ಟೆಲಿಸ್ಕೋಪ್

ಮೌನವೊಂದು ಸಾಗುತಿಹುದು ಬದುಕು ಬಿಟ್ಟು: ಸಚೇತನ

 

ವಿಶಾಲ ಮರುಭೂಮಿಯ ಮರಳಿನ ಮೇಲೆ ಬಿಸಿಲು ಚೆಲ್ಲುತ್ತ ನಿಂತ ನೀಲ ಆಕಾಶಕ್ಕೆ ಒಂದೇ ಬಣ್ಣ, ಕಪ್ಪು, ಬಿಳಿ, ಕಡು ನೀಲ, ಕಡುಗಪ್ಪು, ಬಂಗಾರ, ಹಳದಿ ಯಾವುದೇ ಬಣ್ಣಗಳಿಲ್ಲದ ಮೋಡಗಳ ಅಡಿಯಲ್ಲಿರುವವರ ಬದುಕು ಕೂಡ, ಬಣ್ಣಗಳಿಲ್ಲದ ಬದುಕು. ಈ ನೀಲ ಆಕಾಶದ ಕೆಳಗೆ  ಇರಾಕ್ ಮತ್ತು ಟರ್ಕಿ ನಡುವಿನ ಮರುಭೂಮಿಯಂತ ಪ್ರದೇಶದಲ್ಲಿ ಕುರ್ದಿಶ್ ಎನ್ನುವ ನಿರಾಶ್ರಿತರ ಕ್ಯಾಂಪ್ ಇದೆ. ಇರಾಕ್ ಮತ್ತು ಅಮೇರಿಕಾದ ಯುದ್ಧೋನ್ಮಾದದ ಹರಿತ ಧೂಳು ಎಲ್ಲೆಲ್ಲು ತುಂಬಿದೆ. ಯುದ್ಧವೆಂದರೆ ಸೈನಿಕರ ಬಡಿದಾಟವಲ್ಲ, ಬಂದೂಕುಗಳ ಶಬ್ದಗಳಲ್ಲ, ಯುದ್ಧವೆಂದರೆ ಸೇನೆಗಳ ಛಾಯೆಯಲ್ಲಿ ಸ್ವರೂಪವನ್ನು ಕಳೆದುಕೊಂಡ ಸಾಮಾನ್ಯ ಜನರ ಹತಾಶ ಹೋರಾಟ, ಬದುಕಲೇ ಬೇಕಾದ ಅನಿವಾರ್ಯತೆ ಮತ್ತು ಕ್ಷಣ ಮಾತ್ರದಲ್ಲಿ ಆವರಿಸುವ ಸಾವಿನ ನಿರ್ವಾತದಡಿಯಿಂದ ತಪ್ಪಿಸಿಕೊಳ್ಳುವ ಅಗತ್ಯತೆ.

ಕುರ್ದಿಶ್ ನ ನಿರಾಶ್ರಿತರ ಕ್ಯಾಂಪ್ ನಲ್ಲಿ ಬಹು ಸಂಖ್ಯೆಯ ಮಕ್ಕಳಿದ್ದಾರೆ, ಇವರಲ್ಲಿ ಬಹುತೇಕ ಮಂದಿ ಅಪ್ಪ, ಅಮ್ಮ, ತಮ್ಮ, ತಂಗಿ, ಕೈ, ಕಾಲು, ಕಿವಿ ಅಥವಾ ಇನ್ನೇನಾದರು ಕಳೆದುಕೊಂಡವರು. ಎಲ್ಲರ ಆಳದಲ್ಲಿ  ಯಾವತ್ತು ಎತ್ತಲಾರದ  ಕಲ್ಮಶ ಭಯವೊಂದು  ಹೂತು ಹೋಗಿದೆ. ಈ ಬಿಡಿ ಬಿಡಿ ವಿಷಾದಗಳಿಗೆ ನಾಯಕನಾಗಿರುವ ಹುಡುಗ ಸ್ಯಾಟಲೈಟ್, ಇವನ ನಿಜವಾದ ಹೆಸರು ಏನೆಂದು ಯಾರಿಗೂ ಗಮನವಿಲ್ಲದಿದ್ದರೂ, ಡಿಶ್ ಟಿವಿಯನ್ನು ಸರಿಪಡಿಸುವಲ್ಲಿಯ ಇವನ ಪ್ರವೀಣತೆ ಸ್ಯಾಟಲೈಟ್  ಎನ್ನುವ ಅನ್ವರ್ಥನಾಮವನ್ನು ತಂದುಕೊಟ್ಟಿದೆ. ಸ್ಯಾಟಲೈಟ್  ಎನ್ನುವ ಹೆಸರಿನಲ್ಲಿ ಎಲ್ಲರು ಮೂಲ ಹೆಸರನ್ನೇ ಮರೆತಿದ್ದಾರೆ, ಮೂಲ ಬದುಕನ್ನು ಮರೆತಿರುವಂತೆ. ಆದರೆ  ಟಿವಿ ರಿಪೇರಿಗಿಂತ ಇನ್ನೊಂದು ಬಹು ಮುಖ್ಯ ಕೆಲಸವನ್ನು ಈ ಸ್ಯಾಟಲೈಟ್ ಮಾಡುತ್ತಾನೆ, ನಿರಾಶ್ರಿತರ ಕ್ಯಾಂಪ್ ನ ಹುಡುಗರನ್ನು ಕಟ್ಟಿಕೊಂಡು ಯುದ್ಧಪೀಡೀತ ಪ್ರದೇಶದಲ್ಲಿ ಹೂತಿಟ್ಟ ಮೈನ್ಸ್ ಗಳನ್ನು (ನೆಲಬಾಂಬ್ ) ಹುಡುಕಿ ತೆಗೆದು ಅದನ್ನು ಮಾರಾಟ ಮಾಡುವದು.  ಕುರುಚಲು ಪ್ರದೇಶದಲ್ಲಿ ಜೀವ ತೆಗೆಯುವ ಬಾಂಬ್ ಹುಡುಕಿ ತೆಗೆದು ಮಾರಾಟ ಮಾಡಿ ಬದುಕುವ  ವಿಪರ್ಯಾಸವಿದೆ. ಈ ಹುಡುಗರ ಮಧ್ಯೆದಲ್ಲಿ ಕೈ ಇಲ್ಲದ ಹ್ಯೇನ್ಕೊವ್ ಎನ್ನುವ ಹುಡುಗನಿದ್ದಾನೆ, ಅಡ್ಡಡ್ಡ ಮಲಗಿಕೊಂಡು  ಬಹು ಕುಶಲತೆಯಿಂದ ಬಾಂಬ್ ನ ಪಿನ್ ಗಳನ್ನು ಪುಟ್ಟ ಪುಟ್ಟ ತುಟಿಗಳಿಂದ ಬೇರ್ಪಡಿಸುವ ಅಪಾಯಕಾರಿ ಕುಶಲತೆ ಇವನಿಗೆ ಸಿದ್ಧಿಸಿದೆ. ಹ್ಯೇನ್ಕೊವ್ ಗೆ ಅಗ್ರಿನ್ ಎನ್ನುವ ಸ್ನಿಗ್ಧ ಸುಂದರಿ ಸಹೋದರಿಯಿದ್ದಾಳೆ.  ಪರ್ಷಿಯಾದ ಸಾವಿರಾರು ಹುಡುಗಿಯರಂತೆ  ಆಗ್ರಿನ್  ಳ  ಸೌಂದರ್ಯ ಸಹ ಪ್ರಶಾಂತ ಮೌನದ ಹಿಂದೆ ಅವಿತುಕೊಂಡಿದೆ, ಅವಳ ಕಣ್ಣುಗಳು  ಅವಳ  ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುವದಕ್ಕಾಗಿಯೇ ಯಾವುದೋ ಅನಂತದೆಡೆಯಿಂದ ಅವತರಿಸುವ  ಶ್ರೀರಕ್ಷೆಯೆಡೆಗೆ ತೀವ್ರವಾಗಿ ದಿಟ್ಟಿಸುತ್ತಿರುವಂತೆ ಭಾಸವಾಗುತ್ತವೆ, ಹೊಂಚು ಹಾಕಿ ಕಾಡುವ ಕರಾಳ ಭೂತ ಕಾಲದ ನೆನಪುಗಳಿಗೆ ತನ್ನ ಮೌನವನ್ನು ಗುರಾಣಿಯಾಗಿ ಹಿಡಿದಿದ್ದಾಳೆ. ಆಗ್ರಿನ್ ಳ  ಬಾಲ್ಯದಲ್ಲಿ ಅವಳ ಮೇಲಾದ ಪಾಶವೀ ಬಲಾತ್ಕಾರ ಮತ್ತು ಯುಧ್ಧದಲ್ಲಿ ಕೊಚ್ಚಿಹೋದ ಅವಳ ಕುಟುಂಬದ  ನೆನಪು ಅವಳನ್ನಷ್ಟೇ ಅಲ್ಲ ಸಹೋದರ ಹ್ಯೇನ್ಕೊವ್ ನನ್ನು ಸಹ ಕಾಡುತ್ತಿದೆ. ಹ್ಯೇನ್ಕೊವ್ ಮತ್ತು ಆಗ್ರಿನ್ ನಡುವೆ  ಇನ್ನೊಂದು  