ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ ಸ್ನೇಹಿತರ ಮಗಳೊಂದಿಗೆ ಅವನ ಬಾಲ್ಯ ವಿವಾಹವಾಗಿರುತ್ತದೆ. ತಂದೆಯ ಮರಣಾನಂತರ ಎರಡೂ ಕುಟುಂಬಗಳು ಕಾರಣಾಂತರಗಳಿಂದ ದೂರಾಗಿರುತ್ತವೆ. ಹತ್ತನೆಯ ತರಗತಿಗೇ ತನ್ನ ವಿದ್ಯಾಭ್ಯಾಸ ಕೊನೆಗೊಳಿಸಿ ಮಗ ಕೆಲಸಕ್ಕೆ ಸೇರಿದ್ದಾನೆ. ಅಮ್ಮನನ್ನು ಕೆಲಸಕ್ಕೆ ಕಳಿಸುತ್ತಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಇನ್ನಾದರೂ ಮಗನು ಸಂಸಾರವಂದಿಗನಾಗಲೆಂದು ಮನದಲ್ಲಿಯೇ ದೇವರಲ್ಲಿ ಬೇಡಿಕೆ ಸಲ್ಲಿಸುತ್ತಾಳೆ. ಅಷ್ಟರಲ್ಲಿ ಮಗನ ಮೋಟಾರ್ ಬೈಕಿನ ಸದ್ದು ಕೇಳಿ ದಡಬಡಿಸಿ ಎದ್ದು ಚಹಾ ಸಿದ್ದಪಡಿಸುತ್ತಾಳೆ.
ಅಮ್ಮಾ ಎಂದು ಕರೆಯುತ್ತಾ ಸೋಮು ಒಳಗೆ ಬರುತ್ತಾನೆ. ಅಮ್ಮ ಕೊಟ್ಟ ಚಹಾದ ಕಪ್ಪು ಹಿಡಿದೇ ಆಫೀಸಿನ ಬಗ್ಗೆ ಮಾತಾಡುವ ಅವನಿಗೆ ಅಮ್ಮನ ಅನ್ಯಮನಸ್ಕತೆಯ ಅರಿವಾಗದೇ ಇಲ್ಲ. ಅದೂ ಇದೂ ಮಾತನಾಡಿದ ನಂತರ ಸುತ್ತಾಡಲು ಹೊರಡುತ್ತಾನೆ. ಮನಸ್ಸು ಬಾಲ್ಯದ ಗೆಳತಿಯನ್ನು ನೆನೆಯುತ್ತದೆ. ದೇವಯಾನಿಯೊಂದಿಗಿನ ವಿವಾಹದ ಕ್ಷಣಗಳು ನೆನಪಾಗಿ ಮನಸ್ಸಿಗೆ ಅಹ್ಲಾದತೆಯನ್ನು ತಂದುಕೊಡುತ್ತದೆ. ಅದಾಗಲೇ ಸೂರ್ಯ ತೆರೆಯ ಮರೆಗೆ ಸರಿದು ಚಂದ್ರನ ಬೆಳಕು ಹರಡಿ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸಿತ್ತು.
ಮರುದಿನ ಬೆಳಿಗ್ಗೆ ಎಂದಿನಂತೆ ಆಫೀಸಿಗೆ ಬರುತ್ತಾನೆ. ಬೇಗನೆ ಕೆಲಸ ಮುಗಿಸಿ ಹಾಗೆ ಸುತ್ತಾಡಲು ಹೊರಡುತ್ತಾನೆ. ಯಾವುದೋ ಯೋಚನೆಯಲ್ಲಿ ಕ್ರಮಿಸಿದ ದೂರ ಅರಿವಿಗೆ ಬರುವಷ್ಟರಲ್ಲಿ ಬಹಳ ದೂರ ಬಂದಿರುತ್ತಾನೆ. ಮಳೆ ಬರುವ ಸೂಚನೆಯಿದ್ದುದರಿಂದ ಮನೆಯ ದಾರಿ ಹಿಡಿಯುತ್ತಾನೆ. ದಾರಿಯಲ್ಲಿ ಯುವತಿಯೊಬ್ಬಳು ಚಿತ್ರ ಪಟಗಳನ್ನು ಮಳೆಯಲ್ಲಿ ನೆನೆಯದಂತೆ ರಕ್ಷಿಸುವ ಪ್ರಯತ್ನದಲ್ಲಿರುತ್ತಾಳೆ. ಪರಿಚಿತಮುಖವೆನ್ನಿಸುತ್ತದೆ, ಅವಳಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ವಿಚಾರಿಸಿದಾಗ ಅವಳೊಬ್ಬ ಚಿತ್ರಕಾರಳಾಗಿರುತ್ತಾಳೆ. ಅವಳ ಮನೆ ಸಮೀಪದಲ್ಲಿ ಇರುವುದಾಗಿ ತಿಳಿಸುತ್ತಾಳೆ. ಅವಳ ಜೊತೆಗೆ ಹೊರಡುತ್ತಾನೆ. ಮನೆ ಸಮೀಪಿಸುತ್ತಿದ್ದಂತೆ ಕೃತಜ್ಞತೆ ತಿಳಿಸಿ ಮನೆಗೆ ಬರುವಂತೆ ಆಹ್ವಾನಿಸುತ್ತಾಳೆ.
ಮಳೆ ಜೋರಾಗಿದ್ದರಿಂದ ವಿಧಿಯಿಲ್ಲದೆ ಸೋಮನಾಥ ಅವಳನ್ನು ಅನುಸರಿಸುತ್ತಾನೆ. ಅವಳು ಬೀಗ ತೆಗೆದು ದೀಪ ಬೆಳಗಿಸಿ ಸೋಮನಾಥನಿಗೆ ಕುರ್ಚಿಯಲ್ಲಿ ಆಸೀನನಾಗುವಂತೆ ತಿಳಿಸಿ ‘ಅಪ್ಪಾ’ ಎಂದು ಕೂಗುತ್ತಾ ಒಳ ನಡೆಯುತ್ತಾಳೆ.
ಸೋಮನಾಥನಿಗೆ ಮನೆಯ ಅಚ್ಚುಕಟ್ಟು ಓರಣ ಗಮನ ಸೆಳೆಯುತ್ತದೆ. ಜೊತೆಗೆ ಬಡತನದ ಸ್ಥಿತಿ ಕೂಡಾ. ಅವಳು ತನ್ನ ತಂದೆಯೊಂದಿಗೆ ಅವನನ್ನು ಪರಿಚಯಿಸಿ ನಡೆದ ವಿಷಯ ತಿಳಿಸುತ್ತಾಳೆ. ಆ ವೃದ್ಧರು ಅವನಿಗೆ ಕೃತಜ್ಞತೆ ಹೇಳಿ ಕೋಲೂರಿಕೊಂಡು ಅಲ್ಲೇ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆ ಕಣ್ಣು ಕಾಣಿಸದಿರುವುದು ಅವನ ಅರಿವಿಗೆ ಬರುತ್ತದೆ. ಅವನ ಬಗ್ಗೆ ಅವರು ವಿಚಾರಿಸಿದಾಗ ಸಂಕ್ಷಿಪ್ತವಾಗಿ ವಿವರಿಸುತ್ತಾನೆ. ಕುತೂಹಲದಿಂದ ನಿಮ್ಮ ತಾಯಿಯ ಹೆಸರೇನೆಂದು ಕೇಳುತ್ತಾರೆ. ಪಾರ್ವತಿ ಎಂದಾಕ್ಷಣ ಒಮ್ಮೆಲೇ ‘ನಮ್ಮ ಸೋಮುನಾ’ ಅಂತ ಆನಂದಾತಿರೇಕದಿಂದ ಅವನನ್ನು ಆಲಂಗಿಸಿಕೊಳ್ಳುತ್ತಾರೆ. ಸೋಮನಾಥನಿಗೆ ಸಹ ವಿಸ್ಮಯ ಮತ್ತು ಸಂತೋಷ ಎರಡೂ ಒಟ್ಟಿಗೇ ಆಗುತ್ತದೆ. ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತಾನೆ. ತಾನು ಬಯಸಿದ ಹೂಬಳ್ಳಿ ತನ್ನ ಕಾಲಿಗೇ ತೊಡರಿತಲ್ಲ ಎಂದು ಕೊಳ್ಳುವ ಅವನ ಮನ ಅತೀವ ಸಂತೋಷವನ್ನು ಅನುಭವಿಸುತ್ತದೆ. ಚಹಾದೊಂದಿಗೆ ಅಲ್ಲಿಗೆ ಬಂದ ದೇವಯಾನಿಯನ್ನು ಕಂಡೊಡನೆ ಅವಳ ತಂದೆ ಎಲ್ಲ ವಿಷಯ ತಿಳಿಸುತ್ತಾ, ‘ನಿನ್ನ ಕಷ್ಟದ ದಿನಗಳು ಕಳೆದವು ಮಗಳೇ, ನನ್ನ ಕಾರಣ ದಿಂದಲೇ ನೀನು ನಿನ್ನ ಪತಿಯಿಂದ ದೂರಾಗಿ ಕೊರಗು ವಂತಾಗಿದ್ದು’. ಎಂದು ನೊಂದುಕೊಂಡರು. ಸೋಮನಾಥನ ದೃಷ್ಟಿಯನ್ನು ಎದುರಿಸಲಾಗದೆ ದೇವಯಾನಿ ಒ಼ಳಗೆ ಓಡುವಳು. ‘ಅಮ್ಮ ತನ್ನ ಸೊಸೆಗಾಗಿ ಹಾತೊರೆಯುತ್ತಿದ್ದಾಳೆ’. ಈಗಲಾದರೂ ತನ್ನ ಪತ್ನಿಯನ್ನು ಕಳುಹಿಸಿಕೊಡಬೇಕೆಂಬ ಬೇಡಿಕೆಯನ್ನು ತನ್ನ ಮಾವನೊಂದಿಗೆ ಸೋಮನಾಥ ಇಡುತ್ತಾನೆ. ‘ಹೌದು, ಇನ್ನು ತಡ ಮಾಡಬಾರದು’ ಎಂದು ತಮ್ಮಷ್ಟಕ್ಕೆ ಹೇಳುತ್ತಾ ಅವರು ಮಗಳನ್ನರಸಿಕೊಂಡು ಬರುತ್ತಾರೆ. ಅಡುಗೆ ತಯಾರಿಯಲ್ಲಿದ್ದ ಮಗಳನ್ನು ಕುರಿತು ‘ ಮಗೂ ನೀನು ಸುಖವಾಗಿರುವ ಕಾಲ ಬಂದಿದೆ, ನನ್ನ ಕುರಿತು ಚಿಂತೆ ಮಾಡಬೇಡ. ನಿನ್ನ ಗಂಡನೊಂದಿಗೆ ಹೊರಡು’ ಎಂದರು. ಆದರೆ ಅದು ಸಾಧ್ಯವಾಗುವುದು ನೀವು ನನ್ನೊಂದಿಗೆ ಬಂದಾಗ ಮಾತ್ರ ಎಂದಳು ದೇವಯಾನಿ. ಅಷ್ಟರಲ್ಲಿ ಅಲ್ಲಿಗೆ ಬಂದ ಸೋಮನಾಥನೂ ಅ಼ವಳ ಮಾತನ್ನು ಅನುಮೋದಿಸಿದನು. ದೇವಯಾನಿ ಅವನನ್ನು ಅಭಿಮಾನದಿಂದ ನೋಡುತ್ತಾಳೆ. ಮರುದಿನವೇ ಹೊರಡುವ ತೀರ್ಮಾನವಾಗುತ್ತದೆ.
ಮಾವ ಅಳಿಯ ಅಂಗಳ ಸೇರುತ್ತಾರೆ. ದೇವಯಾನಿ ವಿಶೇಷ ಅಡುಗೆ ತಯಾರಿಯಲ್ಲಿ ತೊಡಗಿದ್ದಾಳೆ. ಇದೇನು ಕನಸೋ ನನಸೋ, ತನ್ನ ಯಾಂತ್ರಿಕ ಬದುಕಿನಲ್ಲಿ ಇಂತದ್ದೊಂದು ತಿರುವು ಬರಬಹುದು ಎಂದು ಅವಳು ಕನಸಿನಲ್ಲಿಯೂ ಎಣಿಸಿರಲಿಲ್ಲ. ತಾಯಿಯ ಸಾವಿನೊಂದಿಗೆ ನಿಂತು ಹೋಗಿದ್ದ ಅವಳ ಬದುಕಿಗೆ ಚಾಲನೆ ಸಿಕ್ಕಿದೆ. ಅವಳ ಮನಸ್ಸು ಹಕ್ಕಿಯಂತೆ ಗರಿಗೆದರಿ ಆಕಾಶದಲ್ಲಿ ಹಾರಾಡುತ್ತಿದೆ. ನಾಳಿನ ಸೂರ್ಯೋದಯದೊಂದಿಗೆ ಹೊಸ ಬಾಳಿನ ಆರಂಭ. ಆ ನೆನಪಿನಲ್ಲಿ ಮನಸ್ಸು ಪುಳಕಗೊಂಡಿದೆ.
‘ಮೂಡುತಿದೆ ಬೆಳಕು ಬಾಳ ಬಾಂದಳದಿ, ಅರುಣ ನಾನು ಕಿರಣ ನೀನು’. ರೇಡಿಯೋದಲ್ಲಿ ಹಾಡು ಬಿತ್ತರವಾಗುತ್ತಿತ್ತು.
-ಕಮಲ ಬೆಲಗೂರ್.