ಲೇಖನ

ಮೌನರಾಗದ ನೆನಪ ಜೋಗುಳದಲಿ: ದಿವ್ಯ ಟಿ.

ಯಾಕೋ ಬೇಸರವಾಗುತ್ತಿದೆ ಎಂದು ರಾತ್ರಿ ಬೇಗ ಮಲಗಿದವಳಿಗೆ ನಿದ್ರೆಯೂ ಬರುತ್ತಿರಲಿಲ್ಲ. ಒಂದೆರೆಡು ಹಾಡು ಕೇಳುತ್ತಾ ಹಾಗೆಯೇ ಮಲಗಿಬಿಟ್ಟಿದ್ದೆ. ಒಂದು ಗಂಟೆಯ ನಂತರ ಸರಿಯಾಗಿ 12.10ಕ್ಕೆ ಎಚ್ಚರಿಕೆಯಾಯಿತು. ನಿಶ್ಚಿಂತೆಯಿಂದ ಮಲಗಿದ ಕೊಠಡಿಯಲ್ಲಿ ಗಡಿಯಾರದ ಟಿಕ್ ಟಿಕ್ ಸದ್ದು, ಫ್ಯಾನ್ ಗಾಳಿಯ ಸದ್ದು ಬಿಟ್ಟರೆ ಬೇರೆನೂ ಇಲ್ಲ. ವಾಹನಗಳ ಸದ್ದಿನಿಂದ ಗಿಜಿ ಗಿಜಿ ಎನ್ನುತ್ತಿದ್ದ ರಸ್ತೆಯೂ ಮೌನವಾಗಿದೆ. ಅಲ್ಲೆಲ್ಲೋ ಇರುವ ರೈಲ್ವೆ ಹಳಿಯ ಮೇಲೆ ಸಂಚರಿಸುತ್ತಿರುವ ರೈಲಿನ ಸದ್ದು ಗಾಳಿಯಲ್ಲಿ ತೇಲಿ ಬರುತ್ತಿದೆ.

ಇತ್ತೀಚಿಗೆ ಎಚ್ಚರವಾಗುವುದು ನಿದ್ರೆಯಿಲ್ಲದೆ ಹೊರಳಾಡುವುದು ಸಾಮಾನ್ಯವಾಗಿದ್ದರೂ ಇಂದು ಏನೋ ಆಘಾತವಾಗಿದೆಯೇನೋ ಎಂಬಂತೆ ಹೃದಯ ಭಾರವಾಗಿತ್ತು. ಜೊತೆಗೆ ನಿನ್ನ ಮೆಸೇಜ್ ಬರಲಿಲ್ಲವಲ್ಲ ಎಂದು ಬೇಸರಿಸುತ್ತಿತ್ತು. ಅಷ್ಟರಲ್ಲಿ ಮೊಬೈಲ್‍ಗೆ ಮೆಸೇಜ್ ಬಂದ ಸದ್ದಾಯಿತು. ಗೊತ್ತು ನೀನಲ್ಲ ಕಳುಹಿಸಿರುವುದೆಂದೂ, ಆದರೂ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ನೀನೇ ಇರಬೇಕೆಂದು ಹೇಳುತ್ತಿತ್ತು. ಮೊಬೈಲ್‍ನ ಕಡೆಗೆ ತಿರುಗಿ ನಿಧಾನವಾಗಿ ಕೈಗೆತ್ತಿಕೊಂಡು ನೋಡಿದೆ. ನಿರೀಕ್ಷಿಸಿದಂತೆ ಸಂದೇಶ ನಿನ್ನದ್ದಲ್ಲ. ತಂತ್ರಜ್ಞಾನಗಳ ಬೆಳೆವಣಿಗೆಯಿಂದಾಗಿ ಸಂಪರ್ಕ ಸಾಧನಗಳು ಸುಲಭವಾಗಿ ಕೈಗೆ ಸಿಗುವಂತಾಗಿ ನಮ್ಮ ನಿರೀಕ್ಷೆಗಳನ್ನು ಹೆಚ್ಚಿಸುವಂತೆ ಮಾಡಿದೆಯೇನೋ ಎನಿಸಿತು.