ಜೀವವಿದೆ, ಆಗ್ರಿನ್ ಳ  ದುರಂತ  ಭೂತಕಾಲದ ಸಾಕ್ಷಿಯಾಗಿ  ಹುಟ್ಟಿನಿಂದ ಕಣ್ಣುಗಳನ್ನು ಕಳೆದುಕೊಂಡ  ಸುಮಾರು ೪ ವರ್ಷದ ಪುಟ್ಟ ಬಾಲಕ ರಿಗಾ. ಪುಟ್ಟ ಮನಸ್ಸು ದೊಡ್ಡ ಮನುಷ್ಯರ  ಯುದ್ಧದ ಹೇಸಿಗೆಯನ್ನು ನೋಡಬಾರದು ಎನ್ನುವಂತೆ ದೇವರು ಅವನ ಕಣ್ಣುಗಳನ್ನು ತನ್ನ ಬಳೀಯೇ ಇರಿಸಿಕೊಂಡಿದ್ದಾನೆಯೆ ಎನ್ನುವಂತೆ ಭಾಸವಾಗುತ್ತದೆ.   ಮೈನ್ಸ್ ಗಳ ನಡುವೆ, ಕ್ಯಾಂಪಿನ ಮಧ್ಯೆ, ಸಾವಿರಾರು ಅನಾಥರ ಮಧ್ಯೆ ಯಾವುದು ಅರಿವಿಲ್ಲದ ರಿಗಾನ   ದೇದೀಪ್ಯಮಾನ ನಗುವಿನಲ್ಲಿ ಆಗ್ರಿನ್ ತನ್ನ ನಗುವನ್ನು ಬಚ್ಚಿತ್ತಿದ್ದಾಳೇನೋ ಎನ್ನುವ ವಿಚಾರ ಹಾದು  ಹೋಗುತ್ತದೆ.  ತನ್ನ ತಂದೆ ಯಾರೆಂದು ತಿಳಿಯದ ಬಹುಶ: ಅವನ ತಾಯಿಗೂ ತಿಳಿಯದ ಪುಟ್ಟ ರಿಗಾನ ನಗು ಮನುಷ್ಯ ಕುಲದ ಆತ್ಮ ಸಾಕ್ಷಿಗೆ ಮನುಷ್ಯ ಮನುಷ್ಯರ ನಡುವಿನ ಅನ್ಯಾಯ ಅನಾಚಾರ ದಬ್ಬಾಳಿಕೆಯ ಅಸಹ್ಯತೆಯ ಬಗ್ಗೆ  ಮೂಲಭೂತವಾದ ನಿರ್ಣಾಯಕವಾದ  ಪ್ರಶ್ನೆಯನ್ನು ಚುಚ್ಚಿ ಕೇಳುವಂತಿದೆ. ಪುಟ್ಟ ರಿಗಾ ಹಸಿವಿನಿಂದ, ಭಯದಿಂದ, ದು:ಖದಿಂದ ಅತ್ತಾಗ ಅವನ ಸುತ್ತಲಿನ ಮೌನವೇ ಉತ್ತರವಾಗುತ್ತದೆ, ಮೌನವೇ ಸಮಾಧಾನವಾಗುತ್ತದೆ. ಯುದ್ಧ ಪೀಡೀತ ಪ್ರದೇಶಗಳ  ಅಸಹಜ ಮೌನವೊಂದು ಎಲ್ಲರಲ್ಲಿ  ಅಂಟಿಕೊಂಡಿದೆ. ರಿಗಾನ ಜೊತೆ ಜೊತೆಯಲ್ಲಿ ಹ್ಯೇನ್ಕೊವ್ ನಲ್ಲಿ  ಯುದ್ಧ ಕಾಲದಲ್ಲಿ ಅಪರೂಪವಾದ ,ಅಸಾಧ್ಯವಾದ  ಆಶಾವಾದವಿದೆ, ಬದುಕಬೇಕೆಂಬ ಉತ್ಕಟ ಆಸೆಯಿದೆ, ಆಗ್ರಿನ್ ಗೆ ದೂರದ ಮೋಡದ ಮರೆಯಲ್ಲಿ ಹಿತವಾಗಿ ಬದುಕಬೇಕೆಂಬ ಕನಸಿದೆ.ಕೈಗಳಿಲ್ಲದ ಹ್ಯೇನ್ಕೊವ್  ಅಥವಾ  ಆಗ್ರಿನ್  ಸದಾ ಕಾಲದ ಕಣ್ಣುಗಳಿಲ್ಲದ ರಿಗಾನನ್ನು ಬೆನ್ನ ಮೇಲೆ ಕಟ್ಟಿಕೊಂಡು ಸಾಗುವಾಗ ಕಣ್ಣಂಚು ತೇವವಾಗುತ್ತದೆ. 

