ಪುಸ್ತಕದ ಹೆಸರು : “ಮೋಹಪುರ”
ಪ್ರಕಾರ : ಕಾದಂಬರಿ
ಪ್ರಕಾಶಕರು : ಕನ್ನಡ ನಾಡು ಪ್ರಕಾಶನ
ಬೆಲೆ : ರೂ.90
ಪುಟಗಳು : 88
ಪ್ರಕಟಣೆಯ ವರ್ಷ : 2015
ಲೇಖಕರು : ಪ್ರಭಾಕರ ಜೋಶಿ ಪತ್ರಕರ್ತರು
ಮನುಷ್ಯ ಮನುಷ್ಯರ ಮಧ್ಯೆ ಅನೇಕ ಸಂಬಂಧ ಮತ್ತು ಸಂವೇಧನೆಗಳನ್ನು ಹುಡುಕುವ ಪ್ರಯತ್ನ ಮೋಹಪುರ ಕಾದಂಬರಿ ಮಾಡಿದೆ. ಮನುಷ್ಯತ್ವದ ಒಲವು ಮೇಲು ಕೀಳೆಂಬ ಭಾವನೆ ದೇವರ ನೆಲೆಯಲ್ಲಿ ತುಲನೆಮಾಡಿ ನೈಜವಾದ ಮನುಷ್ಯತ್ವ ಯಾವುದು ಎಂಬ ಸ್ಪಷ್ಟವಾದ ನಿಲುವನ್ನು ತಿಳಿಸುತ್ತದೆ. ಸಮಾಜದಲ್ಲಿರುವ ಪ್ರತಿಯೊಂದು ಪಾತ್ರಗಳು ಹೇಗೆ ತನ್ನ ಸ್ವತ: ಉಳಿವಿಗಾಗಿ ಮುಗ್ಧ ಮನಸ್ಸುಗಳೊಂದಿಗೆ ಆಟವಾಡುತ್ತಾರೆಂದು ತಿಳಿಸುತ್ತಾ, ಕೆಲವೊಮ್ಮೆ ಕಾಲಘಟ್ಟದೊಳಗೆ ಮುಳಗಿ ಹೋಗುತ್ತಿರುವ ಸತ್ಯವನ್ನು ಬಿಚ್ಚಿಡುವಲ್ಲಿ ಮೋಹಪುರ ಕಾದಂಬರಿ ಯಶಸ್ವೀಯಾಗಿದೆ.
ಕಾದಂಬರಿಯ ನಗಾರಿ ನಾಗ್ಯಾನ ಪಾತ್ರ ಬಡವರ ಎದೆಯೊಳಗಿನ ನೋವಿನ ಸಂಗತಿಯನ್ನು ಬಿಂಬಿಸಿದರೆ, ನಗಾರಿಯ ಶಬ್ದದಿಂದ ಬೆಳಗಿನ ಜಾವದಲ್ಲಿ ಗ್ರಾಮದ ಜನರಲ್ಲಿ ಸಾಮಾಜಿಕ ಉಳಿವಿಗೆ ಎಚ್ಚರಿಕೆಯಾಗಿ ಕಾದಂಬರಿಯಲ್ಲಿ ಕಂಡುಬಂದಿದೆ. ನಾಗ್ಯಾನ ಮಾನಸಿಕ ವೇದನೆ ತನಗೆ ಕೊನೆಯವರೆಗೂ ನಗಾರಿ ಭಾರಿಸುವ ನೌಕರಿಯಲ್ಲಿಯೇ ಜೀವನ ಕಳೆಯಬೇಕೆ ಎಂಬ ಪ್ರಶ್ನೆ ಹಾಕಿಕೊಳ್ಳುವದನ್ನು ಕವಿ ಸೆರೆಹಿಡಿದಿದ್ದಾನೆ.
ಒಂದು ಗ್ರಾಮದಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನತೆಯ ಅವಕಾಶಗಳನ್ನು ಕೊಟ್ಟು ಬರೆಯುವುದು ತುಂಬಾ ಕಷ್ಟವಾಗುತ್ತದೆ. ಕಾದಂಬರಿಕಾರ ಅದನ್ನು ಮೋಹಪುರ ಕಾದಂಬರಿಯಲ್ಲಿ ಬಹಳ ಸೂಕ್ಷ್ಮತೆಯನ್ನು ಪ್ರಸ್ತುತ ವಿದ್ಯಮಾನಗಳನ್ನು ಅರಿತುಕೊಂಡು ಎಡ ಮತ್ತು ಬಲಗಳೆಂಬ ಗೊಂದಲಗಳನ್ನು ಮೀರಿ ಬರೆಯುವಲ್ಲಿ ನಿಪುಣತೆಯನ್ನು ಮೆರೆದಿದ್ದಾರೆ.
ಕೇಶವ ಎಂಬುವ ಪಾತ್ರ ಆಕಸ್ಮಿಕವಾಗಿ ಕೇಶವಾನಂದ ಸ್ವಾಮಿಯಾಗಿ ಗ್ರಾಮದ ಜನರ ಭಕ್ತಿಗೆ ಪ್ರೀತಿಗೆ ಪಾತ್ರನಾಗುವ ಪರಿಯನ್ನು ಕಾದಂಬರಿಕಾರ ಬಹಳ ಸ್ವಾರಸ್ಯಕರವಾಗಿ ಬಳಸಿದ್ದಾರೆ. ತನ್ನೊಳಗಿನ ಭಯವನ್ನು ಬಗೆಹರೆಸಲು ಕಲಿತ ಮಂತ್ರವೊಂದು ತನ್ನ ಬದುಕು ರೂಪಿಸಲು ನೆರವಾಗುವ ರೀತಿಯನ್ನು ಕಾದಂಬರಿಕಾರರು ಬಹಳ ಎಚ್ಚರಿಕೆಯಿಂದ ಕಟ್ಟಿಕೊಟ್ಟಿದ್ದಾರೆ. ಭರೋಸರಾಮ ಎಂಬ ದೇವರ ಹಸರು ಕಲ್ಪನೆಯೆನಿಸಿದರು ಅದರ ಕಟುಸತ್ಯ ಎತ್ತಿ ಹಿಡಿಯುವಲ್ಲಿ ಕೃತಿ ಯಶಸ್ವೀಯಾಗಿದೆ.
ಒಂದು ಗ್ರಾಮದಲ್ಲಿ ತಲೆಯೆತ್ತಿರುವ ದೇವಸ್ಥಾನ ಅದರ ಸುತ್ತಲು ಮೆತ್ತಿಕೊಂಡಿರುವ ಸಮುದಾಯ ಅದರ ಆದಾಯ ಹೆಚ್ಚಾದಾಗಾ ಅಲ್ಲಿನ ಜನರ ಭಾವನೆಯಲ್ಲಿ ಆಗುವ ಪರಿರ್ತನೆ ಇಡಿ ಸಮುದಾಯ ಆಡುವ ಮಾತುಗಳು ಎಲ್ಲವು ಕಾದಂಬಿಯುದ್ದಕ್ಕೂ ಓದಿಸಿಕೊಂಡು ಹೋಗುತ್ತದೆ. ಗ್ರಾಮದೇವರ ಹುಂಡಿಯಲ್ಲಿ ಇರುವ ಹಣ, ಒಡವೆ, ಎಲ್ಲವು ಹೇಗೆ ಹಂಚಲ್ಪಡುತ್ತದೆ. ಹೇಗೆ ದುರ್ಬಳಕೆಯಾಗುತ್ತದೆ. ಎನ್ನುವುದನ್ನು ಕಾದಂಬರಿ ಯಾವ ಭಯವಿಲ್ಲದೇ ಹೇಳುತ್ತಾ ಹೋಗುತ್ತದೆ. ಕಾದಂಬರಿಯ ಒಳಾರ್ಥದಲ್ಲಿ ಗ್ರಾಮದ ಸಾಮಾಜಿಕ ಸಮಸ್ಯೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವೀಯಾಗಿದ್ದಾರೆ. ಒಂದು ಗ್ರಾಮದ ಜೀವನಾಡಿಗಳನ್ನು ಕಾದಂಬರಿ ಕಟ್ಟಿಕೊಡುತ್ತದೆ.
