿದ್ದ ಮರಗಳ ನೋವು ಕೇಳಿದವರಾರು ? ರಸ್ತೆ ಅಂತ ಅದ್ರ ಧೂಳಿಗೆ ಅಕ್ಕಪಕ್ಕಕ್ಕಿದ್ದ ಅಡಿಕೆ ತೋಟಗಳೆಲ್ಲಾ ಕೆಂಪು ಕೆಂಪು. ನಿಮ್ಮ ಮನೆಗೆ ಮಧ್ಯರಾತ್ರಿಗೆ ಬಂದ ಕಳ್ಳನೊಬ್ಬ ದೊಡ್ಡಕ್ಕೆ ಸೈರನ್ ಕೂಗಿಸುತ್ತಾ ಮನೆಯನ್ನೆಲ್ಲಾ ಧೂಳು ಧೂಳಾಗಿಸುತ್ತಾ ಮನೆಯನ್ನು ಬಿಟ್ಟು ಹೋಗೋ ಲಕ್ಷಣವನ್ನೇ ತೋರದಿದ್ದರೆ ? ಸ್ವಲ್ಪ ಅತಿಯಾಯಿತು ಅನ್ನಿಸುತ್ತಿದೆ ಅಲ್ವಾ ? ಮಲೆನಾಡಲ್ಲಾಗಿರೋದು ಅದೇ ಈಗ. ಪುಣ್ಯಕ್ಷೇತ್ರಗಳನ್ನ ಶಾಂತಿ ಧಾಮಗಳ ಬದಲು ಟೂರಿಸ್ಟ್ ಸ್ಪಾಟ್ ಮಾಡೋ ಪ್ರಯತ್ನದಲ್ಲಿ ಕಾಡನ್ನು ಹಂತ ಹಂತವಾಗಿ ಕಡಿಯುತ್ತಾ ,ವಿಧವಿಧ ವಾಹನಗಳ ಶಬ್ದದಿಂದ, ವಿಪರೀತ ಧೂಳಿಂದ ವನ್ಯಜೀವಿಗಳಿಗೆ ವಿಪರೀತ ರೋಧನೆ ಕೊಡುತ್ತಿರುವ ನಾವು ಆ ವನ್ಯಜೀವಿಗಳ ದೃಷ್ಟಿಯಲ್ಲಿ ಮನೆಗೆ ನುಗ್ಗಿದ ಕಳ್ಳರೆ !   

ಕುಡಿಯೋ ನೀರಿಗೇ ವಿಷವುಣಿಸುತ್ತಿರುವ ನಮಗೆ ತಾಯ ಬಾಯಿಂದ ವಿಷದ ನೊರೆ ಬರ್ತಾ ಇದ್ರೂ ಅರ್ಥವಾಗುತ್ತಿಲ್ಲ. ಏನಂದೆ ಅಂದ್ರಾ ? ಬೆಂಗಳೂರಿಗರಿಗೆ ವರ್ತೂರು ಕೆರೆ ಚಿರಪರಿಚಿತ. ಅತ್ತ ಸಾಗಿದಾಗೆಲ್ಲಾ ಅದನ್ನ ನೋಡಿ ಏನಿದು ಬಿಳಿ ನೊರೆ ಅಂತ ಸುಮಾರು ಸಲ ಅಂದುಕೊಂಡೇ ಇರ್ತಾರೆ. ಮೊನ್ನೆ ನೀರಿಗಿಂತ ಐದಡಿ ಮೇಲೆದ್ದ ನೊರೆ ರಸ್ತೆಯ ಮೇಲೆಲ್ಲಾ ಹರಿದ ಮೇಲೆ ಪುರಸಭೆಯವರಿಗೆ ಎಚ್ಚರವಾಯಿತಂತೆ. ಇದು ನೀರಿಗೆ ಸೇರಿರೋ ವಿಪರೀತದ ವಾಷಿಂಗ್ ಪೌಡರ್ಗಳ ಪ್ರಭಾವ ಅಂತ ಅರಿವಾಯಿತಂತೆ. ಸಮಸ್ಯೆ ಪರಿಹರಿಸೋ ಬದಲು ಟ್ಯಾಂಕರ್ಗಳನ್ನ ಕರೆಸಿ ನೊರೆಯನ್ನು ಮತ್ತೆ ಕೆರೆಗೇ ತಳ್ಳಲು ಪ್ರಯತ್ನಿಸಲಾಯಿತಂತೆ !! ಹಾವು ಕಚ್ಚಿ ಬಾಯಲ್ಲಿ ನೊರೆ ಬರ್ತಿದೆ ಅಂದಾಗ ಹಾವಿನ ವಿಷವಿಳಿಸೋ ಬದಲು ವಿಷವನ್ನು ಮತ್ತೆ ಬಾಯಿಗೇ ತುರುಕಿದಂತೆ ! 

ಇಂತದ್ದೇ ಮೂರ್ಖತನ, ಹುಚ್ಚಾಟಗಳ ಕಾರಣದಿಂದ, ಮರಗಳ್ಳರ ಮಾಫಿಯಾದಿಂದ ನದಿಯಂಚಿನ ಮಣ್ಣ ಹಿಡಿದಿಡುತ್ತಿದ್ದ ಭದ್ರ ಬೇರಿನ ಮರಗಳು ಇಲ್ಲವಾಗುತ್ತಿದೆ. ಫಲವತ್ತಾದ ಮಣ್ಣು ಮಳೆಗೆ ಕೊಚ್ಚಿ ಹೂಳೂ ಆಗಿ ನದೀ ಪಾತ್ರಗಳ ಸಂಗ್ರಹ ಸಾಮರ್ಥ್ಯವನ್ನು ಕ್ಷೀಣಿಸುತ್ತಿದೆ. ಮರವಿಲ್ಲದಿದ್ದರೆ ಮಳೆಯಿಲ್ಲ. ಮಳೆಯೇ ಇಲ್ಲದಿದ್ದ ಮೇಲೆ ಹರಿವ ಜುಳು ಜುಳು ನದಿಯೆಲ್ಲಿ ? ನದಿಯಿಲ್ಲದಿದ್ದ ಮೇಲೆ ಹಿನ್ನೀರೆಲ್ಲಿ ? ನೀರೇ ಇಲ್ಲದ ಮೇಲೆ ದೋಣಿಯೇಕೆ ? ಅಂಬಿಗನ ಅಗತ್ಯವೇಕೆ ? ದಿನೇ ದಿನೇ ಸಾಯುತ್ತಿರೋ ತನ್ನ ಕವಲುಗಳ ನೋಡ ನೋಡುತ್ತಾ ಮಾಯವಾದ ಸರಸ್ವತೀ ನದಿಯಂತೆ ತನ್ನ ಕೊನೆಯ ದಿನಗಳೂ ಹತ್ತಿರವಾಗುತ್ತಿವೆಯೇ ಎಂಬ ದು:ಖದಿಂದ ನಮ್ಮೂರವಳು ಮೌನಿಯಾಗಿದ್ದಾಳೆ. ಸದಾ ಚಟುವಟಿಕೆಯ ಚಿಲಿಪಿಲಿಗೆ ಸಾಕ್ಷಿಯಾಗುತ್ತಿದವಳಿಂದು ಸುಮ್ಮನಾಗಿದ್ದಾಳೆ. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.