ಈ  ಜನರ ವಿಶ್ವ  ನಿಮ್ಮ ಮನಸ್ಸಿನಲ್ಲಿ ಆಕಾರವನ್ನು ಪಡೆಯಲು ಆರಂಭಿಸಿದೆ ? ಸಾವಿರಾರು   ನಿರಾಶ್ರಿತ ಜೀವಗಳು ಗುಡಾರ ಮತ್ತು ಗುಡಿಸಲುಗಳು ವಾಸಿಸುತ್ತಿದ್ದಾರೆ.  ಇವರ ಮಧ್ಯೆ ಸ್ಯಾಟಲೈಟ್  ಅತ್ಯಂತ ವ್ಯವಹಾರ ಕುಶಲ ವ್ಯಕ್ತಿ, ಸಭೆಗಳನ್ನು ಕರೆಯುವದು, ಯಾವುದಾದರು ವಿಷಯದ ಬಗ್ಗೆ ಘೋಷಣೆ ಮಾಡುವದು,  ಕೆಲಸವನ್ನು ಹಂಚುವದು, ತನ್ನ ಮುರುಕು ಸೈಕಲ್ ಮೂಲಕ ಹಳ್ಳಿಯನ್ನೆಲ್ಲ  ಸುತ್ತಾಡುವದು.  ಸದಾಕಾಲ ಎತ್ತರದ ಧ್ವನಿಯಲ್ಲಿ ಮಾತನಾಡುವ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಬೇಕಾ ಗಿರುವ  ಸ್ಯಾಟಲೈಟ್  ತನ್ನ ಜೀವನದ  ದುಃಖವನ್ನು  ನೆನಪಿಸಿಕೊಳ್ಳಲಿಕ್ಕೆ ಪುರುಸೊತ್ತು ಇಲ್ಲದ ವ್ಯಕ್ತಿಯಾಗಿ ಕಾಣಿಸುತ್ತಾನೆ. 

ಒಮ್ಮೆ ಹಳ್ಳಿಯ ಸಮಸ್ತರು ಅಮೆರಿಕಾದ ಧಾಳಿಯ ಬಗ್ಗೆ ಟಿವಿಯಲ್ಲಿ ಬರುತ್ತಿರುವ ವಿಷಯವನ್ನು ತಿಳಿಯಲು ಕಾತುರರಾಗಿದ್ದಾರೆ. ಬೆಟ್ಟದ ತುದಿ ಹತ್ತಿ ಟಿವಿ ಅಂಟೆನಾದ ಸಿಗ್ನಲ್ ಹಿಡಿಯುವ ಪ್ರಯತ್ನದಲ್ಲಿ ಎಲ್ಲರೂ ಇದ್ದಾರೆ.  ಎಡ ಬಲ ಬಲ ಎಡ  ಉದ್ದ ಅಗಲ ಹೀಗೆ ಎಲ್ಲ ಪ್ರಯತ್ನಗಳೂ ವ್ಯರ್ಥವಾದ ನಂತರ ಸ್ಯಾಟಲೈಟ್ ಇವೆಲ್ಲವನ್ನೂ ಬಿಟ್ಟು ತಾನು  ಒಂದು ಡಿಶ್ ತರುವುದಾಗಿ ಘೋಷಿಸುತ್ತಾನೆ. ಅಂತೆಯೇ ಹತ್ತಿರದ ಪಟ್ಟಣದಿಂದ ಅವನು ಒಂದು ಡಿಶ್ ಅನ್ನು ಸೈಕಲ್ ಮೇಲೆ ತಂದಾಗ ಸಮಸ್ತ ಹಳ್ಳಿಯೇ ಸಂತೋಷ ಪಡುತ್ತದೆ.  ಈಗ ಸ್ಯಾಟಲೈಟ್ ಡಿಶ್ ಜೋಡಿಸಲು ತಯಾರಾಗಿದ್ದಾನೆ, ಪ್ರತಿ ಸಲ ಸಿಗ್ನಲ ಬಂದಾಗಲೂ ಟಿವಿಯಲ್ಲಿ ಅಶ್ಲೀಲವಾದ ಧರ್ಮಬಾಹಿರ ನೃತ್ಯ ಹಾಡು ಹುಡುಗಿಯರು ಬರುತ್ತಿದ್ದಾರೆ, ಇಷ್ಟಾದರೂ ಸಹ ಅವರು CNN ಚಾನೆಲ್ ಬರುವಷ್ಟು ಕಾಲ ತಾಳ್ಮೆಯಿಂದ ಕಾಯುತ್ತಿದ್ದಾರೆ. ಚಾನೆಲ್ ನ ವಾರ್ತೆಯಲ್ಲಿ ತಮಗೆ ಅರ್ಥವಾದಷ್ಟು  ಇಂಗ್ಲಿಶ್ ಪದಗಳ ಆಧಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. ಸದಾಂ ನ ದ್ವೇಷದಲ್ಲಿ ಅವರು ಅಮೇರಿಕನ್ ರ ಬರುವಿಕೆ ಕಾಯುತ್ತಿದ್ದಾರೆ. ಆದರೆ ಅಮೆರಿಕನ್ನರು ಅವರಿಗೆ ಏನು ಒಳ್ಳೆಯದು ಮಾಡಬಹುದು  ? 

