ಕವಿ ಸುರೇಶ ಎಲ್. ರಾಜಮಾನೆರವರು ಅಪ್ಪಟ ಕನ್ನಡಭಿಮಾನಿ, ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರವೃತ್ತಿಯಲ್ಲಿ ಒಬ್ಬ ಕವಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಪ್ರಕಾಶಿಸುವ ಬೆಳಗಲಿ ದೀಪ. ಹುಟ್ಟೂರು ಮಹಾಕವಿ ರನ್ನನ ಊರೇ ಆಗಿರುವಾಗ ಆ ಛಾಪು ಕವಿ ಸುರೇಶನಲ್ಲಿಯೂ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಕವಿಯ ದ್ವೀತಿಯ ಕೃತಿ ರತ್ನ ‘ಮೌನಯುದ್ಧ’ ಮತ್ತೆ ಮತ್ತೆ ಓದಿದ ನಂತರ ಈ ಒಂದು ವಿಮರ್ಶೆಗೆ ನಾನು ಕೈಹಾಕಿದೆ ಓದುಗರು ಇಷ್ಟ ಪಡುವಂತಹ ಅನೇಕ ಅಂಶಗಳು ಈ ಕೃತಿಯಲ್ಲಿ ಅಡಕವಾಗಿದೆ. ಸರಳ ಭಾಷೆಯ ಸುಂದರ ನಿರೂಪಣೆ ಸೊಗಸಾಗಿದೆ. ಈ ಕೃತಿಯು ಯುವ ಮನಸ್ಸುಗಳಿಗೆ ಜಾಗೃತಗೊಳಿಸಲೆಂದೆ ಓದುಗರಿಗೆ ಅರ್ಪಣೆಯಾಗಿದೆ. ಡಾ|| ಟಿ.ಯಲ್ಲಪ್ಪನವರು ಕವಿಗಳು ಪ್ರಾಧ್ಯಾಪಕರು ತಮ್ಮ ಮುನ್ನುಡಿಯನ್ನು ಕೃತಿಯ ಶೀರ್ಷಿಕೆಗೆ ತಕ್ಕಂತೆ ತಮ್ಮ ವಿಚಾರ ಲಹರಿಯಲ್ಲಿ ಬರೆದಿದ್ದಾರೆ. ಶ್ರೀಮತಿ ಲಲಿತಾ ಕೆ. ಹೊಸಪ್ಯಾಟಿರವರು ಸಹ ಶುಭನುಡಿಗಳನ್ನಾಡಿದ್ದಾರೆ. ಓದುಗರ ಶುಭ ಹಾರೈಕೆಗಳು ಸಹ ಕವಿಯೊಂದಿಗಿದೆ.
ಕೃತಿಯ ಪುಟಗಳು ತೆರೆದಂತೆಲ್ಲ ಉತ್ತಮ ಕವಿತೆಗಳ ಹೂರಣ ಕಾಣಸಿಗುತ್ತದೆ. ‘ಸಾವಿಗೂ ಒಂದು ಮುಖವಿದೆ’ ಕವಿತೆಯಲ್ಲಿ ಸಾವಿನ ನಾನಾ ರೂಪಗಳ ಪರಿಚಯವಾಗುತ್ತದೆ. ಸಾವು ಒಂದು ನೆಪವಾದರೂ ಅದು ಕ್ರೂರ ಭೀಕರ ಮತ್ತು ಬೀಭತ್ಸವಾಗಿರುವುದು ಕಂಡುಬರುತ್ತದೆ. ದಯೆ ಕರುಣೆ ಅನ್ನೋ ಸಂಧಾನವೇ ಇಲ್ಲದೆ ಅಟ್ಟಹಾಸದಿ ಆರ್ಭಟಿಸಿ, ಆಕ್ರಮಿಸಿ ಜಯಸಾದಿಸಿಯೇ ಹೊರಟು ಹೋಗುವ ಸಾವಿನ ಚಿತ್ರಣ.
