ವಾಸುಕಿ ಕಾಲಂ

ಮೋಟಾರ್ ಸೈಕಲ್ ಡೈರೀಸ್: ವಾಸುಕಿ ರಾಘವನ್

ಚೆ ಗೆವಾರ ನಿಮಗೆಲ್ಲರಿಗೂ ಗೊತ್ತಿರಬಹುದು. ಚರಿತ್ರೆಯನ್ನು ಅಷ್ಟಾಗಿ ಓದಿಲ್ಲದವರಿಗೂ ಟಿ-ಶರ್ಟ್ ಮೇಲಿನ “ಆ ಮುಖ” ಅಂತಾದ್ರೂ  ಪರಿಚಯ ಇದ್ದೇ ಇರುತ್ತೆ. ನನಗೆ ಅವನ ಸಿದ್ಧಾಂತಗಳು, ನಿಲುವುಗಳು, ಆದರ್ಶಗಳ ಬಗ್ಗೆ ಆಳವಾದ ಅರಿವು ಇಲ್ಲ, ಆದರೂ ಅವನ ಜೀವನವನ್ನು ಬದಲಿಸಿದ ಕಥೆ ಇರುವ ಈ ಚಿತ್ರ ಬಹಳ ಇಷ್ಟವಾಯಿತು. ಆ ಚಿತ್ರವೇ 2004ರಲ್ಲಿ ಬಂದ ಅದೇ ಹೆಸರಿನ ಆತ್ಮಕಥನದ ಪುಸ್ತಕವನ್ನು ಆಧರಿಸಿದ “ಮೋಟಾರ್ ಸೈಕಲ್ ಡೈರೀಸ್”.
 
ಎರ್ನೆಸ್ಟೋ ‘ಚೆ’ ಗೆವಾರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಮ್ಮಂಥ ಒಬ್ಬ ಹುಡುಗ. 1952ರ ಸಮಯ ಅದು. ಚೆ ಮೆಡಿಕಲ್ ಓದುತ್ತಿರುತ್ತಾನೆ. ತನ್ನ ಕೋರ್ಸ್ ಮುಗಿಯಲು ಒಂದು ಸೆಮಿಸ್ಟರ್ ಬಾಕಿ ಇರುವಾಗ, ತನ್ನ ಗೆಳೆಯ ಅಲ್ಬೆರ್ತೊ ಗ್ರನದೋ ಜೊತೆ ಮೋಟಾರ್ ಸೈಕಲ್ ನಲ್ಲಿ ಟ್ರಿಪ್ ಹೊರಡಲು ಅನುವಾಗುತ್ತಾನೆ. ಅಸ್ತಮಾ ಪೇಷಂಟ್ ಆಗಿರುವ ಚೆ ಬಗ್ಗೆ ಅವನ ಅಪ್ಪಅಮ್ಮನಿಗೆ ಆತಂಕ, ಗ್ರನದೋ ಅವರಿಗೆ ಸಮಾಧಾನ ಹೇಳಿ ಒಪ್ಪಿಸುತ್ತಾನೆ. ಚೆ ಮತ್ತು ಗ್ರನದೋ ಅವರ ಟಾರ್ಗೆಟ್ ನಾಕೂವರೆ ತಿಂಗಳಲ್ಲಿ ಹದಿನಾಲ್ಕು ಸಾವಿರ ಕಿಲೋಮೀಟರು ಪ್ರಯಾಣ ಮಾಡುವುದು. ಅರ್ಜೆಂಟೀನಾ, ಚಿಲಿ, ಪೆರು, ಕೊಲಂಬಿಯಾ, ವೆನೆಜುವೆಲಾ ಇವೆಲ್ಲಾ ನೋಡಿ ಬರೋದು. ಮಜದ ಮಾಡೋದರ ಜೊತೆಗೇ, ಕಡೆಗೆ ಪೆರುವಿನಲ್ಲಿ ಕುಷ್ಟರೋಗಿಗಳ ಒಂದು ಕಾಲೋನಿಯಲ್ಲಿ ವಾಲಂಟೀರ್ ಆಗಿ ಕೆಲಸ ಮಾಡಿ ಬರೋದು.
 