ಇವೆಲ್ಲವುಗಳ ನಡುವೆ  ಸ್ಯಾಟಲೈಟ್  ನ ಮಾತುಗಳು ಆಗ್ರಿನ್ ಳ ಮೌನದಲ್ಲಿ ಕರಗುತ್ತಿವೆ. ಮಾತುಗಳ ಮೂಲೆಯಲ್ಲಿ ಅವಳ ಮೌನ ಅವನನ್ನು ಹಿಡಿದಿಡುತ್ತಿದೆ. 

ಆಗ್ರಿನ್ ಳ ಬದುಕಿನ  ತೀವ್ರ ಗಾಯದ ಕಲೆಯಾಗಿ ಉಳಿದಿರುವ ರಿಗಾ ಸದಾ ಕಾಲ ಕಿರಿಯ ವಯಸ್ಸಿನ ತಾಯಿಯನ್ನು ಕಾಡುತ್ತಿದ್ದಾನೆ. ಮುಗ್ಧ ಬಾಲಕನ ಮುಖ ನಮ್ಮನ್ನು ಕಲಕಿದರೆ, ಆಗ್ರಿನ್ ಗೆ ಅವಳ ಭೂತದ ಕಹಿಯ ರುಚಿ ನಾಲಗೆಯ ಮೇಲೆ ಬಂದಂತೆ.  ಸನ್ನಿವೇಶವೊಂದರಲ್ಲಿ ರಿಗಾ ಮೈನ್ಸ್ ನಡುವೆ ಸಿಕ್ಕಿ ಹಾಕಿಕೊಂಡಿದ್ದಾನೆ, ಯಾವುದೇ ದಿಕ್ಕಿನಲ್ಲಿ ಹೆಜ್ಜೆಯಿಟ್ಟರು ಸಹ ಮೈನ್ಸ್ ಸ್ಪೋಟಗೊಳ್ಳುವ ಅಪಾಯವಿದೆ. ವಿಷಯ ತಿಳಿದ ಸ್ಯಾಟಲೈಟ್ ಸ್ಥಳಕ್ಕೆ ಆಗಮಿಸುತ್ತಾನೆ. ರಿಗಾನ ಸ್ಥಿತಿ ಅತ್ಯಂತ ಅನಿಶ್ಚಿತತೆಯಲ್ಲಿದೆ. ದೃಷ್ಠಿಯಿಲ್ಲದ ಮಾತುಗಳು ಅರ್ಥವಾಗಗುವಷ್ಟು ದೊಡ್ದವನಲ್ಲದ ಪುಟಾಣಿ ರಿಗಾನ ಯಾವುದೇ ಚಲನವಲನ ಮೈನ್ಸ್ ಸ್ಪೋಟಕ್ಕೆ ಆಸ್ಪದವಾಗಬಲ್ಲದು. ಸಧ್ಯಕ್ಕೆ ಹೊಸ ಜಾಗದಲ್ಲಿನ ಹೊಸ ಗಾಳಿಯ ಜೊತೆಗೆ ಆಟವಾಡುವಂತೆ ಉಸಿರೆಳೆದುಕೊಳ್ಳುತ್ತಿರುವ ರಿಗನನ್ನು ರಕ್ಷಿಸಲು ಸ್ಯಾಟಲೈಟ್ ಉಪಾಯ ಹುಡುಕಬೇಕಿದೆ. ರಿಗಾನನ್ನು ರಕ್ಷಿಸಲು ಸಿದ್ಧನಾದ ಸ್ಯಾಟಲೈಟ್ ನ ಸಧ್ಯದ ಪೇಚಿಗೆ ಇನ್ನೊಂದಿಷ್ಟು ತೊಂದರೆ ಸೇರಿಕೊಳ್ಳುವದು, ಅವನ ಹಿಂಬಾಲಕರಾದ ಪಾಷೋ  