‘ಸಾವು ಸಾಮಾನ್ಯವಾದರೂ
ಅನುಭವಿಸೋ ನೋವು ಅಸಮಾನ್ಯ
ಅಳುವವರೊಡಲಿಗೆ ಬೆಂಕಿ ಸುರಿದು
ನರಳಾಟದಲ್ಲೇ ನರಕ ತೋರಿಸೋ
ಸಾವೊಂದು ಬಂದಿದೆ’
ಸಾವನ್ನು ಆಹ್ವಾನಿಸುವ ಮತ್ತು ಅನುಭವಿಸುವ ನರಕಯಾತನೆಯು ಇಲ್ಲಿ ಚಿತ್ರಿತವಾಗಿದೆ. ಓ ಸಾವೇ ನೀನೆಷ್ಟು ಕ್ರೂರ ಎಂಬ ಮಾತಿಗೆ ಕವಿತೆಯ ಪ್ರತಿಸಾಲು ಕೂಡ ದನಿಗೂಡುತ್ತಿದೆ. ಕವಿಯ ಕಲ್ಪನೆಯು ಅಷ್ಟೆ ಭೀಕರವಾಗಿದೆ. ಕವಿತೆ ನಿಜಕ್ಕೂ ಅರ್ಥ ನೀಡುವ ನಿಟ್ಟಿನಲ್ಲಿ ಓದುಗರಿಗೆ ಇಷ್ಟವಾಗುತ್ತದೆ.
‘ನನ್ನೊಳಗಿನ(ಅ)ವನೇ ನಾನು’ ಕವಿತೆಯಲ್ಲಿ ತಂದೆ ಮಗನ ಬಾಂಧವ್ಯ, ಬೇಸುಗೆ, ಪ್ರೀತಿ, ಧೈರ್ಯ, ಶಾಂತಿ, ಶೌರ್ಯ ತುಂಬಿ ಹೋದ ಅಪ್ಪನ ಸದಾ ನೆನೆಯುವುದಷ್ಟೆ ಅಲ್ಲ ಅಪ್ಪನ ಅನುರಾಗದಲ್ಲಿ ಲೀನವಾಗಿ ಹೋಗುವಂತಹ ಕವಿಯ ಕಲ್ಪನೆ ನಿಜಕ್ಕೂ ಚಂದ.
‘ಜಗದ ಕಣ್ಣಿಗೆ ಮಾತ್ರ ಇಲ್ಲವಾಗಿ ಹೋದಾಂವ
ನನ್ನ ಜಗತ್ತಿನಲ್ಲಿ ಸದಾ ಉಸಿರಾಡುತ್ತಿರುವಾಂವ’
ಅನ್ಯರ ಪಾಲಿಗೆ ಇಲ್ಲವಾದರು ಮಗನ ಉಸಿರಲ್ಲಿ ಉಸಿರಾಡುವ ಅಪ್ಪನೇ ಆ ಜಗತ್ತು ನನ್ನದೆಂದು ಹೇಳಿ ಹೆಮ್ಮೆ ಪಡುವ ಮಗ. ಸಂಬಂಧಗಳ ಸರಮಾಲೆಯಲ್ಲಿ ಎರಡು ಅನಘ್ರ್ಯ ರತ್ನಗಳೆಂದೆ ಹೇಳ ಬಹುದು. ಅಪ್ಪನ ನೆನೆದು ಕವಿ ಭಾವುಕನಾಗದೇ ಸ್ವಾಭಿಮಾನದ ಪಾಠ ಕಲಿಸಿ ಹೋದ ಎಂಬ ಸತ್ಯ ನಿಜಕ್ಕೂ ಜೀವಂತ ಅಲ್ಲವೇ?
ಕತ್ತಲೆಯಿಂದ ಬೆಳಕಿನೆಡೆ ಅಜ್ಞಾನದಿಂದ ಸುಜ್ಞಾನದೆಡೆ ಕರೆದೊಯ್ಯುವ ದೀಪದ ಬೆಳಕು ಎಲ್ಲರ ಪಾಲಿಗೆ ದೊರಕಲಿ ಎಂಬ ಆಶಯದೊಂದಿಗೆ ಕವಿ ಮುನ್ನಡೆಯುತ್ತಾ ಹೊಸತನ, ಗೆಲುವು, ಮಾನವಿಯತೆ ಕುರಿತಂತೆ ‘ಬೆಳಗಲಿ ದೀಪ’ ಈ ಕವಿತೆ ಶಕ್ತಿ ಚೈತನ್ಯ ತುಂಬುವಲ್ಲಿ ಯಶ ಸಾಧಿಸಿದೆ.
ಮೊಳಗಲಿ ದೀಪ
ಮಾನವತೆಯ ಬೆಳಕ ಚೆಲ್ಲುತ ಚದುರಿಸುತ
ಮನವನರಿತು ನಡೆಯುವವರ ಮನದಂಗಳದಲ್ಲಿ
ಮನುಜ ಕುಲಕೆ ಜಯವ ನೀಡಲಿ
ಮಾನವಿಯತೆಯು ಎಲ್ಲರಲ್ಲಿಯೂ ಉದಯಿಸಿದಾಗ ಗೆಲುವಾದಾಗ ಮನುಜ ಕುಲಕ್ಕೆ ಜಯವು ಖಂಡಿತವು ಎಂಬ ಅಚಲ ನಿರ್ಧಾರ, ಅಪಾರ ನಂಬಿಕೆ, ವಿಶ್ವಾಸದ ನಗು ಕವಿಯ ಲೇಖನಿಯಿಂದ ಹೊರಹೊಮ್ಮಿದೆ.
ನಾ ಸತ್ತಾಗ ನೀನತ್ತಾಗ’ ಎಂಬ ಕವಿತೆ ಓದುಗನ ಮನಸ್ಸಿನಲ್ಲಿ ಸದಾ ಹಸಿರಾಗಿಯೇ ಇರುತ್ತೆ. ಸಾವನ್ನು ಸ್ವೀಕರಿಸುವ ಪ್ರವೃತ್ತಿಯಲ್ಲಿ ಎರಡು ಹೃದಯಗಳನ್ನು ಬೇರ್ಪಡಿಸಿದಲ್ಲದೇ ನಿರಂತರವಾಗಿ ಕಾಡುವ ಅವನ ನಿಲುವುಗಳು, ತುಡಿತ ಮಿಡಿತ, ಸಂತಸ, ನಿರಾಶೆ, ಆಲಿಂಗನ, ಚುಂಬನ ಹೂಬನದಂತಿದ್ದು ಅದು ನಶಿಸಿಹೋದಾಗ ಬರಡು(ಒಂಟಿತನ) ಬಾಳು ನೆನೆದು ಕಂಬನಿ ತರುವ ಅವಳ ಮಾರ್ಧನಿ.
ನಾನು ಸತ್ತಾಗ ನೀನು ಅತ್ತಾಗ
ಬಾಹುಗಳಲಿ ಬಂದಿಯಾದ ಗಳಿಗೆಯೇನಾದರು
ನೆನಪಾಗಬಹುದೇನೋ ನಿನಗೆ
ತಬ್ಬಿಕೊಂಡು ಬೈದುಬಿಡು ಜೋರಾಗಿ
ಇರುವೆ ನಾನೇನೂ ಪ್ರತ್ಯುತ್ತರ ನೀಡದೆ
ಮನದಲ್ಲೇ ಕಟ್ಟಿದ ಮನೆಯೊಡೆದು ಮಣ್ಣಾಕಿಬಿಡು
ನಾ ನೆಮ್ಮದಿಯಿಂದ ಮಣ್ಣಲ್ಲಿ ಮಲಗುವೆ
ಓದುಗರಿಗೆ ಕಾಡುವ ಕವಿತೆಗಳ ರಚನೆಯಲ್ಲಿ ಕವಿ ಸುರೇಶ ಪರಿಪಕ್ವತೆಯನ್ನು ಹೊಂದಿದ್ದಾರೆ. ಸರಳ ಬದುಕಿನ ವಾಸ್ತವ ಸತ್ಯದ ನಿರೂಪಣೆ ಇವರ ಕವಿತೆಗಳ ವೈಶಿಷ್ಟ್ಯ.
‘ಬಣ್ಣದ ಬುದ್ಧ ಕಾಡುತ್ತಾನೆ’ ಕವಿತೆಯಲ್ಲಿ ಸಾವು ನೋವಿನ ನರ್ತನವಿದೆ, ಕಾಡುವ ಒಂಟಿತನವಿದೆ. ಬಡತನವಿದೆ, ದುಡಿಮೆ ಬೆವರ ಹನಿ ಜಾರುತ್ತಿದೆ ಎಲ್ಲದಕ್ಕೂ ಮಿಗಿಲಾಗಿ ಬದುಕಿನಲ್ಲಿ ಒಮ್ಮೆಯಾದರೂ ಬುದ್ಧನ ದರ್ಶನಕ್ಕಾಗಿ ಜೀವ ಹಾತೊರೆಯುತಿದೆ. ಈ ಸಾಲುಗಳು ನನಗೆ ವಿಶೇಷವೆನ್ನಿಸಿದವು
ಲೋಕದ ಚಿತ್ರದಲ್ಲಿ ಈಗ ಬಣ್ಣವಷ್ಟೆ
ಚಿತ್ರದಲ್ಲಿ ಇರುವ ಬುದ್ಧನೂ ಕೂಡ
ಕವಿಗೂ ಬಣ್ಣದ ಬುದ್ಧ ಕಾಡುತ್ತಾನೆ.
‘ಸಭಾಮಂಟಪದ ಮೂಲೆಯಲ್ಲಿ ನಿಂತು
ಕೈಮುಗಿಯುವವರ ಮಳ್ಳ ಮಾಡುವವರ
ಕಳ್ಳತನದ ವೇಷವ ಕಿತ್ತೆಸೆದು
ಕಾಲಿದ ಕಂಬವನ್ನು, ವಾಲದ ಮನಸ್ಸನ್ನು
ಶಿರವಿಲ್ಲದ ಶಿರವ ಮುಟ್ಟಿ
ಕಪಟವಿಲ್ಲದ ಶಪತಯೊಂದನ್ನು ಮಾಡುವವನಿದ್ದೆನೆ.’
(ಮೌನಯುದ್ಧ)
ವಾಸ್ತವ ಜಗತ್ತಿಗೆ ಇತಿಹಾಸ, ಪುರಾಣದ ಯುದ್ಧಗಳ ಪರಿಚಯದೊಂದಿಗೆ ಮಹಾಕವಿ ರನ್ನನ ಸಾಹಸ ಭೀಮ ವಿಜಯ ಮಹಾಕಾವ್ಯದ ಕನ್ನಡಿಯಲ್ಲಿ ಕವಿ ಸುರೇಶ ಎಲ್. ರಾಜಮಾನೆ ನಿಂತು ನೋಡಿದ ಭ್ರಮಿಸಿದ, ಸಂಭ್ರಮಿಸಿದ ಕ್ಷಣಗಳ ಕಲ್ಪನೆಯೇ ಈ ಕವಿತೆ ಮೌನಯುದ್ಧದಲ್ಲಿ ಸಭಾಮಂಟಪದ ದೃಶ್ಯ ಓದುಗರಿಗೆ ಮೌನಯುದ್ದದ ಸಮಗ್ರ ಚಿತ್ರಣ ತರುವಲ್ಲಿ ಕವಿ ಯಶ ಸಾಧಿಸಿದ್ದಾರೆ. ಇಂದು ಮೌನವಾದರು ಮುಂದೆ ಯುದ್ಧ ಶುರುಮಾಡುಲೆಂದೆ ಶಪಥ ಗೈದಿದ್ದಾರೆ. ಅನಾಯ್ಯದ ವಿರುದ್ಧ ನಿಲ್ಲದ ಹೋರಾಟಕ್ಕೆ ಜಯ ಸಿಗುವವರೆವಿಗೂ ಹೋರಾಟ ಮುಂದುವರಿಯುತ್ತದೆ ಇದೇ ಮೌನಯುದ್ದವಾಗಿದೆ.
ಅವು ಸತ್ತವರ ಸಾಕ್ಷಿಯಾಗಿ, ಬತ್ತಿದೇದೆಯ ಭಾವ.ನನ್ನವ್ವ, ಅವಳ ಹೆಜ್ಜೆ ಹೀಗೆ ಹತ್ತಾರು ಇನ್ನೂ ಕವಿತೆಗಳು ಓದುಗರನ್ನು ಸವಾಲಾಗಿ ಸ್ವೀಕರಿಸಲು ಸಜ್ಜಾಗಿವೆ. ಕೃತಿಯ ಪುಟಗಳು ತೆರೆದೆಂತೆಲ್ಲ ಉತ್ತಮ ಕವಿತೆಗಳ ಹೂರಣ ಕಾಣಸಿಗುತ್ತದೆ.
ಕವಿ ಸುರೇಶ ಎಲ್ ರಾಜಮಾನೆಯವರ ಮೌನಯುದ್ಧ ಅನೇಕ ರೀತಿಯ ಸಂಘರ್ಷಗಳು ಹೋರಾಟಗಳು ಮೌನವಾಗಿಯೇ ಮಾತಿಗೂ ಮನಸ್ಸಿಗೂ ವಿಜಯದ ಹಾದಿ ತೋರಿಸುವಲ್ಲಿ ಲೇಖನಿ ಖಡ್ಗದಂತೆ ಕಾರ್ಯ ನಿರ್ವಹಿಸಿದೆ. ನಾಡು ನುಡಿ ನೆಲ ಜಲ ಪ್ರಕೃತಿ ಹಸಿರು ನೇಸರ ಇನ್ನೂ ಹತ್ತು ಹಲವು ವಿಷಯಗಳು ಸೇರಿಸಿ ವಿಭಿನ್ನ ರೀತಿಯಲ್ಲಿ ನಿಮ್ಮ ಕವಿತೆಗಳಲ್ಲಿ ಅಭಿವ್ಯಕ್ತಿಯಾಗಲಿ, ಮುಂದೆ ನಿಮ್ಮಿಂದ ಅನೇಕ ಕೃತಿಗಳನ್ನು ಬಯಸುವ ನಿಮ್ಮ ಧೈರ್ಯ ಸಾಹಸ ಮಹಾಕವಿ ರನ್ನನಂತೆ ಬೆಳಗಲಿ. ಉಜ್ಜಲ ಭವಿಷ್ಯ ಲಭಿಸಲಿ.
–ಹೆಚ್. ಷೌಕತ್ ಆಲಿ
ಕವನಸಂಕಲನದಲ್ಲಿ ಕವಿತೆಗಳ ಆಳಕ್ಕಿಳಿದು ಅವುಗಳೆದೆಯೊಳಗಿನ ಭಾವಗಳನ್ನು ಸ್ಪಷ್ಟವಾಗಿ ದಾಖಲಿಸಿ ಪ್ರೋತ್ಸಾಹಿಸಿದ ತಮಗೆ ತುಂಬು ಪ್ರೀತಿಯ ಧನ್ಯವಾದಗಳು ಸರ್..