ಸಂದೇಶದಲ್ಲಿತ್ತು “Happiness is more important than “Smile” because “Smile” comes from “Lips” but “Happiness” comes from “Heart”, Be Happy forever… ಹೌದಲ್ವ ಎಂದೆನಿಸಿತು. ಅದನ್ನೇ ನೆನೆಯುತ್ತಾ ಇತ್ತೀಚಿಗೆ ನಗು ಬರೀ ತುಟಿಯ ಮೇಲಿದೆ, ಹೃದಯದಿಂದ ಅಷ್ಟು ಖುಷಿಯಾಗಿ ಇದ್ದಂಗಿಲ್ಲ ಅನಿಸೋಕೆ ಶುರುವಾಯಿತು. ಅಷ್ಟರಲ್ಲೇ ಮೊಬೈಲ್ ರಿಂಗಾಯ್ತು, ಇಷ್ಟು ಹೊತ್ತಿನಲ್ಲಿ ಯಾರು? ಎಂದೂ ಕರೆ ಮಾಡದ ನೀನು ಅಪ್ಪಿತಪ್ಪಿ ಇಷ್ಟು ಹೊತ್ತಿನಲ್ಲಿ ಮಾಡಿರುತ್ತೀಯೇ ಎಂದು ನೋಡಿದೆ. ಆ ಕ್ಷಣದಲ್ಲಿ ನಿನ್ನ ಹೊರತು ಬೇರೇನೂ ಇಲ್ಲವೆಂಬಂತೆ ಎಲ್ಲದರಲ್ಲೂ ಎಲ್ಲವೂ ನೀನೇ ಆಗಿದ್ದೆ. ಅದೂ ನೀನಲ್ಲ, ಗೆಳತಿಯ ಹೆಸರು ನೋಡಿ ಹೆದರಿದೆ. ಈ ಹೊತ್ತಿನಲ್ಲಿ ಏಕೆ ಕರೆ ಮಾಡುತ್ತಿದ್ದಾಳೆ, ಏನಾಯ್ತೋ ಏನೋ ಎಂದು ರಿಸೀವ್ ಮಾಡಿ ಯಾಕೆ ಏನಾಯ್ತು ಎಂದು ಕೇಳಿದೆ, ಅದಕ್ಕೆ ಅವಳು ಏನೂ ಆಗಿಲ್ಲ, ನನಗೆ ನಿದ್ರೆ ಬರುತ್ತಿರಲಿಲ್ಲ, ಹೇಗೂ ನಿನಗೂ ನಿದ್ರೆ ಬಂದಿರುವುದಿಲ್ಲವಲ್ಲ ಅದಕ್ಕೆ ಮಾಡಿದೆ ಎಂದಳು. ಸ್ವಲ್ಪ ಹೊತ್ತು ಮಾತನಾಡಿದ ನಂತರ ಫೋನ್ ಇಟ್ಟೆ.