ಮತ್ತು ಶಿರ್ಕೋ ಎನ್ನುವ ಇಬ್ಬರು ಹುಡುಗರು ಈ  ಕೆಲಸವನ್ನು ತಾವೇ ಮಾಡುತ್ತೇವೆಂದೂ ಮತ್ತು ಅವರ ನಾಯಕನಾದ ಸ್ಯಾಟಲೈಟ್  ಅಪಾಯಕ್ಕೆ ಸಿಲುಕಬಾರದು ಎಂದು ಹಟ ಹಿಡಿದಾಗ. ಆದರೆ ಅವರ ನಾಯಕ ಹಿಂಬಾಲಕರ ಯಾವುದೇ ಮಧ್ಯಪ್ರವೇಶವನ್ನು ವಿಟೋ ಚಲಾಯಿಸಿ ನಿರಾಕರಿಸುತ್ತಾನೆ. ಅದರಂತೆಯೇ ರಿಗಾ  ನನ್ನು ಅವನು ನಿಂತ ಸ್ಥಳದಲ್ಲಿಯೇ ಉಳಿಸಿಕೊಳ್ಳಲು, ಸ್ಯಾಟಲೈಟ್ ತನ್ನ ಸೈಕಲ್ ಬೆಲ್ ನ್ನು ಒಂದೆ ಸಮನೆ ಬಾರಿಸಿ, ಶಬ್ದ ಬಂದ ದಿಕ್ಕಿಗೆ ರಿಗಾನನ್ನು ಆಕರ್ಷಿಸಲು ಉಳಿದ ಹುಡುಗರಿಗೆ ಹೇಳುತ್ತಾನೆ. ಜೊತೆಯಲ್ಲಿ ಸ್ಯಾಟಲೈಟ್, ಮೃದು ಮಾತುಗಳಿಂದ ರಿಗಾ ನಿಗೆ ನಿಂತ ಜಾಗದಿಂದ  ಸರಿದಾಡದಂತೆ ಹೇಳುತ್ತ ಅವನನ್ನು ಸಮೀಪಿಸಲು ಪ್ರಯತ್ನಿಸುತ್ತಾನೆ.  ಈ ಮಧ್ಯೆ ಸೈಕಲ್ ಬೆಲ್ ಶಬ್ದ ರಿಗಾ ನಿಗೆ ಎಷ್ಟು ಸಂತಸ ತರುತ್ತದೆಯೆಂದರೆ ಅವನು ಜೋರಾಗಿ ನಗುತ್ತ, ನಿಂತ ಜಾಗದಲ್ಲೇ ಜಿಗಿದಾಡಲು ಶುರು ಮಾಡುತ್ತಾನೆ. ಇನ್ನೇನು ಮೈನ್ಸ್ ಸ್ಪೋಟಗೊಳ್ಳುವಂತೆ ಮಾಡುತ್ತಾನೆ ಎನ್ನುವಷ್ಟರಲ್ಲಿ ಸ್ಯಾಟಲೈಟ್, ರಿಗಾನನ್ನು ರಕ್ಷಿಸುತ್ತಾನೆ.  ಎಲ್ಲ ಅಪಾಯಗಳ ನಡುವೆ ಇದ್ದರು ಅವುಗಳ ಅರಿವಿಲ್ಲದೆ ನಕ್ಕು ನಲಿಯುವ ರಿಗಾ, ಜೀವವನ್ನೇ ಪಣವಾಗಿತ್ತು ರಿಗಾ ನನ್ನು ರಕ್ಷಿಸುವ ಸ್ಯಾಟಲೈಟ್ ಇಬ್ಬರು ಯುದ್ಧ ಕಾಲದ ಅವಶೇಷಗಳೇ.

