ಮೊಸರಾಯಣ: ಶ್ರೀನಿಧಿ ರಾವ್

ಆಗಿನ್ನೂ ಸಂಜೆ ಗೋಧೂಳಿ ಸಮಯ ಮರುಭೂಮಿಗೆ ಪಾದಾರ್ಪಣೆ ಮಾಡಿತ್ತು ಅಷ್ಟೇ. ರಾತ್ರಿ ಊಟಕ್ಕೆ  ಊರಿನಿಂದ ಬರೋವಾಗ ಎಲ್ಲ ತಂದಿದ್ದೆ, ಅನ್ನ ಮೊಸರು ಬಿಟ್ಟು ! ಅನ್ನ ಮಾಡಿದ್ದೂ ಆಯಿತು. "ಮೊಸರು ಬೇಕು ಇಲ್ಲಾಂದ್ರೆ ನಂಗೆ ಊಟ ಮಾಡಿದ್ದು  ಮಾಡಿದ ಹಾಗೆ ಆಗುವುದಿಲ್ಲ" ಅಂದಿದ್ದಕ್ಕೆ 'ಸರಿ' ಎಂದು ನನ್ನ  ರಾಯರು ತಂದು ಕೊಟ್ರು. ಅಯ್ಯಬ್ಬಾ !! ಅದು ಬರಿ ಸಪ್ಪೆ. ನಂಗೆ ಬರೀ ಕೆನೆ ಹುಳಿ ಹುಳಿ ಮೊಸರು  ತಿಂದೇ ಗೊತ್ತು!! 'ಥೂ! ಇದೂ ಒಂದು ಮೊಸರಾ ?' ಅಂದೆ . ಹೂ೦ ಇದೇ ಸಿಗೋದು ಇಲ್ಲಿ, ಬೇಡ ಅಂದ್ರೆ ನೀನೇ  ಮನೆಯಲ್ಲಿ ಮೊಸರು ಮಾಡು ಅಂದ್ರು. 

ಮಾರನೆ ದಿನಕ್ಕೆ ಹಾಲು (Al Ravabi  100% Cow milk ) ತಂದುಕೊಟ್ಟಿದ್ರು ಎಲ್ಲ ಎತ್ತಿ ಫ್ರಿಡ್ಜ್ ಒಳಗೆ ಇಟ್ಟೆ. ಬೆಳಗ್ಗೆ ಎದ್ದು ಹಾಲು ಕಾಯಿಸಿ ನಂಗೆ ಗೊತ್ತಿದ್ದ ಹಾಗೆ ಕಾಫಿ ಮಾಡಿಕೊಟ್ಟೆ! ಉಳಿದ ಹಾಲನ್ನು ಕೆನೆ ಕಟ್ಟಿ ತಣ್ಣಗಾಗಲಿ ಎಂದು ಹಾಗೆ ಹೊರಗಿಟ್ಟೆ. ಹಾಲೇನೋ ತಣ್ಣಗಾಯಿತು, ಹೇಳಿಕೊಳ್ಳುವಷ್ಟು ಕೆನೆ ಆಗಲಿಲ್ಲ. ಏನೋ ಒಂದು ತೆಳು ಪೊರೆ ಅಷ್ಟೇ ! ಆಮೇಲೆ ಹಾಲಿಗೆ ಹೆಪ್ಪು ಹಾಕಿ ಮುಚ್ಚಿಟ್ಟು  ಬಿಟ್ಟೆ. ರಾತ್ರಿ ಪಾತ್ರೆ ಮುಚ್ಚಳ ತೆರೆದು ನೋಡಿದರೆ ಹಾಲು ಮೊಸರಾಗಿಲ್ಲ, ಬದಲಿಗೆ ಏನೋ ವಾಸನೆ. 🙁  ಹಾಲು ಹಾಳಾಯಿತು ಎಂದು ಸಿಂಕ್ ನಲ್ಲಿ ಚೆಲ್ಲಿ ಬಿಟ್ಟೆ. ಆಗ ಶುರುವಾಯಿತು  ನನ್ನ  ತಲೆಯಲ್ಲಿ ಕೊರೆಯೋದಕ್ಕೆ. ಹಾಲು ಯಾಕೆ ಮೊಸರಾಗಲಿಲ್ಲ, ಪಾತ್ರೆ ಸರಿ ಇರ್ಲಿಲ್ವಾ ?  ನಿನ್ನೆ ರಾತ್ರಿ ಅದೇ ಪಾತ್ರೆಯಲ್ಲಿ ಹುಳಿ  ಬಿಸಿ ಮಾಡಿದ್ದಕ್ಕೆ ಇವತ್ತು ಹಾಲು ಹಾಳಾಯಿತೋ ಏನೋ …? ಅಲ್ಲಾ … ನಂಗೆ ಹಾಲೂ ಕಾಯಿಸಲು ಬರೋದೆ ಇಲ್ವಾ? ಅಡುಗೆ ಹೇಗೂ ಗೊತ್ತಿಲ್ಲ ! ಅಥವಾ "೫೦ ಡಿಗ್ರಿ  ಸಿ " ವಾತಾವರಣದ ಉಷ್ಣತೆಗೆ ಹಾಲು ಕೆಟ್ಟು ಹೋಯಿತಾ ? ಹೀಗೆ ಸಾಗಿತ್ತು ನನ್ನ  ಯೋಚನಾ ಲಹರಿ …. ಇದರಿಂದ ಹೊರ ಬರಬೇಕು ಎಂದು ಅಮ್ಮನಿಗೆ ಕರೆ ಮಾಡಿ ಕೇಳಿದ್ದೂ  ಆಯಿತು.ಅಮ್ಮ ಆಗಿದ್ದು ಆಯಿತು ಬೇರೆ ಹೊಸ ಪಾತ್ರೆಯಲ್ಲಿ ಹಾಲು ಕಾಯಿಸಿ ನೋಡು , ಆ ಪಾತ್ರೆಯನ್ನು  ಬೇರೆ ಯಾವುದಕ್ಕೋ ಉಪಯೋಗಿಸಬೇಡ ಹಾಲು ಮಾತ್ರ ಕಾಯಿಸಲು ಉಪಯೋಗಿಸು  ಎಂಬ ಸಲಹೆ ಕೊಟ್ಟರು. ಸರಿ ಮಾರನೆ ದಿನ ಹೊಸ ಪಾತ್ರೆ ತಂದು ಹಾಲು ಕಾಯಿಸಿ , ಹೊಸ ಮೊಸರು ತಂದು ಹೆಪ್ಪು ಹಾಕಿದ್ದೂ ಆಯಿತು. ಮತ್ತೆ ಅದೇ ರಾಗ ಅದೇ ಹಾಡು.ಆದರೂ ನಂಗೆ ಕೆನೆ ಮೊಸರು ತಿನ್ನೋ ಹುಚ್ಚು ಬಿಡಬೇಕಲ್ಲಾ ? ಅದು ದಿನ ಕಳೆದಂತೆ ಹೆಚ್ಚಾಗುತ್ತಲೇ ಹೋಗುತ್ತಾ ಇತ್ತು. ನನ್ನ ತಲೆಗೆ ದೊಡ್ಡ ಕಸರತ್ತು ಇದು !! ಯಾರ ಪರಿಚಯವೂ ಇಲ್ಲ ಕೇಳೋಣವೆಂದರೆ … ಆದರೂ ಒಬ್ಬಳು ಗೆಳತಿ ಇದ್ದಳು ಅವಳಿಗೆ ಫೋನ್ ಮಾಡಿ ನೀನು ಮೊಸರು ಹೇಗೆ ಮಾಡುವೆ? ಎಂದು ಕೇಳಿದೆ " ಅಯ್ಯೋ ಯಾರೇ ಅದಿಕ್ಕೆ ಅಷ್ಟು ಕಷ್ಟ ಪಡ್ತಾರೆ ನಾನು ರೆಡಿಮೇಡ್ ಮೊಸರು ತರೋದು ಸೂಪರ್ ಮಾರ್ಕೆಟ್ ನಿಂದ " ಎಂದಳು. ದಂಗಾದೆ ..ಭಗವಂತ ಇಂಥಾ ಸೋಮಾರಿಗಳೂ ಇದ್ದಾರ ಅನ್ನಿಸ್ತು.  

ಹೀಗೆ ೨-೩ ದಿನ ಕಳೆಯಿತು ನಾನು ಹಾಲು ಕಾಯಿಸುವಾಗ ಹಾಲು ದಪ್ಪ  ಇದೆ ಎಂದು ಅದಕ್ಕೆ ನಲ್ಲಿ ನೀರು ಹಾಕ್ತಾ ಇದ್ದೆ. ಈ ನೀರು ಏನಾದ್ರು ಸಮಸ್ಯೆ ಆಗಿರಬಹುದಾ?  ಅಂತ ಒಂದು ಯೋಚನೆ ಬಂತು. ಸರಿ ಇನ್ನೊ೦ದು ಹೊಸ ಪ್ರಯೋಗ ಮಾಡೋಣ ಕುಡಿಯುವ ಬಾಟಲಿ ನೀರೇ ಹಾಕೋಣ ಅಂತ  ಆ ದಿನ ಮತ್ತೆ ನನ್ನ ಅಡುಗೆ ಮನೆಯೆಂಬ 'ಪ್ರಯೋಗ ಶಾಲೆ'ಗೆ ಹೊರಟೆ. ಹಾಲುಗೆ ಕುಡಿಯುವ ನೀರು "ಡೆಸರ್ಟ್ ಸ್ಪ್ರಿಂಗ್ " ಸೇರಿಸಿದ್ದೂ  ಆಯಿತು. ತಣ್ಣಗಾದ ಮೇಲೆ ಹೆಪ್ಪು ಹಾಕಿಟ್ಟೆ. ಈ ಬಾರಿಯೂ ವ್ಯರ್ಥ ಪ್ರಯತ್ನ !!! ಆಮೇಲೆ ಮತ್ತದೇ ಯೋಚನೆ ಅದೇ ವಿವಿಧ ಆಯಾಮಗಲ್ಲಿ ಮೊಸರು ಹೇಗೆ ಮಾಡೋದು? ತಲೆಗೆ ಕೆಲಸ. ಕೊನೆಗೆ ಹೊಳೆಯಿತು ಹೆಪ್ಪು ಹಾಕಿ ಸ್ವಲ್ಪ ಹೊತ್ತು ಹೊರಗೆ ಇಡೋಣ ನಂತರ ಫ್ರಿಡ್ಜ್ ಒಳಗೆ ಇಟ್ಟರೆ ಹೇಗಿರಬಹುದು ? ಮಾರನೇ ದಿನ ನನ್ನ ೪ ನೇ ಪ್ರಯೋಗ ಈ ಬಾರಿಯೂ ಕುಡಿಯುವ ನೀರು ಸೇರಿಸಿ ಹಾಲು ಕಾಯಿಸಿ ನ೦ತರ ಹೆಪ್ಪು ಹಾಕಿದೆ ೪ -೫ ಘಂಟೆ ಹೊರಗೆ ಇಟ್ಟು  ಆಮೇಲೆ ಹೋಗಿ ಪರಿಶೀಲಿಸಿ ಫ್ರಿಡ್ಜ್ ನಲ್ಲಿಟ್ಟೆ . ಮಾರನೇ ದಿನ ನೋಡ್ತೀನಿ ಅದು ಹಾಲಿನಂತೆ ಇದೆ !!! ಮೊಸರಾಗೋ  ಲಕ್ಷಣವೇ ಕಾಣುತ್ತಿಲ್ಲಾ 🙁   ಇನ್ನೊ೦ದು ದಿನ  ಫ್ರಿಡ್ಜ್ ತೀರ ತಂಪು ಆಯಿತು ಅನ್ನಿಸಿ ನನ್ನ ಮೊಸರಿನ ಸಣ್ಣ ಪಾತ್ರೆಯನ್ನು ಒಂದು ಪಾತ್ರೆಯ ಒಳಗೆ ಮಂಜು ಗಡ್ಡೆ  ಹಾಕಿ ಅದರ ಮೇಲೆ ನನ್ನ ಮೊಸರಿನ ಮಾತ್ರೆ ಇಟ್ಟು  ಮುಚ್ಚಿ ಬಿಟ್ಟೆ. ಇದೂ ಒಂದು ವ್ಯರ್ಥ  ಪ್ರಯತ್ನವೇ ಸರಿ . ಅಲ್ಲಿಗೆ ಒಂದು ಬಾರಿ ಮೊಸರು ಮಾಡೋ ಪ್ರಯತ್ನ ನಿಲ್ಲಿಸಿದೆ. 

ಚಳಿಗಾಲ  ಬರಲಿ ನೋಡೋಣ ಈಗ ಈ ವಾತಾವರಣವೇ  ಸರಿ ಇಲ್ಲ ಎಂದು 'ಹೇಮಂತ'ನ ನಿರೀಕ್ಷೆಯಲ್ಲಿ ಕಾದು  ಕುಳಿತೆ. ಹೇಮಂತ ಏನೋ ಬಂದ ,   ನಾನು ಹಾಲನ್ನು ಮೊಸರು ಮಾಡುವ ಕಸರತ್ತು ಶುರು ಹಚ್ಚಿಕೊಂಡೆ. ಈ ಬಾರಿ ಹಾಲು ಹೊರಗಿಟ್ಟರೂ ವಾಸನೆ ಬರಲಿಲ್ಲ , ಮೊಸರೂ ಆಗಲಿಲ್ಲ , ಬದಲಿಗೆ ಲೋಳೆ ಲೋಳೆ ಆಗಿತ್ತು. ಅಲ್ಲಿಗೆ ನನ್ನ ತಲೆಗೆ ಇನ್ನೂ ಒಂದಷ್ಟು ತರ್ಕ ಮಾಡಲು ಕೆಲಸ, ಇದು ಮೊಸರಾಗದ ಹಾಲು ಯಾವ ದನದ ಹಾಲು , ಎಮ್ಮೆ ಹಾಲೂ ಮೊಸರಗತ್ತೆ ! ಇಷ್ಟೆಲ್ಲಾ ಆದಾಗ ನಾನು ಹಾಲು ಕುಡಿಯೋದು ಉಪಯೋಗಿಸೋದು ಸಂಪೂರ್ಣ  ಬಿಟ್ಟು ಬಿಟ್ಟಿದ್ದೆ. ಕಾರಣ ಆ ಹಾಲು ಯಾಕೊ ತುಂಬ ದಪ್ಪ ದಪ್ಪ ಅನ್ನಿಸ್ತ ಇತ್ತು. ಕಾಫಿ , ಟೀ ಮೊದನಿಂದಲೂ ಅಭ್ಯಾಸವಿಲ್ಲದ ನನಗೆ ಹಾಲು ಕುಡಿಯದೆ ಇರುವುದು ಕಷ್ಟವಾಗಲೇ ಇಲ್ಲ. ಎಲ್ಲೇ ಹೋದರು ಹಾಲು , ಕಾಫೀ , ಟೀ ಕುಡಿಯದ ವಿಚಿತ್ರ ಪ್ರಾಣಿ ಆಗಿ ಹೋದೆ.ಆದರೂ ಈ ನಡುವೆ ಕೆಲವರು ಪರಿಚಯವಾದರು. ಪರಿಚಯವಾದವರಲ್ಲಿ  ನನ್ನ ಮೊದಲ ಪ್ರಶ್ನೆ  ಮೊಸರು ಹೇಗೆ ಮಾಡುತ್ತೀರಿ? ಎಲ್ಲ ಒಂದೇ ಉತ್ತರ "ನಾವು ಸೂಪರ್ ಮಾರ್ಕೆಟ್ ನಿಂದ ಅಗತ್ಯಕ್ಕೆ ಬೇಕಾದಂತೆ ತರುವೆವು".   

ಇಷ್ಟೆಲ್ಲಾ ಆದಾಗ ನಾನು ಭಾರತಕ್ಕೆ ಬರುವ  ಸಮಯ ಬಂದೇ ಬಿಟ್ಟಿತು. ನನ್ನ ಕೆನೆ ಮೊಸರು ತಿನ್ನೋ ಕಾಲ ಬಂತು ಎಂದು ಹಿಗ್ಗಿ ಹೀರೆಕಾಯಿ ನಾನು. ಭಾರತದಿಂದ ವಾಪಾಸು ಬರುವಾಗ ಒಂದು ಡಬ್ಬದಲ್ಲಿ ಮೊಸರು ಮರೆಯದೆ ಹೊತ್ತು ತಂದೆ. ತಂದ ಮಾರನೆ ದಿನ ಹಾಲು ಕಾಯಿಸಿ ತಣಿದ ಮೇಲೆ ಊರಿನಿಂದ ತಂದ ಹುಳಿ ಮೊಸರು ಹಾಕಿ ಇಟ್ಟು ತುಂಬ ಭರವಸೆ ಇಂದ ಇದ್ದೆ. ಇಲ್ಲ ಈ ಬಾರಿಯೂ ಲೋಳೆ ಲೋಳೆ ಯಾಗಿ ಏನೋ  ಒಂದು ಆಯಿತು. ಈ ನಡುವೆ  ಪರಿಚಯವಾದ ಕೆಲವರು ನನ್ನಂತೆಯೇ ಮೊಸರು ಮಾಡುವ ವ್ಯರ್ಥ ಪ್ರಯತ್ನ ಪಟ್ಟು , ಅದನ್ನು ಕೈ ಬಿಟ್ಟಿದ್ದರು. ಅಂತೂ ಇದನ್ನು ಕೇಳಿ ಸ್ವಲ್ಪ ಸಮಾಧಾನಪಟ್ಟುಕೊಂಡೆ. ನ೦ಗೆ ಮಾತ್ರ ಅಲ್ಲ ಈ "ದುಬೈ ಹಾಲು ಮೊಸರಾಗಲ್ಲಾ ನಾನು ಎಂದು ಮುಷ್ಕರ ಹೂಡಿದ್ದು" ಮೊಸರು ಮಾಡಲು ಪ್ರಯತ್ನಿಸಿದವರನ್ನೇ ಮೊಸರು ಮಾಡಿ ತಾನು ಹಾಯಾಗಿ ಕೂತಿತ್ತು .ಆದರೂ ಇದು ಒಂದು ನನ್ನ ಪಾಲಿಗೆ  ಯಕ್ಷ ಪ್ರಶ್ನೆಯಾಗಿ ಉಳಿದು ಹೋಗಿತ್ತು. 

ಆದರೆ ಮೊನ್ನೆ ಒಂದು ದಿನ ಏನೋ ಓದುತ್ತಿದ್ದಾಗ ಒಂದು ವಾಕ್ಯ ಗಮನ ಸೆಳೆಯಿತು. ಇದೇ ಕಾರಣಕ್ಕೆ ನನ್ನ  ಹಾಲು ಮೊಸರಾಗಲಿಲ್ಲವೋ ಎ೦ಬ ಗೊಂದಲವೂ ಆಯಿತು. Camel milk does not get curdle !!!  ೪ ವರ್ಷದ ಬಳಿಕ ನನ್ನ ಸಮಸ್ಯೆಗೆ ಉತ್ತರ ಸಿಕ್ಕಿತ್ತು 🙂

ಶ್ರೀನಿಧಿ ರಾವ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
Aparna
Aparna
11 years ago

naanu.. ee haalina bagge keliradiddarinda, bahala achchari annisistu.allade nimma hasuvina haalina mosaru tnnalu kanasu sulabhavaagi kaigooduvudilla annodu tilidu.. ayyo paapa annisitu.
  Srinidhi Hariprasanna.. prapanchada bere bere bhaagagalallina vyavaste,aacharane,vismaya sangatigala bagge nammanta janarige arivu moodisuva prayatna kandita mechchuvantahudu..

Prakash Srinivas
Prakash Srinivas
11 years ago

 
ಚಂದದ ನಿರೂಪಣೆ!
 
ಕೆನ್ನೆ ಮೊಸರಿನ ಪರಿಮಳ ಮೂಗಿಗೆ ಮುಟ್ಟಿತು!

sharada moleyar
sharada moleyar
11 years ago

ಚಂದದ ನಿರೂಪಣೆ!

guruprasad k
guruprasad k
11 years ago

ಹ ಹ ಬಲು ಚೆನ್ನಾಗಿತ್ತು ರೀ ನಿಮ್ಮ ಮೊಸರಾಯಣ…. ಕೆಲವು ಜನರನ್ನ ಸೋಮಾರಿಗಳು ಅಂತ "ನೀವು" ಹೇಳಿದಾಗ ಯಾಕೋ ಕಿರು ನಗೆ ಮೂಡಿ ಬಿಟ್ಟಿತ್ತು, ಕುತೂಹಲವನ್ನ ಬರವಣಿಗೆಯ ಕೊನೆಯವರೆಗೂ ಕಾಯ್ದುಕೊಂಡಿದ್ದೀರ… ಒಂಟೆ ಹಾಲು ತುಂಬಾನೆ ಸತಾಯಿಸಿತು ಅಲ್ವಾ… ಆದ್ರೆ ಹಾಲು ಕರಿಯೋರಿಗೆ ಒಂಟೆ ಸತಾಯಿಸೋಲ್ಲ ಅಂತ ಕಾಣುತ್ತೆ ನಿಂತು ಕೊಂಡೆ ಹಾಲು ಕರೀಬಹುದು ಅಲ್ವಾ…

ಸುಮತಿ ದೀಪ ಹೆಗ್ಡೆ

ಅದೆಷ್ಟು ಪ್ರಯತ್ನ, ಅದೆಷ್ಟು ತಾಳ್ಮೆ , ಆದ್ರೂ ನಮ್ಮೂರೆ ಚಂದ ಕಣ್ರೀ….ಚೆನ್ನಾಗಿದೆ ಮೊಸರಿನ ರಾಮಾಯಣ…. 🙂

ಆಸು ಹೆಗ್ಡೆ

ಶ್ರೀನಿಧಿ ತಮ್ಮ ಈ  ಮೊಸರಲ್ಲಿ (ಮೊಸರಾಯಣದಲ್ಲಿ) ನಾನು ಹುಡುಕಿದರೂ ನನಗೆ ಕಲ್ಲು ಸಿಗಲಿಲ್ಲ.

ಆದರೆ ಒಂದು ಸಂಶಯ ಕೊನೆಯಲ್ಲಿ ಉಳಿದೇಬಿಟ್ಟಿದೆ.
ಒಂಟೆಯ ಹಾಲಿನಿಂದ ಮೊಸರಾಗುವುದಿಲ್ಲ ಅನ್ನುವುದನ್ನು ಒಪ್ಪಬಹುದೇನೋ ಆದರೆ ತಮ್ಮವರು ತಂದುಕೊಟ್ಟಿದ್ದ ನೂರು ಪ್ರತಿಶತ ಹಸುವಿನ ಹಾಲು (Al Ravabi  100% Cow milk) ಒಂಟೆಯ ಹಾಲಾದುದು ಹೇಗೆ?

Sowmya
Sowmya
11 years ago

Ishta aytu 🙂

Rukmini Nagannavar
11 years ago

ಹ್ಹ ಹ್ಹ ಹ್ಹ… ಅಕ್ಕ ನಿಮ್ಮ ಮೊಸರು ಮಾಡೋ ಕಥೆ ಓದುತ್ತಾ ಹೊಟ್ಟೆ ಹುಣ್ನಾಯಿತು ನೋಡಿ. ಸಾಹಿತ್ಯದ ಔತನಕ್ಕೆ ಹಾಸ್ಯದ ರಸ ಬೆರೆತರೆ ಸಾಹಿತ್ಯ ಪ್ರೇಮಿಗಳಿಗೆ ಓದೋಕೆ ಇನ್ನೂ ಆನಂದ. ನಿಮ್ಮಿಂದ ಲೆಖನಗಳು ಹೀಗೆ ಬರುತ್ತಿರಲಿ, ಓದಿ ನಮ್ಮ ಮನಗಳು ತಣಿಯುತ್ತಿರಲಿ. ಶುಭವಾಗಲಿ.

prashasti
11 years ago

ಹೆ ಹೆ ಚೆನ್ನಾಗಿದೆ. ಒಂಟೆ ಹಾಲು ಮೊಸರಾಗೋದಿಲ್ಲ ಅನ್ನೋ ವಿಚಾರ ಒಳ್ಳೇ ಹಾಸ್ಯವಾಗಿ ಬಂದಿದೆ.. 🙂

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಮೊಸರಾಯಣದ ಹಾಸ್ಯ ರಸಾಯಣ ಚೆನ್ನಾಗಿತ್ತು. ಸೆಕೆಗಾಲದಲ್ಲಿ ಮೊಸರಾಗದ ಹಾಲು ಚಳಿಗಾಲದಲ್ಲಿ ಹೇಗಪ್ಪ ಮೊಸರಾಗುತ್ತದೆ ಎಂದು ಸ್ವಲ್ಪ(?) ಯೋಚಿಸಿದೆ.
ಇನ್ನೂ ನಿಮ್ಮಿಂದ ಇಂತಹ ಉತ್ತಮ ಲೇಖನಗಳು ಬರಲಿ ಎಂದು ಹಾರೈಸುತ್ತೇನೆ.

Srinidhi Rao
Srinidhi Rao
11 years ago

Seke andre vipareeta seke illi heegagi mosaraago modale haalu keetu hogitta anta anu maana heegagi vaataavarana swalpa tampu aadaaga prayatna maadiddu illi heli kollovashtu chali iralla 🙂 ello ondu tingalu swalpa jasti chali ashte 🙂

bhagyashree
bhagyashree
11 years ago

Tumbane ista aaythu Mosaraayana

Santhosh
11 years ago

🙂 nice article.
Same experience for us in Czech republic!! 🙂

Srinidhi Rao
Srinidhi Rao
11 years ago

Abhipraaya tilisida ellarigoo nanna vandanegalu 🙂

14
0
Would love your thoughts, please comment.x
()
x