ಹೈದ್ರಬಾದ್ ಕರ್ನಾಟಕದಲ್ಲಿ ಕಾದಂಬರಿ ಹಾಗೂ ಕಾದಂಬರಿಕಾರರ ಕೊರತೆಯಿದೆ ಎಂಬುವುದನ್ನು ನೀಗಿಸುವಲ್ಲಿ ತಮ್ಮ ಮೊದಲ ಕಾದಂಬರಿಯಲ್ಲಿಯೇ ಯಶಸ್ವಿಯಾಗಿದ್ದಾರೆ. ಲೇಖಕರಾದ ಪ್ರಭಾಕರ ಜೋಶಿಯವರು ಮೂಲತ: ರಂಗಭೂಮಿಯಿಂದ ಬಂದು ಹಿರಿಯ ಪತ್ರಕರ್ತರಾಗಿ ಕಲಬುರ್ಗಿ ಭಾಗದ ಒಂದು ಸ್ಥಳವನ್ನು ಕಾದಂಬರಿಯಾಗಿ ಮಾಡಿದ್ದು ಖುಷಿಕೊಟ್ಟಿದೆ. ಜೋಶಿಯವರು ಮೂಲತ: ಎಲ್ಲಾ ಸಮುದಾಯದೊಂದಿಗೆ ಉತ್ತಮ ಒಡನಾಡಿಯಾಗಿರುವುದರಿಂದ ಸಮಕಾಲಿನ ಓದುಗರನ್ನು ಸೆಳೆಯುವ ಕಾದಂಬರಿ ನೀಡಲು ಸಾಧ್ಯವಾಗಿದೆ. ಎಲ್ಲಾ ರೀತಿಯ ಓದುಗರನ್ನು ಹಿಡಿದಿಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ.
ಸಹಕಾರ ತತ್ವದ ಆದಾರದಲ್ಲಿ ಹೊಂರಬಂದ ಈ ಕಾದಂಬರಿ ನಾಗರೀಕ ಬದುಕಿನ ಸ್ಥಳೀಯ ವಿಷಯವೊಂದು ವೈಜ್ಞಾನಿಕವಾಗಿ ಹೇಳುವ ಪ್ರಯತ್ನ ಮಾಡಿದೆ. ದೈವತ್ವದ ದುರುಪಯೋಗದ ಬಗ್ಗೆ, ಪುರೋಹಿತಶಾಹಿ ಹಾಗೂ ಹಿಂದುಳಿದ ವರ್ಗ ಇಬ್ಬರನ್ನು ಒಂದೇ ವೇದಿಕೆಯಲ್ಲಿ ನೋಡುವ ಹಂಬಲ ಕೃತಿ ಮಾಡಿದೆ. ಹೈದ್ರಬಾದ್ ಕರ್ನಾಟಕದಲ್ಲಿರುವ ಅನೇಕ ಸ್ಥಳಗಳ ಬಗ್ಗೆ ಎಲ್ಲಿಯೂ ಉಲ್ಲೇಖವಾಗುತ್ತಿಲ್ಲವೆಂಬ ಬಹುದೊಡ್ಡ ಕೊರಗನ್ನು ಮೋಹಪುರ ಕಾದಂಬರಿ ನೀಗಿಸಿದೆ ಸಮಕಾಲಿನ ಸಮುದಾಯದ ಓದುಗರನ್ನು ಹಿಡಿದಿಡುವಲ್ಲಿ ತನ್ನ ಧಾಪುಗಾಲು ಹಾಕುತ್ತದೆ. ಪ್ರಸ್ತುತ ಸಮಾಜಕ್ಕೆ ಎಚ್ಚರಿಕೆಯನ್ನು ಕೊಡುತ್ತದೆ.
-ಕೆ.ಎಂ.ವಿಶ್ವನಾಥ ಮರತೂರ.