ಸ್ವಲ್ಪ ದಿನಗಳಲ್ಲಿ ನೀಲ ಆಕಾಶ ಆಗ್ರಿನ್ ಲ ಪ್ರಾರ್ಥನೆಗೆ ಓಗುಟ್ಟಿವೆ. ಯುದ್ಧದಿಂದ ಜರ್ಜರಿತವಾದ ಭೂಮಿಯಲ್ಲಿನ ಬಂಡೆಯೊಂದರ ತುದಿಯಿಂದ ಆಕಾಶಕ್ಕೆ ಹಾರಿದ್ದಾಳೆ.   ಯಾವತ್ತಿಗೂ ಖಾಲಿಯಾಗದಷ್ಟು ಮೌನವನ್ನು ಕೊಂಡೊಯ್ದಿದ್ದಾಳೆ.  ಪುಟ್ಟ ರಿಗಾನನ್ನು ಬಲಿ ತೆಗೆದುಕೊಂಡಿದ್ದು ಅಮೆರಿಕೆಯ ಅಥವಾ ಇರಾಕಿನ ಅಥವಾ ಟರ್ಕಿಯ ಬಂದೂಕಲ್ಲ, ಆಗ್ರಿನ್ ಳ  ಹೃದಯ ಮತ್ತು  ಆತ್ಮಸಾಕ್ಷಿಯ ಕಲಹದ   ಸಿಡಿಮದ್ದಿಗೆ ರಿಗಾ ಬಲಿಯಾಗಿದ್ದಾನೆ. ಈಗ ಅವರ ಕುಟುಂಬದಲ್ಲಿ ಉಳಿದುಕೊಂಡವನು ಹೆಂಕೊವ್ ಮಾತ್ರ, ಕೈಗಳಿಲ್ಲದ ಹೆಂಕೊವ್ ನಲ್ಲಿ ಬದುಕುವ ಆಶಾವಾದವಿದೆ. 

ಯುದ್ಧದ ಕರಾಳ ಛಾಯೆಯನ್ನು  ಹೊತ್ತು ಸಾಗುತ್ತಿರುವ ಅಮಾಯಕರ ಬಾಗಿದ ಬೆನ್ನಿನ ಅಡಿಯಲ್ಲಿನ ಶಕ್ತಿ ಕುಂದಿದ ಹೃದಯದ  ಚಿತ್ರಣವನ್ನು ಕಟ್ಟಿ ಕೊಡುವ  ಈ ಸಿನಿಮಾ  ' ಟರ್ಟಲ್ಸ್ ಕ್ಯಾನ್ ಫ್ಲೈ'. ಚಿತ್ರದುದ್ದಕ್ಕೂ ಸ್ಯಾಟಲೈಟ್ ಗೆ ಅಮೇರಿಕಾ ಒಂದು ದಂತಕಥೆಯಾಗಿ ಕಾಣಿಸುತ್ತದೆ.  ಟೈಟಾನಿಕ್, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೋ, ಬ್ರೂಸ್ ಲೀ, ಜಿನೆದಿನ್ ಜಿದಾನೆ ಎಲ್ಲರೂ ಸಹ ಅಮೇರಿಕ ಎನ್ನುವವ ದೂರದ ಹೊಳಪು ಕನಸಿನ ಭಾಗವಾಗಿ ಸ್ಯಾಟಲೈಟ್ ಮತ್ತು ಅವನ ಸಂಗಡಿಗ ಬಾಲಕರನ್ನು ಹಿಂಭಾಲಿಸಿದೆ. ಅಮೇರಿಕಾ ಎನ್ನುವವರು ಉದಾತ್ತರು ಮತ್ತು ಸದ್ದಾಂ ಕೈಯಿಂದ ಇರಾಕ್  ಬಿಡಿಸಿ ಒಂದು ಹೊಸ ಬದುಕನ್ನು ತಂದುಕೊಡುತ್ತಾರೆ ಎನ್ನುವ ಭಾವನೆ ಅವರೆಲ್ಲಿಗಿದೆ. ಯಾವತ್ತಿಗೂ ಹೇಳದ ಮಾತಿನಲ್ಲಿ, ದಿಗಂತದೆಡೆಗೆ ನೆಟ್ಟ ಮೌನದಲ್ಲಿ ಮರೆಯಾದ ಆಗ್ರಿನ್ ಮತ್ತು ಸುತ್ತ ಜಗತ್ತಿನ ಕತ್ತಲನ್ನು ಯಾವತ್ತಿಗೂ ಕಾಣದ ರಿಗಾನ ಸಾವಿನ ಪದರಗಳಲ್ಲಿ ಅಮೇರಿಕಾ ಎನುವ ದಂತಕಥೆ ಕ್ರಮೇಣ ಅಳಿಸುತ್ತಿದೆ. ಕೊನೆಯ ದೃಶ್ಯದಲ್ಲಿ ಅಮೆರಿಕಾದ ಸೈನಿಕರು ಹಾದು  