ಮೊದಲಿಗೆ ಮಿರಮಾರ್ ಅನ್ನೋ ಊರಿನಲ್ಲಿ ಚೆ ಗರ್ಲ್ ಫ್ರೆಂಡ್ ಅನ್ನು ಭೇಟಿ ಮಾಡುತ್ತಾರೆ. ಅವಳು ನೀವು ಅಮೇರಿಕಾ ತಲುಪಿದರೆ ನನಗೊಂದು ಚಂದನೆಯ ಸ್ವಿಮ್ ಸೂಟ್ ತಗೊಂಡು ಬಾ ಅಂತ ಸ್ವಲ್ಪ ದುಡ್ಡು ಕೊಡುತ್ತಾಳೆ. ಅಲ್ಲಿಂದ ಹೊರಟು ಚಿಲಿ ತಲುಪಿದಾಗ, ಕಾಪರ್ ಮೈನ್ ಅಲ್ಲಿ ಕೆಲಸ ಮಾಡೋ ಕಮ್ಯುನಿಸ್ಟ್ ದಂಪತಿಗಳ ಪರಿಚಯ ಆಗುತ್ತೆ. ಮೈನ್ ವರ್ಕರ್ ಗಳ ದಾರುಣ ಸ್ಥಿತಿಯನ್ನು ಕಣ್ಣಾರೆ ನೋಡಿದ ಚೆ ಗೆ ಸಾಮಾಜಿಕ ಅಸಮಾನತೆಯ ಅರಿವಾಗುತ್ತದೆ. ಹಾಗೆಯೇ ದಕ್ಷಿಣ ಅಮೆರಿಕಾದ ಎಲ್ಲಾ ದೇಶಗಳಲ್ಲೂ ಇರುವ ಕಾಮನ್ ಲ್ಯಾಟಿನ್ ಅಮೆರಿಕನ್ ಐಡೆಂಟಿಟಿಯ ಪರಿಚಯ ಕೂಡ ಆಗುತ್ತೆ. ಮಚುಪಿಚುವನ್ನು ಕಂಡು ಎಂತಹ ಉತ್ಕೃಷ್ಟ ನಾಗರೀಕತೆ ಹೇಗೆ ಹೇಳಹೆಸರಿಲ್ಲದಂತೆ ನಶಿಸಿಹೋಯಿತು ಅಂತ ಚಿಂತಿಸುತ್ತಾನೆ. ದಾರಿಯುದ್ದಕ್ಕೂ ಬೈಕ್ ಕೈಕೊಡುತ್ತಾ ಹೋಗುತ್ತೆ, ಜೇಬಲ್ಲಿದ್ದ ದುಡ್ಡೆಲ್ಲಾ ಖಾಲಿಯಾಗಿ ಯಾರುಯಾರದೋ ಸಹಾಯ ಪಡೆದು ತಮ್ಮ ಪ್ರಯಾಣ ಮುಂದುವರಿಸುತ್ತಾರೆ. ಕುಷ್ಟ ರೋಗಿಗಳ ಕಾಲೋನಿಗೆ ಹೋದ ಮೇಲೆ ಅಲ್ಲಿನ ರೋಗಿಗಳು ಅನುಭವಿಸುತ್ತಿರುವ ಸಾಮಾಜಿಕ ಅಸ್ಪೃಶ್ಯತೆಯನ್ನು ಕಣ್ಣಾರೆ ಕಾಣುತ್ತಾನೆ. ಅಡ್ವೆಂಚರ್ ಅಂತ ಹೊರಟ ಟ್ರಿಪ್ ಮುಗಿಯೋ ಹೊತ್ತಿಗೆ ಚೆ ದೃಷ್ಟಿಕೋನ, ನಿಲುವುಗಳು ಸಾಕಷ್ಟು ಬದಲಾಗಿರುತ್ತವೆ, ಅವನಿಗೇ ಗೊತ್ತಿಲ್ಲದಂತೆ ಅನ್ಯಾಯವನ್ನು ಪ್ರತಿಭಟಿಸುವ ಕ್ರಾಂತಿಕಾರಿ ಅವನಲ್ಲಿ ಜನ್ಮತಾಳಿರುತ್ತಾನೆ.

ಸಿನಿಮಾದಲ್ಲಿ ನನಗೆ ಬಹಳ ಇಷ್ಟ ಆಗಿದ್ದು ಚೆ ಅಲ್ಲಿ ಆಗುವ ಬದಲಾವಣೆಗಳನ್ನ ಸಹಜವಾಗಿ ತೋರಿಸಿರುವ ರೀತಿ. ಅವನಲ್ಲಿನ ಪರಿವರ್ತನೆ ಎಲ್ಲೂ ತರಾತುರಿಯಾಗಿದೆ ಅನಿಸೋಲ್ಲ. ಒಮ್ಮೆ ಗ್ರನದೋ ವೇಶ್ಯೆಯೊಬ್ಬಳೊಂದಿಗೆ ವ್ಯವಹಾರ ಕುದುರಿಸಿ, ತನ್ನಲ್ಲಿ ಅಷ್ಟು ಹಣವಿಲ್ಲ ಎಂದು ತಿಳಿದು, ಚೆ ಹತ್ತಿರ ಉಳಿದ ಹಣ ಪಡೆಯಲು ಬರುತ್ತಾನೆ. ಆಗ ಅವನಿಗೆ ತಿಳಿಯುವುದು, ಚೆ ತನ್ನ ಗರ್ಲ್ ಫ್ರೆಂಡ್ ಕೊಟ್ಟಿದ್ದ ದುಡ್ಡನ್ನೂ ಸೇರಿಸಿ ಎಲ್ಲವನ್ನೂ ಬಡ ಮೈನ್ ವರ್ಕರ್ ದಂಪತಿಗಳಿಗೆ ಕೊಟ್ಟುಬಿಟ್ಟಿದ್ದಾನೆ ಅಂತ! ಕುಷ್ಟರೋಗಿಗಳ ಕಾಲೋನಿ ಗೆ ಹೋದ ಮೇಲೂ ರೋಗಿಗಳನ್ನು ಮುಟ್ಟುವಂತಿಲ್ಲ ಅನ್ನುವ ಅಲ್ಲಿನ ವೈದ್ಯರ ನಿಯಮಗಳನ್ನು ಚೆ ಮುರಿಯುತ್ತಾನೆ. ಗ್ಲೋವ್ಸ್ ಹಾಕದೆಯೇ ರೋಗಿಗಳ ಕೈಕುಲುಕುತ್ತಾನೆ, ಅವರೊಂದಿಗೆ ಆಟ ಆಡ್ತಾನೆ. ಆ ಕಾಲೋನಿಯಲ್ಲಿ ರೋಗಿಗಳು ನದಿಯ ಒಂದು ದಡದಲ್ಲಿ ಇದ್ದರೆ, ವೈದ್ಯರು ಇನ್ನೊಂದು ದಡದಲ್ಲಿ ಇರುತ್ತಾರೆ. ಒಂದು ರಾತ್ರಿ ತಾನಿರುವ ವೈದ್ಯರ ದಡದಿಂದ ರೋಗಿಗಳಿರುವ ಕಡೆಗೆ ಭೋರ್ಗರೆಯುವ ನದಿಯಲ್ಲಿ ಈಜಿಕೊಂಡು ಹೋಗುತ್ತಾನೆ, ತನ್ನ ಅಸ್ತಮಾ ತೊಂದರೆಯನ್ನೂ ಲೆಕ್ಕಿಸದೇ. ಅಲಿಖಿತ ಗಡಿಗಳನ್ನು ಮೀರಿ ನಿಲ್ಲುತ್ತಾನೆ.

ಚೆ ಪಾತ್ರ ಮಾಡಿದ ಗಯೆಲ್ ಗಾರ್ಸಿಯಾ ಬರ್ನಾಲ್ ನನ್ನ ಅತಿ ನೆಚ್ಚಿನ ನಟರಲ್ಲಿ ಒಬ್ಬ. ಈ ಪಾತ್ರಕ್ಕಾಗಿ ಆರು ತಿಂಗಳುಗಳ ಕಾಲ ಚೆ ಗೆವಾರ ಮೇಲಿರುವ ಸಿಕ್ಕಸಿಕ್ಕ ಪುಸ್ತಕಗಳನ್ನೆಲ್ಲ ಓದಿದ್ದನಂತೆ. ಕ್ಯೂಬಾ ಅಲ್ಲಿ ನೆಲೆಸಿರುವ ಚೆ ಸಂಬಂಧಿಕರನ್ನ, ಚೆ ಗೆಳೆಯ ಅಲ್ಬೆರ್ತೊ ಗ್ರನದೋ ಅವರನ್ನೂ ಮೀಟ್ ಮಾಡಿದ್ದನಂತೆ. ಈಗಲೂ ನನಗೆ ‘ಚೆ’ ಅಂದಾಕ್ಷಣ ಟಿ-ಶರ್ಟ್ ಮೇಲಿನ ಚಿತ್ರಕ್ಕಿಂತ, ಬರ್ನಾಲ್ ಮುಖವೇ ಕಣ್ಣ ಮುಂದೆ ಬರುತ್ತದೆ.  

ನಾನು ಸಿನೆಮಾಗಳಿಂದ ಸುಲಭವಾಗಿ ಪ್ರಭಾವಿತನಾಗಲ್ಲ. ಆದರೆ ಈ ಚಿತ್ರ ನೋಡಿದ ಮೇಲೆ ಯಾಕೋ ಸ್ವಲ್ಪ ದಿನ ಒಂದು ಲೆವೆಲ್ ಗೆ ಹುಚ್ಚು ಹಿಡಿದಿತ್ತು. ನನ್ನ ಬ್ಯಾಂಕ್ ಸೇವಿಂಗ್ಸ್ ಇನ್ನೊಂದು ಆರು ತಿಂಗಳಿಗೆ ಸಾಕಾಗಬಹುದು, ಕೆಲಸಕ್ಕೆ ರಜೆ ಹಾಕಿ ಒಂದಾರು ತಿಂಗಳು ಸುಮ್ಮನೆ ಎಲ್ಲೆಂದರಲ್ಲಿ ಇಂಡಿಯಾ ಎಲ್ಲಾ ಸುತ್ತಾಡಿಬಿಡಬೇಕು ಅಂತ ಒಂದು ಆಲೋಚನೆ ಬಂದಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಜೀವನಪ್ರೀತಿ, ಹುಚ್ಚು ಸಾಹಸ, ಧೈರ್ಯ ನನ್ನಲ್ಲಿ ಇರಲಿಲ್ಲ. ಮನಸ್ಸು ಮಾಮೂಲಿ ನಿರರ್ಥಕ ರೂಟೀನ್ ಗೆ ತಲೆಬಾಗಿಬಿಟ್ಟಿತ್ತು!

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮೋಟಾರ್ ಸೈಕಲ್ ಡೈರೀಸ್: ವಾಸುಕಿ ರಾಘವನ್

  1. ಇನ್ನೂ ಈ ಚಿತ್ರ ನೋಡಿಲ್ಲ 🙂 ಸುಮಾರು ವರ್ಷಗಳಿ೦ದ ನನ್ನ ಹಾರ್ಡ್ ಡಿಸ್ಕ್ ನಲ್ಲಿ ಕೊಳೀತಾ ಇದೆ. 

  2. ರಾಘವ್  ಅವರೇ  -ಗಾಂಧಿ  – ಗೋಡ್ಸೆ -ನೇತಾಜಿ -ಸ್ಟಾಲಿನ್ -ಹಿಟ್ಲರ್ -ಸರ್ದಾರ್ ಪಾಟಿಲ್ -ಜಿನ್ನಾ ಹೀಗೆ ಬಹುತೇಕ ಎಲ್ಲ  ಮಹಾ ನಾಯಕರ /ಖಳ ನಾಯಕರ- ನೈಜ ಘಟನೆಗಳ   ಬಗ್ಗೆ ಬಂದಿರುವ ಚಿತ್ರಗಳನ್ನು ಅವುಗಳ ಬಗ್ಗೆ ನೆಟ್ನಲ್ಲಿ ಹುಡುಕಾಡಿ ನೋಡೋದು ನನ್ನ ಹವ್ಯಾಸ . 
    ವಾಲ್ಕಿರಿ ,
    ಗಾಂಧೀ ,
    ಬೋಸ್ ,
    ಹೇ ರಾಮ್ ,
    ಹೀಗೆ ಬಹುತೇಕ ಚಿತ್ರಗಳನ್ನು ನೋಡಿರುವೆ . ಕೆಲ ಚಿತ್ರಗಳ ಬಗ್ಗೆ  ಸಂಪದದಲ್ಲಿ ಬರೆದಿರುವೆ – ಈ ಹಿಂದೆಯೂ ಇಮೇಜ್ ಲಿಂಕ್ ಕೊಟ್ಟಿದ್ದೆ .. 
     
    'ಚೆ' ಎಂದು ಜಗತ್ತಿನಾದ್ಯಂತ  ಜನರಿಂದ ಆರಾಧಿಸಲ್ಪಡುವ  ಚೆಗ್ವೆರ  ಈಗಲೂ  ಕ್ರಾಂತಿ ಗೆ ಚಿಹ್ನೆ ಹಾಗೆ .. ಬಹುತೇಕ ಎಲ್ಲೆಡೆ ಬಹುಪಾಲು ಜನ ಅವನ ಚಿತ್ರ ಇರುವ ಟೀ  ಶರ್ಟ್  ಹಾಕುವರು .. 
    ಮೋಟಾರ್ ಸೈಕಲ್ ಡೈರಿ ಖಂಡಿತ ನೋಡುವೆ -ಚಿತ್ರದ ಬಗ್ಗೆ ನನ್ನ ಮೆಚ್ಚಿನ -ಮಾತೃ ಭಾಷೆಯಲ್ಲಿ ಒಳ್ಳೆ ಪರಿಚಯವಿದೆ .. ನಿಮ್ಮಿಂದ ಮತ್ತಸ್ತು ಚಿತ್ರ ಬರಹಗಳನ್ನು ನಿರೀಕ್ಷಿಸುವೆ 
     
    ಶುಭವಾಗಲಿ 
    \।/
     
     
    ವೆಂಕಟೇಶ ಮಡಿವಾಳ ಬೆಂಗಳೂರು 

    1. ಧನ್ಯವಾದಗಳು ವೆಂಕಟೇಶ್! ನೀವು ಹೆಸರಿಸಿರುವ ವ್ಯಕ್ತಿಗಳಷ್ಟು ಪ್ರಸಿದ್ಧರಲ್ಲದಾದ್ದರೂ 'ಆತ್ಮಕಥೆಗಳು' ನಿಮಗೆ ಹಿಡಿಸುತ್ತವೆ ಅನ್ನೋದಾದರೆ ಈ ಚಿತ್ರಗಳನ್ನು ನೋಡಬಹುದು: ರೇಜಿಂಗ್ ಬುಲ್, ಸಿಂಡರೆಲಾ ಮ್ಯಾನ್, 127 ಅವರ್ಸ್, ಹ್ಯೂಗೊ…

  3. ಲೇಖನ ಚೆನ್ನಾಗಿದೆ….ಗೆಳೆಯ ವಿ.ಆರ್.ಕಾರ್ಪೇಂಟರ್ ಈ ಸಿನೇಮಾ ಕುರಿತಾಗಿ ನೀವು ಬರೆದ ಲೇಖನವನ್ನು ಮೆಚ್ಚಿಕೊಂಡು ಹೇಳಿದ ನಂತರ ಮತ್ತೊಮ್ಮೆ ಓದಿದ್ದೇನೆ…ಶುಭಾಶಯಗಳು !

Leave a Reply

Your email address will not be published. Required fields are marked *