ಮತ್ತೆ ಯೋಚನಾ ಲಹರಿ ನಿನ್ನ ಕಡೆಗೆ ಬಂದಿತು. ಇರುವ ವಿಷಯವನ್ನು ನೇರವಾಗಿ ಹೇಳುವುದಕ್ಕಾಗದೇ ಪರೋಕ್ಷವಾಗಿ ಹೇಳ ಹೋಗಿ, ಅರ್ಥ ನೀಡಬೇಕಿದ್ದದ್ದು ಅಪಾರ್ಥವಾಗಿ ನೀನು ನನಗೆ ಮೆಸೇಜ್ ಮಾಡುವುದನ್ನು ಬಿಡಲು ಒಂದು ಕಾರಣವಾಗಿತ್ತೇನೋ ತಿಳಿಯುತ್ತಿಲ್ಲ. ಆದರೂ ನೀನೇ ಮೆಸೇಜ್ ಮಾಡಲಿ, ನೀನೇ ಮಾಡದಿರುವಾಗ ಇನ್ನೂ ನಾನು ಹೇಗೆ ಮಾಡುವುದಕ್ಕಾಗುತ್ತದೆ ಎಂದು ಮನಸ್ಸು ಹಠಕ್ಕೆ ಬೀಳುತಿತ್ತು. ನಾವಿಬ್ಬರೂ ಜಗಳವೇನೂ ಆಡಿರಲಿಲ್ಲ, ಮುನಿಸಿಕೊಂಡಿಯೂ ಇರಲಿಲ್ಲ, ಜೊತೆಯಲ್ಲಿರುವಾಗ ಚೆನ್ನಾಗಿಯೇ ಮಾತನಾಡುವ ನಾವು, ಬಿಟ್ಟುಬಂದ ಮೇಲೆ ನನ್ನ ಮನಸ್ಸು ಇಂತಹ ಹಠಕ್ಕೆ ಬೀಳುವಂತ್ತಿತ್ತು. ಕಳುಹಿಸಬೇಕೆಂದು ಟೈಪಿಸಿದ ಸಂದೇಶಗಳೆಲ್ಲಾ ಡ್ರಾಫ್ಟ್‍ನ ಮನೆ ಸೇರುತಿತ್ತು. ಹುಚ್ಚು ಮನಸ್ಸು ಹಿಡಿತಕ್ಕೆ ಸಿಗದೆ ಮೆಸೇಜ್ ಕಳುಹಿಸು ಎಂದು ಹೇಳುತ್ತಿರುವಂತೆಯೇ ಮೆದುಳು ಇಷ್ಟು ಹೊತ್ತಿನಲ್ಲಾ ಮಲಗು ಸುಮ್ಮನೆ ಎನ್ನುತ್ತಿತ್ತು. ಎಷ್ಟೆಲ್ಲಾ ಗೊಂದಲಗಳಿದ್ದರೂ ನಮ್ಮನ್ನು ನಿಯಂತ್ರಿಸಿಕೊಳ್ಳಬೇಕಾದುದು ನಾವೇ ತಾನೇ. ಎಷ್ಟೇ ದುಃಖ, ಬೇಸರಗಳಿದ್ದರೂ ಅವುಗಳನ್ನೆಲ್ಲಾ ಅವಕಾಶಗಳಾಗಿ ತೆಗೆದುಕೊಂಡು ಬಾಳಿನ ಪಯಣವನ್ನು ಸುಖಕರವಾಗಿ ಮಾಡಿಕೊಳ್ಳಬೇಕಾದವರು ನಾವೇ ಅಲ್ಲವೇ.

ಆದರೂ ಯಾಕೆ ನೀನು ಆ ವಿಷಯವನ್ನು ನನಗೆ ಹೇಳಲಿಲ್ಲ. ಹೇಳದಿರಲು ಅಷ್ಟೊಂದು ರಹಸ್ಯವೇ? ಹಾಗೆಲ್ಲ ಇಲ್ಲವಾಗಿದ್ದರೂ… ಬೆಂಕಿ ಇಲ್ಲದೆಯೇ ಹೊಗೆಯಾಡುತ್ತದೆಯೇ ಎಂದೆನಿಸುತ್ತಿತ್ತು. ನಿನಗೆ ನಾನೂ ಅತ್ತ ಸ್ನೇಹಿತಳೂ ಅಲ್ಲ, ಇತ್ತ ಏನೂ ಅಲ್ಲ, ಒಟ್ಟಿನಲ್ಲಿ ನಮ್ಮಿಬ್ಬರದೂ ಪರಿಚಯದಲ್ಲಿ ಹೆಸರಿಡದ ಬಂಧವೆಂದು ಮಾತ್ರ ತಿಳಿದಿತ್ತು. ಬಂಧವನ್ನು ಬಂಧನಕ್ಕೊಳಪಡಿಸುವುದಾಗಲಿ, ಜೊತೆಯಲ್ಲಿರುವುದಕ್ಕಾಗಿ ಸಂಬಂಧವನ್ನು ಹುಡುಕುವುದಾಗಲಿ ಸರಿಯಲ್ಲ ಎನ್ನುವ ನಿನ್ನ ನೇರ ನುಡಿ ತುಂಬಾ ಕಷ್ಟದ ನಡುವೆಯೂ ಆ ಯೋಚನೆಯನ್ನು ಬಿಟ್ಟರೂ ಬಿಡದಂತೆ, ಬಿಟ್ಟಂತೆ ಇತ್ತು. ಆದರೂ ನೀನು ಈ ವಿಷಯದಲ್ಲಿ ರಹಸ್ಯ ಮಾಡಬಾರದಿತ್ತು. ಬೆಳಿಗ್ಗೆ ಕಂಡೊಡನೆಯೇ ಕೇಳಬೇಕು ಹೇಳು “ನಿನ್ನ ಮದುವೆ ಯಾವಾಗ” ಎಂದು, ಕೇಳಿದರೂ ಹೇಳುವೆ ನೀನು ಅದೇ ನಿರೀಕ್ಷೆಯ ಉತ್ತರ ಯಾವಾನಿಗೊತ್ತು, ಮರೆತಿಹನೆಂದರೂ ನೆನಪಾಗುವ ನೆನಪುಗಳಿಗೆ ಮರೆವು ಎಂಬ ಕಂಬಳಿಯ ಹೊದ್ದಿಸಿ, ಕಳೆದುಕೊಳ್ಳುವವರೇ ಕಾಡುವುದು ಹೆಚ್ಚೆಂದೂ ಹೇಳಿದ್ದ ನಿನ್ನ ಮಾತುಗಳನ್ನು ನನ್ನಲ್ಲೇ ಹೇಳಿಕೊಳ್ಳುತ್ತಾ ಏನೂ ಕೇಳದೆ ಮೌನವಾಗಿದ್ದು ನಾನೇ ಕಳೆದುಹೋಗಲೆ ಎಂದು ಯೋಚಿಸುತ್ತಿರುವಾಗಲೇ ಬೆಳಕು ಹರಿದಿತ್ತು. 

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮೌನರಾಗದ ನೆನಪ ಜೋಗುಳದಲಿ: ದಿವ್ಯ ಟಿ.

 1. ಮೌನರಾಗದ ಲಹರಿ ಚೆನ್ನಾಗಿದೆ…ಎಷ್ಟೋ ಘಟನೆಗಳು ಯೋಚನೆಗಳು ಹಾಗೆ ಮರೆತುಹೋಗುತ್ತವೆ….ಅಂಥ ನೆನಪುಗಳಿಗೆ ಅಕ್ಷರ ರೂಪ ಕೊಡಬೇಕು ಎನ್ನಿಸುತ್ತಿದೆ…ನಿಮ್ಮ ಲಹರಿ ಓದಿದ ಮೇಲೆ…………ಥ್ಯಾಂಕ್ಯೂ  ದಿವ್ಯ. 

 2. ಲಹರಿ ಸೊಗಸಾಗಿ ಮೂಡಿ ಬಂದಿದೆ. ಎಷ್ಟೋ ಘಟನೆಗಳು ಮರೆಯುವ ಮುನ್ನ ಬರೆಯಬೇಕೆಂಬ ಹಂಬಲ ಮೂಡಿದೆ..ನಿಮ್ಮ ಲಹರಿ ಓದಿದ ಮೇಲೆ . ಥ್ಯಾಂಕ್ಸ ದಿವ್ಯ.  ಥ್ಯಾಂಕ್ಸ ಟು  ಪಂಜು 

 3. ಧನ್ಯವಾದಗಳು ನಮ್ಮ ಸರ್ ಗೆ , ಪ್ರಕಟಿಸಿದ ಪಂಜು ತಂಡಕ್ಕೆ ಹಾಗೂ ಓದುಗರಿಗೆ, ಪ್ರತಿಕ್ರಿಯಿಸಿದ ನಾಗರಾಜ್.ಹರಪನಹಳ್ಳಿಯವರಿಗೆ

 4. ಆಲಾಪನೆಯಿಲ್ಲದೆ 
  ಅಲೆದಾಡುವ
  ನೆನಪಿನ
  ಮೌನ ರಾಗಗಳಿಗೆ
  ಸದಾ
  ಜೊತೆಯಾಗಿ
  ಮಿಡಿಯುವುವು 
  ಹೃದಯ
  ತಂತಿಗಳು

Leave a Reply

Your email address will not be published. Required fields are marked *