ಹೋಗುತ್ತಿರುವದನ್ನು ಕಂಡ  ಪಾಷೋ  ಖುಶಿಯಿಂದ ಸ್ಯಾಟಲೈಟ್ ನತ್ತ ಕಿರುಚಿ ಹೇಳುತ್ತಿದ್ದಾನೆ " ನೋಡು ಅಮೆರಿಕಾದವರನ್ನು ನೋಡಬೇಕು ಎನ್ನುತ್ತಿದ್ದೇಯಲ್ಲ, ಇಲ್ಲಿದ್ದರೆ ಅವರು ". ಸ್ಯಾಟಲೈಟ್ ಅವರಿಗೆ ಬೆನ್ನು ತಿರುಗಿಸಿ ಮೌನವಾಗಿ ನಡೆದಿದ್ದಾನೆ. ಯಾವತ್ತಿಗೂ ಮಾತನಾಡುತ್ತಿರುತ್ತಿದ್ದ ಸ್ಯಾಟಲೈಟ್  ಮೌನಿಯಾಗಿದ್ದಾನೆ. ಚಿತ್ರದುದ್ದಕ್ಕೂ ಮೌನವನ್ನು ಅತ್ಯಂತ ಶಕ್ತಿಯುತ, ಪರಿಣಾಮಕಾರಿ  ಮತ್ತು ತೀವ್ರವಾಗಿ ಬಳಸಿಕೊಂಡಿರುವ ನಿರ್ದೇಶಕ ಸ್ಯಾಟಲೈಟ್ ನ ಮೌನದ ಮೂಲಕ ಯುದ್ಧ  ಒಳ್ಳೆಯ  ದಿನಗಳನ್ನು ತರುವದು ಎನ್ನುವ  ನಂಬಿಕೆಯ ಬುಡಕ್ಕೆ ಮೌನ ಪ್ರಶ್ನೆಯ ಈಟಿ ಚುಚ್ಚಿದ್ದಾರೆ.   

ಜೀವಂತ ಮೈನ್ಸ್ ಗಳ ಹುಡುಕಿ ತೆಗೆದು ಅದರಿಂದ ಬದುಕು ಕಟ್ಟಿಕೊಳ್ಳುವ ಮತ್ತು ಕಳೆದುಕೊಳ್ಳುವ ಅನಾಥ ಹುಡುಗರ ಮೌನ, ಗತಕಾಲದ ದುರಂತವನ್ನು ಜೀವಂತವಾಗಿಡುವಂತೆ ಜೊತೆಗಿರುವ ರಿಗಾನನ್ನು ದಿಟ್ಟಿಸುವ ಆಗ್ರಿನ್ ಳ ಮೌನ, ಟರ್ಕಿಯ ಗಡಿಯಲ್ಲಿ ಕಾಣದ  ಬಂದೂಕಿಗೆ ಅಡ್ಡಲಾಗಿ ಕುಳಿತಿರುವ  ಭ್ರಮೆಯ ಬೆಳಕಿನ ಪ್ರಪಂಚವನ್ನೇ  ಕಾಣದ ಪುಟ್ಟ ರಿಗಾನ ಅಳುವ ಮುಂಚಿನ ಮೌನ, ದೂರದಲ್ಲಿ ಬದುಕ ಕಟ್ಟಿಕೊಳ್ಳುವ ಆಸೆಯಲ್ಲಿರುವ ಹೆಂಕೊವ್  ಕಳೆದುಕೊಂಡ ಕೈಯ ಜೊತೆಗಿನ ಮೌನ, ಆಗ್ರಿನ್ ಳ ಮೌನಕ್ಕೆ ಮಾತು ಸೇರಿಸಲು ಹೊರಟು ಸೋತ ಸ್ಯಾಟಲೈಟ್ ನ ಮೌನ, ವಾರ್ತಾ ಚಾನಲ್ ನಲ್ಲಿ ಅಮೆರಿಕಾದ ಆಗಮನದ ಸುದ್ದಿ ನಿರಿಕ್ಷಿಸುತ್ತಿರುವ ಜನರ ಮೌನ, ನೀಲ ಆಕಾಶದ  ಅಡಿಯಲ್ಲಿ  ಯುದ್ಧೋನ್ಮಾದ ಮಾತುಗಳನ್ನು ಶಾಪಗ್ರಸ್ತ ಮೌನವಾಗಿಸಿದೆ. 

ಸಿನಿಮಾ: ಟರ್ಟಲ್ಸ್ ಕ್ಯಾನ್ ಫ್ಲೈ  (Turtles Can Fly)
ಭಾಷೆ: ಕುರ್ದಿಶ್ 
ದೇಶ: ಇರಾನ್ 
ನಿರ್ದೇಶನ:   ಬಹ್ಮಾನ್ ಗೊಬಡಿ 

ಇಂತಿ, 
ಸಚೇತನ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *